ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪೌಷ್ಟಿಕತೆ ಎಂಬ ರಾಷ್ಟ್ರೀಯ ಅಪಮಾನ

Last Updated 6 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಭಾರತದಲ್ಲಿನ ಮಕ್ಕಳ ಅಪೌಷ್ಟಿಕತೆಯ ಸ್ಥಿತಿಗತಿ ಕುರಿತು ಖಾಸಗಿ ಸಂಸ್ಥೆಯೊಂದು ಸಿದ್ಧಪಡಿಸಿರುವ ವರದಿಯನ್ನು ಇತ್ತೀಚೆಗೆ ಬಿಡುಗಡೆ ಮಾಡಿದ ಪ್ರಧಾನಿ ಮನಮೋಹನ್ ಸಿಂಗ್, `ಇದೊಂದು ರಾಷ್ಟ್ರೀಯ ಅಪಮಾನ~ ಎಂದು ಅದನ್ನು ಕರೆದರು.
 
ವಿಪರ್ಯಾಸದ ಸಂಗತಿಯೆಂದರೆ, ಅವರದೇ ನೇತೃತ್ವದ `ಪೌಷ್ಟಿಕತೆಯ ಸವಾಲುಗಳಿಗೆ ಸಂಬಂಧಿಸಿದ ಪ್ರಧಾನ ಮಂತ್ರಿ ರಾಷ್ಟ್ರೀಯ ಮಂಡಳಿ~ ಕಳೆದ ಮೂರು ವರ್ಷಗಳಲ್ಲಿ ಸಭೆ ಸೇರಿರುವುದು ಕೇವಲ ಒಂದೇ ಬಾರಿ. ದೇಶದಲ್ಲಿ ಐದು ವರ್ಷದ ಒಳಗಿನ ಶೇ 42ರಷ್ಟು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿರುವುದನ್ನು ಈ ವರದಿ ಬಹಿರಂಗಪಡಿಸಿದೆ.
 
ಇನ್ನು ಕೆಲವು ನಂಬಿಲರ್ಹ ಸಂಸ್ಥೆಗಳ ಅಂದಾಜಿನ ಪ್ರಕಾರ ಈ ಪ್ರಮಾಣ ಶೇ 52ರಿಂದ 54.ಈ ಅಂಕಿ ಅಂಶಗಳನ್ನು ನೋಡಿದಾಗ, ಆರು ವರ್ಷಗಳ ಹಿಂದೆ ನಾನು ಜಾರ್ಖಂಡ್‌ನ ಸಾಹೇಬ್‌ಗಂಜ್‌ಗೆ ಭೇಟಿ ನೀಡಿದ್ದ ಸಂಗತಿ ನೆನಪಿಗೆ ಬರುತ್ತದೆ. ವಿಶ್ವಬ್ಯಾಂಕ್ ಮನವಿಯ ಮೇರೆಗೆ ಅಲ್ಲಿಗೆ ತೆರಳಿದ್ದ ನಾನು ಜಿಲ್ಲೆಯಾದ್ಯಂತ ಸಂಚರಿಸುತ್ತಾ, ಮಲೇರಿಯಾ ತಂದೊಡ್ಡುವ ಸಮಸ್ಯೆಗಳ ಬಗ್ಗೆ ಅಧ್ಯಯನ ನಡೆಸಿದ್ದೆ. ಆದಿವಾಸಿಗಳ ಬಗ್ಗೆ ತೀವ್ರ ಕಳಕಳಿ ಹೊಂದಿದ್ದರಿಂದ ಅವರು ನೆಲೆಸಿರುವ ಗುಡ್ಡಗಾಡು ಮತ್ತು ದುರ್ಗಮ ಪ್ರದೇಶಗಳತ್ತ ನನ್ನ ಗಮನ ಕೇಂದ್ರೀಕೃತವಾಗಿತ್ತು.
 

ಅಂತಹ ಒಂದು ಪ್ರದೇಶದಲ್ಲಿದ್ದ ಬುಡಕಟ್ಟು ಹಾಡಿಯನ್ನು ನಾವು ತಲುಪಿದಾಗ ಮಧ್ಯಾಹ್ನ ಊಟದ ಸಮಯವಾಗಿತ್ತು. ನಾನು ಅಲ್ಲಿನ ಒಂದು ಗುಡಿಸಲ ಒಳಹೊಕ್ಕು ನೋಡಿದಾಗ ಅಲ್ಲಿದ್ದವರು ಊಟದ ತಯಾರಿ ನಡೆಸಿದ್ದರು. ಮೂವರು ವಯಸ್ಕರು ಮತ್ತು ನಾಲ್ಕು ಮಕ್ಕಳನ್ನು ಒಳಗೊಂಡ ಏಳು ಜನರ ಆ ಕುಟುಂಬ ನಾಲ್ಕು ದಪ್ಪನೆ ರೊಟ್ಟಿಗಳಿದ್ದ ಒಂದು ಅಲ್ಯೂಮಿನಿಯಂ ತಟ್ಟೆಯನ್ನು ಸುತ್ತುವರಿದಿತ್ತು.

ತಟ್ಟೆಯ ಪಕ್ಕದಲ್ಲಿ ಈರುಳ್ಳಿಯ ಚೂರುಗಳು ಮತ್ತು ಉದ್ದನೆಯ ಮೂರು ಮೆಣಸಿನಕಾಯಿಗಳಿದ್ದವು. ಇದಿಷ್ಟೇ ಆ ಇಡೀ ಕುಟುಂಬದ ಊಟವಾಗಿತ್ತು.
ಇದಕ್ಕಿಂತಲೂ ಹೆಚ್ಚಿಗೆ ನನಗೆ ಆಘಾತವಾದದ್ದು ಇಡೀ ದಿನ ಅವರು ಸೇವಿಸುವ ಆಹಾರದಲ್ಲಿ ಇದೇ ಅವರ ಪಾಲಿನ ಭಾರಿ ಔತಣ ಎಂಬುದನ್ನು ಕೇಳಿದಾಗ.

ಪರಿಸ್ಥಿತಿ ಹೀಗಿರುವಾಗ, ಇನ್ನು ಅಪೌಷ್ಟಿಕತೆಯನ್ನಲ್ಲದೆ ಬೇರೇನನ್ನು ತಾನೇ ನಿರೀಕ್ಷಿಸಲು ಸಾಧ್ಯ? ಹಸಿವಿನ ಅನುಭವ ಇಲ್ಲದವರಿಗೆ ಅಪೌಷ್ಟಿಕತೆಯ ಅಂಕಿ ಅಂಶ ನಗಣ್ಯ ಎನಿಸಬಹುದು. ಆದರೆ ರಾಷ್ಟ್ರದಲ್ಲಿರುವ ಇಂತಹ ಲಕ್ಷಾಂತರ ಕುಟುಂಬಗಳಿಗೆ ಇದು ದಿನನಿತ್ಯದ ಕಠೋರ ವಾಸ್ತವ.

ಅಪೌಷ್ಟಿಕತೆಯ ಕರಿನೆರಳು ಆಫ್ರಿಕಾದ ಸಹಾರ ಉಪಖಂಡಕ್ಕಿಂತಲೂ ಭಾರತವನ್ನೇ ಹೆಚ್ಚಾಗಿ ಆವರಿಸಿಕೊಂಡಿದೆ. ವಿಶ್ವದ ಮೂರು ಅಪೌಷ್ಟಿಕ ಮಕ್ಕಳಲ್ಲಿ ಒಂದು ಮಗು ನಮ್ಮ ದೇಶದಲ್ಲೇ ವಾಸಿಸುತ್ತಿದೆ. ಅಪೌಷ್ಟಿಕತೆಯು, ಬೆಳವಣಿಗೆ ಮತ್ತು ಕಲಿಕಾ ಸಾಮರ್ಥ್ಯವನ್ನು ಕುಂಠಿತಗೊಳಿಸುತ್ತದೆ, ಜೊತೆಗೆ ಜೀವಗಳನ್ನೂ ಬಲಿ ತೆಗೆದುಕೊಳ್ಳುತ್ತದೆ. ಶೇ 50ರಷ್ಟು ಮಕ್ಕಳ ಸಾವಿಗೆ ಈ ಸಮಸ್ಯೆ ಕಾರಣವಾಗುತ್ತಿದೆ.

ಮೂರು ವರ್ಷದೊಳಗಿನ ಶೇ 46ರಷ್ಟು ಮಕ್ಕಳು ತಮ್ಮ ವಯಸ್ಸಿಗನುಗುಣವಾದ ತೂಕ ಹೊಂದಿಲ್ಲ, ಶೇ 47ರಷ್ಟು ಮಕ್ಕಳು ಕಡಿಮೆ ತೂಕದವರು ಮತ್ತು ಕನಿಷ್ಠ ಶೇ 16ರಷ್ಟು ಮಕ್ಕಳು ಅತ್ಯಂತ ಕೃಶ ಕಾಯದವರು; ಇವರಲ್ಲಿ ಬಹುತೇಕರು ಭಾರಿ ಅಪೌಷ್ಟಿಕತೆಯಿಂದ ನರಳುತ್ತಿದ್ದಾರೆ ಎಂದು ಯೂನಿಸೆಫ್ ಹೇಳಿದೆ. ನಮ್ಮಲ್ಲಿ ಅಪೌಷ್ಟಿಕತೆಯ ಪ್ರಮಾಣ ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿದೆ. ಮಧ್ಯಪ್ರದೇಶದಲ್ಲಿ ಈ ಪ್ರಮಾಣ ಅತ್ಯಂತ ಹೆಚ್ಚಾಗಿದ್ದರೆ (ಶೇ 55) ಕೇರಳದಲ್ಲಿ ಕಡಿಮೆ ಇದೆ (ಶೇ 27).


ಆರಂಭಿಕ ತೊಡಕು: ಬರೀ ಆಹಾರ ಸೇವನೆಯಷ್ಟೇ ಅಪೌಷ್ಟಿಕತೆಯ ಮೇಲೆ ಪರಿಣಾಮ ಬೀರುವುದಿಲ್ಲ ಎಂಬುದನ್ನು ನಾವು ಮೊದಲು ಅರ್ಥ ಮಾಡಿಕೊಳ್ಳಬೇಕು. ಆರೋಗ್ಯ ಸೇವೆಯ ಗುಣಮಟ್ಟ, ಮಕ್ಕಳ ಬಗ್ಗೆ ತೋರುವ ಕಾಳಜಿ, ಗರ್ಭಿಣಿಯರ ಆರೋಗ್ಯ, ನೈರ್ಮಲ್ಯ ಪಾಲನೆ ಎಲ್ಲವನ್ನೂ ಅದು ಅವಲಂಬಿಸಿರುತ್ತದೆ. ಬಾಲಕರಿಗಿಂತ ಬಾಲಕಿಯರಲ್ಲೇ ಹೆಚ್ಚಿನ ಪ್ರಮಾಣದಲ್ಲಿ ಅಪೌಷ್ಟಿಕತೆ ಕಾಣಿಸಿಕೊಳ್ಳುತ್ತಿದೆ. 

 ಮಕ್ಕಳ ಆರಂಭಿಕ ಹಂತದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರಂತೂ ಸ್ನಾಯುಗಳು, ಸಂವೇದನಾಶೀಲತೆ, ಗ್ರಹಣ ಶಕ್ತಿ, ಸಾಮಾಜಿಕ ಮತ್ತು ಭಾವನಾತ್ಮಕ ವಿಕಸನಕ್ಕೆ ತೊಡಕುಂಟು ಮಾಡಿ ಗಂಭೀರ ಮತ್ತು ದೀರ್ಘಾವಧಿಯ ಸಮಸ್ಯೆಗಳನ್ನೇ ಅದು ತಂದೊಡ್ಡುತ್ತದೆ. ಇಂತಹ ಮಕ್ಕಳು ಶಾಲೆಯ ಪ್ರಗತಿಯಲ್ಲಿ ಹಿಂದುಳಿಯುತ್ತಾರೆ.
 

ವಯಸ್ಕರಾದ ಮೇಲೂ ಇದೇ ಸ್ಥಿತಿ ಮುಂದುವರಿಯುವ ಸಾಧ್ಯತೆ ಇರುವುದರಿಂದ ಬಹು ಬೇಗ ಕಾಯಿಲೆಗಳಿಗೆ ತುತ್ತಾಗಿ, ಅವಧಿಪೂರ್ವ ಸಾವಿಗೆ ಶರಣಾಗುವ ಸಂಭವವೇ ಹೆಚ್ಚು.
   ವಯಸ್ಕ ಮಹಿಳೆಯರಲ್ಲಿ ಸುಮಾರು ಮೂರನೇ ಒಂದರಷ್ಟು ಮಂದಿ ಕಡಿಮೆ ತೂಕ ಹೊಂದಿದ್ದಾರೆ. ಮಹಿಳೆಯರು ಮತ್ತು ಮಕ್ಕಳ ಬಗ್ಗೆ, ಅದರಲ್ಲೂ ಗರ್ಭಿಣಿಯರ ಬಗ್ಗೆ ಹೆಚ್ಚಿನ ಕಾಳಜಿ ತೋರದಿದ್ದರೆ ಕಡಿವೆು ತೂಕದ ಮಕ್ಕಳು ಜನಿಸುತ್ತಾರೆ.
 
ನವಜಾತ ಶಿಶುಗಳಲ್ಲಿ ಸುಮಾರು ಶೇ 30ರಷ್ಟು ಮಕ್ಕಳು ಕಡಿಮೆ ತೂಕದವರಾಗಿರುವುದರಿಂದ ಇದು, ಮುಂದೆ ಅವರಲ್ಲಿ ಅಪೌಷ್ಟಿಕತೆಗೆ ಕಾರಣವಾಗಿ, ಅವರು ಕಾಯಿಲೆಗಳ ಗೂಡಾಗಲು ದಾರಿ ಮಾಡಿಕೊಡುತ್ತಿದೆ.

ಕಡು ಬಡತನ ಮತ್ತು ಹಸಿವಿನ ನಿರ್ಮೂಲನೆಗೆ ಜಾಗತಿಕ ಮಟ್ಟದಲ್ಲಿ ಹಾಕಿಕೊಂಡಿರುವ ಸಹಸ್ರಮಾನದ ಪ್ರಗತಿ ಗುರಿ (ಎಂಡಿಜಿ) ಸಾಧನೆಯ ನಿಟ್ಟಿನಲ್ಲಿ, 2015ರ ವೇಳೆಗೆ ಕಡಿಮೆ ತೂಕದ ಮಕ್ಕಳ ಪ್ರಮಾಣವನ್ನು ಶೇ 50ರಷ್ಟು ತಗ್ಗಿಸಬೇಕೆಂಬ ಸಂಕಲ್ಪವೂ ಸೇರಿದೆ.


ಪೌಷ್ಟಿಕತೆಯ ಗುರಿ ಸಾಧನೆಗೆ ಆರ್ಥಿಕ ಪ್ರಗತಿಯೊಂದೇ ಸಾಧನವಾಗದು. ಈ ಗುರಿ ಸಾಧನೆ ಆಗಬೇಕಿದ್ದರೆ ಪ್ರಸಕ್ತ ಪೌಷ್ಟಿಕ ಕಾರ್ಯಕ್ರಮಗಳಲ್ಲಿ ಸುಧಾರಣೆ ತರುವ ಬಗ್ಗೆ ಅಥವಾ ಹೊಸ ಕಾರ್ಯಕ್ರಮಗಳನ್ನೇ ಜಾರಿ ಮಾಡುವ ಬಗ್ಗೆ ಕೇಂದ್ರ ಸರ್ಕಾರ ಮತ್ತು ಈ ಕಾರ್ಯದಲ್ಲಿ ತೊಡಗಿಕೊಂಡಿರುವ ಸಂಸ್ಥೆಗಳು ಚಿಂತನೆ ನಡೆಸಬೇಕು.

ಭಾರತದಲ್ಲಿ ಸುಮಾರು ಆರು ಕೋಟಿ ಮಕ್ಕಳು ಕಡಿಮೆ ತೂಕದವರು. ಆರೋಗ್ಯ, ಶಿಕ್ಷಣ ಹಾಗೂ ಉತ್ಪಾದನೆಯ ಮೇಲೆ ಪರಿಣಾಮ ಬೀರುತ್ತಿರುವ ನಿರಂತರ ಅಪೌಷ್ಟಿಕತೆ, ದೇಶದ ಮಾನವ ಅಭಿವೃದ್ಧಿ ಮತ್ತು ಆರ್ಥಿಕ ಪ್ರಗತಿಗೆ ಪ್ರಮುಖ ಅಡ್ಡಗಾಲಾಗಿದೆ.
 
ಅದರಲ್ಲೂ ಅಪೌಷ್ಟಿಕತೆ ಅಧಿಕ ಪ್ರಮಾಣದಲ್ಲಿರುವ ಬಡವರ ಮೇಲೆ ಇದರ ಪರಿಣಾಮ ಇನ್ನಷ್ಟು ಹೆಚ್ಚು. ಅಪೌಷ್ಟಿಕ ಮಕ್ಕಳ ಸಂಖ್ಯೆಯನ್ನು ಇಳಿಸುವ ನಿಟ್ಟಿನಲ್ಲಿ ದೇಶದಲ್ಲಿ ಕಳೆದ ದಶಕದಲ್ಲಿ ಆಗಿರುವ ಪ್ರಗತಿಯು ಇತರ ದೇಶಗಳಿಗೆ ಹೋಲಿಸಿದರೆ ಅತ್ಯಂತ ವಿಳಂಬ ಗತಿಯದು.

ಬಾಲಕಿಯರು, ಗ್ರಾಮೀಣ ಪ್ರದೇಶದವರು, ಕಡು ಬಡವರು, ಪರಿಶಿಷ್ಟ ಜಾತಿ- ಪಂಗಡದವರ ಮೇಲೆ ಈ ಸಮಸ್ಯೆ ಹೆಚ್ಚು ಪರಿಣಾಮ ಬೀರುತ್ತಿರುವುದರಿಂದ, ರಾಜ್ಯ- ರಾಜ್ಯಗಳ ನಡುವೆ ಗಣನೀಯ ಪ್ರಮಾಣದಲ್ಲಿ ಅಸಮಾನತೆ ತಲೆದೋರಿದೆ. ಇವೆಲ್ಲವೂ ಒಟ್ಟಾರೆ ಅಪೌಷ್ಟಿಕತೆಗೆ ತನ್ನದೇ ಆದ ಕೊಡುಗೆ ನೀಡುತ್ತಿವೆ. ಅದೂ ಸಾಲದೆಂಬಂತೆ ಅಸಮಾನತೆ ಇನ್ನಷ್ಟು ಹೆಚ್ಚಾಗುವ ಲಕ್ಷಣಗಳೇ ಗೋಚರಿಸುತ್ತಿವೆ.

ಭಾರತದಲ್ಲಿ ಮಕ್ಕಳ ಅಪೌಷ್ಟಿಕತೆಯು, ಅತ್ಯಂತ ಸುಲಭವಾಗಿ ಸೋಂಕಿಗೆ ತುತ್ತಾಗುವ ಪರಿಸ್ಥಿತಿ, ನವಜಾತ ಶಿಶುಗಳು ಮತ್ತು ಪುಟ್ಟ ಮಕ್ಕಳ ಬಗ್ಗೆ ನಿಷ್ಕಾಳಜಿ ತೋರುತ್ತಿರುವುದರ ಫಲವೇ ಆಗಿದೆ. ವ್ಯಕ್ತಿಗಳು ಮುಂದೆ ಅನುಭವಿಸುವ ಸಮಸ್ಯೆಗಳ ಮೂಲ, ತಮ್ಮ ಜೀವನದ ಮೊದಲ ಎರಡರಿಂದ ಮೂರು ವರ್ಷಗಳ ಆರಂಭಿಕ ಅವಧಿಯಲ್ಲಿ ಅವರು ಅನುಭವಿಸುವ ಇಂತಹ ಸ್ಥಿತಿಯ ಪರಿಣಾಮವೇ ಆಗಿರುತ್ತದೆ.
 
ವಸ್ತುಸ್ಥಿತಿ ಹೀಗಿದ್ದರೂ ಅಪೌಷ್ಟಿಕತೆಗೆ ಆಹಾರ ಅಭದ್ರತೆಯೇ ಪ್ರಾಥಮಿಕ ಅಥವಾ ಏಕೈಕ ಕಾರಣ ಎಂಬ ಸಾಮಾನ್ಯ ನಂಬಿಕೆ ಎಲ್ಲರಲ್ಲಿದೆ. ಇದರ ಪರಿಣಾಮವಾಗಿ ದೇಶದಲ್ಲಿ ಅಪೌಷ್ಟಿಕತೆಯಿಂದ ಹೊರಬರಲು ಹಮ್ಮಿಕೊಳ್ಳುತ್ತಿರುವ ಕಾರ್ಯಕ್ರಮಗಳು ಆಹಾರ ಆಧಾರಿತವಾಗಿರುತ್ತವೆಯೇ ಹೊರತು, ಈ ಸಮಸ್ಯೆಗೆ ಸಂಬಂಧಿಸಿದ ಇತರ ನಿರ್ಣಾಯಕ ಅಂಶಗಳಿಗೆ ಪೂರಕವಾದ ಕಾರ್ಯಕ್ರಮಗಳಿಗೆ ಹೆಚ್ಚಿನ ಪ್ರಾಮುಖ್ಯತೆ ದೊರಕುತ್ತಿಲ್ಲ.


ದೇಶದಲ್ಲಿ ಕಳೆದ 30 ವರ್ಷಗಳಿಂದ ಅನುಷ್ಠಾನದಲ್ಲಿರುವ `ಮಕ್ಕಳ ಸಮಗ್ರ ಅಭಿವೃದ್ಧಿ ಸೇವಾ ಕಾರ್ಯಕ್ರಮ~ (ಐಸಿಡಿಎಸ್) ಹಲವಾರು ಬಗೆಯಲ್ಲಿ ಯಶಸ್ವಿಯಾಗಿದೆ. ಆದಾಗ್ಯೂ, ಮಕ್ಕಳಲ್ಲಿನ ಅಪೌಷ್ಟಿಕತೆಯ ವಿಷಯದಲ್ಲಿ ಮಾತ್ರ ಅದು ಅಂತಹ ಗಮನಾರ್ಹ ಯಶಸ್ಸನ್ನೇನೂ  ಕಂಡಿಲ್ಲ. ಇದಕ್ಕೆ ಬಹುಶಃ ಈ ಕಾರ್ಯಕ್ರಮ, ಆಹಾರ ಪೂರೈಕೆಗೆ ನೀಡಿರುವ ಆದ್ಯತೆಯನ್ನು ಪೌಷ್ಟಿಕತೆ ಮತ್ತು ಆರೋಗ್ಯ ಶಿಕ್ಷಣಕ್ಕೆ ನೀಡದಿರುವುದೇ ಪ್ರಮುಖ ಕಾರಣ ಇರಬಹುದು. ಅದೂ ಅಲ್ಲದೆ, ಐಸಿಡಿಎಸ್ ಹೆಚ್ಚಾಗಿ ಮೂರು ವರ್ಷ ತುಂಬಿದ ಮಕ್ಕಳನ್ನು ಗುರಿಯಾಗಿಟ್ಟುಕೊಂಡಿದೆ. ಆದರೆ ಆ ವೇಳೆಗಾಗಲೇ ಮಕ್ಕಳಲ್ಲಿ ಅಪೌಷ್ಟಿಕತೆ ಬೇರುಬಿಟ್ಟಾಗಿರುತ್ತದೆ.


ಮಕ್ಕಳ ಬಗ್ಗೆ ತೋರಬೇಕಾದ ಸೂಕ್ತ ಕಾಳಜಿಯ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕಾದರೆ ತಳಮಟ್ಟದ ಕಾರ್ಯಕರ್ತರಿಗೆ ವಿಶೇಷವಾದ ಕೌಶಲ ಹಾಗೂ ದಕ್ಷ ಆಡಳಿತ ವ್ಯವಸ್ಥೆ ಅತ್ಯಗತ್ಯ. ಈ ಹಿನ್ನೆಲೆಯಲ್ಲಿ ಕಾರ್ಯಕರ್ತರ ಕೌಶಲ ವೃದ್ಧಿಗಾಗಿ ತರಬೇತಿಗಳನ್ನು ಹಮ್ಮಿಕೊಳ್ಳಲಾಗಿದೆಯಾದರೂ ಕಾರ್ಯಕ್ರಮದ ವಿಸ್ತರಣೆಗೆ ನೀಡಿರುವ ಪ್ರಾಧಾನ್ಯವನ್ನು ಅದರ ಗುಣಮಟ್ಟ ಸುಧಾರಣೆಗೆ ನೀಡಿಲ್ಲ. ಐಸಿಡಿಎಸ್ ಕಾರ್ಯಕ್ರಮವನ್ನು ಅಪೌಷ್ಟಿಕತೆಯ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡುವಂತೆ ಮಾಡಿದರೆ ಮಾನವ ಅಭಿವೃದ್ಧಿ ಮತ್ತು ಆರ್ಥಿಕತೆಯ ದೃಷ್ಟಿಯಿಂದ ದೇಶಕ್ಕೆ ಹೆಚ್ಚು ಲಾಭಕರವೇ ಆಗುತ್ತದೆ. ಇದು ಕಾರ್ಯರೂಪಕ್ಕೆ ಬರಬೇಕಾದರೆ ಕಾರ್ಯಕ್ರಮದಲ್ಲಿ ಆಮೂಲಾಗ್ರ ಬದಲಾವಣೆಯೇ ಆಗಬೇಕು.

ವಿಶೇಷವಾಗಿ ಐಸಿಡಿಎಸ್ ಕಾರ್ಯಕ್ರಮದಲ್ಲಿ ಸರ್ಕಾರ ತೊಡಗಿಸುತ್ತಿರುವ ಹಣವನ್ನು ಶಿಶುಗಳ ಕಡೆಗೆ ಹರಿಸಬೇಕು (0- 3 ವರ್ಷ) ಮತ್ತು ಅಪೌಷ್ಟಿಕತೆ ಅಧಿಕವಾಗಿರುವ ರಾಜ್ಯಗಳು, ಜಿಲ್ಲೆಗಳತ್ತ ಗಮನ ಕೇಂದ್ರೀಕರಿಸಬೇಕು. ಹಾಲೂಡಿಸುವಿಕೆ ಹಾಗೂ ಮಗುವಿನ ಪಾಲನೆಯಲ್ಲಿ ತಾಯಿಯ ಕಾಳಜಿ ಹೆಚ್ಚಾಗುವಂತೆ ಮಾಡುವುದು, ಮನೆಗಳಲ್ಲಿ ನೀರು, ನೈರ್ಮಲ್ಯ ವೃದ್ಧಿ, ಆರೋಗ್ಯ ಸೇವೆ ಬಲಪಡಿಸುವುದು, ಪೌಷ್ಟಿಕ ಆಹಾರ ಒದಗಿಸುವಂತಹ ಕಾರ್ಯಕ್ರಮಗಳ ಮೂಲಕ ಅಪೌಷ್ಟಿಕತೆಯನ್ನು ಮೂಲದಲ್ಲೇ ತೊಡೆದುಹಾಕುವ ಕಾರ್ಯ ಅಗತ್ಯವಾಗಿ ಆಗಬೇಕು. ಅಲ್ಲದೆ ಈ ಕಾರ್ಯಕ್ರಮಗಳನ್ನು ಜಾರಿಗೆ ತರುವಾಗ ಸಾಂಸ್ಕೃತಿಕ ಸೂಕ್ಷ್ಮಗಳನ್ನೂ ಗಮನದಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ. ಇದಕ್ಕೆ ಪೂರಕವಾಗಿ, ಯೋಜನೆಗಳ ಜಾರಿಯಲ್ಲಿ ಸಮುದಾಯಗಳನ್ನು ತೊಡಗಿಸಲು ಆದ್ಯತೆ ನೀಡಬೇಕಾಗುತ್ತದೆ.
ಆದರೆ ಕರ್ನಾಟಕವೂ ಸೇರಿದಂತೆ ಹಲವು ರಾಜ್ಯಗಳು `ಸಂಸ್ಕರಿತ ಆಹಾರ~ ಪೂರೈಕೆಗೇ ಹೆಚ್ಚಿನ ಗಮನ ಹರಿಸಿದಂತೆ ತೋರುತ್ತಿದೆ. ಇದು ಅಸಂಬದ್ಧ ಮಾತ್ರವಲ್ಲ, ಈ ಬಗ್ಗೆ ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನಗಳಿಗೂ ವಿರುದ್ಧವಾದುದು.
 
ಒಟ್ಟಾರೆ ಈ ಬಿಕ್ಕಟ್ಟನ್ನು ಎದುರಿಸಲು ನಮಗೆ ಬೇಕಾಗಿರುವುದು ರಾಜಕೀಯ ಮತ್ತು ಅಧಿಕಾರಶಾಹಿ ಇಚ್ಛಾಶಕ್ತಿ. ಅದು ಬಿಟ್ಟು, ಬರೀ ಹೊಸ ಹೊಸ ಯೋಜನೆಗಳ ನೀಲನಕ್ಷೆಗಳನ್ನು ರೂಪಿಸುವುದಕ್ಕೇ ಸಮಯ ವ್ಯಯಿಸುತ್ತಾ ಹೋದರೆ, ಅದರಿಂದ ಈ ಕಾರ್ಯಕ್ರಮಗಳ ನಿರ್ವಾಹಕರಿಗೆ ಲಾಭವಾಗುತ್ತದೆ ಹೊರತು ಅಪೌಷ್ಟಿಕತೆಯಿಂದ ನರಳುತ್ತಿರುವವರಿಗೆ ಅಲ್ಲ.
 
ನಾವೆಲ್ಲರೂ ಹೇಳಿಕೊಳ್ಳುತ್ತಿರುವಂತೆ ಭಾರತವನ್ನು ಜ್ಞಾನಾಧಾರಿತ ಆರ್ಥಿಕ ರಾಷ್ಟ್ರವನ್ನಾಗಿ ರೂಪಿಸುವ ಇಚ್ಛೆ ನಿಜವಾಗಲೂ ನಮಗೆ ಇರುವುದೇ ಆದರೆ, ಈ ನಿಟ್ಟಿನಲ್ಲಿ ನಾವು ತಕ್ಷಣ ಕಾರ್ಯಪ್ರವೃತ್ತರಾಗಬೇಕಾಗುತ್ತದೆ.
 

(ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in)
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT