ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜೀವ್ ಮತ್ತು ಮೋದಿ ನಡುವಣ ವ್ಯತ್ಯಾಸ

ಸಾಂವಿಧಾನಿಕ ಮತ್ತು ಕಾನೂನಿನ ಆಶಯಗಳ ಜಾರಿಯಲ್ಲಿ ಅಸಮಾನತೆ
Last Updated 1 ಜನವರಿ 2019, 19:34 IST
ಅಕ್ಷರ ಗಾತ್ರ

ಮುಸ್ಲಿಂ ಮಹಿಳೆಯರ (ವೈವಾಹಿಕ ಹಕ್ಕುಗಳ ರಕ್ಷಣೆ) ಮಸೂದೆ– 2018ಕ್ಕೆ ಲೋಕಸಭೆ ಅನುಮೋದನೆ ನೀಡಿದ್ದರೂ, ಈ ವಿಚಾರವಾಗಿ ರಾಜಕೀಯ ತಿಕ್ಕಾಟ ಮುಂದುವರಿಯುವ ಸಾಧ್ಯತೆ ಇದೆ. ಮುಸ್ಲಿಮರಲ್ಲಿ ಇರುವ ಲಿಂಗ ತಾರತಮ್ಯವನ್ನು ಸರಿಪಡಿಸುವ ಉದ್ದೇಶದ ಈ ಮಸೂದೆಗೆ ವಿರೋಧ ಪಕ್ಷಗಳು ಒಟ್ಟಾಗಿ ರಾಜ್ಯಸಭೆಯ ಅಂಗೀಕಾರ ಸಿಗದಂತೆ ಮಾಡುವ ಸಾಧ್ಯತೆ ಇದೆ.

ಶಾಯರಾ ಬಾನೊ ಮತ್ತು ಕೇಂದ್ರ ಸರ್ಕಾರದ ನಡುವಣ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ 2017ರ ಆಗಸ್ಟ್‌ನಲ್ಲಿ ನೀಡಿದ ತೀರ್ಪಿನಲ್ಲಿ, ತಲಾಖ್–ಎ–ಬಿದ್ದತ್ (ಒಂದೇ ಬಾರಿಗೆ ಮೂರು ಸಲ ತಲಾಖ್ ಎಂದು ಹೇಳಿ ಪತ್ನಿಗೆ ವಿಚ್ಛೇದನ ನೀಡುವ ಕ್ರಮ) ಪದ್ಧತಿಯನ್ನು ರದ್ದು ಮಾಡಿತು. ಈ ಪದ್ಧತಿಯು ತಾರತಮ್ಯದಿಂದ ಕೂಡಿದ್ದು, ಮಹಿಳೆಯರ ಘನತೆಗೆ ವಿರುದ್ಧವಾಗಿದೆ ಎಂದು ಇದನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು.

1937ರ ‘ಮುಸ್ಲಿಂ ವೈಯಕ್ತಿಕ ಕಾನೂನು (ಷರಿಯಾ) ಜಾರಿ ಕಾಯ್ದೆ’ಯು ಮುಸ್ಲಿಮರ ವಿವಾಹ, ವಿಚ್ಛೇದನ, ಆಸ್ತಿಹಕ್ಕು, ನಿರ್ವಹಣೆ, ಉಡುಗೊರೆ, ಪಾಲಕತ್ವದಂತಹ ವಿಚಾರಗಳಲ್ಲಿ ಅನ್ವಯ ಆಗುತ್ತದೆ ಎಂದು ಕೋರ್ಟ್‌ ಹೇಳಿತ್ತು. ಶಮೀಂ ಆರಾ ಮತ್ತು ಉತ್ತರ ಪ್ರದೇಶ ಸರ್ಕಾರದ ನಡುವಣ ಪ್ರಕರಣದಲ್ಲಿ 2002ರಲ್ಲಿ ತಾನು ನೀಡಿದ ಒಂದು ತೀರ್ಪನ್ನು ಕೋರ್ಟ್‌ ಆಧಾರವಾಗಿ ಇರಿಸಿಕೊಂಡಿತ್ತು. ‘ಪವಿತ್ರ ಕುರಾನ್‌ನಲ್ಲಿ ಹೇಳಿರುವ ರೀತಿಯಲ್ಲಿ, ತಲಾಖ್‌ ನೀಡುವ ಸರಿಯಾದ ಕ್ರಮವೆಂದರೆ: ತಲಾಖ್‌ಗೆ ಸಕಾರಣಗಳು ಇರಬೇಕು. ಪತಿ– ಪತ್ನಿ ನಡುವೆ ರಾಜಿ ಮಾಡಿಸಲು ಇಬ್ಬರು ವ್ಯಕ್ತಿಗಳಿಂದ ಪ್ರಯತ್ನ ನಡೆದಿರಬೇಕು. ಇಬ್ಬರಲ್ಲಿ ಒಬ್ಬರು ‍ಪತ್ನಿಯ ಕುಟುಂಬದ ಕಡೆಯವರಾಗಿರಬೇಕು, ಇನ್ನೊಬ್ಬರು ಪತಿಯ ಕಡೆಯವರಾಗಿರಬೇಕು. ಪ್ರಯತ್ನಗಳು ವಿಫಲವಾದರೆ ತಲಾಖ್‌ ಜಾರಿಗೊಳಿಸಬಹುದು’ ಎಂದು ಆ ಪ್ರಕರಣದಲ್ಲಿ ಕೋರ್ಟ್‌ ಹೇಳಿತ್ತು.

ಸಂಸತ್ತಿನ ಮೂಲಕ ಕಾನೂನು ರೂಪಿಸಿ ಈ ವಿಷಯದಲ್ಲಿ ಇರುವ ನಿರ್ವಾತವನ್ನು ಭರ್ತಿ ಮಾಡುವ ಸರ್ಕಾರದ ಆಶಯಕ್ಕೆ ಈ ತೀರ್ಪು ಇಂಬು ಕೊಟ್ಟಿತು. ಸುಪ್ರೀಂ ಕೋರ್ಟ್‌ನ ತೀರ್ಪು ಇದ್ದರೂ ತ್ರಿವಳಿ ತಲಾಖ್‌ ಪ್ರಕರಣಗಳು ದೇಶದ ಬೇರೆ ಬೇರೆ ಕಡೆಗಳಿಂದ ವರದಿಯಾಗುತ್ತಿವೆ ಎಂಬುದನ್ನು ಕಂಡುಕೊಂಡ ನಂತರ ಈ ರೀತಿಯ ಕಾನೂನು ರೂಪಿಸುವ ಕ್ರಮಕ್ಕೆ ಮುಂದಾಗುವುದು ಸರ್ಕಾರಕ್ಕೆ ಅನಿವಾರ್ಯ ಆಯಿತು. ಸರ್ಕಾರ ಮೊದಲು ಒಂದು ಸುಗ್ರೀವಾಜ್ಞೆ ಜಾರಿಗೆ ತಂದು ನಂತರ ಮಸೂದೆಯೊಂದನ್ನು ಸಿದ್ಧಪಡಿಸಿತು. ಈ ಮಸೂದೆಗೆ ಲೋಕಸಭೆಯು ಭಾರಿ ಬೆಂಬಲದೊಂದಿಗೆ ಅನುಮೋದನೆ ನೀಡಿದ್ದರೂ, ಬಿಜೆಪಿಯನ್ನು ವಿರೋಧಿಸುತ್ತಿರುವ ಪಕ್ಷಗಳು ಸೋಲೊಪ್ಪಿಕೊಳ್ಳಲು ಸಿದ್ಧವಿಲ್ಲ.

ಮುಸ್ಲಿಂ ಮತ ಬ್ಯಾಂಕನ್ನು ಪೋಷಿಸಿರುವ ಪಕ್ಷಗಳು ಮುಸ್ಲಿಮರಿಗೆ ಸಂಬಂಧಿಸಿದ ಪ್ರಗತಿಪರ ಕಾನೂನುಗಳನ್ನು ಸಾಮಾನ್ಯವಾಗಿ ತಡೆಯುತ್ತವೆ. ಮುಸ್ಲಿಂ ವೈಯಕ್ತಿಕ ಕಾನೂನುಗಳನ್ನು ಸಂವಿಧಾನದ ವಿಶಾಲ ಚೌಕಟ್ಟಿನಲ್ಲಿ ತರುವ ಯಾವುದೇ ಯತ್ನವನ್ನು ಮುಸ್ಲಿಮರು ವಿರೋಧಿಸುತ್ತಾರೆ, ಅಂತಹ ಯತ್ನಗಳಿಂದ ಚುನಾವಣೆಗಳಲ್ಲಿ ತೊಂದರೆ ಆಗುತ್ತದೆ ಎಂದು ಇಂತಹ ಪಕ್ಷಗಳು ಭಾವಿಸುತ್ತವೆ. ಈ ರೀತಿಯ ನಂಬಿಕೆ ಜವಾಹರಲಾಲ್ ನೆಹರೂ ಕಾಲದಿಂದಲೂ ಇರುವ ಕಾರಣ, ರಾಜಕೀಯವಾಗಿ ತೊಂದರೆ ಆಗಬಹುದು ಎಂದು ಪಕ್ಷಗಳು ಇಂತಹ ಕ್ರಮಗಳನ್ನು ಬೆಂಬಲಿಸಲು ಹಿಂದೇಟು ಹಾಕಿದ ಸಾಕಷ್ಟು ಉದಾಹರಣೆಗಳು ಇವೆ. ಇಂತಹ ಕ್ರಮ ಅನುಸರಿಸುವ ವಿಚಾರದಲ್ಲಿ ಮುಂಚೂಣಿಯಲ್ಲಿ ಇರುವುದು ಕಾಂಗ್ರೆಸ್ ಪಕ್ಷ. ಪರಿಣಾಮವಾಗಿ ಸಾಂವಿಧಾನಿಕ ಮತ್ತು ಕಾನೂನಿನ ಆಶಯಗಳನ್ನು ದೇಶದಲ್ಲಿ ಜಾರಿಗೊಳಿಸುವ ವಿಚಾರದಲ್ಲಿ ತೀವ್ರ ಅಸಮಾನತೆ ಸೃಷ್ಟಿಯಾಗಿದೆ.

ಚುನಾವಣೆಗಳಲ್ಲಿ ಮುಸ್ಲಿಂ ಮತಗಳನ್ನು ಪಡೆಯುವ ಒಂದೇ ಕಾರಣಕ್ಕೆ ಸಂವಿಧಾನದ ಆಶಯಗಳನ್ನು ತನಗೆ ಬೇಕಾದಂತೆ ಅನುಷ್ಠಾನಕ್ಕೆ ತಂದಿದ್ದಕ್ಕಾಗಿ ಇತಿಹಾಸವು ಕಾಂಗ್ರೆಸ್ ಪಕ್ಷವನ್ನು ಹೊಣೆ ಮಾಡಲಿದೆ. ವಿಚ್ಛೇದಿತ ಮುಸ್ಲಿಂ ಮಹಿಳೆಗೆ ಜೀವನಾಂಶ ಪಡೆಯುವ ಹಕ್ಕಿದೆ ಎಂದು ಶಾಬಾನೊ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿದ ಐತಿಹಾಸಿಕ ತೀರ್ಪನ್ನು ಮುಲ್ಲಾಗಳ ಒತ್ತಡಕ್ಕೆ ಮಣಿದು ನಿಷ್ಫಲಗೊಳಿಸಿದ್ದು ಕಾಂಗ್ರೆಸ್. ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಮುಸ್ಲಿಂ ಮಹಿಳೆಯರಿಗೆ ಸಾಂವಿಧಾನಿಕ ಹಕ್ಕುಗಳನ್ನು ಪುನಃ ದೊರಕಿಸಲು ಮಾಡುತ್ತಿರುವ ಯತ್ನದ ಹಿಂದೆ ಶಾಯರಾ ಬಾನೊ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಹೇಳಿದ ಕೆಲವು ಮಹತ್ವದ ಮಾತುಗಳ ಪ್ರಭಾವ ಇದೆ.

ಒಂದೇ ಬಾರಿಗೆ ಮೂರು ಸಲ ತಲಾಖ್ ಎಂದು ಹೇಳಿ ವಿಚ್ಛೇದನ ನೀಡುವುದು ತಕ್ಷಣಕ್ಕೆ ಆಗುವ ಪ್ರಕ್ರಿಯೆ ಹಾಗೂ ಅದನ್ನು ಪುನಃ ಸರಿಪಡಿಸಲು ಅವಕಾಶ ಇಲ್ಲದ ಕಾರಣ, ಪತಿ– ಪತ್ನಿಯ ನಡುವೆ ರಾಜಿ ಮಾಡಿಸಲು ಅಲ್ಲಿ ಪ್ರಯತ್ನಕ್ಕೆ ಅವಕಾಶವೇ ಇಲ್ಲ ಎಂದು ನ್ಯಾಯಮೂರ್ತಿಗಳಾದ ಆರ್.ಎಫ್. ನರಿಮನ್ ಮತ್ತು ಯು.ಯು. ಲಲಿತ್ ಹೇಳಿದ್ದಾರೆ. ಹಾಗಾಗಿ, ಈ ಮಾದರಿಯ ತಲಾಖ್‌ ‍ಪದ್ಧತಿಯು ಸಂವಿಧಾನದ 14ನೇ ವಿಧಿಯಲ್ಲಿ ನೀಡಿರುವ ಮೂಲಭೂತ ಹಕ್ಕುಗಳಿಗೆ ವಿರುದ್ಧ ಎಂದು ಪರಿಗಣಿಸಬೇಕಾಗುತ್ತದೆ. 1937ರ ಕಾಯ್ದೆಯ ಸೆಕ್ಷನ್ 2 ಕೂಡ ಅಸಿಂಧು ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ.

ಸುಪ್ರೀಂ ಕೋರ್ಟ್‌ನ ಪ್ರಮುಖ ನ್ಯಾಯ ನಿರ್ಣಯಗಳ ವಿಚಾರದಲ್ಲಿ ರಾಜೀವ್ ಗಾಂಧಿ ನೇತೃತ್ವದ ಸರ್ಕಾರ 1980ರ ದಶಕದಲ್ಲಿ ಸ್ಪಂದಿಸಿದ ಬಗೆ ಮತ್ತು ಈಗ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಸ್ಪಂದಿಸುತ್ತಿರುವ ಬಗೆಯಲ್ಲಿ ನಮಗೆ ವ್ಯತ್ಯಾಸ ಕಾಣುತ್ತದೆ. ವಿಚ್ಛೇದಿತ ಮುಸ್ಲಿಂ ಮಹಿಳೆಗೆ ಪತಿಯಿಂದ ಜೀವನಾಂಶ ಪಡೆಯುವ ಹಕ್ಕು ಇದೆ ಎಂದು 80ರ ದಶಕದಲ್ಲಿ ಸುಪ್ರೀಂ ಕೋರ್ಟ್‌ ಆದೇಶ ನೀಡಿದಾಗ, ಲೋಕಸಭೆಯಲ್ಲಿ 410ಕ್ಕಿಂತ ಹೆಚ್ಚಿನ ಸಂಖ್ಯಾಬಲ ಇದ್ದರೂ ರಾಜೀವ್ ಗಾಂಧಿ ನೇತೃತ್ವದ ಸರ್ಕಾರವು ಪೊಳ್ಳು ಜಾತ್ಯತೀತವಾದವನ್ನುಹೊಡೆದೋಡಿಸುವ ಐತಿಹಾಸಿಕ ಅವಕಾಶವನ್ನು ಕೈಚೆಲ್ಲಿತು.

ಮುಸ್ಲಿಂ ಧರ್ಮಗುರುಗಳ ಒತ್ತಡಕ್ಕೆ ಮಣಿದ ರಾಜೀವ್ ಗಾಂಧಿ, ಸುಪ್ರೀಂ ಕೋರ್ಟ್‌ ತೀರ್ಪು ಅನುಷ್ಠಾನಕ್ಕೆ ಬಾರದಂತೆ ಮಾಡುವ ಕಾನೂನು ತಂದರು. ಆ ಪಕ್ಷದ ಈ ಒಂದು ತೀರ್ಮಾನ ದೇಶದ ಜಾತ್ಯತೀತ ಹಾಗೂ ಪ್ರಜಾತಾಂತ್ರಿಕ ವ್ಯವಸ್ಥೆಯಲ್ಲಿ ಎಡವಟ್ಟುಗಳನ್ನು ಸೃಷ್ಟಿಸಿತು. ಸಂವಿಧಾನದಲ್ಲಿ ಹೇಳಿರುವ ನಿಜವಾದ ಜಾತ್ಯತೀತತೆಯನ್ನು ಜಾರಿಗೆ ತರುತ್ತದೆ ಎಂಬ ಆಶಾಭಾವನೆಯಿಂದ ಜನ ಬಿಜೆಪಿಯತ್ತ ತಿರುಗುವಂತೆ ಮಾಡಿದ್ದು ಶಾಬಾನೊ ಪ್ರಕರಣ. ತ್ರಿವಳಿ ತಲಾಖ್ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪು ಜಾರಿಗೆ ತರಲು ಕಾನೂನು ಕ್ರಮಕ್ಕೆ ಮೋದಿ ನೇತೃತ್ವದ ಸರ್ಕಾರ ಮುಂದಾದ ನಂತರ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ನಡುವಿನ ವ್ಯತ್ಯಾಸ ಸ್ಪಷ್ಟವಾಗುತ್ತಿದೆ.

ರಾಜ್ಯಸಭೆಯಲ್ಲಿ ಈ ಮಸೂದೆಯ ಹಣೆಬರಹ ಏನೇ ಆಗಿರಬಹುದು. ಆದರೆ ಇದು ಕಾಂಗ್ರೆಸ್ ಸೇರಿದಂತೆ ಎಲ್ಲ ರಾಜಕೀಯ ಪಕ್ಷಗಳನ್ನು ಪರೀಕ್ಷೆಗೆ ಒಡ್ಡಲಿದೆ. ಸಂವಿಧಾನದ ಆಶಯಗಳನ್ನು ಎಲ್ಲ ಸಮುದಾಯಗಳ ವಿಚಾರದಲ್ಲೂ ಜಾರಿಗೆ ತರಲು ಹಿಂದೇಟು ಹಾಕುವ ಪಕ್ಷವನ್ನಾಗಿಯೇ ಕಾಂಗ್ರೆಸ್ಸನ್ನು ಇಂದಿಗೂ ಕಾಣಲಾಗುತ್ತಿದೆ. 2019ರಲ್ಲಿ ಅಲ್ಪಸಂಖ್ಯಾತರ ಮತ ಗಿಟ್ಟಿಸುವ ಉದ್ದೇಶದಿಂದ ಇನ್ನೂ ಅನೇಕ ಪಕ್ಷಗಳು ಇದೇ ರೀತಿ ವರ್ತಿಸುತ್ತಿವೆ. ಇದನ್ನು ಸಾಧಿಸುವ ಪ್ರಕ್ರಿಯೆಯಲ್ಲಿ ಆ ಪಕ್ಷಗಳಿಗೆ ಸುಪ್ರೀಂ ಕೋರ್ಟ್‌ ತೀರ್ಪಿಗೆ ವಿರುದ್ಧವಾಗಿ ವರ್ತಿಸಲು ಹಿಂಜರಿಕೆ ಕೂಡ ಇಲ್ಲ. ಈ ಪಕ್ಷಗಳ ಇಂತಹ ವರ್ತನೆಯೇ ರಾಷ್ಟ್ರ ಮಟ್ಟದಲ್ಲಿ ಹಾಗೂ ಅನೇಕ ರಾಜ್ಯಗಳಲ್ಲಿ ಬಿಜೆಪಿ ಪ್ರವರ್ಧಮಾನಕ್ಕೆ ಬರಲು ಮಹತ್ವದ ಕೊಡುಗೆ ನೀಡಿದೆ.

ಲೇಖಕ: ಪ್ರಸಾರ ಭಾರತಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT