ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅದ್ಲ್–ಎ–ಜಹಾಂಗೀರ್‌ ವ್ಯವಸ್ಥೆಯ ಆಧುನಿಕ ಅವತಾರ

Last Updated 30 ಅಕ್ಟೋಬರ್ 2017, 9:22 IST
ಅಕ್ಷರ ಗಾತ್ರ

ಭಾರತವನ್ನು ಗೆದ್ದುಕೊಂಡ ನಂತರ ಮೊಗಲರು ಮುಂದುವರಿಸಿದ ಪದ್ಧತಿಗಳಲ್ಲಿ ‘ದರ್ಶನ’ವೂ ಒಂದು. ಪ್ರಯಾಣ ಮಾಡುತ್ತಿಲ್ಲದ ಸಂದರ್ಭದಲ್ಲಿ, ಮೊಗಲ್ ಸಾಮ್ರಾಟರು ತಮ್ಮನ್ನು ‘ಕಾಣಲು’ ಬರುವ ಪ್ರಜೆಗಳಿಗೆ ಬಾಲ್ಕನಿಯಲ್ಲಿ ನಿಂತು ದಿನಕ್ಕೆ ಒಂದು ಬಾರಿ ದರ್ಶನ ನೀಡುತ್ತಿದ್ದರು. ಇದೊಂದು ರೀತಿಯಲ್ಲಿ ಮೂರ್ತಿಯ ದರ್ಶನದಂತೆಯೇ ಇರುತ್ತಿತ್ತು. ಆದರೆ ಇದರ ಮೂಲಕ, ‘ಸಾಮ್ರಾಜ್ಯ ಚೆನ್ನಾಗಿದೆ’ ಎಂಬ ಭಾವನೆ ಪ್ರಜೆಗಳಲ್ಲಿ ಮೂಡುತ್ತಿತ್ತು.

ಈ ವ್ಯವಸ್ಥೆಯು ಬಹಳ ಪ್ರಮುಖವಾಗಿತ್ತು. ಏಕೆಂದರೆ, ಸಾಮ್ರಾಟನ ಉಪಸ್ಥಿತಿ ಇಲ್ಲದಿದ್ದರೆ ಗಾಳಿ ಸುದ್ದಿಗಳು ಬಹಳ ವೇಗವಾಗಿ ಹರಡುತ್ತಿದ್ದವು, ಅರಾಜಕ ಸ್ಥಿತಿ ನಿರ್ಮಾಣಕ್ಕೆ ಕಾರಣವಾಗುತ್ತಿದ್ದವು. 1627ರಲ್ಲಿ ಜಹಾಂಗೀರ್ ಮೃತಪಟ್ಟಾಗ, ದುಷ್ಕರ್ಮಿಗಳು ಭಾರತದ ನಗರಗಳ ಮೇಲೆ ಹಿಡಿತ ಸಾಧಿಸಿದ್ದರು, ವ್ಯಾಪಾರಿಗಳು ತಮ್ಮ ಬಳಿ ಇದ್ದ ಸರಕುಗಳನ್ನು ಹೂತಿಡಬೇಕಾಯಿತು ಎಂದು ಜೈನ ಸಮುದಾಯಕ್ಕೆ ಸೇರಿದ ವರ್ತಕ ಬನಾರಸಿದಾಸ್ ತಮ್ಮ ಆತ್ಮಕಥೆ ‘ಅರ್ಧಕಥಾನಕ್’ದಲ್ಲಿ ಬರೆದಿದ್ದಾರೆ. ಉತ್ತರಾಧಿಕಾರಕ್ಕಾಗಿ ಮೊಗಲ್ ರಾಜಕುಮಾರರ ನಡುವಿನ ಹೋರಾಟ ಕೊನೆಗೊಂಡು, ಯುವರಾಜ ಖುರ್ರಂ ತಮ್ಮನ್ನು ಷಹಜಹಾನ್ ಎಂದು ಕರೆದುಕೊಂಡು, ಸಾಮ್ರಾಟರಾಗಿ ಅಧಿಕಾರ ಸ್ವೀಕರಿಸಿದ್ದಾರೆ ಎಂಬ ಸುದ್ದಿ ಹರಡುವವರೆಗೂ ಈ ಹಿಂಸಾಚಾರ ಹಾಗೂ ಗೊಂದಲಗಳು ಮುಂದುವರೆದಿದ್ದವಂತೆ.

ಹಾಗೆ ನೋಡಿದರೆ ಜಹಾಂಗೀರ್‌ ಬಹಳ ಸೋಮಾರಿ ಸಾಮ್ರಾಟನಾಗಿದ್ದ. ಅತಿಯಾದ ಮದ್ಯ ಸೇವನೆ ಅಥವಾ ಅಫೀಮು ಸೇವನೆಯ ಪರಿಣಾಮವಾಗಿ ಜಹಾಂಗೀರ್‌ ಪ್ರಜ್ಞೆ ಕಳೆದುಕೊಳ್ಳುವುದನ್ನು, ಸಂಜೆಯ ದರ್ಬಾರ್‌ ಹಠಾತ್‌ ಎಂದು ಕೊನೆಗೊಳ್ಳುವುದನ್ನು ಯುರೋಪಿನ ಪ್ರವಾಸಿಗರು ದಾಖಲಿಸಿದ್ದಾರೆ. ದರ್ಬಾರಿನಲ್ಲಿ ಇರುತ್ತಿದ್ದ ಖೋಜಾಗಳು ಅವಸರದಲ್ಲಿ ಅಲ್ಲಿನ ದೀಪಗಳನ್ನು ಆರಿಸಿ, ಮಹಾರಾಜನನ್ನು ಹಿಂಬಾಗಿಲಿನ ಮೂಲಕ ಕರೆದೊಯ್ಯುತ್ತಿದ್ದ
ರಂತೆ. ದರ್ಬಾರಿಗೆ ಬರುತ್ತಿದ್ದ ಅತಿಥಿಗಳು ಹಾಗೂ ಇತರರು ಮುಖ್ಯ ದ್ವಾರದ ಮೂಲಕ ಕತ್ತಲಿನಲ್ಲೇ ಹೊರಹೋಗಬೇಕಾಗುತ್ತಿತ್ತಂತೆ.

ದರ್ಶನದ ವ್ಯವಸ್ಥೆಗೆ ಜಹಾಂಗೀರ್‌ ಒಂಚೂರು ನ್ಯಾಯ ಕೊಡಿಸಿದ. ಜಹಾಂಗೀರನು ತನ್ನ ಅರಮನೆಗಳಲ್ಲಿ ಒಂದು ಸರಪಳಿಯನ್ನು ಇಟ್ಟಿರುತ್ತಿದ್ದನಂತೆ. ತೊಂದರೆಗೆ ಸಿಲುಕಿದ ಜನಸಾಮಾನ್ಯ ಅಲ್ಲಿಗೆ ಹೋಗಿ ಸರಪಳಿಯನ್ನು ಎಳೆಯಬಹುದಿತ್ತಂತೆ. ಆ ಸರಪಳಿಯು ಒಂದು ಗಂಟೆಗೆ ಜೋಡಣೆ ಆಗಿರುತ್ತಿತ್ತು, ಗಂಟೆಯ ಸದ್ದು ಕೇಳಿದ ತಕ್ಷಣ ಎದ್ದು ಬರುತ್ತಿದ್ದ ಸಾಮ್ರಾಟ, ವ್ಯವಸ್ಥೆಯಿಂದ ನ್ಯಾಯ ಪಡೆದುಕೊಳ್ಳಲು ಆಗದವರಿಗೆ ತಾನೇ ನ್ಯಾಯ ಒದಗಿಸುತ್ತಿದ್ದನಂತೆ.

ಇದನ್ನು ‘ಅದ್ಲ್‌-ಎ-ಜಹಾಂಗೀರ್’ ಅಥವಾ ಜಹಾಂಗೀರನ ನ್ಯಾಯ ಎಂದು ಕರೆಯಲಾಗುತ್ತಿತ್ತು. ಈ ವ್ಯವಸ್ಥೆಯು ಎಲ್ಲ ಪ್ರಜೆಗಳಿಗೆ ನ್ಯಾಯವು ಪರಮೋಚ್ಚ ಆಡಳಿತಗಾರನಿಂದ ತಕ್ಷಣ ಸಿಗುತ್ತದೆ ಎಂಬ ಖಾತ್ರಿ ನೀಡುತ್ತಿತ್ತು. ಇದು ಶುದ್ಧ ಬೋಗಸ್ ಆಗಿತ್ತು ಎಂಬುದು ನಿಜ. ಪ್ರಜೆಗಳಲ್ಲಿ ಒಬ್ಬೊಬ್ಬರ ಸಮಸ್ಯೆಯನ್ನೂ ಪರಿಹರಿಸುತ್ತ ಕೂರಲು ಸಾಮ್ರಾಟರಿಗೆ ಸಮಯ ಇರುವುದಿಲ್ಲ. ಅದರಲ್ಲಿಯೂ ಜಹಾಂಗೀರ್‌ ಸೋಮಾರಿಯಾಗಿದ್ದ, ಸ್ವಾರ್ಥಿಯೂ ಆಗಿದ್ದ. ನ್ಯಾಯ ಕೊಡಿಸುವುದರಲ್ಲಿ ಆಸಕ್ತನಾಗಿರುವ ವಿಚಾರ ಬದಿಗಿರಲಿ, ಜಹಾಂಗೀರ್ ಒಬ್ಬ ಅಮಾನುಷ ವ್ಯಕ್ತಿ ಕೂಡ ಆಗಿದ್ದ. ಇಬ್ಬರು ಪುರುಷರ ಕಾಲುಗಳ ಮೀನಖಂಡವನ್ನು ಕೆತ್ತಿಸಿದ್ದ ಜಹಾಂಗೀರ್, ಅವರಿಗೆ ಜೀವನ ಪರ್ಯಂತ ಸರಿಯಾಗಿ ನಡೆಯಲು ಆಗದಂತೆ ಮಾಡಿದ್ದ. ಕಾಡಿನೊಳಕ್ಕೆ ಅಡ್ಡಾದಿಡ್ಡಿಯಾಗಿ ನುಗ್ಗಿ, ಜಹಾಂಗೀರ್ ಗುರಿ ಇಟ್ಟಿದ್ದ ಹುಲಿಯನ್ನು ಬೆದರಿಸಿ ಓಡಿಸಿದ್ದೇ ಆ ಇಬ್ಬರು ಮಾಡಿದ ಅಪರಾಧವಾಗಿತ್ತು. ಜಹಾಂಗೀರ್ ಇದನ್ನು ತನ್ನ ಆತ್ಮಕಥೆ ‘ತುಜುಕ್-ಎ-ಜಹಾಂಗಿರಿ’ಯಲ್ಲಿ ಬರೆದುಕೊಂಡಿರುವ ಕಾರಣ ನಮಗೆ ಇದು ಗೊತ್ತಾಗಿದೆ.

ಹಾಗಾಗಿ, ಅದ್ಲ್-ಎ-ಜಹಾಂಗೀರ್‌ ವ್ಯವಸ್ಥೆಯ ಹಿಂಬದಿಯಲ್ಲಿ ಇದ್ದಿದ್ದು ಶತಮಾನಗಳಿಂದಲೂ ಭಾರತದಲ್ಲಿ ಇರುವ, ಇಂದಿಗೂ ಉಳಿದಿರುವ ಪರಿಸ್ಥಿತಿಯೇ. ಸಮಸ್ಯೆ ಪರಿಹರಿಸಲು ತಾವು ಖುದ್ದಾಗಿ ಮಧ್ಯಪ್ರವೇಶ ಮಾಡಿದ್ದೇವೆ ಎಂದು ಆಡಳಿತ ನಡೆಸುವವರು ತೋರಿಸಿಕೊಳ್ಳಬಹುದು. ಆದರೆ, ವಿಶ್ವದ ಬಹುತೇಕ ಕಡೆಗಳಲ್ಲಿ ಆಗುತ್ತಿರುವಂತೆ, ಒಂದು ವ್ಯವಸ್ಥೆಯ ಮೂಲಕ ಕೆಲಸ ಮಾಡಿಸಿಕೊಡಲು ಅವರಿಗೆ ಸಾಧ್ಯವಾಗಿಲ್ಲ ಅಥವಾ ಹಾಗೆ ಮಾಡಲು ಅವರಿಗೆ ಆಸಕ್ತಿ ಇಲ್ಲ.

ನಮ್ಮ ವಿದೇಶಾಂಗ ಸಚಿವರು ಕೆಲಸ ಮಾಡುತ್ತಿರುವ ರೀತಿಯನ್ನು ಕಂಡು ನಾನು ಇದನ್ನು ಬರೆಯುತ್ತಿದ್ದೇನೆ. ಸುಷ್ಮಾ ಸ್ವರಾಜ್ ಅವರ ಟ್ವಿಟರ್ ಖಾತೆಯು ಅದ್ಲ್-ಎ-ಜಹಾಂಗೀರ್‌ ವ್ಯವಸ್ಥೆಯ ಆಧುನಿಕ ಅವತಾರ. ಈ ಖಾತೆಯ ಕಾರಣದಿಂದಾಗಿ ಈಚಿನ ದಿನಗಳಲ್ಲಿ ಪ್ರಕಟವಾದ ಕೆಲವು ಪತ್ರಿಕಾ ತಲೆಬರಹಗಳು ಹೀಗಿದ್ದವು: ‘ಅನಾರೋಗ್ಯ ಪೀಡಿತ ಮಗುವಿನ ಬಗ್ಗೆ ಸುಷ್ಮಾ ಸ್ವರಾಜ್ ಅವರಿಗೆ ಟ್ವೀಟ್ ಮಾಡಿದ ಪಾಕಿಸ್ತಾನದ ವ್ಯಕ್ತಿಗೆ ವೈದ್ಯಕೀಯ ವೀಸಾ’ (ಜೂನ್‌ 2); ‘ಲಾಹೋರ್‌ನ ಪುಟಾಣಿಗೆ ನೊಯಿಡಾದಲ್ಲಿ ಹೃದಯ ಶಸ್ತ್ರ ಚಿಕಿತ್ಸೆಗೆ ಸುಷ್ಮಾ ಸ್ವರಾಜ್ ಸಹಾಯ’ (ಜೂನ್‌ 11); ‘ಕಾರ್ಕಳದ ದಾದಿ ಸೌದಿ ಅರೇಬಿಯಾದಿಂದ ತವರಿಗೆ ವಾಪಸಾಗುವ ಭರವಸೆ ಹುಟ್ಟಿಸಿದ ಸುಷ್ಮಾ ಸ್ವರಾಜ್ ಅವರ ಟ್ವೀಟ್’ (ಜೂನ್‌ 25). ಸುಷ್ಮಾ ಅವರು ಈ ಟ್ವೀಟ್ ಮಾಡಿದ್ದು ರಿಯಾದ್‌ನಲ್ಲಿ ಇರುವ ಭಾರತದ ದೂತಾವಾಸ ಕಚೇರಿಯ ಟ್ವಿಟರ್ ಖಾತೆಯನ್ನು ಉದ್ದೇಶಿಸಿ. ಇದರಲ್ಲಿ ಸುಷ್ಮಾ ಅವರು, ‘ಜಾವೆದ್, ಈ ಮಹಿಳೆಯನ್ನು ರಕ್ಷಿಸಲು ದಯವಿಟ್ಟು ಸಹಾಯ ಮಾಡಿ’ ಎಂದು ಬರೆದಿದ್ದರು. ಅದರ ಜೊತೆಯಲ್ಲೇ ದಾದಿಯ ಬಗ್ಗೆ ಪ್ರಕಟವಾಗಿರುವ ಸುದ್ದಿಯ ಕೊಂಡಿಯೊಂದನ್ನು ನೀಡಿದ್ದರು.

ಈ ಶೀರ್ಷಿಕೆಗಳು ಜೂನ್‌ ನಂತರದವು. ಏಕೆಂದರೆ ನಾನೇ ಇಂಥವುಗಳನ್ನು ಒಗ್ಗೂಡಿಸಲು ಆರಂಭಿಸಿದ್ದೇ ಆ ತಿಂಗಳಲ್ಲಿ. ಅಕ್ಟೋಬರ್ 27ರಂದು (ಶುಕ್ರವಾರ) ಸುಷ್ಮಾ ಅವರು ದುಬೈನಲ್ಲಿರುವ ಭಾರತದ ಕಾನ್ಸುಲೇಟ್ ಕಚೇರಿ ಉದ್ದೇಶಿಸಿ ಒಂದು ಟ್ವೀಟ್ ಮಾಡಿದ್ದಾರೆ. ‘ವಿಪುಲ್, ತಾಯಿಯ ಅಂತ್ಯಸಂಸ್ಕಾರದಲ್ಲಿ ಹಾಜರಿರಲು ಈ ವ್ಯಕ್ತಿಗೆ ಸಹಾಯ ಮಾಡಿ’ ಎಂದು ಬರೆದಿದ್ದಾರೆ. ಹಾಗೆಯೇ, ವ್ಯಕ್ತಿಯೊಬ್ಬರ ಪ್ರಯಾಣ ದಾಖಲೆಗಳ ಕುರಿತು ಭೋಪಾಲ್‌ನಲ್ಲಿರುವ ಪಾಸ್‌ಪೋರ್ಟ್‌ ಕಚೇರಿಗೆ ಟ್ವೀಟ್ ಮಾಡಿದ್ದಾರೆ.

ಕರುಣೆ ಹೊಂದಿರುವ ಹಾಗೂ ಚಲನಶೀಲ ರಾಜಕಾರಣಿಯೊಬ್ಬರ ಕೆಲಸಗಳು ಇವು ಎಂಬಂತೆ ಈ ಟ್ವೀಟ್‌ಗಳನ್ನು ಮಾಧ್ಯಮಗಳಲ್ಲಿ ತೋರಿಸಲಾಗುತ್ತಿದೆ. ಆದರೆ, ಒಂದೆರಡುಪ್ರಕರಣಗಳನ್ನು ಟ್ವಿಟರ್ ಮೂಲಕ ನಿಭಾಯಿಸುವ ಮೂಲಕ ಸುಷ್ಮಾ ಅವರು ಗಮನವನ್ನು ವ್ಯವಸ್ಥೆಯ ಸುಧಾರಣೆ ಹಾಗೂ ಕಾರ್ಯನಿರ್ಹಣೆಯಿಂದ ಬೇರೆಡೆ ಸೆಳೆಯುತ್ತಿದ್ದಾರೆ. ಇದರಿಂದಾಗಿ, ಭಾರತದ ವಿದೇಶಾಂಗ ಸಚಿವರು ವೈಯಕ್ತಿಕವಾಗಿ ಗಮನ ಹರಿಸಿದರೆ ತಮ್ಮ ಸಮಸ್ಯೆಗಳು ಪರಿಹಾರ ಆಗುತ್ತವೆ ಎಂಬ ತಪ್ಪು ನಂಬಿಕೆಯನ್ನು ಜನ ಬೆಳೆಸಿಕೊಳ್ಳುತ್ತಾರೆ. ರಾಜತಾಂತ್ರಿಕರು ಹಾಗೂ ಅಧಿಕಾರಿಗಳು ವ್ಯವಸ್ಥೆಗೆ ಸಂಬಂಧಿಸಿದ ತಮ್ಮ ಕೆಲಸ ಬಿಟ್ಟು, ಸುಷ್ಮಾ ಅವರು ಮಾಡುವ ಟ್ವೀಟ್‌ಗಳಿಗೆ ಸ್ಪಂದಿಸಲು ಕೂರುತ್ತಾರೆ.

ಪಾಕಿಸ್ತಾನ, ನೇಪಾಳ, ಶ್ರೀಲಂಕಾ ಅಥವಾ ಮ್ಯಾನ್ಮಾರ್ ವಿಚಾರದಲ್ಲಿ ನಾವು ಸ್ಪಷ್ಟವಾದ ವಿದೇಶಾಂಗ ನೀತಿಯನ್ನು ಹೊಂದಿಲ್ಲ. ಆದರೆ ಇ-ದರ್ಶನ ಹಾಗೂ ಇ-ದರ್ಬಾರ್‌ಗಳು, ಗಜಗಾತ್ರದ ವ್ಯವಸ್ಥೆಯೊಂದು ಅವಿರತವಾಗಿ ಕೆಲಸ ಮಾಡುತ್ತಿದೆ ಎಂಬ ಭ್ರಮೆಯನ್ನು ಮೂಡಿಸುತ್ತವೆ. ಪಾಕಿಸ್ತಾನದ ರೋಗಪೀಡಿತ ಮಗುವಿಗೆ ಶಸ್ತ್ರಚಿಕಿತ್ಸೆ! ಈಜಿಪ್ಟ್‌ನ ದಢೂತಿ ಮಹಿಳೆಗೆ ಶಸ್ತ್ರಚಿಕಿತ್ಸೆ! ವೀಸಾ ಪಡೆಯಲು ಕೇಂದ್ರ ಸಚಿವರ ಮಧ್ಯಪ್ರವೇಶ ಏಕೆ ಬೇಕು? ಪ್ರಪಂಚದ ಯಾವುದೇ ನಾಗರಿಕ ದೇಶ ಟ್ವಿಟರ್ ಮೂಲಕ ವೀಸಾ ಖಾತರಿ ನೀಡುತ್ತದೆಯೇ? ಅಮರಿಕ ಅಥವಾ ಬ್ರಿಟನ್ ಹೀಗೆ ಮಾಡುತ್ತವೆಯೇ? ಇಲ್ಲ. ಆ ದೇಶಗಳು ಇಂತಹ ಕೆಲಸಗಳಿಗೆ ಒಂದು ಪ್ರಕ್ರಿಯೆಯನ್ನು ರೂಪಿಸಿವೆ. ಆದರೆ ನಾವು ದರ್ಬಾರ್‌ಗಳನ್ನು ಹೊಂದಿದ್ದೇವೆ.

ನಮ್ಮ ಸಚಿವರಿಗೆ ಮಾಡಲು ಬೇರೆ ಕೆಲಸಗಳು ಇಲ್ಲವೇ? ನನಗೆ ಒಂದು ಕೆಲಸ ಇದೆ. ನಾನು ಬರವಣಿಗೆ ಹಾಗೂ ಓದುವ ಕೆಲಸವನ್ನು ಮುಖ್ಯ ಕೆಲಸದ ಜೊತೆಯಲ್ಲಿ ಮಾಡುತ್ತೇನೆ. ಆದರೆ ನನಗಂತೂ ಟ್ವೀಟ್ ಮಾಡಲು ಸಮಯ ಇಲ್ಲ, ಸುಷ್ಮಾ ಅವರಿಗೆ ಎಲ್ಲಿಂದ ಸಿಗುತ್ತದೆ ಸಮಯ? ಭಾರತದ ವಿದೇಶಾಂಗ ನೀತಿಗೆ ಸಂಬಂಧಿಸಿದ ಬಹುತೇಕ ಕೆಲಸಗಳು ಪ್ರಧಾನ ಮಂತ್ರಿಯವರ ಕಚೇರಿಯಿಂದ ನಡೆಯುತ್ತವೆ ಎಂಬುದು ನಿಜ. ಚೀನಾ, ಪಾಕಿಸ್ತಾನ ಮತ್ತು ಇಸ್ರೇಲ್‌ಗೆ ಸಂಬಂಧಿಸಿದ ವಿಚಾರಗಳನ್ನು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊಭಾಲ್ ನೋಡಿಕೊಳ್ಳುತ್ತಾರೆ. ಏಕೆಂದರೆ, ಮೋದಿ ಅವರು ಭಾರತದ ವಿದೇಶಾಂಗ ನೀತಿಯನ್ನು ನೆಹರೂ ಪ್ರಣೀತ ವಿಚಾರಗಳ ಮೂಲಕ ನಿರ್ವಹಿಸುವುದಿಲ್ಲ, ಅಂದರೆ ಭಾರತದ ನಾಗರಿಕ ಮೌಲ್ಯಗಳ ಆಧಾರದಲ್ಲಿ ಬೇರೆ ದೇಶಗಳ ಜೊತೆ ವ್ಯವಹರಿಸುವುದಿಲ್ಲ. ಅವರು ರಕ್ಷಣೆ, ಭಯೋತ್ಪಾದನೆಯಂತಹ ವಿಚಾರಗಳ ಆಧಾರದಲ್ಲಿ ವಿದೇಶಾಂಗ ನೀತಿ ನಿರ್ವಹಿಸುತ್ತಾರೆ.

ಪ್ರಮುಖ ಕೆಲಸಗಳಲ್ಲಿ ಬಹುಪಾಲನ್ನು ಇತರರು ಹೀಗೆ ನಿಭಾಯಿಸುತ್ತಿರುವ ಕಾರಣ, ಸುಷ್ಮಾ ಅವರು ಮಾಡಲು ಬೇರೇನಾದರೂ ಕಂಡುಕೊಳ್ಳಬೇಕು. ಟ್ವಿಟರ್, ವೀಸಾ ವಿಚಾರಗಳು ಅಂಥವುಗಳಲ್ಲಿ ಒಂದು. ಇದರಿಂದಾಗಿ ಸುಷ್ಮಾ ಅವರು ಕನಿಷ್ಠ ಪಕ್ಷ ಮಾಧ್ಯಮಗಳ ಕಣ್ಣಿಗಾದರೂ ‘ಸಕ್ರಿಯ’ ಸಚಿವರಾಗಿ ಕಾಣಿಸುತ್ತಾರೆ. ಆದರೆ, ಇಂತಹ ದರ್ಶನ ವ್ಯವಸ್ಥೆಯ ಅಗತ್ಯ ಇಲ್ಲ ಎಂದು ಸುಷ್ಮಾ ಅವರಿಗೆ ಹೇಳಬೇಕು. ಅದು ದರ್ಬಾರ್ ಸಂಸ್ಕೃತಿಯನ್ನು ಉತ್ತೇಜಿ
ಸುತ್ತದೆ. ಅದು ಕೆಲವರಿಗೆ ಅನುಕೂಲ ಮಾಡಿಕೊಟ್ಟರೂ, ವ್ಯವಸ್ಥೆಯನ್ನು ಹಾಳು ಮಾಡುತ್ತದೆ.

(ಲೇಖಕ ಅಂಕಣಕಾರ ಹಾಗೂ ಆಮ್ನೆಸ್ಟಿ ಇಂಟರ್ ನ್ಯಾಷನಲ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT