ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರದ ಅಮಲು ಅವರಿಗೇಕಿಲ್ಲ?... ನಮಗೇಕಿದೆ?...

Last Updated 13 ಆಗಸ್ಟ್ 2011, 19:30 IST
ಅಕ್ಷರ ಗಾತ್ರ

ಅದು ಇಟಲಿ ದೇಶದ ಟಸ್ಕಾನ್ ಪಟ್ಟಣ. ಅಲ್ಲಿನ ಹೋಟೆಲ್‌ಗೆ ಒಬ್ಬ ವ್ಯಕ್ತಿ ಹೋಗಿ ಎರಡು ಕಪ್ ಕಾಫಿ ಕೇಳಿದರು. ಹೋಟೆಲ್‌ನ ವೇಟ್ರೆಸ್ ಕಾಫಿ ಮಾಡಿ ತನ್ನ ಮುಂದಿನ ಕಟ್ಟೆಯ ಮೇಲೆ ಇಟ್ಟು ಆ ವ್ಯಕ್ತಿಯನ್ನು ಕರೆದು, `ನೀನೇ ನಿನ್ನ ಟೇಬಲ್‌ಗೆ ತೆಗೆದುಕೊಂಡು ಹೋಗು. ನನಗೆ ನಿನ್ನ ಟೇಬಲ್ ವರೆಗೆ ತಂದು ಕೊಡಲು ಆಗದು.

ಇಲ್ಲಿ ಕೆಲಸ ಜಾಸ್ತಿ~ ಎಂದಳು. ಆ ವ್ಯಕ್ತಿ ಕಾಫಿ  ತೆಗೆದುಕೊಂಡು ಹೋಗಿ ಪತ್ನಿಯ ಜತೆಗೆ ಕುಡಿದ. ಕಾಫಿಯ ಬಿಲ್ ಮಾತ್ರ ಕೊಟ್ಟು ಹೋದ. ವಿದೇಶದಲ್ಲಿ ಬಿಲ್‌ನ ಶೇಕಡ 15ರಷ್ಟು ಹಣವನ್ನು ಟಿಪ್ಸ್ ರೂಪದಲ್ಲಿ ಕೊಡುವುದು ಕಡ್ಡಾಯ. ಆದರೆ, ಆತ ಟಿಪ್ಸ್ ಇಟ್ಟಿರಲಿಲ್ಲ. ಆತ ಹೊರಟು ಹೋದ ಮೇಲೆ ವೇಟ್ರೆಸ್ ಫ್ರಾನ್ಸೆಕಾ ಆರಿಯಾನಿ ಈತನನ್ನು ಎಲ್ಲಿಯೋ ನೋಡಿದಂತಿದೆಯಲ್ಲ ಎಂದು ತಲೆ ಕೆರೆದುಕೊಂಡಳು. ತಕ್ಷಣ ಆಕೆಗೆ ನೆನಪಾಯಿತು ಆತ, ಪಕ್ಕದ ದೇಶ ಬ್ರಿಟನ್‌ನ ಪ್ರಧಾನಿ ಡೇವಿಡ್ ಕ್ಯಾಮರಾನ್ ಎಂದು! ಇದು ಹೇಗೋ ಸುದ್ದಿಯಾಯಿತು. ಒಂದು ವಾರ ಕಾಲ ಟಸ್ಕಾನ್ ಪಟ್ಟಣದ ಸುತ್ತಮುತ್ತ ಪತ್ನಿ, ಮಗಳು ಮತ್ತು ಗೆಳೆಯರ ಜತೆಗೆ ರಜೆ ಕಳೆಯಲು ಬಂದಿದ್ದ ಕ್ಯಾಮರಾನ್ ಮೊನ್ನೆ ಮತ್ತೆ ಅದೇ ಹೋಟೆಲ್‌ಗೆ ಬಂದರು. ಫ್ರಾನ್ಸೆಕಾಳನ್ನು ಭೇಟಿ ಮಾಡಿದರು. ತಮ್ಮನ್ನು ಗುರುತಿಸದೇ ಇದ್ದುದಕ್ಕೆ ಬೇಸರ ಮಾಡಿಕೊಳ್ಳಬೇಕಾದ ಅಗತ್ಯವೇನೂ ಇಲ್ಲ ಎಂದು ಆಕೆಗೆ ಸಮಾಧಾನ ಹೇಳಿದರು. ಹೋಗುವಾಗ ಮತ್ತೆ ಕಾಫಿ  ಕುಡಿದು ಸಾಕಷ್ಟು ಟಿಪ್ಸ್ ಇಟ್ಟು ಹೊರಟು ಹೋದರು. ಇಂಗ್ಲೆಂಡ್ ಪ್ರಧಾನಿ ಮತ್ತೆ ಬಂದು ತನ್ನನ್ನು ಭೇಟಿ ಮಾಡಿ ಮಾತನಾಡಬಹುದು ಎಂದು ಫ್ರಾನ್ಸೆಕಾ ಕನಸು ಮನಸಿನಲ್ಲಿಯೂ ಯೋಚಿಸರಲಿಲ್ಲ. `ಆತ ಎಷ್ಟು ಒಳ್ಳೆಯ ಮನುಷ್ಯ~ ಎಂದು ಆಕೆ ಸಂಭ್ರಮಪಟ್ಟಳು. ಅದೂ ಸುದ್ದಿಯಾಯಿತು.

ಡೇವಿಡ್ ಕ್ಯಾಮರಾನ್ ಒಂದು ಕಾಲದಲ್ಲಿ ಸೂರ್ಯ ಮುಳುಗದ ಸಾಮ್ರಾಜ್ಯ ಎನಿಸಿದ ಇಂಗ್ಲೆಂಡ್ ದೇಶದ ಪ್ರಧಾನಿ. ಈಗಲೂ ಅದು ಒಂದು ಪ್ರಬಲ ಪಾಶ್ಚಾತ್ಯ ದೇಶವೇ. ನಮ್ಮ ಲೆಕ್ಕದಲ್ಲಿ ಅವರ ಹಿಂದೆ ಮುಂದೆ ಹತ್ತಾರು ವಾಹನಗಳು ಇರಬೇಕಿತ್ತು. ಸೈರನ್ ಕೂಗುತ್ತ ಮುಂದೆ ಹೋಗುವ ಬೆಂಗಾವಲು ವಾಹನವೂ ಇರಬೇಕಿತ್ತು. ನಮ್ಮ ದೇಶದಲ್ಲಿ ನಮಗೆ ಇದೇ ರೂಢಿ. ಕ್ಯಾಮರಾನ್ ಪ್ರವಾಸ ಮಾಡುವಾಗ ಅಂಥ ಯಾವ ವಾಹನವೂ ಅವರ ಹಿಂದೆ ಮುಂದೆ  ಇದ್ದಂತೆ  ಇರಲಿಲ್ಲ. ಇದ್ದರೆ ವೇಟ್ರೆಸ್ ಫ್ರಾನ್ಸೆಕಾಗೆ ಅದು ಗೊತ್ತಾಗಬೇಕಿತ್ತು. ಗೊತ್ತಾಗಿದ್ದರೆ ಅವಳ ವರ್ತನೆ ಬೇರೆಯದೇ ಆಗಿರುತ್ತಿತ್ತು.

ಕ್ಯಾಮರಾನ್ ತಮ್ಮ ಹೆಂಡತಿ, ಮಗಳ ಜತೆಗೆ ಆ ಹೋಟೆಲ್‌ಗೆ ಒಬ್ಬ ಸಾಮಾನ್ಯ ಮನುಷ್ಯನ ಹಾಗೆ ಬಂದರು. ಕಾಫಿ ಕೇಳಿದರು. ವೇಟ್ರೆಸ್ ಕಾಫಿಯನ್ನು ಟೇಬಲ್‌ಗೆ ತಂದು ಕೊಡುವುದಿಲ್ಲ ಎಂದರೂ ಸಿಟ್ಟಾಗಲಿಲ್ಲ. ಸುಮ್ಮನೇ ಟೇಬಲ್ ವರೆಗೆ ತಾವೇ ಕಾಫಿ ತೆಗೆದುಕೊಂಡು ಹೋಗಿ ಕುಡಿದು ಹೊರಟು ಹೋದರು.

ಇಂಥ ಸರಳತೆ ಎಲ್ಲಿಂದ ಬರುತ್ತದೆ? ನಮ್ಮ ಸಚಿವರು, ಅಧಿಕಾರಿಗಳು ಒಂದು ಊರಿಗೆ, ರಸ್ತೆಗೆ  ಬರುತ್ತಾರೆ ಎಂದರೆ  ಅವರ ಹಿಂದೆ ಮುಂದೆ ಕೆಂಪು ದೀಪದ ವಾಹನಗಳ ಸಾಲು ಸಾಲು. ಬೆಂಗಳೂರಿನಲ್ಲಿ ಪೊಲೀಸ್ ಕಮಿಷನರ್ ತಮ್ಮ ಕಚೇರಿಗೆ ಹೊರಟರೆ  ಸಾಕು ಅವರು ಸಾಗುವ ರಸ್ತೆಯುದ್ದಕ್ಕೂ ಪೊಲೀಸರು ಸಂಚಾರವನ್ನು ನಿಲುಗಡೆ ಮಾಡಿ  ಸಾಹೇಬರ ಸಮಯ ಹಾಳಾಗದಂತೆ ನಿಗಾ  ವಹಿಸುತ್ತಾರೆ. ಗೃಹ ಸಚಿವರು ಹೊರಟರಂತೂ ಇಡೀ ಊರಿನಲ್ಲಿಯೇ ಸಂಚಾರ ಸ್ತಬ್ಧವಾಗುತ್ತದೆ. ಮುಖ್ಯಮಂತ್ರಿ ಹೊರಟರೆ ಏನಾಗುತ್ತದೆ ಎಂದು ಕೇಳುವುದೇ ಬೇಡ. ಇಲ್ಲಿ ಈ ದರ್ಪ ಹೇಗೆ ಹುಟ್ಟಿಕೊಳ್ಳುತ್ತದೆ?

ನಮ್ಮ  ಶ್ರೇಣೀಕೃತ, ಪಾಳೆಗಾರಿಕೆ ಭೂಮಿಕೆಯ ವ್ಯವಸ್ಥೆಯಲ್ಲಿಯೇ ಈ ದೌರ್ಬಲ್ಯ ಇದ್ದಂತೆ ಕಾಣುತ್ತದೆ. ನಾನು ಚಿಕ್ಕವ ಇದ್ದಾಗಿನ ನೆನಪು ಇದು. ಮನಸ್ಸಿನಲ್ಲಿ ಇನ್ನೂ ಹಸಿರಾಗಿದೆ. ನಮ್ಮ ಊರಿನ ಕಿಲ್ಲೆಯಲ್ಲಿ ತಹಶಿಲ್ದಾರ್ ನಿವಾಸವಿತ್ತು. ಅವರು ಬೆಳಿಗ್ಗೆ ಹತ್ತು ಗಂಟೆಗೆ ತಮ್ಮ ಕಚೇರಿಗೆ ಹೊರಟರು ಎಂದರೆ ಅವರ ಮುಂದೆ ಒಬ್ಬ ಪಟ್ಟೇವಾಲಾ ಇರುತ್ತಿದ್ದ, ಸಾಹೇಬರಿಗೆ ಬಿಸಿಲು ತಾಗಬಾರದು ಎಂದು ಕೆಲವು ಸಾರಿ ಆತ ಅವರಿಗೆ ಕೊಡೆ ಹಿಡಿದಿರುತ್ತಿದ್ದ. ತಹಶಿಲ್ದಾರ್ ಸಾಗುವ ದಾರಿಯುದ್ದಕ್ಕೂ ಜನರು ಅಡ್ಡ ಬರಬಾರದು ಎಂದು `ಹುಷ್~  `ಹುಷ್~ ಎಂದು ಎದುರು ಬರುತ್ತಿದ್ದ ಸಾರ್ವಜನಿಕರನ್ನು ಕ್ರಿಮಿಗಳ ಹಾಗೆ ಆಚೆ ಈಚೆ ಹೋಗುವಂತೆ ಹೇಳುತ್ತಿದ್ದ. ಅದೇ ಪ್ರದೇಶದಿಂದ ಬರುತ್ತಿದ್ದ ನ್ಯಾಯಾಧೀಶರ ಪಟ್ಟೇವಾಲನೂ ಹೀಗೆಯೇ ನಡೆದುಕೊಳ್ಳುತ್ತಿದ್ದ. ಆಗ ತಹಶಿಲ್ದಾರ್ ಮತ್ತು ನ್ಯಾಯಾಧೀಶರಿಗೆ ವಾಹನಗಳು ಇರುತ್ತಿರಲಿಲ್ಲ. ಈಗ ಆಗಿರುವ ವ್ಯತ್ಯಾಸ ಎಂದರೆ ಅಧಿಕಾರಿಗಳಿಗೆ ಕೆಂಪು ದೀಪದ ವಾಹನಗಳು ಬಂದಿವೆ. ಅವು ಸಾಗುವ ದಾರಿಯಲ್ಲಿಯೂ ಸಾರ್ವಜನಿಕರ ಸಂಚಾರಕ್ಕೆ ಅವಕಾಶ ಇರುವುದೇ ಇಲ್ಲ. ಕೆಂಪು ದೀಪಗಳ ವಾಹನಗಳಿಗೆ ಜನಪ್ರತಿನಿಧಿಗಳು ಏಕೆ ಆಸೆ ಪಡುತ್ತಾರೆ ಎಂಬುದಕ್ಕೆ ಹೆಚ್ಚು ವಿವರಣೆ ಬೇಕಿಲ್ಲ ಅನಿಸುತ್ತದೆ. ಕೆಂಪು ದೀಪದ ವಾಹನ ಎಂಬುದು ಒಂದು ಸಂಕೇತ ಮಾತ್ರ. ಅದು ತರುವ ಅಧಿಕಾರ, ಹಣ ಇತ್ಯಾದಿಯೆಲ್ಲ ಪೂರಕ ಸಂಗತಿಗಳು.

ಒಬ್ಬ ವ್ಯಕ್ತಿ ಶಾಸಕನಾಗುತ್ತಿದ್ದಂತೆಯೇ ಆತನಲ್ಲಿ ಸಚಿವನಾಗಬೇಕು ಎಂಬ ಆಸೆ ಮೊಳೆಯುತ್ತದೆ. ಅಥವಾ ಹಾಗೆ ಮೊಳೆಯುವಂತೆ ಅವನ ಹಿಂಬಾಲಕರು ಮಾಡುತ್ತಾರೆ. ಅವನ ಸುತ್ತಮುತ್ತ ವಂದಿಮಾಗಧರು ಹುಟ್ಟಿಕೊಳ್ಳುತ್ತಾರೆ. ಇಲ್ಲವಾದರೆ, ಯಾವನೋ ಶಾಸಕ ಯಾವುದೋ ಕಾರಣಕ್ಕೆ ಮಂತ್ರಿಯಾದರೆ ರಾಜಭವನದ ಮುಂದೆ ಪಟಾಕಿ ಹಚ್ಚಿ ಜನರು ಏಕೆ ಕುಣಿಯುತ್ತಾರೆ? ಈತ ಮಂತ್ರಿಯಾದರೆ ಅವರಿಗೆ ಏನು ಲಾಭ? ಅಧಿಕಾರದ ಮೋಹ ಒಂದು ಸಾಂಸರ್ಗಿಕ `ರೋಗ~ವೇ? ಈಗ ಶಾಸಕರಾಗುವುದು ಮತ್ತು ಮಂತ್ರಿಯಾಗುವುದು ಅಧಿಕಾರ ಮತ್ತು ಅದು ತರಬಹುದಾದ ಹಣಕ್ಕಾಗಿ ಮಾತ್ರವೇ? 1983ರಲ್ಲಿ ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿಯಾದರು. ಅವರಿಗಿಂತ ಮುಂಚೆ ಮುಖ್ಯಮಂತ್ರಿಯಾಗಿದ್ದ ಆರ್. ಗುಂಡುರಾಯರ ದರ್ಬಾರಿನಿಂದ ಜನರು ರೋಸಿ ಹೋಗಿದ್ದರು. ಗುಂಡುರಾಯರು ಸಂಚರಿಸುವ ರಸ್ತೆಯಲ್ಲಿ ಎಲ್ಲ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿರುತ್ತಿತ್ತು.

ಹೆಗಡೆಯವರು ಮುಖ್ಯಮಂತ್ರಿಯಾದ ತಕ್ಷಣ ತಾವು ಮತ್ತು ತಮ್ಮ ಸಂಪುಟ ಸಹೋದ್ಯೋಗಿಗಳು ಸಾಮಾನ್ಯ ಜನರ ಹಾಗೆಯೇ ಸಂಚರಿಸುವುದಾಗಿ ಪ್ರಕಟಿಸಿದರು. ತಮಗೆ  ಕೂಡ ಸಂಚಾರ ಸಿಗ್ನಲ್‌ಗಳು ಅನ್ವಯಿಸುತ್ತವೆ ಎಂದರು. ಕೆಲ ಕಾಲ ಅವರು ಹಾಗೆಯೇ ನಡೆದುಕೊಂಡರು ಕೂಡ. ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ವಿಧಾನ ಸೌಧದಲ್ಲಿ ಮೊದಲ ಪತ್ರಿಕಾಗೋಷ್ಠಿ ನಡೆಸಿದರು. ಜನರ ಸಂಕಷ್ಟ ಅರಿಯಲು ತಾವು ಕಾರಿನಲ್ಲಿಯೇ ಸಂಚಾರ ಮಾಡುವುದಾಗಿ ಪ್ರಕಟಿಸಿದರು. ಆದರೆ, ಅವರು ತಮ್ಮ ಮಾತು ಉಳಿಸಿಕೊಳ್ಳಲಿಲ್ಲ. ಈಗ ಮುಖ್ಯಮಂತ್ರಿಗಳು ಬೆಂಗಳೂರಿನಿಂದ 30 ಕಿಲೊ ಮೀಟರ್ ದೂರದ ನೆಲಮಂಗಲಕ್ಕೂ ಹೆಲಿಕಾಪ್ಟರ್‌ನಲ್ಲಿಯೇ ಹೋಗಬೇಕು!

ಅಧಿಕಾರ ತರುವ ಆಡಂಬರಕ್ಕೆ ಇದೆಲ್ಲ ಒಂದು ನಿದರ್ಶನ ಎನಿಸುತ್ತದೆ. ಒಬ್ಬ ಶಾಸಕ ಸಚಿವನಾಗುತ್ತಿದ್ದಂತೆಯೇ ಆತನಿಗೆ ಒಂದು ಕಾರು ಸಿದ್ಧವಾಗುತ್ತದೆ. ಹಿಂಗಾವಲು, ಬೆಂಗಾವಲು ಹುಟ್ಟಿಕೊಳ್ಳುತ್ತದೆ. ಅದು ಆತನ ದರ್ಬಾರಿಗೆ ಕಾರಣವಾಗುತ್ತದೆ. ಇದೆಲ್ಲ ಇಲ್ಲ ಎನಿಸಿದಾಗ ಆತ ಚಡಪಡಿಸತೊಡಗುತ್ತಾನೆ. ಹೆಚ್ಚು ಕಾಲ ಅಧಿಕಾರದಲ್ಲಿ ಇಲ್ಲದೆ ಇರಲು ಸಾಧ್ಯವಾಗುವುದಿಲ್ಲ. ಜಗದೀಶ ಶೆಟ್ಟರ್ ಮತ್ತು ಅವರ ಸ್ನೇಹಿತರು ಒಂದು ವಾರ ಕೂಡ ಅಧಿಕಾರ ಇಲ್ಲದೇ ಇರಲು ಆಗಲಿಲ್ಲ. ಏನೆಲ್ಲ ಗಡಿಬಿಡಿ ಮಾಡಿ ಮಂತ್ರಿ ಆಗಿಯೇ ಬಿಟ್ಟರು. ಆ ಹುದ್ದೆಗೆ ಹಟ, ಈ ಖಾತೆಗೆ  ಹಟ ಎಂದೆಲ್ಲ ಪತ್ರಿಕೆಗಳನ್ನು ಬಳಸಿಕೊಂಡು ಒತ್ತಡ ತಂತ್ರಗಳನ್ನು ಹೇರಿದರು. ಮಂತ್ರಿ ಆಗದವರು ದೇವರ ಮುಂದೆ ಉರುಳು ಸೇವೆ, ನಾಯಕರಿಗೆ ಘೆರಾವೊ ತಂತ್ರ ಅನುಸರಿಸುತ್ತಿದ್ದಾರೆ. ಸಮಾಜವಾದದ ಹಿನ್ನೆಲೆಯಿದ್ದ ದಿ.ಬಂದಗದ್ದೆ ರಮೇಶ್ ಅವರನ್ನು ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಯಾವುದೋ ಒಂದು ಚಿಕ್ಕ ನಿಗಮದ ಅಧ್ಯಕ್ಷರಾಗಿ ನೇಮಕ ಮಾಡಿದ್ದರು. ಹೆಗಡೆ ಅವರು ರಾಜೀನಾಮೆ ಕೊಟ್ಟ ನಂತರ ರಮೇಶ್ ಆ ಹುದ್ದೆಯನ್ನು ಬಿಟ್ಟುಕೊಡಬೇಕಾಯಿತು. ಅದಾದ ನಂತರ ನನಗೆ ಅವರು ಸಿಕ್ಕಿದ್ದರು.

ಅಧಿಕಾರ ಇಲ್ಲದೇ ಬದುಕುವುದು ಕಷ್ಟ ಎಂದು ಬೇಸರಿಸಿದ್ದರು. ತುಂಬ ಸರಳ ವ್ಯಕ್ತಿಯಾಗಿದ್ದ, ಸಮಾಜವಾದದ ಭದ್ರ ಹಿನ್ನೆಲೆಯಿಂದ ಬಂದಿದ್ದ ಬಂದಗದ್ದೆಯವರಿಗೇ ಅಂಥ ಒಂದು ಪುಟ್ಟ ಅಧಿಕಾರದ ರುಚಿ ಹತ್ತಿತ್ತು. ಅಧಿಕಾರ ಅನುಭವಿಸಿಯೂ ಸರಳ ಜೀವನಕ್ಕೆ ಮೊರೆ ಹೋದವರು ಇಲ್ಲ ಎಂದು ಅಲ್ಲ. ಅವರ ಸಂಖ್ಯೆ ಕಡಿಮೆ. ನನಗೆ ತಕ್ಷಣಕ್ಕೆ ನೆನಪು ಆಗುತ್ತಿರುವುದು ಪಟೇಲರ ಸರ್ಕಾರದಲ್ಲಿ ಶಿಕ್ಷಣ ಸಚಿವರಾಗಿದ್ದ ಎಚ್. ಜಿ.ಗೋವಿಂದೇಗೌಡರು. ಇನ್ನೊಬ್ಬರು ದೇವರಾಜ ಅರಸು ಸಂಪುಟದಲ್ಲಿ ಸಾರಿಗೆ, ಕಾರ್ಮಿಕ ಮುಂತಾದ ಖಾತೆ ಹೊಂದಿದ್ದ ಆರ್.ಎಸ್. ಪಾಟೀಲರು. ಪಾಟೀಲರು ಅಧಿಕಾರದಲ್ಲಿ ಇದ್ದಾಗ ಸಾಕಷ್ಟು ದುಡ್ಡು ಮಾಡಿದರು ಎಂದು ವಿದ್ಯಾರ್ಥಿಗಳಾಗಿದ್ದ ನಾವು ಅಂದುಕೊಂಡಿದ್ದೆವು. ಆದರೆ, ಆ ಮನುಷ್ಯ ಈಗ ಮುಧೋಳ ಬಸ್ ನಿಲ್ದಾಣದಲ್ಲಿ ಬೆಂಚಿನ ಮೇಲೆ ಕುಳಿತುಕೊಂಡು ತಮ್ಮ ಹಳ್ಳಿಯ ಬಸ್ಸು ಹತ್ತಿ ಹೊರಟು ಹೋಗುತ್ತಾರೆ. ಬೆಂಚಿನ ಮೇಲೆ ಎಡ  ತೋಳಿಗೆ ಆಸರೆಯಾಗಿ ಪುಟ್ಟ ಬ್ಯಾಗ್ ಇಟ್ಟುಕೊಂಡು ಅವರ ಕುಳಿತ ದೃಶ್ಯವೂ ಕಣ್ಣ ಮುಂದೆಯೇ ಇದೆ.

ಕ್ಯಾಮರಾನ್ ಅವರ ಸರಳ ನಡತೆಯ ಸುದ್ದಿ ಅತ್ತ ಓದುತ್ತಿದ್ದಂತೆಯೇ ಇತ್ತ ಮುಖ್ಯಮಂತ್ರಿ ಸದಾನಂದ ಗೌಡರನ್ನು ಅವರ ಅಧಿಕೃತ ನಿವಾಸ `ಅನುಗ್ರಹ~ದಲ್ಲಿ ಭೇಟಿ ಮಾಡಿ ಗೆಳೆಯನ ಬೈಕ್ ಮೇಲೆ ಒಬ್ಬ ಸಾಮಾನ್ಯ ಕಾರ್ಯಕರ್ತನ ಹಾಗೆ ಹತ್ತಿ ಹೊರಟು ಹೋದ ಈಗ ಸಚಿವರಾಗಿರುವ ಆಗ ಮಾಜಿಯಾಗಿದ್ದ ಸುರೇಶಕುಮಾರ್ ನೆನಪಾದರು. ಮುಖ್ಯಮಂತ್ರಿ ಹುದ್ದೆ ಕಳೆದುಕೊಂಡರೂ ಶಿವಮೊಗ್ಗೆಗೆ ಹೆಲಿಕಾಪ್ಟರ್‌ನಲ್ಲಿಯೇ ಹಾರಿ ಹೋಗಿ ಮುಖ್ಯಮಂತ್ರಿಯಂತೆಯೇ ನಡೆದುಕೊಂಡ ಯಡಿಯೂರಪ್ಪ ಅವರೂ ನೆನಪಾದರು!
 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT