ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive| 'ಧ್ಯೇಯ‘ ಕಮಲ: ಕುಸಿಯಿತೇ ಬಿಎಸ್‌ವೈ ನಾಮಬಲ?

Last Updated 3 ಅಕ್ಟೋಬರ್ 2020, 12:20 IST
ಅಕ್ಷರ ಗಾತ್ರ

ಕರ್ನಾಟಕದ ಮಟ್ಟಿಗೆ ‘ಕಮಲ’ ಚಿಹ್ನೆ ಇಲ್ಲದೆಯೂಬಿಜೆಪಿಯನ್ನು ಗುರುತಿಸಬಹುದಿತ್ತು. ಆದರೆ, ಬಿ.ಎಸ್. ಯಡಿಯೂರಪ್ಪ ಇಲ್ಲದೇ ಬಿಜೆಪಿಗೊಂದು ಅಸ್ತಿತ್ವ ಇದೆ ಎಂಬುದನ್ನು ಊಹಿಸಿಕೊಳ್ಳುವುದು ಸಾಧ್ಯವೇ ಇರಲಿಲ್ಲ. ಯಡಿಯೂರಪ್ಪ ಎಂದರೆ ಬಿಜೆಪಿಗೆ ಪರ್ಯಾಯ ಶಬ್ಧ ಎಂದು ಜನ ನಂಬುವಷ್ಟು ಈ ಪ್ರಭಾವಳಿ ಇತ್ತು.

2012ರಲ್ಲಿ ಬಿಜೆಪಿಯನ್ನು ತೊರೆದು ಕೆಜೆಪಿ ಕಟ್ಟಿದ ಯಡಿಯೂರಪ್ಪ, ಪಕ್ಷದ ವಿಷಯದಲ್ಲಿ ತನ್ನ ‘ಪರಾಕ್ರಮ’ ಏನೆಂದು ತೋರಿಸಿದರು. 2008ರಿಂದ 2013ರವರೆಗೆ ರಾಜ್ಯ ಆಳಿದ್ದ ಬಿಜೆಪಿ, 2013ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಶೇಕಡಾವಾರು ಮತ ‍ಪ್ರಮಾಣದಲ್ಲಿ ಜೆಡಿಎಸ್‌ಗಿಂತ ಕಡಿಮೆ ಪಡೆದಿದ್ದಲ್ಲದೇ, ಸಂಖ್ಯಾವಾರು ಲೆಕ್ಕದಲ್ಲಿ ಜೆಡಿಎಸ್‌(40)ನಷ್ಟೇ ಸೀಮಿತಗೊಂಡು ಕುಸಿದು ನೆಲಕ್ಕೆ ಕುಳಿತಿತ್ತು. ಹಾಗಂತ ಯಡಿಯೂರಪ್ಪ ಏನೂ ತಮ್ಮ ಸ್ವಶಕ್ತಿಯಿಂದ ದೊಡ್ಡ ಮಟ್ಟದ ಸಾಧನೆ ಮಾಡಿರಲಿಲ್ಲ; ಬಿಜೆಪಿಯನ್ನು ಮಕಾಡೆ ಮಲಗಿಸುವಷ್ಟು ಶಕ್ತಿ ಇದೆ ಎಂಬುದನ್ನು ಈ ಚುನಾವಣೆಯಲ್ಲಿ ತೋರಿಸಿಕೊಟ್ಟಿದ್ದರು. ಕೆಜೆಪಿ ಕೇವಲ 6 ಸ್ಥಾನಗಳನ್ನು ಮಾತ್ರ ಗೆದ್ದಿದ್ದು, ಯಡಿಯೂರಪ್ಪ ಬಲವು ಬಿಜೆಪಿಯ ಬಲದೊಟ್ಟಿಗೆ ಸೇರಿಕೊಂಡು ಬೃಹತ್ತಾಗಿ ಬೆಳೆದಿದೆ ಎಂಬುದನ್ನು ಇದು ಸಂಕೇತಿಸಿತ್ತು.

2014ರ ಲೋಕಸಭೆ ಚುನಾವಣೆ ಹೊತ್ತಿಗೆ ರಾಜಕೀಯ ಚಿತ್ರಣವೇ ಬದಲಾಗಿತ್ತು. ನರೇಂದ್ರ ಮೋದಿ ಅವರಿಗೆ ಪ್ರಧಾನಿ ಆಗಲೇಬೇಕು ಎಂಬ ಉಮೇದು ಬಂದಿತ್ತು. 28 ಲೋಕಸಭಾ ಕ್ಷೇತ್ರಗಳಿರುವ ಕರ್ನಾಟಕದಲ್ಲಿ, ಕಮಲ ಅರಳಿ ಬಲ ಸಿಗಬೇಕೆಂದರೆ ಯಡಿಯೂರಪ್ಪ ಅನಿವಾರ್ಯ ಎಂಬುದು ಪಕ್ಷದ ರಾಷ್ಟ್ರೀಯ ವರಿಷ್ಠರಿಗೆ ಮನವರಿಕೆಯಾಗಿತ್ತು. ಬಿಜೆಪಿಗೆ ಸೇರಿಸಿಕೊಂಡರೆ ಸಾಕೆಂಬ ಮನಸ್ಥಿತಿಗೆ ಯಡಿಯೂರಪ್ಪ ಕೂಡ ತಲುಪಿಬಿಟ್ಟಿದ್ದರು. ಇಬ್ಬರ ಅಗತ್ಯಗಳು ಒಟ್ಟುಗೂಡಿದ್ದರಿಂದಾಗಿ ಲೋಕಸಭೆ ಚುನಾವಣೆಗೆ ಮುನ್ನ ಯಡಿಯೂರಪ್ಪ ಬಿಜೆ‍ಪಿ ಸೇರಿದರು. ರಾಜ್ಯ ಘಟಕದ ಅಧ್ಯಕ್ಷರೂ ಆದರು. ಆ ಹೊತ್ತಿಗೆ ‘ಬಿಜೆಪಿಗೆ ಯಡಿಯೂರಪ್ಪ ಆನೆಬಲ’ ಎಂದು ಆ ಪಕ್ಷದ ನಾಯಕರೇ ಹೆಗ್ಗಳಿಕೆಯಿಂದ ಹೇಳಿಕೊಂಡಿದ್ದುಂಟು.

ಬಿಎಸ್‌ವೈ ಭೀಮಬಲ

ದೂರ್ವಾಸ ಮುನಿಯ ರೀತಿಯ ಉಗ್ರ ಕೋಪ, ಹಿಡಿದ ಕೆಲಸವನ್ನು ಬಿಡದ ಹಾಗೂ ನಂಬಿದವರನ್ನು ದಡ ಮುಟ್ಟಿಸುವವರೆಗೆ ಕೈಬಿಡದ ದುರ್ಯೋಧನನ ಛಲ–ಹಟಗಳು ಮಿಳಿತವಾದಂತಿರುವ ಯಡಿಯೂರಪ್ಪ, ಬಿಜೆಪಿಗೆ ಒಂದರ್ಥದಲ್ಲಿ ಭೀಮ ಶಕ್ತಿಯೇ.ಪಕ್ಷವನ್ನು ಕಟ್ಟಿದ್ದು ತಾವೇ ಎಂಬ ಹಮ್ಮು ಹಾಗೂ ತಾವು ಹೇಳಿದ್ದೇ ನಡೆಯಬೇಕೆಂಬ ಹಟವನ್ನು ಅವರು ಅನೇಕ ಬಾರಿ ಪ್ರದರ್ಶಿಸಿ ಅದನ್ನು ಜಯಸಿದ್ದಾರೆ. ವೀರೇಂದ್ರ ಪಾಟೀಲ, ರಾಮಕೃಷ್ಣ ಹೆಗಡೆ ಅವರ ಬಳಿಕ ವೀರಶೈವ– ಲಿಂಗಾಯತ ಸಮುದಾಯ ಒಗ್ಗಟ್ಟಾಗಿ (ಕೆಜೆಪಿ ಕಟ್ಟಿದ ಅವಧಿ ಬಿಟ್ಟು) ಯಡಿಯೂರಪ್ಪ ಬೆನ್ನಿಗೆ ನಿಂತಿದ್ದೂ ಅವರ ‘ಧೈರ್ಯ’– ಮುನ್ನುಗ್ಗುವಿಕೆಗೆ ಕಾರಣವಿದ್ದೀತು.

ಪಕ್ಷದ ಆಂತರಿಕ ಸಭೆಗಳಲ್ಲಿ ಯಡಿಯೂರಪ್ಪ ಹೇಳಿದ್ದನ್ನು ಅಲ್ಲಗಳೆಯುವವರು ಆ ಕಾಲದಲ್ಲಿ ವಿರಳ. ಅಷ್ಟು ಧೈರ್ಯವನ್ನೂ ಪಕ್ಷದಲ್ಲಿ ಯಾರೂ ತೋರುತ್ತಿರಲಿಲ್ಲ. ಈಗ ದೇಶದಲ್ಲಿ ಅತ್ಯುನ್ನತವಾದ ಹುದ್ದೆಯಲ್ಲಿರುವ ಒಬ್ಬರು ಕರ್ನಾಟಕದ ಬಿಜೆಪಿ ಉಸ್ತುವಾರಿಯಾಗಿದ್ದರು. ಪಕ್ಷದ ಆಂತರಿಕ ಸಭೆಯಲ್ಲಿ ತಾವು ಹೇಳಿದ್ದು ಒಪ್ಪಲಿಲ್ಲ ಎಂಬ ಕಾರಣಕ್ಕೆ ಲ್ಯಾಪ್‌ಟಾಪ್‌ ತೆಗೆದು ಎಸೆದಿದ್ದ ಯಡಿಯೂರಪ್ಪ ಅದನ್ನು ಪುಡಿ ಮಾಡಿದ್ದರು. ದೆಹಲಿಯಲ್ಲಿ ತಮ್ಮದೇ ಪ್ರಭಾವ ಹೊಂದಿದ್ದ ಕರ್ನಾಟಕದ ಮತ್ತೊಬ್ಬ ನಾಯಕರ ವಿರುದ್ಧ ಕುರ್ಚಿ ಎತ್ತಿಕೊಂಡು ಹೊಡೆಯಲು ಹೋಗಿದ್ದ ಯಡಿಯೂರಪ್ಪ, ತಮ್ಮ ಹಟವನ್ನು ಸಾಧಿಸಿದ್ದರು.

ಬಿಜೆಪಿ ಅಧಿಕಾರದಲ್ಲಿದ್ದ ಅವಧಿಯಲ್ಲಿ ಕರ್ನಾಟಕದ ಉಸ್ತುವಾರಿಯಾಗಿದ್ದವರಂತೂ ಯಡಿಯೂರಪ್ಪನವರ ಎದುರು ಬಾಯನ್ನೇ ತೆರೆಯುತ್ತಿರಲಿಲ್ಲ; ಅಷ್ಟರಮಟ್ಟಿಗೆ ಪಕ್ಷದಲ್ಲಿ ತಮ್ಮ ಪಾರುಪತ್ಯವನ್ನು ಯಡಿಯೂರಪ್ಪ ಬೆಳೆಸಿಕೊಂಡಿದ್ದರು. ಯಡಿಯೂರ‍ಪ್ಪ ನಾಮಬಲ–ಜಾತಿಬಲದ ಮೇಲೆ ಗೆಲ್ಲಿಸಿಕೊಂಡು ಬರುವ ಶಕ್ತಿ ಇದ್ದುದಕ್ಕೆ ಯಾರೊಬ್ಬರೂ ಯಡಿಯೂರಪ್ಪಗೆ ಎದುರು ಮಾತನಾಡುತ್ತಿರಲಿಲ್ಲ.

ಜೆಡಿಎಸ್‌–ಬಿಜೆಪಿ ಮೈತ್ರಿ ಸರ್ಕಾರ ಮುರಿದುಬಿದ್ದು ಬಿಜೆಪಿ–ಜೆಡಿಎಸ್‌ ಮೈತ್ರಿ ಸರ್ಕಾರ ಬರುವ ಹೊತ್ತಿನೊಳಗೆ ಮೂವರು ನಾಯಕರು ಸೇರಿಕೊಂಡು, ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗುವುದು ಬೇಡ ಎಂದು ಪಕ್ಷದ ವರಿಷ್ಠರ ಕಿವಿಯೂದಿದ್ದರು. ಇದರ ಸಿಟ್ಟು ಯಡಿಯೂರಪ್ಪನವರ ಒಳಗಿತ್ತು. 2008ರಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ಮಂತ್ರಿಯಾಗಬೇಕಾಗಿದ್ದ ಜಗದೀಶ ಶೆಟ್ಟರ್ ಅವರಿ‌ಗೆ ವಿಧಾನಸಭಾಧ್ಯಕ್ಷ, ಡಿ.ಎಚ್. ಶಂಕರಮೂರ್ತಿ ಅವರಿಗೆ ವಿಧಾನಪರಿಷತ್ತಿನ ಸಭಾಪತಿ ಸ್ಥಾನ ಸಿಕ್ಕಿತು. ದುಂಬಾಲು ಬಿದ್ದ ಕೆ.ಎಸ್. ಈಶ್ವರಪ್ಪ ಮಾತ್ರ ಮಂತ್ರಿಯಾದರು. ಆದರೆ, ಅಲ್ಪಾವಧಿಯಲ್ಲೇ ಅದನ್ನು ಬಿಟ್ಟುಕೊಟ್ಟು ಪಕ್ಷದ ಅಧ್ಯಕ್ಷರಾಗಿ ಕೆಲಸ ಮಾಡಬೇಕಾದ ಅನಿವಾರ್ಯವನ್ನು ಸೃಷ್ಟಿಸಲಾಗಿತ್ತು.

2011ರಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಬೇಕೆಂದಾಗ ತಾವು ಹೇಳಿದಂತೆ ಕೇಳುವ ಡಿ.ವಿ. ಸದಾನಂದಗೌಡರನ್ನೇ ಮುಖ್ಯಮಂತ್ರಿ ಸ್ಥಾನಕ್ಕೆ ಕೂರಿಸುವಲ್ಲಿ ಯಡಿಯೂರಪ್ಪ ಯಶಸ್ವಿಯಾಗಿದ್ದರು. ಲಿಂಗಾಯತ ಸಮುದಾಯದ ಜಗದೀಶ ಶೆಟ್ಟರ್‌ಗೆ ಆಗ ಅವಕಾಶ ತಪ್ಪಿಹೋಗಿತ್ತು. ಯಾವಾಗ ಗೌಡರು ತಿರುಗಿಬಿದ್ದರೋ ಆಗ, ಅವರನ್ನುಇಳಿಸಿ ಶೆಟ್ಟರ್ ಅವರನ್ನು ಮುಖ್ಯಮಂತ್ರಿ ಪಟ್ಟದಲ್ಲಿ ಕೂರಿಸಿದ್ದ ಯಡಿಯೂರಪ್ಪ, ಕೊನೆಗೆ ಪಕ್ಷವನ್ನೇ ತೊರೆದು ಹೋಗಿದ್ದರು. ಹೀಗೆ ತಾವು ಹೇಳಿದ್ದನ್ನು ನಡೆಸಿಯೇ ತೀರುವ ಜಾಯಮಾನ ಯಡಿಯೂರಪ್ಪ ಅವರದ್ದಾಗಿತ್ತು.

ಕುಸಿಯಿತೇ ನಾಮಬಲ

ಯಡಿಯೂರಪ್ಪ‍ಪುನಃ ಪಕ್ಷಕ್ಕೆ ಬಂದ ಮೇಲೆ ಅವರ ನಿರೀಕ್ಷೆಯಷ್ಟು ಪ್ರಾಧಾನ್ಯ ಅವರಿಗೆ ಸಿಗಲಿಲ್ಲ. ಅವರು ಬಿಟ್ಟು ಹೋದ ಅವಧಿಯಲ್ಲಿ ಪಕ್ಷವನ್ನು ಮುನ್ನಡೆಸಿದ್ದ ಪ್ರಲ್ಹಾದ ಜೋಶಿ, ಬಿ.ಎಲ್. ಸಂತೋಷ, ಕೆ.ಎಸ್. ಈಶ್ವರಪ್ಪ ಅವರ ತಂಡ ಪರ್ಯಾಯವೊಂದನ್ನು ಮುಂದಿಟ್ಟಿತ್ತು. ಕೇಂದ್ರದಲ್ಲಿ ಎಲ್ಲ ಹಿರಿಯ ನಾಯಕರನ್ನು ಹಿಂದಿಕ್ಕಿದ ನರೇಂದ್ರ ಮೋದಿ ಮತ್ತು ಅಮಿತ್ ಶಾ ಜೋಡಿ ಪಕ್ಷವನ್ನು ತಮ್ಮ ವಜ್ರಮುಷ್ಟಿಗೆ ತೆಗೆದುಕೊಂಡಂತೆ ಕರ್ನಾಟಕದಲ್ಲೂ ಅದರ ಛಾಯಾ ಪರಿಣಾಮ ಉಂಟಾಗಿತ್ತು. ಉತ್ಸವಮೂರ್ತಿಯಾಗಿ ಯಡಿಯೂರಪ್ಪ ಅವರು ಇದ್ದರೆ ಲಿಂಗಾಯತ ಬಲ ತಮ್ಮ ಜತೆಗೆ ನಿಲ್ಲುತ್ತದೆ ಎಂಬ ಲೆಕ್ಕಾಚಾರವೂ ಇದರ ಹಿಂದೆ ಇದ್ದೀತು. ಅದೇ ಕಾರಣಕ್ಕೆ, ಕೆ.ಎಸ್‌. ಈಶ್ವರಪ್ಪ ನೇತೃತ್ವದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌, ಎಂ.ಬಿ. ಭಾನುಪ್ರಕಾಶ್, ನಿರ್ಮಲಕುಮಾರ ಸುರಾನ, ಸೊಗಡು ಶಿವಣ್ಣ ಮತ್ತಿತತರು ಮುಂಚೂಣಿಯಲ್ಲಿದ್ದ ಮೂಲ ಬಿಜೆಪಿಗರ ವೇದಿಕೆಗಳು ಉದ್ದೇಶಪೂರ್ವಕವಾಗಿಯೇ ಸಕ್ರಿಯವಾಗಿದ್ದವು. ಇದರ ಹಿಂದೆ ಬಿ.ಎಲ್. ಸಂತೋಷ್‌ ‘ನಿರ್ದೇಶನ’ ಇದ್ದುದು ಗುಟ್ಟಿನ ಸಂಗತಿಯೇನಲ್ಲ.

ಹಾಗಿದ್ದರೂ ಯಡಿಯೂರಪ್ಪನವರನ್ನು ಹೊರಗಿಟ್ಟು ಪಕ್ಷವನ್ನು ಮುನ್ನಡೆಸುವ ಧೈರ್ಯ ಯಾರಿಗೂ ಇರಲಿಲ್ಲ. ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ನೀಡುವ ಹೊತ್ತಿಗೆ, ಯಡಿಯೂರಪ್ಪನವರ ವಿರೋಧಿ ಬಣ ಒಂದಿಷ್ಟು ಮಟ್ಟಿಗೆ ಸಕ್ರಿಯವಾಗಿತ್ತು. ಆದರೂ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ತರಲೇಬೇಕೆಂಬ ಹಟ ಹೊತ್ತಿದ್ದ ಬಿಜೆಪಿ ವರಿಷ್ಠರು ಯಡಿಯೂರಪ್ಪ ಹೇಳಿದ್ದಕ್ಕೆ ಸ್ವಲ್ಪ ಮಟ್ಟಿಗೆ ತಲೆಯಲ್ಲಾಡಿಸಿದರು. ಆದರೆ, ಸಂತೋಷ್ ಮೂಲಕ ನಿಬಂಧನೆಗಳನ್ನೂ ಹೇರತೊಡಗಿದರು. ಹೀಗಾಗಿಯೇ ತಮ್ಮ ಪುತ್ರ ವಿಜಯೇಂದ್ರನಿಗೆ ರಾಜಕೀಯ ಭವಿಷ್ಯ ಕೊಡಬೇಕು ಎಂಬ ಕಾರಣಕ್ಕೆ ಮೈಸೂರಿನ ವರುಣಾದಲ್ಲಿ ಟಿಕೆಟ್ ಕೇಳಿದ್ದ ಯಡಿಯೂರಪ್ಪರಿಗೆ ಅವಕಾಶವನ್ನು ನಿರಾಕರಿಸಲಾಯಿತು. ಹಾಗೆಯೇ ವಿಧಾನಸಭೆಗೆ ಸ್ಪರ್ಧೆ ಮಾಡಲು ಆಸಕ್ತಿ ಇದ್ದ ಅನೇಕ ಲೋಕಸಭಾ ಸದಸ್ಯರಿಗೆ ಟಿಕೆಟ್ ಕೊಡಲಿಲ್ಲ.

ಲೋಕಸಭೆ ಚುನಾವಣೆ ವೇಳೆ ಯಡಿಯೂರಪ್ಪ ಹೇಳಿದವರಿಗೆ ಅನೇಕ ಕಡೆ ಟಿಕೆಟ್ ಸಿಗಲಿಲ್ಲ. ಚಿತ್ರದುರ್ಗ, ಬೆಂಗಳೂರು ದಕ್ಷಿಣ, ಕೋಲಾರ, ಚಿಕ್ಕೋಡಿಯಲ್ಲಿ ಸಂತೋಷ ಮೇಲುಗೈ ಸಾಧಿಸಿದರು. ಹಾಗೂ ಹೀಗೂ ಜೆಡಿಎಸ್–ಕಾಂಗ್ರೆಸ್ ಮೈತ್ರಿ ಸರ್ಕಾರ ಕೆಡವಿ ಯಡಿಯೂರಪ್ಪ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿತು. ಸಂಪುಟ ವಿಸ್ತರಣೆಗೆ ತಿಂಗಳುಗಟ್ಟಲೇ ವರಿಷ್ಠರು ಒಪ್ಪಿಗೆಯನ್ನೇ ಕೊಡಲಿಲ್ಲ. ‘ಸರ್ಕಾರ ತಂದಿದ್ದೇನೆ’ ಎಂದು ಹೇಳಿಕೊಂಡಿದ್ದ ಯಡಿಯೂರಪ್ಪರಿಗೆ ತಮ್ಮ ಸಂಪುಟ ವಿಸ್ತರಣೆ ಮಾಡುವ ಸ್ವಾತಂತ್ರ್ಯವನ್ನೇ ಕೊಡಲಿಲ್ಲ. ಹಾಗೆ ಕೊಟ್ಟಿದ್ದರೆ ಈ ಸರ್ಕಾರವನ್ನು ಯಡಿಯೂರಪ್ಪ ಅವರೇ ತಂದಿದ್ದಾರೆ ಎಂಬ ಸಂದೇಶ ಪಕ್ಷದ ಕಾರ್ಯಕರ್ತರಿಗೆ ತಲುಪುತ್ತದೆ. ವಿಳಂಬ ಮಾಡಿದರೆ ವರಿಷ್ಠರ ಹಿಡಿತ ಜೋರಿದೆ ಎಂಬುದು ಗೊತ್ತಾಗುತ್ತದೆ ಎಂಬ ಕಾರಣಕ್ಕೆ ವಿಳಂಬ ಮಾಡಿದ್ದು ಸುಳ್ಳೇನಲ್ಲ.

ಸರ್ಕಾರದಲ್ಲಿ ಸಚಿವರು ಯಾರಿರಬೇಕು ಎಂಬ ಪಟ್ಟಿ ದೆಹಲಿಯಿಂದಲೇ ಬಂತು. ಆಗಲೂ ಆಘಾತ–ದಿಗ್ಭ್ರಮೆಗೆ ಒಳಗಾಗುವ ಸರದಿ ಯಡಿಯೂರಪ್ಪ ಅವರದ್ದಾಗಿತ್ತು. ಚುನಾವಣೆ ವೇಳೆ ಶ್ರೀರಾಮುಲು ಅವರನ್ನು ಉಪಮುಖ್ಯಮಂತ್ರಿ ಮಾಡುವುದಾಗಿ ಯಡಿಯೂರಪ್ಪ ಭರವಸೆ ಕೊಟ್ಟಿದ್ದರಾದರೂಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಯ ಆಲೋಚನೆಯೇ ಈ ಹೊತ್ತಿಗೆ ಅವರಲ್ಲಿ ಇರಲಿಲ್ಲ. ದೆಹಲಿಯಿಂದ ಬಂದ ಪಟ್ಟಿಯಲ್ಲಿ ಗೋವಿಂದ ಕಾರಜೋಳ, ಅಶ್ವತ್ಥನಾರಾಯಣ, ಲಕ್ಷ್ಮಣ ಸವದಿ(ವಿಧಾನಸಭೆ ಚುನಾವಣೆಯಲ್ಲಿ ಸೋತ) ಹೀಗೆ ಮೂವರ ಹೆಸರಿತ್ತು. ಇದರಿಂದ ಕೆಲಹೊತ್ತು ಕೆಂಡಾಮಂಡಲರಾಗಿ ಯಡಿಯೂರಪ್ಪ ಕಿಡಿಕಾರಿದ್ದೂ ನಡೆದಿತ್ತು. ನಾವು ಹೇಳಿದಂತೆ ನೀವು ನಡೆಯಿರಿ ಎಂಬ ಸಂದೇಶ ದೆಹಲಿಯಿಂದ ಬಂದಿದ್ದು, ಯಡಿಯೂರಪ್ಪನವರ ಕೈಯನ್ನು ಬಲವಂತಾಗಿ ಕಟ್ಟಿಹಾಕಿದ ಮೊದಲ ನಿದರ್ಶನ.

ಇನ್ನು ವಿಧಾನಪರಿಷತ್ತು, ರಾಜ್ಯಸಭೆ ಚುನಾವಣೆಯ ಅಭ್ಯರ್ಥಿ ಆಯ್ಕೆಯಲ್ಲೂ ಯಡಿಯೂರಪ್ಪನವರ ಶಿಫಾರಸನ್ನು ವರಿಷ್ಠರು ಖುಲ್ಲಂಖುಲ್ಲಾ ಒಪ್ಪಿಕೊಳ್ಳಲೇ ಇಲ್ಲ. ವಿಧಾನಪರಿಷತ್ತಿಗೆ ಈಚೆಗೆ ನಡೆದ ಚುನಾವಣೆಯಲ್ಲಿ ವಿಶ್ವನಾಥ್‌, ಶಂಕರ್, ಎಂ.ಟಿ.ಬಿ. ನಾಗರಾಜ್‌ಗೆ ಅವಕಾಶ ಕೊಟ್ಟರೂ ರಾಜ್ಯಸಭೆಯಲ್ಲಿ ಅವರ ಮಾತಿಗೆ ಕಿಮ್ಮತ್ತು ಕೊಡಲೇ ಇಲ್ಲ.

ಈಚೆಯ ಮತ್ತೊಂದು ಬೆಳವಣಿಗೆ ಎಂದರೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆಗೆ ವೀಕ್ಷಕರಂತೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರನ್ನು ಕಳಿಸಿದ್ದು. ಇದರ ಹಿಂದೆ ಯಡಿಯೂರಪ್ಪನವರ ಬದಲಿಗೆ ಮತ್ತೊಬ್ಬ ನಾಯಕನನ್ನು ರಾಜ್ಯದಲ್ಲಿ ಬೆಳೆಸುವ ತಂತ್ರಗಾರಿಕೆ ಇದ್ದಂತೆ ತೋರುತ್ತದೆ. ರಾಜರಾಜೇಶ್ವರಿ ನಗರ ಹಾಗೂ ಶಿರಾ ಉಪಚುನಾವಣೆಯ ಅಭ್ಯರ್ಥಿ ಆಯ್ಕೆಗೆ ಸಂಬಂಧಿಸಿದಂತೆ ನಡೆದ ಪ್ರಮುಖರ ಸಭೆಯ ವಿದ್ಯಮಾನವೂ ಗಮನಿಸಬೇಕಾದುದು. ಹಿಂದೆ ಯಡಿಯೂರಪ್ಪನವರ ಎದುರು ಯಾರೊಬ್ಬರೂ ಮಾತನಾಡುತ್ತಿರಲಿಲ್ಲ. ಆದರೆ, ಮೊನ್ನೆಯ ಸಭೆಯಲ್ಲಿ ‘ಮುನಿರತ್ನಗೆ ವಾಗ್ದಾನ ಮಾಡಿದ್ದೇನೆ. ಅವರಿಗೆ ಟಿಕೆಟ್ ಕೊಡಬೇಕು’ ಎಂದು ಯಡಿಯೂರ‍ಪ್ಪ ವಾದಿಸಿದರೆ, ಅಷ್ಟೇ ಏರಿದ ಧ್ವನಿಯಲ್ಲಿ ‘ತುಳಸಿ ಮುನಿರಾಜು ಗೌಡರು ನಿಷ್ಠಾವಂತ ಕಾರ್ಯಕರ್ತ, ಅವರಿಗೆ ಟಿಕೆಟ್ ಕೊಡಬೇಕು’ ಎಂದು ಪಕ್ಷದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ರತಿಪಾದಿಸಿದ್ದಾರೆ. ಯಡಿಯೂರಪ್ಪನವರ ಪಕ್ಷದ ಹಿರಿತನದ ಕಾರಣಕ್ಕೆ ಬಹುತೇಕರು ಈಗಲೂ ಮಾತನಾಡುವುದಿಲ್ಲ. ಆದರೆ, ಕಟೀಲ್ ಅಂತಹ ಕಿರಿಯ ವಯಸ್ಸಿನವರು( ಅವರು ಪಕ್ಷದ ಅಧ್ಯಕ್ಷರು ನಿಜ) ಎದುರು ನಿಂತು ವಾದಿಸುವ ಮಟ್ಟಕ್ಕೆ ನಿಲ್ಲುತ್ತಾರೆ ಎಂದರೆ ಪಕ್ಷದಲ್ಲಿ ಯಡಿಯೂರಪ್ಪನವರ ಬಲ ಕುಂದಿದೆ; ಅವರ ಮಾತಿಗೆ ಬೆಲೆ ನಿಧಾನವಾಗಿ ಕಡಿಮೆಯಾಗುತ್ತಿದೆ ಎಂಬುದಕ್ಕೆ ಇದೊಂದು ನಿದರ್ಶನ ಎಂಬ ಮಾತುಗಳು ಪಕ್ಷದ ಪಡಸಾಲೆಯಲ್ಲೇ ಆರಂಭವಾಗಿವೆ.

ನಿಧಾನವಾಗಿ ಯಡಿಯೂರಪ್ಪ ವಿರೋಧಿ ಬಣ ಮೇಲುಗೈಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ಪಕ್ಷದಲ್ಲಾಗುತ್ತಿರುವ ಬದಲಾವಣೆಗಳಿಗೆ ಇದೆಲ್ಲ ಸೂಚಕದಂತಿವೆ ಎಂಬ ವಿಶ್ಲೇಷಣೆಗಳು ಪಕ್ಷದಲ್ಲಿ ನಡೆಯಲಾರಂಭಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT