ಶುಕ್ರವಾರ, ಮಾರ್ಚ್ 5, 2021
24 °C

ತಮಿಳು ಪಂಚಾಂಗವೇ ಹೆಚ್ಚು ಸ್ಟ್ರಾಂಗು!

ಸುಮಂಗಲಾ Updated:

ಅಕ್ಷರ ಗಾತ್ರ : | |

ಯಶೋದಕ್ಕ ಇತ್ತೀಚೆಗೆ ಗುಜರಾತಿ ಪೇಪರುಗಳನ್ನು ಹೆಚ್ಚಾಗಿ ಓದುತ್ತಿರಲಿಲ್ಲ. ‘ಏನಿರುತ್ತೆ, ಮಣ್ಣಾಂಗಟ್ಟಿ, ಇಂಗ್ಲೀಷು ಪೇಪರ್‍ರೇ ಸರಿ, ನಟಭಯಂಕರ ಮತ್ತವರ ಭೋಪರಾಕು ಪರಿವಾರದವರ ಆಟೋಪಗಳ ವರ್ಣನೆ ಎಷ್ಟ್ ಚೆನ್ನಾಗಿರುತ್ತೆ’ ಎನ್ನಿಸಿತ್ತವರಿಗೆ. ಅದರಲ್ಲೂ ಕರ್ನಾಟಕದ ಸುದ್ದಿಗಳನ್ನು ಹೆಕ್ಕಿಹೆಕ್ಕಿ ಓದಿ ಮುದಗೊಳ್ಳುತ್ತಿದ್ದರು.

ಆ ದಿನ ಕಣ್ಣು ಕುಕ್ಕಿದ ಸಾಲು ‘ಮುಸ್ಲಿಂ ಹೆಂಗಸಿನ ಹಿಂದೆ ಓಡಿಹೋದವ ಮಾಡಿದ ಸಾಧನೆಯೇನು’ ಎಂದು ಸಂಸ್ಕೃತಿಹೆಡಿಗೆಎಂದು ಹೆಸರಾದ ಸಚಿವರೊಬ್ಬರ ಹೇಳಿಕೆ. ‘ಅಲ್ಲವೇ ಮತ್ತೆ... ನಮ್ಮ ಹುಡುಗಿಯರೇನು ರನ್ನಿಂಗ್ ರೇಸಿನಲ್ಲಿ ಹಿಂದುಳಿದವರೇ? ಹಿಂದೂ ಹುಡುಗಿಯನ್ನು ಕಟ್ಟಿಕೊಂಡು ಓಡುವುದಲ್ಲವೇ?’ ಅಂದುಕೊಂಡ ಯಶೋದಕ್ಕನಿಗೆ ಮರುಕ್ಷಣವೇ ಕಣ್ಣು ಮಂಜಾಯಿತು. ಮುಸ್ಲಿಂ ಹೆಂಗಸಿನ ಹಿಂದೆ ಓಡಿಹೋದ ವ್ಯಕ್ತಿಯೇನೋ ಮದುವೆಯಾಗಿ ಶಾನೆ ಚೆನ್ನಾಗಿಯೇ ಸಂಸಾರ ಮಾಡಿಕೊಂಡಿದ್ದಾನೆ. ಆದರೆ ಹಿಂದೂ ಹೆಂಗಸನ್ನೇ ಅಗದಿ ಸಂಸ್ಕೃತಿ ಒಪ್ಪುವಂತೆ ಮದುವೆಯಾಗಿ, ಸೋಡಚೀಟಿಯನ್ನೂ ಕೊಡದೆ ದೂರದ ದಿಲ್ಲಿಗೆ ಓಡಿಹೋದವರು ಮಾಡಿದ ಸಾಧನೆಯೇನಪ್ಪ ಎಂದು ಮನಸ್ಸಲ್ಲೇ ಹೇಳಿಕೊಂಡರು.

ನಾಲ್ಕಾರು ದಿನದ ನಂತರ ಕಣ್ಣಿಗೆ ಬಿದ್ದ ಸುದ್ದಿ, ತಮಿಳುನಾಡಿನ ಪಂಚಾಂಗ ನೋಡಿ ಮೈತ್ರಿ ಸರ್ಕಾರದ ಭವಿಷ್ಯ ಹೇಳುವೆನೆಂದ ಕುಮಾರಣ್ಣನಣ್ಣನ ಹೇಳಿಕೆ. ಜೊತೆಗೆ ಸದ್ಯಕ್ಕೆ ಕಮಲಕ್ಕನ ಆಪರೇಷನ್ನು ಬೇಡವೆಂದು ಪಂಚಾಂಗ ಹೂ ಉದುರಿಸಿದೆಯಂತೆ. ಅಂದರೆ ಮೈತ್ರಿಗೂ, ಮೈತ್ರಿ ಮುರಿಯಲೂ ಈ ಪಂಚಾಂಗವೇ ಸರಿ. ‘ಅಮ್ಮ’ನಿಲ್ಲದ ತಮಿಳುನಾಡಿನ ಪಂಚಾಂಗ ಈಗಲೂ ಈ ಪರಿ ಸ್ಟ್ರಾಂಗಿರುತ್ತಾ ಎಂದುಕೊಂಡ ಯಶೋದಕ್ಕನಿಗೆ ತಾನೂ ಆ ಪಂಚಾಂಗ ನೋಡಿಯೇ ಬಿಡಬೇಕೆನ್ನಿಸಿತು. ಈ ಸಲ ನಟಭಯಂಕರರು ಗೆದ್ದರೆ, ಆಗಲಾದರೂ ನಂ.ಏಳು, ರೇಸ್‍ಕೋರ್ಸ್ ಭವನಕ್ಕೆ ಕಾಲಿಡಲು ತನ್ನನ್ನು ಕರೆಯಬಹುದೇ ಎಂದು ಬರೆದಿರಬಹುದೇನೋ ನೋಡುವ ಎಂಬಾಸೆಯನ್ನು ಜೀಕುತ್ತ ಯಶೋದಕ್ಕ ಆನ್‍ಲೈನಿನಲ್ಲಿ ತಮಿಳು ಪಂಚಾಂಗದ ಗುಜರಾತಿ ಅಥವಾ ಇಂಗ್ಲೀಷು ಆವೃತ್ತಿ ಸಿಗುತ್ತದೆಯೇ ಎಂದು ಹುಡುಕತೊಡಗಿದರು!

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು