ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿ ಮತ್ತು ಸಂಸ್ಕೃತಿಯಲ್ಲಿ ನಾವೇಕೆ ಹಿಂದೆ?

Last Updated 6 ಜನವರಿ 2011, 9:05 IST
ಅಕ್ಷರ ಗಾತ್ರ

ಬಹಳ ಹಿಂದೆ ಕಾಡಂಚಿನ ಒಂದು ಗಿರಿಜನ ಗ್ರಾಮವನ್ನು ಅಭಿವೃದ್ಧಿ ಮಾಡಬೇಕೆಂದು ದೊಡ್ಡ ಕಾರ್ಯಕ್ರಮ ಹಾಕಿಕೊಂಡೆವು. ಸಾಕಷ್ಟು ಹಣದ ನೆರವೂ ದೊರೆಯಿತು. ಸುಮಾರು 60-70 ಗಿರಿಜನ ಕುಟುಂಬಗಳಿಗೆ ಸೇರಿದ ಸುಮಾರು 300 ಎಕರೆ ಫಲವತ್ತಾದ ಕೃಷಿ ಭೂಮಿ ಇತ್ತು. ಆನೆ ಹಂದಿಗಳ ಕಾಟದಿಂದ ಬೆಳೆ ಕೈಗೆ ಬರುವುದಿಲ್ಲವೆಂದು ತಾವು ಜಮೀನನ್ನು ಪಾಳುಗೆಡವಿರುವುದಾಗಿ ಈ ಜನ ಹೇಳಿದರು.

ಆನೆ ಕಂದಕ  ವಿದ್ಯುತ್ ಬೇಲಿ ನಿರ್ಮಿಸುವುದರಿಂದ ಹಿಡಿದು ಹೊಸ ಬೋರ್‌ವೆಲ್‌ಗಳು ಪೈಪ್‌ಲೈನ್‌ಗಳು, ನೀರಾವರಿ ವ್ಯವಸ್ಥೆ, ಕೃಷಿಗೆ ಬೇಕಾದ ನೇಗಿಲು-ನೋಗ ಬೀಜ-ಗೊಬ್ಬರ ಹೀಗೆ ಎಲ್ಲವನ್ನು ಸರಬರಾಜು ಮಾಡಿದೆವು. ದಿನಗೂಲಿ ಜೀವನದ ಈ ಗಿರಿಜನರು ಕೆಲಸ ಮಾಡುವುದು ತಮ್ಮದೇ ಹೊಲವಾದರೂ ಫಸಲು ಬರುವವರೆಗೆ ಜೀವನಾಧಾರಕ್ಕೆ ಏನು ಮಾಡುವುದು? ಇದಕ್ಕೂ ವ್ಯವಸ್ಥೆ ಮಾಡಲಾಯಿತು. ಮೊದಲೆರಡು ವರ್ಷ ಬೆಳೆ ಏನೋ ಬಂತು, ಆದರೆ ಅದರ ಕೊಂಚ ಭಾಗವನ್ನಾದರೂ ಮುಂದಿನ ಕೃಷಿ ಕೆಲಸಕ್ಕೆ ಬಂಡವಾಳವಾಗಿ ಉಳಿಸಿಕೊಳ್ಳಲಿಲ್ಲ. ಹಣ ನಿರ್ವಹಣೆಯ ಗಂಧವೇ ಇಲ್ಲದ ಈ ಗಿರಿಜನರಿಗೆ ಉಳಿತಾಯದ ಮಾತಿರಲಿ, ಆಪತ್ಕಾಲಕ್ಕೆಂದು ಸ್ವಲ್ಪ ಧಾನ್ಯವನ್ನಾದರೂ ಸಂಗ್ರಹಿಸಿ ಇಟ್ಟುಕೊಳ್ಳುವುದೂ ಅಸಂಬದ್ಧವಾಗಿ ಕಾಣುತ್ತಿತ್ತು. ಅವರಿಗೆ ಕಾಡಿನಲ್ಲಿ ದಿನವಿಡೀ ಆಲೆದಾಡಿ ನೆಲ್ಲಿಕಾಯಿ, ಜೇನುತುಪ್ಪ ಸಂಗ್ರಹಿಸುವುದರಲ್ಲಿ ಇದ್ದ ಆಸಕ್ತಿ ವ್ಯವಸಾಯದ ಕೆಲಸಗಳಲ್ಲಿ ಇರಲಿಲ್ಲ.

ಈ ವಿಫಲತೆಯ ಅನುಭವ ಬಹುಶಃ ನನ್ನೊಬ್ಬನದೇ ಅಲ್ಲ. ಅಥವಾ ಒಂದು ಹಳ್ಳಿಯ ಕಥೆಯೂ ಅಲ್ಲ. ಕಾಡಿನ ಜೀವನ-ಸಂಸ್ಕೃತಿಗೆ ಹೊಂದಿಕೊಂಡ ಗಿರಿಜನರ ಮೇಲೆ ಕೃಷಿ ಸಂಸ್ಕೃತಿಯನ್ನು ಹೇರುವುದರಿಂದ ಉಂಟಾದ ವಿಫಲತೆಯನ್ನು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು. ಆದರೆ ವ್ಯವಸಾಯವೇ ಬೆನ್ನೆಲುಬಾಗಿರುವ ನಮ್ಮ  ಭಾರತದ ಹಳ್ಳಿಗಳ ಒಟ್ಟಾರೆ ಚಿತ್ರಣ ಉತ್ಪಾದನೆಯ ದೃಷ್ಟಿಯಿಂದ ಇದಕ್ಕಿಂತ ಭಿನ್ನವಾಗೇನೂ ಇಲ್ಲ. ಈ ಹಳ್ಳಿಗಳು ಗಿರಿಜನರ ಗ್ರಾಮಕ್ಕಿಂತ ಸ್ವಲ್ಪ ಪ್ರಗತಿ ಸಾಧಿಸಿರಬಹುದು. ಆದರೆ ಏಕೋ ಏನೋ ಅಭಿವೃದ್ಧಿ ಒಂದು ಮಟ್ಟವನ್ನು ತಲುಪಿದ ನಂತರ ಸ್ಥಗಿತವಾಗಿ ಬಿಡುತ್ತದೆ. ಒಟ್ಟಾರೆ ಹೇಳಬೇಕೆಂದರೆ ಸಾಕಷ್ಟು ನೆಲ-ಜಲ ಗಾಳಿ ಬೆಳಕುಗಳ ಪ್ರಕೃತಿ ಸಂಪತ್ತು ಇದ್ದರೂ ಅದರ ಸಂಪೂರ್ಣ ಉಪಯೋಗ ಸಾಧ್ಯವಾಗುತ್ತಿಲ್ಲ.

ಹಾಗಾದರೆ ಪ್ರಕೃತಿ ಸಂಪತ್ತು ವಿಫುಲವಾಗಿರುವ ಇತರ ರಾಷ್ಟ್ರಗಳು ಅಭಿವೃದ್ಧಿ ಸಾಧಿಸಿವೆಯೇ ಎಂದು ಪರಿಶೀಲಿಸೋಣ. ಭೂಮಿಯ ಮಧ್ಯ ಭಾಗದಲ್ಲಿ ಹಾದುಹೋಗುವ ಭೂಮಧ್ಯೆ ರೇಖೆ ಅಥವಾ ಸಮಭಾಜಕ ವೃತ್ತದ ಪ್ರದೇಶದಲ್ಲಿ ಇರುವ ಅನೇಕ ದೇಶಗಳಿಗೆ ಯಥೇಚ್ಛವಾದ ನೆಲ-ಜಲ ಸೂರ್ಯನ ಶಾಖ ಬೆಳಕು ಹಾಗೂ ಜೀವ ವೈವಿಧ್ಯತೆಯ ಸಂಪತ್ತು ಇದೆ. ಆಶ್ಚರ್ಯವೆಂದರೆ ಸಿಂಗಪುರದಂತಹ ಕೆಲವು ಸಣ್ಣ ದೇಶಗಳನ್ನು ಹೊರತುಪಡಿಸಿದರೆ ಉಳಿದ ಈ ಎಲ್ಲ ದೇಶಗಳಿಗೂ ಅಭಿವೃದ್ಧಿ ಎಂಬುದು ಮರೀಚಿಕೆಯಾಗಿದೆ. ಇವು ಸಹ ನಮ್ಮ ದೇಶದಂತೆ ಹಸಿವು ಬಡತನಗಳಿಂದ ಬಳಲುತ್ತಿವೆ. ಆಫ್ರಿಕಾದ ಅನೇಕ ದೇಶಗಳು ಮತ್ತು ದಕ್ಷಿಣ ಅಮೆರಿಕದ ಬ್ರೆಜಿಲ್ ಇದಕ್ಕೆ ಉದಾಹರಣೆ. ಮಳೆಯ ಕಾಡುಗಳ ನಡುವೆ ಅದ್ಭುತ ಜೀವ ವೈವಿಧ್ಯತೆ ಇರುವ ಬ್ರೆಜಿಲ್ ದೇಶ ಪ್ರಕೃತಿ ಸಂಪತ್ತಿನ ಗಣಿ. ಆದರೂ ಇದು ಪ್ರಗತಿ ಸಾಧಿಸಲಾರದೆ ಸಮಸ್ಯೆಯ ಗೂಡಾಗಿದೆ.

ಸಮಭಾಜಕ ವೃತ್ತದಿಂದ ಮೇಲೆ ಹೋದಂತೆಲ್ಲ ಪ್ರಕೃತಿ ಸಂಪತ್ತು ಕಡಿಮೆಯಾಗುತ್ತದೆ. ಯುರೋಪಿನ ಚಳಿ ದೇಶಗಳಲ್ಲಿ ಹೇಳಿಕೊಳ್ಳುವಂಥ ಪ್ರಾಕೃತಿಕ ಸಂಪತ್ತುಗಳಾವುವೂ ಇಲ್ಲದಿದ್ದರೂ ಅವೆಲ್ಲ ಮುಂದುವರೆದ ರಾಷ್ಟ್ರಗಳಾಗಿವೆ. ಪ್ರಪಂಚದ ಶ್ರೀಮಂತ ದೇಶವಾದ ಸ್ವಿಟ್ಜರ್ಲೆಂಡ್ ಹಾಗೂ ಬಡದೇಶ ಆಫ್ರಿಕಾದ ಮೊಜಾಂಬಿಕ್ ದೇಶದ ಪ್ರಜೆಯ ತಲಾವಾರು ಆದಾಯದ ವ್ಯತ್ಯಾಸ 400:1 ಅನುಪಾತದಲ್ಲಿದೆ. ಈ ಹೋಲಿಕೆಯನ್ನು ಸುಮಾರು 250 ವರ್ಷ ಹಿಂದಕ್ಕೆ ಒಯ್ದರೆ ಈ ವ್ಯತ್ಯಾಸ 5: 1 ಕ್ಕೆ ಇಳಿದು ಬಿಡುತ್ತದೆ. ಎಂದರೆ ಕಳೆದೆರಡು ಶತಮಾನಗಳಲ್ಲಿ ಸ್ವಿಟ್ಜರ್ಲೆಂಡ್ ಅಪಾರ ಪ್ರಗತಿ ಸಾಧಿಸಿದೆ. ಒಟ್ಟಾರೆ ಹೇಳಬೇಕೆಂದರೆ ಪ್ರಪಂಚದ ಶ್ರೀಮಂತ ರಾಷ್ಟ್ರಗಳು ಮತ್ತಷ್ಟು ಶ್ರೀಮಂತವಾಗುತ್ತಿವೆ.


ಬಡ ದೇಶಗಳು ಮತ್ತಷ್ಟು ಬಡವಾಗುತ್ತಿವೆ. ನಮ್ಮ ಭೂಮಂಡಲದ ಅರ್ಧಗೋಲ ಶ್ರೀಮಂತವಾಗಿರಬೇಕಾದರೆ ಉಳಿದರ್ಧ ಗೋಲ ಬಡವಾಗಿ ಉಳಿಯಬೇಕಾದ್ದು ಅನಿವಾರ್ಯ ಎಂದು ಅಮರ್ತ್ಯಸೆನ್ ಅವರಂತಹ ಆರ್ಥಿಕ ತಜ್ಞರು ಅಭಿಪ್ರಾಯ ಪಡುತ್ತಾರೆ. ಹಾಗಾದರೆ ಕಾಣದ ಕೈಗಳು ನಮ್ಮನ್ನು ಶೋಷಿಸುತ್ತಿವೆ ಎಂದು ನಾವು ಭಾವಿಸಬೇಕೆ? 

ಇಲ್ಲಿ ನಮ್ಮನ್ನು ಮತ್ತೊಂದು ಪ್ರಶ್ನೆ ಕಾಡುತ್ತದೆ. ಪ್ರಗತಿ ಎಂಬುದು ನಾವು ನೈಸರ್ಗಿಕವಾಗಿ ಪಡೆದಿರುವ ಸಂಪತ್ತನ್ನು ಆಧರಿಸಿದೆಯೋ ಅಥವಾ ಅದು ಒಂದು ಜನ ಸಮುದಾಯ ಪೋಷಿಸಿಕೊಂಡು ಬಂದಿರುವ ಸಂಸ್ಕೃತಿಗೆ ಸಂಬಂಧಪಟ್ಟಿದೆಯೋ? ಆರ್ಥಿಕ ಅಭಿವೃದ್ಧಿ ಸಾಧಿಸಲು ಪೂರಕವಾದ ಸಾಂಸ್ಕೃತಿಕ ಅಂಶಗಳನ್ನು ಪಾಶ್ಚಾತ್ಯ ಸಂಸ್ಕೃತಿ ಹೊಂದಿರುವಂತೆ ಭಾರತ-ಬ್ರೆಜಿಲ್‌ನಂತಹ ರಾಷ್ಟ್ರದ ಜನರು ಹೊಂದಿದ್ದರೆ ತಮ್ಮ ಕಾಲ ಕೆಳಗೆ ಇರುವ ಪ್ರಕೃತಿ ಸಂಪತ್ತಿನಿಂದ ನಿಜವಾಗಿಯೂ  ಶ್ರೀಮಂತರಾಗಬಹುದಿತ್ತಲ್ಲವೇ? ಅಥವಾ ಕೊನೆಯ ಪಕ್ಷ, ಹಸಿವು-ಬಡತನಗಳನ್ನಾದರೂ ನೀಗಿಸಿಕೊಳ್ಳಬಹುದಾಗಿತ್ತಲ್ಲವೇ? ಅಭಿವೃದ್ಧಿಗೆ ಪೂರಕವಾದ ಸಾಂಸ್ಕೃತಿಕ ಅಂಶಗಳ ಕೊರತೆಯೇ ನಮ್ಮ ಪ್ರಗತಿಗೆ ಮಾರಕವಾಗಿದೆ ಎಂದು ಭಾವಿಸುವುದು ಕುಂಟುತ್ತಿರುವ ಅಭಿವೃದ್ಧಿಗೆ ಕೊಡಬಹುದಾದ ಅನೇಕ ಕಾರಣಗಳಲ್ಲಿ ಒಂದು ಮಾತ್ರ. ಆದರೂ ಇದನ್ನು ಗಂಭೀರವಾಗಿ ಪರಿಗಣಿಸದೆ ಬೇರೆ ದಾರಿ ಇಲ್ಲ.

ಈ ಸಂದರ್ಭದಲ್ಲಿ ಒಂದು ಮಾತನ್ನು ಸ್ಪಷ್ಟಪಡಿಸಬೇಕಾಗುತ್ತದೆ. ಪಾಶ್ಚಾತ್ಯ ಮಾದರಿಯ ಅಭಿವೃದ್ಧಿಯೇ ಶ್ರೇಷ್ಠವಾದದ್ದು, ಆ ಬಗೆಯ ಅಭಿವೃದ್ಧಿ ಸಾಧಿಸಲು ಬೇಕಾದ ಸಂಸ್ಕೃತಿಯನ್ನು ನಾವು ಮೈಗೂಡಿಸಿಕೊಳ್ಳಬೇಕೆಂಬುದು ಇದರ ಅರ್ಥವಲ್ಲ.  ಪಾಶ್ಚಾತ್ಯ ಮಾದರಿಯ ಅಭಿವೃದ್ಧಿಯ ಬೆನ್ನ ಹಿಂದೆ ಬಿದ್ದಿರುವುದು ನಮ್ಮ ಅಭಿವೃದ್ಧಿ ಹಿಂದೆ ಬೀಳಲು ಕಾರಣ. ಜೊತೆಗೆ ಆಧುನಿಕ ಕಾಲದ ಧ್ರುವಸದೃಶ ಅಸಮಾನತೆಗೂ ಇದೇ ಕಾರಣ. ಒಂದು ಭೌಗೋಳಿಕ ಪ್ರದೇಶದ ಜನ ಸಮುದಾಯ ತಾನು ರೂಢಿಸಿಕೊಂಡಿರುವ ವಿಶಿಷ್ಟ ಸಂಸ್ಕೃತಿಗೆ ಅನುಗುಣವಾಗಿ ತನ್ನದೇ ಅಭಿವೃದ್ಧಿ ಮಾದರಿಯನ್ನು ಕಂಡುಕೊಳ್ಳಬೇಕು. ಇಂತಹ ಅಭಿವೃದ್ಧಿ  ಈ ಜನಸಮುದಾಯ ಕಂಡು ಕೊಂಡ ಜೀವನ ದರ್ಶನಕ್ಕೆ, ಜೀವನ ಸಾಫಲ್ಯಕ್ಕೆ ಸಂಬಂಧಿಸಿದ್ದಾಗಿರುತ್ತದೆ. ಸ್ವಾಮಿ ವಿವೇಕಾನಂದರು ಬಹಳ ಹಿಂದೆಯೇ ನಮ್ಮ ಅಭಿವೃದ್ಧಿ ನಮ್ಮ ಸಂಸ್ಕೃತಿಗೆ ಅನುಗುಣವಾಗಿ ಆಗಬೇಕೆಂದು ಹೇಳಿದ್ದರು. ಅನುಕರಣೆ ಸಂಸ್ಕೃತಿಯ ಬಗ್ಗೆ ಅವರು ಹೀಗೆ ಹೇಳುತ್ತಾರೆ:

‘ಮತ್ತೊಂದು ದೊಡ್ಡ ಪಾಠವನ್ನು ನಾವು ಕಲಿಯಬೇಕು. ಅನುಕರಣೆ ನಾಗರಿಕತೆಯಲ್ಲ. ಅದೊಂದು ಅಸಹ್ಯವಾದ ಕೀಳು ಅಭಿರುಚಿ. ಇತರರಿಂದ ಒಳ್ಳೆಯದೆಲ್ಲವನ್ನೂ ಕಲಿಯಿರಿ, ಕಲಿತದ್ದನ್ನು ನಿಮ್ಮದೇ ರೀತಿಯಲ್ಲಿ ರಕ್ತಗತಮಾಡಿಕೊಳ್ಳಿ. ಎಂದೂ ಮತ್ತೊಬ್ಬರಾಗಲು ಬಯಸದಿರಿ. ಈ ಭಾರತೀಯ ಜೀವನ ವಿಧಾನದಿಂದ ಹೊರಗೆ ಸರಿಯಬೇಡಿ. ಭಾರತೀಯರೆಲ್ಲರೂ ಇತರ ಜನಾಂಗದವರಂತೆ ಆಹಾರ ಸೇವಿಸುವುದು, ಬಟ್ಟೆ ಧರಿಸುವುದು ನಡವಳಿಕೆಯನ್ನು ಅಳವಡಿಸಿಕೊಳ್ಳುವುದು ಒಳ್ಳೆಯದೆಂದು ಕ್ಷಣ ಮಾತ್ರವೂ ಭಾವಿಸದಿರಿ’.

ಈ ಚರ್ಚೆಯ ಹಿನ್ನೆಲೆಯಲ್ಲಿ ಜಪಾನ್ ಸಾಧಿಸಿದ ಪ್ರಗತಿಗೂ ಅ ದೇಶದ ಜನ ತನ್ನದೇ ಸಂಸ್ಕೃತಿಯನ್ನು ಪ್ರಜ್ಞಾಪೂರ್ವಕವಾಗಿ ಉಳಿಸಿಕೊಂಡಿರುವುದಕ್ಕೂ ಇರುವ ಸಂಬಂಧವನ್ನು ನಿರಾಕರಿಸಲಾಗುವುದಿಲ್ಲ. 1543ರಲ್ಲಿ ಯುರೋಪಿಯನ್ನರು ಮೊಟ್ಟಮೊದಲಿಗೆ ಜಪಾನ್ ಪ್ರವೇಶಿಸಿದರು.
 
ಇವರಿಗೆ ಜಪಾನೀಯರಿಂದ ಭವ್ಯ ಸ್ವಾಗತವೇ ದೊರೆಯಿತು. ಬಂದೂಕು, ಗಡಿಯಾರ ಮಾಡುವುದನ್ನು ಯೂರೋಪಿಯನ್ನರಿಂದಲೇ ಕಲಿತರು. ಸ್ವಲ್ಪ ಕಾಲದಲ್ಲೇ ಇವುಗಳನ್ನು ಯೂರೋಪಿಯನ್ನರಿಗಿಂತ ಚೆನ್ನಾಗಿ ಮಾಡುವುದನ್ನು ಕಲಿತು ಯೂರೋಪಿನಿಂದ ಎಲ್ಲ ಆಮದುಗಳನ್ನು ನಿಷೇಧಿಸಿದರು. ಇವರ ಧರ್ಮ ಬಂದದ್ದು ಚೀನಾದಿಂದ. ಆದರೆ, ಅದನ್ನೂ ಸಹ ಚೀನೀಯರಿಗಿಂತ ಹೆಚ್ಚಾಗಿ ಕರಗತ ಮಾಡಿಕೊಂಡರು. ಒಟ್ಟಿನಲ್ಲಿ ಜಪಾನನ್ನು ಏನೇ  ಪ್ರವೇಶಿಸಿದರೂ ಅದು ಜಪಾನೀ ಮೂಲದ್ದೇನೋ ಎನ್ನುವಷ್ಟು ಸಹಜವಾಗಿ ಅವರೊಳಗೆ ಸೇರಿಹೋಗುತ್ತಿತ್ತು. ಆದರೆ ಜಪಾನ್ ‘ತನ್ನತನ’ಕ್ಕೆ ವಿದೇಶಿ ಮೂಲದ ಯಾವುದನ್ನೂ ವಿನಿಮಯ ಮಾಡಿಕೊಳ್ಳಲಿಲ್ಲ.

ಆದ್ದರಿಂದ ಸ್ವಾಮಿ ವಿವೇಕಾನಂದರು ಜಪಾನೀಯರನ್ನು ಕುರಿತು ಹೀಗೆ ಹೇಳುತ್ತಾರೆ: ‘ಜಪಾನಿನಲ್ಲಿ ನಾವು ಜ್ಞಾನದ ಸಮೀಕರಣವನ್ನು ನೋಡುತ್ತೇವೆ..  ಅವರು ಐರೋಪ್ಯರಿಂದ ಎಲ್ಲವನ್ನೂ ತೆಗೆದುಕೊಂಡಿದ್ದಾರೆ. ಐರೋಪ್ಯರಾಗಿಲ್ಲ. ನಮ್ಮ ದೇಶದಲ್ಲಾದರೋ ಪಾಶ್ಚಾತ್ಯವಾಗಿ ಬಿಡಬೇಕೆಂಬ ಹುಚ್ಚು ಪ್ಲೇಗಿನಂತೆ ನಮ್ಮನ್ನು ಹಿಡಿದುಕೊಂಡಿದೆ. ಅಯ್ಯೋ, ದೇಶ ಎಂಥಾ ದುರವಸ್ಥೆಗೆ ಇಳಿದಿದೆ. ಜನರು ನಮ್ಮಲ್ಲಿರುವ ಚಿನ್ನವನ್ನು ಹಿತ್ತಾಳೆಯಂತೆ ನೋಡುವರು, ಪರದೇಶಿಯರ ಹಿತ್ತಾಳೆ, ಚಿನ್ನ ಇವರಿಗೆ’.

ಆನುವಂಶೀಯ ಗುಣಗಳ ಆಧಾರದ ಮೇಲೆ ಬುದ್ಧಿಶಕ್ತಿಯ ಮಟ್ಟವನ್ನು ಪರಿಗಣಿಸಿದರೆ ಭಾರತೀಯರಲ್ಲಿ ಯಾವ ಕೊರತೆಯೂ ಕಂಡುಬರುವುದಿಲ್ಲ. ನಮ್ಮ ದೇಶವನ್ನು ಬಿಟ್ಟು ಹೊರ ಹೋದವರು ಅಸಾಧಾರಣವಾದದ್ದನ್ನು ಸಾಧಿಸಿದ್ದಾರೆ. ಆದರೆ, ಏಕೋ ಏನೋ ನಮ್ಮ ದೇಶದೊಳಗೆ ಇರುವ ಕೋಟ್ಯಂತರ ಜನಗಳ ಸಾಮರ್ಥ್ಯ ಪೂರ್ಣಪ್ರಮಾಣದಲ್ಲಿ ವ್ಯಕ್ತವಾಗುತ್ತಿಲ್ಲ.  ಬುದ್ಧಿ ಸಾಮರ್ಥ್ಯ-ಪ್ರಕೃತಿಯ ಕೊಡುಗೆ ಈ ಎರಡು ನಮ್ಮದಾಗಿರುವಾಗ ನಮ್ಮ ಜನಸಂಖ್ಯೆಯನ್ನು ನಿಯಂತ್ರಿಸಿ, ಭಾರತೀಯತೆಯನ್ನು ಉಳಿಸಿಕೊಂಡು, ಸುಭಿಕ್ಷ ರಾಷ್ಟ್ರವಾಗಲು ನಮಗೆ ಇರುವ ಅಡಚಣೆಯಾದರೂ ಏನು?

ಬಹಳ ಕಾಲ ನಡೆದು ಬಂದ ಪ್ರಾಚೀನ ಸಂಸ್ಕೃತಿಯಲ್ಲಿ ಕೆಲವು ವಿಷಕಾರಿ ಅಂಶಗಳು ಸೇರಿಹೋಗುವುದು ಸಹಜ.  ಸಂಸ್ಕೃತಿ ಚಲಿಸುವ ಕಾಲದ ಹಾದಿಯಲ್ಲಿ ಅನೇಕ ಉದಾತ್ತ ಅಂಶಗಳನ್ನು, ಇತ್ಯಾತ್ಮಕ ಮನೋಧರ್ಮವನ್ನು ಮೈಗೂಡಿಸಿಕೊಂಡಂತೆ ನೇತ್ಯಾತ್ಮಕ ಅಂಶಗಳೂ ಸೇರಿ ಹೋಗುತ್ತವೆ.  ನಿಜ ಹೇಳಬೇಕೆಂದರೆ, ನೇತ್ಯಾತ್ಮಕ ಅಂಶಗಳು ಸೇರುವುದೇ ಹೆಚ್ಚು. ಈ ನೇತ್ಯಾತ್ಮಕ ಅಂಶಗಳು ಮನಸ್ಸಿನಾಳಕ್ಕೆ ಜರಿದು ನಮ್ಮ ಅಪ್ರಜ್ಞೆಯ ಸ್ತರದಲ್ಲಿ ಸೇರಿ ಹೋಗುತ್ತವೆ. ಶಾಲಾ ಕಾಲೇಜುಗಳಲ್ಲಿ ನಾವು ಪ್ರಜ್ಞಾಪೂರ್ವಕವಾಗಿ ಕಲಿತದ್ದು ನಿಜ ಜೀವನದ ಭಾಗವಾಗುವುದೇ ಇಲ್ಲ. ಆದರೆ ದಿನನಿತ್ಯದ ಜೀವನದಲ್ಲಿ ಮಕ್ಕಳು ತಮ್ಮ ಸಾಂಸ್ಕೃತಿಕ ಪರಿಸರದಲ್ಲಿ ಅಪ್ರಜ್ಞಾಪೂರ್ವಕವಾಗಿ ಕಲಿಯುವ ಸ್ವಾರ್ಥ, ದುರಾಸೆಗಳು, ಜಾತಿ ಸಂಬಂಧವಾದ ಆಚಾರ-ವಿಚಾರಗಳು, ಅನೇಕ ಮೂಢನಂಬಿಕೆಗಳು ನಮ್ಮ ಕ್ರಿಯೆಯ ಮೂಲಸೆಲೆಯಾಗುತ್ತವೆ.  ಕೇವಲ ಹುಟ್ಟಿನಿಂದ ಮಾತ್ರ ಮೇಲು ಕೀಳುಗಳನ್ನು ನಿರ್ಧರಿಸುವ ನಮ್ಮ ಜಾತಿ ಪದ್ಧತಿ ಅಸಹಜವಾದ ಅಸಮಾನತೆಯನ್ನು ಉಂಟು ಮಾಡುವುದಷ್ಟೇ ಅಲ್ಲ, ಇದು ನಮ್ಮ ಅಭಿವೃದ್ಧಿಗೂ ಇರುವ ದೊಡ್ಡ ಕಂಟಕ.  ಈ ಅಸಮಾನತೆಯ ಜೊತೆಗೆ ಕರ್ಮಸಿದ್ಧಾಂತ-ವಿಧಿಗಳು ಸೇರಿ ಹೋಗಿ ಮನುಷ್ಯನ ಪ್ರಯತ್ನಶೀಲತೆಯನ್ನು ಸಂಪೂರ್ಣವಾಗಿ ನಾಶ ಮಾಡಿದೆ.  ಯೂರೋಪ್ ಮಾದರಿಯ ಸ್ಪರ್ಧೆ ಮೂಲದ ಅಭಿವೃದ್ಧಿ ಮಾದರಿಗಳು ಹಾವು ಏಣಿ ಆಟದಂತೆ ಕೆಲವರಿಗೆ ಮಾತ್ರ ಏಣಿಯಾಗಿ ಬಹುಸಂಖ್ಯಾತರಿಗೆ ಹಾವಾಗಿ ಪರಿಣಮಿಸಿದೆ.  ಹಾಗಾಗಿ ಜಾಗತೀಕರಣ-ಯೂರೋಪ್ ಮಾದರಿ ಅಭಿವೃದ್ಧಿಗಳು ನಮ್ಮಲ್ಲಿರುವ ಅಸಮಾನತೆಯನ್ನು ಮತ್ತಷ್ಟು ಹೆಚ್ಚು ಮಾಡುತ್ತವೆ. 

ಪ್ರಗತಿಪರ ಚಿಂತನೆಗಳು, ಸಾಮಾಜಿಕ ಆಂದೋಲನಗಳು ಮಾತ್ರ ನಮ್ಮ ಅಪ್ರಜ್ಞೆಯಲ್ಲಿ ಹಾಸುಹೊಕ್ಕಾಗಿರುವ ನೇತ್ಯಾತ್ಮಕ ಚಿಂತನೆಗಳನ್ನು ತೆಗೆದುಹಾಕಿ ಮನುಷ್ಯರು ಜೊತೆಗೂಡಿ ಬಾಳಲು ಇಂದಿಗೂ ಸಹಾಯ ಮಾಡುತ್ತಿವೆ. ಇಂತಹ ಪ್ರಗತಿಪರ ಚಿಂತನೆಗಳು ನೃಪತುಂಗ-ಪಂಪರ ಕಾಲದಿಂದ ಹಿಡಿದು ಇಂದಿನವರೆಗೂ ಜನಮಾನ್ಯವಾಗಿ ಉಳಿದಿರುವುದೇ ನಮಗೆ ಹೊಸ ಹುರುಪು, ಹೊಸ ಆಶಾಕಿರಣಗಳನ್ನು ನೀಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT