ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಆತ್ಮವಿಮರ್ಶೆ ಶಕ್ತಿ

Last Updated 1 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ಕಾಲಿನ್ ಕ್ಯಾಪರ್ನಿಕ್ ಒಬ್ಬ ಅಮೆರಿಕನ್ ಫುಟ್‌ಬಾಲ್ ಆಟಗಾರ. ಸ್ಯಾನ್‌ಫ್ರಾನ್ಸಿಸ್ಕೊ ಫಾರ್ಟಿನೈನರ್ಸ್‌ ಎಂಬ ತಂಡದ ಪರವಾಗಿ ಅಮೆರಿಕದ ನ್ಯಾಷನಲ್ ಫುಟ್‌ಬಾಲ್ ಲೀಗ್‌ನಲ್ಲಿ ಆಡುವ ಕ್ಯಾಪರ್ನಿಕ್ ಇತ್ತೀಚೆಗೆ ವಿವಾದವೊಂದರಲ್ಲಿ ಸಿಲುಕಿಕೊಂಡರು.

ಅಮೆರಿಕದಲ್ಲಿ ಬೇಸ್‌ಬಾಲ್ ಅಥವಾ ಫುಟ್‌ಬಾಲ್‌ ಪಂದ್ಯಗಳು ಪ್ರಾರಂಭವಾಗುವ ಮೊದಲು ಅಮೆರಿಕದ ರಾಷ್ಟ್ರಗೀತೆಯನ್ನು ಹಾಡುವ ಸಂಪ್ರದಾಯವಿದೆ. ಹೀಗೆ ಹೋದ ಶುಕ್ರವಾರ ಪ್ರದರ್ಶನ ಪಂದ್ಯವೊಂದು ಪ್ರಾರಂಭವಾಗುವುದಕ್ಕೆ ಮೊದಲು ರಾಷ್ಟ್ರಗೀತೆಯನ್ನು ಹಾಡುವಾಗ ಕ್ಯಾಪರ್ನಿಕ್ ಎದ್ದು ನಿಲ್ಲಲಿಲ್ಲ, ಬದಲಿಗೆ ಕುಳಿತೇ ಇದ್ದರು.

ಪಂದ್ಯಾನಂತರದ ಸಂದರ್ಶನದಲ್ಲಿ ಕ್ಯಾಪರ್ನಿಕ್ ತಮ್ಮ ಪ್ರತಿಭಟನೆಗೆ ಕಾರಣಗಳನ್ನು ವಿವರಿಸಿದರು. ಕಪ್ಪು ಮತ್ತು ಮಿಶ್ರ ವರ್ಣ ಹಿನ್ನೆಲೆಯ ಜನರನ್ನು ಶೋಷಿಸುವ ದೇಶದ ಧ್ವಜಕ್ಕೆ ತಾನು ಎದ್ದು ನಿಂತು ಗೌರವಿಸುವುದು ಸಾಧ್ಯವಿಲ್ಲ ಎಂದು ಅವರು ವಾದಿಸಿದರು.

ಇತ್ತೀಚಿನ ದಿನಗಳಲ್ಲಿ ಅಮೆರಿಕದ ನಗರಗಳಲ್ಲಿ ಕಪ್ಪು ಮತ್ತು ಮಿಶ್ರವರ್ಣೀಯರ ಮೇಲೆ ನಡೆದಿರುವ ಪೊಲೀಸ್‌ ಕ್ರೌರ್ಯದ ಘಟನೆಗಳ ವಿರುದ್ಧ ದನಿಯೆತ್ತುವುದು ಕ್ಯಾಪರ್ನಿಕ್ ಅವರ ಉದ್ದೇಶವಾಗಿತ್ತು. ಇಂತಹ ವರ್ಣಾಧಾರಿತ ಹಿಂಸೆಯ ವಿರುದ್ಧ ದನಿಯೆತ್ತುವುದು ಫುಟ್‌ಬಾಲ್ ಆಡುವುದಕ್ಕಿಂತ ಹೆಚ್ಚು ಮುಖ್ಯವಾದುದು ಎಂದರವರು.

ಇಲ್ಲಿ ಗಮನಾರ್ಹ ವಿಷಯವೆಂದರೆ ಕ್ಯಾಪರ್ನಿಕ್ ಹುಟ್ಟಿನಿಂದ ಕಪ್ಪುವರ್ಣೀಯರಾದರೂ ಅವರನ್ನು ಶಿಶುವಾಗಿದ್ದಾಗಲೆ ಶ್ವೇತವರ್ಣೀಯ ಕುಟುಂಬವೊಂದು ದತ್ತು ತೆಗೆದುಕೊಂಡು ಬೆಳೆಸಿತು. 2011ರಿಂದ ವೃತ್ತಿಪರ ಫುಟ್‌ಬಾಲ್ ಆಟಗಾರರಾಗಿರುವ ಕ್ಯಾಪರ್ನಿಕ್ ಸಾಕಷ್ಟು ಯಶಸ್ಸು ಗಳಿಸಿದ್ದಾರೆ. ಹಾಗಾಗಿ ಅವರ ಪ್ರತಿಭಟನೆಗೆ ಮಾಧ್ಯಮಗಳೂ ಪ್ರಚಾರ ನೀಡಿವೆ.

ರಾಷ್ಟ್ರದ ಲಾಂಛನಗಳಿಗೆ ಗೌರವ ತೋರಿಸುವುದಿಲ್ಲ ಎಂಬ ಕ್ಯಾಪರ್ನಿಕ್‌ರ ನಿಲುವು ಅಮೆರಿಕದೊಳಗೆ ಸ್ವಾಭಾವಿಕವಾಗಿಯೆ ವಿವಾದವೊಂದನ್ನು ಮತ್ತು ಬಿಸಿಚರ್ಚೆಯನ್ನು ಹುಟ್ಟುಹಾಕಿದೆ. ರಾಷ್ಟ್ರಗೀತೆ ಹಾಡುವಾಗ ಎದ್ದುನಿಲ್ಲದೆ ಕ್ಯಾಪರ್ನಿಕ್ ಅಮೆರಿಕದ ಸ್ವಾತಂತ್ರ್ಯ ರಕ್ಷಣೆಗೆ ತಮ್ಮ ಜೀವವನ್ನೇ ಪಣವಾಗಿಡುವ ಸೈನ್ಯವನ್ನು ಅವಮಾನಿಸುತ್ತಿದ್ದಾರೆ ಎಂದು ಅವರ ವಿರೋಧಿಗಳು ವಾದಿಸುತ್ತಿದ್ದಾರೆ.

ಕ್ಯಾಪರ್ನಿಕ್‌ರ ನಡವಳಿಕೆಯನ್ನು ರಾಷ್ಟ್ರದ್ರೋಹ ಎನ್ನುವವರ ಸಂಖ್ಯೆಯೂ ಕಡಿಮೆಯೇನಿಲ್ಲ. ಅಂತಹವರ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತ ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಉಮೇದುವಾರ ಡೊನಾಲ್ಡ್ ಟ್ರಂಪ್, ಕ್ಯಾಪರ್ನಿಕ್‌ಗೆ ಅಮೆರಿಕ ಸರಿಯೆನಿಸದಿದ್ದರೆ ಬೇರೆ ಯಾವುದಾದರೂ ದೇಶಕ್ಕೆ ಹೋಗಿ ನೆಲೆಸುವಂತೆ ಸಲಹೆ ನೀಡಿದ್ದಾರೆ.

ಕ್ಯಾಪರ್ನಿಕ್‌ರನ್ನು ಬೆಂಬಲಿಸುತ್ತಿರುವವರು, ಮುಕ್ತ ಚರ್ಚೆಯೆನ್ನುವುದು ಅಮೆರಿಕದ ರಾಷ್ಟ್ರೀಯ ಲಾಂಛನಗಳ ಪಾವಿತ್ರ್ಯಕ್ಕಿಂತ ಹೆಚ್ಚು ಅಮೂಲ್ಯವಾದುದು ಎಂದು ಅಭಿವ್ಯಕ್ತಿ ಸ್ವಾತಂತ್ರ್ಯವೆಂಬ ಉದಾರವಾದಿ ಮೌಲ್ಯವನ್ನು ಎತ್ತಿ ಹಿಡಿಯುತ್ತಿದ್ದಾರೆ.

ಇಂದಿಗೂ ಶ್ವೇತವರ್ಣೀಯರಲ್ಲದವರ ಮೇಲೆ ಪೊಲೀಸ್‌ ಕ್ರೌರ್ಯ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿದೆ ಎನ್ನುವ ಅಮೆರಿಕದ ವಾಸ್ತವವನ್ನು ಯಾರೂ ಕಡೆಗಣಿಸಬಾರದು ಎಂದೂ ಅವರು ಪ್ರತಿಪಾದಿಸುತ್ತಾರೆ.

ಸಮೀಕ್ಷೆಗಳ ಪ್ರಕಾರ ಕ್ಯಾಪರ್ನಿಕ್‌ರ ನಿಲುವನ್ನು ಒಪ್ಪುವವರ ಸಂಖ್ಯೆ ಶೇ 34ರಷ್ಟು ಮಾತ್ರವಿದ್ದರೆ, ತಮಗನ್ನಿಸಿದ್ದನ್ನು ಮುಕ್ತವಾಗಿ ಅಭಿವ್ಯಕ್ತಿಸುವ ಕ್ಯಾಪರ್ನಿಕ್‌ರ ಹಕ್ಕನ್ನು ಶೇ 51ರಷ್ಟು ಅಮೆರಿಕನ್ನರು ಬೆಂಬಲಿಸುತ್ತಾರೆ. ಅವರ ಬೆಂಬಲಕ್ಕೆ ಬಂದಿರುವವರಲ್ಲಿ ಹಲವು ಮಾಜಿ ಸೈನಿಕರ ಸಂಘಟನೆಗಳೂ ಸೇರಿವೆ.

ವರ್ಣಸಂಬಂಧಿ ವಿದ್ಯಮಾನಗಳ ಬಗ್ಗೆ ರಾಜಕೀಯ ನಿಲುವು ತಳೆದ ಕ್ರೀಡಾಪಟುಗಳ ಪಟ್ಟಿಯಲ್ಲಿ ಕ್ಯಾಪರ್ನಿಕ್‌ರಿಗಿಂತ ಮೊದಲು, ಅವರಿಗಿಂತಲೂ ಹೆಚ್ಚು ಖ್ಯಾತನಾಮರು ದನಿಯೆತ್ತಿದ್ದರು.

ಉದಾಹರಣೆಗೆ ಜೂನ್‌ನಲ್ಲಿ ತೀರಿಕೊಂಡ ಮಹಮ್ಮದ್ ಅಲಿ,  ವಿಯೆಟ್ನಾಂ ಯುದ್ಧದ ವಿರುದ್ಧ ಮತ್ತು ಅಮೆರಿಕದಲ್ಲಿನ ವರ್ಣಾಧಾರಿತ ತಾರತಮ್ಯಗಳ ವಿರುದ್ಧ 1960ರ ದಶಕದಲ್ಲಿಯೇ ಸಾರ್ವಜನಿಕವಾಗಿ ಪ್ರತಿಭಟಿಸಿದ್ದರಲ್ಲದೆ, ಹಲವಾರು ವರ್ಷಗಳ ಕಾಲ ಜೈಲುವಾಸವನ್ನೂ ಅನುಭವಿಸಿದರು.

ಇತರ ವಲಯದ ಖ್ಯಾತನಾಮರನ್ನು ಉದಾಹರಿಸುವುದಾದರೆ, ಈಗ ಅಮೆರಿಕದ ಅಧ್ಯಕ್ಷರಾಗಿ ತಮ್ಮ ಎರಡನೆಯ ಅವಧಿಯನ್ನು ಮುಗಿಸುತ್ತಿರುವ ಬರಾಕ್ ಒಬಾಮ ಅವರನ್ನೇ ಪರಿಗಣಿಸಿ.

‘ಅಮೆರಿಕದ ವರ್ಣೀಯ ಸಮಸ್ಯೆ ಇನ್ನೂ ಬಗೆಹರಿಯಬೇಕಾಗಿದೆ, ಅಮೆರಿಕದ ಒಕ್ಕೂಟ ಮತ್ತಷ್ಟು ಪರಿಪೂರ್ಣವಾಗಬೇಕಾದರೆ ಅಲ್ಲಿನ ಮಿಶ್ರವರ್ಣದ ಸಮುದಾಯಗಳಿಗೆ ಅವಕಾಶಗಳು, ಸಂಪನ್ಮೂಲಗಳು ಮತ್ತಷ್ಟು ದೊರಕಬೇಕು.

ಈ ಸಮುದಾಯಗಳ ವಿರುದ್ಧ ವ್ಯವಸ್ಥೆಯಲ್ಲಿಯೇ ಇರುವ ತಾರತಮ್ಯದ ನಡವಳಿಕೆಗಳು ಮತ್ತು ಪೂರ್ವಗ್ರಹಗಳನ್ನು ತೊಡೆಯಬೇಕಾಗಿದೆ’ ಎಂದು ಒಬಾಮ ಸತತವಾಗಿ ವಾದಿಸುತ್ತ ಬಂದಿದ್ದಾರೆ.

ಇಂತಹ ವಿಶ್ಲೇಷಣೆ ಮಾಡುವುದೇ ಅಮೆರಿಕಕ್ಕೆ ಅವಮಾನ ಮಾಡಿದಂತೆ, ಅಮೆರಿಕದ ಶ್ರೇಷ್ಠತೆಯನ್ನು ಪ್ರಶ್ನಿಸಿದಂತೆ, ಅದು ಸಾಧಿಸಿರುವ ಪ್ರಗತಿಯನ್ನು ಅಲಕ್ಷಿಸಿದಂತೆ ಎನ್ನುವವರ ಸಂಖ್ಯೆಯೇನೂ ಕಡಿಮೆಯಿಲ್ಲ.

ಹಾಗಾಗಿಯೆ ರಿಪಬ್ಲಿಕನ್ ಪಕ್ಷದ ಬೆಂಬಲಿಗರು ಒಬಾಮರಿಗೆ ಅಮೆರಿಕದ ಬಗ್ಗೆ ಕೀಳರಿಮೆಯಿದೆ, ಅವರು ಅಗತ್ಯವಿರುವಷ್ಟು ಪ್ರಮಾಣದಲ್ಲಿ ಅಮೆರಿಕನ್ನರಲ್ಲ (ಇನ್‌ಸಫಿಶಿಯಂಟ್ಲಿ ಅಮೆರಿಕನ್) ಎನ್ನುತ್ತಾರೆ. ಆ ಮೂಲಕ ಅಮೆರಿಕದ ಬಗೆಗಿನ ಅವರ ನಿಷ್ಠೆಯನ್ನು, ದೇಶಪ್ರೇಮವನ್ನು ಪ್ರಶ್ನಿಸುತ್ತಾರೆ.

ಕುತೂಹಲದ ವಿಚಾರವೆಂದರೆ ವರ್ಣಾಧಾರಿತ ತಾರತಮ್ಯಗಳ ವಿರುದ್ಧ ಇಂದು ದನಿಯೆತ್ತುವ ಕ್ಯಾಪರ್ನಿಕ್ ಅಥವಾ ಒಬಾಮ ರಾಷ್ಟ್ರದ್ರೋಹಿಗಳೆನ್ನುವ ಹಣೆಪಟ್ಟಿ ಕಟ್ಟಿಕೊಂಡರೆ, ಐದು ದಶಕಗಳ ಹಿಂದೆ ಅದೇ ಕೆಲಸ ಮಾಡಿದ ಮಹಮ್ಮದ್ ಅಲಿ  ಅಥವಾ ಅವರ ಸಮಕಾಲೀನ ಮಾರ್ಟಿನ್ ಲೂಥರ್ ಕಿಂಗ್ ಇಂದು ರಾಷ್ಟ್ರಪ್ರೇಮದ ಮೂರ್ತಿಗಳಾಗಿ (ಐಕಾನ್) ಬಿಡುತ್ತಾರೆ.

ಭಾರತದ ಸಂದರ್ಭದಲ್ಲಿಯೆ ಗಮನಿಸಿ. ಡಾ. ಅಂಬೇಡ್ಕರರ ಕೃತಿಗಳನ್ನು ಓದಿ, ಅವರ ವಿಚಾರಗಳನ್ನು ಜೀರ್ಣಿಸಿಕೊಳ್ಳುವ ಹಾಗೂ ಚರ್ಚಿಸುವ ರೋಹಿತ್ ವೇಮುಲರಂತಹ ಯುವಕರು ಸಂದೇಹಾಸ್ಪದ, ಅಪಾಯಕಾರಿ ವ್ಯಕ್ತಿಗಳಾಗುತ್ತಾರೆ. ಆದರೆ ಬಾಬಾಸಾಹೇಬರನ್ನು ನಾವು ಯಾವ ಪ್ರಮಾಣದಲ್ಲಿ ಪಳಗಿಸಿಕೊಂಡಿದ್ದೇವೆ ಎಂದರೆ ಅವರನ್ನು ಮೂರ್ತಿಯಾಗಿಸಿಕೊಂಡಿದ್ದೇವೆ.

ಅದೇ ಸಮಯದಲ್ಲಿ ಅವರ ಬರಹಗಳನ್ನು, ವಿಚಾರಗಳನ್ನು, ಭಾರತೀಯ ಸಮಾಜದ ಬಗ್ಗೆ ಅವರು ಎತ್ತಿದ ಗಂಭೀರ ಪ್ರಶ್ನೆಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದೇವೆ. ಬಹುಶಃ ಹೀಗೆ ನಿರ್ಲಕ್ಷಿಸುವ ಮೂಲಕವೆ ‘ಐಕಾನ್’ಗಳನ್ನು ಕಟ್ಟಿಕೊಳ್ಳಲು ಸಾಧ್ಯವೇನೊ.

ಸ್ವವಿಮರ್ಶೆ ಅಥವಾ ಆತ್ಮವಿಮರ್ಶೆಯನ್ನು ಮಾಡಿಕೊಳ್ಳುವ ಗುಣದ ಬಗ್ಗೆ ರಾಷ್ಟ್ರೀಯತೆಗೆ- ಅದು ಅಮೆರಿಕದ್ದಾಗಿರಲಿ ಅಥವಾ ಭಾರತದ್ದಾಗಿರಲಿ ಒಂದು ಚಾಂಚಲ್ಯವಿದೆ, ಉಭಯಭಾವವಿದೆ. ಒಂದೆಡೆ ರಾಷ್ಟ್ರೀಯತೆ ರೂಪುಗೊಳ್ಳುವುದೇ ತನ್ನೊಳಗೆ (ಅಂದರೆ ಆ ದೇಶ- ಸಮಾಜಗಳೊಳಗೆ) ಆಗಬೇಕಿರುವ ಬದಲಾವಣೆ- ಸುಧಾರಣೆಗಳನ್ನು ಗುರುತಿಸಿದಾಗ.

ಇದು ವಸಾಹತುಶಾಹಿಯಿಂದ ಬಿಡಿಸಿಕೊಳ್ಳಲು ಹೋರಾಡಿದ ಅಮೆರಿಕ ಮತ್ತು ಭಾರತದಂತಹ ದೇಶಗಳಿಗೂ ಸತ್ಯ. ರಾಜತ್ವವನ್ನು ಬಿಟ್ಟು ಆಧುನಿಕ ಪ್ರಜಾಪ್ರಭುತ್ವಗಳಾಗಲು ಹವಣಿಸುತ್ತಿದ್ದ ಇಂಗ್ಲೆಂಡ್, ಫ್ರಾನ್ಸ್ ಮತ್ತು ರಷ್ಯಾಗಳಂತಹ ಯುರೋಪಿನ ದೇಶಗಳ ಸಂದರ್ಭದಲ್ಲಿಯೂ ನಿಜ.

ಇದರ ಜೊತೆಗೆ ಮತ್ತೊಂದೆಡೆ ರಾಷ್ಟ್ರದ ಬಗೆಗಿನ ಹೆಮ್ಮೆ ಮತ್ತು ನಿಷ್ಠೆಗಳು ಸಹ ರಾಷ್ಟ್ರೀಯತೆಯನ್ನು ಪ್ರಶ್ನಾತೀತವನ್ನಾಗಿಸುವ ದಿಕ್ಕಿನಲ್ಲಿ ಬೆಳೆಯುತ್ತವೆ. ಹಾಗಾಗಿಯೆ ಏನಾದರೂ ಸರಿ ನನ್ನ ದೇಶವು ಪರಿಪೂರ್ಣ, ಪ್ರಶ್ನಾತೀತ ಎನ್ನುವ ಭಾವನೆಯನ್ನೂ ರಾಷ್ಟ್ರೀಯತೆ ಪೋಷಿಸುತ್ತದೆ.
ನಮ್ಮ ಇತ್ತೀಚಿನ ವಿವಾದಗಳಲ್ಲಿ ಈ ಎರಡೂ ಮುಖಗಳನ್ನು ನಾವು ಗಮನಿಸಬಹುದು.

ಉದಾಹರಣೆಗೆ ಆಮ್ನೆಸ್ಟಿ ಇಂಟರ್‌ನ್ಯಾಷನಲ್ ಸಂಸ್ಥೆಯ ಪ್ರಕರಣವನ್ನೆ ಪರಿಗಣಿಸಿ. ಇಂದಿನ ವಿವಾದವನ್ನು ಚರ್ಚಿಸುವ ಮೊದಲು ಈ ಸಂಸ್ಥೆಯ ಬಗ್ಗೆ ಎರಡು ಅಂಶಗಳು ನಮ್ಮ ಗಮನದಲ್ಲಿರಬೇಕು.

ತನ್ನ ಕಾರ್ಯಕ್ರಮಗಳಿಗೆ ಆಮ್ನೆಸ್ಟಿಯು ದೇಶದೊಳಗಿನ ಮತ್ತು ಹೊರಗಿನ ಮೂಲಗಳಿಂದ ಹಣ ಸಂಗ್ರಹಿಸುತ್ತದೆ ಹಾಗೂ ಅದು ನಡೆಸುವ ಏಳು ದೀರ್ಘಾವಧಿ ಕಾರ್ಯಕ್ರಮಗಳು ಕೇಂದ್ರ ಮತ್ತು ರಾಜ್ಯ ಸರ್ಕಾರಗಳೊಡನೆ ಸಕ್ರಿಯವಾಗಿ ಕೈಗೂಡಿಸಿ ನಡೆಸುವಂತಹವು.

ಇದರ ಮೂಲಕ ವಿವಿಧ ವಲಯಗಳಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿರುವುದು ಬೆಳಕಿಗೆ ಬರುತ್ತಿದೆ ಎನ್ನುವುದು ವಾಸ್ತವವೆ. ಈಗ ವಿವಾದಕ್ಕೊಳಗಾಗಿರುವ ಬೆಂಗಳೂರಿನ ಸಭೆಯು ಕಾಶ್ಮೀರದಲ್ಲಿ ನಡೆದಿರುವ ಮಾನವ ಹಕ್ಕುಗಳ ಉಲ್ಲಂಘನೆಯ ಚರ್ಚೆಯನ್ನು ನಡೆಸಲು ಒಂದು ಅವಕಾಶವಾಗಿತ್ತು.

ಅಂದರೆ ನಾನು ಮೇಲೆ ಗುರುತಿಸಿದ ಮೊದಲ ಮಾದರಿಗೆ ಅನುಗುಣವಾಗಿ ಕಾಶ್ಮೀರಿಗಳೂ ಸೇರಿದಂತೆ ಭಾರತೀಯರೆಲ್ಲರೂ ನಮ್ಮೊಳಗಿನ ಇಂದಿನ ಅಪರಿಪೂರ್ಣತೆಗಳನ್ನು ಚರ್ಚಿಸುವ ಒಂದು ಅವಕಾಶವಾಗಿತ್ತು. ಆದರೆ ಆಮ್ನೆಸ್ಟಿಯ ಟೀಕಾಕಾರರ ದೃಷ್ಟಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯ ಚರ್ಚೆಯೇ ಭಾರತದ ಘನತೆ, ವರ್ಚಸ್ಸುಗಳಿಗೆ ಧಕ್ಕೆ ತರುವಂತಹುದು.

ಈ ಅಂಶ ನಾನು ಮೇಲೆ ಗುರುತಿಸಿದ ರಾಷ್ಟ್ರೀಯತೆಯ ಎರಡನೆಯ ಆಯಾಮಕ್ಕೆ ಸಂಬಂಧಿಸಿದುದು. ಬೆಂಗಳೂರಿನ ಸಭೆಯಲ್ಲಿ ರಾಷ್ಟ್ರವಿರೋಧಿ ಘೋಷಣೆಗಳನ್ನು ಕೂಗಲು ಅವಕಾಶ ಮಾಡಿಕೊಟ್ಟ ಆಪಾದನೆಯೂ ಸೇರಿದೆ.

ಇಂತಹ ಸಂದರ್ಭದಲ್ಲಿ ಉದ್ಭವಿಸುವ ಪ್ರಶ್ನೆಗಳಿವು: ನಮ್ಮ ದೇಶದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದ್ದರೆ, ಸಂವಿಧಾನದತ್ತ ಸ್ವಾತಂತ್ರ್ಯಗಳ ಹರಣವಾಗುತ್ತಿದ್ದರೆ ಅದನ್ನು ಗುರುತಿಸಬಾರದೆ, ಬಹಿರಂಗವಾಗಿ ಚರ್ಚಿಸಬಾರದೆ?

ಇಂತಹ ಚರ್ಚೆಯನ್ನು ಪ್ರಾರಂಭಿಸುವ ಸಂಸ್ಥೆಗಳು ವಿದೇಶಿ ಮೂಲಗಳಿಂದ ಹಣ ಪಡೆದಿದ್ದರೆ ಅವುಗಳು ಬಣ್ಣಿಸುತ್ತಿರುವ ವಾಸ್ತವ ಸುಳ್ಳಾಗುತ್ತದೆಯೆ? ಮಾನವ ಹಕ್ಕುಗಳ ಉಲ್ಲಂಘನೆಯ ಚರ್ಚೆಯನ್ನು, ಪಾಕಿಸ್ತಾನದ ಬಗ್ಗೆ ತನ್ನ ಅನಿಸಿಕೆಯನ್ನು ವ್ಯಕ್ತಪಡಿಸಿದ ರಮ್ಯಾರನ್ನು ಕೇವಲ ಅಭಿವ್ಯಕ್ತಿ ಸ್ವಾತಂತ್ರ್ಯದ ನೆಲೆಯ ಮೇಲೆ ಸಮರ್ಥಿಸಿದರೆ ಸಾಲದು ಎಂದು ನಾನು ಭಾವಿಸುತ್ತೇನೆ.

ಅಭಿವ್ಯಕ್ತಿ ಸ್ವಾತಂತ್ರ್ಯವೆನ್ನುವುದು ಮುಕ್ತ ಸಮಾಜವೊಂದಕ್ಕೆ ಅಗತ್ಯವಾದ ಮೌಲ್ಯ, ಆಚರಣೆಯೆನ್ನುವುದರಲ್ಲಿ ಯಾವ ಅನುಮಾನವಿಲ್ಲ. ಆದರೆ ನಾವಿಂದು ಭಾರತದಲ್ಲಿ ಪೋಷಿಸಬೇಕಿರುವುದು ಆತ್ಮವಿಮರ್ಶೆಯನ್ನು ಮಾಡಿಕೊಳ್ಳುವ ಸಾಮರ್ಥ್ಯವನ್ನು.

ರಾಷ್ಟ್ರಪ್ರೇಮದ ಹೆಸರಿನಲ್ಲಿ ನಮ್ಮ ನಡುವಿನ ವಾಸ್ತವವನ್ನು ಅಲಕ್ಷಿಸುವಂತಿಲ್ಲ, ನಮ್ಮ ಮಿತಿಗಳನ್ನು ಗುರುತಿಸದೆ ಸುಮ್ಮನಿರುವಂತಿಲ್ಲ. ಯಾವ ಬಗೆಯ ಸುಧಾರಣೆಯಾಗಬೇಕು ಎನ್ನುವುದನ್ನು ನಿರ್ಲಕ್ಷಿಸುವಂತಿಲ್ಲ.

ವಿದೇಶಿ ಕೈಗಳ ಉದ್ದೇಶಗಳ ಬಗ್ಗೆ ವ್ಯಾಪಕ ಚರ್ಚೆಯಾಗುತ್ತಿರುವ ಹಿನ್ನೆಲೆಯಲ್ಲಿ ನೆನಪಿಟ್ಟುಕೊಳ್ಳಬೇಕಾಗಿರುವ ವಿಚಾರವಿದು. ವಸಾಹತುಶಾಹಿ ಅವಧಿಯಲ್ಲಿ ಭಾರತೀಯ ನಾಗರಿಕತೆಯನ್ನು ಯುರೋಪಿಯನ್ನರು ಕಟುವಾಗಿ ವಿಮರ್ಶಿಸಿದರು.

ಅದಕ್ಕೆ ಉತ್ತರವಾಗಿ ಹೊರಹೊಮ್ಮಿದ ಭಾರತೀಯ ರಾಷ್ಟ್ರೀಯತೆಗೆ ಆತ್ಮವಿಮರ್ಶೆಯ ಶಕ್ತಿಯಿತ್ತು, ಆತ್ಮವಿಶ್ವಾಸದ ಕೊರತೆಯಿರಲಿಲ್ಲ. ನಮ್ಮಲ್ಲಾಗಬೇಕಿರುವ ಬದಲಾವಣೆಗಳು, ಸುಧಾರಣೆಗಳ ಬಗ್ಗೆ ಪ್ರಾಮಾಣಿಕತೆಯಿತ್ತು. ಇದಕ್ಕೆ ಸಾಕ್ಷಿ ಬೇಕೆಂದರೆ ಗಾಂಧೀಜಿ, ಟ್ಯಾಗೋರ್, ಅಂಬೇಡ್ಕರ್ ಯಾರನ್ನಾದರೂ ಗಮನಿಸಿ.

ಜೊತೆಗೆ ಇತಿಹಾಸದುದ್ದಕ್ಕೂ ಭಾರತದೊಳಗಿನಿಂದಲೇ ಹುಟ್ಟಿಬಂದಿರುವ ವಿಮರ್ಶೆಗಳನ್ನೂ, ಅವುಗಳ ಪರಿಣಾಮವಾಗಿ ಭಾರತೀಯ ಸಮಾಜ ಮತ್ತೆಮತ್ತೆ ತನ್ನನ್ನು ಪುನರ್‌ನಿರ್ಮಿಸಿಕೊಂಡಿರುವುದನ್ನೂ ಮರೆಯಬೇಡಿ. ಭಾರತೀಯ ರಾಷ್ಟ್ರೀಯತೆಯ ಈ ಪರಂಪರೆಯನ್ನು ನಾವು ಉಳಿಸಿ, ಪೋಷಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT