ಗುರುವಾರ , ಮೇ 13, 2021
17 °C
ಆಸ್ಟ್ರೇಲಿಯಾದ ಡಿಜಿಟಲ್ ಕಂಪನಿಗಳು ಒಟ್ಟಾಗಿ ತೆಗೆದುಕೊಂಡ ನಿರ್ಧಾರ ಅನುಕರಣೀಯ

ಸೂರ್ಯ-ನಮಸ್ಕಾರ: ಆನ್‌ಲೈನ್‌; ನಿಯಂತ್ರಣಕ್ಕೆ ಮೊದಲ ಹೆಜ್ಜೆ

ಎ.ಸೂರ್ಯ ಪ್ರಕಾಶ್ Updated:

ಅಕ್ಷರ ಗಾತ್ರ : | |

Prajavani

ಆನ್‌ಲೈನ್‌ನಲ್ಲಿ ಪ್ರಕಟವಾಗುವ, ಪ್ರಸಾರವಾಗುವ ವಸ್ತು–ವಿಷಯಗಳನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಈಚೆಗೆ ರೂಪಿಸಿದ ಹೊಸ ನಿಯಮಗಳಿಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮಾಧ್ಯಮವು ಆನ್‌ಲೈನ್‌ ಆಗಿರಲಿ, ಮುಖ್ಯವಾಹಿನಿಯದ್ದೇ ಆಗಿರಲಿ ಅದು ಈ ದೇಶದ ಕಾನೂನಿಗೆ ಅನುಗುಣವಾಗಿ ನಡೆಯಬೇಕು ಎಂಬ ವಿಚಾರದಲ್ಲಿ ತಕರಾರು ಇಲ್ಲ.

ಸಂವಿಧಾನದ ಆತ್ಮದಂತೆ ಇರುವ ಮೌಲ್ಯಗಳು, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಿಸುವುದು ಹಾಗೂ ಜುಗುಪ್ಸೆ ಮೂಡಿಸುವಂತಹ ವಸ್ತು–ವಿಷಯಗಳು ಆನ್‌ಲೈನ್‌ನಲ್ಲಿ ಪ್ರಸಾರವಾಗುವುದನ್ನು ತಡೆಯುವ ಸಮತೋಲನದ ಕೆಲಸವನ್ನು ಸರ್ಕಾರ ಮಾಡಿರುವಂತೆ ಮೇಲ್ನೋಟಕ್ಕೆ ಕಾಣಿಸುತ್ತಿದೆ. ಮುದ್ರಣ ಮಾಧ್ಯಮಕ್ಕೆ ಸಂಬಂಧಿಸಿದ ಕಾನೂನುಗಳ ಪ್ರಕಾರ, ಪ್ರತೀ ಪತ್ರಿಕೆ ಅಥವಾ ಪ್ರಕಾಶನ ಸಂಸ್ಥೆಯು ಮುದ್ರಕ, ಪ್ರಕಾಶಕ, ಸಂಪಾದಕನ ಹೆಸರು ಮತ್ತು ನೋಂದಾಯಿತ ಕಚೇರಿಯ ವಿಳಾಸವನ್ನು ಪ್ರಕಟಿಸಬೇಕು. ಪತ್ರಿಕೆಯಲ್ಲಿ ಪ್ರಕಟವಾಗುವ ವಿಷಯಗಳಿಗೆ ಹೊಣೆಗಾರರು ಯಾರು ಎಂಬುದು ಸಾರ್ವಜನಿಕರಿಗೆ ಗೊತ್ತಾಗಲಿ ಎಂಬುದು ಇದರ ಉದ್ದೇಶ.

ಪತ್ರಿಕೆ ಮತ್ತು ಪುಸ್ತಕಗಳ ನೋಂದಣಿ ಕಾಯ್ದೆಯು ಜಾರಿಗೆ ಬಂದಿದ್ದು 1867ರಲ್ಲಿ. ಇದು ನಂತರದಲ್ಲಿ ಹಲವು ತಿದ್ದುಪಡಿಗಳನ್ನು ಕಂಡಿದೆ. ಅಲ್ಲದೆ, ಮುದ್ರಣ ಮಾಧ್ಯಮವನ್ನು ಕಾನೂನುಬದ್ಧವಾಗಿ ನಿಯಂತ್ರಿಸಲು ಸ್ವತಂತ್ರ ಸಂಸ್ಥೆಯೊಂದನ್ನು ರೂಪಿಸುವುದಕ್ಕಾಗಿ ಸಂಸತ್ತು ಪತ್ರಿಕಾ ಮಂಡಳಿ ಕಾಯ್ದೆಯನ್ನು ರೂಪಿಸಿದೆ. ಈ ಮಂಡಳಿ ಯಲ್ಲಿ ಪತ್ರಿಕಾ ಮಾಧ್ಯಮದ ಪ್ರತಿನಿಧಿಗಳೂ ಇರುತ್ತಾರೆ. ಟಿ.ವಿ. ಯುಗ ಶುರುವಾದ ನಂತರ, ಈ ಮಾಧ್ಯಮವನ್ನು ಕೂಡ ಕಾನೂನುಬದ್ಧ ನಿಯಂತ್ರಣಕ್ಕೆ ಒಳಪಡಿಸಲು ಸಂಸತ್ತು ‘ಕೇಬಲ್ ಟೆಲಿವಿಷನ್ ಜಾಲಗಳು (ನಿಯಂತ್ರಣ) ಕಾಯ್ದೆ – 1995’ ಅನ್ನು ರೂಪಿಸಿ, ಜಾರಿಗೆ ತಂದಿದೆ.

ಈ ಕಾಯ್ದೆಗಳು ಮುದ್ರಣ ಹಾಗೂ ಟಿ.ವಿ. ಮಾಧ್ಯಮ ಗಳನ್ನು ಕಾನೂನಿನ ನಿಯಂತ್ರಣಕ್ಕೆ ತಂದವು. ಆದರೆ, ಆನ್‌ಲೈನ್‌ ಮಾಧ್ಯಮಗಳು ಪ್ರವರ್ಧಮಾನಕ್ಕೆ ಬಂದ ನಂತರ ಹಲವು ಸಮಸ್ಯೆಗಳು ಸೃಷ್ಟಿಯಾದವು. ಕೆಲವು ವೆಬ್‌ಸೈಟ್‌ಗಳು ಸುದ್ದಿ ಹಾಗೂ ಪ್ರಚಲಿತ ವಿದ್ಯಮಾನಗಳಿಗೆ ಸಂಬಂಧಿಸಿದ ವರದಿ ಪ್ರಸಾರಕ್ಕಾಗಿಯೇ ಶುರುವಾಗಿದ್ದವು. ಇನ್ನು ಕೆಲವು ಮನರಂಜನೆಯ ಅಥವಾ ಕ್ರೀಡಾ ಕಾರ್ಯಕ್ರಮ ಬಿತ್ತರಿಸುತ್ತ, ಜೊತೆಯಲ್ಲೇ ಸುದ್ದಿಯನ್ನೂ ಪ್ರಸಾರ ಮಾಡುತ್ತಿವೆ. ಇವು ಸುದ್ದಿಯನ್ನು ಪಠ್ಯ ರೂಪ ದಲ್ಲಿಯೂ ದೃಶ್ಯ ರೂಪದಲ್ಲಿಯೂ ಕೊಡುತ್ತಿವೆ. ಆದರೆ, ಮುದ್ರಣ ಮತ್ತು ಟಿ.ವಿ. ಮಾಧ್ಯಮಗಳಿಗೆ ಅನ್ವಯವಾಗುವ ಕಟ್ಟುನಿಟ್ಟಿನ ನಿಯಮಗಳು ಆನ್‌ಲೈನ್‌ ಮಾಧ್ಯಮಗಳಿಗೆ ಅನ್ವಯವಾಗದು. ಈ ಮಾಧ್ಯಮಗಳು ಕೆಲಸ ಮಾಡುತ್ತಿರು ವುದು ಎಲ್ಲಿಂದ, ಅವರ ನೋಂದಾಯಿತ ಕಚೇರಿ ಎಲ್ಲಿದೆ, ಈ ಮಾಧ್ಯಮಗಳಲ್ಲಿ ಪ್ರಸಾರ ಆಗುವ ವಸ್ತು–ವಿಷಯಗಳಿಗೆ ಹೊಣೆ ಯಾರು ಎಂಬುದು ಯಾರಿಗೂ ಗೊತ್ತಿರಲಿಲ್ಲ.

ಆದರೆ, ಹೊಸ ನೀತಿಯು ಈ ಸಮಸ್ಯೆಯನ್ನು ಪರಿಹರಿಸಲು ಯತ್ನಿಸಿದೆ. ಆನ್‌ಲೈನ್‌, ಮುದ್ರಣ ಮಾಧ್ಯಮ, ಟಿ.ವಿ. ಮಾಧ್ಯಮಗಳ ನಡುವೆ ಸಮಾನ ಅವಕಾಶಗಳನ್ನು ಸೃಷ್ಟಿಸುವ ಯತ್ನ ಮಾಡಿದೆ. ಪತ್ರಿಕಾ ಮಂಡಳಿ ಕಾಯ್ದೆ ಹಾಗೂ ಕೇಬಲ್ ಟಿ.ವಿ. ಜಾಲಗಳ (ನಿಯಂತ್ರಣ) ನಿಯಮಗಳ ಮೂಲಕ ರೂಪಿಸಿದ, ಪತ್ರಕರ್ತರ ವೃತ್ತಿಪರತೆಗೆ ಸಂಬಂಧಿಸಿದ ಸಂಹಿತೆಗಳ ವ್ಯಾಪ್ತಿಗೆ ಆನ್‌ಲೈನ್‌ ಸುದ್ದಿ ಪೋರ್ಟಲ್‌ಗಳನ್ನೂ ತರಲು ಇದು ಯತ್ನಿಸಿದೆ. ಆನ್‌ಲೈನ್‌ನ ಕೆಲವು ವೇದಿಕೆಗಳಲ್ಲಿ ಕಾಣಿಸುತ್ತಿದ್ದ ಬೇಜವಾಬ್ದಾರಿಯ ವರ್ತನೆಗಳನ್ನು ಗಮನಿಸಿ ದರೆ, ಈ ರೀತಿ ಹಿಂದೆಯೇ ಮಾಡಬೇಕಿತ್ತು ಎಂದು ಅನಿಸುತ್ತದೆ.

ಸಿನಿಮಾ ಉದ್ಯಮಕ್ಕೆ ಸಂಬಂಧಿಸಿದಂತೆ, ಮೇಲ್ವಿ ಚಾರಣೆ ನಡೆಸಿ ಪ್ರಮಾಣಪತ್ರ ನೀಡುವ ಸಂಸ್ಥೆಯೊಂದು ಇದೆ. ಆದರೆ ಒಟಿಟಿ ವೇದಿಕೆಗಳಿಗೆ ಇಂತಹ ವ್ಯವಸ್ಥೆ ಇಲ್ಲ. ಒಟಿಟಿ ವೇದಿಕೆಗಳಲ್ಲಿ ಕಲಾತ್ಮಕ ಸ್ವಾತಂತ್ರ್ಯ ಇರಬೇಕು ಎಂಬ ಕಾರಣದಿಂದಾಗಿ ಕೇಂದ್ರವು, ಈ ವೇದಿಕೆಗಳಿಗೆ ಸ್ವಯಂ–ನಿಯಂತ್ರಣದ ಪ್ರಸ್ತಾವ ಇರಿಸಿದೆ. ಒಟಿಟಿ ವೇದಿಕೆಗಳು ಒಟ್ಟಾಗಿ ಕುಳಿತು, ತಮಗೆ ಅನ್ವಯವಾಗುವ ಸಂಹಿತೆಯೊಂದನ್ನು ರೂಪಿಸಿ, 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ವಯಸ್ಕರಿಗೆ ಮಾತ್ರ ಸೀಮಿತವಾಗಿರುವ ಕಾರ್ಯಕ್ರಮಗಳನ್ನು ವೀಕ್ಷಿಸದಂತೆ ಮಾಡಬೇಕು ಎಂದು ಹೇಳಿದೆ. ಅವರು ಈ ಕೆಲಸ ಮಾಡಬೇಕು.

ಆನ್‌ಲೈನ್‌ ಮಾಧ್ಯಮಗಳಿಗೆ ಸಂಬಂಧಿಸಿದ ದೂರು–ದುಮ್ಮಾನ ಹೇಳಿಕೊಳ್ಳುವ ವ್ಯವಸ್ಥೆಯು ಮೂರು ಹಂತಗಳನ್ನು ಒಳಗೊಂಡಿದೆ. ಪ್ರಕಾಶಕರು ಹಾಗೂ ಸ್ವಯಂ–ನಿಯಂತ್ರಣ ವಿಧಿಸುವ ವ್ಯವಸ್ಥೆ ಮೊದಲ ಎರಡು ಹಂತಗಳು. ಕೇಂದ್ರ ರೂಪಿಸುವ ಮೇಲ್ವಿಚಾರಣಾ ಸಮಿತಿಯು ಮೂರನೆಯ ಹಂತದ ವ್ಯವಸ್ಥೆ. ಪ್ರಕಾಶನ ಸಂಸ್ಥೆಗಳು ದೂರುಗಳನ್ನು ಇತ್ಯರ್ಥಪಡಿಸಲು ಪ್ರತ್ಯೇಕ ಅಧಿಕಾರಿಯನ್ನು ನೇಮಿಸಬೇಕು, ದೂರುಗಳು ಕಾಲಮಿತಿಯಲ್ಲಿ ಇತ್ಯರ್ಥ ಆಗಬೇಕು ಎಂದು ನೀತಿಯು ಹೇಳುತ್ತದೆ. ನಿವೃತ್ತ ನ್ಯಾಯಮೂರ್ತಿಯ ನೇತೃತ್ವದಲ್ಲಿ ಸ್ವಯಂ–ನಿಯಂತ್ರಣದ ವ್ಯವಸ್ಥೆಯೊಂದನ್ನು ಹೊಂದಲು ಅವಕಾಶವಿದೆ.

ನಿಯಮಗಳಲ್ಲಿನ ಕೆಲವು ಅಂಶಗಳ ಬಗ್ಗೆ ಆನ್‌ಲೈನ್‌ ವೇದಿಕೆಗಳು ಎಚ್ಚರಿಕೆಯ ಪ್ರತಿಕ್ರಿಯೆ ನೀಡಿವೆ. ಆದರೆ, ಇವನ್ನು ಭಾರತದ ಕಾನೂನು ಚೌಕಟ್ಟಿನೊಳಗೆ ಬಗೆಹರಿಸಿ ಕೊಂಡು ಮುನ್ನಡೆಯಬೇಕು. ಹಿಂಸೆಗೆ ಪ್ರಚೋದನೆ ನೀಡುವುದು, ವಿವಿಧ ಸಮುದಾಯಗಳ ನಡುವೆ ದ್ವೇಷ ಬಿತ್ತುವುದು, ಮಾನನಷ್ಟ ಇಂಥವುಗಳಿಗೆ ಸಂಬಂಧಿಸಿದಂತೆ ಭಾರತೀಯ ದಂಡ ಸಂಹಿತೆಯಲ್ಲಿ (ಐಪಿಸಿ) ಇರುವ ಕಾನೂನುಗಳ ಬಗ್ಗೆ ಮುಖ್ಯವಾಹಿನಿಯ ಮಾಧ್ಯಮಗಳು ಅರಿವು ಹೊಂದಿರುತ್ತವೆ. ಆದರೆ, ಇವು ತಮಗೆ ಸಂಬಂಧವೇ ಇಲ್ಲದಂತೆ ಆನ್‌ಲೈನ್ ವೇದಿಕೆಗಳು ವರ್ತಿಸುತ್ತವೆ. ಮಾಧ್ಯಮಗಳಲ್ಲಿನ ಅಥವಾ ಇತರ ಕ್ಷೇತ್ರಗಳಲ್ಲಿನ ವೃತ್ತಿಪರ ಮಹಿಳೆಯರ ಬಗ್ಗೆ ಸಾಮಾಜಿಕ
ಜಾಲತಾಣಗಳಲ್ಲಿ ಬರೆಯಲಾಗಿರುವ ಅಶ್ಲೀಲ ಮಾತುಗಳನ್ನು ಹಾಗೂ ಇಂತಹ ವರ್ತನೆಗಳನ್ನು ಹತ್ತಿಕ್ಕಲು ಆಗದ ನಮ್ಮ ಪ್ರಭುತ್ವದ ವರ್ತನೆಯನ್ನು ಗಮನಿಸಿದರೆ, ಐಪಿಸಿಯು ಸೈಬರ್ ಜಗತ್ತಿಗೆ ಅನ್ವಯ ಆಗುವುದಿಲ್ಲವೇನೋ ಎಂಬ ಅಭಿಪ್ರಾಯ ಮೂಡುತ್ತದೆ.

ಆಸ್ಟ್ರೇಲಿಯಾದ ಡಿಜಿಟಲ್ ಕಂಪನಿಗಳು ಒಟ್ಟಾಗಿ ತೆಗೆದುಕೊಂಡ ನಿರ್ಧಾರದಿಂದ ಭಾರತದ ಡಿಜಿಟಲ್ ಹಾಗೂ ಒಟಿಟಿ ಕಂಪನಿಗಳು ಪಾಠ ಕಲಿಯಬಹುದು. ಆಸ್ಟ್ರೇಲಿಯಾದ ಕಂಪನಿಗಳು ಒಟ್ಟಾಗಿ ಒಂದು ಸಂಹಿತೆ ಯನ್ನು ರೂಪಿಸಿ, ಸುಳ್ಳು ಸುದ್ದಿ ಹಾಗೂ ತಪ್ಪು ಮಾಹಿತಿಯ ಹರಿವನ್ನು ತಡೆಯಲು ಮುಂದಾಗಿವೆ. ಸುಳ್ಳು ಸುದ್ದಿ ಹರಡುವ ಖಾತೆಗಳನ್ನು ನಿಷ್ಕ್ರಿಯಗೊಳಿಸುವುದು ಹಾಗೂ ಅವುಗಳಲ್ಲಿ ಇರುವ ವಸ್ತು–ವಿಷಯಗಳನ್ನು ತೆಗೆದು ಹಾಕುವುದು ಅವರು ಕೈಗೊಳ್ಳುವುದಾಗಿ ಹೇಳಿರುವ ಕೆಲವು ಕ್ರಮಗಳು.

ಅಪಾಯಕಾರಿ ವಸ್ತು–ವಿಷಯಗಳಿಗೆ ಆನ್‌ಲೈನ್‌ ಕಂಪನಿಗಳನ್ನು ಹೊಣೆ ಮಾಡುವ, ಅಂತಹ ವಸ್ತು–ವಿಷಯಗಳನ್ನು ತೆಗೆಯಲು ಮುಂದಾಗದ ಕಂಪನಿಗಳಿಗೆ ಶಿಕ್ಷೆ ವಿಧಿಸಲು ಅವಕಾಶ ಕಲ್ಪಿಸುವ ಕಾನೂನನ್ನು ಜಾರಿಗೆ ತರಲು ಬ್ರಿಟನ್ನಿನ ಸರ್ಕಾರ ಮುಂದಾಗಿದೆ. ಇವೆಲ್ಲ, ಬೇರೆ ಬೇರೆ ಪ್ರಜಾತಂತ್ರ ವ್ಯವಸ್ಥೆಗಳು ಇಂತಹ ವಿಷಯಗಳನ್ನು ಹೇಗೆ ನಿಭಾಯಿಸುತ್ತಿವೆ ಎಂಬುದನ್ನು ಸ್ಥೂಲವಾಗಿ ಹೇಳುವಂತಿವೆ.

ಭಾರತದಲ್ಲಿ ಕಂಪನಿಗಳು ಯಾವ ಚೌಕಟ್ಟಿನಲ್ಲಿ ಕೆಲಸ ಮಾಡಬೇಕು ಎಂಬ ಬಗ್ಗೆ ಒಂದು ಮಾತು. ಈಚಿನ ದಿನಗಳಲ್ಲಿ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಟ್ವಿಟರ್ ತಾನೇ ವ್ಯಾಖ್ಯಾನಿಸಲು ಯತ್ನಿಸಿದೆ, ಭಾರತೀಯರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ತಾನು ರಕ್ಷಿಸಲು ಯತ್ನಿಸುವುದಾಗಿಯೂ ಹೇಳಿದೆ. ‘ಅಭಿವ್ಯಕ್ತಿ ಸ್ವಾತಂತ್ರ್ಯ’ವು ನಮ್ಮ ಸಂವಿಧಾನದಲ್ಲಿನ ಮೂಲಭೂತ ಹಕ್ಕುಗಳಿಗೆ ಸಂಬಂಧಿ ಸಿದ ಅಧ್ಯಾಯದಲ್ಲಿ ಸೇರಿದೆ. ಅದರ ಸುತ್ತ ಸಕಾರಣಗಳ ನಿರ್ಬಂಧದ ವಿವರಣೆಗಳೂ ಇವೆ. ಭಾರತವು ಅತ್ಯಂತ ಚಲನಶೀಲ ಪ್ರಜಾತಂತ್ರ ಆಗಿರುವುದರಿಂದ, ಜಗತ್ತಿನ ಅತ್ಯಂತ ವೈವಿಧ್ಯಮಯ ಸಮಾಜವೂ ಆಗಿರುವುದರಿಂದ ಇವೆಲ್ಲ ಸಾಧ್ಯವಾಗಿವೆ. ಭಾರತದ ಸಂವಿಧಾನ ನಿರ್ಮಾತೃಗಳು ಅಪಾರ ದೂರದೃಷ್ಟಿಯಿಂದ ಅಭಿವ್ಯಕ್ತಿ ಸ್ವಾತಂತ್ರ್ಯದ ಸುತ್ತ ಕೆಲವು ನಿರ್ಬಂಧಗಳನ್ನು ಕಟ್ಟಿದ್ದಾರೆ– ಸಾಂವಿಧಾನಿಕ ಹಕ್ಕುಗಳು ಆಂತರಿಕ ಶಾಂತಿಯನ್ನೂ ಸೌಹಾರ್ದವನ್ನೂ ಹರಡಲಿ ಎಂಬ ಉದ್ದೇಶದಿಂದ. ಈ ಸ್ವಾತಂತ್ರ್ಯಗಳು ಏನು, ನಿರ್ಬಂಧಗಳು ಏನು ಎಂಬುದನ್ನು ನಮ್ಮ ಸುಪ್ರೀಂ ಕೋರ್ಟ್‌ ಅಸಂಖ್ಯ ಪ್ರಕರಣಗಳಲ್ಲಿ ವ್ಯಾಖ್ಯಾನಿಸಿದೆ. ಸುಪ್ರೀಂ ಕೋರ್ಟ್‌ ಹೇಳಿದ್ದು ಈ ನೆಲದ ಕಾನೂನು.

ಅಂತರರಾಷ್ಟ್ರೀಯ ಕಂಪನಿಯೊಂದು ನಮ್ಮ ನ್ಯಾಯಾಂಗ ವ್ಯವಸ್ಥೆಗಿಂತಲೂ ಮಿಗಿಲಾದ ಕೋರ್ಟ್‌ ಆಗುವುದು, ನಮ್ಮ ಸಂವಿಧಾನವನ್ನು ತನ್ನದೇ ಆದ ಬಗೆಯಲ್ಲಿ ವ್ಯಾಖ್ಯಾನಿಸುವುದು ಬೇಕಾಗಿಲ್ಲ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು