ಶುಕ್ರವಾರ, 1 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ಅತ್ಯಾಚಾರಿಗಳ ಸನ್ನಡತೆ’ಯ ಬಿಡುಗಡೆ: ಸನ್ನಡೆಯೇ?

ಘೋರ ಕೃತ್ಯದ ಅಪರಾಧಿಗಳ ಬಿಡುಗಡೆಯು ದೇಶದ ಸಾಕ್ಷಿಪ್ರಜ್ಞೆಗೆ ಆಘಾತ ಉಂಟುಮಾಡಿದೆ
Last Updated 24 ಆಗಸ್ಟ್ 2022, 19:45 IST
ಅಕ್ಷರ ಗಾತ್ರ

2002ರಲ್ಲಿ ಸಾಬರಮತಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಕರಸೇವಕರ ಭೀಕರ ಹತ್ಯೆಯ ಬಳಿಕ, ಗುಜರಾತ್‍ನಲ್ಲಿ ಭುಗಿಲೆದ್ದು ವ್ಯಾಪಿಸಿದ ಹಿಂಸಾಚಾರದಲ್ಲಿ ಸೇಡಿನ ರೋಷಕ್ಕೆ ಬಲಿಯಾಗಿ, ಅತ್ಯಾಚಾರಕ್ಕೆ ಒಳಗಾದವಳು ಬಿಲ್ಕಿಸ್ ಬಾನು ಎಂಬ ಹೆಣ್ಣುಮಗಳು. ಆಕೆ ಏಳು ತಿಂಗಳ ಗರ್ಭಿಣಿ ಎಂಬುದನ್ನೂ ಕಡೆಗಣಿಸಿ ಆಕೆಯ ಮೇಲೆ ಅತ್ಯಾಚಾರ ಎಸಗಲಾಯಿತು. ಆಕೆಯ ಎದುರಿಗೇ ಆಕೆಯ ಮೂರು ವರ್ಷದ ಮಗುವಿನ ತಲೆಯನ್ನು ಕಲ್ಲಿನಿಂದ ಜಜ್ಜಿ ಕೊಂದು, ಅವಳ ಕುಟುಂಬದವರನ್ನೂ ಸಾಯಿಸಲಾಯಿತು.

ಇಷ್ಟೆಲ್ಲ ಭೀಕರ ಕೃತ್ಯಗಳ ನಡುವೆ ಎದೆಗುಂದದೆ ನ್ಯಾಯಾಲಯದ ಮೆಟ್ಟಿಲೇರಿ, ನ್ಯಾಯದ ಹಾದಿಯಲ್ಲಿನ ಅನೇಕ ಎಡರುತೊಡರುಗಳನ್ನು ದಾಟಿ ನ್ಯಾಯ ದೊರಕಿಸಿಕೊಂಡವಳು ಬಿಲ್ಕಿಸ್ ಬಾನು. ಆಕೆಯ ಮೇಲೆ ಅತ್ಯಾಚಾರ ಎಸಗಿದವರಿಗೆ ಶಿಕ್ಷೆಯಾದದ್ದು 2008ರಲ್ಲಿ. ಈ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾದವರು ಹನ್ನೊಂದು ಮಂದಿ. ಇತ್ತೀಚೆಗೆ ಈ ಎಲ್ಲರನ್ನೂ ‘ಸನ್ನಡತೆ’ಯ ಆಧಾರದ ಮೇಲೆ ಜೈಲಿನಿಂದ ಬಿಡುಗಡೆಗೊಳಿಸಲಾಗಿದೆ. ಗುಜರಾತ್ ಸರ್ಕಾರದ ಈ ನಡೆ ರಾಷ್ಟ್ರದಾದ್ಯಂತ ವ್ಯಾಪಕ ಟೀಕೆಗೆ ಗುರಿಯಾಗಿದೆ. ಸ್ವತಂತ್ರ ಭಾರತದ ನ್ಯಾಯಾಂಗ ವ್ಯವಸ್ಥೆಯ ಮೇಲೆ ನಂಬಿಕೆ ಇಟ್ಟಿರುವ ನಾಗರಿಕರಿಗೆ, ಪ್ರಜ್ಞಾವಂತರಿಗೆ, ದೇಶದ ಸಾಕ್ಷಿಪ್ರಜ್ಞೆಗೆ, ಅತ್ಯಂತ ಘೋರ ಅಪರಾಧ ಎಸಗಿದವರ ಈ ಬಿಡುಗಡೆ ಆಘಾತ ಉಂಟುಮಾಡಿದೆ.

ಸುಪ್ರೀಂ ಕೋರ್ಟ್‌, ಬಾನು ಅತ್ಯಾಚಾರ ಪ್ರಕರಣದ ವಿಚಾರಣೆಯನ್ನು ‌ಸಿಬಿಐಗೆವಹಿಸಿತು. ಈ ಪ್ರಕರಣದ 19 ಆರೋಪಿಗಳನ್ನು 2004ರಲ್ಲಿ ಬಂಧಿಸಲಾಯಿತು. ಅಹಮದಾಬಾದಿನಲ್ಲೇ ವಿಚಾರಣೆ ನಡೆದರೆ, ಸಿಬಿಐ ಸಂಗ್ರಹಿಸಿದ ಸಾಕ್ಷ್ಯವನ್ನು ಆರೋಪಿಗಳು ಪ್ರಭಾವ ಬಳಸಿ ನಾಶಪಡಿಸಬಹುದು ಎಂದು ಬಾನು ಅಂಜಿಕೆ ವ್ಯಕ್ತಪಡಿಸಿದ್ದರಿಂದ ಮತ್ತು ಆಕೆಗೆ ಅಲ್ಲಿ ಜೀವಬೆದರಿಕೆ ಇದ್ದುದರಿಂದ, ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಮುಂಬೈಗೆ ಸ್ಥಳಾಂತರಿಸಿತು. 2008ರ ಜನವರಿ 21ರಂದು, ಅತ್ಯಾಚಾರ ಹಾಗೂ ಹತ್ಯೆ ಮತ್ತು ಕಾನೂನು ಬಾಹಿರವಾಗಿ ಗುಂಪುಗೂಡಿದ ಅಪರಾಧಕ್ಕಾಗಿ 11 ಮಂದಿಗೆ ಸಿಬಿಐವಿಶೇಷ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿತು. ಅಲ್ಲಿನ ಹೈಕೋರ್ಟ್‌ ಈ ತೀರ್ಪನ್ನು ಎತ್ತಿಹಿಡಿಯಿತು.

ಅತ್ಯಾಚಾರ ಅತ್ಯಂತ ಘೋರ, ಅದು ಮಾನವತೆಯ ಮೇಲೆ ಎಸಗಿದ ಅಪರಾಧ, ಅವರಿಗೆ ಮರಣ
ದಂಡನೆಯೊಂದೇ ಸೂಕ್ತವಾದ ಶಿಕ್ಷೆ. ಇದು, 2012ರಲ್ಲಿ ನಿರ್ಭಯಾ ಪ್ರಕರಣದಲ್ಲಿ ದೇಶದಾದ್ಯಂತ ಅನುರಣಿಸಿದ ಆಕ್ರೋಶ. ಅತ್ಯಾಚಾರದಂಥ ಘೋರ ಕೃತ್ಯವನ್ನು ಎಸಗಬಲ್ಲ ವ್ಯಕ್ತಿ ಸಮಾಜಕ್ಕೆ ಕಂಟಕ ಎಂಬುದು ಇದರ ಹಿಂದಿನ ತರ್ಕ. ಆದರೆ ‘ಸನ್ನಡತೆ’ ಎಂಬುದೇ ಅಣಕವಾಗಿರುವ, ಅತ್ಯಾಚಾರದಂಥ ‘ನಡತೆಗೆಟ್ಟ’ ಪ್ರಕರಣದಲ್ಲಿ, ‘ಸನ್ನಡತೆ’ಯ ಆಧಾರದ ಮೇಲೆ ಅತ್ಯಾಚಾರಿಯನ್ನು ಬಿಡುಗಡೆ ಮಾಡಿರುವುದು ನ್ಯಾಯದ ಅಣಕವೆಂದೇ ಹೇಳಬೇಕು.

‘ಸನ್ನಡತೆಯ ಆಧಾರದ ಮೇಲೆ ಬಿಡುಗಡೆಗೊಳ್ಳುವುದು ಸನ್ನಡತೆಯುಳ್ಳ ಅಪರಾಧಿಯ ಹಕ್ಕಲ್ಲ. ಅದು ಕಾರ್ಯಾಂಗ ತನ್ನ ವಿವೇಚನಾನುಸಾರ, ನಿಯಮಗಳಿಗೆ ಒಳಪಟ್ಟು ಕೈಗೊಳ್ಳುವ ಕ್ರಮ’ ಎಂದು ಸುಪ್ರೀಂ ಕೋರ್ಟ್‌ ಒಂದು ಪ್ರಕರಣದಲ್ಲಿ ಅಭಿಪ್ರಾಯಪಟ್ಟಿದೆ (ಹರಿಯಾಣ ಸರ್ಕಾರ ಮತ್ತು ಮಹೇಂದರ್ ಸಿಂಗ್ ನಡುವಿನ ಪ್ರಕರಣ). ಇದರ ಉದ್ದೇಶ, ಅಪರಾಧಿಕ ನ್ಯಾಯ ವ್ಯವಸ್ಥೆಯ ಸುಧಾರಣೆ ಮತ್ತು ಮಾನವ ಹಕ್ಕುಗಳ ರಕ್ಷಣೆ. ‘ಸೆರೆಮನೆ’ ವಿಷಯ ಭಾರತ ಸಂವಿಧಾನದ ಏಳನೇ ವಿಧಿಯಲ್ಲಿ ‘ರಾಜ್ಯ ಪಟ್ಟಿ’ಯ ಅಡಿಯಲ್ಲಿ ಬರುವುದರಿಂದ, ಸೆರೆಮನೆಗಳ ನಿರ್ವಹಣೆ ಮತ್ತು ಆಡಳಿತವು ಆಯಾ ರಾಜ್ಯ ಸರ್ಕಾರದ ಜವಾಬ್ದಾರಿ. ಆದ್ದರಿಂದ, ಯಾವುದೇ ಅಪರಾಧಿಯ ಶಿಕ್ಷೆಯನ್ನು ಕಡಿತಗೊಳಿಸುವುದಕ್ಕೆ ರಾಜ್ಯ ಸರ್ಕಾರಕ್ಕೆ ಅಧಿಕಾರವಿದ್ದರೂ ಅದು ಕೈಗೊಳ್ಳುವ ನಿರ್ಧಾರ ವಿವೇಚನೆಯಿಂದ ಕೂಡಿರಬೇಕು ಎಂಬುದರಲ್ಲಿ ಭಿನ್ನಾಭಿಪ್ರಾಯವಿಲ್ಲ.

ಈ ಅತ್ಯಾಚಾರದ ಅಪರಾಧಿಗಳ ಪೈಕಿ ಒಬ್ಬ ಅಪರಾಧಿಯು ಅವಧಿಗೆ ಮುನ್ನ ತನ್ನನ್ನು ಬಿಡುಗಡೆ ಮಾಡಬೇಕೆಂದು ಕೋರಿ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದ್ದ. ಈ ಮನವಿಯನ್ನು ಪರಿಶೀಲಿಸುವಂತೆ ನ್ಯಾಯಾಲಯವು ಗುಜರಾತ್ ಸರ್ಕಾರಕ್ಕೆ ನಿರ್ದೇಶಿಸಿತು. ಅದರಂತೆ ಗುಜರಾತ್ ಸರ್ಕಾರ ಒಂದು ಸಮಿತಿಯನ್ನು ರಚಿಸಿತು. ಸಮಿತಿ ಮಾಡಿದ ಸರ್ವಾನುಮತದ ನಿರ್ಣಯದಂತೆ, ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಎಲ್ಲ 11 ಅಪರಾಧಿಗಳನ್ನು ಬಿಡುಗಡೆ ಮಾಡಿದೆ. ಕೇಂದ್ರ ಸರ್ಕಾರವು 2014ರಲ್ಲಿ ಹೊರಡಿಸಿರುವ ಪರಿಷ್ಕೃತ ಬಿಡುಗಡೆ ನೀತಿಯ ಪ್ರಕಾರ, ಅತ್ಯಾಚಾರ ಮತ್ತು ಕೊಲೆ ಕಾರಣಗಳಿಗಾಗಿ ಶಿಕ್ಷೆಗೆ ಒಳಗಾಗಿರುವ ಅಪರಾಧಿಗಳು ಅವಧಿಪೂರ್ವ ಬಿಡುಗಡೆಗೆ ಅನರ್ಹರು. ಈ ನೀತಿಯನ್ನು ಅನ್ವಯಿಸಿದ್ದರೆ, ಎಲ್ಲ ಹನ್ನೊಂದು ಮಂದಿ ಅಪರಾಧಿಗಳೂ ಬಿಡುಗಡೆಗೆ ಅನರ್ಹರಾಗುತ್ತಿದ್ದರು. ಆದರೆ, ಅದರ ಬದಲಿಗೆ, ಗುಜರಾತ್‌ನಲ್ಲಿ 1992ರಿಂದ ಜಾರಿಯಲ್ಲಿರುವ ‘ಬಿಡುಗಡೆ ನೀತಿ’ಯನ್ನು ಅನುಸರಿಸಲಾಗಿದೆ
ಎಂದು ವರದಿಯಾಗಿದೆ.

‘ಅಪರಾಧಿಗಳು ಶಿಕ್ಷೆಗೆ ಗುರಿಯಾದಾಗ ಚಾಲ್ತಿ ಯಲ್ಲಿದ್ದುದು 1992ರ ನೀತಿ’ ಎಂಬುದು ತನ್ನ ನಿರ್ಧಾರಕ್ಕೆ ಗುಜರಾತ್ ಸರ್ಕಾರ ನೀಡಿರುವ ಕಾರಣ. ಪರಿಣಾಮವಾಗಿ, ಜೈಲಿನಲ್ಲಿದ್ದ ಈ ಎಲ್ಲ ಅಪರಾಧಿಗಳೂ ಸರ್ಕಾರದ ಕೃಪೆಯಿಂದ ಗೋಧ್ರಾ ಉಪ ಕಾರಾಗೃಹದಿಂದ ಹೊರಬಂದು ಸ್ವಾತಂತ್ರ್ಯೋತ್ಸವದ ದಿನದಂದು ಸ್ವಾತಂತ್ರ್ಯದ ಗಾಳಿ ಸೇವಿಸಿದರು! ಆದರೆ, ಬಿಲ್ಕಿಸ್‌ ಬಾನು ಪ್ರಕರಣದಲ್ಲಿಯೇ, ಬಿಡುಗಡೆಯಾದ ಅಪರಾಧಿಗಳಿಗಿಂತ ಕಡಿಮೆ ಹೇಯ ಕೃತ್ಯಕ್ಕಾಗಿ ಬಂಧಿತರಾಗಿ ಶಿಕ್ಷೆ ಅನುಭವಿಸುತ್ತಿರುವವರು ಇನ್ನೂ ಜೈಲಿನಲ್ಲಿಯೇ ಇದ್ದಾರೆ.

ಬಿಡುಗಡೆಯ ಮನವಿ ಪರಿಶೀಲನೆಗೆ ಗುಜರಾತ್ ಸರ್ಕಾರ ನೇಮಿಸಿದ್ದ ಸಮಿತಿಯಲ್ಲಿ ಇಬ್ಬರು ಬಿಜೆಪಿ ಶಾಸಕರು ಹಾಗೂ ಬಿಜೆಪಿ ಬಗ್ಗೆ ಒಲವಿರುವ ಮೂವರು ಕಾರ್ಯಕರ್ತರಿದ್ದರು ಎಂಬ ಆರೋಪ ಇಡೀ ಬಿಡುಗಡೆಯ ಪ್ರಹಸನಕ್ಕೆ ರಾಜಕೀಯ ಬಣ್ಣ ಲೇಪಿಸಿದೆ.

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಆಚರಣೆಯ ಸಂದರ್ಭದಲ್ಲಿ, ಬೆಳಿಗ್ಗೆ ಕೆಂಪು ಕೋಟೆಯ ವೇದಿಕೆಯಲ್ಲಿ ಪ್ರಧಾನಮಂತ್ರಿಯವರು ತ್ರಿವರ್ಣ ಧ್ವಜವನ್ನು ಹಾರಿಸಿ ದೇಶವನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ, ‘ನಮ್ಮ ವರ್ತನೆಯಲ್ಲಿ, ನಮ್ಮ ಸಂಸ್ಕೃತಿಯಲ್ಲಿ ಮತ್ತು ದಿನನಿತ್ಯದ ಜೀವನದಲ್ಲಿ ಮಹಿಳೆಯರಿಗೆ ಅವಮಾನ ಉಂಟು ಮಾಡುವಂಥ ಹಾಗೂ ಅವರ ಘನತೆಗೆ ಕುಂದು ತರುವಂಥ ಪ್ರತಿಯೊಂದನ್ನೂ ನಾವು ತ್ಯಜಿಸುತ್ತೇವೆ ಎಂಬ ಪ್ರತಿಜ್ಞೆಯನ್ನು ನಾವು ಮಾಡಲಾರೆವೇ’ ಎಂದು ಕೇಳುವ ಮೂಲಕ ದೇಶದ ಪ್ರತೀ ಪ್ರಜೆಯ ಆತ್ಮಸಾಕ್ಷಿಯನ್ನು ತಟ್ಟಿದರು. ವಿಪರ್ಯಾಸವೆಂದರೆ, ಮಹಿಳೆಯ ಘನತೆಗೆ ಕುಂದು ತರುವಂಥ, ಮಹಿಳೆಯ ಮೇಲೆ ಎಸಗಿದ ಅತ್ಯಾಚಾರದಂಥ ಹೇಯ ಅಪರಾಧ ಮಾಡಿದುದಕ್ಕಾಗಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಈ ಅಪರಾಧಿಗಳು ಬಿಡುಗಡೆಯಾದದ್ದೂ ಅದೇ ದಿನ! ಇದನ್ನು ಹೇಗೆಂದು ಅರ್ಥೈಸಬೇಕು?

ಈ ಕ್ರಮವನ್ನು ಸಮರ್ಥಿಸಿಕೊಳ್ಳುವವರು ನೀಡುವ ಕಾರಣ, ಅವರಿಗೆ ಶಿಕ್ಷೆ ವಿಧಿಸಿದಾಗ ಜಾರಿಯಲ್ಲಿದ್ದುದು ‘1992ರ ಬಿಡುಗಡೆ ನೀತಿ’ ಮತ್ತು ಅದರ ಪ್ರಕಾರ ಈ ಅಪರಾಧಿಗಳ ಬಿಡುಗಡೆಗೆ ಅವಕಾಶವಿತ್ತು ಎಂಬುದು. ಆದರೆ ಯಾವುದೇ ಕಾನೂನನ್ನು ಅನ್ವಯಿಸುವಾಗ, ಅದನ್ನು ಅಕ್ಷರಶಃ ಪಾಲಿಸಬೇಕೋ ಅಥವಾ ಕಾನೂನಿನ ಉದ್ದೇಶವನ್ನು ಈಡೇರಿಸುವ ದಿಸೆಯಲ್ಲಿ ಅದನ್ನು ಅರ್ಥೈಸಬೇಕೋ ಎಂಬುದನ್ನು ವಿವೇಚನೆಯಿಂದ ನಿರ್ಧರಿಸಬೇಕು. ವಿವೇಚನೆ ಬಳಕೆಯಾಗದಿದ್ದಾಗ ನ್ಯಾಯ ಸೋಲುತ್ತದೆ. ಆದರೆ ಅನ್ಯಾಯಕ್ಕೆ ಮೂಕಸಾಕ್ಷಿ
ಗಳಾಗಿರುವುದು ಸರ್ವಥಾ ತಪ್ಪು.

ಅನೇಕ ಮಹಿಳಾ ಸಂಘಟನೆಗಳು, 6000ಕ್ಕೂ ಹೆಚ್ಚು ಮಹಿಳಾ ಕಾರ್ಯಕರ್ತರು ಇದಕ್ಕೆ ವಿರೋಧ ವ್ಯಕ್ತಪಡಿಸಿ, ಬಿಡುಗಡೆಯ ಆದೇಶವನ್ನು ಹಿಂಪಡೆಯ ಬೇಕೆಂದು ಆಗ್ರಹಿಸಿ ದೇಶದಾದ್ಯಂತ ಪ್ರದರ್ಶನ
ಗಳನ್ನು ನಡೆಸಿದ್ದಾರೆ. ತೃಣಮೂಲ ಕಾಂಗ್ರಸ್‍ನ ಸಂಸದೆ ಮಹುವಾ ಮೊಯಿತ್ರಾ, ಸಿಪಿಎಂ ನಾಯಕಿ ಸುಭಾಷಿಣಿ ಅಲಿ, ಪತ್ರಕರ್ತೆ ಮತ್ತು ಚಿತ್ರ ನಿರ್ಮಾಪಕಿ ರೇವತಿ ಲೌಲ್ ಹಾಗೂ ಸಾಮಾಜಿಕ ಕಾರ್ಯಕರ್ತೆ ರೂಪ್ ರೇಖಾ ರಾಣಿ ಅವರು ಬಿಡುಗಡೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಹಿರಿಯ ವಕೀಲರಾದ ಕಪಿಲ್ ಸಿಬಲ್ ಹಾಗೂ ಅಪರ್ಣಾ ಭಟ್ ಪ್ರತಿನಿಧಿಸು ತ್ತಿದ್ದಾರೆ. ಸಾರ್ವಜನಿಕ ಹಿತಾಸಕ್ತಿಯ ಈ ಅರ್ಜಿಯನ್ನು ವಿಚಾರಣೆಗಾಗಿ ಕೈಗೆತ್ತಿಕೊಳ್ಳಲು ನ್ಯಾಯಾಲಯ ಸಮ್ಮತಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT