ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎ. ಸೂರ್ಯ ಪ್ರಕಾಶ್ ಲೇಖನ: ಅಪಪ್ರಚಾರಕ್ಕೆ ತಕ್ಕ ಪ್ರತ್ಯುತ್ತರ

ಭಿನ್ನ ಸಂಸ್ಕೃತಿಗಳ ನಡುವೆ ಸಂವಹನ ಇರುವಂತೆ ಮಾಡುವುದು ಈಗಿನ ಅಗತ್ಯ
Published 11 ಆಗಸ್ಟ್ 2023, 23:39 IST
Last Updated 11 ಆಗಸ್ಟ್ 2023, 23:39 IST
ಅಕ್ಷರ ಗಾತ್ರ

ಖ್ಯಾತ ಮುಸ್ಲಿಂ ವಿದ್ವಾಂಸ ಡಾ. ಮುಹಮ್ಮದ್ ಬಿನ್ ಅಬ್ದುಲ್ ಕರೀಂ ಅಲ್–ಇಸ್ಸಾ ಅವರು ಭಾರತದ ಪ್ರಜಾತಂತ್ರ ವ್ಯವಸ್ಥೆ, ಇಲ್ಲಿನ ಬಹುತ್ವ ಹಾಗೂ ಭಾರತದ ಸಂವಿಧಾನದ ಮೂಲಭೂತ ಮೌಲ್ಯಗಳ ಬಗ್ಗೆ ಆಡಿರುವ ಪ್ರಶಂಸೆಯ ಮಾತುಗಳ ಪರಿಣಾಮವಾಗಿ ಪೊಳ್ಳು ಜಾತ್ಯತೀತವಾದಿಗಳು, ಮೋದಿ ನಿಂದಕರು ಮತ್ತು ಈಗ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವವರು ಇಸ್ಲಾಂ ಕುರಿತು ಭೀತಿ ಹರಡುತ್ತಿದ್ದಾರೆ ಎಂಬ ಸುಳ್ಳು ಹರಡುತ್ತಿರುವವರ ಬಾಯಿ ಬಂದ್ ಆಗಿದೆ. ಅಲ್–ಇಸ್ಸಾ ಅವರು ಮುಸ್ಲಿಂ ವರ್ಲ್ಡ್‌ ಲೀಗ್‌ನ ಮಹಾ ಪ್ರಧಾನ ಕಾರ್ಯದರ್ಶಿ.

ವಿಶ್ವದಾದ್ಯಂತ ಇರುವ ಮುಸ್ಲಿಮರನ್ನು ಮುಸ್ಲಿಂ ವರ್ಲ್ಡ್‌ ಲೀಗ್ ಪ್ರತಿನಿಧಿಸುತ್ತಿದೆ. ಅದರ ಮುಖ್ಯಸ್ಥರಾಗಿರುವ ಅಲ್–ಇಸ್ಸಾ ಅವರಿಂದ ಬಂದಿರುವ ಮಾತುಗಳು ಗಮನಾರ್ಹ. ಈ ಮಾತುಗಳು, ಭಾರತ ವಿರೋಧಿ ಶಕ್ತಿಗಳು ದೇಶದ ಒಳಗೆ ಹಾಗೂ ಹೊರಗೆ ನಡೆಸುತ್ತಿರುವ ಪ್ರಚಾರಾಂದೋಲನದ ಬಗ್ಗೆ ಭಾರತೀಯ ಮುಸ್ಲಿಮರಲ್ಲಿ ಅರಿವು ಮೂಡಿಸುವಂತೆ ಇವೆ. ಭಾರತೀಯ ಮುಸ್ಲಿಮರು ಭಾರತದಲ್ಲಿ ಅನುಭವಿಸುತ್ತಿರುವ ಸ್ವಾತಂತ್ರ್ಯ, ಅವರಿಗೆ ಇಲ್ಲಿರುವ ಅವಕಾಶಗಳ ಬಗ್ಗೆಯೂ ಅರಿವು ನೀಡುವಂತೆ ಇವೆ.

ಅಲ್–ಇಸ್ಸಾ ಅವರು ಈ ಮೊದಲು ಸೌದಿ ಅರೇಬಿಯಾ ದೇಶದ ಕಾನೂನು ಸಚಿವರಾಗಿದ್ದರು. ಅವರ ಮಾತುಗಳನ್ನು ಇಸ್ಲಾಂನ ಅಧಿಕೃತ ದನಿ ಎಂಬಂತೆ ಪರಿಗಣಿಸಲಾಗುತ್ತದೆ. ಅವರು ಇಸ್ಲಾಮಿಕ್ ಹಲಾಲ್ ಸಂಘಟನೆಯ ಅಧ್ಯಕ್ಷ ಕೂಡ ಹೌದು. ಅವರು ಮಂದಗಾಮಿ ಇಸ್ಲಾಂ ಹಾಗೂ ಅಂತರ್‌ ಧರ್ಮೀಯ ಸಂವಾದಗಳ ಪರ ನಿಲುವು ಹೊಂದಿರುವವರು. ಎರಡು ಪವಿತ್ರ ಮಸೀದಿಗಳ ರಕ್ಷಕನ ಸ್ಥಾನದಲ್ಲಿರುವ ಸೌದಿ ಅರೇಬಿಯಾದ ದೊರೆ 2022ರ ಜುಲೈನಲ್ಲಿ ಹಜ್ ಧಾರ್ಮಿಕ ಪ್ರವಚನ ನೀಡಲು ಆಹ್ವಾನಿಸಿದ್ದು ಅಲ್–ಇಸ್ಸಾ ಅವರನ್ನು. ಆ ಪ್ರವಚನದ ವೇಳೆ ಅಲ್–ಇಸ್ಸಾ ಅವರು, ಮುಸ್ಲಿಮರು ಭಿನ್ನಮತ ಹಾಗೂ ದ್ವೇಷಭಾವನೆಯನ್ನು ತೊರೆಯಬೇಕು ಎಂದು ಹೇಳಿದ್ದರು.

ಈಚೆಗೆ ಭಾರತಕ್ಕೆ ಭೇಟಿ ನೀಡಿದ್ದ ಅವರು, ಹಲವು ಸಭೆಗಳಲ್ಲಿ ಪಾಲ್ಗೊಂಡರು. ಅದರಲ್ಲಿ ಒಂದು ವಿವೇಕಾನಂದ ಅಂತರರಾಷ್ಟ್ರೀಯ ಪ್ರತಿಷ್ಠಾನದ್ದು (ವಿಐಎಫ್‌). ವಿಐಎಫ್‌ನಲ್ಲಿನ ಪ್ರಮುಖ ಹಿಂದೂ ಧಾರ್ಮಿಕ ನಾಯಕರ ಜೊತೆ ಅವರು ಆಳವಾದ ಚರ್ಚೆಯಲ್ಲಿ ಭಾಗಿಯಾಗಿದ್ದರು. ಜಗತ್ತಿನ ಅತ್ಯಂತ ಹಳೆಯ ನಾಗರಿಕತೆಗಳಲ್ಲಿ ಒಂದಾಗಿರುವ ಭಾರತದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ‘ಇಂದಿನ ಜಗತ್ತು ಎದುರಿಸುತ್ತಿರುವ ಕೆಲವು ಪ್ರಮುಖ ಬಿಕ್ಕಟ್ಟುಗಳನ್ನು ಬಗೆಹರಿಸುವ ಶಕ್ತಿಯು ಭಾರತೀಯ ತತ್ವಶಾಸ್ತ್ರಕ್ಕೆ ಇದೆ’ ಎಂದರು. ಅವರ ಪ್ರಕಾರ, ಮುಸ್ಲಿಂ ಜಗತ್ತು ಭಾರತದ ತಾತ್ವಿಕತೆಯನ್ನು ಅರ್ಥ ಮಾಡಿಕೊಂಡು ಅದರಿಂದ ಪ್ರಯೋಜನ ಪಡೆದುಕೊಳ್ಳಬೇಕು.

ಹಿಂದೂ ಧರ್ಮಗುರುಗಳ ಜೊತೆಗಿನ ಮಾತುಕತೆಯಲ್ಲಿ ಅಲ್–ಇಸ್ಸಾ ಅವರು ಆಡಿದ ಪ್ರಮುಖ ಮಾತುಗಳು ಯಾವುವು ಎಂಬುನ್ನು ವಿಐಎಫ್‌ನಿಂದ ಬಂದ ಪ್ರಕಟಣೆಯಲ್ಲಿ ಹೇಳಲಾಗಿದೆ: ಬೇರೆ ಬೇರೆ ನಾಯಕರು ತಮ್ಮ ರಾಜಕೀಯ ಅಜೆಂಡಾಕ್ಕೆ ಅನುಗುಣವಾಗಿ ಕುರಾನ್‌ಗೆ ನೀಡಿರುವ ಭಿನ್ನ ವ್ಯಾಖ್ಯಾನಗಳು ಅಪಾರ್ಥಕ್ಕೆ, ಅಪನಂಬಿಕೆಗೆ ಹಾಗೂ ಇತರರ ಬಗ್ಗೆ ದ್ವೇಷಕ್ಕೆ ಎಡೆಮಾಡಿಕೊಟ್ಟಿವೆ; ಪರಸ್ಪರ ಗೌರವವನ್ನು ಕುರಾನ್‌ ಸಾರುತ್ತದೆ, ಆದರೆ ಕುರಾನ್‌ನ ಈಗಿನ ‘ವ್ಯಾಖ್ಯಾನ’ವು ಬಹುತ್ವವನ್ನು ಪಸರಿಸುವಂತೆ ಇಲ್ಲ; ಬಹುತ್ವವನ್ನು ಗುರುತಿಸುವುದರಿಂದ ಭಿನ್ನ ಸಂಸ್ಕೃತಿಗಳ ನಡುವೆ ಒಳ್ಳೆಯ ಸಂಬಂಧ ಉಳಿಯುತ್ತದೆ. ಹೀಗಾಗಿ ಭಿನ್ನ ಸಂಸ್ಕೃತಿಗಳ ನಡುವೆ ಸಂವಹನ ಇರುವಂತೆ ಮಾಡುವುದು ಈಗಿನ ಅಗತ್ಯ.

ಸಹಬಾಳ್ವೆಯನ್ನು ಪಸರಿಸುವಲ್ಲಿ ಅಲ್–ಇಸ್ಸಾ ಅವರ ಹಿನ್ನೆಲೆಯೇನು ಎಂಬುದನ್ನು ಅವರ ಕೆಲಸಗಳೇ ಹೇಳುತ್ತವೆ. ಮೂರು ವರ್ಷಗಳ ಹಿಂದೆ ಪೋಲೆಂಡಿನ ‘ಕಾನ್‌ಸಂಟ್ರೇಷನ್‌ ಶಿಬಿರ’ಕ್ಕೆ ನಿಯೋಗವೊಂದನ್ನು ಒಯ್ದಿದ್ದ ಅವರು, ಸಹಬಾಳ್ವೆಯನ್ನು ಸಾಧಿಸುವ ವಿಚಾರದಲ್ಲಿ ಮುಸ್ಲಿಂ ವರ್ಲ್ಡ್‌ ಲೀಗ್‌ ಯಹೂದಿ ಸಮುದಾಯದ ಜೊತೆ ನಿಲ್ಲಲಿದೆ ಎಂದು ಹೇಳಿದ್ದರು. ಇದು ಅಸಾಮಾನ್ಯವಾದುದು, ಅವರನ್ನು ಶಾಂತಿಯ ನಿಜ ದೂತನನ್ನಾಗಿಸುವಂಥದ್ದು.

ಯಾವುದೇ ದೇಶದಲ್ಲಿನ ಅಲ್ಪಸಂಖ್ಯಾತರು ಆ ದೇಶದ ಜೊತೆ ಪೂರ್ತಿಯಾಗಿ ಒಂದಾಗಬೇಕಾದ ಅಗತ್ಯವನ್ನು ಅಲ್–ಇಸ್ಸಾ ಅವರು ತಮ್ಮ ಬಹಿರಂಗ ಭಾಷಣಗಳಲ್ಲಿ ಒತ್ತಿ ಹೇಳುತ್ತಾರೆ. ಅಲ್ಪಸಂಖ್ಯಾತರಿಗೆ ಅವರ ಸಲಹೆ ಹೀಗಿದೆ: ನಿಮ್ಮ ದೇಶವನ್ನು ಪ್ರೀತಿಸಿ, ನಿಮ್ಮ ದೇಶಕ್ಕಾಗಿ ಯಾವುದೇ ತ್ಯಾಗಕ್ಕೂ ಸಿದ್ಧರಿರಿ. ಇಸ್ಲಾಂನ ಮೂಲಭೂತವಾದಿಗಳ ನಿಲುವಿಗೆ ವ್ಯತಿರಿಕ್ತವಾಗಿ ಅಲ್–ಇಸ್ಸಾ ಅವರು, ಬಹುತ್ವವು ಜಗತ್ತಿನ ವಾಸ್ತವ ಎಂದೂ ಅದನ್ನು ಎಲ್ಲರೂ ಒಪ್ಪಿಕೊಳ್ಳಬೇಕು ಎಂದೂ ಭಾರತಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಹಲವು ಬಾರಿ ಹೇಳಿದರು. ನಾಗರಿಕತೆಗಳ ನಡುವಿನ ಸಂಘರ್ಷವನ್ನು ತಡೆಯಲು ಇದೊಂದೇ ದಾರಿ.

ಭಾರತದ ಸಂವಿಧಾನ ಹಾಗೂ ಪ್ರಜಾತಂತ್ರದ ಬಗ್ಗೆ ಮೆಚ್ಚುಗೆಯ ಮಾತನಾಡುವಾಗ ಅಲ್–ಇಸ್ಸಾ ಅವರು ಮೋದಿ ನೇತೃತ್ವದ ಸರ್ಕಾರದ ಬಗ್ಗೆ ನಿರ್ದಿಷ್ಟವಾಗಿ ಏನೂ ಹೇಳಲಿಲ್ಲ. ಬದಲಿಗೆ ಭಾರತವು ಒಂದು ನಾಗರಿಕತೆಯಾಗಿ ಪ್ರಜಾತಂತ್ರ ಹಾಗೂ ಸಹಿಷ್ಣುತೆಯ ಬಗ್ಗೆ ಹೊಂದಿರುವ ಬದ್ಧತೆ, ದೇಶದ ಸಂವಿಧಾನದ ಮೂಲಭೂತ ಮೌಲ್ಯಗಳ ಬಗ್ಗೆ ಮಾತನಾಡಿದರು. ಹೀಗಿದ್ದರೂ ಮೋದಿ ವಿರೋಧಿಗಳಿಗೆ ಸಮಾಧಾನ ಆಗಲಿಲ್ಲ. ಉದಾಹರಣೆಗೆ, ವಿರೋಧ ಪಕ್ಷದ ವಕ್ತಾರರೊಬ್ಬರು ಟಿ.ವಿ. ಕಾರ್ಯಕ್ರಮವೊಂದರಲ್ಲಿ, ‘ಅಲ್–ಇಸ್ಸಾ ಯಾರು? ಅವರ ಹಿನ್ನೆಲೆ ಏನು? ಅವರು ಎನ್‌ಜಿಒ ನಡೆಸುತ್ತಿದ್ದಾರೆ ಅನ್ನಿಸುತ್ತದೆ, ಅದಕ್ಕೆ ಕೇಂದ್ರ ಸರ್ಕಾರದ ನೆರವು ಬೇಕು ಅನ್ನಿಸುತ್ತಿದೆ’ ಎಂದು ಹೇಳಿದಂತಿತ್ತು.

ಅಲ್–ಇಸ್ಸಾ ಅವರ ಮಾತುಗಳನ್ನು ಇನ್ನೊಬ್ಬ ಟೀಕಾಕಾರ ‘ಸಾರ್ವಜನಿಕರ ನಡುವೆ ಸದಭಿಪ್ರಾಯ ಮೂಡಿಸುವ ಕೆಲಸ’ ಎಂದು ಜರಿದರು. ಅಲ್–ಇಸ್ಸಾ ಅವರು ‘ಸರ್ಕಾರಿ ಮುಸ್ಲಿಂ’ ಎಂದು ದೂರಿದರು. ಇಂತಹ ಮಾತುಗಳೇ ದುರಂತ. ಅಲ್ಲದೆ, ದೇಶದ ಕೆಲವು ರಾಜಕಾರಣಿಗಳು ಹಾಗೂ ಕೆಲವು ರಾಜಕೀಯ ಪಕ್ಷಗಳು ಸೌಹಾರ್ದ ಕದಡುವುದನ್ನೇ ಹೇಗೆ ನೆಚ್ಚಿಕೊಂಡಿವೆ ಎಂಬುದನ್ನು ತೋರಿಸುತ್ತದೆ. ಮೋದಿ ನೇತೃತ್ವದ ಸರ್ಕಾರವು ಅಲ್ಪಸಂಖ್ಯಾತರ ವಿಚಾರದಲ್ಲಿ ತಾರತಮ್ಯದ ನಡೆ ಅನುಸರಿಸುತ್ತಿದೆ ಎಂಬ ಭಾವನೆಯಲ್ಲಿ ಮುಸ್ಲಿಮರ ತಲೆಯಲ್ಲಿ ತುಂಬಿದವರಿಗೆ ಸೌದಿ ಅರೇಬಿಯಾದ ಮುಸ್ಲಿಂ ಧರ್ಮಗುರು ಒಬ್ಬರು ಬಹುತ್ವದೊಂದಿಗೆ ಭಾರತದಲ್ಲಿ ಇರುವ  ಸೌಹಾರ್ದ ಭಾವದ ಮಾತನಾಡಿದ್ದನ್ನು, ವಿಶ್ವದ ಇತರರು ಭಾರತವನ್ನು ಅನುಕರಿಸಬೇಕು ಎಂದು ಮೆಚ್ಚುಗೆಯ ಮಾತುಗಳನ್ನು ಆಡಿರುವುದನ್ನು ಒಪ್ಪಿಕೊಳ್ಳಲು ಆಗುತ್ತಿಲ್ಲ.

ಸೌದಿ ಅರೇಬಿಯಾದಲ್ಲಿ ಹಾಗೂ ಮುಸ್ಲಿಂ ಜಗತ್ತಿನಲ್ಲಿ ಅಲ್–ಇಸ್ಸಾ ಅವರು ಹೊಂದಿರುವ ಹೆಚ್ಚುಗಾರಿಕೆಯನ್ನು ಗಮನಿಸಿದರೆ, ಭಾರತದ ನಾಗರಿಕತೆಯ ಮೌಲ್ಯಗಳ ಬಗ್ಗೆ, ಇಲ್ಲಿನ ಸಂವಿಧಾನದ ಬಗ್ಗೆ ಅವರು ಹೊಂದಿರುವ ಗೌರವವು ಈ ದೇಶವನ್ನು ಹಾಗೂ ಇಲ್ಲಿನ ಪ್ರಜಾತಂತ್ರವನ್ನು ಕೀಳಾಗಿ ಕಾಣುತ್ತಿರುವವರಲ್ಲಿ ಮನಃಪರಿವರ್ತನೆ ತರುವಂತಹ ಪ್ರಭಾವವನ್ನು ಬೀರಬಲ್ಲದು ಎಂದು ಅನ್ನಿಸುತ್ತದೆ. ವಿಶ್ವದ ಅತಿದೊಡ್ಡ ಪ್ರಜಾತಂತ್ರ ರಾಷ್ಟ್ರದಲ್ಲಿ, ವಿಶ್ವದ ಅತ್ಯಂತ ವೈವಿಧ್ಯಮಯವಾದ ಸಮಾಜದಲ್ಲಿ ತಾವು ಪಡೆದಿರುವುದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲು ಅಲ್ಪಸಂಖ್ಯಾತ ಸಮುದಾಯದವರಿಗೆ ಇಂಬು ಕೊಡುತ್ತದೆ ಎಂಬ ಆಶಾಭಾವನೆ ಇಟ್ಟುಕೊಳ್ಳಬಹುದು. ಕಳೆದ ವರ್ಷದ ಹಜ್ ಸಂದರ್ಭದಲ್ಲಿ ಧಾರ್ಮಿಕ ಪ್ರವಚನ ನೀಡಲು ಆಹ್ವಾನಿತ ಆಗಿದ್ದ ವ್ಯಕ್ತಿಯು ಭಾರತದ ಬಗ್ಗೆ ಇಷ್ಟೊಂದು ಒಳ್ಳೆಯ ಮಾತುಗಳನ್ನು ಹೇಳಿದ್ದಾರೆ ಎಂದಾದರೆ, ಆ ಮಾತಿಗೆ ಮಹತ್ವ ಇರಲೇಬೇಕು. ಜಾಗತಿಕ ಸೌಹಾರ್ದಕ್ಕಾಗಿ ಅಭಿಯಾನ ಕೈಗೊಂಡಿರುವ, ಅರೇಬಿಯಾದಿಂದ ಬಂದ ಶಾಂತಿದೂತ ಈ ಮಾತನ್ನು ಹೇಳಿದ್ದಾರೆ ಎಂದಾದರೆ ಆ ಮಾತಿನಲ್ಲಿ ಮಹತ್ವ ಇದ್ದಿರಲೇಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT