ಭಾನುವಾರ, 4 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂರ್ಯ-ನಮಸ್ಕಾರ: ಕಾಂಗ್ರೆಸ್ ಅವಸಾನ ದೇಶದ ಹಿತಕ್ಕೆ ಪೂರಕವೇ?

ನಿರ್ವಾತ ಸ್ಥಿತಿಯನ್ನು ನಿಸರ್ಗವೇ ಒಪ್ಪಿಕೊಳ್ಳುವುದಿಲ್ಲ ಎಂಬುದನ್ನು ಬಿಜೆಪಿ ಮರೆತಿರುವಂತಿದೆ
Last Updated 11 ಡಿಸೆಂಬರ್ 2022, 19:30 IST
ಅಕ್ಷರ ಗಾತ್ರ
ಸೂರ್ಯ-ನಮಸ್ಕಾರ: ಕಾಂಗ್ರೆಸ್ ಅವಸಾನ ದೇಶದ ಹಿತಕ್ಕೆ ಪೂರಕವೇ?
ADVERTISEMENT

ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸಾಧಿಸಿರುವ ಭರ್ಜರಿ ಜಯ ಹಾಗೂ ಅದರ ಎದುರಾಳಿಗಳು ಸಂಪೂರ್ಣವಾಗಿ ಸೋತಿರುವುದು ಬಿಜೆಪಿಯ ಬೆಂಬಲಿಗರನ್ನೂ ಆಶ್ಚರ್ಯಗೊಳಿಸಿದೆ. ಗುಜರಾತ್‌ನಲ್ಲಿ ಬಿಜೆಪಿ ಶೇಕಡ 52.50ರಷ್ಟು ಮತಗಳನ್ನು ಪಡೆದಿರುವುದು ಸಾಟಿಯಿಲ್ಲದ್ದು. ಅದು ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆಯು ತವರು ರಾಜ್ಯದಲ್ಲಿ ಹೆಚ್ಚುತ್ತಿರುವುದನ್ನು ತೋರಿಸುತ್ತದೆ. ಹಿಮಾಚಲ ಪ್ರದೇಶದಲ್ಲಿ ಮತದಾರರು ಕಾಂಗ್ರೆಸ್ಸನ್ನು ಅಧಿಕಾರಕ್ಕೆ ತಂದಿದ್ದಾರೆ. ದೆಹಲಿ ಮಹಾನಗರ ಪಾಲಿಕೆಯಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) ಅಧಿಕಾರ ಹಿಡಿದಿದೆ.

ಈ ಮೂರೂ ಪಕ್ಷಗಳು ಸಂಭ್ರಮಾಚರಣೆಯಲ್ಲಿ ತೊಡಗಿವೆ. ಚುನಾವಣಾ ಫಲಿತಾಂಶವು ಮೂರೂ ಪಕ್ಷಗಳಿಗೆ ಮಹತ್ವದ ಸಂದೇಶ ಒಳಗೊಂಡಿದೆ. ಹೀಗಾಗಿ, ಇದು ಅವಲೋಕನದ ಸಮಯವೂ ಹೌದು. ‘ಕಾಂಗ್ರೆಸ್ ಮುಕ್ತ ಭಾರತ’ ಎಂಬ ತನ್ನ ಘೋಷಣೆಯು ಎಷ್ಟು ಸಾರ್ಥಕವಾದುದು ಎಂಬುದನ್ನು ಗಂಭೀರವಾಗಿ ಮರುಪರಿಶೀಲಿಸಬೇಕು. ಕಾಂಗ್ರೆಸ್ಸನ್ನು ಸಂಪೂರ್ಣವಾಗಿ ಸೋಲಿಸಿಹಾಕುವುದು ಪಕ್ಷದ ಹಿತಾಸಕ್ತಿಗೆ ಪೂರಕವೇ? ಅದಕ್ಕಿಂತ ಹೆಚ್ಚಾಗಿ, ದೇಶದ ಅತ್ಯಂತ ಹಳೆಯ ಪಕ್ಷವು ಅವಸಾನ ಹೊಂದುವುದು ದೇಶದ ಹಿತಾಸಕ್ತಿಗೆ ಪೂರಕವಾಗಿದೆಯೇ?

ಹಲವು ವಿಷಯಗಳಲ್ಲಿ ಕಾಂಗ್ರೆಸ್‌ನ ಸಾಧನೆ ಕಳಪೆಯಾಗಿದೆ. ಕಾಂಗ್ರೆಸ್ಸಿನ ನಕಲಿ ಧರ್ಮನಿರಪೇಕ್ಷ ನೀತಿಗಳು, ಭ್ರಷ್ಟಾಚಾರ, ಕಳಪೆ ಆಡಳಿತದ ಬಗ್ಗೆ ಜನ ಹೊಂದಿರುವ ಅಸಮಾಧಾನವನ್ನು ಬಿಜೆಪಿಯು ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ತನ್ನ ಏಳಿಗೆಗಾಗಿ ಬಳಸಿಕೊಂಡಿತು. ಕಾಂಗ್ರೆಸ್ಸನ್ನು ಸಂಪೂರ್ಣವಾಗಿ ಇಲ್ಲವಾಗಿಸುವುದಾಗಿ ಭರವಸೆ ನೀಡಿತು. ಆರಂಭದಲ್ಲಿ ಇದು ಬಿಜೆಪಿಯ ಪಾಲಿಗೆ ಗಂಭೀರವಾದ ಗುರಿಯಾಗಿಯೇ ಕಂಡಿತ್ತು. ಆದರೆ, ನಿರ್ವಾತ ಸ್ಥಿತಿಯನ್ನು ನಿಸರ್ಗವೇ ಒಪ್ಪಿಕೊಳ್ಳುವುದಿಲ್ಲ ಎಂಬುದನ್ನು ಬಿಜೆಪಿ ಮರೆತಿರುವಂತೆ ಕಾಣುತ್ತಿದೆ. ಪ್ರಧಾನ ವಿರೋಧ ಪಕ್ಷದ ಸ್ಥಾನವನ್ನು ಕಾಂಗ್ರೆಸ್ ತೆರವುಗೊಳಿಸುತ್ತಿರುವ ಹೊತ್ತಿನಲ್ಲಿ ಹೆಚ್ಚು ಅಪಾಯಕಾರಿಯಾದ ಎಎಪಿ ಆ ಸ್ಥಾನವನ್ನು ತುಂಬಲಾರಂಭಿಸಿದೆ.

ಇದರಲ್ಲಿ ಸಮಸ್ಯೆ ಏನು ಎಂಬ ಪ್ರಶ್ನೆ ಮೂಡಬಹುದು. ಎಎಪಿ ಚುನಾವಣೆಗಳ ಹೊತ್ತಿನಲ್ಲಿ ಮಾಡುತ್ತಿರುವ ಜವಾಬ್ದಾರಿರಹಿತ ಭರವಸೆಗಳಲ್ಲಿ ಸಮಸ್ಯೆ ಇದೆ. ಅಧಿಕಾರಕ್ಕೆ ಬಂದರೆ 18 ವರ್ಷಕ್ಕಿಂತ ಹೆಚ್ಚು ವಯಸ್ಸಾದ ಹೆಣ್ಣುಮಕ್ಕಳಿಗೆ ತಿಂಗಳಿಗೆ ₹ 1,000 ನೀಡುವುದಾಗಿ ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿ ಎಎಪಿ ಭರವಸೆ ನೀಡಿತ್ತು. ಲಂಚದಂತೆ ಕಾಣುತ್ತಿರುವ ಈ ಕೊಡುಗೆಯ ಹಿಂದಿನ ತರ್ಕವೇನು? ಇದರಿಂದ ರಾಜ್ಯದ ಬೊಕ್ಕಸದ ಮೇಲೆ ಆಗುವ ಪರಿಣಾಮವೇನು? ಪಂಜಾಬ್‌ನಲ್ಲಿ ಮಾಡಿದ ರೀತಿಯಲ್ಲೇ, ಗುಜರಾತ್‌ನ ಪ್ರತೀ ಮನೆಗೆ 300 ಯುನಿಟ್‌ ಉಚಿತ ವಿದ್ಯುತ್, ರೈತರಿಗೆ ಉಚಿತ ನೀರು, ಸರ‍ಪಂಚರಿಗೆ ₹ 10 ಸಾವಿರ ನಿಶ್ಚಿತ ಸಂಬಳದ ಭರವಸೆ ನೀಡಿತ್ತು. ಪಂಜಾಬ್‌ನಲ್ಲಿ ಪ್ರತೀ ಮನೆಗೆ ಉಚಿತ ವಿದ್ಯುತ್ ಒದಗಿಸುವುದರಿಂದ ಬೊಕ್ಕಸದ ಮೇಲೆ ₹ 1,800 ಕೋಟಿ ಹೊರೆಯಾಗುತ್ತದೆ. ಆ ರಾಜ್ಯದ ಮೇಲಿರುವ ಸಾಲದ ಹೊರೆ ₹ 2.70 ಲಕ್ಷ ಕೋಟಿ, ರಾಜ್ಯದ ವಾರ್ಷಿಕ ವರಮಾನದ ಶೇ 20ರಷ್ಟು ಬಡ್ಡಿ ಪಾವತಿಗೇ ವಿನಿಯೋಗವಾಗುತ್ತಿದೆ. ಹೀಗಾಗಿ, ಈ ಬಗೆಯ ಕ್ರಮಗಳು ಬೇಜವಾಬ್ದಾರಿಯವು. ಈ ಬಗೆಯ ಪ್ರವೃತ್ತಿಯನ್ನು ಹತ್ತಿಕ್ಕದೇ ಇದ್ದರೆ ಪ್ರಜಾತಂತ್ರವು ಅಣಕವಾಗುತ್ತದೆ, ರಾಜ್ಯಗಳು ದಿವಾಳಿಯಾಗುತ್ತವೆ.

ಗುಜರಾತ್‌ನಲ್ಲಿ ಶೇ 13ರಷ್ಟು ಮತಗಳನ್ನು ಪಡೆದಿರುವ ಎಎಪಿ, ಈಗ ರಾಷ್ಟ್ರೀಯ ಪಕ್ಷವಾಗಿದೆ. ಕಾಂಗ್ರೆಸ್‌ ತೆರವು ಮಾಡುತ್ತಿರುವ ಸ್ಥಾನವನ್ನು ತಾನು ತುಂಬುವುದಾಗಿ ಬಹಿರಂಗವಾಗಿ ಹೇಳುತ್ತಿದೆ. ರಾಷ್ಟ್ರ ರಾಜಕಾರಣ ಹಾಗೂ ರಾಷ್ಟ್ರದ ಅರ್ಥ ವ್ಯವಸ್ಥೆಯ ಮೇಲೆ ಇದರಿಂದ ಆಗುವ ಪರಿಣಾಮಗಳ ಬಗ್ಗೆ ಬಿಜೆಪಿ ಗಂಭೀರವಾಗಿ ಆಲೋಚನೆ ಮಾಡಬೇಕಿದೆ. ಕಾಂಗ್ರೆಸ್‌ ಪಕ್ಷದಲ್ಲಿ ನುರಿತ ರಾಜಕಾರಣಿಗಳು ಹಲವರಿದ್ದಾರೆ, ನೆಹರೂ–ಗಾಂಧಿ ಕುಟುಂಬವು ಈಗ ತುಸು ಹಿಂದಕ್ಕೆ ಸರಿದಿರುವ ಕಾರಣ ‘ಪರಿವಾರವಾದ’ ಕುರಿತ ಆಕ್ಷೇಪಗಳನ್ನು ಎದುರಿಸಲು ಪಕ್ಷವು ಸನ್ನದ್ಧವಾಗಿರುವಂತಿದೆ. ಇವೆಲ್ಲವೂ ಬಿಜೆಪಿಯನ್ನು ಆಲೋಚನೆಗೆ ಹಚ್ಚಲು ಕಾರಣವಾಗಬೇಕು.

ಚುನಾವಣಾ ಫಲಿತಾಂಶದಲ್ಲಿ ಕಾಂಗ್ರೆಸ್ಸಿಗೂ ಪಾಠ ಇದೆ. ಈ ಸಲದ ಚುನಾವಣೆಗೂ ಮೊದಲು ಪಕ್ಷದಲ್ಲಿ ಕೆಲವು ಮಹತ್ವದ ಬದಲಾವಣೆಗಳು ಆದವು. ಇದು ಜನರಿಗೂ ಗೊತ್ತಿದೆ. 25 ವರ್ಷಗಳ ಅವಧಿಯ ನಂತರ ಪಕ್ಷಕ್ಕೆ ನೆಹರೂ–ಗಾಂಧಿ ಕುಟುಂಬದವರಲ್ಲದ ಮೊದಲ ಅಧ್ಯಕ್ಷ ದೊರೆತರು, ಮಲ್ಲಿಕಾರ್ಜುನ ಖರ್ಗೆ ಅವರು ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು. ಅದಕ್ಕಿಂತ ಮುಖ್ಯವಾದುದು, ಈ ಬಾರಿಯ ಚುನಾವಣೆಯ ಪ್ರಚಾರದಿಂದ ನೆಹರೂ–ಗಾಂಧಿ ಕುಟುಂಬದವರು ಹಿಂದೆ ಸರಿದಿದ್ದರು. ಚುನಾವಣಾ ವ್ಯವಹಾರಗಳಿಂದ ಸೋನಿಯಾ ಗಾಂಧಿ ದೂರವಿದ್ದರು. ರಾಹುಲ್ ಗಾಂಧಿ ಅವರು ಭಾರತ್ ಜೋಡೊ ಯಾತ್ರೆಯ ಮೇಲೆ ಗಮನ ಕೇಂದ್ರೀಕರಿಸಿದ್ದರು. ಅವರು ಹಿಮಾಚಲ ಪ್ರದೇಶದಲ್ಲಿ ಪ್ರಚಾರ ನಡೆಸಲಿಲ್ಲ. ಗುಜರಾತ್‌ನಲ್ಲಿ ಒಂದು ದಿನ ಎರಡು ಸಭೆ ಮಾತ್ರ ನಡೆಸಿದರು. ಪ್ರಿಯಾಂಕಾ ಗಾಂಧಿ ಅವರು ಹಿಮಾಚಲ ಪ್ರದೇಶದಲ್ಲಿ ಕೆಲವು ಸಭೆಗಳಲ್ಲಿ ಮಾತನಾಡಿದರು. ಆದರೆ ಕುಟುಂಬದ ಸದಸ್ಯರು ಚುನಾವಣಾ ಅಭಿಯಾನವನ್ನು ಮುನ್ನಡೆಸಲಿಲ್ಲ.

ಹಿಮಾಚಲ ಪ್ರದೇಶದಲ್ಲಿ ಪ್ರಚಾರವನ್ನು ಸ್ಥಳೀಯ ನಾಯಕರೇ ಮುನ್ನಡೆಸಿದರು, ಸ್ಥಳೀಯ ವಿಷಯಗಳನ್ನೇ ಪ್ರಸ್ತಾಪಿಸಿದರು. ಸಾವರ್ಕರ್, ಸಂಘ ಪರಿವಾರ, ಬ್ರಿಟಿಷ್ ಆಡಳಿತ ಅಥವಾ ಕೆಲವರಿಗೆ ಮಾತ್ರ ಅರ್ಥವಾಗುವ ಇಂತಹ ಇತರ ವಿಷಯಗಳ ಬಗ್ಗೆ ಮಾತನಾಡಲಿಲ್ಲ. ಇಂತಹ ವಿಚಾರಗಳನ್ನು ಪ್ರಸ್ತಾಪಿಸುವುದರಲ್ಲಿ ರಾಹುಲ್ ಗಾಂಧಿ ಸಿದ್ಧಹಸ್ತರು. ಇನ್ನೊಂದೆಡೆ, ರಾಜ್ಯ ಕಾಂಗ್ರೆಸ್ ಅಧ್ಯಕ್ಷೆ ಪ್ರತಿಭಾ ಸಿಂಗ್ (ಇವರು ರಾಜ್ಯದ ಜನಪ್ರಿಯ ನಾಯಕರಾಗಿದ್ದ ವೀರಭದ್ರ ಸಿಂಗ್ ಅವರ ಪತ್ನಿ) ಮುಂಚೂಣಿಯಲ್ಲಿ ನಿಂತು ಪ್ರಚಾರ ಕೈಗೊಂಡರು. ರಾಜ್ಯದ ಇತರ ನಾಯಕರ ಜೊತೆ ಪಕ್ಷದ ಪರವಾಗಿ ಪ್ರಚಾರ ನಡೆಸಿದರು.

ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯ ಫಲಿತಾಂಶದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ್ತು ನೆಹರೂ–ಗಾಂಧಿ ಕುಟುಂಬಕ್ಕೆ ಸ್ಪಷ್ಟ ಸಂದೇಶವೊಂದು ಇದೆ. ಪಕ್ಷದ ರಾಜ್ಯ ಘಟಕಗಳಲ್ಲಿ ಹಸ್ತಕ್ಷೇಪ ಮಾಡುವುದನ್ನು ಕನಿಷ್ಠ ಮಟ್ಟಕ್ಕೆ ಇರಿಸಿದರೆ, ರಾಜ್ಯ ಮಟ್ಟದ ನಾಯಕರಲ್ಲಿ ಇರುವ ಮತ ಸೆಳೆಯುವ ತಾಕತ್ತಿನ ಮೇಲೆ ಗೌರವ ಇರಿಸಿದರೆ, ಚುನಾವಣೆಯ ಸಂದರ್ಭದಲ್ಲಿ ಆಯಾ ರಾಜ್ಯಕ್ಕೆ ಸಂಬಂಧಿಸಿದ ವಿಚಾರದ ಮೇಲೆ ಗಮನ ಕೇಂದ್ರೀಕರಿಸಿದರೆ ಒಳ್ಳೆಯ ಫಲಿತಾಂಶ ಸಿಗುವುದು ಖಚಿತ. ಜವಾಹರಲಾಲ್ ನೆಹರೂ ಮತ್ತು ಇಂದಿರಾ ಗಾಂಧಿ ಅವರು ಪಕ್ಷದ ನೇತೃತ್ವ ವಹಿಸಿದ್ದ ಸಂದರ್ಭದಲ್ಲಿ ಇದ್ದಂತಹ ಮತ ಸೆಳೆಯುವ ಶಕ್ತಿಯು ಈಗ ನೆಹರೂ–ಗಾಂಧಿ ಕುಟುಂಬಕ್ಕೆ ಇಲ್ಲವಾಗಿರುವಾಗ, ಈ ಬಗೆಯ ಕಾರ್ಯತಂತ್ರ ಒಳ್ಳೆಯ ಫಲಿತಾಂಶ ಕೊಡುತ್ತದೆ.

ಈಗ ಆಮ್‌ ಆದ್ಮಿ ಪಕ್ಷದ ಬಗ್ಗೆ ಗಮನ ಹರಿಸೋಣ. ಉಚಿತ ಕೊಡುಗೆಗಳನ್ನು ಜವಾಬ್ದಾರಿ ಇಲ್ಲದೆ ನೀಡುವುದು ದೇಶದ ಅರ್ಥ ವ್ಯವಸ್ಥೆ ಪಾಲಿಗೆ ವಿನಾಶಕಾರಿ ಆಗಬಹುದು. ಎರಡನೆಯದಾಗಿ, ಪಕ್ಷವು ತನ್ನ ಬಗ್ಗೆ ಬಡಾಯಿ ಕೊಚ್ಚಿಕೊಳ್ಳುವುದನ್ನು ನಿಲ್ಲಿಸಬೇಕು. ಈಚೆಗೆ ಒಂದು ಟಿ.ವಿ. ಸಂದರ್ಶನದಲ್ಲಿ ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು, ದೆಹಲಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿಗೆ 20ಕ್ಕಿಂತ ಹೆಚ್ಚಿನ ಸ್ಥಾನಗಳು ಬರುವುದಿಲ್ಲ ಎಂದು ಹೇಳಿದರು. ಅಲ್ಲದೆ, ಅದನ್ನು ಕಾಗದದ ಚೀಟಿಯೊಂದರಲ್ಲಿ ಬರೆದು ಟಿ.ವಿ. ನಿರೂಪಕನಿಗೆ ನೀಡಿದರು ಸಹ! ಕೊನೆಯಲ್ಲಿ, ಬಿಜೆಪಿ 104 ಸ್ಥಾನ ಗೆದ್ದಿತ್ತು. ಎಎಪಿ 134 ಸ್ಥಾನ ಪಡೆದಿತ್ತು. ಗುಜರಾತ್‌ನಲ್ಲಿ ಎಎಪಿ ಸರ್ಕಾರ ರಚಿಸಲಿದೆ ಎಂದೂ ಅವರು ಹೇಳಿದ್ದರು! ವಾಸ್ತವದಿಂದ ದೂರ ಆಗಿರುವುದನ್ನು ಇವೆಲ್ಲವೂ ತೋರಿಸುತ್ತಿವೆ. ಬಡಾಯಿ ವರ್ತನೆ ಹಾಗೂ ಉದ್ಧಟತನವನ್ನು ಕೂಡ ತೋರಿಸುತ್ತಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT