ಶನಿವಾರ, ಫೆಬ್ರವರಿ 22, 2020
19 °C
ದೇಹದ ಆಚೆಗೂ ಮಿದುಳನ್ನು ಬೆಳೆಸಿದರೆ ಅದರ ನೈತಿಕ ಆಯಾಮಗಳೇ ಅಯೋಮಯ

ಕಲ್ಪಿತ ಕತೆಯನ್ನೂ ಮೀರುವ ಮಿದುಳು

ನಾಗೇಶ ಹೆಗಡೆ Updated:

ಅಕ್ಷರ ಗಾತ್ರ : | |

ಮಾನವ ಮಿದುಳನ್ನು ಗಾಜಿನ ಬಟ್ಟಲಲ್ಲಿ ಸೃಷ್ಟಿಸಲು ಸಾಧ್ಯವಾದರೆ ಏನೇನಾದೀತು ಊಹಿಸಿ. ಈಗಾಗಲೇ ನಮ್ಮ ಬಹಳಷ್ಟು ಅಂಗಾಂಗಗಳನ್ನು ವಿಜ್ಞಾನಿಗಳು ಕೃತಕವಾಗಿ ಬೆಳೆಸುತ್ತಿದ್ದಾರೆ. ತ್ವಚೆ, ರಕ್ತನಾಳ, ರಕ್ತ, ಯಕೃತ್ತು, ಗರ್ಭದ ಚೀಲ- ಅಷ್ಟೇನು, ಶ್ವಾಸಕೋಶವನ್ನೂತಯಾರಿಸಿದ್ದಾರೆ. ಮಾನವ ಮಿದುಳು ತನ್ನದೇ ತದ್ರೂಪನ್ನು ಸೃಷ್ಟಿಸಲು ಹೊರಟಿದೆ. ಮಿದುಳಿನ ಕೆಲವು ನರಕೋಶಗಳು ಈಗಾಗಲೇ ತೀರ ಆರಂಭದ ಹಂತದಲ್ಲಿ ಮುದ್ದೆಯ ರೂಪದಲ್ಲಿ ಸಿದ್ಧವಾಗಿ ಕೂತಿವೆ.

ಆದರೆ ಮಿದುಳಿನಲ್ಲಿ ಬುದ್ಧಿಯೊಂದಿದ್ದರೆ ಸಾಲದಲ್ಲ? ವಿವೇಕವೂ ಅಷ್ಟಿಷ್ಟು ಬೇಕು. ಕಳೆದ ವರ್ಷವೇ 17 ಖ್ಯಾತ ವಿಜ್ಞಾನಿಗಳು ಒಟ್ಟಾಗಿ ಇಂಥ ಪ್ರಯೋಗಗಳ ಕುರಿತು ನೀಡಿದ ಎಚ್ಚರಿಕೆಯ ಮಾತುಗಳನ್ನು ‘ನೇಚರ್’ ಹೆಸರಿನ ಖ್ಯಾತ ವಿಜ್ಞಾನ ಪತ್ರಿಕೆ ಪ್ರಕಟಿಸಿತ್ತು. ‘ಹುಷಾರಾಗಿ ಹೆಜ್ಜೆ ಇಡಿ, ನೈತಿಕತೆಯ ತೀರ ಅಂಚಿಗೆ ಬಂದಿದ್ದೀರಿ’ ಎಂದು ಎಚ್ಚರಿಸಿದ್ದರು.

ಪ್ರಯೋಗಶಾಲೆಯಲ್ಲಿ ನರವಿಜ್ಞಾನಿಗಳು (ನ್ಯೂರೊ ಸೈಂಟಿಸ್ಟ್ಸ್‌) ಮೂರು ಹಂತಗಳಲ್ಲಿ ಮಿದುಳನ್ನು ಜಾಲಾಡುತ್ತಿದ್ದಾರೆ. ಒಂದು, ನಮ್ಮದೇ ಮೂಳೆಮಜ್ಜೆಯಲ್ಲಿರುವ ಸ್ಟೆಮ್ ಸೆಲ್ ಎಂಬ ಆಕರಕೋಶಕ್ಕೆ ಸೂಕ್ತ ಪೋಷಕಾಂಶ ಕೊಟ್ಟು ಯಾವುದೇ ಅಂಗಾಂಗವನ್ನು ಗಾಜಿನ ಬಟ್ಟಲಲ್ಲಿ ಬೆಳೆಸುವ ಹಾಗೆ, ಮಿದುಳಿನ ನರಕೋಶಗಳನ್ನೂ ಬೆಳೆಸುವುದು. ಅದು ಪುಟ್ಟ ಮಿದುಳಿನ ಮುದ್ದೆಯಂತೆ ಬೆಳೆಯುತ್ತದೆ. ಎರಡನೆಯ ವಿಧಾನ ಏನೆಂದರೆ, ಮನುಷ್ಯನ ತಲೆಬುರುಡೆಯಿಂದ ಕೆಲವು ನರಕೋಶಗಳನ್ನು ಕಿತ್ತು ಅದನ್ನು ಬಟ್ಟಲಲ್ಲಿ ಕೆಡದಂತೆ ಇಟ್ಟು ಪರೀಕ್ಷೆ ಮಾಡುವುದು. ಮೂರನೆಯದು, ಮನುಷ್ಯನ ಕೆಲವು ನರಕೋಶಗಳನ್ನು ಬೇರೊಂದು ಪ್ರಾಣಿಯ ಮಿದುಳಿನಲ್ಲಿ ಕಸಿ ಮಾಡುವುದು.

ವೈಜ್ಞಾನಿಕ ಕಲ್ಪನಾ ಕತೆಗಾರರು ಈ ಮೂರೂ ವಿಧಗಳಲ್ಲಿ ನೂರೊಂದು ಕಥೆಗಳನ್ನು ಹೆಣೆಯಬಹುದು. ವಿಜ್ಞಾನಿಯಲ್ಲದ ಕಾಫ್ಕಾ ನೂರು ವರ್ಷಗಳ ಹಿಂದೆಯೇ ಕತೆ ಹೆಣೆದಿದ್ದಾನೆ (ಆತನ ‘ಮೆಟಮೊರ್ಫೊಸಿಸ್’ ಕತೆಯ ನಾಯಕ ಇದ್ದಕ್ಕಿದ್ದಂತೆ ಭಯಂಕರ ಹುಳವಾಗುತ್ತಾನೆ. ತಾಜಾ ಆಹಾರವನ್ನು ಕೊಟ್ಟರೂ ಕೊಳೆತಿದ್ದನ್ನೇ ಇಷ್ಟಪಡುತ್ತಾನೆ). ಅದು ವಾಸ್ತವದಲ್ಲಿ ಸಾಧ್ಯವಿಲ್ಲ. ಆದರೆ ಇಲಿಯ ಮಿದುಳಲ್ಲಿ ಮನುಷ್ಯನ ನರಕೋಶಗಳನ್ನು ಸೇರಿಸಿ ನೋಡಿದ್ದಾರೆ. ಅಂಥ ಇಲಿಗಳಿಗೆ ಹೊಸ ಸಂಗತಿಗಳನ್ನು ಕಲಿಯುವ ಹೆಚ್ಚಿನ ಚಾಕಚಕ್ಯ ಬಂದಿದೆ ಎಂದು ವರದಿ ಮಾಡಿದ್ದಾರೆ. ವೈಜ್ಞಾನಿಕ ಸಂಶೋಧನೆಗಳಲ್ಲಿ ನೈತಿಕ ಕಟ್ಟುಪಾಡುಗಳು ಇರಬೇಕೆಂದು ವಾದಿಸುವವರು ಈ ವರದಿಯನ್ನು ನೋಡಿಯೇ ವ್ಯಾಕುಲರಾಗಿದ್ದಾರೆ. ಎಲ್ಲಿ ನೈತಿಕತೆಯ ಗೆರೆ ಎಳೆಯಬೇಕು ಎಂಬುದೇ ಚಿಂತೆಯ ವಿಷಯವಾಗಿದೆ. ಮನಸ್ಸಿಗೆ ತೋಚಿದಂತೆಲ್ಲ ಸಂಶೋಧನೆ ಮಾಡಲು ಬಿಟ್ಟರೆ ವಿಜ್ಞಾನಿಗಳು ಪೈಪೋಟಿಯಲ್ಲಿ ತೀರ ಮುಂದುವರೆಯಬಹುದು. ಮನುಷ್ಯನ ಇಡೀ ಮಿದುಳನ್ನೇ ಅಲ್ಲದಿದ್ದರೂ ಕೆಲವು ಅಂಗಾಂಶಗಳನ್ನು ಬೇರೊಂದು ಜೀವಿಯ ಬುರುಡೆಯಲ್ಲಿ ಕೂರಿಸಬಹುದು. ಕಾಫ್ಕಾನ ಕತೆಯನ್ನು ವಾಸ್ತವಕ್ಕೂ ತರಬಹುದು.

ಈ ಬಗೆಯ ಪ್ರಯೋಗಗಳಿಗೆ ನೈತಿಕತೆಯ ಮಿತಿ ಹಾಕುವಲ್ಲಿ ಅನೇಕ ತೊಡಕುಗಳಿವೆ. ಮೇಕೆಯೊಂದನ್ನು ಬಾಡೂಟಕ್ಕೆಂದು ಕೊಲ್ಲುವಾಗ ಅಲ್ಲಿ ನೈತಿಕತೆ ಶೂನ್ಯದ ಸಮೀಪವೇ ಇರುತ್ತದೆ. ಮೇಕೆಯ ಮಿದುಳಿನಲ್ಲಿ ಏನೇನು ನಡೆಯುತ್ತದೆ- ಯಾರೂ ಕ್ಯಾರೇ ಮಾಡುವುದಿಲ್ಲ. ಅದೇ ಮೇಕೆಯ ಮಿದುಳಿನಲ್ಲಿ ಮನುಷ್ಯರ ಕೆಲವು ನರಕೋಶಗಳನ್ನು ಸೇರಿಸಿದರೆ, ಅದು ಗಣಿತದಲ್ಲಿ ಜಾಣ್ಮೆ ತೋರಿಸಿ
ದರೆ, ಅದನ್ನು ನಿಶ್ಚಿಂತೆಯಿಂದ ಕಟುಕನಿಗೆ ಕೊಡಲು ಬರುವುದಿಲ್ಲ. ಇಂಥ ಪ್ರಯೋಗಗಳಲ್ಲಿ ತೊಡಗುವ ವಿಜ್ಞಾನಿಗಳಿಗೆಂದೇ ನೀತಿ ನಿರೂಪಣೆ ಮಾಡಲು ‘ಬಯೊಎಥಿಕ್ಸ್’ ಎಂಬ ವಿಭಾಗವೇ ಇದೆ. ಅದಕ್ಕೆ ಅಂತರರಾಷ್ಟ್ರೀಯ ಸಮಿತಿ ಕೂಡ ಇದೆ. ಡೇವಿಡ್ ಡಿಗ್ರಾಸಿಯಾ ಎಂಬ ವಿಜ್ಞಾನ ನೀತಿತಜ್ಞ ಇದೇ ಮೇಕೆಯ ಮಿದುಳಿನ ಉದಾಹರಣೆಯನ್ನು ಬಳಸಿಕೊಂಡು ನೈತಿಕತೆಯ ವಿವಿಧ ಹಂತಗಳ ವಿಶ್ಲೇಷಣೆ ಮಾಡಿದ್ದಾನೆ. ಸದ್ಯ ಆತ ‘ಪ್ರಜ್ಞೆ’ಯ ಪ್ರಶ್ನೆಯನ್ನು ಎತ್ತಲಿಲ್ಲ. ಪ್ರಜ್ಞೆಯೊಂದಿಗೆ ಪಾಪ- ಪುಣ್ಯಗಳ ಧಾರ್ಮಿಕ ವಿಚಾರಗಳೂ ಸೇರಿಕೊಂಡು ಅದು ತೀರಾ ಕ್ಲಿಷ್ಟಕರ ಜಿಜ್ಞಾಸೆಯತ್ತ ಹೊರಳುವುದರಿಂದ ಸದ್ಯಕ್ಕೆ ಅದರ ಚರ್ಚೆ ಇಲ್ಲಿ ಬೇಡ.

ಮಿದುಳಿನ ನರಕೋಶಗಳನ್ನು ಕಸಿ ಮಾಡುವ ಬಗ್ಗೆ ಏಕೆ ವಿಜ್ಞಾನಿಗಳಲ್ಲಿ ಆಸಕ್ತಿ ಹೆಚ್ಚುತ್ತಿದೆ? ಅಂಥ ಪ್ರಯೋಗಗಳಿಗೆ ಧನಸಹಾಯ ನೀಡುವ ಕಾರ್ಪೊರೇಟ್ ಕಂಪನಿಗಳ ಹಿತಾಸಕ್ತಿ ಏನಿದ್ದೀತು? ಸಹಜವಾಗಿ, ಔಷಧ ತಯಾರಿಕೆಯತ್ತ ಅವು ತಮ್ಮ ದೃಷ್ಟಿ ನೆಟ್ಟಿವೆ. ವಯಸ್ಸಾದವರ ಮರೆವಿನ (ಆಲ್ಝೀಮರ್ಸ್) ಕಾಯಿಲೆಗೆ ಸೂಕ್ತ ಔಷಧ ಸಿಕ್ಕರೆ ಧನಾಢ್ಯರು ಎಷ್ಟು ಹಣವನ್ನು ಬೇಕಾದರೂ ತೆರಲು ಸಿದ್ಧ ಇರುತ್ತಾರೆ. ಕೈನಡುಕದ ಪಾರ್ಕಿನ್‍ಸನ್ ಕಾಯಿಲೆಗೂ ಸರಿಯಾದ ಔಷಧ ಬೇಕಾಗಿದೆ. ಗರ್ಭಿಣಿಗೆ ಝೀಕಾ ವೈರಸ್ಸಿನ ಸೋಂಕು ತಗುಲಿದರೆ ಅವಳಿಗೆ ಜನಿಸುವ ಮಗುವಿನ ಮಿದುಳು ಏಕೆ ತೀರಾ ಚಿಕ್ಕದಿರುತ್ತದೆ ಎಂಬ ಪ್ರಶ್ನೆ ವಿಜ್ಞಾನಿಗಳನ್ನು ಕಾಡುತ್ತಿದೆ. ಅದಕ್ಕೆ ಉತ್ತರ ಹುಡುಕಲೆಂದು ಬ್ರಿಟಿಷ್ ವಿಜ್ಞಾನಿಗಳು ಎಳೇ ಭ್ರೂಣದ ಮೇಲೆ ಪ್ರಯೋಗ ನಡೆಸಲು ಹೋಗಿ ತುಸು ಎಡವಟ್ಟಾಗಿದೆ. ಕೃತಕ ಗರ್ಭಾಧಾನ ಕೇಂದ್ರಗಳಲ್ಲಿ ಉತ್ಪನ್ನವಾದ ಹೆಚ್ಚುವರಿ ಭ್ರೂಣಗಳನ್ನು ಇಂಥ ಪ್ರಯೋಗಗಳಿಗೆ ಬಳಸುತ್ತಿದ್ದರು. ಆದರೆ ಅಲ್ಲೀಗ ಜಾರಿಗೆ ಬಂದ ಕಟ್ಟುನಿಟ್ಟಿನ ನಿಯಮಗಳ ಪ್ರಕಾರ, ಅಂಡಾಣು- ವೀರ್ಯಾಣು ಮಿಲನವಾದ 14 ದಿನಗಳ ನಂತರದ ಭ್ರೂಣವನ್ನು ಹಾಗೆಲ್ಲ ಪ್ರಯೋಗಕ್ಕೆ ಬಳಸುವಂತಿಲ್ಲ. ಏಕೆಂದರೆ ಅದಕ್ಕೆ ಹಿಂಸೆಯ ಅನುಭೂತಿ ಆಗತೊಡಗುತ್ತದೆ. ನೈತಿಕತೆಯ ಪ್ರಶ್ನೆ ಬಂತು ನೋಡಿ. ಸೂಜಿಮೊನೆಯಷ್ಟು ಚಿಕ್ಕದಾದ ಅಂಥ ಹೆಚ್ಚುವರಿ ಭ್ರೂಣಗಳಿಗೆ ಸೂಕ್ತ ಗರ್ಭಾಶಯ ಸಿಗದಿದ್ದರೆ ಮೋಕ್ಷ ಕೊಡಬಹುದು. ಆದರೆ ಅದಕ್ಕೆ ವೈರಸ್ ಅಂಟಿಸಿ ಹಿಂಸೆ ಕೊಡುವಂತಿಲ್ಲ.

ಎಳೇ ಭ್ರೂಣಕ್ಕೇ ಹಿಂಸೆ ಆಗುವುದಾದರೆ ಇನ್ನು ಪ್ರೌಢ ಮಿದುಳಿನಿಂದ ಕಿತ್ತು ತೆಗೆದ ಅಥವಾ ಬಟ್ಟಲಲ್ಲಿ ಬೆಳೆಸಿದ ನರಕೋಶಗಳಲ್ಲಿ ಸಂತಸ, ನೋವು, ದುಃಖಗಳ ಸ್ಫುರಣೆ ಆದೀತೆ? ಎರಡು ವಾರಗಳ ಹಿಂದೆ, ಷಿಕಾಗೊದಲ್ಲಿ ನರತಂತು ವಿಜ್ಞಾನಿಗಳ ಸಂಘದ ಜಾಗತಿಕ ಅಧಿವೇಶನದಲ್ಲಿ ಈ ವಿಷಯ ಚರ್ಚೆಗೆ ಬಂತು. ಬಟಾಣಿ ಕಾಳಿನ ಗಾತ್ರದ ನರಸಿಂಬೆಗೆ ಬೆಳಕನ್ನು ಹಾಯಿಸಿದಾಗ ಅವು ಸ್ಪಂದಿಸುತ್ತವೆ. ಅಷ್ಟೇ ಅಲ್ಲ, ಸಿಂಬೆಯ ಸಮೀಪದಲ್ಲಿ ರಕ್ತದ ಹನಿಯನ್ನು ಇಟ್ಟರೆ ಮೆಲ್ಲಗೆ ಆ ದಿಕ್ಕಿನಲ್ಲಿ ಹೊಸ ನರತಂತುಗಳು ಚಿಗುರುತ್ತವೆ ಎಂಬುದು ಬೆಳಕಿಗೆ ಬಂತು. ಮಿದುಳಿನ ಒಂದೊಂದೇ ನರಕೋಶವನ್ನೂ ಹೆಕ್ಕಿ ಅಧ್ಯಯನ ಮಾಡಲು ಸಾಧ್ಯವೆಂದು ತೋರಿಸಿದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ವಿಜ್ಞಾನಿ ವಿವೇಕ್ ಸ್ವರೂಪ್‍ಗೆ ಭಾರೀ ಪ್ರಶಂಸೆ ಕೂಡ ಬಂತು.

ಮಿದುಳು ಈಗ ಎರಡು ಪ್ರಕಾರಗಳಲ್ಲಿ ಪ್ರಚಂಡ ವೇಗದಲ್ಲಿ ಬೆಳೆಯುತ್ತಿದೆ. ಒಂದು, ಇಲೆಕ್ಟ್ರಾನಿಕ್ ಸರ್ಕೀಟ್‍ಗಳಲ್ಲಿ ಬೆಳೆಯುತ್ತಿರುವ ಕೃತಕ ಮಿದುಳು. ಅದು ರೋಬಾಟ್‍ಗಳ ತಲೆಯಲ್ಲೊ, ಹೊಟ್ಟೆಯಲ್ಲೊ ಕೂರಬಹುದು; ನಮ್ಮ ಸ್ಮಾರ್ಟ್‌ಫೋನ್‍ಗಳಲ್ಲೊ, ವಾಚುಗಳಲ್ಲೊ ಅಥವಾ ಸುಂಕದಕಟ್ಟೆಯ ಕಂಬದಲ್ಲೊ ಕೂತು ತನ್ನ ಚಾಲಾಕನ್ನು ತೋರಿಸಬಹುದು. ಇನ್ನೊಂದು, ಲ್ಯಾಬ್‍ಗಳಲ್ಲಿ ಸೃಷ್ಟಿಯಾಗುತ್ತಿರುವ ನರಕೋಶಗಳ ಮಿದುಳು. ಮೊದಲನೆಯ ಪ್ರಕಾರದ ಮಿದುಳಿಗೆ ಕಾಯ್ದೆ, ಕಾನೂನುಗಳ ಲಗಾಮು ಬೇಕು. ಎರಡನೆಯ ಪ್ರಕಾರಕ್ಕೆ ನೀತಿ, ಧರ್ಮ, ಪಾಪಪುಣ್ಯಗಳ ಲಗಾಮು ಬೇಕು. ಇವೆರಡೂ ಪ್ರಕಾರಗಳು ಸೇರಿ ಹೈಬ್ರಿಡ್ ಆಗಿಬಿಟ್ಟರೆ? ನಮ್ಮನಿಮ್ಮಂತೆ ಓಡಾಡುವ, ಮಾತಾಡುವ ಮನುಷ್ಯರ ದೇಹದಲ್ಲಿ ಭಾವನೆಗಳೂ ಇಲ್ಲದ, ನೀತಿಭೀತಿಯೂ ಇಲ್ಲದ ಸರ್ಕೀಟ್‍ಗಳು ಕೆಲಸ ಮಾಡುತ್ತಿದ್ದರೆ? ತನ್ನ ದೇಹದಿಂದ ದೂರದಲ್ಲೆಲ್ಲೋ ಇರುವ ಮೂರನೆಯ ತೋಳು, ಮೂರನೆಯ ಕಣ್ಣುಗಳ (ಅಥವಾ ನೂರನೆಯ ತೋಳು, ನೂರನೆಯ ಕಣ್ಣುಗಳ) ಮೂಲಕವೂ ಅದು ಕೆಲಸ ಮಾಡುವಂತಿದ್ದರೆ?

ನಮ್ಮ ಪುರಾಣಗಳಲ್ಲಿ ಅಂಥ ವಿಚಿತ್ರ ಜೀವಿಯ ಕಥೆಗಳು ಇಲ್ಲ. ನಮ್ಮ ಪೂರ್ವಜರು ಸಾವಿರಾರು ವರ್ಷಗಳ ಹಿಂದೆಯೇ ಅಂಥ ಜೀವಿಗಳನ್ನು ಸೃಷ್ಟಿ ಮಾಡಿದ್ದರೆಂದು ಹೆಮ್ಮೆಯಿಂದ ಹೇಳಿಕೊಂಡು ಓಡಾಡುವ ಹಾಗೂ ಇಲ್ಲ. ಹೊಸದಾಗಿಯೇ ಸೃಷ್ಟಿಸಬೇಕು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)