ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸದರ ನಿಧಿ: ಕೊನೆಗೊಳ್ಳದ ಸಮಸ್ಯೆ

Last Updated 25 ಅಕ್ಟೋಬರ್ 2018, 4:46 IST
ಅಕ್ಷರ ಗಾತ್ರ

ಕಾಲು ಶತಮಾನದ ಹಿಂದೆ ಆರಂಭವಾದ ‘ಸಂಸದರ ಪ್ರದೇಶ ಅಭಿವೃದ್ಧಿ ನಿಧಿ ಯೋಜನೆ’ಯು ವರ್ಷಗಳಿಂದಲೂ ವಿವಾದಗಳಿಗೆ ತುತ್ತಾಗಿಕೊಂಡೇ ಬಂದಿದೆ. ಇದಕ್ಕೆ ಕಾರಣ ಈ ಯೋಜನೆಯ ವಿಚಾರವಾಗಿ ಸಂಸದರ ಮೇಲಿರುವ ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಮತ್ತು ನಿಯಮಗಳನ್ನು ಉಲ್ಲಂಘಿಸಿದ ಆರೋಪಗಳು. ಆದರೆ, ಈ ವೇಳೆಗೆ ಅನುಷ್ಠಾನಕ್ಕೆ ಬಂದಿರಬೇಕಿತ್ತು ಎನ್ನಲಾದ ಯೋಜನೆಗಳಿಗೆ ಸಂಬಂಧಿಸಿದ ಮಾಹಿತಿ ಇಲ್ಲದಿರುವುದರ ಬಗ್ಗೆ ಕೇಂದ್ರ ಮಾಹಿತಿ ಆಯೋಗ ನೀಡಿರುವ ಒಂದೆರಡು ಆದೇಶಗಳು ಈಗಾಗಲೇ ಇರುವ ವಿವಾದಗಳಿಗೆ ಹೊಸದೊಂದು ಅಂಶವನ್ನು– ಅಂದರೆ, ಪಾರದರ್ಶಕತೆಯ ಕೊರತೆ- ಸೇರಿಸಿದೆ.

ಸಂಸದರ ನಿಧಿ ಯೋಜನೆಯು ತಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲು ಸಂಸದರಿಗೆ ಪ್ರತಿವರ್ಷ ₹ 5 ಕೋಟಿಯನ್ನು ನೀಡುತ್ತದೆ. ಇದಕ್ಕೆ ಸಂಬಂಧಿಸಿದ ನಿಯಮಗಳನ್ನು ಸಂಸತ್ತು ರೂಪಿಸಿದೆ. ಆದರೆ ಹಲವು ಸಂಸದರು ನಿಯಮಗಳನ್ನು ಉಲ್ಲಂಘಿಸಿದ ಕಾರಣ, ಈ ಯೋಜನೆ ಆರಂಭದಿಂದಲೂ ವಿವಾದಗಳಿಗೆ ತುತ್ತಾಗಿದೆ. ಹೀಗಿದ್ದರೂ, ಈ ಯೋಜನೆಯ ವಿಚಾರದಲ್ಲಿ ಬದ್ಧವಾಗಿರಬೇಕಾದ ಕಾರಣ ಸರ್ಕಾರವು ಪ್ರತಿವರ್ಷ ಇದಕ್ಕಾಗಿ ಅಂದಾಜು ₹ 4,000 ಕೋಟಿಯನ್ನು ಮೀಸಲಿಡಬೇಕಾಗಿದೆ. ಈ ಮೊತ್ತವನ್ನು ಜಿಲ್ಲಾಧಿಕಾರಿಗಳಿಗೆ ಕಳುಹಿಸಲಾಗುತ್ತದೆ. ಸಂಸದರು ತಮ್ಮ ಕ್ಷೇತ್ರದಲ್ಲಿ ಗುರುತಿಸಿರುವ ಯೋಜನೆಗಳಿಗೆ ಈ ಹಣ ವಿನಿಯೋಗ ಆಗುವಂತೆ ಜಿಲ್ಲಾಧಿಕಾರಿಗಳು ನೋಡಿಕೊಳ್ಳಬೇಕಾಗುತ್ತದೆ.

ಈ ಯೋಜನೆಯ ಅನುಷ್ಠಾನದಲ್ಲಿ ಉತ್ತರದಾಯಿತ್ವ ಹಾಗೂ ಪಾರದರ್ಶಕತೆ ಇಲ್ಲದಿರುವುದು ಸಂವಿಧಾನ ಪುನರ್‌ ಪರಿಶೀಲನಾ ಆಯೋಗ, ಎರಡನೆಯ ಆಡಳಿತ ಸುಧಾರಣಾ ಆಯೋಗ ಮತ್ತು ಮಹಾಲೇಖಪಾಲರಿಂದ (ಸಿಎಜಿ) ಟೀಕೆಗೆ ಗುರಿಯಾಗಿದೆ. ಈಗ ಕೇಂದ್ರ ಮಾಹಿತಿ ಆಯೋಗ ಕೂಡ ಕೆಲವು ಕಟು ಮಾತುಗಳನ್ನು ಹೇಳಿದೆ. ಆದರೆ, ಈ ಯೋಜನೆಯ ಬಗ್ಗೆ ಹಲವು ಕಡೆಗಳಿಂದ ಕಟುವಾದ ದೋಷಾರೋಪಗಳು ಕೇಳಿಬಂದಿದ್ದರೂ, ಹಣ ದುರ್ಬಳಕೆ ತಡೆಯಲು ಹಾಗೂ ದೋಷಗಳನ್ನು ನಿವಾರಿಸಲು ಸಂಸತ್ತು ಕಣ್ಣಿಗೆ ಕಾಣುವಂತಹ ಯತ್ನಗಳನ್ನು ನಡೆಸಿಲ್ಲ. ಈ ಯೋಜನೆಯನ್ನು ರದ್ದುಪಡಿಸಬೇಕು ಎಂದು ಯಾರಾದರೂ ಸಲಹೆ ನೀಡಿದರೆ, ಸಂಸದರಿಂದ ಕಡು ವಿರೋಧ ವ್ಯಕ್ತವಾಗುವುದು ಖಚಿತ.

ವಿಷ್ಣುದೇವ್ ಮತ್ತು ರಾಮ್‌ ಗೋಪಾಲ್ ದೀಕ್ಷಿತ್ ಪ್ರಕರಣಗಳಲ್ಲಿ ಕೇಂದ್ರ ಮಾಹಿತಿ ಆಯುಕ್ತ ಪ್ರೊ. ಎಂ. ಶ್ರೀಧರ್ ಆಚಾರ್ಯುಲು ಅವರು ಈಚೆಗೆ ನೀಡಿದ ಆದೇಶಗಳಲ್ಲಿ ಈ ವಿಷಯವನ್ನು ವಿಸ್ತೃತವಾಗಿ ಚರ್ಚಿಸಿದ್ದಾರೆ.

ಈ ಯೋಜನೆಗೆ ಸಂಬಂಧಿಸಿದಂತೆ ರೂಪಿಸಲಾಗಿರುವ ಪ್ರಕ್ರಿಯೆಯನ್ನು ಉಲ್ಲೇಖಿಸಿ ಮಾಹಿತಿ ಆಯುಕ್ತರು, ‘ಸರ್ಕಾರದಲ್ಲಿ ಸಾಮಾನ್ಯವಾಗಿ ನಡೆಯುವುದು ಇದಕ್ಕೆ ವ್ಯತಿರಿಕ್ತವಾಗಿರುವಂಥದ್ದು’ ಎಂದು ಹೇಳಿದ್ದಾರೆ. ಬೇರೆಲ್ಲ ಯೋಜನೆಗಳಲ್ಲಿ ಕೆಲಸದ ಬಗ್ಗೆ ಮೊದಲು ಪ್ರಸ್ತಾವ ಸಲ್ಲಿಸಬೇಕು, ಆ ಕೆಲಸ ಎಷ್ಟರಮಟ್ಟಿಗೆ ಕಾರ್ಯಸಾಧು ಎಂಬುದನ್ನು ಪರಿಶೀಲಿಸಬೇಕು, ಅದಾದ ನಂತರ ಅನುದಾನ ನಿಗದಿ ಮಾಡಿ, ಮೊತ್ತವನ್ನು ಬಿಡುಗಡೆ ಮಾಡಬೇಕು. ಆದರೆ ಸಂಸದರ ಕ್ಷೇತ್ರಾಭಿವೃದ್ಧಿ ನಿಧಿ ಯೋಜನೆಯ ವಿಚಾರದಲ್ಲಿ ಆಗುವುದೇ ಬೇರೆ. ಇಲ್ಲಿ, ಮೊದಲು ಹಣ ಮೀಸಲಿಡಲಾಗುತ್ತದೆ, ನಂತರ ಕಾಮಗಾರಿಗಳ ಬಗ್ಗೆ ಶಿಫಾರಸು ಮಾಡಲಾಗುತ್ತದೆ. ಇದಾದ ನಂತರ, ಕಾಮಗಾರಿ ಸೂಕ್ತ ಅನಿಸಿದರೆ ಜಿಲ್ಲಾಡಳಿತ ಅದನ್ನು ಅನುಷ್ಠಾನಕ್ಕೆ ತರಬೇಕಾಗುತ್ತದೆ. ಹೀಗಾಗಿ, ಈ ನಿಧಿಯನ್ನು ಇನ್ನಷ್ಟು ಚೆನ್ನಾಗಿ ನಿರ್ವಹಿಸಬೇಕಾದ ಅಗತ್ಯತೆ ಹೆಚ್ಚಿದೆ.

ಕಟ್ಟುನಿಟ್ಟಿನ ಹಣಕಾಸಿನ ಶಿಸ್ತನ್ನು ಜಾರಿಗೆ ತರುವ ವಿಚಾರದಲ್ಲಿ ಸಂಸತ್ತು ಹೆಸರುವಾಸಿ ಎಂದು ಆಯೋಗ ಹೇಳಿದೆ. ಪೂರ್ವಾನುಮತಿ ಇಲ್ಲದೆ ಒಂದು ರೂಪಾಯಿಯನ್ನೂ ಖರ್ಚು ಮಾಡುವಂತೆ ಇಲ್ಲ. ಆದರೆ, 1993ರಲ್ಲಿ ಆರಂಭವಾದ ಕ್ಷೇತ್ರಾಭಿವೃದ್ಧಿ ನಿಧಿ ಯೋಜನೆಯು ಬೇರೆಯದೇ ರೀತಿಯಲ್ಲಿ ಕೆಲಸ ಮಾಡುತ್ತದೆ. ಯುಕ್ತಾಯುಕ್ತತೆಯ ಅಧ್ಯಯನ ನಡೆಸದೆಯೇ ಯೋಜನೆಗಳ ಶಿಫಾರಸು ಆಗುತ್ತದೆ. ಸಂಪೂರ್ಣವಾಗಿ ವಿವೇಚನಾಧಿಕಾರವನ್ನು ಅವಲಂಬಿಸಿರುವ ಬೃಹತ್ ಯೋಜನೆ ಇದು, ‘ಹಾಗೆಯೇ, ಬೃಹತ್ ಪ್ರಮಾಣದ ಭ್ರಷ್ಟಾಚಾರಕ್ಕೆ ತುತ್ತಾಗುವ ಅಪಾಯವೂ ಇರುವಂಥದ್ದು’.

ಈ ಯೋಜನೆಯು ಅನುಷ್ಠಾನ ಆಗುತ್ತಿರುವ ಬಗೆಯ ಬಗ್ಗೆ ಆಯೋಗ ಕಳವಳ ವ್ಯಕ್ತಪಡಿಸಿದೆ. ಇಷ್ಟು ದೊಡ್ಡ ಮೊತ್ತದ ಅನುದಾನ ಸಿಗುವ, ಪಾರದರ್ಶಕ ಅಲ್ಲದ, ‘ವ್ಯಕ್ತಿಯ ವಿವೇಚನಾಧಿಕಾರದ ಮೇಲೆ ಸಂಪೂರ್ಣವಾಗಿ ಅವಲಂಬಿತ ಆಗಿರುವ, ಪ್ರಶ್ನಾರ್ಹವಾದ ವಿಶೇಷ ಹಕ್ಕುಗಳನ್ನು ಮತ್ತು ರಕ್ಷಣೆಯನ್ನು ಹೊಂದಿರುವ’ ಯೋಜನೆಯಲ್ಲಿ ಭ್ರಷ್ಟಾಚಾರ ಆಗದಂತೆ ತಡೆಯುವುದು ಕಷ್ಟದ ಕೆಲಸ ಎಂದು ಆಯೋಗ ಹೇಳಿದೆ.

ವಿಷ್ಣುದೇವ್ ಭಂಡಾರಿ ಪ್ರಕರಣದಲ್ಲಿ ಪ್ರೊ. ಶ್ರೀಧರ್ ಆಚಾರ್ಯುಲು ಅವರು, ‘ಸಂಸದರ ಕ್ಷೇತ್ರಾಭಿವೃದ್ಧಿ ನಿಧಿಗೆ ಅಗತ್ಯವಿರುವ ಕಾನೂನಿನ ಚೌಕಟ್ಟನ್ನು ಲೋಕಸಭೆಯ ಸ್ಪೀಕರ್ ಮತ್ತು ರಾಜ್ಯಸಭೆಯ ಸಭಾಪತಿ ನೀಡಬೇಕು’ ಎಂದು ಶಿಫಾರಸು ಮಾಡಿದ್ದಾರೆ. ಸಂಸದರನ್ನು ‘ನಿರ್ದಿಷ್ಟ ಕರ್ತವ್ಯಗಳು ಹಾಗೂ ಕಡ್ಡಾಯ ಪಾರದರ್ಶಕತೆಯ ನಿಯಮಗಳಿಗೆ’ ಒಳಪಡಿಸಬೇಕು ಎಂದು ಕೂಡ ಸಲಹೆ ಮಾಡಿದ್ದಾರೆ. ಕರ್ತವ್ಯದಲ್ಲಿ ಲೋಪ ಎಸಗಿದರೆ, ನಿಯಮಗಳನ್ನು ಉಲ್ಲಂಘಿಸಿದರೆ ಅದಕ್ಕೆ ಸಂಸದರು ಹೊಣೆಯಾಗಬೇಕು ಎಂಬ ಸಲಹೆ ಕೂಡ ಇದೆ. ಸಂಸದರ ಖಾಸಗಿ ಕೆಲಸಗಳಿಗೆ ಕ್ಷೇತ್ರಾಭಿವೃದ್ಧಿ ನಿಧಿಯ ಹಣವನ್ನು ವೆಚ್ಚ ಮಾಡುವುದನ್ನು ನಿರ್ಬಂಧಿಸಬೇಕು, ಅನರ್ಹ ಏಜೆನ್ಸಿಗಳಿಗೆ ಹಣ ನೀಡುವಂತೆ ಶಿಫಾರಸು ಮಾಡಬಾರದು, ಹಣವನ್ನು ಖಾಸಗಿ ಟ್ರಸ್ಟ್‌ಗಳಿಗೆ ವರ್ಗಾವಣೆ ಮಾಡಬಾರದು, ಸಂಸದರು ಅಥವಾ ಅವರ ಸಂಬಂಧಿಕರಿಗೆ ಲಾಭ ಆಗುವ ರೀತಿಯ ಕೆಲಸಗಳನ್ನು ಶಿಫಾರಸು ಮಾಡಬಾರದು ಮತ್ತು ಯಾವುದೇ ನಿಯಮವನ್ನು ಮೀರಬಾರದು. ಕ್ಷೇತ್ರಾಭಿವೃದ್ಧಿ ನಿಧಿ ಬಳಸಿ ಸೃಷ್ಟಿಸಲಾದ ಸಾರ್ವಜನಿಕ ಆಸ್ತಿಯು ಮುಂದೊಂದು ದಿನ ಎಲ್ಲಿದೆ ಎಂಬುದೇ ಪತ್ತೆಯಾಗದಾದಾಗ ಉಂಟಾಗುವ ಸಮಸ್ಯೆಯನ್ನು ನಿಭಾಯಿಸುವುದು ಹೇಗೆ ಎಂಬುದೂ ಕಾನೂನಿನ ಚೌಕಟ್ಟಿನಲ್ಲಿ ಬರಬೇಕು.

ಕ್ಷೇತ್ರಾಭಿವೃದ್ಧಿ ನಿಧಿಯ ಬಳಕೆಗೆ ಸಂಬಂಧಿಸಿದಂತೆ ಯಾವುದೇ ಕಾನೂನು ಇಲ್ಲದಿರುವ ಕಾರಣ ಇದು ಅನಿವಾರ್ಯವಾಗಿದೆ. ಕೆಲವು ನಿಯಮಗಳು ಇವೆ. ಆದರೆ ಈ ನಿಯಮಗಳನ್ನು ಸಾಮಾನ್ಯವಾಗಿ ಉಲ್ಲಂಘಿಸುವುದೇ ಜಾಸ್ತಿ. ಕ್ಷೇತ್ರಾಭಿವೃದ್ಧಿ ನಿಧಿಯನ್ನು ದುರ್ಬಳಕೆ ಮಾಡಿಕೊಂಡಿದ್ದಕ್ಕೆ ಸಂಸದರಿಗೆ ಶಿಕ್ಷೆಯೇನೂ ಆಗುವುದಿಲ್ಲ.

ಸಂಸದರು ನಿಧಿಯನ್ನು ಬಳಕೆ ಮಾಡಿಕೊಳ್ಳದಿರುವುದರ ಬಗ್ಗೆಯೂ ಆಯೋಗ ಮಾತನಾಡಿದೆ. 16ನೆಯ ಲೋಕಸಭೆ ಅಸ್ತಿತ್ವಕ್ಕೆ ಬಂದಿದ್ದು 2014ರ ಮೇ ತಿಂಗಳಲ್ಲಿ. ಮೊದಲ ವರ್ಷದಲ್ಲಿ, ಅಂದರೆ 2015ರ ಮೇ ತಿಂಗಳವರೆಗೆ ಸರ್ಕಾರ ಒಟ್ಟು ₹ 1,757 ಕೋಟಿಯನ್ನು ಬಿಡುಗಡೆ ಮಾಡಿತು ಎಂದು ವರದಿಯಾಗಿದೆ. ಬಿಡುಗಡೆಯಾದ ಮೊತ್ತದಲ್ಲಿ ಖರ್ಚಾಗಿದ್ದು ₹ 281 ಕೋಟಿ ಅಂದರೆ ಒಟ್ಟು ಮೊತ್ತದ ಶೇಕಡ 16ರಷ್ಟು ಮಾತ್ರ.

ಈ ಮೊದಲೇ ಹೇಳಿದಂತೆ, ಕ್ಷೇತ್ರಾಭಿವೃದ್ಧಿ ನಿಧಿಯು ಈ ಹಿಂದೆ ಕೂಡ ಟೀಕೆಗೆ ಗುರಿಯಾಗಿದೆ. ಈ ಯೋಜನೆಗೆ ಸಾಂವಿಧಾನಿಕ ಮಾನ್ಯತೆ ಇದೆ ಎಂದು ಸುಪ್ರೀಂ ಕೋರ್ಟ್‌ ಹೇಳಿದ್ದರೂ, ಕಾರ್ಯಾಂಗ ಮತ್ತು ಶಾಸಕಾಂಗದ ನಡುವಣ ಕಾರ್ಯವ್ಯಾಪ್ತಿ ಸ್ಪಷ್ಟವಾಗಿರಬೇಕು ಎಂಬ ತತ್ವಕ್ಕೆ ಈ ಯೋಜನೆ ಬದ್ಧವಾಗಿಲ್ಲ ಎನ್ನುವ ಕಾರಣಕ್ಕೆ ಇದನ್ನು ಸ್ಥಗಿತಗೊಳಿಸಬೇಕು ಎಂಬ ಅಭಿಪ್ರಾಯವನ್ನು ಸಂವಿಧಾನ ಪುನರ್‌ ಪರಿಶೀಲನಾ ಆಯೋಗ ವ್ಯಕ್ತಪಡಿಸಿತ್ತು. ಸ್ಥಳೀಯ ಆಡಳಿತ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸಂಸದರು ಪ್ರವೇಶ ಮಾಡಬಾರದು ಎಂದು ಕೂಡ ಆಯೋಗ ಅಭಿಪ್ರಾಯಪಟ್ಟಿತ್ತು.

ವಿವಿಧ ಅಂಗಗಳ ಅಧಿಕಾರ ವ್ಯಾಪ್ತಿ ನಡುವೆ ಸ್ಪಷ್ಟ ಗಡಿರೇಖೆ ಇರಬೇಕು ಎಂಬ ನಿಯಮಕ್ಕೆ ಈ ಯೋಜನೆ ವಿರುದ್ಧವಾಗಿದೆ ಎಂಬ ಕಾರಣಕ್ಕೆ ಯೋಜನೆಯನ್ನೇ ನಿಲ್ಲಿಸಬೇಕು ಎನ್ನುವ ಮಾತನ್ನು ಎರಡನೆಯ ಆಡಳಿತ ಸುಧಾರಣಾ ಆಯೋಗ ಆಡಿತ್ತು. ಕಾರ್ಯಗತ ಆಗಬೇಕಿರುವ ಯೋಜನೆಗಳು ಯಾವುವು ಎಂಬುದನ್ನು ಸಂಸದರು ಆಯ್ಕೆ ಮಾಡುವುದು ಕಾರ್ಯಾಂಗದ ಅಧಿಕಾರ ವ್ಯಾಪ್ತಿಯಲ್ಲಿ ಹಸ್ತಕ್ಷೇಪ ನಡೆಸಿದಂತೆ ಎಂದು ಅದು ಹೇಳಿತ್ತು.

ಈ ಯೋಜನೆಯ ಬಗ್ಗೆ ವಿಸ್ತೃತ ವಿಶ್ಲೇಷಣೆ ನಡೆಸಿದ ಸಂದರ್ಭದಲ್ಲಿ ಸಿಎಜಿ ಕೂಡ ಯೋಜನೆಯ ಬಗ್ಗೆ ಟೀಕೆ ಮಾಡಿದೆ, ಇದರ ನ್ಯೂನತೆಗಳನ್ನು ಪಟ್ಟಿ ಮಾಡಿದೆ. ಸಾರ್ವಜನಿಕರ ಹಣ ಪೋಲಾಗುವುದು, ಸೂಕ್ತವಲ್ಲದ ಕಾರ್ಯಗಳನ್ನು ಅನುಷ್ಠಾನಕ್ಕೆ ತರುವುದು ಮತ್ತು ಇತರ ಹಲವು ಸಮಸ್ಯೆಗಳನ್ನು ಪಟ್ಟಿ ಮಾಡಿದೆ. ಹಾಗಾಗಿ, ಈ ಯೋಜನೆಯ ಅಗತ್ಯದ ಬಗ್ಗೆ, ಸ್ವರೂಪದ ಬಗ್ಗೆ, ಹಣದ ವರ್ಗಾವಣೆ ಬಗ್ಗೆ ಸರ್ಕಾರ ಪುನರ್‌ ಪರಿಶೀಲನೆ ನಡೆಸಬೇಕು ಎಂದು ಸಿಎಜಿ ಹೇಳಿದೆ.

ಈಗ ಈ ಯೋಜನೆಯ ಬಗ್ಗೆ ತೀರ್ಮಾನ ತೆಗೆದುಕೊಳ್ಳಬೇಕಿರುವುದು ಸಂಸತ್ತಿನ ಉಭಯ ಸದನಗಳ ಮುಖ್ಯಸ್ಥರು. ಸಂಸದರನ್ನು ಒಳಗೊಂಡಿರುವ ಯೋಜನೆಯೊಂದು ಪಾರದರ್ಶಕ ಆಗದಿರಲು ಹೇಗೆ ಸಾಧ್ಯ? ಕೇಂದ್ರ ಮಾಹಿತಿ ಆಯೋಗದ ಮಾತುಗಳನ್ನು ಗಮನದಲ್ಲಿ ಇರಿಸಿಕೊಳ್ಳಬೇಕು.

(ಲೇಖಕ ಪ್ರಸಾರ ಭಾರತಿ ಅಧ್ಯಕ್ಷ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT