ಷರಿಯಾ ನ್ಯಾಯಾಲಯ: ನೆಹರೂ ಮೂರ್ಖತನ

7

ಷರಿಯಾ ನ್ಯಾಯಾಲಯ: ನೆಹರೂ ಮೂರ್ಖತನ

ಎ. ಸೂರ್ಯ ಪ್ರಕಾಶ್
Published:
Updated:

ದೇಶದ ಉದ್ದಗಲಕ್ಕೂ, ಎಲ್ಲ ಜಿಲ್ಲೆಗಳಲ್ಲೂ ಷರಿಯಾ ನ್ಯಾಯಾಲಯ ಸ್ಥಾಪಿಸಬೇಕು ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಕೈಗೊಂಡಿರುವ ತೀರ್ಮಾನವು ವಿವಾದ ಸೃಷ್ಟಿಸಿದೆ. ಹಾಗೆಯೇ, ಜಾತ್ಯತೀತ ರಾಷ್ಟ್ರದ ಮೂಲ ಸ್ವರೂಪಗಳು ಏನಿರಬೇಕು ಎಂಬ ಬಗ್ಗೆ ಏಳು ದಶಕಗಳ ಹಿಂದೆ ಸಂವಿಧಾನ ರಚನಾ ಸಭೆಯಲ್ಲಿ ಆರಂಭವಾದ ಚರ್ಚೆಗೆ ನಮ್ಮನ್ನು ಪುನಃ ತಂದು ನಿಲ್ಲಿಸಿದೆ. ಏಕರೂಪ ನಾಗರಿಕ ಸಂಹಿತೆಗೆ ವಿರೋಧ ವ್ಯಕ್ತವಾದಾಗ ಡಾ.ಬಿ.ಆರ್‌. ಅಂಬೇಡ್ಕರ್ ಸೇರಿದಂತೆ ಸಭೆಯಲ್ಲಿದ್ದ ಕೆಲವು ಹಿರಿಯ ಕಾನೂನು ತಜ್ಞರು ವ್ಯಕ್ತಪಡಿಸಿದ ಕಳವಳವು ನಮ್ಮನ್ನು ಮತ್ತೆ ಕಾಡಲಾರಂಭಿಸಿದಂತೆ ಭಾಸವಾಗುತ್ತಿದೆ.

ಈಚಿನ ವರ್ಷಗಳಲ್ಲಿನ ರಾಜಕೀಯ ಬೆಳವಣಿಗೆಗಳು ಹಾಗೂ ಕಾಂಗ್ರೆಸ್ ಸೇರಿದಂತೆ ಹಲವು ರಾಜಕೀಯ ಪಕ್ಷಗಳು ಅಭ್ಯಾಸ ಮಾಡಿಕೊಂಡಿರುವ ‘ತುಷ್ಟೀಕರಣ ನೀತಿ’ಯು ಭಾರತಕ್ಕೆ ಸ್ವಾತಂತ್ರ್ಯ ದೊರೆತ ಸಂದರ್ಭದಲ್ಲಿ, ನೆಹರೂವಾದಿ ಆಡಳಿತವು ದೇಶದ ಸಮಾಜದೊಳಕ್ಕೆ ಸಾಕಷ್ಟು ಕಾಯಿಲೆಗಳನ್ನು ತೂರಿಸಿತು ಎಂಬುದಕ್ಕೆ ಸಾಕಷ್ಟು ಸಾಕ್ಷ್ಯಗಳನ್ನು ನೀಡುತ್ತದೆ.

ಸಂವಿಧಾನ ರಚನಾ ಸಭೆಯು 1946ರ ಡಿಸೆಂಬರ್‌ 9ರಂದು ತನ್ನ ಕಲಾಪ ಆರಂಭಿಸಿತು. ಅದಾದ ಎಂಟು ತಿಂಗಳಲ್ಲಿ ಭಾರತ ಸ್ವಾತಂತ್ರ್ಯ ಪಡೆಯಿತು. ಭಾರತದ ಮುಸ್ಲಿಮರು ದೇಶವನ್ನು ವಿಭಜಿಸುವಲ್ಲಿ, ಪಾಕಿಸ್ತಾನ ಎಂಬ ಪ್ರತ್ಯೇಕ ಇಸ್ಲಾಮಿಕ್ ರಾಷ್ಟ್ರ ಸೃಷ್ಟಿಸುವಲ್ಲಿ ಯಶಸ್ವಿಯಾದರು. ಆದರೆ, ದೇಶವನ್ನು ತುಂಡರಿಸಿದ ಎರಡು ವರ್ಷಗಳ ನಂತರ ಕೂಡ, ಜಾತ್ಯತೀತ ಭಾರತದಲ್ಲಿ ಉಳಿಯಲು ತೀರ್ಮಾನಿಸಿದ ಮುಸ್ಲಿಮರನ್ನು ಪ್ರತಿನಿಧಿಸುತ್ತಿದ್ದ ಸಂವಿಧಾನ ರಚನಾ ಸಭೆಯ ಮುಸ್ಲಿಂ ಸದಸ್ಯರು ಪ್ರತ್ಯೇಕ ಮತಕ್ಷೇತ್ರದ ಬೇಡಿಕೆ ಇಟ್ಟರು, ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರುವುದನ್ನು ತಡೆಯುವಲ್ಲಿ ಯಶಸ್ಸು ಕಂಡರು. ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರಲು ಅವಕಾಶ ಮಾಡಿಕೊಡುವ ಅಂಶವನ್ನು ಸಂವಿಧಾನದಲ್ಲಿ ಸೇರಿಸುವುದಕ್ಕೆ ಅವರು ವಿರೋಧ ವ್ಯಕ್ತಪಡಿಸಿದ ರೀತಿಯು ಸಭೆಯಲ್ಲಿದ್ದ ಅಂಬೇಡ್ಕರ್ ಸೇರಿದಂತೆ ಹಲವರಲ್ಲಿ ಆಘಾತ ಉಂಟುಮಾಡಿತು.

1948ರ ನವೆಂಬರ್‌ 23ರಂದು ಸಂವಿಧಾನ ರಚನಾ ಸಭೆಯಲ್ಲಿ ಈ ವಿಷಯವಾಗಿ ನಡೆದ ಚರ್ಚೆಯ ಕೆಲವು ಆಯ್ದ ಭಾಗಗಳು ಇಲ್ಲಿವೆ. ಎಐಎಂಪಿಎಲ್‌ಬಿ ಈಗ ಸಿವಿಲ್ ವಿಷಯಗಳಿಗೆ ಸಂಬಂಧಿಸಿದಂತೆ ದೇಶದಾದ್ಯಂತ ಪ್ರತ್ಯೇಕ ಕಾನೂನು ಮತ್ತು ನ್ಯಾಯಿಕ ಜಾಲವನ್ನು ಹೊಂದುವ ಆಲೋಚನೆಯಲ್ಲಿ ಇದೆ. ಸ್ವಾತಂತ್ರ್ಯ ದೊರೆಯುವ ಸಮಯದಲ್ಲಿ ಜವಾಹರಲಾಲ್‌ ನೆಹರೂ ಅವರು ತೋರಿದ ಹೇಡಿತನಕ್ಕೆ ದೇಶ ಇಂದು ತೆರುತ್ತಿರುವ ಬೆಲೆಯನ್ನು, ಭಾರತದ ಬಹುಸಂಖ್ಯಾತರ ಜಾತ್ಯತೀತ ಆಕಾಂಕ್ಷೆಗಳ ಮೇಲೆ ಅದು ಬೀರಿರುವ ಕರಿನೆರಳನ್ನು ಓದುಗರು ಅರ್ಥ ಮಾಡಿಕೊಳ್ಳುತ್ತಾರೆ.

‘ಭಾರತದ ಉದ್ದಗಲಕ್ಕೂ, ಎಲ್ಲ ಪ್ರಜೆಗಳಿಗೆ ಅನ್ವಯವಾಗುವಂತಹ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರಲು ಪ್ರಭುತ್ವವು ಪ್ರಯತ್ನಿಸಬೇಕು’ ಎಂದು ಹೇಳುವ ವಿಧಿಯು 1948ರ ನವೆಂಬರ್‌ 23ರಂದು ಸಂವಿಧಾನ ರಚನಾ ಸಭೆಯಲ್ಲಿ ಚರ್ಚೆಗೆ ಬಂದಾಗ ಮೊಹಮ್ಮದ್ ಇಸ್ಮಾಯಿಲ್ ಸಾಹಿಬ್, ನಜೀರುದ್ದಿನ್ ಅಹ್ಮದ್, ಮೆಹಬೂಬ್ ಅಲಿ ಬೇಗ್‌ ಸಾಹಿಬ್ ಬಹದ್ದೂರ್, ಪೋಕರ್ ಸಾಹಿಬ್ ಬಹದ್ದೂರ್ ಮತ್ತು ಹುಸೇನ್ ಇಮಾಮ್‌ ತೀವ್ರವಾಗಿ ವಿರೋಧಿಸಿದರು. ಮುಸ್ಲಿಮರ ವಿಚಾರದಲ್ಲಿ ಉತ್ತರಾಧಿಕಾರ, ಪೂರ್ವಿಕರ ಸ್ವತ್ತಿನ ಮೇಲಣ ಹಕ್ಕು, ವಿವಾಹ ಮತ್ತು ವಿಚ್ಛೇದನಕ್ಕೆ ಸಂಬಂಧಿಸಿದ ಕಾನೂನುಗಳು ಧರ್ಮವನ್ನು ಸಂಪೂರ್ಣವಾಗಿ ಅವಲಂಬಿಸಿವೆ ಎಂದು ಮೆಹಬೂಬ್ ಅಲಿ ಬೇಗ್‌ ಸಾಹಿಬ್ ಬಹದ್ದೂರ್ ವಾದಿಸಿದರು. ಇದೇ ನಿಲುವನ್ನು ಇತರ ಮುಸ್ಲಿಂ ಸದಸ್ಯರು ವ್ಯಕ್ತಪಡಿಸಿದರು. ‘ಜನರಿಗೆ ವೈಯಕ್ತಿಕ ಕಾನೂನುಗಳನ್ನು ಪಾಲಿಸಲು ಅವಕಾಶ ಮಾಡಿಕೊಟ್ಟರೆ ಅತೃಪ್ತಿ ಇರುವುದಿಲ್ಲ’ ಎಂದು ಹೇಳಿದ ಮೊಹಮ್ಮದ್ ಇಸ್ಮಾಯಿಲ್ ಸಾಹಿಬ್‌, ಏಕರೂಪದ ನಾಗರಿಕ ಸಂಹಿತೆಯು ಸಾಮರಸ್ಯ ಹಾಳು ಮಾಡಲು ಕಾರಣವಾಗುತ್ತದೆ ಎಂದರು. ‘ಇದು ದಬ್ಬಾಳಿಕೆಯ ಸ್ವರೂಪದ್ದು, ಇದನ್ನು ಸಹಿಸಿಕೊಳ್ಳಲಾಗದು’ ಎಂದು ಈ ವಿಧಿಯ ಬಗ್ಗೆ ಹೇಳಿದರು ಪೋಕರ್ ಸಾಹಿಬ್ ಬಹದ್ದೂರ್.

ಮೆಹಬೂಬ್ ಅಲಿ ಬೇಗ್‌ ಸಾಹಿಬ್ ಬಹದ್ದೂರ್ ಅವರು ಜಾತ್ಯತೀತತೆ ಬಗ್ಗೆ ತೀರಾ ಸಂಕೀರ್ಣವಾದ ವ್ಯಾಖ್ಯಾನವೊಂದನ್ನು ನೀಡಿದರು. ಜಾತ್ಯತೀತ ಪ್ರಭುತ್ವದ ಅಡಿ ಬೇರೆ ಬೇರೆ ಸಮುದಾಯಗಳ ಜನರಿಗೆ ತಮ್ಮಿಚ್ಛೆಯ ಜೀವನ ಪದ್ಧತಿ ಅನುಸರಿಸುವ, ತಮ್ಮ ವೈಯಕ್ತಿಕ ಕಾನೂನುಗಳನ್ನು ಪಾಲಿಸುವ ಸ್ವಾತಂತ್ರ್ಯ ಇರಬೇಕು ಎಂದು ಅವರು ಹೇಳಿದರು. ಅಲ್ಪಸಂಖ್ಯಾತರ ಪವಿತ್ರ ಹಕ್ಕುಗಳನ್ನು ರಕ್ಷಿಸುವುದು ಬಹುಸಂಖ್ಯಾತರ ಕರ್ತವ್ಯ ಎಂದರು ಪೋಕರ್ ಸಾಹಿಬ್ ಬಹದ್ದೂರ್. ಇವರಿಬ್ಬರನ್ನೂ ಪ್ರಶ್ನಿಸಿದವರು ಕೆ.ಎಂ. ಮುನ್ಶಿ. ‘ಜಗತ್ತಿನ ಯಾವುದೇ ಮುಂದುವರಿದ ಮುಸ್ಲಿಂ ರಾಷ್ಟ್ರವು, ನಾಗರಿಕ ಸಂಹಿತೆಯನ್ನು ರೂಪಿಸಲು ಆಗದಷ್ಟು ಪಾವಿತ್ರ್ಯವನ್ನು ಪ್ರತಿ ಅಲ್ಪಸಂಖ್ಯಾತನ ವೈಯಕ್ತಿಕ ಕಾನೂನುಗಳಿಗೆ ನೀಡಿಲ್ಲ. ಉದಾಹರಣೆಗೆ ಟರ್ಕಿ ಅಥವಾ ಈಜಿಪ್ಟ್‌ ದೇಶವನ್ನು ಪರಿಗಣಿಸಿ. ಈ ದೇಶಗಳಲ್ಲಿ ಯಾವ ಅಲ್ಪಸಂಖ್ಯಾತನಿಗೂ ಇಂತಹ ಹಕ್ಕುಗಳನ್ನು ಹೊಂದಲು ಅವಕಾಶ ಇಲ್ಲ’ ಎಂದರು ಮುನ್ಶಿ. ವೈಯಕ್ತಿಕ ಕಾನೂನುಗಳನ್ನು ಹೊಂದುವ ಬಯಕೆ ವ್ಯಕ್ತಪಡಿಸಿದ ಖೋಜಾಗಳಿಗೆ ಅಥವಾ ಕುಥಿ ಮೆಮನ್‌ಗಳಿಗೆ ಮುಸ್ಲಿಮರಲ್ಲಿನ ಬಹುಸಂಖ್ಯಾತರು ಅಂತಹ ಅವಕಾಶ ನೀಡಿಲ್ಲ ಎಂದೂ ಅವರು ಹೇಳಿದರು.

ಹೀಗೆ ಹೇಳುವ ಮೂಲಕ, ‘ಅಲ್ಪಸಂಖ್ಯಾತರ ವೈಯಕ್ತಿಕ ಕಾನೂನುಗಳಿಗೆ ವಿಶ್ವದ ಇತರೆಡೆ ಗೌರವ ಇದೆ’ ಎಂಬ ವಾದವನ್ನು ತಳ್ಳಿಹಾಕಿದರು. ಮುಸ್ಲಿಂ ಸದಸ್ಯರ ವಾದಗಳನ್ನು ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್ ಅವರೂ ಪ್ರಶ್ನಿಸಿದರು. ‘ಇಂತಹ ವಾದಗಳು ಈ ದೇಶವನ್ನು ಒಂದಾಗಿ ಬೆಸೆಯುವ ಆಶಯಕ್ಕೆ ಪೂರಕವಾಗಿ ಇವೆಯೇ ಅಥವಾ ಈ ದೇಶದ ವಿವಿಧ ಸಮುದಾಯಗಳು ಎಂದೆಂದಿಗೂ ಜಗಳವಾಡಿಕೊಂಡು ಇರಬೇಕೇ’ ಎಂದು ಅಯ್ಯರ್ ಕೇಳಿದರು. ಬ್ರಿಟಿಷರು ಇಡೀ ದೇಶಕ್ಕೆ ಅನ್ವಯ ಆಗುವಂತಹ ಕ್ರಿಮಿನಲ್‌ ಕಾನೂನನ್ನು ಜಾರಿಗೆ ತಂದಾಗ ಮುಸ್ಲಿಮರು ವಿರೋಧ ವ್ಯಕ್ತಪಡಿಸಿರಲಿಲ್ಲ. ಗುತ್ತಿಗೆ ಹಾಗೂ ಅಂತಹ ಇತರ ಕೆಲವು ಏಕರೂಪದ ಕಾಯ್ದೆಗಳನ್ನು ಜಾರಿಗೆ ತಂದಾಗ ಕೂಡ ವಿರೋಧ ಎದುರಾಗಲಿಲ್ಲ. ‘ಬದಲಾಗುತ್ತಿರುವ ಕಾಲದ ಜೊತೆ ಹೊಂದಿಕೆ ಮಾಡಿಕೊಳ್ಳಲು ಮನಸ್ಸಿರುವುದು ಇಂದು ಈ ದೇಶದಬಹುಸಂಖ್ಯಾತರಿಗೆ ಮಾತ್ರ ಎಂಬಂತೆ ಕಾಣಿಸುತ್ತಿದೆ’ ಎಂದರು ಅಯ್ಯರ್. ಅವರು ಆಡಿದ ಮಾತುಗಳನ್ನು ಹಿಂದೂಗಳು ಇಂದು ಮತ್ತೆ ಮತ್ತೆ ಹೇಳುತ್ತಿರುತ್ತಾರೆ.

‘ಏಕರೂಪದ ಕ್ರಿಮಿನಲ್‌ ಸಂಹಿತೆ ಜಾರಿಯಲ್ಲಿದೆ, ಆಸ್ತಿ ವರ್ಗಾವಣೆಗೆ ಸಂಬಂಧಿಸಿದಂತೆ ಏಕರೂಪದ ಸಂಹಿತೆ ಇದೆ ಮತ್ತು ಎಲ್ಲರಿಗೂ ಅನ್ವಯ ಆಗುವ ನೆಗೋಷಿಯೆಬಲ್‌ ಇನ್‌ಸ್ಟ್ರುಮೆಂಟ್ಸ್‌ ಕಾಯ್ದೆ ಜಾರಿಯಲ್ಲಿದೆ. ಹೀಗಿರುವಾಗ ಮುಸ್ಲಿಮರು ಯಾವತ್ತಿನಿಂದಲೂ ವೈಯಕ್ತಿಕ ಕಾನೂನುಗಳನ್ನು ಪಾಲಿಸುತ್ತಿದ್ದಾರೆ ಎಂಬ ವಾದ ಆಶ್ಚರ್ಯ ತರಿಸುತ್ತಿದೆ. ಬೇರೆ ಮಾತುಗಳಲ್ಲಿ ಹೇಳಬೇಕು ಎಂದಾದರೆ, ಏಕರೂಪದ ನಾಗರಿಕ ಸಂಹಿತೆ ಈಗಾಗಲೇ ಜಾರಿಯಲ್ಲಿದೆ. ಈಗಿರುವ ಆಲೋಚನೆಯು ವಿವಾಹ ಹಾಗೂ ಉತ್ತರಾಧಿಕಾರಕ್ಕೆ ಸಂಬಂಧಿಸಿದಂತೆ ಏಕರೂಪದ ಸಂಹಿತೆಯನ್ನು ಜಾರಿಗೆ ತರುವುದು’ ಎಂದು ಡಾ. ಅಂಬೇಡ್ಕರ್ ಹೇಳಿದರು.

ಹಲವಾರು ಆಚರಣೆಗಳು ಕುರಾನ್‌ನಿಂದ ಬಂದಿವೆ, ಅವುಗಳನ್ನು ಮುಸ್ಲಿಮರು 1,350 ವರ್ಷಗಳಿಂದ ಆಚರಿಸಿಕೊಂಡು ಬಂದಿದ್ದಾರೆ ಎಂದು ಮುಸ್ಲಿಂ ಸದಸ್ಯರು ಆಡಿದ ಮಾತುಗಳನ್ನು ಅಂಬೇಡ್ಕರ್ ಪ್ರಶ್ನಿಸಿದರು. ‘ಉತ್ತರಾಧಿಕಾರದ ವಿಚಾರದಲ್ಲಿ ವಾಯವ್ಯ ಪ್ರಾಂತ್ಯದಲ್ಲಿ 1935ರವರೆಗೂ ಹಿಂದೂ ಕಾನೂನುಗಳನ್ನು ಅನುಸರಿಸಲಾಗುತ್ತಿತ್ತು. ಮಲಬಾರ್ ಪ್ರಾಂತ್ಯದಲ್ಲಿ ಮರುಮಕ್ಕದಾಯಂ ಎನ್ನುವ (ಮಾತೃಪ್ರಧಾನ ಕಾಯ್ದೆಯು) ಹಿಂದೂಗಳಿಗೆ ಮಾತ್ರವಲ್ಲದೆ ಮುಸ್ಲಿಮರಿಗೂ ಅನ್ವಯ ಆಗುತ್ತಿತ್ತು. ಹಾಗಾಗಿ, ಮುಸ್ಲಿಂ ಕಾನೂನು ಎಂಬುದು ಪುರಾತನ ಕಾಲದಿಂದ ಬಂದಿರುವ, ಬದಲಿಸಲು ಸಾಧ್ಯವಿಲ್ಲದ ಕಾನೂನು ಎನ್ನುವುದು ತಪ್ಪು’ ಎಂದು ಅಂಬೇಡ್ಕರ್ ಹೇಳಿದ್ದರು. ‘ಹಾಗಾಗಿ, ನಾಗರಿಕ ಸಂಹಿತೆಯನ್ನು ರೂಪಿಸುವವರು ಮುಸ್ಲಿಂ ಸಮುದಾಯದ ಭಾವನೆಗಳನ್ನು ಗಾಸಿಗೊಳಿಸಿದ್ದಾರೆ ಎಂದು ಯಾವ ಮುಸ್ಲಿಮನೂ ಹೇಳುವುದು ತರವಲ್ಲ’ ಎಂದೂ ಅಂಬೇಡ್ಕರ್ ಪ್ರತಿಪಾದಿಸಿದ್ದರು.

ಏಕರೂಪದ ನಾಗರಿಕ ಸಂಹಿತೆಯ ಕುರಿತ ಚರ್ಚೆಯನ್ನು ಮುಂದಕ್ಕೆ ಹಾಕುವ ಉದ್ದೇಶದಿಂದ ನಜೀರುದ್ದಿನ್ ಅಹಮದ್ ಅವರು, ‘ಸಂವಿಧಾನ ರಚನಾ ಸಭೆಯು ತನ್ನ ಕಾಲಕ್ಕಿಂತಲೂ ಮುಂದಾಗಿ ಆಲೋಚಿಸುತ್ತಿದೆ’ ಎಂದರು. ‘ನಾಗರಿಕ ಸಂಹಿತೆಯು ಏಕರೂಪದ್ದಾಗುವ ಕಾಲವೊಂದು ಬರುತ್ತದೆ ಎಂಬುದರಲ್ಲಿ ನನಗೆ ಅನುಮಾನ ಇಲ್ಲ’ ಎಂದೂ ಅವರು ಹೇಳಿದರು. ಅವರು ಹೇಳಿದ್ದು ಎಂದಿಗೂ ಕಾರ್ಯರೂಪಕ್ಕೆ ಬಾರದಿರುವುದರ ಬಗೆಗಿನ ಮಾತಾಗಿತ್ತು ಎಂಬುದು ಎಐಎಂಪಿಎಲ್‌ಬಿ ಈಚೆಗೆ ಕೈಗೊಂಡ ತೀರ್ಮಾನ ತೋರಿಸುತ್ತಿದೆ. ಅದೇನೇ ಇರಲಿ, ಇದು ನೆಹರೂ ಅವರ ರಾಕ್ಷಸರೂಪಿ ಮೂರ್ಖತನ ಆಗಿತ್ತು. ನಕಲಿ ಜಾತ್ಯತೀತ ವಾದಕ್ಕೆ ನೆಹರೂ ಅಂಟಿಕೊಂಡಿದ್ದು ಮುಸ್ಲಿಂ ಅಲ್ಪಸಂಖ್ಯಾತರಿಗೆ ಪ್ರತ್ಯೇಕತೆಯನ್ನು ಉಳಿಸಿಕೊಳ್ಳಲು, ರಾಷ್ಟ್ರೀಯ ಭಾವೈಕ್ಯಕ್ಕೆ ಅಡ್ಡಿಯಾಗಿ ಉಳಿಯಲು ಉತ್ತೇಜನ ನೀಡಿತು. ಇದಕ್ಕೆ ದೇಶದ ಮುಂದಿನ ತಲೆಮಾರುಗಳು ಬೆಲೆ ತೆರಲಿವೆ.

(ಲೇಖಕ ಪ್ರಸಾರ ಭಾರತಿ ಅಧ್ಯಕ್ಷ)

ಬರಹ ಇಷ್ಟವಾಯಿತೆ?

 • 20

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !