ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಣ್ಯ ಖಾಸಗೀಕರಣ, ಅಪಾಯಕ್ಕೆ ಆಹ್ವಾನ

Last Updated 29 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಅಲಕನಂದಾ ಕಣಿವೆಯಲ್ಲಿದ್ದ ಮೇನಾಮರಗಳನ್ನು ಮರಗಳ್ಳರು ಕಡಿಯುವುದನ್ನು 45 ವರ್ಷಗಳ ಹಿಂದೆ ಅಲ್ಲಿನ ಗ್ರಾಮಸ್ಥರ ಗುಂಪು ತಡೆಯಿತು. ಚಿಪ್ಕೊ ಆಂದೋಲನ ಹೀಗೆ ಹುಟ್ಟಿಕೊಂಡಿತು. ವಾಣಿಜ್ಯ ಉದ್ದೇಶಕ್ಕಾಗಿ ಅರಣ್ಯ ಲೂಟಿಯ ಬಗ್ಗೆ ಈ ಚಳವಳಿ ಇಡೀ ದೇಶದ ಗಮನ ಸೆಳೆಯಿತು.

ಚಿಪ್ಕೊ ಚಳವಳಿಯ ಬಳಿಕ, ಕಾಡಿನ ಹಕ್ಕುಗಳನ್ನು ರಕ್ಷಿಸಿಕೊಳ್ಳುವುದಕ್ಕಾಗಿ ದೇಶದಾದ್ಯಂತ ಸರಣಿ ಹೋರಾಟಗಳು ನಡೆದವು; ಪಶ್ಚಿಮ ಘಟ್ಟಗಳ ಗಡ್‍ಚಿರೋಲಿ, ಬಸ್ತಾರ್, ಸಿಂಗ್‍ಭೂಮ್‍ಗಳು ಇಂತಹ ಆಂದೋಲನಕ್ಕೆ ಸಾಕ್ಷಿಯಾದವು. ಅರಣ್ಯ ನೀತಿಯ ಇತಿಹಾಸವನ್ನು ಅಧ್ಯಯನ ಮಾಡುವಂತೆ ವಿದ್ವಾಂಸರಿಗೆ ಈ ಹೋರಾಟಗಳೇ ಪ್ರೇರಣೆಯಾದವು. ಗ್ರಾಮ ಸಮುದಾಯಗಳ ನಿಯಂತ್ರಣದಲ್ಲಿದ್ದ ಅರಣ್ಯ ಪ್ರದೇಶವನ್ನು ಬ್ರಿಟಿಷ್‍ ಸರ್ಕಾರವು ‘ಮೀಸಲು ಅರಣ್ಯ’ಗಳು ಎಂದು ಪರಿಗಣಿಸಿ ಅವುಗಳನ್ನು ಜನರಿಂದ ಹೇಗೆ ಕಸಿದುಕೊಂಡಿತು ಎಂಬುದರತ್ತ ಬೆಳಕು ಚೆಲ್ಲುವ ಪುಸ್ತಕಗಳು ಮತ್ತು ಲೇಖನಗಳು ಪ್ರಕಟವಾದವು. ವಾಣಿಜ್ಯ ಉದ್ದೇಶಗಳಿಗಾಗಿ ವ್ಯಾಪಕವಾಗಿ ದುರ್ಬಳಕೆಯಾಗತೊಡಗಿದ ಅರಣ್ಯ ಪ್ರದೇಶಗಳಿಗೆ ರೈತರು, ಕುಶಲಕರ್ಮಿಗಳು ಮತ್ತು ಬುಡಕಟ್ಟು ಜನರಿಗೆ ಪ್ರವೇಶ ನಿರಾಕರಿಸಲಾಯಿತು.

ಸ್ವಾತಂತ್ರ್ಯ ಬರುವ ಸಮಯದಲ್ಲಿ ದೇಶದ ಶೇ 20ಕ್ಕಿಂತಲೂ ಸ್ವಲ್ಪ ಹೆಚ್ಚಿನ ಭಾಗದ ಮೇಲೆ ಭಾರತ ಸರ್ಕಾರದ ಅರಣ್ಯ ಇಲಾಖೆ ನಿಯಂತ್ರಣ ಸಾಧಿಸಿತ್ತು. ದುರಂತ ಎಂದರೆ, ಪ್ರಜಾಸತ್ತಾತ್ಮಕ ಗಣರಾಜ್ಯ ವ್ಯವಸ್ಥೆಯೂ ವಸಾಹತು ಆಡಳಿತದ ದಮನಕಾರಿ ಮತ್ತು ಜನರನ್ನು ಹೊರಗಿಡುವ ನೀತಿಯನ್ನೇ ಮುಂದುವರಿಸಿತು. ಈ ಮಧ್ಯೆ, ಪ್ಲೈವುಡ್‍ ಮತ್ತು ಕಾಗದ ಕಾರ್ಖಾನೆಗಳ ಭಾರಿ ಬೇಡಿಕೆಯನ್ನು ಪೂರೈಸುವುದಕ್ಕಾಗಿ ಮರಗಳ ಕಡಿಯುವಿಕೆ ತೀವ್ರಗೊಂಡಿತು. ಸ್ವಾತಂತ್ರ್ಯದ ಬಳಿಕದ ಅರಣ್ಯ ನೀತಿಗಳು ಸಾಮಾಜಿಕ ಧ್ರುವೀಕರಣಕ್ಕೆ ಕಾರಣವಾಗಿದ್ದಲ್ಲದೆ, ಭಾರಿ ಪ್ರಮಾಣದಲ್ಲಿ ಪರಿಸರ ನಾಶವನ್ನೂ ಮಾಡಿದವು.

ಚಿಪ್ಕೊದಂತಹ ಚಳವಳಿಗಳು ಮತ್ತು ಅದರ ಪರಿಣಾಮವಾಗಿ ನಡೆದ ಅಧ್ಯಯನಗಳು, ಆದ್ಯತೆಗಳನ್ನು ಮರುರೂಪಿಸಬೇಕಾದ ತುರ್ತನ್ನು ಸೃಷ್ಟಿಸಿದವು. 1988ರಲ್ಲಿ ರೂಪಿಸಲಾದ ಹೊಸ ಅರಣ್ಯ ನೀತಿಯು ವಾಣಿಜ್ಯ ಉದ್ದೇಶದ ಅರಣ್ಯ ಬಳಕೆಗಿಂತ ಪರಿಸರದ ಸುಸ್ಥಿರತೆ ಹಾಗೂ ಜೀವನೋಪಾಯ ಭದ್ರತೆಗೆ ಹೆಚ್ಚಿನ ಒತ್ತು ನೀಡಿತು. ವಿದೇಶಿ ತಳಿಗಳ ಅನುತ್ಪಾದಕತೆಯ ಬಗ್ಗೆ ಯಾವುದೇ ಗಮನವೂ ಇಲ್ಲದೆ ಇಂತಹ ಗಿಡಗಳನ್ನು ನೆಡುವುದಕ್ಕೆ ಒಂದು ಕಾಲದಲ್ಲಿ ವ್ಯಾಪಕ ಉತ್ತೇಜನ ನೀಡಲಾಗಿತ್ತು.

ಈ ನೀತಿಯಿಂದ ಹಿಂದೆ ಸರಿಯಲಾಯಿತು. ಖಾಸಗಿ ಉದ್ಯಮಕ್ಕೆ ಒಂದು ಕಾಲದಲ್ಲಿ ಅಪಾರವಾದ ಸಹಾಯಧನಗಳನ್ನು ನೀಡಲಾಗುತ್ತಿತ್ತು- ಉದಾಹರಣೆಗೆ, ಕಾಗದ ಕಾರ್ಖಾನೆಗಳಿಗೆ ಒಂದು ಟನ್‍ಗೆ ಒಂದು ರೂಪಾಯಿಯಂತೆ ಕರ್ನಾಟಕ ಅರಣ್ಯ ಇಲಾಖೆಯು ಬಿದಿರು ಪೂರೈಸುತ್ತಿದ್ದರೆ, ಬುಟ್ಟಿ ಹೆಣೆಯುವವರು ಮಾರುಕಟ್ಟೆ ದರದಲ್ಲಿ ಬಿದಿರು ಖರೀದಿಸಬೇಕಿತ್ತು. ಕೊನೆಗೂ ಈ ನೀತಿಯನ್ನು ಕೈಬಿಡಲಾಯಿತು.

1988ರ ಅರಣ್ಯ ನೀತಿಯು ಹಲವು ಲೋಪಗಳನ್ನು ಹೊಂದಿದ್ದರೂ ಹಿಂದಿನ ತಪ್ಪುಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿತ್ತು. 2007ರಲ್ಲಿ ಅನುಮೋದನೆ ಪಡೆದುಕೊಂಡ ಅರಣ್ಯ ಹಕ್ಕುಗಳ ಕಾಯ್ದೆ ಈ ನಿಟ್ಟಿನಲ್ಲಿ ಎರಡನೇ ಹೆಜ್ಜೆಯಾಗಿದೆ. ಆದಿವಾಸಿಗಳು ತಮ್ಮ ಜೀವನೋಪಾಯಕ್ಕಾಗಿ ನೈಸರ್ಗಿಕ ಕಾಡುಗಳ ಮೇಲೆಯೇ ಮುಖ್ಯವಾಗಿ ಅವಲಂಬಿತರಾಗಿದ್ದಾರೆ ಎಂಬುದಕ್ಕೆ ಈ ಕಾಯ್ದೆಯು ಮನ್ನಣೆ ನೀಡಿತು.

ಖಾಸಗಿ ಕಂಪನಿಗಳ ಪರವಾಗಿ ನಿಂತಿದ್ದ ಹಿಂದಿನ ಸರ್ಕಾರಗಳು ಬುಡಕಟ್ಟು ಜನರನ್ನು ಭಾರಿ ತಾರತಮ್ಯದಿಂದ ನಡೆಸಿಕೊಂಡಿದ್ದವು. ಈ ತಾರತಮ್ಯವನ್ನು ಸರಿಪಡಿಸುವ ಉದ್ದೇಶವನ್ನು ಹೊಸ ಕಾಯ್ದೆಯು ಹೊಂದಿತ್ತು- ವೈಯಕ್ತಿಕ ಬಳಕೆಗಾಗಿ ಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸುವುದಕ್ಕೆ ಬುಡಕಟ್ಟು ಕುಟುಂಬಗಳಿಗೆ ಅವಕಾಶ ನೀಡಲಾಯಿತು. ಬಿದಿರು ಕಡಿಯುವುದು ಮತ್ತು ಇತರ ಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸುವುದಕ್ಕೆ ಗ್ರಾಮ ಸಮುದಾಯಗಳಿಗೆ ಅನುಮತಿ ನೀಡಲಾಯಿತು. ನಮ್ಮ ಗಣರಾಜ್ಯದ ಭವಿಷ್ಯಕ್ಕೆ ಸಾಮಾಜಿಕ ಸಮಾನತೆ ಮತ್ತು ಪರಿಸರ ಸುಸ್ಥಿರತೆಗಳೆರಡೂ ನಿರ್ಣಾಯಕವಾಗಿವೆ.

ಈ ಎರಡೂ ಗುರಿಗಳಿಗೆ ಬದ್ಧವಾಗಿರುವ ಸರ್ಕಾರ ಎಲ್ಲರನ್ನೂ ಒಳಗೊಂಡ ಮತ್ತು ಪರಿಸರದ ವಿಚಾರದಲ್ಲಿ ಜವಾಬ್ದಾರಿಯುತವಾಗಿರುವ ದಿಕ್ಕಿನಲ್ಲಿ ಅರಣ್ಯ ನೀತಿಯನ್ನು ಇನ್ನಷ್ಟು ಮುಂದಕ್ಕೆ ಒಯ್ಯಬಲ್ಲುದು. ಖಾಸಗಿ ಉದ್ಯಮ ಕ್ಷೇತ್ರವನ್ನೇ ಅರಣ್ಯ ನೀತಿಯ ಪ್ರಮುಖ ಫಲಾನುಭವಿಯಾಗಿಸುವ ಮೂಲಕ ಮೂರು ದಶಕಗಳಲ್ಲಿ ಪಡೆದ ಸಾಧಾರಣ ಪ್ರಯೋಜನವನ್ನು ತಲೆಕೆಳಗೆ ಮಾಡಲು ಈಗಿನ ಸರ್ಕಾರ ಮುಂದಾಗಿದೆ. ಭಾರತ ಸರ್ಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಮಾರ್ಚ್‌ 14ರಂದು ಪ್ರಕಟಿಸಿರುವ ‘2018ರ ಅರಣ್ಯ ಕರಡು ನೀತಿ’ಯನ್ನು ಓದಿದರೆ ಇಂತಹ ನಿರ್ಧಾರಕ್ಕೆ ಬಾರದಿರಲು ಯಾರಿಗೂ ಸಾಧ್ಯವಿಲ್ಲ.

‘ಪ್ರತಿ ಮನುಷ್ಯನ ಉಳಿವಿಗೆ ಅರಣ್ಯ ಅತ್ಯವಶ್ಯಕ’ ಎಂಬ ಮಧುರ ಪದಗಳೊಂದಿಗೆ ಈ ಕರಡು ನೀತಿ ಆರಂಭವಾಗುತ್ತದೆ. ‘ಅರಣ್ಯ ನೀತಿಯು ಪರಿಸರವನ್ನು ರಕ್ಷಿಸುವಂತಿರಬೇಕು ಮತ್ತು ಈಗಿನ ಹಾಗೂ ಮುಂದಿನ ತಲೆಮಾರುಗಳಿಗೆ ಜೀವನೋಪಾಯ ಭದ್ರತೆ ಒದಗಿಸಬೇಕು’ ಎಂದು ಈ ಅರಣ್ಯ ಕರಡು ನೀತಿ ಹೇಳುತ್ತಿದೆ. ಹವಾಮಾನ ಬದಲಾವಣೆಯನ್ನು ತಡೆಯುವಲ್ಲಿ ಅರಣ್ಯಕ್ಕೆ ದೊಡ್ಡ ಪಾತ್ರ ಇದೆ ಎಂಬುದನ್ನೂ ಈ ಕರಡು ನೀತಿ ಒಪ್ಪಿಕೊಳ್ಳುತ್ತದೆ. ಆದರೆ ಮೂರು ಪುಟಗಳಲ್ಲಿನ ಸುಂದರ ಪದ ಜೋಡಣೆಯ ಬಳಿಕ ಬರುವ ಪ್ಯಾರಾವು ‘ಹೆಚ್ಚಿನ ರಾಜ್ಯಗಳಲ್ಲಿ ಅರಣ್ಯದ ಉತ್ಪಾದಕತೆಯು ಬಹಳ ಕಡಿಮೆ’ ಎನ್ನುತ್ತದೆ. ‘ನಾಶವಾಗಿರುವ ಅರಣ್ಯ ಪ್ರದೇಶಗಳಲ್ಲಿ ಮತ್ತೆ ಕಾಡು ಬೆಳೆಸುವುದಕ್ಕಾಗಿ, ಅರಣ್ಯ ಅಭಿವೃದ್ಧಿ ನಿಗಮಗಳ ಬಳಿ ಇರುವ ಅರಣ್ಯ ಪ್ರದೇಶ ಮತ್ತು ಹೊರಗಿನ ಪ್ರದೇಶಗಳಲ್ಲಿ ಅರಣ್ಯ ಬೆಳೆಸಲು ಸರ್ಕಾರ ಮತ್ತು ಖಾಸಗಿ ಸಹಭಾಗಿತ್ವದ ಮಾದರಿಗಳನ್ನು ರೂಪಿಸಬೇಕು’ ಎಂದು ಈ ಪ್ಯಾರಾದಲ್ಲಿ ಹೇಳಲಾಗಿದೆ.

ಹತ್ತು ಪುಟಗಳಷ್ಟಿರುವ ಕರಡು ನೀತಿಯ ಬರವಣಿಗೆ ಸರ್ಕಾರದ ಇತರ ಎಲ್ಲ ಬರವಣಿಯ ಹಾಗೆಯೇ ಕಳಪೆಯಾಗಿದೆ; ಅವವೇ ವಿಚಾರಗಳು ಮತ್ತೆ ಮತ್ತೆ ಪುನರಾವರ್ತನೆಯಾಗಿವೆ. ಈ ನೀತಿಯ ಬಹುಭಾಗದ ಬಗ್ಗೆ ಯಾವುದೇ ಆಕ್ಷೇಪ ಇರುವುದು ಸಾಧ್ಯವಿಲ್ಲ. ಆದರೆ, ಈ ನೀರಸ ಪ್ಯಾರಾಗಳ ನಡುವೆ ಅಲ್ಲಲ್ಲಿ ಕೆಲವು ವಾಕ್ಯಗಳು ಮತ್ತು ಷರತ್ತುಗಳನ್ನು ಉಪಾಯವಾಗಿ ಸೇರಿಸಿ, ಖಾಸಗಿ ಕ್ಷೇತ್ರದ ದೊಡ್ಡ ಉದ್ಯಮಗಳು ಲಾಭ ಪಡೆಯಲು ಸಾಧ್ಯವಾಗುವಂತಹ ದಾರಿಗಳನ್ನು ಒದಗಿಸಲಾಗಿದೆ.

ಐದನೇ ಪುಟದಲ್ಲಿ ಆರು ಕ್ರಮಗಳನ್ನು ಪಟ್ಟಿ ಮಾಡಲಾಗಿದೆ. ಅವುಗಳಲ್ಲಿ ಒಂದು ಹೀಗಿದೆ: ‘ದೇಶದಲ್ಲಿ ಅರಣ್ಯ ಮತ್ತು ಮರಗಳಿರುವ ಪ್ರದೇಶಗಳನ್ನು ಹೆಚ್ಚಿಸುವುದಕ್ಕಾಗಿ ಸ್ಥಳ ನಿರ್ದಿಷ್ಟವಾದ ‘ಸರ್ಕಾರ-ಖಾಸಗಿ ವಲಯ ಸಹಭಾಗಿತ್ವ ಮಾದರಿ’ಗಳನ್ನು ಅಭಿವೃದ್ಧಿಪಡಿಸಬಹುದು. ಅದರಲ್ಲಿ ಅರಣ್ಯ ಇಲಾಖೆ, ಅರಣ್ಯ ಅಭಿವೃದ್ಧಿ ನಿಗಮಗಳು, ಸಮುದಾಯ, ಪಬ್ಲಿಕ್‍ ಲಿಮಿಟೆಡ್‍ ಕಂಪನಿಗಳು ಮುಂತಾದವುಗಳನ್ನು ಸೇರಿಸಿಕೊಳ್ಳಬಹುದು’.

ನಂತರ, ಕರಡು ನೀತಿಯ ಏಳನೇ ಪುಟದಲ್ಲಿ ಅಧ್ಯಾಯ 4.4 ಕಾಣಿಸುತ್ತದೆ. ‘ಅರಣ್ಯ ಉದ್ಯಮ ಸಂಪರ್ಕಕ್ಕೆ ಉತ್ತೇಜನ’ ಎಂಬುದು ಈ ಅಧ್ಯಾಯದ ಶೀರ್ಷಿಕೆ. ಈ ಅಧ್ಯಾಯ ಹೀಗೆ ಆರಂಭವಾಗುತ್ತದೆ: ಅರಣ್ಯ ಆಧರಿತ ಉದ್ಯಮ ಕ್ಷೇತ್ರದ ಅಭಿವೃದ್ಧಿಗೆ ಉತ್ತೇಜನ ನೀಡುವ ಅಗತ್ಯ ಇದೆ. ಇದು ಶ್ರಮ ಆಧರಿತ ಕ್ಷೇತ್ರ ಆಗಿರುವುದರಿಂದ ಹೊಸ ಉದ್ಯೋಗ ಸೃಷ್ಟಿಗೆ ನೆರವಾಗುತ್ತದೆ. ಕಚ್ಚಾ ವಸ್ತುವಿನ ಬೇಡಿಕೆ ಪೂರೈಸುವುದಕ್ಕಾಗಿ ಅರಣ್ಯ ನಿಗಮಗಳು ಮತ್ತು ಕೈಗಾರಿಕಾ ಘಟಕಗಳು ಕೈಗಾರಿಕಾ ಅರಣ್ಯ ಬೆಳೆಯುವುದನ್ನು ಹೆಚ್ಚಿಸುವ ಅಗತ್ಯ ಇದೆ’.

ಈ ಅರಣ್ಯ ನೀತಿಯನ್ನು ಸರ್ಕಾರವು ಅಧಿಕೃತವಾಗಿ ಅಳವಡಿಸಿಕೊಂಡರೆ, ‘ಮೀಸಲು ಅರಣ್ಯ’ದ ಬೃಹತ್‍ ಪ್ರದೇಶಗಳನ್ನು ಖಾಸಗಿ ಉದ್ದಿಮೆಗಳಿಗೆ ಹಸ್ತಾಂತರಿಸಲು ಇಲ್ಲಿರುವ ಇಂತಹ ಅಂಶಗಳನ್ನು ಬಳಸಿಕೊಳ್ಳಬಹುದು. ಈಗ ಜನರ ಕೈಯಲ್ಲಿರುವ ಅರಣ್ಯ ಪ್ರದೇಶಗಳನ್ನು ಭ್ರಷ್ಟ ರಾಜಕಾರಣಿಗಳ ಪರವಾಗಿರುವ ಕಂಪನಿಗಳಿಗೆ ಹಸ್ತಾಂತರಿಸುವ ಮೂಲಕ ಹೊಸ ಜಮೀನ್ದಾರಿ ಪದ್ಧತಿಯೊಂದು ಸೃಷ್ಟಿಯಾಗಬಹುದು. ಇದು ಜಾರಿಗೆ ಬಂದರೆ ಸಮಾನತೆ ಮತ್ತು ನ್ಯಾಯದ ತತ್ವಗಳಿಗೆ ಸಂಪೂರ್ಣ ತದ್ವಿರುದ್ಧವಾದದ್ದು ನಡೆಯುತ್ತದೆ. ಆದರೆ ಇದು ಪೂರ್ವನಿದರ್ಶನಗಳೇ ಇಲ್ಲದ ಸ್ಥಿತಿಯೇನೂ ಅಲ್ಲ.

1980ರ ದಶಕದಲ್ಲಿ ಕರ್ನಾಟಕ ಸರ್ಕಾರವು ಹರಿಹರ ಪಾಲಿಫೈಬರ್‌ ಕಂಪನಿಯ ಜತೆ ಇಂತಹುದೊಂದು ‘ಸುಮಧುರ’ ಒಪ್ಪಂದ ಮಾಡಿಕೊಂಡಿತ್ತು. ‘ಕರ್ನಾಟಕ ಪಲ್ಪ್‌ವುಡ್ಸ್‌ ಲಿ.’ (ಕೆಪಿಎಲ್‍) ಎಂಬ ಹೊಸ ಕಂಪನಿಯನ್ನು ಆರಂಭಿಸಲಾಗಿತ್ತು. ಗ್ರಾಮಗಳ ಜನರು ದನಗಳನ್ನು ಮೇಯಿಸುವುದಕ್ಕಾಗಿ ಮತ್ತು ಉರುವಲು ಸಂಗ್ರಹಿಸುವುದಕ್ಕಾಗಿ ಬಳಸುತ್ತಿದ್ದ ಸಾವಿರಾರು ಎಕರೆ ಸ್ಥಳವನ್ನು ಈ ಕಂಪನಿಗೆ ಹಸ್ತಾಂತರಿಸಲಾಗಿತ್ತು. ಅದೃಷ್ಟವಶಾತ್‍, ಧಾರವಾಡದ ಸಮಾಜ ಪರಿವರ್ತನಾ ಸಮುದಾಯ ಎಂಬ ಎನ್‍ಜಿಒ ಈ ಕಂಪನಿಯ ವಿರುದ್ಧ ಜನರನ್ನು ಸಂಘಟಿಸಿತು. ಕೆಪಿಎಲ್‍ನ ಚಟುವಟಿಕೆಗಳನ್ನು ತಡೆಯಲು ಅವರು ನ್ಯಾಯಾಲಯಕ್ಕೂ ಹೋದರು. ಆಗ ಜೀವಿಸಿದ್ದ ಶ್ರೇಷ್ಠ ಕನ್ನಡಿಗ, ಲೇಖಕ ಮತ್ತು ಸಮಾಜ ಸುಧಾರಕ ಶಿವರಾಮ ಕಾರಂತರು ಅರಣ್ಯದ ಮೇಲೆ ಜನರ ಹಕ್ಕನ್ನು ಮರುಸಾಧಿಸುವ ಈ ಹೋರಾಟದಲ್ಲಿ ಕೈಜೋಡಿಸಿದರು. ಕ್ರಮೇಣ, ಸರ್ಕಾರ ಈ ಯೋಜನೆಯಿಂದ ಹಿಂದೆ ಸರಿಯಿತು ಮತ್ತು ಕಂಪನಿಯನ್ನು ಬರ್ಖಾಸ್ತು ಮಾಡಲಾಯಿತು.

ಕಚ್ಚಾವಸ್ತುವಾಗಿ ಮರ ಬೇಕು ಎಂದಿದ್ದರೆ ಸಕ್ಕರೆ ಕಾರ್ಖಾನೆ ಮತ್ತು ಬಟ್ಟೆಯ ಗಿರಣಿಗಳು ಅನುಸರಿಸುವ ವಿಧಾನವನ್ನು ಕಾಗದ ಮತ್ತು ಪ್ಲೈವುಡ್‍ ಕಾರ್ಖಾನೆಗಳು ಅನುಸರಿಸಬೇಕು. ರೈತರನ್ನು ಸಂಪರ್ಕಿಸಿ ಅವರಿಗೆ ಬೇಕಾದ ಬಿತ್ತನೆ ಬೀಜ, ಸಾಲ ಮತ್ತು ತಾಂತ್ರಿಕ ನೆರವನ್ನು ನೀಡಬೇಕು. ಅವರು ಬೆಳೆದ ಮರಗಳನ್ನು ತಮಗೆ ನೀಡುವಂತೆ ಹೇಳಬೇಕು. ಒಂದೆಡೆ ಕಂಪನಿಗಳು ಮತ್ತು ಇನ್ನೊಂದಡೆ ರೈತರು ಅಥವಾ ರೈತರ ಸಹಕಾರಿ ಸಂಘಗಳ ನಡುವೆ ಪಾಲುದಾರಿಕೆ ನಡೆಯಬೇಕು. ಇಂತಹ ನೀತಿಯನ್ನು ಪ್ರಾಮಾಣಿಕವಾಗಿ ಜಾರಿಗೊಳಿಸಿದರೆ ಗ್ರಾಮೀಣ ಭಾರತದ ವಿಸ್ತೃತ ಪ್ರದೇಶಗಳಲ್ಲಿ ಸಂಪತ್ತು ಸೃಷ್ಟಿ ಸಾಧ್ಯವಾಗುತ್ತದೆ. ಆದರೆ, ತಮ್ಮ ಜೀವನೋಪಾಯಕ್ಕಾಗಿ ಸ್ಥಳೀಯ ಜನರು ಅವಲಂಬಿತರಾಗಿರುವ ಸಾರ್ವಜನಿಕ ಸ್ಥಳಗಳು ಮತ್ತು ಅರಣ್ಯಗಳನ್ನು ಖಾಸಗಿ ಉದ್ಯಮ ಸಂಸ್ಥೆಗಳಿಗೆ ನೀಡಿದರೆ ಜನರ ಜೀವನ ಇನ್ನಷ್ಟು ದುಸ್ತರವಾಗುತ್ತದೆ.

ಹೊಲದ ಬದಿಯಲ್ಲಿ ಅರಣ್ಯ ಬೆಳೆಸುವಿಕೆಗೆ ಸಂಬಂಧಿಸಿ ಅರಣ್ಯ ಕರಡು ನೀತಿಯಲ್ಲಿ ಒಂದು ಪ್ಯಾರಾ ಇದೆ. ಇದರಲ್ಲಿ ‘ಅರಣ್ಯದ ಹೊರಗೆ ಮರ’ಗಳನ್ನು ಬೆಳೆಸುವುದರ ಮಹತ್ವದ ಬಗ್ಗೆ ವಿವರಿಸಲಾಗಿದೆ. ಈ ರೀತಿಯಲ್ಲಿ ಮರಗಳನ್ನು ಬೆಳೆಸುವುದಕ್ಕೆ ಒತ್ತು ನೀಡಬೇಕಿದೆ ಮತ್ತು ಸಾರ್ವಜನಿಕ ಸಂಪತ್ತನ್ನು ರಾಜಕಾರಣಿಗಳ ನೆಚ್ಚಿನ ಕಂಪನಿಗಳು ಅಥವಾ ವ್ಯಕ್ತಿಗಳಿಗೆ ನೀಡುವುದನ್ನು ನೀತಿಯಿಂದ ಸಂಪೂರ್ಣವಾಗಿ ಕೈಬಿಡಬೇಕಿದೆ.

ದೇಶದ ಶೇ 23ರಷ್ಟು ಭೂಭಾಗವನ್ನು ‘ಅರಣ್ಯ’ ಎಂದು ಅಧಿಕೃತವಾಗಿ ಗುರುತಿಸಲಾಗುತ್ತಿದೆ. ಆದರೆ ಅದರ ಅರ್ಧದಷ್ಟು ಪ್ರದೇಶದಲ್ಲಿ ಅರಣ್ಯ ಎಂದು ಹೇಳುವಷ್ಟು ಮರಗಳೇನೂ ಇಲ್ಲ. ಸಂವೇದನಾಶೀಲ ಅರಣ್ಯ ನೀತಿಯು ಬರಡು ಅಥವಾ ನಾಶವಾಗಿ ಹೋಗಿರುವ ಅರಣ್ಯ ಪ್ರದೇಶದಲ್ಲಿ ಸ್ಥಳೀಯ ತಳಿಗಳ ಗಿಡಗಳನ್ನು ಹಾಕಿ ಪುನಶ್ಚೇತನಗೊಳಿಸಬೇಕು, ಅದು ಜೀವವೈವಿಧ್ಯ ಪೋಷಣೆ, ನೀರಿನ ಮೂಲಗಳ ರಕ್ಷಣೆ ಮತ್ತು ಹವಾಮಾನ ಬದಲಾವಣೆ ತಡೆಗೆ ನೆರವು ನೀಡುತ್ತದೆ.

ಮೀಸಲು ಅರಣ್ಯ ಪ್ರದೇಶದ ಸಮೀಪದಲ್ಲಿ ಜೀವಿಸುವ ರೈತರು ಮತ್ತು ಬುಡಕಟ್ಟು ಜನರ ಜೀವನೋಪಾಯ ಭದ್ರತೆಯನ್ನು ಖಾತರಿಪಡಿಸುವುದು ಸರ್ಕಾರದ ಅರಣ್ಯ ನೀತಿಯ ಎರಡನೇ ಮಹತ್ವದ ಅಂಶವಾಗಿರಬೇಕು. ಆದರೆ ಈಗಿನ ಅರಣ್ಯ ಕರಡು ನೀತಿಯು ಈ ಎರಡೂ ವಿಚಾರಗಳನ್ನು ಅಪಾಯಕ್ಕೆ ಒಡ್ಡುವಂತಿದೆ. ಈ ನೀತಿಯನ್ನು ಪ್ರಭಾವಿ ಕಂಪನಿಗಳು ಮತ್ತು ವ್ಯಕ್ತಿಗಳು ತಮ್ಮ ಪರವಾಗಿ ಬಳಸಿಕೊಳ್ಳುವುದಕ್ಕೆ ಬೇಕಾದಷ್ಟು ಅವಕಾಶಗಳನ್ನು ಒದಗಿಸಲಾಗಿದೆ. ಆದರೆ ಈ ಅವಕಾಶಗಳನ್ನು ಬಳಸಿಕೊಳ್ಳಲು ಬಿಡಲೇಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT