ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತ್ಯಾಚಾರ ಮತ್ತು ಲೈಂಗಿಕ ಸ್ವೇಚ್ಛಾಚಾರ

Last Updated 23 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಯುವತಿಯೊಬ್ಬಳು ಬಿಗಿಯಾದ ಜೀನ್ಸ್‌ ಪ್ಯಾಂಟ್‌, ಟಿ–ಷರ್ಟ್‌ ಧರಿಸಿ ತನ್ನ ಗೆಳೆಯನ ಜತೆಗೆ ತಡರಾತ್ರಿ ಸಿನಿಮಾ ವೀಕ್ಷಿಸಲು ಹೋಗುವುದೇಕೆ. ಇಂತಹ ನಡವಳಿಕೆ ಸ್ವಚ್ಛಂದ ಲೈಂಗಿಕ ಸಂಬಂಧವನ್ನು ಸೂಚಿಸುವುದಿಲ್ಲವೇ. ಇಂತಹ ಸಂಬಂಧಗಳ ಕುರಿತು ಯುವತಿಯು ತನ್ನ ಪಾಲಕರಿಗೆ ಅಥವಾ ತಾನು ಓದುವ ಕಾಲೇಜ್‌ನ ಆಡಳಿತ ಮಂಡಳಿಯ ಗಮನಕ್ಕೆ ತರುವುದಿಲ್ಲ ಏಕೆ?

ಆಕೆಯ ತಂದೆ, ಮಗಳ ಸುರಕ್ಷತೆಗಾಗಿ ಚಾಲಕನಿರುವ ಕಾರ್‌ ಒದಗಿಸುವಷ್ಟು ಶ್ರೀಮಂತನೂ ಆಗಿರಲಾರ. ಆಕೆ ಅಥವಾ ಆಕೆಯ ಸ್ನೇಹಿತನ ಬಳಿ ಟ್ಯಾಕ್ಸಿ ಅಥವಾ ಆಟೊ ಬಾಡಿಗೆ ಪಡೆಯಲು ಹೆಚ್ಚಿಗೆ ಹಣವೂ ಇಲ್ಲದಿರುವಾಗ ತಡರಾತ್ರಿ ಸಿನಿಮಾಗೆ ಹೋಗುವ ಅಗತ್ಯ ಇತ್ತೇ. ಆಕೆ ಮತ್ತು ಆಕೆಯ ಸ್ನೇಹಿತ ದೆಹಲಿಯ ರಸ್ತೆಗಳಲ್ಲಿ ಒಂಟಿಯಾಗಿ ತಿರುಗುವ ಅನಿವಾರ್ಯತೆ ಏನಿತ್ತು. ಪ್ರಯಾಣಿಕರು ಇಲ್ಲದ, ಆ ಮಾರ್ಗದಲ್ಲಿ ಪ್ರತಿದಿನವೂ ಸಂಚರಿಸದ, ಸುಸಂಸ್ಕೃತರಲ್ಲದ ಸಿಬ್ಬಂದಿ ಇರುವ ಬಸ್‌ಗೆ ಕೈ ಅಡ್ಡ ಹಾಕಿ ನಿಲ್ಲಿಸಿ ಹತ್ತುವ ಅಗತ್ಯ ಏನಿತ್ತು. ನಗರದಲ್ಲಿ ಸಾಮೂಹಿಕ ಅತ್ಯಾಚಾರ ಘಟನೆಗಳು ನಡೆಯುತ್ತಿರುವಾಗ ಬಸ್‌ ಏರುವ ಮುಂಚೆ ಅವರಿಬ್ಬರೂ ಸಾಕಷ್ಟು ಬಾರಿ ಸಾರಾಸಾರ ವಿಚಾರ ಮಾಡಬಹುದಿತ್ತಲ್ಲ?

ಇಂತಹ ಪರಿಸ್ಥಿತಿಯಲ್ಲಿ ಅವರಿಬ್ಬರಲ್ಲಿ ಒಬ್ಬರಿಗೂ ಅಪಾಯದ ಬಗ್ಗೆ ಸಾಧ್ಯತೆ ಹೊಳೆಯದಿರುವುದು ಸೋಜಿಗ. ಹಾಗಿದ್ದರೆ ಇದೆಂತಹ ಮೂರ್ಖತನದ, ದುಸ್ಸಾಹಸದ ಮತ್ತು ಬೇಜವಾಬ್ದಾರಿಯ ನಡವಳಿಕೆ. ಇಂತಹ ಸಂದರ್ಭದಲ್ಲಿ ಪಾಲಕರಿಗೆ ಕರೆ ಮಾಡಿ ಅವರ ನೆರವು ಅಥವಾ ಸಲಹೆ ಪಡೆಯಲಿಲ್ಲ ಏಕೆ. ಬಸ್‌ನಲ್ಲಿದ್ದ ಸಿಬ್ಬಂದಿ, ಯುವತಿ ಮೇಲೆ ಅತ್ಯಾಚಾರ ಎಸಗಿ, ಯುವಕನ ಮೇಲೆ ಹಲ್ಲೆ ನಡೆಸಿರುವುದು ತಪ್ಪು. ಆದರೆ, ಬಸ್‌ ಸಿಬ್ಬಂದಿ ಪ್ರಚೋದನೆಗೆ ಒಳಗಾಗುವಂತೆ ಯುವಕ ಮತ್ತು ಯುವತಿ ವರ್ತಿಸಿದ್ದು ಏಕೆ?

ಬಸ್‌ ಸಿಬ್ಬಂದಿ ಉದ್ರೇಕಕ್ಕೆ ಒಳಗಾಗಿ ಕೃತ್ಯ ಎಸಗಲು ಮುಂದಾದಾಗ, ಆಸಾರಾಮ ಬಾಪು ಅವರು ನಂತರದ ದಿನಗಳಲ್ಲಿ ಸಲಹೆ ನೀಡಿರುವಂತೆ ಯುವತಿಯು ಅವರನ್ನು ಸೋದರ ಎಂದು ಕರೆದು ರಾಖಿಯನ್ನೇಕೆ ಕಟ್ಟಲು ಮುಂದಾಗಲಿಲ್ಲ. ಒಂದು ವೇಳೆ ಈ ತಂತ್ರ ಫಲಿಸದೆ ಹೋದಾಗ, ಪ್ರತಿಕೂಲ ಪರಿಸ್ಥಿತಿ ಪರಿಗಣಿಸಿ ಸಹಕರಿಸಿದ್ದರೆ ಯುವತಿ ತನ್ನ ಜೀವ ಉಳಿಸಿಕೊಳ್ಳಬಹುದಿತ್ತಲ್ಲ. ತನ್ನ ಕಾಮತೃಷೆ ತಣಿಸಿಕೊಳ್ಳಲು ಯುವತಿಗೆ ಹೇಗೂ ಗೆಳೆಯನೊಬ್ಬನಿದ್ದ. ಹೀಗಾಗಿ ಅತ್ಯಾಚಾರಿಗಳ ಜತೆ ಮಾರಣಾಂತಿಕವಾಗಿ ಹೋರಾಟ ನಡೆಸುವ ಅಗತ್ಯ ಏನಿತ್ತು? – ಹೀಗೆಂದು ನಮ್ಮ ಕ್ರಿಮಿನಲ್ ವಕೀಲರು ರೂಢಿಗತವಾಗಿ ವಾದ ಮಂಡಿಸುತ್ತಾರೆ.

ಮೂರ್ಖ, ಪಾಪದ ಹುಡುಗರು ಯುವತಿಯನ್ನು ಕೊಂದಿರದಿದ್ದರೆ ಕಡಿಮೆ ಶಿಕ್ಷೆಗೆ ಅರ್ಹರಾಗಿರುತ್ತಿದ್ದರು. ಅಷ್ಟೇ ಅ‌ಲ್ಲ ಅವರ ವಿರುದ್ಧದ ಶಿಕ್ಷೆ ತಡೆಹಿಡಿಯಲೂ ಅವಕಾಶ ಇತ್ತು. ಈ ಅತ್ಯಾಚಾರ ಪ್ರಕರಣವು ಘಾಸಿಗೊಳಿಸುವಂತಹ ಹಿಂಸೆಯನ್ನೇನೂ ಒಳಗೊಂಡಿರಲಿಲ್ಲ. ಇಂತಹ ಪ್ರಕರಣದಲ್ಲಿ ಇದು ಮೊದಲನೇಯದ್ದೂ ಆಗಿರಲಿಲ್ಲ. ಕುಟುಂಬಗಳಲ್ಲಿ ನಡೆಯುವ ಶೇ 85ರಷ್ಟು ಅಹಿಂಸಾತ್ಮಕ ಅತ್ಯಾಚಾರ ಪ್ರಕರಣಗಳಲ್ಲಿ ಇದೂ ಒಂದಾಗಿತ್ತು ಅಷ್ಟೇ.

ಆರೋಪಿಗಳಿಗೆ ಬೆಂಗಳೂರಿನ ನಿಮ್ಹಾನ್ಸ್‌ನ ಅತ್ಯುತ್ತಮ ಮನಶಾಸ್ತ್ರಜ್ಞರಿಂದ ಸಮಾಲೋಚನೆ ನಡೆಸಿದರೆ ಅವರೆಲ್ಲ ಸಾಮಾನ್ಯರಂತೆ ಜೀವನ ನಡೆಸಬಹುದಾಗಿತ್ತು. ಕೋರ್ಟ್‌ ದೊಡ್ಡ ಮನಸ್ಸು ಮಾಡಿ ಇಂತಹ ಅವಕಾಶ ಕಲ್ಪಿಸಿಕೊಡಬೇಕಾಗಿತ್ತು. ಆದ್ಯತೆ ಮೇರೆಗೆ ಇಂತಹ ಸಮಾಲೋಚನೆಗೆ ಅವಕಾಶ ಮಾಡಿಕೊಟ್ಟು, ಕೋರ್ಟ್‌ಗೆ ವರದಿ ನೀಡಲು ‘ನಿಮ್ಹಾನ್ಸ್‌’ ನಿರ್ದೇಶಕರಿಗೆ ಸೂಚಿಸಬೇಕಿತ್ತು.

ಈ ಅತ್ಯಾಚಾರ ಪ್ರಕರಣವು ಎಂಟು ಜನರ ಮತ್ತು ಅಷ್ಟೇ ಸಂಖ್ಯೆಯ ಕುಟುಂಬಗಳ ದುರಂತಕ್ಕೆ ಸಂಬಂಧಿಸಿದೆ. ಅಮೂಲ್ಯ ಯುವ ಜೀವವೊಂದು ಆತ್ಮಹತ್ಯೆ ಮಾಡಿಕೊಂಡಿದೆ. ಮತ್ತೊಬ್ಬ ತನ್ನ ದೈಹಿಕ ಗಾಯಗಳನ್ನು ವಾಸಿಮಾಡಿಕೊಳ್ಳಲು ಹೆಣಗುತ್ತಿದ್ದಾನೆ. ನಾಲ್ವರಿಗೆ ಇನ್ನೂ ಗಲ್ಲು ಶಿಕ್ಷೆ ಜಾರಿ ಮಾಡಬೇಕಾಗಿದೆ.

ಎಲ್ಲಕ್ಕಿಂತ ಹೆಚ್ಚಾಗಿ, ಈ ಯುವಕರು ಸ್ವತಃ ತಮ್ಮನ್ನು ಮತ್ತು ತಮ್ಮ ಕುಟುಂಬಗಳನ್ನು ಘೋರ ಪರಿಸ್ಥಿತಿಗೆ ದೂಡಿರುವುದು ಕೂಡ ಕಳವಳಕಾರಿ ಸಂಗತಿಯಾಗಿದೆ. ಅತ್ಯಾಚಾರ, ದೈಹಿಕ ಹಲ್ಲೆಗೆ ಗುರಿಯಾದ ಯುವತಿ ಮತ್ತು ಯುವಕ ಹಾಗೂ ಕೃತ್ಯ ಎಸಗಿದವರ ಕುಟುಂಬಗಳಿಗೂ ಈ ಮಾತು ಅನ್ವಯಿಸುತ್ತದೆ.

...ಹೀಗೆಲ್ಲ ನಾನು ಬರೆದಿರುವುದನ್ನು ಕಂಡು ಓದುಗರಿಗೆ ಖಂಡಿತವಾಗಿಯೂ ದಿಗ್ಭ್ರಾಂತಿ ಆಗಿರಬಹುದು. ಹೌದು ನಾನು ಇಲ್ಲಿ, ಇಡೀ ದೇಶದಲ್ಲಿ ತಲ್ಲಣ ಮೂಡಿಸಿದ ನಿರ್ಭಯಾ (ಜ್ಯೋತಿ) ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೀಗೆಲ್ಲ ಬರೆಯಲು ಸಕಾರಣ ಇದೆ. ಹರಿಯಾಣದ ಸೋನೆಪತ್‌ನಲ್ಲಿ ಘಟಿಸಿದ ಇದೇ ಬಗೆಯ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಹೈಕೋರ್ಟ್‌ ತಳೆದಿರುವ ಚರ್ಚಾಸ್ಪದ ನಿಲುವಿನ ಕಾರಣಕ್ಕೆ ನಾನು ಹೀಗೆಲ್ಲ ಬರೆಯಬೇಕಾಯಿತು. ಇದನ್ನೆಲ್ಲ ಓದಿ ನನ್ನ ಜತೆ ನೀವೂ ಹುಚ್ಚರಾಗಿದ್ದರೆ ನಿಮ್ಮನ್ನು ತಲ್ಲಣಗೊಳಿಸುವ ನನ್ನ ತಂತ್ರ ಫಲಿಸಿದೆ ಎಂದರ್ಥ.

ನಿರ್ಭಯಾ ಪ್ರಕರಣ ಘಟಿಸಿದ ಎರಡು ವರ್ಷಗಳ ನಂತರ, ದೇಶದ ರಾಜಧಾನಿ ದೆಹಲಿಯ ಉತ್ತರ ಹೊರವಲಯದಲ್ಲಿ ಇರುವ ಹರಿಯಾಣ ರಾಜ್ಯದ ಸೋನೆಪತ್‌ನಲ್ಲಿ ಘಟಿಸಿದ ಇದೇ ಬಗೆಯ ಅತ್ಯಾಚಾರ ಪ್ರಕರಣ ಕುರಿತು ನಾವೀಗ ಗಮನ ಹರಿಸೋಣ.

ಸೋನೆಪತ್‌ನ ಒ.ಪಿ. ಜಿಂದಾಲ್‌ ಗ್ಲೋಬಲ್‌ ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿ ತನ್ನ ಸಹಪಾಠಿ ಗೆಳೆಯ ತನ್ನನ್ನು ಬ್ಲ್ಯಾಕ್‌ಮೇಲ್‌ ಮಾಡಿ (ಬೆದರಿಸಿ) ನಿರಂತರವಾಗಿ ಅತ್ಯಾಚಾರ ಎಸಗಿರುವುದರ ವಿರುದ್ಧ ನೀಡಿದ್ದ ದೂರಿನ ವಿಚಾರಣೆಗೆ ಸಂಬಂಧಿಸಿದಂತೆ ಕೆಲ ವಿಚಾರಗಳನ್ನೂ ನಾನು ಇಲ್ಲಿ ಹಂಚಿಕೊಳ್ಳುವೆ. ಸಹಪಾಠಿಯು ಆಕೆಯ ಮೇಲೆ ಹಲವಾರು ಬಾರಿ ಅತ್ಯಾಚಾರ ಎಸಗಿದ್ದ. ಈ ಕೃತ್ಯದಲ್ಲಿ ತನ್ನ ಇಬ್ಬರು ಗೆಳೆಯರನ್ನೂ ಸೇರಿಸಿಕೊಂಡಿದ್ದ. ಒಂದು ಬಾರಿಯಂತೂ ಈ ಮೂವರೂ ಸೇರಿಕೊಂಡು ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದರು ಎಂದೂ ವಿದ್ಯಾರ್ಥಿನಿ ದೂರಿದ್ದಳು.

ಸಹಪಾಠಿ ಗೆಳೆಯನು ತನ್ನ ನಗ್ನ ಚಿತ್ರಗಳನ್ನು ಅಂತರ್ಜಾಲದ ಮೂಲಕ ತನಗೆ ಕಳಿಸಿಕೊಟ್ಟು, ತಾನೂ ಹಾಗೆ ಮಾಡುವಂತೆ ಪುಸಲಾಯಿಸಿದ್ದ. ಅವನ ಮಾತಿಗೆ ಮರುಳಾಗಿ ಕಳಿಸಿದ ನನ್ನ ನಗ್ನ ಚಿತ್ರಗಳನ್ನು ಆತ ದುರ್ಬಳಕೆ ಮಾಡಿಕೊಳ್ಳಲು ಮುಂದಾಗಿದ್ದ. ತನ್ನೊಂದಿಗೆ ಲೈಂಗಿಕವಾಗಿ ಸಹಕರಿಸದಿದ್ದರೆ ಆ ಚಿತ್ರಗಳನ್ನು ಕ್ಯಾಂಪಸ್‌ನಲ್ಲಿ ಬಹಿರಂಗಪಡಿಸುವ ಮತ್ತು ಆಕೆಯ ಪಾಲಕರಿಗೆ ಕಳಿಸಿಕೊಡುವುದಾಗಿ ಬೆದರಿಕೆ ಒಡ್ಡಿದ್ದ ಎಂದು ಯುವತಿಯು ನ್ಯಾಯಾಧೀಶರ ಎದುರು ಅಪರಾಧ ದಂಡ ಸಂಹಿತೆಯ ಸೆಕ್ಷನ್‌ 164ರ ಅನ್ವಯ ಹೇಳಿಕೆ ನೀಡಿದ್ದಳು.

ನಿರ್ಭಯಾ ಪ್ರಕರಣದ ನಂತರ ಕಠಿಣಗೊಂಡ ಕಾಯ್ದೆ ಅನ್ವಯ, ಬೆದರಿಕೆ, ಅತ್ಯಾಚಾರ, ಬಲವಂತದಿಂದ ಮದ್ಯ ಕುಡಿಸಿದ ಆರೋಪದಡಿ ಯುವತಿಯ ಸಹಪಾಠಿ ಮತ್ತು ಆತನ ಗೆಳೆಯರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಸೆಕ್ಸ್‌ ಆಟಿಕೆ ಖರೀದಿಸಲು ಬೆದರಿಸಿದ್ದ ಗೆಳೆಯನು ಅವುಗಳನ್ನು ತಾನು ಬಳಸುವುದನ್ನು ಸ್ಕೈಪ್‌ ವಿಡಿಯೊ ಮೂಲಕ ವೀಕ್ಷಿಸುತ್ತಿದ್ದ ಎಂದೂ ಆಕೆ ಆರೋಪಿಸಿದ್ದಳು.

ಪ್ರಕರಣದ ವಿಚಾರಣೆಯಲ್ಲಿ ಎರಡೂ ಕಡೆಯವರು ತಮ್ಮ, ತಮ್ಮ ವಾದವನ್ನು ಬಲವಾಗಿ ಮಂಡಿಸಿದ್ದರು. ದೂರು ನೀಡಿದ ಯುವತಿ ಮತ್ತು ಆರೋಪಕ್ಕೆ ಒಳಗಾದವರು ಸ್ಥಿತಿವಂತ ಕುಟುಂಬದವರಾಗಿದ್ದರು. ಸಾಕಷ್ಟು ಹಣ ಸುರಿದು ಪರಿಣತ ವಕೀಲರನ್ನೇ ನೇಮಿಸಿಕೊಂಡಿದ್ದರು. ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡಿದ್ದ ನ್ಯಾಯಾಧೀಶೆ ಸುನಿತಾ ಗ್ರೋವರ್‌ ಅವರು , ಯುವತಿಯ ಆರೋಪಗಳನ್ನು ಪರಿಗಣಿಸಿದ್ದರು. ಆರೋಪಿಗಳಾದ ಮೂವರೂ ವಿದ್ಯಾರ್ಥಿಗಳ ವಿರುದ್ಧ ಅತ್ಯಾಚಾರ, ಬೆದರಿಕೆ, ಐ.ಟಿ ಕಾಯ್ದೆಯ ಉಲ್ಲಂಘನೆ ಆರೋಪದಡಿ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದ್ದರು.

ಆರೋಪಿಗಳು, ಈ ಶಿಕ್ಷೆ ವಿರುದ್ಧ ಈಗ ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಾರೆ. ಸದ್ಯಕ್ಕೆ ಈ ಮನವಿ ಪರಿಶೀಲನೆಯಲ್ಲಿ ಇದೆ. ನಮ್ಮ ನ್ಯಾಯಾಂಗ ವ್ಯವಸ್ಥೆಯಲ್ಲಿ ಕ್ರಿಮಿನಲ್‌ ಮನವಿಗಳನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲು ಸಾಕಷ್ಟು ವಿಳಂಬವಾಗುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ ಆಗಿದೆ. ಆರುಷಿ ಕೊಲೆ ಪ್ರಕರಣದಲ್ಲಿ, ಆಕೆಯ ಪಾಲಕರು ಅಲಹಾಬಾದ್‌ ಹೈಕೋರ್ಟ್‌ಗೆ 2013ರಲ್ಲಿ ಸಲ್ಲಿಸಿರುವ ಮನವಿಯು ಇನ್ನೂ ವಿಚಾರಣೆಗೆ ಬಂದಿಲ್ಲ.

ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್‌ ಕಳೆದ ವಾರ ಅತ್ಯಾಚಾರ ಆರೋಪಿಗಳಿಗೆ ಜಾಮೀನು ನೀಡಿದೆ. ಅವರಿಗೆ ವಿಧಿಸಿದ ಶಿಕ್ಷೆಯನ್ನು ಅಮಾನತುಗೊಳಿಸಿದೆ. ಶಿಕ್ಷೆಗೆ ತಾತ್ಕಾಲಿಕ ತಡೆ ನೀಡಲು ಸಾಕಷ್ಟು ಕಾರಣಗಳನ್ನು ಪಟ್ಟಿ ಮಾಡಿರುವ ಹೈಕೋರ್ಟ್‌ ಪೀಠವು, ತನ್ನ ಆದೇಶವನ್ನು ಸಮರ್ಥಿಸಿಕೊಂಡಿದೆ. ಆದರೆ, ಆರೋಪಿಗಳ ಮನವಿ ಮೇಲೆ ಪ್ರಭಾವ ಬೀರುವಂತಹ ಯಾವುದೇ ಹೇಳಿಕೆಯನ್ನು ತಾವು ತಮ್ಮ ಆದೇಶದಲ್ಲಿ ನೀಡಿಲ್ಲ ಎಂದೂ ನ್ಯಾಯಮೂರ್ತಿಗಳು ಹೇಳಿಕೊಂಡಿದ್ದಾರೆ.

ನಮ್ಮ ನ್ಯಾಯದಾನ ವ್ಯವಸ್ಥೆಯಲ್ಲಿ ಈ ಮೇಲ್ಮನವಿ ಪ್ರಕ್ರಿಯೆ ಸಾಕಷ್ಟು ಸಮಯ ತೆಗೆದುಕೊಳ್ಳುವುದರಿಂದ, ಮೂವರೂ ಯುವಕರು ಕೋರ್ಟ್‌ ಸಮ್ಮತಿ ಮೇರೆಗೆ ತಮ್ಮ ಬದುಕನ್ನು ಮರಳಿ ಕಟ್ಟಿಕೊಳ್ಳಲು, ಶಿಕ್ಷಣ ಪೂರ್ಣಗೊಳಿಸಲು, ಅಗತ್ಯ ಬಿದ್ದರೆ ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯಲು ಅವಕಾಶ ನೀಡುವುದು ಸಮಂಜಸ ನಿರ್ಧಾರವಾಗಿರಲಿದೆ.

ಈ ವಿದ್ಯಾರ್ಥಿಗಳಿಗೆ ನವದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಸಮಾಲೋಚನೆ ನಡೆಸಿ ಕೋರ್ಟ್‌ಗೆ ವರದಿ ಸಲ್ಲಿಸಲು ಅಲ್ಲಿನ ನಿರ್ದೇಶಕರಿಗೆ ಆದೇಶ ನೀಡಬೇಕು ಎಂದೂ ಹೈಕೋರ್ಟ್‌ ನ್ಯಾಯಮೂರ್ತಿಗಳು ಆದೇಶಿಸಿದ್ದಾರೆ. ತಮ್ಮ ಮಕ್ಕಳನ್ನು ಸುಧಾರಿಸಲು ಅಗತ್ಯವಾದ ಕ್ರಮ ಕೈಗೊಂಡು, ಅದರ ಪ್ರಗತಿಯ ವರದಿಯನ್ನು ಕೋರ್ಟ್‌ಗೆ ಸಲ್ಲಿಸಬೇಕು ಎಂದೂ ಪೀಠವು ಸೂಚಿಸಿದೆ.

ನ್ಯಾಯಮೂರ್ತಿಗಳ ಆದೇಶ ಪ್ರಶ್ನಿಸುವುದು ನನ್ನ ಉದ್ದೇಶವಾಗಿಲ್ಲ. ಅತ್ಯಾಚಾರ ದೂರು ನೀಡಿರುವ ವಿದ್ಯಾರ್ಥಿನಿಯ ಪೂರ್ವಾಪರ, ನಡತೆ, ಆರೋಪಿಗಳ ಜತೆಗಿನ ಆಕೆಯ ಸಂಬಂಧ ಆಧರಿಸಿ ನ್ಯಾಯಮೂರ್ತಿಗಳು ಈ ತೀರ್ಮಾನಕ್ಕೆ ಬಂದಿದ್ದಾರೆ. ಆ ಬಗ್ಗೆ ಯಾವುದೇ ವಾದ ವಿವಾದ ಇಲ್ಲ. ನಾವೀಗ ಅಂತಿಮ ಆದೇಶವನ್ನು ಎದುರು ನೋಡಬೇಕಾಗಿದೆಯಷ್ಟೆ.

ಗೌರವಾನ್ವಿತ ನ್ಯಾಯಮೂರ್ತಿಗಳು ನೀಡಿರುವ 12 ಪುಟಗಳ ಆದೇಶಗಳಲ್ಲಿನ ಕೆಲ ವಿವರಗಳನ್ನು ನಾನು ಇಲ್ಲಿ ಓದುಗರಿಗೆ ನೀಡಲು ಇಚ್ಛಿಸಿರುವೆ. ಕಾನೂನು ಬಲ್ಲ ನನ್ನ ಸಹೋದ್ಯೋಗಿ ಅಪೂರ್ವ ವಿಶ್ವನಾಥ ಅವರು ನನ್ನ ವಾದಕ್ಕೆ ಪ್ರಸ್ತುತವಾದ ಮಾಹಿತಿ ಕಲೆ ಹಾಕಲು ನೆರವಾಗಿದ್ದಾರೆ.

ಅತ್ಯಾಚಾರ ಆರೋಪಿಯ ಹೇಳಿಕೆ ಮತ್ತು ಪಾಟೀ ಸವಾಲಿಗೆ ಆಕೆ ನೀಡಿದ ಉತ್ತರದ ಪ್ರಕಾರ, ಯುವತಿಯು ಈ ಮೂವರು ಆರೋಪಿಗಳ ಜತೆ ಸಾಕಷ್ಟು ಬಾರಿ ಸ್ವೇಚ್ಛಾಚಾರದ ದೈಹಿಕ ಸಂಬಂಧ ಹೊಂದಿದ್ದಳು. ಯಾವುದೇ ಸಂದರ್ಭದಲ್ಲಿಯೂ ಆಕೆ ತಾನು ಎದುರಿಸುತ್ತಿರುವ ಮಾನಸಿಕ ಕ್ಷೋಭೆಯನ್ನು ಕಾಲೇಜ್‌ ಆಡಳಿತ ಮಂಡಳಿಯ, ತನ್ನ ಪಾಲಕರ ಅಥವಾ ಸ್ನೇಹಿತೆಯರ ಜತೆ ಹಂಚಿಕೊಂಡಿರಲಿಲ್ಲ.

ಹಾಸ್ಟೆಲ್‌ ವಾರ್ಡನ್‌ ತನ್ನ ಕೋಣೆಯಿಂದ ಕಾಂಡೋಮ್‌ಗಳನ್ನು ವಶಪಡಿಸಿಕೊಂಡಿದ್ದನ್ನೂ ಆಕೆ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಳು. ಈ ಸಂಗತಿಯನ್ನೂ ಆಕೆಯ ಪಾಲಕರ ಗಮನಕ್ಕೆ ತರಲಾಗಿರಲಿಲ್ಲ. ತಾನು ಸಿಗರೇಟ್ ಸೇದುತ್ತಿರುವುದನ್ನೂ ಆಕೆ ಒಪ್ಪಿಕೊಂಡಿದ್ದಳು. ಮಾದಕ ವಸ್ತು ಸೇವಿಸಿದ್ದನ್ನೂ ಒಪ್ಪಿಕೊಂಡಿದ್ದ ಆಕೆ, ಅದು ತನ್ನ ಆಯ್ಕೆಯಾಗಿರಲಿಲ್ಲ. ಮಾದಕ ದ್ರವ್ಯ ಸೇವಿಸುವಂತೆ ತನಗೆ ಬಲವಂತ ಮಾಡಲಾಗಿತ್ತು ಎಂದು ಹೇಳಿಕೆ ನೀಡಿದ್ದಳು.

ಒಟ್ಟಾರೆ, ಈ ಅತ್ಯಾಚಾರ ಪ್ರಕರಣವು ಮಾದಕ ವ್ಯಸನ, ಮದ್ಯ ಸೇವಿಸುವ ಚಟದ ದಾಸರಾಗಿರುವ, ಲೈಂಗಿಕ ಸ್ವೇಚ್ಛಾಚಾರ ಮನೋಭಾವದ ಯುವ ಜನಾಂಗದ ಮನಸ್ಥಿತಿಯನ್ನು ಸಮರ್ಥವಾಗಿ ಪ್ರತಿನಿಧಿಸುತ್ತದೆ. ನಾಲ್ಕು ಯುವ ಜೀವಗಳು ಮತ್ತು ಅಷ್ಟೇ ಸಂಖ್ಯೆಯ ಕುಟುಂಬಗಳು ಭಾರಿ ಕಂದರಕ್ಕೆ ಬಿದ್ದಿರುವ ದುರಂತ ಘಟನೆಯೂ ಇದಾಗಿದೆ.

1988ರಲ್ಲಿ ಬಿಡುಗಡೆಯಾಗಿದ್ದ ಜೋನಾಥನ್‌ ಕಲ್ಪನ್‌ ಅವರ ಪ್ರಶಸ್ತಿ ವಿಜೇತ ಚಲನಚಿತ್ರ ‘ದ ಅಕ್ಯೂಸ್ಡ್‌’ನಲ್ಲಿ ನಟಿ ಜೂಡಿ ಫಾಸ್ಟರ್‌, ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದ ದುಡಿಯುವ ಮಹಿಳೆಯ ಪಾತ್ರದಲ್ಲಿ ನಟಿಸಿದ್ದಳು. ಅತ್ಯಾಚಾರ ಆರೋಪಿಗಳ ಪರ ಸಾಕ್ಷ್ಯ ಹೇಳುವ ವ್ಯಕ್ತಿಯು, ಅತ್ಯಾಚಾರ ಸಮರ್ಥಿಸಿಕೊಳ್ಳುತ್ತ ‘ಆಕೆಯ ಮೇಲೆ ಅತ್ಯಾಚಾರ ನಡೆಯಿತೇ. ಆಕೆ ವೇಶ್ಯೆ. ಅದನ್ನು... ಅವಳು ಇಷ್ಟಪಟ್ಟಿದ್ದಳು. ಈಗ ಆಕೆ ಇತರರ ವಿರುದ್ಧ ಅತ್ಯಾಚಾರ ಆರೋಪ ಮಾಡುತ್ತಿದ್ದಾಳೆ’ ಎಂದು ಹೇಳಿಕೆ ನೀಡಿರುತ್ತಾನೆ. 1988ರಲ್ಲಿ ಬಿಡುಗಡೆಯಾಗಿದ್ದ ಚಲನಚಿತ್ರದಲ್ಲಿಯೂ ಅತ್ಯಾಚಾರವನ್ನು ಸಮರ್ಥಿಸಿಕೊಳ್ಳಲು ಈ ಹೇಳಿಕೆ ಸ್ವೀಕಾರ್ಹವಾಗಿರಲಿಲ್ಲ. ಹಾಗಿದ್ದರೆ, 2017ರಲ್ಲಿ ವಾಸ್ತವ ಬದುಕಿನಲ್ಲಿ ಅದನ್ನು ಸಮರ್ಥಿಸಿಕೊಳ್ಳುವುದು ಎಷ್ಟರಮಟ್ಟಿಗೆ ಸರಿ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT