ಭಾನುವಾರ, ಸೆಪ್ಟೆಂಬರ್ 20, 2020
23 °C
ಇವರನ್ನು ಕೆಲವರು ‘ಚೆನ್ನಾಗಿ ಅರಿತುಕೊಂಡಿರುವ ಅಪಾಯಕಾರಿ ಮನುಷ್ಯ’ ಎನ್ನುತ್ತಿದ್ದರು!

ಫಿರೋಜ್ ಗಾಂಧಿ: ಅಸಾಮಾನ್ಯ ಸಂಸದ

ಎ. ಸೂರ್ಯ ಪ್ರಕಾಶ್ Updated:

ಅಕ್ಷರ ಗಾತ್ರ : | |

ದೇಶದ ಪ್ರಜಾತಾಂತ್ರಿಕ ಸಂಸ್ಥೆಗಳ ಇತಿಹಾಸದ ಮೇಲೆ ಅವಲೋಕನ ನಡೆಸಿದಾಗ, ವಿರೋಧ ಪಕ್ಷಗಳ ಸಾಲಿನಲ್ಲಿ ಕುಳಿತು ಸರ್ಕಾರವನ್ನು ಮಣಿಸಲು ಶ್ರಮಿಸಿದ ಹಲವಾರು ಶಾಸಕರು, ಸಂಸದರು ಕಾಣಿಸುತ್ತಾರೆ. ಆದರೆ, ಆಡಳಿತ ಪಕ್ಷದಲ್ಲೇ ಇದ್ದು ಹಗರಣವನ್ನು ಬಯಲುಗೊಳಿಸಲು, ಸರ್ಕಾರದ ಕ್ರಿಯೆಗಳಲ್ಲಿ ಪಾರದರ್ಶಕತೆ ಹಾಗೂ ಉತ್ತರ ದಾಯಿತ್ವ ತರಲು ಸರ್ವಪ್ರಯತ್ನ ನಡೆಸಿದ ಸಂಸದರ ಸಂಖ್ಯೆ ಕಡಿಮೆ. ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಿದ, ಭಾರತದ ಮೊದಲ ಹಾಗೂ ಅತ್ಯುತ್ತಮ ತನಿಖಾ ಸಂಸದೀಯ ಪಟು ಕಾಂಗ್ರೆಸ್ಸಿನ ಫಿರೋಜ್ ಗಾಂಧಿ, ಅಂತಹ ಒಬ್ಬ ವ್ಯಕ್ತಿ. ಸೆಪ್ಟೆಂಬರ್ 12, ಅವರ ಜನ್ಮದಿನ.

ಫಿರೋಜ್ ಗಾಂಧಿ ಅವರನ್ನು ಹಲವು ಕಾರಣಗಳಿಗಾಗಿ ನೆನಪಿಸಿಕೊಳ್ಳಬೇಕು: ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದು, ಅದರಿಂದಾಗಿ ಹಲವು ಬಾರಿ ಜೈಲುವಾಸ ಅನುಭವಿಸಿದ್ದು, ಸಾರ್ವಜನಿಕ ಜೀವನದಲ್ಲಿ ನೈತಿಕ ಮೌಲ್ಯಗಳಿಗೆ ಬದ್ಧರಾಗಿದ್ದುದು, ಆಳವಾಗಿ ಅಧ್ಯಯನ ನಡೆಸುತ್ತಿದ್ದುದು, ಜವಾಹರಲಾಲ್‌ ನೆಹರೂ ಅವರ ಸಂಪುಟದಲ್ಲಿ ಹಣಕಾಸು ಸಚಿವರಾಗಿದ್ದ ಟಿ.ಟಿ. ಕೃಷ್ಣಮಾಚಾರಿ ತಮ್ಮ ಸ್ಥಾನ ಕಳೆದುಕೊಳ್ಳುವುದಕ್ಕೆ ಕಾರಣರಾಗಿದ್ದು, ಜೀವವಿಮೆ ಉದ್ಯಮದ ರಾಷ್ಟ್ರೀಕರಣ, ಸಂಸತ್ತಿನ ನಡಾವಳಿಗಳನ್ನು ವರದಿ ಮಾಡುವ ಮಾಧ್ಯಮಗಳನ್ನು ಮಾನನಷ್ಟ ಮೊಕದ್ದಮೆಗಳಿಂದ ರಕ್ಷಿಸುವ ಕಾನೂನು ಜಾರಿಗೊಳಿಸಿದ್ದು...

ಆದರೆ, ಭ್ರಷ್ಟಾಚಾರದ ವಿರುದ್ಧ ಪ್ರಾಮಾಣಿಕವಾಗಿ ಹೋರಾಟ ನಡೆಸಿದ ಇಂತಹವರ ಹೆಸರನ್ನು ಕಾಂಗ್ರೆಸ್ ಪಕ್ಷ ಉಲ್ಲೇಖಿಸುವುದೇ ಇಲ್ಲವಾದ ಕಾರಣ, ಫಿರೋಜ್ ಅವರು ಇಂದಿರಾ ಗಾಂಧಿ ಅವರ ಪತಿಯಾಗಿದ್ದರು, ಸೋನಿಯಾ ಗಾಂಧಿ ಅವರ ಮಾವ ಆಗಿದ್ದರು, ರಾಹುಲ್ ಗಾಂಧಿ ಅವರ ತಾತ ಆಗಿದ್ದರು ಎಂಬುದು ಹೊಸ ತಲೆಮಾರಿನವರಿಗೆ ಗೊತ್ತಿಲ್ಲದೆಯೂ ಇರಬಹುದು.

1920ರ ದಶಕದ ಕಡೆಯ ಭಾಗದಲ್ಲಿ, ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಫಿರೋಜ್ ಅವರಿಗೆ ಕಮಲಾ ನೆಹರೂ ಪ್ರೇರಣೆ ನೀಡಿದರು. ಹಲವು ಬಾರಿ ಜೈಲಿಗೆ ಹೋದ ಫಿರೋಜ್, ಭೂಗತ ಚಳವಳಿಯನ್ನೂ ಮುನ್ನಡೆಸಿದರು. ತಾತ್ಕಾಲಿಕ ಸಂಸತ್ತಿನ ಸದಸ್ಯರಾಗಿದ್ದ ಫಿರೋಜ್, 1952 ಹಾಗೂ 1957ರಲ್ಲಿ ಲೋಕಸಭೆಗೆ ಚುನಾಯಿತರಾಗಿದ್ದರು. ಅವರು 1955ರ ಡಿಸೆಂಬರ್‌ನಲ್ಲಿ ಲೋಕಸಭೆಯಲ್ಲಿ ಮಾಡಿದ ಮೊದಲ ಭಾಷಣವೇ ಜನಪ್ರಿಯವಾಯಿತು. ವಿಮೆ (ತಿದ್ದುಪಡಿ) ಮಸೂದೆ ಬಗ್ಗೆ ಅವರು ಮಾತನಾಡಲು ಆರಂಭಿಸಿದಾಗ, ಎಲ್ಲರೂ ಕುಳಿತು ಆಲಿಸುವಂತಾಯಿತು. ಖಾಸಗಿ ವಿಮಾ ಕಂಪನಿಗಳ ಅಕ್ರಮಗಳನ್ನು ಬಯಲುಗೊಳಿಸಿ, ವಿಮಾ ಕ್ಷೇತ್ರವನ್ನು ರಾಷ್ಟ್ರೀಕರಣಗೊಳಿಸಬೇಕು ಎಂದು ಅವರು ಎರಡು ಗಂಟೆಗಳ ಕಾಲ ವಾದಿಸಿದರು. ಇಡೀ ಸದನವನ್ನು ಮಾತಿನ ಮೂಲಕ ಹಿಡಿದಿಟ್ಟುಕೊಂಡರು.

ಖಾಸಗಿ ವಿಮಾ ಕಂಪನಿಗಳ ಕಾಲ ಮುಗಿಯಿತು ಎಂದು, ಫಿರೋಜ್ ಅವರ ಮಾತು ಮುಗಿಯುವ ವೇಳೆಗೆ ಸದನದ ಎಲ್ಲರಿಗೂ ಅನಿಸಿತ್ತು. ಫಿರೋಜ್ ಅವರ ವಾದ ಅದೆಷ್ಟು ಬಲವಾಗಿತ್ತೆಂದರೆ, ಎರಡೇ ತಿಂಗಳ ಅವಧಿಯಲ್ಲಿ ಸುಗ್ರೀವಾಜ್ಞೆ ಹೊರಡಿಸಿದ ರಾಷ್ಟ್ರಪತಿ, ವಿಮಾ ಕ್ಷೇತ್ರವನ್ನು ರಾಷ್ಟ್ರೀಕರಣಗೊಳಿಸಿದರು. ಸರ್ಕಾರವನ್ನು ಅಭಿನಂದಿಸಿದ ಫಿರೋಜ್, ‘ಕುದುರೆಯನ್ನು ನಿಯಂತ್ರಿಸಲು ಲಗಾಮು ಬೇಕು, ಆನೆಯನ್ನು ಹಿಡಿದಿಡಲು ಸರಪಳಿ ಬೇಕು’ ಎಂದಿದ್ದರು.

ಫಿರೋಜ್ ಅವರ ಆತ್ಮಕಥೆ ಬರೆದಿರುವ ತರುಣ್ ಕುಮಾರ್ ಮುಖೋ‍ಪಾಧ್ಯಾಯ ಅವರ ಪ್ರಕಾರ, ‘ಅವರ ಮೊದಲ ಭಾಷಣವೇ ಖಾಸಗಿ ವಿಮಾ ವ್ಯವಹಾರಗಳಿಗೆ ಚರಮಗೀತೆ ಆಗಿತ್ತು.’ ರಾಷ್ಟ್ರೀಕರಣದ ನಂತರ, ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಅಸ್ತಿತ್ವಕ್ಕೆ ಬಂದಿತು.

ಹಣಕಾಸು ಸಚಿವಾಲಯದಲ್ಲಿ ಹಗರಣ ನಡೆದಿದೆ ಎಂಬ ಸುಳಿವು ಫಿರೋಜ್ ಅವರಿಗೆ 1957ರ ಉತ್ತರಾರ್ಧ ದಲ್ಲಿ ದೊರೆಯಿತು. ಕಾಂಗ್ರೆಸ್ ಪಕ್ಷಕ್ಕೆ ಹತ್ತಿರವಾಗಿದ್ದ ಉದ್ಯಮಿ ಎಚ್.ಡಿ. ಮುಂದ್ರಾ ಮಾಲೀಕತ್ವದ ಕಂಪನಿಗಳ ಷೇರುಗಳನ್ನು ಹೆಚ್ಚಿನ ಬೆಲೆಗೆ ಎಲ್‌ಐಸಿ ಖರೀದಿಸಿದೆ ಎಂಬುದು ಫಿರೋಜ್‌ ಅವರಿಗೆ ಗೊತ್ತಾಯಿತು. ಸದನದಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಮಧ್ಯಪ್ರವೇಶಿಸಿದ ಫಿರೋಜ್, ಈ ವಿಚಾರವಾಗಿ ವಿಶೇಷ ಚರ್ಚೆಯಾಗಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಹಣಕಾಸು ಸಚಿವರು ಪ್ರಾಮಾ ಣಿಕವಲ್ಲದ ಉತ್ತರ ನೀಡಿದರು. ಆದರೆ, ಫಿರೋಜ್ ಪಟ್ಟು ಬಿಡಲಿಲ್ಲ. ಚರ್ಚೆಯನ್ನು ಆರಂಭಿಸಿದ ಫಿರೋಜ್, ‘ನನ್ನ ಮನಸ್ಸಿನೊಳಗೆ ಎದ್ದಿರುವ ಬಂಡಾಯವೊಂದು ಈ ಚರ್ಚೆ ಎತ್ತುವಂತೆ ಮಾಡಿದೆ. ಇಷ್ಟು ದೊಡ್ಡ ವಿದ್ಯಮಾನ ನಡೆದಾಗ– ಅದೇನು ಎಂಬುದನ್ನು ಮುಂದೆ ಹೇಳುವೆ– ಮೌನವಾಗಿರುವುದು ಅಪರಾಧವಾಗುತ್ತದೆ’ ಎಂದರು.

ಕಾಂಗ್ರೆಸ್ಸಿನ ಚುನಾವಣಾ ಅಭಿಯಾನಕ್ಕೆ ದೇಣಿಗೆ ನೀಡಿದ್ದ ಉದ್ಯಮಿ ಮುಂದ್ರಾ ಅವರು ಹಣಕಾಸಿನ ಸಮಸ್ಯೆಗೆ ಸಿಲುಕಿದ್ದರು. ನೆಹರೂ ನೇತೃತ್ವದ ಸರ್ಕಾರ ತಮ್ಮ ಸಹಾಯಕ್ಕೆ ಬರಲಿ ಎಂದು ಬಯಸಿದರು. ತಮ್ಮ ಕೆಲವು ಕಂಪನಿಗಳ ಷೇರುಗಳಲ್ಲಿ ಸರ್ಕಾರ ₹ 1 ಕೋಟಿ ಹೂಡಿಕೆ ಮಾಡಲಿ ಎಂದು ಸರ್ಕಾರವನ್ನು ಕೇಳಿದರು. ಸರ್ಕಾರವು ಎಲ್‌ಐಸಿ ಮೂಲಕ ಈ ಕೆಲಸ ಮಾಡಲು ಒಪ್ಪಿತು. ಮಾತುಕತೆಗಳು ನಡೆಯುತ್ತಿದ್ದ ಹೊತ್ತಿನಲ್ಲಿ, ಮುಂದ್ರಾ ತಮ್ಮ ಕಂಪನಿಯ ಷೇರುಗಳನ್ನು ಕಲ್ಕತ್ತಾ ಷೇರು ಮಾರುಕಟ್ಟೆಗೆ ತಂದು, ಅವುಗಳ ಬೆಲೆಯನ್ನು ಕೃತಕವಾಗಿ ಹೆಚ್ಚಿಸಿದರು. ಮಾರುಕಟ್ಟೆಯನ್ನು ಎಲ್‌ಐಸಿ ಪ್ರವೇಶಿಸಿದಾಗ, ಮುಂದ್ರಾ ಅವರು ಸರ್ಕಾರದ ಬಳಿ ಸಹಾಯ ಕೇಳಿದಾಗ, ಇದ್ದ ಬೆಲೆಗಿಂತ ಹೆಚ್ಚಿನ ಬೆಲೆ ಕೊಟ್ಟು ಷೇರುಗಳನ್ನು ಖರೀದಿಸುವಂತಾಯಿತು. ಇದು ‘ಎಲ್‌ಐಸಿ– ಮುಂದ್ರಾ ಹಗರಣ’.

ಫಿರೋಜ್ ಅವರು ತಮ್ಮ ಅಸಾಮಾನ್ಯ ತನಿಖಾ ಕೌಶಲವನ್ನು ಬಳಸಿ, ಮುಂದ್ರಾ ಕಂಪನಿಯ ಷೇರುಗಳ ಬೆಲೆಯಲ್ಲಿ ಹದಿನೈದು ದಿನಗಳಲ್ಲಿ ಏನಾಗಿದೆ ಎಂಬುದನ್ನು ಗುರುತಿಸಿದರು. ಎಲ್‌ಐಸಿ ತನ್ನ ಹೂಡಿಕೆ ಪ್ರಮಾಣ ಹೆಚ್ಚಿಸಿಕೊಳ್ಳಲು ಈ ಷೇರುಗಳನ್ನು ಖರೀದಿಸಿದೆ ಎಂದು ಹಣಕಾಸು ಸಚಿವ ಕೃಷ್ಣಮಾಚಾರಿ ಅವರು ಷೇರು ಖರೀದಿಯನ್ನು ಸಮರ್ಥಿಸಿಕೊಳ್ಳಲು ಯತ್ನಿಸಿದರು. ಆದರೆ ಇದರಿಂದ ಫಿರೋಜ್ ಅವರಿಗೆ ಸಮಾಧಾನ ಆಗಲಿಲ್ಲ. ‘ಷೇರುಗಳನ್ನು ಹೆಚ್ಚಿನ ಬೆಲೆಗೆ ಖರೀದಿಸಿದ್ದು ಏಕೆ? ಸಾರ್ವಜನಿಕರ ಹಣವನ್ನು ಹೀಗೆ ಹಾಳುಮಾಡುವುದು ಎಷ್ಟು ಸರಿ’ ಎಂದು ಫಿರೋಜ್ ಪ್ರಶ್ನಿಸಿದರು. ಷೇರುಗಳ ಬೆಲೆ ಎಲ್‌ಐಸಿಯು ಖರೀದಿಸಿದ ನಂತರ ಕುಸಿದಿದೆ ಎಂಬುದನ್ನು ತೋರಿಸಿದರು. ಸರ್ಕಾರದಿಂದ ಸಮರ್ಥ ಉತ್ತರ ಬರಲಿಲ್ಲ. ನೆಹರೂ ಅವರು ಇದರ ಬಗ್ಗೆ ವಿಚಾರಣಾ ಆಯೋಗವನ್ನು ನೇಮಿಸುವಂತೆ ಆಯಿತು, ಕೃಷ್ಣಮಾಚಾರಿ ಅವರು ಈ ಪ್ರಶ್ನಾರ್ಹ ತೀರ್ಮಾನಕ್ಕೆ ನೈತಿಕವಾಗಿ ಹೊಣೆಗಾರರು ಎಂದು ಅದು ಹೇಳಿತು, ಅಂತಿಮವಾಗಿ ಕೃಷ್ಣಮಾಚಾರಿ ರಾಜೀನಾಮೆ ನೀಡ ಬೇಕಾಯಿತು.

ಫಿರೋಜ್ ಅವರ ಸಾಧನೆಗಳು ಇನ್ನೂ ಇವೆ. ಸಂಸತ್ತಿ ನಲ್ಲಿ ಮುಕ್ತವಾಗಿ ಮಾತನಾಡುವ ಸ್ವಾತಂತ್ರ್ಯ ಸಂಸದರಿಗೆ ಇದೆ. ಆದರೆ, ಸಂಸತ್ತಿನಲ್ಲಿ ನಡೆದಿದ್ದನ್ನು ವರದಿ ಮಾಡುವ ಪತ್ರಕರ್ತರು ಮಾನನಷ್ಟ ಮೊಕದ್ದಮೆ ಎದುರಿಸಬೇಕಾಗಿದೆ ಎಂದು ಪತ್ರಕರ್ತರು ಫಿರೋಜ್ ಅವರಲ್ಲಿ ಹೇಳಿದರು. ಪ್ರಜಾತಂತ್ರ ಹಾಗೂ ಪತ್ರಿಕಾ ಸ್ವಾತಂತ್ರ್ಯದ ಬಗ್ಗೆ ಆಳವಾದ ಬದ್ಧತೆ ಹೊಂದಿದ್ದ ಫಿರೋಜ್, ಸಂಸತ್ತಿನ ನಡಾವಳಿಗಳನ್ನು ವರದಿ ಮಾಡುವವರಿಗೆ ಅಡಚಣೆ ಆಗಬಾರದು ಎಂಬ ನಿಲುವು ತಳೆದರು. ‘ಸಂಸದೀಯ ನಡಾವಳಿಗಳ (ಪ್ರಕಟಣೆಗಳಿಗೆ ರಕ್ಷಣೆ) ಮಸೂದೆ’ಯನ್ನು ಮಂಡಿಸಿದರು. ಈ ಮಸೂದೆಯು ಎರಡೂ ಸದನಗಳಲ್ಲಿ ಅಂಗೀಕಾರ ಆಗುವಂತೆ ಸರ್ಕಾರ ಕೂಡ ನೋಡಿಕೊಂಡಿತು.

ಫಿರೋಜ್ ಅವರಲ್ಲಿನ ಒಳ್ಳೆಯ ಗುಣಗಳು ಹಲವು. ಪ್ರಜಾತಂತ್ರದ ಬಗ್ಗೆ ಇದ್ದ ಬದ್ಧತೆ, ಕೆಲಸಗಳ ವಿಚಾರದಲ್ಲಿ ಪೂರ್ವಸಿದ್ಧತೆ ನಡೆಸುತ್ತಿದ್ದುದು, ಸಂಸದೀಯ ಕೌಶಲಗಳು ಅವುಗಳಲ್ಲಿ ಕೆಲವು. ಹೀಗಾಗಿ ಫಿರೋಜ್ ಅವರನ್ನು ಕೆಲವು ಸಂಸದರು, ‘ಚೆನ್ನಾಗಿ ಅರಿತುಕೊಂಡಿರುವ ಅಪಾಯಕಾರಿ ಮನುಷ್ಯ’ ಎಂದು ಬಣ್ಣಿಸುತ್ತಿದ್ದರು.

ಲೇಖಕ: ಪ್ರಸಾರ ಭಾರತಿ ಅಧ್ಯಕ್ಷ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು