ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರ್ಧ ಜನಸಂಖ್ಯೆಯನ್ನು ನಡೆಸಿಕೊಳ್ಳುವ ರೀತಿಯೇ ಇದು?

Last Updated 20 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಇದು ಸಾಮಾಜಿಕ ಸಮಸ್ಯೆಯೇ? ಮನಸ್ಥಿತಿಯ ಸಮಸ್ಯೆಯೇ? ಇದರ ಬೇರು ನಮ್ಮ ಧರ್ಮಗಳಲ್ಲಿಯೇ ಇದೆಯೇ? ಅಥವಾ ಇದು ಎಲ್ಲವೂ ನಿಜವೇ? ಎಷ್ಟು ಮಂದಿಗೆ ನೆನಪಿದೆಯೋ ಗೊತ್ತಿಲ್ಲ. ಶಾಸಕಾಂಗದಲ್ಲಿ ಮಹಿಳೆಯರಿಗೆ ಮೀಸಲಾತಿ ಕೊಡುವ ಕುರಿತು ಸಂಸತ್ತಿನಲ್ಲಿ ಚರ್ಚೆ ನಡೆದಿತ್ತು. ಜನತಾದಳ (ಯು) ಅಧ್ಯಕ್ಷ ಶರದ್ ಯಾದವ್, `ಹೆಣ್ಣು ಮಕ್ಕಳಿಗೆ ಸಂಸದೀಯ ವ್ಯವಸ್ಥೆಯಲ್ಲಿ ಮೀಸಲಾತಿ ಕೊಟ್ಟರೆ ಸದನದಲ್ಲಿ ಬರೀ ಬಾಲ್ ಕಟಿ (ಕೂದಲು ಕತ್ತರಿಸಿಕೊಂಡ) ಹೆಣ್ಣು ಮಕ್ಕಳೇ ತುಂಬಿರುತ್ತಾರೆ' ಎಂದು ಮುತ್ತು ಉದುರಿಸಿದ್ದರು.

ಅದೇ ಮಾತನ್ನು ಆಡದಿದ್ದರೂ ಸಮಾಜವಾದಿ ಪಕ್ಷದ ಮುಲಾಯಂ ಮತ್ತು ಆರ್.ಜೆ.ಡಿ ಪಕ್ಷದ ಲಾಲು ಪ್ರಸಾದ್ ಕೂಡ ಅದೇ ನಿಲುವಿನವರಾಗಿದ್ದರು. ಈಗಲೂ ಆಗಿದ್ದಾರೆ. ಇವರೆಲ್ಲ ಹೆಣ್ಣು ಮಕ್ಕಳಿಗೆ ಹೆಚ್ಚಿನ ಸ್ಥಾನ ಮಾನ ಕೊಡಬೇಕು ಎಂದು ವಾದಿಸಿದ ರಾಮ ಮನೋಹರ ಲೋಹಿಯಾ ಸಿದ್ಧಾಂತದ ಅನುಯಾಯಿಗಳು! ಅವರೇ ಹೆಣ್ಣು ಮಕ್ಕಳಿಗೆ ಸಂಸದೀಯ ವ್ಯವಸ್ಥೆಯಲ್ಲಿ ಮೀಸಲಾತಿ ಕೊಡಬೇಕು ಎಂಬ ಮಸೂದೆಯನ್ನು ನಖಶಿಖಾಂತ ವಿರೋಧಿಸುವವರು. ಲೋಹಿಯಾ ಅನುಯಾಯಿಗಳ ಕಥೆಯೇ ಹೀಗಾದರೆ ಉಳಿದವರ ಪಾಡೇನು?

ಕರ್ನಾಟಕದಲ್ಲಿ ಮತ್ತೆ ಚುನಾವಣೆ ಬಂದಿದೆ. ಒಂದು ಸಾರಿ ಎಲ್ಲ ಪಕ್ಷಗಳ ಅಭ್ಯರ್ಥಿಗಳ ಪಟ್ಟಿ ಹಿಡಿದುಕೊಂಡು ನೋಡಿ. ಕಾಂಗ್ರೆಸ್ ಅತಿ ಹೆಚ್ಚು ಮಂದಿ ಮಹಿಳೆಯರಿಗೆ ಟಿಕೆಟ್ ಕೊಟ್ಟಿದೆ. ಆದರೂ ಅವರ ಸಂಖ್ಯೆ ಒಂದು ಡಜನ್ ಅನ್ನೂ ಮೀರಿಲ್ಲ. ಬಿಜೆಪಿ ಮತ್ತು ಜೆ.ಡಿ (ಎಸ್) ಪಕ್ಷಗಳ ಮಹಿಳಾ ಅಭ್ಯರ್ಥಿಗಳ ಸಂಖ್ಯೆ ಎರಡಂಕಿಯನ್ನೂ ತಲುಪಿಲ್ಲ. ಜನಸಂಖ್ಯೆಯಲ್ಲಿ ಅರ್ಧದಷ್ಟು ಇರುವವರನ್ನು ನಡೆಸಿಕೊಳ್ಳುವ ರೀತಿಯೇ ಇದು?

ಇನ್ನೂ ಎಷ್ಟು ದಿನ ನಾವು ಹೀಗೆಯೇ ಅವರನ್ನು ನಡೆಸಿಕೊಳ್ಳುತ್ತೇವೆ? ಇದು ಹೊಸದೇನೂ ಅಲ್ಲ. ಹೆಣ್ಣು ಮಕ್ಕಳ ವಿಚಾರದಲ್ಲಿ ಒಟ್ಟು ಭಾರತದ ಸ್ಥಿತಿಯೇ ಹೀಗೆ ಇದೆ. ನಾವು ಪಕ್ಕದ ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳಗಳಿಗಿಂತ ಕಡೆ. ಹೆಣ್ಣು ಮಕ್ಕಳಿಗೆ ಸ್ಥಾನ ಮಾನ ಕೊಡುವ ವಿಚಾರದಲ್ಲಿ ವಿಶ್ವದಲ್ಲಿ ನಾವು 165ನೇ ಸ್ಥಾನದಲ್ಲಿ ಇದ್ದೇವೆ.

ಹೆಣ್ಣು ಮಕ್ಕಳಿಗೆ ಅತ್ಯಂತ ಅಪಾಯಕಾರಿಯಾದ ನಾಲ್ಕನೇ ದೇಶ ಎಂದೂ ಭಾರತ ಹೆಸರು ಗಳಿಸಿದೆ! ಐದು ವರ್ಷದ ಹಸುಗೂಸುಗಳ ಮೇಲೂ ಅತ್ಯಾಚಾರ ಮಾಡುವ ನಾವು ಮನುಷ್ಯರಾಗಿರಲು ಸಾಧ್ಯವಿಲ್ಲ; ರಾಕ್ಷಸರೇ ಆಗಿರಬೇಕು. ಆಫ್ರಿಕಾದ ರವಾಂಡಾ ದೇಶದಲ್ಲಿ ಶೇ 56.7 ರಷ್ಟು ಸೀಟುಗಳಲ್ಲಿ ಮಹಿಳೆಯರು ಗೆದ್ದಿದ್ದರೆ, ಅದೇ ಖಂಡದ ಮೊಜಾಂಬಿಕ್‌ನಲ್ಲಿ ಈ ಸಂಖ್ಯೆ ಶೇ 34.8ನ್ನು ಮೀರಿದೆ. ದಕ್ಷಿಣ ಆಫ್ರಿಕಾದಲ್ಲಿ ಇದು ಶೆ 44.5ರಷ್ಟು ಇದೆ. ಕತ್ತಲ ಖಂಡದ ಈ ದೇಶಗಳೇ ಮುಕ್ಕೋಟಿ ದೇವತೆಗಳು ಇರುವ ನಮ್ಮ ದೇಶಕ್ಕಿಂತ ವಾಸಿ ಎನಿಸುವುದಿಲ್ಲವೇ?

ಕರ್ನಾಟಕದಲ್ಲಿ ಈಗ 14ನೇ ವಿಧಾನಸಭೆಗೆ ಚುನಾವಣೆ ಆಗುತ್ತಿದೆ. ಇಷ್ಟು ದೀರ್ಘ ಅವಧಿಯಲ್ಲಿ ಎರಡು ಸಾರಿ ಮಾತ್ರ ವಿಧಾನಸಭೆಯಲ್ಲಿ ಸದಸ್ಯೆಯರ ಸಂಖ್ಯೆ ಎರಡಂಕಿ ಮುಟ್ಟಿತ್ತು. 1962ರಷ್ಟು ಹಿಂದೆ 18 ಮಂದಿ ಮಹಿಳೆಯರು ವಿಧಾನಸಭೆಗೆ ಗೆದ್ದು ಬಂದಿದ್ದರು. ನಂತರ 1989ರಲ್ಲಿ ಹತ್ತು ಮಂದಿ ಗೆದ್ದಿದ್ದರು.

ಉಳಿದ ಅವಧಿಯಲ್ಲಿ ಈ ಸಂಖ್ಯೆ ಆರೆಂಟು ಮಾತ್ರ. ಕಳೆದ ವಿಧಾನಸಭೆಯಲ್ಲಿಯೂ ಆರು ಮಂದಿ ಮಾತ್ರ ಸದಸ್ಯೆಯರು ಇದ್ದರು. ಈ ಸಾರಿಯೂ ಟಿಕೆಟ್ ಸಿಕ್ಕವರಲ್ಲಿ ಎಷ್ಟು ಮಂದಿ ಗೆದ್ದು ಬರುತ್ತಾರೆ ಎಂದು ಹೇಳುವುದು ಕಷ್ಟ. ಆದರೆ, ಅದು ಒಂದಂಕಿಯನ್ನು ಮೀರುವುದು ಸುಲಭವಲ್ಲ. ಇದು ಸಾಮಾಜಿಕ ಸಮಸ್ಯೆ. ಎಲ್ಲ ಪಕ್ಷಗಳಿಗೆ ಗೆಲ್ಲುವುದು ಮುಖ್ಯ. ಅವರಿಗೆ ಸರ್ಕಾರ ಮಾಡಬೇಕು. ಸಮಾಜ ಸುಧಾರಣೆ ಅಲ್ಲ. ಸರ್ಕಾರ ಮಾಡಲು ಸಾಧ್ಯವಾದರೆ ತಾನೇ ಸಮಾಜ ಸುಧಾರಣೆ ಮಾಡುವುದು?! ಹೆಣ್ಣು ಮಕ್ಕಳಿಗೆ ಸ್ಥಾನಮಾನ ಸಿಗಬೇಕು ಎಂಬ ನಿಜವಾದ ಕಾಳಜಿ ಇರುವ ಸೋನಿಯಾ ಗಾಂಧಿಯವರ ಕಾಂಗ್ರೆಸ್ ಪಕ್ಷದಲ್ಲಿಯೇ ಅಳೆದು ಸುರಿದೂ ಹನ್ನೊಂದು ಮಂದಿಗೆ ಮಹಿಳೆಯರಿಗೆ ಟಿಕೆಟ್ ಕೊಟ್ಟಿದ್ದಾರೆ. ಉಳಿದ ಪಕ್ಷಗಳ ಹೈಕಮಾಂಡಿನಲ್ಲಿ ಹೆಣ್ಣು ಮಕ್ಕಳಿಗೆ ಟಿಕೆಟ್ ಕೊಡಿ ಎನ್ನುವವರು ಯಾರೂ ಇಲ್ಲ.

ಎಲ್ಲ ಪಕ್ಷಗಳಿಗೂ ಗೆಲ್ಲುವ ತವಕ. ಹೆಣ್ಣು ಮಕ್ಕಳಿಗೆ ಗೆಲ್ಲುವ ಸಾಮರ್ಥ್ಯ ಕಡಿಮೆ ಎಂಬುದು ಅವರ ನಂಬಿಕೆ ಅಥವಾ ಅನುಭವ. ಇಂಥ ನಂಬಿಕೆ ಸಮಾಜದಲ್ಲಿನ ಸ್ಥಿತಿಗತಿಗಳ ಹಿನ್ನೆಲೆಯಿಂದ ಮೂಡಿ ಬಂದಿರಬಹುದು. ಅದೇ ನಂತರ `ಅನುಭವ'ವೂ ಆಗಿರಬಹುದು. ಒಂದು ಕ್ಷೇತ್ರದಲ್ಲಿ ಒಂದು ಪಕ್ಷ ಹೆಣ್ಣು ಮಗಳಿಗೆ ಟಿಕೆಟ್ ಕೊಟ್ಟರೆ ಮತ್ತೊಂದು ಪಕ್ಷ ಪುರುಷನಿಗೆ ಟಿಕೆಟ್ ಕೊಟ್ಟರೆ ಹೆಣ್ಣು ಮಗಳಿಗೆ ಟಿಕೆಟ್ ಕೊಟ್ಟ ಪಕ್ಷಕ್ಕೆ ತನ್ನ ಅಭ್ಯರ್ಥಿ ಸೋತು ಬಿಡಬಹುದು ಎಂಬ ಭಯ. ಚುನಾವಣೆ ವ್ಯವಸ್ಥೆ ಎಂಬುದು ತೀರಾ ಕಲುಷಿತವಾಗಿರುವ ಈಗಿನ ಸಾಮಾಜಿಕ ಪರಿಸರದಲ್ಲಿ ಇದು ನಿಜವೂ ಇರಬಹುದು.

ಪುರುಷ ಅಭ್ಯರ್ಥಿಯ ಹತ್ತಿರ ಹಣ ಮತ್ತು ಹೆಂಡ ಕೇಳಿದ ಹಾಗೆ ಮಹಿಳಾ ಅಭ್ಯರ್ಥಿ ಹತ್ತಿರ ಕೇಳಲು ಗಂಡಸರಿಗೆ ನಾಚಿಕೆ ಆಗಬಹುದು. ಗೆದ್ದ ನಂತರ ಪುರುಷ ಅಭ್ಯರ್ಥಿ ಹತ್ತಿರ ನಿಕಟ ಸಂಪರ್ಕ ಸಾಧ್ಯ, ಮಹಿಳಾ ಅಭ್ಯರ್ಥಿ ಹತ್ತಿರ ಕಷ್ಟ ಎಂದೂ ಮತದಾರರಿಗೆ ಅನಿಸುತ್ತಿರಬಹುದು. ಇವೆಲ್ಲ ಸಾಮಾನ್ಯ ಗ್ರಹಿಕೆಗಳು. ನಿಜ ಇರಬಹುದು. ಇಲ್ಲದೇ ಇರಬಹುದು. ವಿಧಾನಸಭೆ ಅಥವಾ ಲೋಕಸಭೆಗೆ ಇನ್ನೂ ಮಹಿಳಾ ಮೀಸಲಾತಿ ಜಾರಿಯಾಗಿಲ್ಲವಾದ ಕಾರಣ ಎಲ್ಲ ಪಕ್ಷಗಳೂ ಒಂದು ಕ್ಷೇತ್ರದಲ್ಲಿ ಮಹಿಳೆಯರನ್ನೇ ಕಣಕ್ಕೆ ಇಳಿಸುತ್ತಿಲ್ಲ.

ಮಹಿಳೆಗಿಂತ ಪುರುಷನ ಗೆಲ್ಲುವ ಸಾಮರ್ಥ್ಯ ಹೆಚ್ಚು ಎಂಬ ನಂಬಿಕೆಯ ಪಕ್ಷಗಳು ಹೆಣ್ಣು ಮಕ್ಕಳಿಗೆ ಟಿಕೆಟ್ ಕೊಡುವಾಗ ಆಕೆಯ ವಿರುದ್ಧ ಪುರುಷ ಅಭ್ಯರ್ಥಿ ಹಾಕಿದರೆ ಏನು ಮಾಡುವುದು ಎಂಬ ಅಳುಕಿನಲ್ಲಿಯೇ ಟಿಕೆಟ್ ಕೊಡುತ್ತವೆ. ಈಗ ಆಗಿರುವುದೂ ಅದೇ. ಎಲ್ಲಿ ತಪ್ಪಿಸುವುದು ಸಾಧ್ಯವೇ ಇಲ್ಲವೋ ಅಲ್ಲಿ ಮಾತ್ರ ಮಹಿಳೆಯರಿಗೆ ಟಿಕೆಟ್ ಸಿಕ್ಕಂತೆ ಕಾಣುತ್ತದೆ. ಕೆಲವರು ತಪ್ಪಿಸಿಯೂ ಬಿಟ್ಟಿದ್ದಾರೆ. ಕಾರಣಗಳು ಏನೇ ಇರಬಹುದು : ಕಲ್ಪನಾ ಸಿದ್ದರಾಜು ಅದಕ್ಕೆ ಒಂದು ಉದಾಹರಣೆ.

ಕರ್ನಾಟಕದಲ್ಲಿ ಒಬ್ಬ ಹೆಣ್ಣು ಮಗಳು ಇದುವರೆಗೆ ಮುಖ್ಯಮಂತ್ರಿ ಆಗಿಲ್ಲ. ಸದ್ಯೋಭವಿಷ್ಯದಲ್ಲಿ ಆಗುವ ಲಕ್ಷಣಗಳೂ ಇಲ್ಲ. ನಮ್ಮ ಪಕ್ಕದ ಕೇರಳ ರಾಜ್ಯದಲ್ಲಿ ಹೆಣ್ಣು ಮಗಳು ಮುಖ್ಯಮಂತ್ರಿ ಆಗದೇ ಇದ್ದರೂ ಅದು ಮಾತೃಪ್ರಧಾನ ಸಮಾಜ. ಆದರೆ, ಅಲ್ಲಿಯೂ ಎರಡು ವರ್ಷಗಳ ಹಿಂದೆ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಗೆದ್ದ ಹೆಣ್ಣುಮಕ್ಕಳ ಸಂಖ್ಯೆ ಏಳು ಮಾತ್ರ. ಅದಕ್ಕಿಂತ ಹಿಂದಿನ ವಿಧಾನಸಭೆಯಲ್ಲಿಯೂ ಅಲ್ಲಿ ಅಷ್ಟೇ ಸಂಖ್ಯೆಯ ಸದಸ್ಯೆಯರು ಇದ್ದರು.

ತಮಿಳುನಾಡಿನಲ್ಲಿ ಜಯಲಲಿತಾ ಅವರಂಥ ಅತ್ಯಂತ ದಿಟ್ಟ ಸಮರ್ಥ ಮಹಿಳೆ ಮುಖ್ಯಮಂತ್ರಿ ಆಗಿದ್ದಾರೆ. ಅದು ಕರ್ನಾಟಕಕ್ಕಿಂತ ದೊಡ್ಡ ರಾಜ್ಯ. ಅಲ್ಲಿಯ ಸದಸ್ಯೆಯರ ಸಂಖ್ಯೆಯೂ ಒಂದು ಡಜನ್‌ಗಿಂತ ಎರಡು ಹೆಚ್ಚು ಅಷ್ಟೇ! ಇನ್ನೊಬ್ಬ ಅಷ್ಟೇ ದಿಟ್ಟ ಮಹಿಳೆ ಮುಖ್ಯಮಂತ್ರಿ ಆಗಿರುವ ಪಶ್ಚಿಮ ಬಂಗಾಳದಲ್ಲಿ ಸದಸ್ಯೆಯರ ಸಂಖ್ಯೆ 37. ಇದು ಕಳೆದ ವಿಧಾನಸಭೆಗಿಂತ ಎರಡೇ ಹೆಚ್ಚು. ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ಜಯಾ ಮತ್ತು ಮಮತಾ ಅವರಿಗೆ ತಾವೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಗೊತ್ತಿತ್ತು. ಅವರೂ ಐವತ್ತು ಮಂದಿ ಮಹಿಳೆಯರನ್ನು ಗೆಲ್ಲಿಸಿಕೊಂಡು ಬರಲಿಲ್ಲ. ಎಷ್ಟು ಮಂದಿ ಮಹಿಳೆಯರಿಗೆ ಟಿಕೆಟ್ ಕೊಟ್ಟರೋ ಏನೋ? ಹೇಗಿದ್ದರೂ ಗೆದ್ದ ಗಂಡಸರು ತಮಗೆ ಸಾಷ್ಟಾಂಗ ನಮಸ್ಕಾರ ಹಾಕುವಾಗ ಹೆಂಗಸರು ಏಕೆ ಬೇಕು ಎಂದು ಅವರು ಅಂದುಕೊಂಡರೋ ಏನೋ? ಇದು ಎಂಥ ಮನಸ್ಥಿತಿ?

ಇಂದಿರಾ ಗಾಂಧಿ ಅವರ ಸಂಪುಟದಲ್ಲಿ ಆಕೆ ಒಬ್ಬರೇ ಗಂಡಸರು ಎಂಬ ಹುಡುಗಾಟಿಕೆಯ ಮಾತನ್ನು ನಾವು ಕೇಳಿದ್ದೆವು. ಸೋನಿಯಾ ಗಾಂಧಿಯವರು ಪ್ರಧಾನಿ ಆಗಿರದೇ ಇದ್ದರೂ ಅವರ ಪಕ್ಷದಲ್ಲಿ ಅವರೊಬ್ಬರೇ ಗಂಡಸರು ಎಂದು ಮತ್ತೆ ಅದೇ ಹುಡುಗಾಟಿಕೆಯ ಮಾತನ್ನು ಹೇಳಬಹುದು. ಜಯಾ ಹಾಗೂ ಮಮತಾ ಅವರೇನೂ ಕಡಿಮೆಯಿಲ್ಲ. ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರ ಪ್ರಭಾವವೂ ಕಡಿಮೆಯಲ್ಲ. ಒಂದು ಸಾರಿ ಗೆದ್ದು ಉನ್ನತ ಹುದ್ದೆ ಹಿಡಿದ ಹೆಣ್ಣು ಮಗಳಿಗೆ ಪುರುಷ ಸಾಷ್ಟಾಂಗ ಹಾಕುವಷ್ಟು ಮಣಿದು ಬಿಡುತ್ತಾನೆ. ಆದರೆ, ಮೇಲೆ ಬರಬೇಕು ಎನ್ನುವ ಹೆಣ್ಣು ಮಗಳನ್ನು ಆತನೇ ತಲೆ ಮೊಟಕಿ ಕೆಳಗೆ ತಳ್ಳುತ್ತಾನೆ!

ಮೂಲತಃ ಗಂಡಸರದು ಪಾಳೆಗಾರನ ಮನಸ್ಥಿತಿ. ಆತ ಹೆಣ್ಣನ್ನು ಆಸ್ತಿ ಎಂದೇ ಭಾವಿಸುತ್ತಾನೆ. ಹಳ್ಳಿಗಾಡಿನ ಹೆಣ್ಣು ಮಕ್ಕಳ ಸ್ಥಿತಿ ನೋಡಿದರೆ ಸಾಕು ಇದು ಅರ್ಥವಾಗುತ್ತದೆ. ಹಾಗೆಂದು ಪೇಟೆಯಲ್ಲಿ ಇದೇನು ಬಹಳ ಉತ್ತಮವಾಗಿಲ್ಲ. ಆಕೆಯನ್ನು ಹುಟ್ಟಿದಾಗಿನಿಂದ ಬೆಳೆಸುವ ಸ್ಥಿತಿಯಲ್ಲಿಯೇ ತಾರತಮ್ಯ ಇದೆ. ಹುಟ್ಟಡಗಿಸುವುದರಲ್ಲಿಯೂ ಅದೇ ತಾರತಮ್ಯ ಇದೆ. ಹಳ್ಳಿಯಲ್ಲಿ ಆಕೆ ಕೂಲಿ ಕೆಲಸ ಮಾಡಿಕೊಂಡೇ ಬದುಕು ಸಾಗಿಸಬೇಕು.

ಬೆಳಿಗ್ಗೆ ಎದ್ದು ಕಾಡಿಗೆ ಹೋಗಿ ಉರುವಲು ತಂದು ಒಲೆ ಉರಿಸಬೇಕು. ಅಡುಗೆ ಮಾಡಿ ಬಡಿಸಬೇಕು. ಪುರುಷನದು ಹೊರಗಿನ ಜಗತ್ತು. ಹೆಣ್ಣಿಗೆ ಅಡುಗೆ ಮನೆಯೇ ಜಗತ್ತು. ಪಾಳೆಗಾರ ಪುರುಷ ಹೆಣ್ಣನ್ನು ನೋಡುವ ಇನ್ನೊಂದು ದೃಷ್ಟಿ ಆಕೆ ಒಂದು ಭೋಗದ ವಸ್ತು ಎಂದು. ಇದನ್ನು ಒಪ್ಪಿಕೊಳ್ಳುವಂಥ ಒಂದು ಅಸಹಾಯಕ ಮನಸ್ಥಿತಿಯನ್ನೇ ನಾವು ಹೆಣ್ಣು ಶಿಶುವಿನಲ್ಲಿ ಹುಟ್ಟಿ ಹಾಕಿಬಿಟ್ಟಿದ್ದೇವೆ. ಇದನ್ನೆಲ್ಲ ಮೀರಿ ಆ ಮಗು ಬೆಳೆದು ನಿಲ್ಲುವುದು ಒಂದು ದೊಡ್ಡ ಸಾಹಸ. ಆಕೆಯ ಜೀವನದಲ್ಲಿ ಒಂದು ದೊಡ್ಡ ಇತಿಹಾಸ.

ಪಂಚಾಯತ್ ರಾಜ್ ಆಡಳಿತ ವ್ಯವಸ್ಥೆಯಲ್ಲಿ ಅರ್ಧದಷ್ಟು ಸೀಟುಗಳನ್ನು ಹೆಣ್ಣು ಮಕ್ಕಳಿಗೆ ಮೀಸಲು ಇಟ್ಟುದು ಇಂಥ ಒಂದು ಐತಿಹಾಸಿಕ ತೀರ್ಮಾನ. ಅದಕ್ಕೆ ಅನುಸಾರವಾಗಿ ಈಗ ಅರ್ಧದಷ್ಟು ಸೀಟುಗಳಲ್ಲಿ ಹೆಣ್ಣು ಮಕ್ಕಳು ಗೆದ್ದು ಬರುತ್ತಿದ್ದರೂ ಬಹುತೇಕ ಕಡೆಗಳಲ್ಲಿ ಅವರೇ ನಿರ್ಣಯ ತೆಗೆದುಕೊಳ್ಳುವಂಥ ಸ್ಥಿತಿಯಲ್ಲಿ ಈಗಲೂ ಇಲ್ಲ ಅದಕ್ಕೆ ಅವರು ಇನ್ನೂ ತಮ್ಮ ಅಧಿಕಾರವನ್ನು ಸಮರ್ಥಿಸಿಕೊಳ್ಳುವಷ್ಟು `ಸಾಮಾಜಿಕ'ವಾಗಿ ಬೆಳೆಯದೇ ಇರುವುದು ಕಾರಣ ಆಗಿರಬಹುದು. ಎಲ್ಲಿಯೋ ಕೆಲವರು ಅಂಥ ಸ್ವತಂತ್ರ ಮನಸ್ಥಿತಿಯ ಹೆಣ್ಣು ಮಕ್ಕಳು ಸಿಗಬಹುದು. ಅದಕ್ಕೆ ಅವರ ಶೈಕ್ಷಣಿಕ ಮಟ್ಟ, ಕುಟುಂಬದ ಹಿನ್ನೆಲೆ ಇತ್ಯಾದಿ ಕಾರಣ ಆಗಿರಬಹುದು. ಅದೆಲ್ಲ `ಅಪವಾದ' ಎನ್ನುವಂಥ ಸ್ಥಿತಿಯೇ ಈಗಲೂ ಇದೆ.

ಆದರೂ ಎಲ್ಲ ಕೊರತೆಗಳ ನಡುವೆ ಇದು ಒಂದು ಬೆಳೆಯಬೇಕಾದ, ಉಳಿಯಬೇಕಾದ ಪ್ರಕ್ರಿಯೆ. ಪಂಚಾಯತ್ ಸಂಸ್ಥೆಗಳಲ್ಲಿ ಅರ್ಧದಷ್ಟು ಹೆಣ್ಣು ಮಕ್ಕಳು ಗೆದ್ದು ಬಂದು ಒಟ್ಟು ಆಡಳಿತ ವ್ಯವಸ್ಥೆಯ ಶುಚಿತ್ವಕ್ಕೆ, ದಕ್ಷತೆಗೆ ಒಂದಿಷ್ಟು ಕೊಡುಗೆ ಕೊಡಬಹುದಾದರೆ ಅದು ಸಂಸತ್ತಿನಲ್ಲಿ, ಶಾಸಕಾಂಗದಲ್ಲಿಯೂ ಸಾಧ್ಯವಾಗಬೇಕು. ಹೆಣ್ಣು ಮಕ್ಕಳಿಗೆ ಶೇ 33 ರಷ್ಟು ಮೀಸಲಾತಿ ಕೊಡುವ ಸಂವಿಧಾನದ 84 ನೇ ತಿದ್ದುಪಡಿ ಮಸೂದೆ 19 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದರೆ ಅದಕ್ಕೆ ರಾಜಕೀಯದಲ್ಲಿ ಶುಚಿತ್ವ ಮತ್ತು ದಕ್ಷತೆ ಬರುವುದು ಬೇಡ ಎಂಬ ಮನಸ್ಥಿತಿಯೂ ಕಾರಣ ಆಗಿರಬಹುದೇ? ಅಥವಾ ಹಾಗೆಂದು ಅರ್ಥ ಮಾಡಿಕೊಳ್ಳಬಹುದೇ?

ಬಿಜೆಪಿ ಸರ್ಕಾರದಲ್ಲಿ ಇಂಧನ ಸಚಿವೆಯಾಗಿದ್ದ ಶೋಭಾ ಕರಂದ್ಲಾಜೆ ಸಂಪುಟ ಸಭೆಯಲ್ಲಿ ತಮ್ಮ ಖಾತೆ ಬಿಟ್ಟು ಮತ್ತೊಂದು ಖಾತೆಯ ವಿಷಯಗಳ ಬಗ್ಗೆ ಚರ್ಚೆ ಮಾಡಿದರೆ ಅದನ್ನು ಅಧಿಕ ಪ್ರಸಂಗ ಎಂದು ಭಾವಿಸಲಾಗುತ್ತಿತ್ತಂತೆ. ಇದೂ ಒಂದು ಮನಸ್ಥಿತಿ. ಹೆಣ್ಣು ಮಕ್ಕಳಿಗೆ ಏನು ಗೊತ್ತಿರುತ್ತದೆ ಎಂಬ ಮನಸ್ಥಿತಿ ಇದು. ಗೊತ್ತಿದೆ ಎಂದು ಅವರು ತೋರಿಸಲು ಹೋದರೆ ಅದನ್ನು ಅಧಿಕ ಪ್ರಸಂಗ ಎಂದು ಹಣೆಪಟ್ಟಿ ಹಚ್ಚಿಬಿಟ್ಟು ಅವರನ್ನು ಅಧೈರ್ಯಗೊಳಿಸಿ ಬಿಟ್ಟರೆ ಆಯಿತಲ್ಲ? ಹೆಣ್ಣು ಮಗು ಇನ್ನೂ ಎಂಥ ಎಷ್ಟು ಅಡೆತಡೆಗಳನ್ನು ದಾಟಿ ಮುಂದೆ ಬರಬೇಕು? ನಮ್ಮದು ಅರ್ಧನಾರೀಶ್ವರ ಕಲ್ಪನೆಯ ದೇಶ ಅಲ್ಲವೇ? ಎಂಥ ವಿಪರ್ಯಾಸ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT