ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಿವಿನ ಗುರು ಜುಂಜಪ್ಪನೆಂಬ ಹಸಿರುದೈವ

Last Updated 17 ಮಾರ್ಚ್ 2017, 20:17 IST
ಅಕ್ಷರ ಗಾತ್ರ

‘ಜುಂಜಪ್ಪನ್ ಕಾಣ್ಕೆ!’ ಎಂದು ಒಮ್ಮೆ ಗಟ್ಟಿಯಾಗಿ ಬೇಡಿ, ಒಂದು ಕೈಯಲ್ಲಿ ಉರಿಯುವ ಎಣ್ಣೆದೀಪ ಅಥವಾ ಹಾವಿನ ಮೂರ್ತಿ ಹಿಡಿದು ಅಥವಾ ಬಸವನನ್ನು ಅಟ್ಟಿಕೊಂಡು ತಂದು ನಿಮ್ಮೆದುರು ನಿಲ್ಲಿಸಿ, ಮತ್ತೊಂದು ಕೈಯಲ್ಲಿ ಸಣ್ಣದೊಂದು ಕೊಳಲನ್ನು ಹಿಡಿದು, ಬಗಲಿಗೆ ಕೌದಿ ವಸ್ತ್ರದ ಜೋಳಿಗೆ ನೇತು ಹಾಕಿಕೊಂಡು, ತಲೆಗೆ ಕರಡಿರೂಪದ ಕರಿ ಕೂದಲಿನ ಟೊಪ್ಪಿಗೆ ಧರಿಸಿಕೊಂಡು ಅಥವಾ ಪೇಟ ಸುತ್ತಿಕೊಂಡು ನಿಮ್ಮ ಮುಂದೆ ನಿಲ್ಲುತ್ತಿದ್ದ ‘ದಾಸಯ್ಯ’ಗಳು ಇಂದು ಮರೆಯಾಗಿದ್ದಾರೆ, ನಗರಗಳಿಂದಲಂತೂ ಖಂಡಿತವಾಗಿ ಮರೆಯಾಗಿದ್ದಾರೆ.

ಒಂದೊಮ್ಮೆ ನೀವು ಕರ್ನಾಟಕದ ದಕ್ಷಿಣ ಒಳನಾಡಿನ ಬಯಲುಸೀಮೆಯವರಾಗಿದ್ದರೆ ನಿಮ್ಮ ತಂದೆ ತಾತಂದಿರು ಅವರನ್ನು ಕಂಡಿರುತ್ತಿದ್ದರು. ಇಂತಹ ದಾಸಯ್ಯಗಳು, ಊರು ಮನೆ ಅಲೆದು, ಜೀವಂತವಿಟ್ಟಿದ್ದ ಕಾಡುಗೊಲ್ಲರ ದೈವ ಜುಂಜಪ್ಪ.

ಜುಂಜಪ್ಪ ಮರೆಯಾಗಿದ್ದಾನೆ. ಅವನೊಟ್ಟಿಗೆ ಬಯಲುಸೀಮೆಯ ಸುಸ್ಥಿರತೆಯೂ ಮರೆಯಾಗಿದೆ. ಬಯಲುಸೀಮೆಯು ಶೀಘ್ರಗತಿಯಲ್ಲಿ ಮರುಭೂಮೀಕರಣ ಹೊಂದುತ್ತಿದೆ. ಹಾಗಾಗಿ, ಮತ್ತೆ ಜುಂಜಪ್ಪನನ್ನು ನೆನೆಯಬೇಕಾದ ಅನಿವಾರ್ಯ ಬಂದೊದಗಿದೆ ನಮಗೆ. ಹೇಗೆ ಮತ್ತು ಏಕೆ ಎಂದು ವಿವರಿಸುತ್ತೇನೆ.

ಮರುಭೂಮೀಕರಣ ಪ್ರಕ್ರಿಯೆಯನ್ನು ತಡೆಯಬಲ್ಲ ಬೀಜಮಂತ್ರ ಜುಂಜಪ್ಪನಲ್ಲಿ ಅಡಗಿದೆ. ಜುಂಜಪ್ಪ ಒಬ್ಬ ಅಲೆಮಾರಿ ಪಶುಪಾಲಕ. ಹುಲ್ಲುಗಾವಲುಗಳು ಬೋಳಾದಂತೆಲ್ಲ ಪಶುಗಳನ್ನು ಮತ್ತೊಂದೆಡೆಗೆ ಕೊಂಡೊಯ್ದು, ಹುಲ್ಲು ಮತ್ತೆ ಚಿಗುರುವಂತೆ ಮಾಡಿ ಪ್ರಕೃತಿಯಲ್ಲಿ ಸಮತೋಲನವನ್ನು ಕಾಪಾಡಿಕೊಂಡು ಬಂದಿದ್ದವನು ಅವನು. ಪ್ರಕೃತಿ ಹಾಗೂ ಸಭ್ಯತೆಗಳ ನಡುವೆ ಅಗತ್ಯವಾಗಿ ಇರಬೇಕಾದ ಸಮತೋಲನವನ್ನು ಅರಿತವನು. ಹಾಗೂ ಅಂತಹ ಅರಿವನ್ನು ಸಾಂಸ್ಕೃತಿಕವಾಗಿ ಕಾಪಾಡಿಕೊಂಡು ಬಂದಿದ್ದವನು.

ಈಗ ಅಂತಹ ಅರಿವು ಮಾಯವಾಗಿದೆ. ಕನ್ನಡದ ಕರ್ಮಭೂಮಿಗಳನ್ನೆಲ್ಲ ಒಂದೊಂದಾಗಿಯೇ ಕತ್ತರಿಸಿ ಹಾಕಿ ಆ ಜಾಗಗಳಲ್ಲಿ ನಾವು ಯಂತ್ರ ಭೂಮಿಗಳನ್ನು ಸ್ಥಾಪಿಸಿದ್ದೇವೆ. ಉದಾಹರಣೆಗೆ ದನಗಾಹಿತನವನ್ನೇ ತೆಗೆದುಕೊಳ್ಳಿ. ದನಗಾಹಿತನವೆಂಬುದು ಇಂದು ಗೂಟಕ್ಕೆ ಬಿಗಿದ ಉದ್ದಿಮೆಯಾಗಿದೆ.

ದನಗಳನ್ನು ಕಾರ್ಖಾನೆಗಳಂತಹ ಶೆಡ್ಡುಗಳಲ್ಲಿ ಕಟ್ಟಿ ಬಿಗಿದು, ಯೂರಿಯಾ ಮಿಶ್ರಿತ ಒಣಹುಲ್ಲು ತಿನ್ನಿಸುತ್ತಿದ್ದೇವೆ, ಕೆಚ್ಚಲಿಗೆ ಯಂತ್ರ ಕಟ್ಟಿ ಹಾಲು ಹೀರುತ್ತಿದ್ದೇವೆ. ಹೋರಿಗಳು ಎತ್ತಾಗುವ ಕೆಲಸ ಕಳೆದುಕೊಂಡಿವೆ. ಅಷ್ಟೇ ಏಕೆ, ಸಂತಾನಾಭಿವೃದ್ಧಿಯ ನೈಸರ್ಗಿಕ ಸಂತಸವನ್ನೂ ಸಹ ಕಳೆದುಕೊಂಡಿವೆ. ಬೀಜ ಬ್ಯಾಂಕುಗಳು ಸಂತಾನ ಪ್ರಕ್ರಿಯೆಯ ಸಂತಸವನ್ನು, ಸಂತಸವಿರದ ಲಾಭದಾಯಕತೆಯನ್ನಾಗಿ ಪರಿವರ್ತಿಸಿವೆ.

ಜುಂಜಪ್ಪನ ವಂಶಜರು ಸಮಾಜ ಕಲ್ಯಾಣ ಇಲಾಖೆಯ ದೂಳುಹಿಡಿದ ದಸ್ತಾವೇಜುಗಳಲ್ಲಿ ಮತ್ತೊಂದು ಹಿಂದುಳಿದ ಜಾತಿಯಾಗಿ ಮರೆಯಾಗಿ ಹೋಗಿದ್ದಾರೆ. ಕಾವಲುಗಳೆಂದು ಕರೆಸಿಕೊಳ್ಳುತ್ತಿದ್ದ ಬಯಲುಸೀಮೆಯ ಪ್ರಖ್ಯಾತ ಹುಲ್ಲುಗಾವಲುಗಳು ಇಂದು ಹೊಗೆಯುಗುಳುವ ಕಾರ್ಖಾನೆಗಳಾಗಿವೆ. ಅಥವಾ ಹೈವೇಗಳು ಅಥವಾ ಯುದ್ಧ ಸಂಶೋಧನಾ ಕೇಂದ್ರಗಳು ಅಥವಾ ಖಾಸಗಿ ಆಸ್ತಿ.

ನೀರಿಗಾಗಿ ಭೂಮಿಯನ್ನು ಕೊರೆಯುತ್ತಿರುವ ಬೋರ್‌ವೆಲ್ಲುಗಳು ಪಾತಾಳಲೋಕವನ್ನು ತಲುಪಿವೆ. ಭೂಮ್ತಾಯಿಯ ಕೊಟ್ಟ ಕೊನೆಯ ಕಣ್ಣೀರನ್ನೂ ಬಿಡದೆ ಹೀರಿಕೊಳ್ಳುತ್ತಿವೆ ಅವು. ರೋಸಿದ ಪ್ರಕೃತಿಮಾತೆ ನಮಗೆ ಶಾಪ ನೀಡಿದ್ದಾಳೆ. ಬಿರುಬಿಸಿಲು ರಾಚುತ್ತಿದ್ದಾಳೆ, ಮಳೆಬೆಳೆಗಳ ಜೊತೆಗೆ ಬೇಕೆಂದೇ ಕಣ್ಣಾಮುಚ್ಚಾಲೆ ಆಡುತ್ತಿದ್ದಾಳೆ. ಇದು ಸಮಕಾಲೀನ ಪರಿಸ್ಥಿತಿ.

ಶಿರಾ ಪಟ್ಟಣದಿಂದ ಹದಿನಾರು ಕಿಲೋಮೀಟರುಗಳ ದೂರದಲ್ಲಿದೆ ಜುಂಜಪ್ಪನ ಗುಡ್ಡೆ. ಗುಡ್ಡೆಯೆಂದರೆ ಗದ್ದುಗೆ ಅಥವಾ ಸಮಾಧಿ ಎಂದರ್ಥ. ಕನ್ನಡದ ಸಾಂಸ್ಕೃತಿಕ ವೀರರಾದ ಮಂಟೇಸ್ವಾಮಿ, ಮಲೆಮಹದೇಶ್ವರ ಹಾಗೂ ಜುಂಜಪ್ಪ ಎಂಬ ಹೆಸರಾಂತ ತ್ರಿವಳಿಗಳಲ್ಲಿ ಒಬ್ಬನಾದ ಜುಂಜಪ್ಪ ಈ ಗುಡ್ಡೆಯಡಿ ಮಣ್ಣಾಗಿದ್ದಾನೆ. ಮಣ್ಣಾಗಿ ಮತ್ತೆ ಪುನರುತ್ಥಾನ ಹೊಂದಿ ತಳಸಮುದಾಯಗಳ ದೈವವಾಗಿದ್ದಾನೆ. ಜನರ ನೈತಿಕ ಬದುಕಿನ ನಿಯಂತ್ರಕನಾಗಿ ಈ ಕ್ಷೇತ್ರದಲ್ಲಿ ನೆಲೆ ನಿಂತಿದ್ದಾನೆ.

ಕ್ಷೇತ್ರ ಎಂದೆ. ತಪ್ಪಾಗಿ ತಿಳಿಯಬೇಡಿ. ಕ್ಷೇತ್ರ ಎಂದಾಕ್ಷಣ ನಿಮ್ಮ ಕಣ್ಣಾಲಿಗಳ ಮುಂದೆ ಅಬ್ಬರದ ಪ್ರಚಾರ, ವಾಹನ ಸಂಚಾರ, ಹೊಗೆ, ದೂಳು, ದಟ್ಟಣೆ, ಬೃಹನ್‌ಮಠಗಳು, ಪಟಪಟಿಸುವ ಹಿಂದೂ ಧ್ವಜಗಳು, ತಿಂದೆಸೆದು ದುರ್ನಾತ ಬೀರುವ ಊಟದೆಲೆಗಳು, ಕಚ್ಚಾಡುವ ನಾಯಿಗಳು, ಡೊಳ್ಳುಹೊಟ್ಟೆಯ ಪುರೋಹಿತರು, ಕಿವಿಗಡಚಿಕ್ಕುವ ಭಕ್ತಿಗೀತೆಗಳು ಹಾಗೂ ಹಣದ ವ್ಯಸನ ಕುಣಿಯುತ್ತದೆ ಎಂದು ಗೊತ್ತು ನನಗೆ. ಹಾಗೆಲ್ಲ ಕಣ್ಣಾಲಿಗಳನ್ನು ಕುಣಿಸಬೇಡಿ. ಅಂತಹ ಯಾವ ಅನಾಹುತಗಳಿಗೂ ಬಲಿಬೀಳದೆ ಉಳಿದಿರುವ ಕ್ಷೇತ್ರ ಜುಂಜಪ್ಪನ ಗುಡ್ಡೆ. ಅಕ್ಷರಶಃ ಬಯಲು ಆಲಯ ಇದು.

ದೈವಗಳೊಟ್ಟಿಗೆ ಹೊಸ ರೀತಿಯ ಅನುಸಂಧಾನ ಅಗತ್ಯವಿದೆ. ಅಂತಹ ಅನುಸಂಧಾನವನ್ನು ಬಯಸುವ ವಿಚಾರವಾದಿ ನೀವಾಗಿದ್ದರೆ, ಮೇಲ್ವರ್ಗಗಳ ದೇವರಿಗಿಂತ ಮಿಗಿಲಾಗಿ ತಳಸಮುದಾಯಗಳ ದೈವಗಳೊಟ್ಟಿಗೆ ಅನುಸಂಧಾನ ನಡೆಸಿ. ಕಾರಣವಿಷ್ಟೆ. ತಳದ ದೈವಗಳ ದೈವಿಕ ಆಚರಣೆಗೂ, ಅವುಗಳ ಭಕ್ತರ ನಡವಳಿಕೆಗೂ ನೇರ ಸಂಬಂಧವಿರುತ್ತದೆ. ನೇರ ಸಂಬಂಧವು ಕೆನೆಪದರದ ದೇವರು ಹಾಗೂ ಭಕ್ತರ ನಡುವೆಯೂ ಇರುತ್ತದೆ. ಆದರೆ ಮೊದಲಿನದ್ದು ಶ್ರಮದ ಸಂಬಂಧವಾದರೆ, ಎರಡನೆಯದ್ದು ಹಣದ ಸಂಬಂಧವಾಗಿರುತ್ತದೆ.

ತಾವು ನೆಕ್ಕುವ ಕೆನೆಯ ಜಿಡ್ಡನ್ನು ಕೆನೆಪದರದವರು ದೇವರ ಮೂತಿಗೆ ಒರೆಸುತ್ತಾರೆ. ಹಾಗೆ ಒರೆಸಿ ದೇವರನ್ನೂ ಗಲೀಜು ಮಾಡುತ್ತಾರೆ. ಶ್ರಮಜೀವಿಗಳಾದರೋ ಶ್ರಮವಹಿಸಿ ದೇವರ ಗೌರವ ಕಾಪಾಡುತ್ತಾರೆ. ಉದಾಹರಣೆಗೆ, ಶ್ರೀಕೃಷ್ಣ ಪರಮಾತ್ಮ, ಶ್ರೀ ವೆಂಕಟೇಶ್ವರ, ಶ್ರೀ ವಿಶ್ವನಾಥ ಇತ್ಯಾದಿ ಶ್ರೀಮಂತ ದೇವರನ್ನೇ ತೆಗೆದುಕೊಳ್ಳಿ. ಮೂಲತಃ ಶೂದ್ರ ದೇವರಿವರು. ಈಗ ಮೇಲ್ವರ್ಗವಾಗಿರುವವರು.

ಅವರ ತಲೆಗೆ ಬಂಗಾರದ ಕಿರೀಟವನ್ನು ಬಲವಂತದಿಂದ ತೊಡಿಸಲಾಗಿದೆ. ಹಣೆಗೆ ವಜ್ರವೈಡೂರ್ಯಗಳ ನಾಮ ವಿಭೂತಿಗಳನ್ನು ಅಂಟಿಸಿ ಮುಖ ಮರೆಮಾಚಲಾಗಿದೆ. ದೈವಗಳು ನಿಜಕ್ಕೂ ಸರಳ ವ್ಯಕ್ತಿಗಳು. ಕರ್ತವ್ಯ ನಿರ್ವಹಣೆಯ ಸಂದರ್ಭದಲ್ಲಿ ಗತಿಸಿದ ಸಾಮಾಜಿಕ ಕಾರ್ಯಕರ್ತರು ಅವರು. ದೈವವಾದವರ ಹೆಗ್ಗಳಿಕೆಯೇನಿದ್ದರೂ ಅವರ ಪೂರ್ವಾಶ್ರಮದ ನೈತಿಕ ಪರಿಶುದ್ಧತೆ ಹಾಗೂ ಸರಳ ಬದುಕು ಮಾತ್ರ. ಇರಲಿ.

ಹಿಂದೆಲ್ಲ ಬಯಲುಸೀಮೆಯಲ್ಲಿ ಕಾಡಿತ್ತು. ಕುರುಚಲು ಕಾಡು ಹಾಗೂ ಹುಲ್ಲುಗಾವಲುಗಳಾಗಿದ್ದವು ಅವು. ಹಲವು ಬಗೆಯ ಹುಲ್ಲುಗಳು ಹಾಗೂ ಮೂಲಿಕೆಗಳು, ದನಕರುಗಳು ಹಾಗೂ ಕುರಿಗಳಿಗೆ ಲಭ್ಯವಿರುತ್ತಿದ್ದವು. ಕಾಡುಗೊಲ್ಲ, ಊರುಗೊಲ್ಲ, ಕುರುಬ ಇತ್ಯಾದಿ ಪಶುಪಾಲಕರು, ಬ್ಯಾಡರೆಂಬ ಹೆಸರಿನ ಬೇಟೆಗಾರ ಸಮುದಾಯಗಳು, ಲಮ್ಹಾಣಿ, ನೇಕಾರ, ಕುಶಲಕರ್ಮಿ ಸಮುದಾಯಗಳವರು ಅಲ್ಲಿ, ವಿರಳವಾಗಿ ಚದುರಿದಂತೆ ಜೀವಿಸಿದ್ದರು. ರೈತರೂ ಇದ್ದರು. ಕೆರೆಗಳ ಆಶ್ರಯವಿದ್ದಲ್ಲಿ ಸುಖವಾಗಿಯೂ, ಮಳೆಯಾಶ್ರಿತ ಪ್ರದೇಶಗಳಲ್ಲಿ ಏದುಬ್ಬಸಪಡುತ್ತಲೂ ಇದ್ದರು. ಬಯಲುಸೀಮೆಯಲ್ಲಿ ನೀರೇ ಬಂಗಾರವಾಗಿತ್ತು.

ಕಾಡುಗೊಲ್ಲರು ಹಟ್ಟಿಗಳನ್ನು ಕಟ್ಟಿಕೊಂಡರೂ, ಗ್ರಾಮಗಳಿಂದ ಪ್ರತ್ಯೇಕವೇ ಉಳಿಯುತ್ತಿದ್ದರು. ಅರೆಅಲೆಮಾರಿ ಜೀವನ ಅವರದ್ದು. ಕುಂಚಿಟಿಗ ಒಕ್ಕಲಿಗ ಎಂಬ ಹೆಸರಿನ ರೈತರೊಟ್ಟಿಗೆ ರಾಸುಗಳ ಕೊಡುಕೊಳ್ಳುವಿಕೆಯ ವ್ಯವಹಾರ ಅವರಿಗಿತ್ತು. ಜುಂಜಪ್ಪ ಅನಾಥ ಬಾಲಕನಾಗಿದ್ದಾಗ ಅವನಿಗೆ ಆಶ್ರಯವನ್ನಿತ್ತು ಸಲಹಿದವನು ಒಬ್ಬ ಕುಂಚಿಟಿಗ ಒಕ್ಕಲಿಗನೇ ಸರಿ.

ದನಗಾಹಿತನ ಕ್ರಮೇಣ ಹಿಂದೆ ಬಿತ್ತು. ಕುರುಬರು ಅಲೆಮಾರಿತನವನ್ನು ಕೈಬಿಟ್ಟು ನೆಲೆನಿಲ್ಲತೊಡಗಿದರು. ಕಂಬಳಿ ತಯಾರಿಕೆ ಹಾಗೂ ಬೇಸಾಯದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಸರಿ, ಕಾಡುಗೊಲ್ಲರು ಕುರಿಗಾಹಿಗಳಾದರು. ಹೇಗೋ ಬಡತನವನ್ನು ನಿಭಾಯಿಸಿಕೊಂಡು ಬಂದರು.

ದೈವಗಳು ಪ್ರಕೃತಿ ಹಾಗೂ ಸಭ್ಯತೆಗಳ ನಡುವಣ ಸಮತೋಲನದ ನಿರ್ವಾಹಕರು ಎಂದೆ. ಉದಾಹರಣೆಗೆ ಒಂದು ಕತೆ ಹೇಳುತ್ತೇನೆ ಕೇಳಿ. ಇದೇ ಭಾಗದ ಮತ್ತೊಂದು ದೈವದ ಕತೆಯಿದು. ಕತೆಯ ಕಡೆಯಲ್ಲಿ ವೀರಮರಣ ಹೊಂದಿ ದೈವವಾಗಬೇಕಿರುವ ಈ ಕತೆಯ ವೀರನು, ಒಂದು ಹುಲಿಮರಿಯನ್ನು ತಂದು ತನ್ನ ಮನೆಯಲ್ಲಿ ಸಾಕಿಕೊಂಡಿರುತ್ತಾನೆ.

ವೀರನ ಈ ಉಪಕಾರಕ್ಕೆ ಪ್ರತ್ಯುಪಕಾರವಾಗಿ ಹುಲಿಯು ಆತನ ಸಾಕುಪ್ರಾಣಿಗಳ ಮಂದೆಯನ್ನು ಕಾಡಿನಲ್ಲಿ ಸಲಹುತ್ತಿರುತ್ತದೆ. ಹೀಗೆ ಜಾಣ ವ್ಯವಸ್ಥೆಯೊಂದು ಮುಂದುವರೆಯುತ್ತಿರಲಾಗಿ, ಒಂದು ದಿನ ಒಬ್ಬ ಪೇಟೆಯ ಮನುಷ್ಯ ಅಲ್ಲಿಗೆ ಬರುತ್ತಾನೆ. ಕೋವಿ ಹಿಡಿದು ಬರುತ್ತಾನೆ. ಬಂದವನು, ವೀರನ ಮನೆಯೊಳಗಿರುವ ಹುಲಿಮರಿಯನ್ನು ಕಂಡು, ಗುಂಡಿಟ್ಟು ಕೊಂದುಬಿಡುತ್ತಾನೆ.

ಉಪಕಾರ ಪ್ರಜ್ಞೆ ಮುರಿದು ಬೀಳುತ್ತದೆ. ಪ್ರಕೃತಿ ಹಾಗೂ ಸಭ್ಯತೆಗಳ ನಡುವೆ ಸಂಘರ್ಷ ಭುಗಿಲೇಳುತ್ತದೆ. ಹುಲಿ ಅಪಾರ್ಥ ಮಾಡಿಕೊಳ್ಳುತ್ತದೆ. ಗೆಳೆಯನ ಮೇಲೆ ಮುಗಿಬೀಳುತ್ತದೆ. ಹೋರಾಟವು ಸಮಗ್ರ ಒಂಬತ್ತು ದಿನ ನಡೆದು, ಏಕಕಾಲದಲ್ಲಿ ಹುಲಿಯೂ ಸಾಯುತ್ತದೆ ವೀರನೂ ಸಾಯುತ್ತಾನೆ. ಇಬ್ಬರೂ ದೈವಗಳಾಗುತ್ತಾರೆ. ಕೋವಿ ಹೊತ್ತು ಬಂದವನು ಶಾಪಗ್ರಸ್ತನಾಗುತ್ತಾನೆ.

ನಾವು ಕೋವಿ ಹೊತ್ತು ಬಂದವರು. ಶಾಪಗ್ರಸ್ತರು. ಇರಲಿ. ಜುಂಜಪ್ಪನ ಕಾವ್ಯಕ್ಕೆ ಹಿಂದಿರುಗೋಣ. ಜುಂಜಪ್ಪನ ಕಾವ್ಯ ವಿಶೇಷವಾದದ್ದು. ಮಲೆಮಹದೇಶ್ವರ ಕಾವ್ಯ ಹಾಗೂ ಮಂಟೇಸ್ವಾಮಿ ಕಾವ್ಯಗಳ ಪ್ರಸ್ತುತಿಯಲ್ಲಿ ತಂತಿವಾದ್ಯ ಹಾಗೂ ತಾಳವಾದ್ಯಗಳ ಬಳಕೆಯಾಗುತ್ತದೆ. ಜುಂಜಪ್ಪನ ಕಾವ್ಯವನ್ನು, ಕೇವಲ, ಗಣೆ ಎಂಬ ಹೆಸರಿನ ಕೊಳಲಿನೊಟ್ಟಿಗೆ ನುಡಿಸಲಾಗುತ್ತದೆ. ಮಾರುದ್ದದ, ಅಡ್ಡಲಾಗಿ ನುಡಿಸುವ, ಬಾಂಸುರಿ ಮಾದರಿಯ ಬಿದಿರಿನ ಕೊಳಲಿದು.

ಇದರ ದನಿ ಸುಶ್ರಾವ್ಯವಾಗಿರುತ್ತದೆ ಹಾಗೂ ಗಾಢವಾದ ನಿಟ್ಟುಸಿರಿನಂತಿರುತ್ತದೆ. ನಿಟ್ಟುಸಿರೆಂಬುದು ಹಾಗೆ ನೋಡಿದರೆ, ಜುಂಜಪ್ಪನ ಕಾವ್ಯದಲ್ಲಿಯೇ ಅಡಗಿದೆ. ಗಣೆಯ ನಾದದಲ್ಲಡಗಿದೆಯೇ, ಗಾಯಕನ ದನಿಯಲ್ಲಡಗಿದೆಯೇ, ಕಾವ್ಯದ ತ್ರಿಪದಿ ಛಂದಸ್ಸಿನಲ್ಲಡಗಿದೆಯೇ ಎಂದು ಬೇರ್ಪಡಿಸಲಾಗದಷ್ಟು ಗಾಢವಾದ ನಿಟ್ಟುಸಿರು ಜುಂಜಪ್ಪನ ಕಾವ್ಯದಲ್ಲಡಗಿದೆ. ಜುಂಜಪ್ಪ ದುರಂತನಾಯಕ.

ಗಾಯನವನ್ನು ನಾನು ಕೇಳಿದ್ದು, ಅಂದು, ಅದು ರಾತ್ರಿಯ ಹೊತ್ತು. ಬತ್ತಲೆ ಆಕಾಶದಡಿಯಲ್ಲಿ, ಬಯಲುಸೀಮೆಯಲ್ಲಿ ಕುಳಿತು ಅಥವಾ ತಲೆಗೆ ಕೈಯಾನಿಸಿ ಮಲಗಿ ನಕ್ಷತ್ರಗಳ ನಿಗೂಢವನ್ನು ನಿರೀಕ್ಷಿಸುತ್ತ ಜುಂಜಪ್ಪನ ಕತೆ ಕೇಳಿದೆ ನಾನು. ಕರುಣೆಯುಕ್ಕಿ ಉಕ್ಕಿ ಬರುತ್ತಿತ್ತು ಕಾವ್ಯದಲ್ಲಿ. ಕನಸಿನಲೋಕವನ್ನೂ ಬಿಡದೆ ಕಾಡಿತ್ತು ಅದು. ಜುಂಜಪ್ಪನ ಸೋದರಮಾವಂದಿರೇ ಅಸೂಯೆಗೆ ಬಲಿಬಿದ್ದು, ಜುಂಜಪ್ಪ ಹಾಗೂ ಅವನ ಸೋದರರನ್ನು ವಿಷವಿಕ್ಕಿ ಸಾಯಿಸುತ್ತಾರೆ. ಜುಂಜಪ್ಪನಿಗೆ ಆಗ ಕೇವಲ ಹದಿನಾರು ವರ್ಷ.

ಜುಂಜಪ್ಪನ ಬಗ್ಗೆ ಇಷ್ಟೊಂದು ಅಸೂಯೆ ಬರಲಿಕ್ಕೆ ಕಾರಣ ಅವನ ಕೈಗುಣ. ಮುಟ್ಟಿದ್ದಕ್ಕೆಲ್ಲ ಜೀವ ತರಿಸಬಲ್ಲವನು ಜುಂಜಪ್ಪ. ಅವನ ಪಶುಸಂಗೋಪನಾ ತಂತ್ರ ಅಂತಹದ್ದು. ಉದಾಹರಣೆಗೆ ಸಾಯಲಿರುವ ಒಂದು ರೋಗಗ್ರಸ್ತ ಕರುವಾಗಿ ಸಿಕ್ಕುತ್ತದೆ ‘ಬಡಮೈಲ’ ಅವನಿಗೆ. ಜುಂಜಪ್ಪನ ಆರೈಕೆಯಲ್ಲಿ ಅದು, ಅಸಾಧಾರಣ ಶಕ್ತಿಯ ಬೀಜದ ಹೋರಿಯಾಗಿ ಮೈತಳೆಯುತ್ತದೆ. ಜುಂಜಪ್ಪನ ಹಸುಗಳೂ ಅಷ್ಟೆ, ಸಂತಾನಲಕ್ಷ್ಮಿಯರು.

ಜುಂಜಪ್ಪ ವೀರ. ಹದಿನಾರು ವರ್ಷಕ್ಕೆ ಸಾವನ್ನಪ್ಪುವ ಮೊದಲೇ ಅಸಾಮಾನ್ಯ ಶೌರ್ಯ ಮೆರೆದಿರುತ್ತಾನೆ. ಏಳುಸುತ್ತಿನ ಅರಸರನ್ನು ಸೋಲಿಸಿರುತ್ತಾನೆ. ಆದರೆ ಜುಂಜಪ್ಪನ ಹೋರಾಟಗಳ ಉದ್ದೇಶ ರಾಜ್ಯ ಕಬಳಿಕೆಯಲ್ಲ, ಪಶುಗಳಿಗೆ ಮೇವು, ನೀರು ಒದಗಿಸುವುದಷ್ಟೆ. ಪ್ರಕೃತಿದತ್ತವಾದ ಸಮೃದ್ಧಿಯನ್ನು ಖಾಸಗಿ ಆಸ್ತಿ ಮಾಡಿಕೊಂಡು ಬೇಲಿ ಬಿಗಿಯುವ ಅಧಮರು, ಅವರಾರೇ ಇರಲಿ, ಮಣಿಸುವುದು ಜುಂಜಪ್ಪನ ಕರ್ತವ್ಯ.

ಮಣಿಸಿದ ನಂತರ ಕರುಣೆಗೆ ಮಣಿಯುತ್ತಾನೆ ಜುಂಜಪ್ಪ. ಸೋತವರ ಸತಿಯರು ಸೆರಗೊಡ್ಡಿ ಬೇಡಿದಾಗ, ‘ನನಗೇಕೆ ಬೇಕು ರಾಜ್ಯ ಆಳುವ ಭಾರ! ನಾನು ಕಾಡುಗೊಲ್ಲ! ಪಶುಗಳ ನೀರು ಮೇವಿಗೆ ಬಾಧೆ ಬರದಂತೆ ಬದುಕಿರಿ’ ಎಂದು ಗುಡುಗಿ, ಸಂಪತ್ತನ್ನೆಲ್ಲ ನಾಡಿನವರಿಗೆ ಹಿಂದಿರುಗಿಸಿ, ಕಾಡಿಗೆ ನಡೆದು ಬಿಡುತ್ತಾನೆ ಜುಂಜಪ್ಪ. ಅಲೆಮಾರಿ ಪಶುಪಾಲನೆ, ಜೀವಪ್ರೀತಿ, ಪರಿಸರಪ್ರೀತಿ, ಈ ಮೂರೂ ಜುಂಜಪ್ಪನ ‘ಆಧ್ಯಾತ್ಮಿಕ’ ಮಂತ್ರಗಳು.

ನಾವು ‘ಪಿಗ್ ಫಾರ್ಮ್‌’ಗಳಿಗೆ ಒಲಿದವರು. ಅಲೆಮಾರಿ ಪಶುಪಾಲನೆಯನ್ನು ತಾತ್ವಿಕವಾಗಿಯೇ ತಿರಸ್ಕರಿಸಿದವರು. ನಮ್ಮನ್ನು ನಾವು ಆದಷ್ಟು ಬೇಗ ತಿದ್ದಿಕೊಳ್ಳದೆ ಹೋದರೆ ಚೆಲುವ ಕನ್ನಡನಾಡು ಥಾರ್ ಮರುಭೂಮಿಯಾಗುವ ದಿನಗಳು ದೂರವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT