ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎ. ಸೂರ್ಯ ಪ್ರಕಾಶ್ ಅಂಕಣ– ಸೂರ್ಯ ನಮಸ್ಕಾರ| ಏಕಕಾಲದಲ್ಲಿ ಚುನಾವಣೆಯ ಅಗತ್ಯ

‘ಚುನಾವಣಾ ಬಳಲಿಕೆ’ಯಿಂದ ಜನರನ್ನು ಪಾರುಮಾಡಲು ಇದೊಂದು ವಿಶ್ವಾಸಾರ್ಹ ಉಪಕ್ರಮ
Last Updated 20 ಮಾರ್ಚ್ 2023, 21:00 IST
ಅಕ್ಷರ ಗಾತ್ರ

ಲೋಕಸಭೆ ಮತ್ತು ರಾಜ್ಯಗಳ ವಿಧಾನಸಭೆಗೆ ಏಕಕಾಲಕ್ಕೆ ಚುನಾವಣೆ ನಡೆಸಬೇಕು ಎಂಬ ಆಗ್ರಹವನ್ನು ಕೇಂದ್ರ ಸರ್ಕಾರವು ಮತ್ತೆ ಮುಂದಕ್ಕೆ ತಂದಿದೆ. ರಾಜಕೀಯ ಪಕ್ಷಗಳ ನಡುವೆ ಒಮ್ಮತ ಮೂಡಿದರೆ ಇದು ಸಾಧ್ಯವಿದೆ ಎಂದು ಹೇಳಿದೆ. ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಅವರು ಲೋಕಸಭೆಯಲ್ಲಿ ಕಳೆದ ವಾರ ಪ್ರಶ್ನೆಯೊಂದಕ್ಕೆ ಉತ್ತರಿಸುವ ಸಂದರ್ಭದಲ್ಲಿ ಈ ಬಗ್ಗೆ ವಿವರಣೆ ನೀಡಿದ್ದಾರೆ.

ಎ. ಸೂರ್ಯ ಪ್ರಕಾಶ್
ಎ. ಸೂರ್ಯ ಪ್ರಕಾಶ್

ಏಕಕಾಲದಲ್ಲಿ ಚುನಾವಣೆ ನಡೆಸಿದರೆ ದೇಶದ ಬೊಕ್ಕಸಕ್ಕೆ ಭಾರಿ ಮೊತ್ತದ ಹಣ ಉಳಿತಾಯವಾಗುತ್ತದೆ, ರಾಜಕೀಯ ಪಕ್ಷಗಳಿಗೂ ಅಭ್ಯರ್ಥಿಗಳಿಗೂ ಉಳಿತಾಯ ಆಗುತ್ತದೆ ಎಂದು ಹೇಳಿದ್ದಾರೆ. ಅಭಿವೃದ್ಧಿ ಕಾರ್ಯಗಳ ಅನುಷ್ಠಾನಕ್ಕೆ ತೊಂದರೆ ಉಂಟುಮಾಡುವ ನೀತಿ ಸಂಹಿತೆಯು ಬಹುಕಾಲ ಜಾರಿಯಲ್ಲಿ ಇರಬೇಕಾದ ಸ್ಥಿತಿ ನಿವಾರಣೆಯಾಗುತ್ತದೆ. ಆದರೆ ಇದು ಸಾಧ್ಯವಾಗಬೇಕು ಎಂದಾದರೆ ಎಲ್ಲ ರಾಜಕೀಯ ಪಕ್ಷಗಳು ಹಾಗೂ ರಾಜ್ಯ ಸರ್ಕಾರಗಳು ಒಮ್ಮತಕ್ಕೆ ಬರಬೇಕಾಗುತ್ತದೆ. ಸಂವಿಧಾನ ಹಾಗೂ ಚುನಾವಣೆಗೆ ಸಂಬಂಧಿಸಿದ ಕಾನೂನುಗಳಲ್ಲಿ ಹಲವು ತಿದ್ದುಪಡಿಗಳನ್ನು ತರಬೇಕಾಗುತ್ತದೆ. ಏಕಕಾಲ ದಲ್ಲಿ ಚುನಾವಣೆ ನಡೆಸುವ ಆಲೋಚನೆಯ ಪರವಾಗಿ ಕೇಂದ್ರ ಕಾನೂನು ಆಯೋಗವು 1999ರಲ್ಲೇ ಅಭಿಪ್ರಾಯ ನೀಡಿತ್ತಾದರೂ, ಈ ವಿಚಾರವನ್ನು ಪರಿಶೀಲಿಸುವಂತೆ ಕೇಂದ್ರವು ಕಾನೂನು ಆಯೋಗವನ್ನು ಮತ್ತೆ ಕೋರಿದೆ.

ಕಾನೂನು ಆಯೋಗವು ಈಗ ಏನು ಹೇಳಲಿದೆ ಎಂಬುದನ್ನು ಕಾದು ನೋಡಬೇಕು. ಆದರೆ ಏಕಕಾಲದಲ್ಲಿ ಚುನಾವಣೆ ನಡೆಸುವುದು ರಾಷ್ಟ್ರದ ಹಿತಾಸಕ್ತಿಯಿಂದ, ಮೂರು ಕಾರಣಗಳಿಗಾಗಿ ಪರಿಗಣನೆಗೆ ಯೋಗ್ಯವಾದುದು ಎನ್ನಬೇಕಾಗುತ್ತದೆ. ಮೊದಲನೆಯದು, ದೇಶದ ಒಂದಲ್ಲ ಒಂದು ಕಡೆ ಪ್ರತಿವರ್ಷ ನಡೆಯುವ ಚುನಾವಣೆಯ ಕಾರಣದಿಂದಾಗಿ ಮೂಡುವ ಚುನಾವಣಾ ಗುಂಗಿನಿಂದ ನಮ್ಮನ್ನು ಹೊರತರುತ್ತದೆ. ಎರಡನೆಯದು, ಚುನಾವಣಾ ನೀತಿ ಸಂಹಿತೆಯು ದೇಶದ ಎಲ್ಲೆಡೆ ಐದು ವರ್ಷಗಳಿಗೆ ಒಮ್ಮೆ ಮಾತ್ರ ಜಾರಿಗೆ ಬರುವಂತೆ ಇದು ನೋಡಿಕೊಳ್ಳುತ್ತದೆ. ಇದರಿಂದಾಗಿ ಸರ್ಕಾರದ ಕೆಲಸಗಳು ಅಡ್ಡಿಯಿಲ್ಲದೆ ನಡೆಯುತ್ತವೆ. ಎಲ್ಲ ಪಕ್ಷಗಳು ತಮ್ಮ ಅಧಿಕಾರ ಅವಧಿಯ ಹೆಚ್ಚಿನ ಸಮಯವನ್ನು ಅಭಿವೃದ್ಧಿ ಕಾರ್ಯಗಳ ಮೇಲೆ ಗಮನ ನೀಡಲಿಕ್ಕೆ ಬಳಸಲು ಸಾಧ್ಯವಾಗುವ ಕಾರಣ, ಆಡಳಿತದ ಮಟ್ಟವು ಖಂಡಿತ ಹೆಚ್ಚುತ್ತದೆ. ಕೊನೆಯದಾಗಿ, ಚುನಾವಣಾ ವೆಚ್ಚಗಳನ್ನು ಇದು ಖಂಡಿತ ತಗ್ಗಿಸಲಿದೆ ಅಥವಾ ಚುನಾವಣೆಗಳಲ್ಲಿ ಕಪ್ಪುಹಣದ ಪರಿಣಾಮವನ್ನು ಇದು ತಗ್ಗಿಸಲಿದೆ.

ಸ್ವಾತಂತ್ರ್ಯ ಬಂದ ನಂತರದಲ್ಲಿ ಲೋಕಸಭೆ ಹಾಗೂ ವಿಧಾನಸಭೆಗಳಿಗೆ ಚುನಾವಣೆಗಳು ಏಕಕಾಲಕ್ಕೆ ನಡೆಯು‌ ತ್ತಿದ್ದವು. ಇದು 1952, 1957, 1962 ಮತ್ತು 1967ರಲ್ಲಿ ಸುಗಮವಾಗಿ ನಡೆಯಿತು. ಆದರೆ ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ಮೈತ್ರಿಕೂಟಗಳು ಅಧಿಕಾರಕ್ಕೆ ಬಂದು, ತಮ್ಮ ಅವಧಿ ಪೂರ್ಣಗೊಳಿಸಲು ವಿಫಲವಾದ ನಂತರದಲ್ಲಿ ಏಕಕಾಲಕ್ಕೆ ಚುನಾವಣೆ ನಡೆಸುವ ವ್ಯವಸ್ಥೆಗೆ ಧಕ್ಕೆಯಾಯಿತು. ಅಲ್ಲದೆ, ಆಗ ಕೇಂದ್ರದಲ್ಲಿ ಅಧಿಕಾರ ದಲ್ಲಿದ್ದ ಕಾಂಗ್ರೆಸ್ ಪಕ್ಷವು ಸಂವಿಧಾನದ 356ನೆಯ ವಿಧಿಯನ್ನು ಬಳಸಿಕೊಂಡು ರಾಜ್ಯಗಳಲ್ಲಿ ರಾಷ್ಟ್ರಪತಿ ಆಡಳಿತ ಹೇರುವುದು ಹಾಗೂ ಆ ರಾಜ್ಯಗಳಲ್ಲಿ ಪರಿಸ್ಥಿತಿ ತನಗೆ ಅನುಕೂಲವಾಗುವಂತೆ ಇದೆ ಎಂದು ಅನ್ನಿಸಿದಾಗ ರಾಷ್ಟ್ರಪತಿ ಆಡಳಿತ ಹಿಂಪಡೆದು ಚುನಾವಣೆ ನಡೆಯಲು ಅವಕಾಶ ಕಲ್ಪಿಸುವ ಕೆಲಸ ಮಾಡಿದ್ದರಿಂದಾಗಿಯೂ ಏಕಕಾಲಕ್ಕೆ ಚುನಾವಣೆ ನಡೆಸುವ ವ್ಯವಸ್ಥೆ ಹಾಳಾಯಿತು. 1969ರಲ್ಲಿ ಕಾಂಗ್ರೆಸ್ ವಿಭಜನೆಯಾದ ನಂತರದಲ್ಲಿ ಇಂದಿರಾ ಗಾಂಧಿ ಅವರು 1971ರಲ್ಲಿ ಲೋಕಸಭೆಗೆ ಅವಧಿಪೂರ್ವ ಚುನಾವಣೆ ನಡೆಸಲು ಮುಂದಾದಾಗ, ಏಕಕಾಲದಲ್ಲಿ ಚುನಾವಣೆ ನಡೆಸುವ ವ್ಯವಸ್ಥೆಯನ್ನು ಹಾಳುಮಾಡುವ ಪ್ರಕ್ರಿಯೆ ಪೂರ್ಣಗೊಂಡಂತಾಯಿತು. ಆ ವರ್ಷ ಲೋಕಸಭೆಯಲ್ಲಿ ಇಂದಿರಾ ಗಾಂಧಿ ಅವರು ಭರ್ಜರಿ ಬಹುಮತ ಪಡೆದರು, ವಿಧಾನಸಭಾ ಚುನಾವಣೆಗಳು 1972ರಲ್ಲಿ ನಡೆದವು. ಅದಾದ ನಂತರದಲ್ಲಿ ಲೋಕಸಭೆ ಹಾಗೂ ವಿಧಾನಸಭಾ ಚುನಾವಣೆ ಗಳನ್ನು ಒಟ್ಟಿಗೆ ನಡೆಸಲು ಯಾರಿಗೂ ಸಾಧ್ಯವಾಗಿಲ್ಲ.

ಆದರೆ, ಲೋಕಸಭೆ ಹಾಗೂ ವಿಧಾನಸಭೆಗಳಿಗೆ ಒಂದೇ ಬಾರಿಗೆ ಚುನಾವಣೆ ನಡೆಸುವ ಆಲೋಚನೆಯು ಈಚಿನ ವರ್ಷಗಳಲ್ಲಿ ಮತ್ತೆ ಹೆಚ್ಚೆಚ್ಚು ಜನಪ್ರಿಯವಾಗುತ್ತಿದೆ. ವೆಚ್ಚ ಉಳಿಸುವುದಕ್ಕಾಗಿ, ಆಡಳಿತವನ್ನು ಸುಧಾರಿಸುವುದಕ್ಕಾಗಿ ಮತ್ತು ದೇಶವನ್ನು ಮತ್ತೆ ಮತ್ತೆ ಆವರಿಸುವ ಚುನಾವಣಾ ಗುಂಗಿನಿಂದ ತಪ್ಪಿಸುವುದ ಕ್ಕಾಗಿ ಏಕಕಾಲದಲ್ಲಿ ಚುನಾವಣೆ ನಡೆಸುವ ಅಗತ್ಯ ಇದೆ ಎಂಬ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಿದ್ದಾರೆ. ಮೂಲಸೌಕರ್ಯ ಇದೆ ಎಂದಾದರೆ, ಏಕಕಾಲಕ್ಕೆ ಚುನಾವಣೆ ನಡೆಸಲು ಅಗತ್ಯ ಸಾಗಣೆ ವ್ಯವಸ್ಥೆ ಯನ್ನು ಒಂದು ವರ್ಷದಲ್ಲಿ ಸಜ್ಜುಗೊಳಿಸಿಕೊಳ್ಳುವುದಾಗಿ ಕೇಂದ್ರ ಚುನಾವಣಾ ಆಯೋಗವು 2017ರಲ್ಲಿ ಘೋಷಿಸಿತು. ಆಗ ಏಕಕಾಲಕ್ಕೆ ಚುನಾವಣೆ ನಡೆಸುವ ಆಲೋಚನೆಗೆ ಹೊಸದೊಂದು ಬಲ ಬಂದಂತೆ ಆಯಿತು.

ಇಲ್ಲಿ ವಾಸ್ತವ ಏನೆಂದರೆ, ಬೇರೆ ಬೇರೆ ರಾಜ್ಯಗಳಿಗೆ ಚುನಾವಣೆಗಳನ್ನು ಬೇರೆ ಬೇರೆ ಸಂದರ್ಭಗಳಲ್ಲಿ ನಡೆಸುವುದರಿಂದ ಆಗುವ ಭಾರಿ ವೆಚ್ಚ ಮಾತ್ರವಲ್ಲದೆ, ಚುನಾವಣೆಗಳ ವಿಷವರ್ತುಲವು ಆಡಳಿತದ ಮೇಲೆ ಭಾರಿ ಪರಿಣಾಮ ಉಂಟುಮಾಡುತ್ತದೆ. ಅದು ರಾಜಕೀಯ ಅಸ್ಥಿರತೆಯನ್ನು ಸೃಷ್ಟಿಸುತ್ತದೆ, ಅನಿಶ್ಚಿತತೆಗೂ ಕಾರಣ ವಾಗುತ್ತದೆ. ವಿಧಾನಸಭೆ ಹಾಗೂ ಲೋಕಸಭೆಗೆ ಏಕಕಾಲದಲ್ಲಿ ಚುನಾವಣೆ ನಡೆಯದೇ ಇರುವುದರಿಂದ ಆಗುವ ಪರಿಣಾಮಗಳು ಏನು ಎಂಬುದಕ್ಕೆ ಕರ್ನಾಟಕವೇ ಒಳ್ಳೆಯ ಉದಾಹರಣೆ.

1983ರ ಆರಂಭದಲ್ಲಿ ರಾಜ್ಯ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ರಾಮಕೃಷ್ಣ ಹೆಗಡೆ ನೇತೃತ್ವದ ಜನತಾ ಪಕ್ಷ ಮತ್ತು ಕರ್ನಾಟಕ ಕ್ರಾಂತಿ ರಂಗ ಮೈತ್ರಿಕೂಟವು ಕಾಂಗ್ರೆಸ್ಸನ್ನು ಸೋಲಿಸಿ ಅಧಿಕಾರಕ್ಕೆ ಬಂತು. ಆದರೆ ಇಂದಿರಾ ಗಾಂಧಿ ಅವರ ಹತ್ಯೆಯ ನಂತರ, 1984ರ ಡಿಸೆಂಬರ್‌ನಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಈ ಮೈತ್ರಿಕೂಟವನ್ನು ಸೋಲಿಸಿತು. ಈ
ಫಲಿತಾಂಶವನ್ನು ಹೆಗಡೆ ಅವರು ತಮ್ಮ ಪಕ್ಷದ ವಿರುದ್ಧ ಬಂದ ಜನಾದೇಶ ಎಂದು ಭಾವಿಸಿದರು. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಅವರು, ವಿಧಾನಸಭೆಗೆ ಮತ್ತೆ ಚುನಾವಣೆ ನಡೆಸುವಂತೆ ರಾಜ್ಯಪಾಲರನ್ನು ಕೋರಿದರು. ಆ ಚುನಾವಣೆಯು ಕೆಲವು ತಿಂಗಳ ನಂತರ ನಡೆಯಿತು. ಆದರೆ, ಚುನಾಯಿತ ಸರ್ಕಾರ ಇಲ್ಲದಿದ್ದ (ಉಸ್ತುವಾರಿ ಸರ್ಕಾರದ) ಅವಧಿಯಲ್ಲಿ ರಾಜಕೀಯ ಅಸ್ಥಿರತೆ ಇತ್ತು. ಆಡಳಿತದ ಮೇಲೆ ಪರಿಣಾಮ ಉಂಟಾಯಿತು. ಇಂತಹ ಉದಾಹರಣೆಗಳು ದೇಶದ ಎಲ್ಲೆಡೆ ಇವೆ. ರಾಜ್ಯಗಳಲ್ಲಿನ ಆಡಳಿತ ಪಕ್ಷವು ಲೋಕಸಭಾ ಚುನಾವಣೆಯ ಫಲಿತಾಂಶವು ತನ್ನ ವಿರುದ್ಧ ಬಂದ ನಂತರ ಮೊದಲಿನ ಹಿಡಿತ ಕಳೆದುಕೊಳ್ಳುವ, ತನ್ನ ಬಗ್ಗೆಯೇ ವಿಶ್ವಾಸ ಕಳೆದುಕೊಳ್ಳುವ ಹಾಗೂ ಅದರ ಪರಿಣಾಮವಾಗಿ ಆಡಳಿತ ಕುಸಿಯುವ ಉದಾಹರಣೆಗಳಿವೆ.

ಇವೆಲ್ಲವನ್ನೂ ಸಂಸತ್ತಿನ ಸಿಬ್ಬಂದಿ, ಸಾರ್ವಜನಿಕ ಸೇವೆಗಳು, ಕಾನೂನು ಮತ್ತು ನ್ಯಾಯಕ್ಕೆ ಸಂಬಂಧಿಸಿದ ಇಲಾಖಾವಾರು ಸ್ಥಾಯಿ ಸಮಿತಿಯು ವಿಸ್ತೃತವಾಗಿ ಪರಿಶೀಲಿಸಿದೆ. ಲೋಕಸಭೆ ಹಾಗೂ ವಿಧಾನಸಭೆಗಳಿಗೆ ಏಕಕಾಲಕ್ಕೆ ಚುನಾವಣೆ ನಡೆಸುವ ಸಾಧ್ಯತೆ ಕುರಿತು ಅದು ಪರಿಶೀಲಿಸಿದೆ, ವರದಿಯನ್ನು 2015ರಲ್ಲಿ ಸಂಸತ್ತಿನಲ್ಲಿ ಮಂಡಿಸಲಾಗಿದೆ. ಬೇರೆ ಬೇರೆ ಸಂದರ್ಭ ಗಳಲ್ಲಿ ಚುನಾವಣೆ ನಡೆಸುವುದು ಸಾಮಾನ್ಯವಾಗಿ, ‘ಸರ್ಕಾರದ ನೀತಿಗಳು ಅನುಷ್ಠಾನಕ್ಕೆ ಬಾರದೇ ಇರುವುದು, ಆಡಳಿತದಲ್ಲಿ ಕೊರತೆಗೆ’ ಮತ್ತು ಹೆಚ್ಚಿನ ವೆಚ್ಚಗಳಿಗೆ ಕಾರಣವಾಗುತ್ತಿದೆ ಎಂದು ಸಮಿತಿಯು ಸರಿಯಾಗಿಯೇ ಗುರುತಿಸಿದೆ.

ಹೀಗಿದ್ದರೂ, ಇಲ್ಲಿ ದೊಡ್ಡ ಅಡೆತಡೆ ರಾಜಕೀಯ ಒಮ್ಮತದ್ದು. ಭಾರತೀಯ ಜನತಾ ಪಕ್ಷದಿಂದ ಬರುವ ಯಾವುದೇ ಸಲಹೆಯನ್ನು, ಆ ಪಕ್ಷವನ್ನು ವಿರೋಧಿಸುವ ಪಕ್ಷಗಳು ಅನುಮಾನದಿಂದ ಕಾಣುತ್ತವೆ. ದೇಶದ ಅರ್ಧದಷ್ಟು ರಾಜ್ಯಗಳಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿರುವುದು ಬಿಜೆಪಿ ನೇತೃತ್ವದ ಎನ್‌ಡಿಎ ಭಾಗವಾಗಿರದ ಅಥವಾ ಬಿಜೆಪಿಯನ್ನು ವಿರೋಧಿಸುವ ರಾಜಕೀಯ ಪಕ್ಷಗಳು. ಪರಿಸ್ಥಿತಿ ಹೀಗಿರುವಾಗ ಇಲ್ಲಿ ರಾಜಕೀಯ ಒಮ್ಮತವನ್ನು ಸಾಧಿಸುವುದು ಭಗೀರಥ ಪ್ರಯತ್ನವೇ ಆಗುತ್ತದೆ. ಹೀಗಿದ್ದರೂ, ಒಂದು ಯತ್ನವನ್ನಂತೂ ಮಾಡಬೇಕು. ಏಕೆಂದರೆ ಚುನಾವಣೆಗಳು ತಂದಿರಿಸುವ ಬಳಲಿಕೆಯಿಂದ ಜನರನ್ನು ಪಾರುಮಾಡಬೇಕು ಎಂದಾದರೆ ಇದು ವಿಶ್ವಾಸಾರ್ಹ ಉಪಕ್ರಮವಾಗುತ್ತದೆ. ಉತ್ತಮ ಆಡಳಿತವನ್ನು ಬಯಸುವುದಿದ್ದರೆ, ಈ ಒಂದು ಪ್ರಯತ್ನವನ್ನು ಮಾಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT