ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆ ನೆಲ ಭಾರತದ್ದಲ್ಲ, ಪಾಕ್‌ನದ್ದೂ ಆಗಿರಲಿಲ್ಲ!

Last Updated 19 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

1962ರ ಭಾರತ-ಚೀನಾ ಯುದ್ಧ ಮುಗಿದಿತ್ತು. ಚೀನೀ ಸೇನೆಗೆ ಸೇರಿದ ಯುವ ಯೋಧ ವಾಂಗ್ ಕಿ. ಪೀಪಲ್ಸ್ ಲಿಬರೇಷನ್ ಆರ್ಮಿಗೆ ರಸ್ತೆ ಮಾಡುವ ತುಕಡಿಯಲ್ಲಿ ಸರ್ವೆಯರ್ ಕೆಲಸ ಆತನದು. 1963ರಲ್ಲಿ ಒಂದು ದಿನ ದಾರಿ ತಪ್ಪಿ ಗಡಿ ದಾಟಿ ಭಾರತದ ನೆಲಕ್ಕೆ ಕಾಲಿಡುತ್ತಾನೆ. ಗುರುತುಪತ್ರವಿಲ್ಲದೆ ಜೈಲುಪಾಲಾಗುತ್ತಾನೆ.

1969ರಲ್ಲಿ ಸೆರೆಮನೆಯಿಂದ ಬಿಡುಗಡೆ. ಎರಡೂ ದೇಶಗಳ ನಿರ್ಲಕ್ಷ್ಯದಲ್ಲಿ ತೊಳಲುತ್ತಾನೆ. ಕತ್ತಲ ರಾತ್ರಿಗಳಲ್ಲಿ ಅಪರಿಚಿತ ನೆಲದಲ್ಲಿ ಅಮ್ಮನ ನೆನೆದು ಅಳುತ್ತಾನೆ. ತನ್ನ ಯೋಧನ ಹಿಂತಿರುಗಿಸಿ ಎಂದು ಚೀನಾ ಕೇಳುವುದಿಲ್ಲ. ಭಾರತ ಕಳಿಸುವುದೂ ಇಲ್ಲ. ಭಾರತದ ಪೌರತ್ವ  ದೊರೆಯುವುದಿಲ್ಲ. ಚೀನಾದ ರಹದಾರಿ ಪತ್ರವೂ ದಕ್ಕುವುದಿಲ್ಲ.

ಪೊಲೀಸರು ವಾಂಗನನ್ನು ಎಲ್ಲೆಲ್ಲೋ ಸುತ್ತಾಡಿಸಿ ಮಧ್ಯಪ್ರದೇಶದ ಒಳನಾಡಿನ ಒಂದು ಹಳ್ಳಿ ತಿರೋಡಿಗೆ ತಂದು ಬಿಡುತ್ತಾರೆ. ತಾಯಿನೆಲಕ್ಕೆ ಕಳಿಸಿ ಎಂಬ ಅವನ ಅಳಲು ಅರಣ್ಯರೋದನವಾಗುತ್ತದೆ. ನೇಪಾಳಿಯಂತೆ ಕಾಣುತ್ತಾನೆಂದು ನೆರೆ ಹೊರೆಯವರು ರಾಜಬಹಾದೂರ್ ಎಂದು ಹೆಸರಿಡುತ್ತಾರೆ. ಕಾವಲು ಚಾಕರಿ ಕೈಗೆಟುಕಿದ ನಂತರ 1975ರಲ್ಲಿ ಸ್ಥಳೀಯ ಯುವತಿ ಸುಶೀಲಳ ಜೊತೆ ಮದುವೆ. ಮಕ್ಕಳು, ಮೊಮ್ಮಕ್ಕಳು. ಐವತ್ತು ವರ್ಷಗಳೇ ಉರುಳಿ ಹೋಗುತ್ತವೆ.

ಚೀನಾದಲ್ಲಿ ತಾನು ಹುಟ್ಟಿ ಬೆಳೆದ ಕುಟುಂಬವನ್ನು ಸೇರಬೇಕೆಂಬ ಹಂಬಲ ಸಾಯುವುದಿಲ್ಲ. ಆತನ ಚಲನವಲನಗಳು ಸಂಶಯಾಸ್ಪದ ಅಲ್ಲ, ಮರಳಲು ನೆರವಾಗುತ್ತೇವೆ ಎಂಬ ಸರ್ಕಾರಿ ಭರವಸೆಗಳು ಕಾರ್ಯರೂಪಕ್ಕೆ ಇಳಿಯುವುದಿಲ್ಲ. ನಲವತ್ತು ವರ್ಷಗಳ ನಂತರ 2002ರಲ್ಲಿ ಅಮ್ಮನೊಂದಿಗೆ ದೂರವಾಣಿಯಲ್ಲಿ ಒಮ್ಮೆ ಮಾತಾಡಿದ್ದೇ ಭಾಗ್ಯ.

ಸಾಯುವ ಮುನ್ನ ಮುಖ ತೋರಿಸು ಎಂದು ಕರುಳಿನ ಕುಡಿಯನ್ನು ಬೇಡುವ ಅಮ್ಮ, ಆಸೆ ತೀರುವ ಮುನ್ನ ತೀರಿಯೇ ಹೋಗುತ್ತಾಳೆ. ತನ್ನ ದೇಶಕ್ಕೆ ಭೇಟಿ ನೀಡಲು ಅವಕಾಶ ಕೋರಿ ಪ್ರಧಾನಿ, ರಾಷ್ಟ್ರಪತಿಗೆ ಬರೆದ ಮನವಿ ಪತ್ರಗಳಿಗೆ ಲೆಕ್ಕವಿಲ್ಲ. ಕಡೆಗೂ 2013ರಲ್ಲಿ ಚೀನಾ ದೇಶ ವಾಂಗನನ್ನು ಗುರುತಿಸಿ ತನ್ನ ನಾಗರಿಕನೆಂದು ಪಾಸ್‌ಪೋರ್ಟ್ ನೀಡುತ್ತದೆ.

ಕಡೆಗೂ ತನ್ನ ತಾಯಿನಾಡಿಗೆ ತೆರಳಲು ವಾಂಗನಿಗೆ ಕಳೆದ ವಾರ ಭಾರತ ಸರ್ಕಾರದಿಂದ ಅನುಮತಿ ದೊರೆಯಿತು. ಇಪ್ಪತ್ತರ ತರುಣನಾಗಿ ಗಡಿ ದಾಟಿದ್ದ ವಾಂಗ್ ಕಳೆದ ವಾರ 77ರ ವೃದ್ಧನಾಗಿ ಮತ್ತೊಮ್ಮೆ ಗಡಿ ದಾಟಿದ್ದಾನೆ. ಮೈ ಹುಷಾರಿಲ್ಲವೆಂದು ಪತ್ನಿ ಸುಶೀಲಮ್ಮ ಪತಿಯ ಜೊತೆಗೆ ತೆರಳಿಲ್ಲ. ಕೈ ಹಿಡಿದು ಜೊತೆಗೆ ಬಾಳಿದವನು ಮರಳಿ ಬಂದೇ ತೀರುತ್ತಾನೆಂಬ ಅಚಲ ನಂಬಿಕೆ ಆಕೆಯದು.

ಮೊದಲ ಮಗ ವಿಷ್ಣು, ಸೊಸೆ ಮತ್ತು ಮೊಮ್ಮಗನೊಂದಿಗೆ ಗಡಿ ದಾಟಿದ್ದಾನೆ ವಾಂಗ್ ಅಲಿಯಾಸ್ ರಾಜಬಹಾದೂರ್. ಶಾಂಕ್ಸಿ ಪ್ರಾಂತ್ಯದ ಆತನ ಹಳ್ಳಿಗೆ ಹಳ್ಳಿಯೇ ಸಡಗರದ ಸ್ವಾಗತ ನೀಡಿದೆ. ರಕ್ತಸಂಬಂಧಿಗಳು ಸಂಭ್ರಮಿಸಿದ್ದಾರೆ. ಪರದೇಸಿಯಾಗಿದ್ದ ನಾಡಿನ ಕುಡಿಯೊಂದು ತನ್ನ ಮಣ್ಣಿಗೆ ಮರಳಿದ ಘಟನೆ ಚೀನೀ ಸಮೂಹ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿ.

ವಾಂಗ್ ಕಿ ಅಲಿಯಾಸ್ ರಾಜಬಹಾದೂರ್ ಅದೃಷ್ಟವಂತ. ಐವತ್ತು ವರ್ಷಗಳ ನಂತರವಾದರೂ ತನ್ನ ನಾಗರಿಕನೆಂದು ತಾಯ್ನಾಡು ಗುರುತಿಸಿದೆ. ಆದರೆ ಒಂದೊಮ್ಮೆ ಒಂದೇ ದೇಶವಾಗಿದ್ದ ಹಿಂದುಸ್ತಾನ- ಪಾಕಿಸ್ತಾನದ ಬಹುಸಂಖ್ಯೆಯ ಸೆರೆಯಾಳುಗಳಿಗೆ ಬಿಡುಗಡೆ ಎಂಬುದು ಬಿಸಿಲುಗುದುರೆ.

ಇತ್ತೀಚೆಗೆ ಸರ್ಕಾರವೇ ಪ್ರಕಟಿಸಿದ ಅಂಕಿ ಅಂಶಗಳ ಪ್ರಕಾರ ಪಾಕಿಸ್ತಾನದ ಜೈಲುಗಳಲ್ಲಿ ಬಂದಿಗಳಾಗಿರುವ ಭಾರತೀಯರ ಸಂಖ್ಯೆ 518. ಈ ಪೈಕಿ 463 ಮಂದಿ ಮೀನುಗಾರರು. ಅಂತೆಯೇ ಭಾರತದ ಜೈಲುಗಳಲ್ಲಿ ಸುಮಾರು 250 ಮಂದಿ ಪಾಕಿಸ್ತಾನಿಗಳಿದ್ದಾರೆ. ಇವರ ಪೈಕಿ ಐವತ್ತು ಮಂದಿಯ ಶಿಕ್ಷೆಯ ಅವಧಿ ತೀರಿದರೂ ಬಿಡುಗಡೆ ಆಗಿಲ್ಲ ಎಂಬ ಸಂಗತಿ ಕುರಿತು ಸುಪ್ರೀಂ ಕೋರ್ಟ್ ತೀವ್ರ ಆತಂಕ ವ್ಯಕ್ತಪಡಿಸಿತ್ತು.

ತನ್ನ ಜೈಲುಗಳಲ್ಲಿನ 17 ಮಂದಿ ಭಾರತೀಯ ಕೈದಿಗಳು ಮತಿಭ್ರಮಣೆಗೆ ಒಳಗಾಗಿದ್ದಾರೆ. ಬಿಡುಗಡೆ ಮಾಡಬೇಕೆಂದರೆ ಅವರ ಗುರುತು ಪತ್ತೆಯೇ ಇಲ್ಲ ಎಂದು ಪಾಕಿಸ್ತಾನ ಕಳೆದ ವರ್ಷ ಹೇಳಿತ್ತು.

ಅಧಿಕಾರಕ್ಕೆ ಸಂಚಕಾರ ಬಂದಾಗಲೆಲ್ಲ ಅಮಾಯಕ ಪ್ರಜೆಗಳನ್ನು ಎತ್ತಿಕಟ್ಟಿ ತಮ್ಮ ಬೇಳೆ ಬೇಯಿಸಿಕೊಳ್ಳುವವರು ಎರಡೂ ದೇಶಗಳ ರಾಜಕಾರಣಿಗಳು. ದೇಶಭಕ್ತಿ ಎಂಬುದು ಇವರ ಪಾಲಿಗೆ ಬೇಕೆಂದಾಗಲೆಲ್ಲ ಉರುಳಿಸಬಹುದಾದ ರಾಜಕೀಯ ದಾಳ.

ಅದೃಶ್ಯ ಗಡಿರೇಖೆಗಳನ್ನು ಅರಿಯದೆ ದಾಟಿದ ಅಪರಾಧಕ್ಕಾಗಿ ಉಭಯ ದೇಶಗಳ ನೂರಾರು ಮೀನುಗಾರರು, ಕುರಿಗಾಹಿಗಳ ಬದುಕು ಎರಡೂ ದೇಶಗಳ ಜೈಲುಗಳಲ್ಲಿ ಸೋರಿ ಹೋಗುತ್ತಿದೆ. ದೇಶ ವಿಭಜನೆಯ ಹೊತ್ತಿನಲ್ಲಿ ಕರುಳುಬಳ್ಳಿಗಳು ಗಡಿಯ ಆಚೀಚೆ ಹಂಚಿ ಹೋದವು. ಪರಸ್ಪರರನ್ನು ಕಣ್ಣ ತುಂಬಿಸಿಕೊಳ್ಳಲು ನಡೆಯುವ ವೀಸಾ ಉಲ್ಲಂಘನೆಗೂ ಕಠಿಣ ಜೈಲುವಾಸ ತಪ್ಪಿದ್ದಲ್ಲ.

ಪಾಕಿಸ್ತಾನದ ಜೈಲುಗಳಲ್ಲಿ ಕೊಳೆಯುತ್ತಿರುವ ಭಾರತೀಯ ಕೈದಿಗಳ ಇನ್ನೊಂದು ವರ್ಗವಿದೆ. ಅದು ನಮ್ಮ ಆಳುವ ವ್ಯವಸ್ಥೆ ತರಬೇತಿ ಕೊಟ್ಟು, ಹಲವು ಸಾವಿರ ರೂಪಾಯಿಗಳನ್ನು ಕೈಗಿಟ್ಟು ಗಡಿಯಾಚೆಗೆ ತಳ್ಳುವ ಬಡ ಬೇಹುಗಾರರದು. ಇವರ್‌ ಯಾರೂ ಅಧಿಕೃತ ಸರ್ಕಾರಿ ಉದ್ಯೋಗಿಗಳಲ್ಲ. ಪಾಕಿಸ್ತಾನದ ಕೈಗೆ ಸಿಕ್ಕು ಬಿದ್ದರೆ, ಇವರು ನಮ್ಮ ನಾಗರಿಕರೆಂದು ಭಾರತ ಸರ್ಕಾರ ಒಪ್ಪಿಕೊಳ್ಳುವಂತಿಲ್ಲ.

ಅಲ್ಲಿಯೇ ಅಸುನೀಗುವ ಇಲ್ಲವೇ ಹತ್ತಾರು ವರ್ಷಗಳ ಸೆರೆವಾಸದ ನಂತರ ಹಿಂದಿರುಗಿರುವ ಹತ್ತಾರು ಬೇಹುಗಾರರು ಇಂದಿಗೂ ಕಡುಬಡತನದಲ್ಲಿ ದಿನ ದೂಡುತ್ತಿದ್ದಾರೆ. ಕೈ ತುಂಬ ಹಣ ಮತ್ತು ಸರ್ಕಾರಿ ಉದ್ಯೋಗದ ಹುಸಿ ಭರವಸೆಗಳಿಗೆ ಬಲಿಯಾದ ಈ ನಿರ್ಗತಿಕರು ಪುಡಿಗಾಸು ಸಿಕ್ಕರೂ ಗಡಿ ದಾಟುವವರು.

1971ರ ಬಾಂಗ್ಲಾ ವಿಮೋಚನೆಯ ಯುದ್ಧದಲ್ಲಿ ಶರಣಾದ 96 ಸಾವಿರ ಪಾಕ್ ಯೋಧರನ್ನು ಭಾರತ ಬಿಡುಗಡೆ ಮಾಡಿತು. ಹಾಗೆಯೇ ಪಾಕಿಸ್ತಾನಕ್ಕೆ ಸೆರೆಸಿಕ್ಕ 400 ಭಾರತೀಯ ಯೋಧರು ತಾಯ್ನಾಡಿಗೆ  ಮರಳಿದರು. ನಾಪತ್ತೆಯಾಗಿರುವ 54 ಮಂದಿ ಭಾರತೀಯ ಯೋಧರ ಗತಿ ಏನಾಯಿತೆಂದು ಇದುವರೆಗೂ ತಿಳಿದು ಬಂದಿಲ್ಲ. ಇವರ ಪೈಕಿ ಬಹುಮಂದಿ ಪಾಕಿಸ್ತಾನದ ಜೈಲುಗಳಲ್ಲಿ ಚಿತ್ರಹಿಂಸೆಗೆ ಗುರಿಯಾಗಿ ಮತಿಭ್ರಮಣೆಯಾಗಿ ತಮ್ಮ ಗುರುತು ಪತ್ತೆಯನ್ನೇ ಮರೆತು ಸತ್ತು ಹೋದರೆನ್ನುತ್ತವೆ ವರದಿಗಳು.

ಗಲ್ಲು ಶಿಕ್ಷೆಗೆ ಗುರಿಯಾಗುವ ಮುನ್ನ ಪಾಕಿಸ್ತಾನಿ ಪ್ರಧಾನಿ ಝುಲ್ಫಿಕರ್ ಅಲಿ ಭುಟ್ಟೋ ಲಾಹೋರಿನ ಕೋಟ್ ಲಖಪತ್ ಜೈಲಿನಲ್ಲಿದ್ದರು. ಹತ್ತು ಅಡಿ ಗೋಡೆಯಾಚೆಗೆ ರಾತ್ರಿ ಕೇಳಿಬರುತ್ತಿದ್ದ ಚೀತ್ಕಾರಗಳು ಆತನನ್ನು ವಿಚಲಿತಗೊಳಿಸುತ್ತಿದ್ದವು. ಅವು ಚಿತ್ರಹಿಂಸೆಗೆ ಗುರಿಯಾಗಿದ್ದ, 1971ರ ಯುದ್ಧದ ಭಾರತ ಯುದ್ಧ ಕೈದಿಗಳ ಚೀತ್ಕಾರಗಳು ಎಂದು ಭುಟ್ಟೋಗೆ ಆನಂತರ ತಿಳಿಯಿತೆಂಬ ಉಲ್ಲೇಖ ಬಿ.ಬಿ.ಸಿ.ಯ ಹಿರಿಯ ಪತ್ರಕರ್ತೆ ವಿಕ್ಟೋರಿಯಾ ಶೊಫೀಲ್ಡ್ ಬರೆದ ‘ಭುಟ್ಟೋ ಟ್ರಯಲ್ ಅಂಡ್ ಎಕ್ಸಿಕ್ಯೂಷನ್’ ಪುಸ್ತಕದಲ್ಲಿ ಉಂಟು.

ಈ ಕೈದಿಗಳ ಇರವನ್ನು ಪಾಕಿಸ್ತಾನ ಅಲ್ಲಗಳೆಯಿತು. ಆದರೆ ಈ ಪೈಕಿ ಹಲವು ಕೈದಿಗಳು ಪಾಕ್ ಜೈಲುಗಳಲ್ಲಿರುವ ಛಾಯಾಚಿತ್ರಗಳು ‘ಟೈಮ್’ ಪತ್ರಿಕೆಯಲ್ಲಿ ಪ್ರಕಟವಾದವು.

ಸೆರೆಯಾಳುಗಳ ಪಟ್ಟಿಯನ್ನು ಉಭಯ ದೇಶಗಳು ಆರು ತಿಂಗಳಿಗೊಮ್ಮೆ ವಿನಿಮಯ ಮಾಡಿಕೊಳ್ಳಬೇಕೆಂಬ ಒಪ್ಪಂದವೊಂದು 2008ರಲ್ಲಿ ಏರ್ಪಟ್ಟಿತು. ಈ ಸೆರೆಯಾಳುಗಳನ್ನು ಸಂಪರ್ಕಿಸುವ ಅವಕಾಶವನ್ನೂ ಆಯಾ ದೇಶಗಳ ದೂತಾವಾಸಗಳಿಗೆ ನೀಡಲಾಯಿತು. ಎರಡೂ ದೇಶಗಳ ಜೈಲುಗಳಿಗೆ ಭೇಟಿ ನೀಡಬಲ್ಲ ಭಾರತ-ಪಾಕಿಸ್ತಾನ ನ್ಯಾಯಾಂಗ ಸಮಿತಿ ಕೂಡ ಅಸ್ತಿತ್ವಕ್ಕೆ ಬಂದಿದೆ. ಆದರೆ ಪರಿಣಾಮ ಶೂನ್ಯ. ಉಭಯ ದೇಶಗಳ ಮಾತುಕತೆಯ ಮೇಜಿನ ಚರ್ಚೆ ಕಾಶ್ಮೀರ, ಸಿಯಾಚಿನ್, ಸರ್ ಕ್ರೀಕ್, ಭಯೋತ್ಪಾದನೆ ಸುತ್ತಲೇ ಗಿರಕಿ ಹೊಡೆಯುತ್ತದೆ.

ಎರಡೂ ದೇಶಗಳ ಕಾರಾಗೃಹಗಳ ಕತ್ತಲಲ್ಲಿ ದೈಹಿಕವಾಗಿ, ಮಾನಸಿಕವಾಗಿ ನರಳಿ ಕಡೆಗೊಮ್ಮೆ ಜೀವಶವಗಳಾಗಿ ಹೊರಬೀಳುವ ಇಲ್ಲವೇ ಅಲ್ಲಿಯೇ ಅಸುನೀಗುವ ಮಾನವದುರಂತ ಮಾತುಕತೆಯ ಪ್ರಮುಖ ಕಾರ್ಯಸೂಚಿ ಆಗುವುದೇ ಇಲ್ಲ. ಆಳುವವರ ಪಾಲಿಗೆ ದೇಶ, ಸರಹದ್ದು, ಸಾರ್ವಭೌಮತ್ವ ಹಾಗೂ ಭೂ ಭಾಗಗಳೇ ದೇಶ. ದೇಶವೆಂದರೆ ಆ ನೆಲದ ಜೀವಂತ ಜನರು ಎಂದು ಭಾವಿಸಿಯೇ ಇಲ್ಲ.

ನಡುವೆ ಗಡಿ ರೇಖೆಗಳನ್ನು ಕೊರೆದು ಜನಸಮುದಾಯಗಳನ್ನು ದೇಶ– ಧರ್ಮಗಳ ನಡುವೆ ಹಂಚಿ ವಿಭಾಗಿಸುವ ಪಟ್ಟಭದ್ರ ಹಿತಾಸಕ್ತಿಗಳು ಮಾನವೀಯ ದುರಂತಗಳಿಗೆ ಮಿಡಿಯುವ ಸೂಕ್ಷ್ಮ ಮನಸುಗಳನ್ನು ಎಲ್ಲ ಕಾಲಕ್ಕೂ ಕಳೆದುಕೊಂಡುಬಿಟ್ಟಿವೆ. ಹಿಂದೂ ಅಲ್ಲದೆ ಮುಸ್ಲಿಮನೂ ಆಗದೆ ಪಾಕಿಸ್ತಾನಕ್ಕೂ ಸೇರದೆ, ಭಾರತವನ್ನೂ ಬಯಸದೆ ಎರಡೂ ನಾಡುಗಳ ಗಡಿಯ ನಡುವಣ ತಟಸ್ಥ ನೆಲವನ್ನು ರೂಪಕ ಆಗಿಸಿ ಬರೆದು ಯಾತನೆಯಲ್ಲೇ ಬದುಕಿ ಸತ್ತ ಅಪ್ಪಟ ಮನುಷ್ಯ ಸಾದತ್ ಹಸನ್ ಮಂಟೋ.

ಹುಸಿ ದೇಶಭಕ್ತಿಯ ಕಿಚ್ಚು ಹೊತ್ತಿಸಿ ಒಡೆದು ಆಳುವವರು ಗಡಿಗಳೆಂಬ ಕೃತ್ರಿಮ ಗೆರೆಗಳನ್ನು ಕೊರೆದು, ಜೊತೆಯಾಗಿ ಜೀವಿಸಿದವರ ಕೈಗೆ ಕತ್ತಿಗಳನ್ನೂ ಕೊಳ್ಳಿಗಳನ್ನೂ ಇಟ್ಟ ದುರಂತ ಪರಿಣಾಮಗಳಿಗೆ ಮಂಟೋನಷ್ಟು ಮನೋಜ್ಞವಾಗಿ ಅಕ್ಷರರೂಪ ನೀಡಿದವರು, ವಿಭಜನೆ ವಿದ್ವೇಷಗಳ ನಿರರ್ಥಕತೆಗೆ ಕಣ್ಣು ಕುಕ್ಕುವಂತೆ ಕನ್ನಡಿ ಹಿಡಿದವರು ಮತ್ತೊಬ್ಬರು ಇರಲಾರರು. ಅವುಗಳಲ್ಲೊಂದು ಸಣ್ಣ ಕತೆಯ ಹೆಸರು ‘ತೋಬಾ ತೇಕ್ ಸಿಂಗ್’. ದೇಶವಿಭಜನೆಯಾದ ಹೊಸತು. ಗರಬಡಿದು ರಕ್ತದೋಕುಳಿಯಲ್ಲಿ ಮುಳುಗೆದ್ದ ಮನುಷ್ಯತ್ವ ಇನ್ನೂ ಮೈ ತೊಳೆದಿರಲಿಲ್ಲ.

ಹಿಂದುವಿಗಾಗಿ ಮುಸಲ್ಮಾನನ, ಮುಸಲ್ಮಾನನಿಗಾಗಿ ಹಿಂದುವಿನ ರಕ್ತದಾಹ ಪೂರ್ತಿ ತಣಿದಿರಲಿಲ್ಲ. ದಿನಬೆಳಗಾಗುವುದರೊಳಗೆ ಹಿಂದುಸ್ತಾನ- ಪಾಕಿಸ್ತಾನದ ನಡುವೆ ಗಡಿ ಎಂಬ ತಡೆಗೋಡೆ ಬಾನೆತ್ತರಕ್ಕೆ ಎದ್ದು ನಿಂತು ಹೂಂಕರಿಸಿ ಬೆದರಿಸತೊಡಗಿತ್ತು. ಗಡಿಯ ಆಚೆ ಮತ್ತು ಈಚೆ ಇದ್ದ ಹುಚ್ಚಾಸ್ಪತ್ರೆಗಳಲ್ಲಿನ ಹುಚ್ಚರನ್ನು ವಿನಿಮಯ ಮಾಡಿಕೊಳ್ಳುವ ಆಲೋಚನೆ ಬರುತ್ತದೆ. ಭಾರತದಲ್ಲಿನ ಮುಸ್ಲಿಂ ಹುಚ್ಚರನ್ನು ಪಾಕಿಸ್ತಾನಕ್ಕೂ, ಪಾಕಿನ ಹಿಂದೂ-ಸಿಖ್ ಹುಚ್ಚರನ್ನು ಹಿಂದುಸ್ತಾನಕ್ಕೂ ಗದುಮುವ ಆಲೋಚನೆ ಕಾರ್ಯರೂಪಕ್ಕೆ ಬರುತ್ತದೆ.

ಎರಡೂ ದೇಶಗಳು ಹುಚ್ಚರನ್ನು ಗಡಿಯ ಬಳಿಗೆ ಒಯ್ದು ತಳ್ಳುತ್ತಾರೆ. ಬಹಳಷ್ಟು ಹುಚ್ಚರಿಗೆ ತಮ್ಮ ನೆಲ ಇದ್ದಕ್ಕಿದ್ದಂತೆ ಪಾಕಿಸ್ತಾನ ಅಥವಾ ಹಿಂದುಸ್ತಾನವೋ ತಿಳಿಯದು. ಪಾಕಿಸ್ತಾನದ ಹುಚ್ಚಾಸ್ಪತ್ರೆಯ ಹುಚ್ಚು ಮುದುಕ ಬಿಷನ್ ಸಿಂಗ್ ತೋಬಾ ತೇಕ್ ಸಿಂಗ್ ಎಂಬ ಊರಿಗೆ ಸೇರಿದವನು. ಹುಚ್ಚಾಸ್ಪತ್ರೆಯಲ್ಲಿ ಅವನ ನಿಜ ಹೆಸರು ಅಳಿಸಿ ಊರಿನ ಹೆಸರೇ ಅಂಟಿ ಹೋಗಿತ್ತು. ಆದರೆ ಅವನ ಊರಿದ್ದ ಭೂಮಿಯ ತುಂಡು ಹೊಸ ದೇಶ ಪಾಕಿಸ್ತಾನಕ್ಕೆ ಸೇರಿ ಹೋಗಿತ್ತು.

ಎರಡೂ ದೇಶಗಳು ಹುಚ್ಚರನ್ನು ಗಡಿಗೆ ತಂದು ವಿನಿಮಯ ಮಾಡಿಕೊಂಡವು. ತನ್ನ ಹುಟ್ಟೂರು ತೋಬಾ ತೇಕ್ ಹೊಸ ದೇಶ ಪಾಕಿಸ್ತಾನಕ್ಕೆ ಸೇರಿದೆ ಎಂದು ಆಗ ತಾನೇ ತಿಳಿದ ತೇಕ್ ಸಿಂಗ್ ಭಾರತಕ್ಕೆ ಹೋಗಲಾರೆನೆಂದು ರಚ್ಚೆ ಹಿಡಿದ. ಅವನಂತೆ ನೆಲಕಚ್ಚಿ ನಿಂತವರನ್ನು ಪಾಕಿಸ್ತಾನದಿಂದ ಹಿಂದುಸ್ತಾನಕ್ಕೂ, ಹಿಂದುಸ್ತಾನದಿಂದ ಪಾಕಿಸ್ತಾನಕ್ಕೂ ಬಲವಂತವಾಗಿ ದಬ್ಬಲಾಗುತ್ತದೆ. ಆದರೆ ಕೈಗೆ ಸಿಗದೆ ಓಡಿ ಕಾಡಿಸುವ ತೇಕ್ ಸಿಂಗನನ್ನು ನಿರಪಾಯಕಾರಿ ಮುದುಕನೆಂದು ನಿರ್ಲಕ್ಷಿಸಲಾಗುತ್ತದೆ.

ಎರಡೂ ಕಡೆಯ ಹುಚ್ಚರನ್ನು ವಿರುದ್ಧ ದಿಕ್ಕುಗಳಲ್ಲಿ ತಳ್ಳಿ ಮುಗಿಸಿ ಬೆಳಕು ಹರಿಯುವ ಹೊತ್ತಿಗೆ ಪುನಃ ತೇಕ್ ಸಿಂಗ್ ಸರದಿ. ಹಠಾತ್ತನೆ ಕಿವಿ ಸೀಳುವ ಚೀರಾಟ ಆತನದೇ. ಧಾವಿಸಿ ನೋಡಿದರೆ ನೆಲಕ್ಕೆ ಕುಸಿದಿದ್ದ ತೇಕ್ ಸಿಂಗ್ ಉಸಿರು ನಿಂತಿತ್ತು.

15 ವರ್ಷಗಳ ಕಾಲ ಹುಚ್ಚಾಸ್ಪತ್ರೆಯಲ್ಲಿ ಒಮ್ಮೆಯೂ ಕುಳಿತುಕೊಳ್ಳದೆ ಬಿಟ್ಟ ಕಣ್ಣು ಮುಚ್ಚದೆ ಬಾತ ಕಾಲುಗಳ ನೋವಿಗೆ ಮರಗಟ್ಟಿದಂತೆ ನಿಂತೇ ತನ್ನೂರಿನ ಹೆಸರನ್ನು ಮಣಮಣ ಗೊಣಗುತ್ತಿದ್ದ ತೇಕ್ ಸಿಂಗ್ ಮೊದಲ ಸಲ ನೆಲಕ್ಕೊರಗಿದ್ದ. ಪಾಕಿಸ್ತಾನ ಮತ್ತು ಹಿಂದುಸ್ತಾನದ ಎರಡು ಮುಳ್ಳುಬೇಲಿಗಳ ನಡುವಿನ ಆ ನೆಲ ತಟಸ್ಥ ಭೂಮಿಯ ತುಂಡು. ಹಿಂದುಸ್ತಾನಕ್ಕೂ ಸೇರಿರಲಿಲ್ಲ ಪಾಕಿಸ್ತಾನದ್ದೂ ಆಗಿರಲಿಲ್ಲ! ಜಾತಿ ಮತ ದೇಶ ಭಾಷೆಗಳ ನಡುವೆ ಮನುಷ್ಯ ಕೊರೆದಿರುವ ವಿಭಜನೆಯ ಗಡಿ ಗೆರೆಗಳ ನಡುವಣ ತಟಸ್ಥ ಮಾನವೀಯ ನೆಲದ ಮಂಟೋ ರೂಪಕ ಎಂದೆಂದಿಗೂ ಪ್ರಸ್ತುತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT