ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರ್ಥ

Last Updated 19 ಜನವರಿ 2013, 19:59 IST
ಅಕ್ಷರ ಗಾತ್ರ

ಬುದ್ಧನ ಬದುಕಿನ ಕಥನಗಳ ಮೂಲಕ, ನಾಗಾರ್ಜುನನ ತಾತ್ವಿಕತೆಯ ಮೂಲಕ, ಅಲ್ಲಮನ ನುಡಿಗೆಟ್ಟ ನುಡಿಯ ಮೂಲಕ, ಪಾಶ್ಚಾತ್ಯ ಚಿಂತಕರ ಪ್ರತಿಪಾದನೆಗಳ ಮೂಲಕ ಭಾಷೆ-ಅರ್ಥ-ಬದುಕುಗಳನ್ನು ಕುರಿತು ಈಗ ಹೀಗನ್ನಿಸುತ್ತಿದೆ.

ಅರ್ಥ ಇರುವುದು- ಹೊಳೆ, ಬೆಟ್ಟ, ಮರ, ಸೂರ್ಯ, ಚಂದ್ರ ಇರುವ ಹಾಗೆ ಅರ್ಥ ಇರುತ್ತದೆ.
ಅರ್ಥ ತೋರುವುದು- ನಮ್ಮ ಬುದ್ಧಿ ವಿವೇಕಗಳು ಎಚ್ಚರವಾಗಿಲ್ಲದಿದ್ದಾಗ ನಮಗೆ ಪ್ರಿಯವಾಗುವಂತೆ ತೋರುವ ಅರ್ಥವೇ ಸಾಕು ಎಂದು ಭ್ರಮಿಸುತ್ತೇವೆ.

ಅರ್ಥ ಆಗುವುದು- ಹಸಿವು ಆಗುವ ಹಾಗೆ, ದುಃಖ ಆಗುವ ಹಾಗೆ, ಸಂತೋಷ ಆಗುವ ಹಾಗೆ ಒಮ್ಮಮ್ಮೆ ಅರ್ಥವೂ ಆಗಿಬಿಡುತ್ತದೆ.

ಅರ್ಥ ಮಾಡಿಕೊಳ್ಳುವುದು- ನಮಗೆ ಅನುಕೂಲವಾಗುವ ಹಾಗೆ, ಲಾಭವಾಗುವ ಹಾಗೆ ಅರ್ಥ ಮಾಡಿಕೊಳ್ಳುವುದು.

ಅರ್ಥ ಕಟ್ಟಿಕೊಳ್ಳುವುದು- ಅನುಭವಗಳು, ಆಸೆಗಳು ಇವನ್ನೆಲ್ಲ ಆಧಾರವಾಗಿಟ್ಟುಕೊಂಡು ಇದೇ ಅರ್ಥ ಎಂದು ಕಟ್ಟಿಕೊಳ್ಳುವುದು.

ಅರ್ಥ ಅಂದುಕೊಳ್ಳುವುದು- ಹಲವು ಅರ್ಥಗಳು ಹೊಳೆದಾಗ ಸದ್ಯಕ್ಕೆ ಇದು ಸಾಕು, ಇಷ್ಟೇ ಅರ್ಥ ಅಂದುಕೊಳ್ಳುವುದು.

ಅರ್ಥ ಕೊಟ್ಟದ್ದು- ನಮ್ಮ ಹಿರೀಕರು, ನಮ್ಮ ಸ್ಕೂಲು, ನಮ್ಮ ಜಾತಿ, ನಮ್ಮ ಧರ್ಮ, ಇತ್ಯಾದಿಗಳಿಂದ ನಮಗೆ ಒದಗಿಬಂದಿರುವ ಅರ್ಥ.

ಬಿಡಿಸಿಕೊಂಡ ಅರ್ಥ- ನಿಜವಾದ ಅರ್ಥವನ್ನು ಹುಡುಕುತ್ತಾ ಇರುವ, ಆಗುವ, ತೋರುವ, ಮಾಡಿಕೊಂಡ, ಕಟ್ಟಿಕೊಂಡ, ಕೊಟ್ಟುಕೊಂಡ, ಅರ್ಥಗಳನ್ನೆಲ್ಲ ಎಳೆಯೆಳೆಯಾಗಿ ಬಿಡಿಸಿ ನೋಡುವಾಗ ಕಾಣುವುದು ಅಥವ ಕಾಣದೆ ಇರುವುದು.

ಗುರಿಯಾಗಿಸಿಕೊಂಡ ಅರ್ಥ- ಬಿಡುಗಡೆ, ಬಯಕೆ, ದುಡ್ಡು, ಧರ್ಮ ಇವುಗಳಲ್ಲಿ ಒಂದು ಅಥವ ಎಲ್ಲವೂ ನಮ್ಮ ಬದುಕಿನ ಗುರಿ ಎಂದು ನಿಗದಿಪಡಿಸಿಕೊಂಡದ್ದು.

ಅರ್ಥಕ್ಕೆ ಕೊನೆಯಿಲ್ಲ.
ನಾವು ನಮ್ಮ ಬಗ್ಗೆ, ನಮ್ಮ ಸುತ್ತಲಿನವರ ಬಗ್ಗೆ, ನಾವಿರುವ ಸಮಾಜದ ಬಗ್ಗೆ, ಚರಿತ್ರೆಯ ಬಗ್ಗೆ, ಒಟ್ಟೂ ಬದುಕಿನ ಬಗ್ಗೆ ಯಾವುದನ್ನು ಅರ್ಥ ಎಂದು ಅಂದುಕೊಂಡಿರುತ್ತೇವೋ, ಕಟ್ಟಿಕೊಂಡಿರುತ್ತೇವೋ, ಬೇರೆಯವರು ಹೇಳಿದ್ದನ್ನು ಒಪ್ಪಿರುತ್ತೇವೋ, ಭ್ರಮಿಸಿರುತ್ತೇವೋ ಅದು ಅರ್ಥವಲ್ಲ ಎಂದು ಗೊತ್ತಾಗಿ ನಮ್ಮ ಸ್ವಭಾವಕ್ಕೆ ತಕ್ಕಂತೆ ದುಃಖಕ್ಕೋ, ಹತಾಶೆಗೋ, ತಬ್ಬಿಬ್ಬಿಗೋ, ಆಕ್ರೋಶಕ್ಕೋ ಗುರಿಯಾಗಿ ಆಮೇಲೆ ಏನೋ ಮಾಡುತ್ತೇವಲ್ಲ, ಏನೋ ಆಗುತ್ತೇವಲ್ಲ ಅದನ್ನು ಗಮನಿಸುವುದೇ ಬಲು ದೊಡ್ಡ ಬೆರಗು, ಬಲು ದೊಡ್ಡ ಬೆಳವಣಿಗೆ.

`ಇಷ್ಟಾರ್ಥ' ಅನ್ನುವ ಮಾತನ್ನು ಬಳಸುವುದು ಕೇಳಿದ್ದೇವೆ. ಭಾಷೆಯನ್ನು ಕುರಿತು ಆಲೋಚಿಸಿದ ಹಳಬರೂ ಈ ಮಾತನ್ನು ಬಳಸಿದ್ದಾರೆ. ಇಷ್ಟಾರ್ಥವೆಂದರೆ ನಮ್ಮ ಮನಸ್ಸಿನಲ್ಲಿ ಇರುವ, ಬೇರೆಯವರೂ ನಮ್ಮಂತೆಯೇ ಅದನ್ನು ತಿಳಿಯಬೇಕೆಂದು ಬಯಸುವ ಅರ್ಥ.

ಅದು ಸಾಧ್ಯವಾಗುವುದೇ ಇಲ್ಲವೋ... ನಾನು ಆಡಿದ ಮಾತು ನಿನ್ನ ಹೃದಯದ ಮಾತಾಗಿ ಹೊಮ್ಮಲಿ, `ನನ್ನ ಮುಖೋದ್ಗತವು ನಿನ್ನ ಹೃದ್ಗತ'ವಾಗಲಿ ಅನ್ನುವುದು ಕವಿಯ, ಎಲ್ಲ ಮನುಷ್ಯರ ಇಷ್ಟ. `ನಾನು' ಅನ್ನುವುದು ಸ್ಥಿರವಾದ ಸಂಗತಿಯಲ್ಲ, ಬದಲಾಗುತ್ತಲೇ ಇರುತ್ತದೆ; ನನ್ನ ಸ್ವಭಾವ ಕೂಡ ದಿನದ ಪ್ರತಿ ಗಳಿಗೆಯಲ್ಲೂ ಬೇರೆ ಬೇರೆಯಾಗುತ್ತಿರುತ್ತದೆ.

ಸುತ್ತಲಿನ ಸಂದರ್ಭ ಕಾರಣವೋ, ಅಥವಾ ಸಂದರ್ಭವನ್ನು ನಾನು ಅರ್ಥ ಮಾಡಿಕೊಂಡ ರೀತಿ ಕಾರಣವೋ, ಅಂತೂ ಸ್ವಭಾವ ಕೂಡ ಬದಲಾಗುತ್ತಿರುತ್ತದೆ. ಹಾಗೆಯೇ `ನನ್ನ' ಮಾತನ್ನು ಕೇಳುವ `ನೀನು' ಕೂಡಾ. ಆಡುವ ಮಾತಿನ ಸ್ವರೂಪವೂ ಸ್ಥಿರವಲ್ಲ.

ಭಾಷೆಯ ಪದಗಳ ರೂಪ ಬದಲಾಗುತ್ತಲೇ ಇರುತ್ತದೆ. ಪದದ ದೇಹ ಪಡೆದ ಅರ್ಥವೂ ಕಾಲ ಕಾಲಕ್ಕೆ, ಸಂದರ್ಭದಿಂದ ಸಂದರ್ಭಕ್ಕೆ ಬದಲಾಗುತ್ತಲೇ ಇರುತ್ತದೆ. ಆಡಿದ ಮಾತಿನ ಇಷ್ಟಾರ್ಥ ಕೇಳುವ ಮನಸ್ಸಿನ ಇಷ್ಟಕ್ಕೆ ತಕ್ಕಂತೆ ಬೇರೆ ಇನ್ನೇನೋ ಆಗುತ್ತಲೇ ಇರುತ್ತದೆ. ಅರ್ಥಗಳೆಲ್ಲ ಅಪಾರ್ಥಗಳೇ ಆಗುವುದು ಭಾಷೆ ವಿಧಿಸಿದ ವಿಧಿಯೋ?

ಎಲ್ಲಕ್ಕೂ ಆರಂಭವಿರಬೇಕು, ಮುಕ್ತಾಯವಿರಬೇಕು, ಒಂದು, ಒಂದೇ ಒಂದು ಅರ್ಥವಿರಬೇಕು ಅನ್ನುವ ಹಟ ನಮ್ಮಲ್ಲಿ ಯಾಕೆ ಹುಟ್ಟಿಕೊಳ್ಳುತ್ತದೋ. ಹುಡುಕುತ್ತ ಹೊರಟರೆ ಯಾವ ಸಂಗತಿಯ ಆರಂಭವೂ ಮೂಲವೂ ಗೋಚರವಾಗುವುದೇ ಇಲ್ಲ- ಭಾಷೆಯ ಉಗಮದ ಹಾಗೆಯೇ. ಅಂತ್ಯವೆನ್ನುವುದು ಕೂಡ ನಮ್ಮ ಕಲ್ಪನೆ, ನಮ್ಮ ಸಮಾಧಾನವೇ ಹೊರತು ಅಂತ್ಯ ಕೂಡ ಮತ್ತೆ ಯಾವುದೋ ಸಂಗತಿಯ ಆರಂಭವಾಗಿರುತ್ತದೆ.

ಮೊದಲಿರದ, ತುದಿಯಿರದ ಸತತ ಹರಿವು ನಾವು ನಮ್ಮ ಬದುಕು ಎಲ್ಲವೂ. ಅರ್ಥವಾಯಿತು ಅಂದುಕೊಂಡದ್ದರ ಬೇರೆ ಮಗ್ಗುಲುಗಳು ಹೊಳೆದಾಗ ಅರ್ಥ ಕೂಡ ಆಗಿ ಮುಗಿಯುವಂಥದ್ದಲ್ಲ, ಆಗುತ್ತಲೇ ಇರಬೇಕಾದದ್ದು ಅನಿಸುತ್ತದೆ. `ಅಂದಂದಿನ ನುಡಿಯ ಅಂದಂದೆ ಅರಿಯಬಾರದು' ಇದು ಅಲ್ಲಮನ ಮಾತು. ಈಗ ಕೇಳಿದ ಮಾತು ಈಗಲೇ ಅರ್ಥವಾಗಲು ಸಾಧ್ಯವಿಲ್ಲ.

ಅರ್ಥ ಆಗಿಲ್ಲ, ಆದ ಅರ್ಥ ಕೂಡ ಬದಲಾಗುತ್ತ ಹೊಸತಾಗುತ್ತ ಇರುತ್ತದೆ ಅನ್ನುವ ಎಚ್ಚರ ಇರುವವರೆಗೆ ಬದುಕಿನಲ್ಲಿ ಸ್ವಾರಸ್ಯ, ಕುತೂಹಲ ಎಲ್ಲ ಉಳಿದಿರುತ್ತದೆ. ಅರ್ಥ ಆಗಿಬಿಟ್ಟಿದೆ ಅನ್ನುವುದು ದೃಢವಾದ ತಕ್ಷಣ ಬೇಸರ ತೊಡಗುತ್ತದೆ, ಬದುಕು ಅರ್ಥಹೀನ ಅನಿಸುತ್ತದೆ.

ಪ್ರೀತಿಸುವಾಗ ಇರುವ ಕುತೂಹಲ, ಉತ್ಸಾಹ `ಮದುವೆ'ಯೆಂಬ ಸಂಸ್ಥೆಗೆ ಒಳಗಾಗಿ ಸಂಬಂಧವೆಂದರೆ ಇಷ್ಟೇ, ಪ್ರೀತಿಯೆಂದರೆ ಇಷ್ಟೇ ಅನಿಸಿದ ತಕ್ಷಣದಿಂದ ಅನುಮಾನ, ಆತಂಕ, ಬೇಸರ ಎಲ್ಲ ತೊಡಗುತ್ತವೆಯಲ್ಲವೇ. ಅರ್ಥ ಆಗಿ ಮುಗಿದರೆ ಸಾವು, ಅರ್ಥ ಆಗುತ್ತ ಇರುವವರೆಗೆ ಬದುಕು ಅನ್ನಬಹುದೋ?

ಅಲ್ಲಮನ ವಚನಗಳನ್ನೇ ನೋಡಿ. ಒಂದು ಪದದ ಅರ್ಥವನ್ನು ಮತ್ತೊಂದು ಪದದಲ್ಲಿ, ಒಂದು ಸಾಲಿನ ಅರ್ಥವನ್ನು ಮತ್ತೊಂದು ಸಾಲಿನಲ್ಲಿ, ಒಂದು ವಚನದ ಅರ್ಥವನ್ನು ಮತ್ತೊಂದು ವಚನದಲ್ಲಿ ನಿರಾಕರಿಸುತ್ತ ಇರುತ್ತಾನೆ. ಇದು ಬರಿಯ ತತ್ವದ ಮಾತಲ್ಲ, ನಮ್ಮ ಸಾಮಾಜಿಕ, ರಾಜಕೀಯ ವಲಯಕ್ಕೂ ಅನ್ವಯಿಸುವಂಥದ್ದು.

ಹಿಂದೆ ಯಾವಾಗಲೋ ಇದ್ದ `ಅರ್ಥ'ವನ್ನೇ ಮೂಲದ ಅರ್ಥವೆಂದು ಸಾಧಿಸುತ್ತ ಅದನ್ನು ಇಂದಿಗೂ ಜಾರಿಗೆ ತರುವ ಹಟದ ಕ್ರಿಯೆ ಮೂಲಭೂತವಾದದ ರೂಪಪಡೆಯುತ್ತದೆ. ಇನ್ನೊಬ್ಬ ವ್ಯಕ್ತಿಯ ಬಗ್ಗೆ ನಮ್ಮ ಮನಸ್ಸಿನಲ್ಲಿ ಮೂಡಿಸಿಕೊಂಡ ಬಿಂಬವನ್ನೇ ಆ ವ್ಯಕ್ತಿಯ ಅರ್ಥವೆಂದು ಭ್ರಮಿಸಿಕೊಂಡಿದ್ದಾಗ ಅವರ ವರ್ತನೆ ನಮ್ಮ ಕಲ್ಪನೆಗಿಂತ ಭಿನ್ನವಾದ ಕೂಡಲೇ ಮೋಸಹೋದೆವೆಂದೋ, ಪ್ರೀತಿ ನಷ್ಟವಾಯಿತೆಂದೋ ನೋಯುತ್ತೇವೆ, ದುಃಖಿಸುತ್ತೇವೆ.

ನಾವು ಕಟ್ಟಿಕೊಂಡಿರುವ ಸಿದ್ಧಾಂತಗಳೆಲ್ಲ ಪದ-ಅರ್ಥಗಳ ಬಗ್ಗೆ ನಡೆಯುವ ಜಗಳಗಳಾಗಿ, ಮನಸ್ತಾಪಗಳಾಗಿ, ದ್ವೇಷವಾಗಿ ಬೆಳೆಯುತ್ತವೆ. ಬೌದ್ಧಿಕ ದ್ವೇಷ ಅತಿ ಕೆಟ್ಟ ಬಗೆಯ ದ್ವೇಷವೆಂದು ಯೇಟ್ಸ್ ಹೇಳಿದ ಮಾತು ನೆನಪಾಗುತ್ತಿದೆ.

ಖಚಿತವಾದ ಅರ್ಥದ ಗೂಟಕ್ಕೆ ಬಿಗಿದುಕೊಳ್ಳದೆ ಇರುವುದೇ ನಿಜವಾದ ಬಿಡುಗಡೆ ಇದ್ದೀತು. ಮಧ್ಯಮಮಾರ್ಗವೆಂದರೆ ನಾವು ಬಳಸುವ ಭಾಷೆ, ಅದರ ಮೂಲಕ ನಾವು ಕಟ್ಟಿಕೊಳ್ಳುವ ಅರ್ಥಗಳಿಗೆ ಸಿಕ್ಕಿಬೀಳದೆ ಬದುಕು ಸಾಗಿಸುವ ಕ್ರಿಯೆ ಇದ್ದೀತು. ಪ್ರೀತಿ, ನ್ಯಾಯ, ಧರ್ಮ, ದೇವರು, ಸರಿ, ತಪ್ಪು, ಅಪರಾಧ, ಶಿಕ್ಷೆ, ಇತ್ಯಾದಿ ಪದಗಳು ಗೊತ್ತು, ಆದರೆ ಅವಕ್ಕೆಲ್ಲ ನಾವು ಕೊಟ್ಟುಕೊಂಡಿರುವ, ಹಿಂದಿನ ತಲೆಮಾರು ನಮಗೆ ಸಾಗಿಸಿರುವ, ನಾವು ಭ್ರಮಿಸಿರುವ ಅರ್ಥಗಳನ್ನೆಲ್ಲ ನಿರಾಕರಿಸುತ್ತ ಸಾಗುವುದು ಬಿಡುಗಡೆಯ ದಾರಿ ಇದ್ದೀತು.

`ಅರ್ಥವಿಲ್ಲದ ಮಾತು' ಅನ್ನುವ ವಾಕ್ಯಕ್ಕೂ ಸ್ಪಷ್ಟವಾದ ಅರ್ಥ ಇದೆಯಲ್ಲ! ಅರ್ಥವಿಲ್ಲ ಅನ್ನುವುದು ಸರಿಯಲ್ಲ, ಅರ್ಥ ಇದೆ ಅನ್ನುವುದು ಕೂಡ ಸರಿಯಲ್ಲ, ಅರ್ಥ ಇದೆಯೋ ಇಲ್ಲವೋ ಅನ್ನುವ ಸಂದೇಹವೂ ಸರಿಯಲ್ಲ- ಮತ್ತೆ? ಆ ಮತ್ತೆ ಅನ್ನುವುದರ ಅನ್ವೇಷಣೆಯೇ ಬದುಕು ಇದ್ದೀತು. ಅದು ಅರ್ಥದ ಆಲಯವನ್ನು ಕಟ್ಟುತ್ತ, ಕಟ್ಟಿದ ಆಲಯವನ್ನು ಬಯಲುಗೊಳಿಸುತ್ತ ಸಾಗುವ ಕ್ರಿಯೆ ಇದ್ದೀತು.

ಇಂಥ ಒಂದು ಶಿಕ್ಷಣವನ್ನು, ಇಡೀ ಮನುಷ್ಯ ನಾಗರಿಕತೆಯನ್ನು ಕಟ್ಟಿರುವ ಭಾಷೆಯ ಬಗ್ಗೆ ಸೂಕ್ಷ್ಮತೆಯನ್ನು ಮನಸಿಗೆ ದೊರಕಿಸುವುದು ಶಿಕ್ಷಣದ ಮುಖ್ಯ ಉದ್ದೇಶವಾಗಬೇಕು. ಅದಕ್ಕೆ ತಕ್ಕ ಸಾಮಗ್ರಿ ಒದಗುವುದು ಭಾಷೆಯನ್ನೇ ಉಸಿರಾಗಿ ಉಳ್ಳ ಸಾಹಿತ್ಯದ ಮೂಲಕ. ದುರಂತವೆಂದರೆ ಭಾಷೆ, ಸಾಹಿತ್ಯ ಇವೆಲ್ಲ `ಲಾಭ'ವಿರದ ಸಂಗತಿಗಳಾಗಿ ಪ್ರಶ್ನೆಗಳಿಗೆ ಗೊತ್ತಿರುವ ಉತ್ತರಗಳನ್ನು ಒಪ್ಪಿಸುವ ವ್ಯವಸ್ಥೆಯನ್ನು ಮಾಡಿಟ್ಟುಕೊಂಡಿದ್ದೇವೆ.

ಕಳೆದ ಐವತ್ತನಾಲ್ಕು ವಾರಗಳಿಂದ ಭಾಷೆಯನ್ನು ಕೇಂದ್ರಮಾಡಿಕೊಂಡು ಭಾಷಾಶಾಸ್ತ್ರ, ಸ್ವಲ್ಪ ಇತಿಹಾಸ, ಸ್ವಲ್ಪ ಭಿನ್ನ ನಾಗರಿಕತೆಗಳು, ಸ್ವಲ್ಪ ತತ್ವಶಾಸ್ತ್ರ, ಸ್ವಲ್ಪ ಭಾಷಾ ಚಿಂತನೆ ಹೀಗೆ ಸ್ವಲ್ಪ ಮಾಹಿತಿ, ಸ್ವಲ್ಪ ಚಿಂತನೆ, ಸ್ವಲ್ಪ ಕಥನಗಳನ್ನು ಬೆರೆಸಿ ಈ ಅಂಕಣ ರೂಪುಗೊಂಡಿದೆ.

`ಸಾಮಾನ್ಯ ಜನ' (ಅಂಥವರು ಯಾರೂ ನನಗೆ ಕಂಡಿಲ್ಲ)ಕ್ಕೆ ಓದಿದ ತಕ್ಷಣ ಅರ್ಥವಾಗುವ, ಆದ್ದರಿಂದಲೇ ಮರೆತುಹೋಗುವ, ಗೊತ್ತಿರುವ ವಿಷಯಗಳನ್ನು ಗೊತ್ತಿರುವ ಭಾಷೆಯಲ್ಲಿ ಮತ್ತೆ ಮತ್ತೆ ಹೇಳುತ್ತ ಇರುವ ಸಮೂಹ ಮಾಧ್ಯಮಗಳ ನಡುವೆ `ಪ್ರಜಾವಾಣಿ' ಗಂಭೀರವಾದ ವಿಷಯವನ್ನು ದಿನ ಪತ್ರಿಕೆಯ ಭಾಷೆಗಿಂತ ಬೇರೆಯ ಥರದ ನುಡಿಗಟ್ಟಿನಲ್ಲಿ ಬರೆದ ಈ ಅಂಕಣಕ್ಕೆ ಅವಕಾಶಮಾಡಿಕೊಟ್ಟಿದೆ.

ಅದಕ್ಕಾಗಿ ಪ್ರಜಾವಾಣಿಯ ಮಿತ್ರರಿಗೆ, ಸಂಪಾದಕ ವರ್ಗಕ್ಕೆ ಋಣಿಯಾಗಿದ್ದೇನೆ. ಈ ಅಂಕಣದ ಬರಹಕ್ಕೆ ತೊಡಗಿದಾಗಿನಿಂದ ನನಗೂ ಎಷ್ಟೋ ಹೊಸ ಸಂಗತಿಗಳು ತಿಳಿದಿವೆ, ನನ್ನ ಬರವಣಿಗೆಯ ಕ್ರಮ ಬದಲಾಗಿದೆ. ಅಂಕಣದ ಪ್ರಬಂಧ ಓದಿನ ಅನುಭವವನ್ನೂ ಕೊಡಬೇಕು, ಹೊಸ ಸಂಗತಿಗಳನ್ನೂ ತಿಳಿಸಬೇಕು, ಗೊತ್ತಿರುವ ಸಂಗತಿಗಳನ್ನು ಹೊಸ ಕೋನದಿಂದ ನೋಡಲು ಕುಮ್ಮಕ್ಕು ಕೊಡಬೇಕು. ಹೀಗೆ ಬರೆಯಲು ತೊಡಗಿದಾಗ ಯಾವುದೇ ಒಂದು ವಿಷಯದ ವಿದ್ವಾಂಸನಲ್ಲದ, ಮೇಕೆಯ ಥರ ಸಿಕ್ಕಿದ್ದನ್ನೆಲ್ಲ ಓದಿಕೊಂಡು ಬೆಳೆದ ನಾನು ಹೀಗೆ ಭಾಷೆಯ ಬಗ್ಗೆ ಬರೆಯಬೇಕಾಗಿ ಬಂದಾಗ ನನ್ನ ತಿಳಿವಳಿಕೆ ಹಿಗ್ಗಿದ್ದು ನನಗಾದ ಲಾಭ.

ಭಾಷೆಯನ್ನು ಕುರಿತು ಇನ್ನೂ ಅನೇಕ ಸಂಗತಿಗಳನ್ನು ಪ್ರಸ್ತಾಪಿಸಬಹುದಿತ್ತು. ಅದಕ್ಕೆ ಕೊನೆಯಿಲ್ಲ. ಈ ಅಂಕಣದ ಒಂದೊಂದು ಲೇಖನದಲ್ಲಿ ಪ್ರಸ್ತಾಪವಾಗಿರುವ ಸಂಗತಿಗಳನ್ನು ಕುರಿತು ಪುಸ್ತಕಗಳನ್ನೇ ಬರೆಯಬಹುದು, ಬರೆದಿದ್ದಾರೆ. ಅಂಕಣದ ಮಿತಿಯಲ್ಲಿ ಪ್ರತಿವಾರವೂ ಸಾಧ್ಯವಾದಷ್ಟು ಸಂಗತಿಗಳನ್ನು ಹೇಳಬೇಕೆಂಬ ಹಂಬಲದಲ್ಲಿ ಇನ್ನಷ್ಟು ವಿವರಣೆ, ವಿಸ್ತರಣೆಗಳು ಓದುಗರೇ ಕಂಡುಕೊಳ್ಳಬೇಕಾದ ಸಂಗತಿಗಳಾಗಿ ಉಳಿದಿವೆ.

ಯಾವುದೇ ವಿಷಯವನ್ನು ಆರು ವರ್ಷದ ಮಗುವಿಗೂ ತಿಳಿಯುವಂತೆ ಹೇಳಲು ಸಾಧ್ಯವಾದರೆ ಮಾತ್ರ ಅದು ನಮಗೆ ಗೊತ್ತು ಎಂದರ್ಥ ಎಂದು ಐನ್‌ಸ್ಟೈನ್ ಒಂದೆಡೆಯಲ್ಲಿ ಹೇಳಿದ್ದಾನೆ. ಅಂಥ ಹೇಳುವ ಕ್ರಮವನ್ನು ಕಲಿಯಲು ಈ ಅಂಕಣದ ಮೂಲಕ ಅಂಬೆಗಾಲಿಡುತ್ತ ಪ್ರಯತ್ನಿಸಿದ್ದೇನೆ.

ನಾಡಿನ ಬೇರೆ ಬೇರೆ ಊರುಗಳ ನನಗೇ ಆಶ್ಚರ್ಯವಾಗುವಷ್ಟು ಸಂಖ್ಯೆಯ ಓದುಗರು ಈ ಅಂಕಣದಿಂದ ತಮಗೆ ಉಪಯೋಗವಾಗಿದೆ ಎಂದು ತಿಳಿಸಿದ್ದಾರೆ. ಕೆಲವು ಗೆಳೆಯರು ಪ್ರತಿವಾರವೂ ನನ್ನೊಡನೆ ಚರ್ಚಿಸುತ್ತ ಉತ್ಸಾಹ ತುಂಬಿದ್ದಾರೆ, ಹೊಸ ದಾರಿಗಳನ್ನು ತೋರಿದ್ದಾರೆ. ಗಂಭೀರವಾದ ವಿಷಯಗಳು ಕೇವಲ ವಿಶ್ವವಿದ್ಯಾಲಯಗಳ ವಿದ್ವಾಂಸರಿಗೆ, ವಿಚಾರಸಂಕಿರಣಗಳಿಗೆ ಪರಿಮಿತವಾಗಬಾರದು, ವಿಶಾಲ ಓದುಗವರ್ಗಕ್ಕೂ ಸಾಧ್ಯವಾದ ಮಟ್ಟಿಗೂ ತಿಳಿಸಬೇಕು ಅನ್ನುವುದು ನಮ್ಮ ಗುರಿಯಾಗಬೇಕು.

ನಮ್ಮ ಕಾಲದಲ್ಲಿ ತೇಜಸ್ವಿಯವರು, ಲಂಕೇಶರು ಸಮೂಹ ಮಾಧ್ಯಮಗಳಲ್ಲಿ ಅಂಥ ಕೆಲಸ ಮಾಡಿದರು. ಭಾಷೆಯನ್ನು ಕುರಿತು ಸೇರಿ ಎಷ್ಟೊಂದು ದೊಡ್ಡ ಮನಸ್ಸುಗಳು ಏನೆಲ್ಲ ಸಂಗತಿಗಳನ್ನು ಹೇಳಿವೆ, ಆ ಹಿರಿಯರಿಗೆಲ್ಲ ನಾನು ಋಣಿ. ಬೇರೆ ಬೇರೆ ಮನಸುಗಳು, ಜೀವಗಳು ಕಾಣಿಸಿಕೊಟ್ಟದ್ದನ್ನು ನನಗೆ ಕಂಡ ರೀತಿಯಲ್ಲಿ, ನನಗೆ ಸಾಧ್ಯವಾದ ರೀತಿಯಲ್ಲಿ ನಿಮ್ಮಂದಿಗೆ ಹಂಚಿಕೊಂಡಿದ್ದೇನೆ.

ಮುಂದಿನ ಭಾನುವಾರದ ಬರಹದೊಂದಿಗೆ ಈ ಅಂಕಣ ಕೊನೆಗಾಣುತ್ತದೆ. ಅಂಕಣದಲ್ಲಿ ಪ್ರಸ್ತಾಪಿಸಲಾಗದ ಮತ್ತಷ್ಟು ಹೆಚ್ಚಿನ ವಿಷಯಗಳೊಂದಿಗೆ ಈ ಅಂಕಣ ಸದ್ಯದಲ್ಲೇ ಪುಸ್ತಕರೂಪದಲ್ಲಿ ಪ್ರಕಟವಾಗಲಿದೆ. ಅದು ಮತ್ತೊಂದು ಆರಂಭವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT