ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಕಸ್ಮಿಕವಾಗಿ ಹೊಳೆಯುವ ಉಪಾಯ

Last Updated 10 ಜನವರಿ 2015, 8:20 IST
ಅಕ್ಷರ ಗಾತ್ರ

ಒಬ್ಬ ಬೇಟೆಗಾರ ಹಕ್ಕಿಗಳನ್ನು ಹಿಡಿದು, ಸಾಕಿ ನಂತರ ಒಳ್ಳೆಯ ಬೆಲೆಗೆ ಅವುಗಳನ್ನು ಮಾರಿ ಬದುಕು ಸಾಗಿ­ಸುತ್ತಿದ್ದ. ಒಂದು ಬಾರಿ ಅವನಿಗೊಂದು ಅಪರೂಪದ ಪಕ್ಷಿ ಸಿಕ್ಕಿತು. ಅದರ ಬಣ್ಣ ಬಣ್ಣದ ಗರಿಗಳು, ಸುಂದರವಾದ ಚುಂಚು, ಕೆಂಪಾದ ಕಣ್ಣುಗಳು ತುಂಬ ಆಕರ್ಷಕವಾಗಿದ್ದವು. ಬೇಟೆಗಾರ ಅದನ್ನು ಸ್ವಲ್ಪ ದಿನ ಬೆಳೆಸಿ ಮತ್ತಷ್ಟು ಮೈಯಲ್ಲಿ ಮಾಂಸ ತುಂಬಿದ ಮೇಲೆ ಮಾರಾಟ ಮಾಡುವುದೆಂದು ನಿರ್ಧರಿಸಿ ಪಂಜರದಲ್ಲಿಟ್ಟ. ಅದು ಪಾರಾಗುವುದು ಹೇಗೆಂದು ತಿಳಿಯದೆ ಒದ್ದಾಡುತ್ತಿತ್ತು. ಹೀಗಿರುವಾಗ ಬೇಡನ ಮನೆಗೆ ಒಬ್ಬ ಸನ್ಯಾಸಿನಿ ಬಂದಳು. ಈ ಪಕ್ಷಿಯನ್ನು ನೋಡಿ ಅದರ ಕಷ್ಟವನ್ನು ತಿಳಿದಳು. ಬೇಡ ಹೊರಗೆ ಹೋದಾಗ ಪಕ್ಷಿ ಆಕೆಯನ್ನು ಪಂಜರದಿಂದ ಪಾರಾಗುವ ವಿಧಾನವನ್ನು ಕೇಳಿತು. ಆಗ ಆಕೆ ತನ್ನ ಕಥೆ ಹೇಳಿದಳು.

‘ಪಕ್ಷಿ, ಸಂಕ್ಷಿಪ್ತವಾಗಿ ನನ್ನ ಕಥೆ ಹೇಳುತ್ತೇನೆ.  ಅದರಿಂದ ನಿನಗೆ ಏನಾ­ದರೂ ಉಪಾಯ ಹೊಳೆದರೆ ಬಳ­ಸಿಕೋ. ಹತ್ತು ವರ್ಷಗಳ ಹಿಂದೆ ನಾನು ಒಂದು ಹಳ್ಳಿಯಲ್ಲಿದ್ದೆ. ನನ್ನ ತಂದೆ-ತಾಯಿಯರು ಅತ್ಯಂತ ಬಡವರು. ನನಗೆ ಭಗವಂತ ನೀಡಿದ ಅಪರೂಪದ ಸೌಂದರ್ಯವಿತ್ತು. ಒಂದು ದಿನ ಪಟ್ಟ­ಣದ ನಾಲ್ಕಾರು ಜನ ಬಂದು ತಂದೆ ತಾಯಿ ಕೊಂದು ನನ್ನನ್ನೆತ್ತಿಕೊಂಡು ಹೋದರು. ಮನೆಯೊಂದ­ರಲ್ಲಿ ಬಂಧಿ­ಸಿಟ್ಟು, ಮರುದಿನ ಅಲ್ಲಿಯ ವೇಶ್ಯಾ­ಗೃಹಕ್ಕೆ ಮಾರಿಬಿಟ್ಟರು. ಆ ಮನೆಯ ಯಜಮಾನಿಯನ್ನು ನಾನು ಯಾವ ಪರಿಯಲ್ಲಿ ಕೇಳಿಕೊಂಡರೂ ಆಕೆಯಲ್ಲಿ ಕರುಣೆ ಬರಲಿಲ್ಲ. ಬದಲಾಗಿ ನನ್ನ ಅವಸ್ಥೆಯನ್ನು ನೋಡಿ ನಕ್ಕಳು.

ಆಕೆಯ ಹೊಳೆಯುವ ಹಲ್ಲುಗಳನ್ನು ನೋಡಿ­ದಾಗ ನನಗೊಂದು ವಿಚಾರ ಹೊಳೆ­ಯಿತು. ನನ್ನ ರೂಪದಿಂದ ತಾನೇ ಇವರಿಗೆಲ್ಲ ಆಕರ್ಷಣೆ? ನಾನು ಆ ಮಹಿಳೆಯ ಹಲ್ಲಿನ ಎಲುಬಿನಂತೆ ಎಲುಬೇ ಆಗಿಬಿಟ್ಟರೆ ನನ್ನನ್ನು ಯಾರು ಬಯಸಿಯಾರು? ಹೀಗೆ ಯೋಚಿಸಿ ಆರೋಗ್ಯ ಸರಿ ಇಲ್ಲವೆಂದು ಅನ್ನ-ಅಹಾರಗಳನ್ನು ಪೂರ್ತಿ ಬಿಟ್ಟು ಒಂದು ತಿಂಗಳಲ್ಲಿ ಮೂಳೆಯ ಹಂದರವೇ ಆಗಿ ಹೋದೆ. ವೇಶ್ಯಾಗೃಹಕ್ಕೆ ಬಂದ ಯಾರೂ ನನ್ನತ್ತ ತಿರುಗಿಯೂ ನೋಡಲಿಲ್ಲ. ಮನೆಯ ಯಜಮಾನಿ ನನಗೆ ಊಟಕ್ಕೆ ಹಾಕುವುದು ದಂಡವೆಂದು ತಿಳಿದು ಹೊರಗೆ ಹಾಕಿದಳು. ನನಗೂ ಅದೇ ಬೇಕಾಗಿತ್ತು.  ಅಲ್ಲಿಂದ ಹೊರಟು ನನಗೆ ಬೇಕಾದ ಸನ್ಯಾಸ ಪಡೆದು ಸಂತೋಷ­ವಾಗಿದ್ದೇನೆ’. ಈ ಮಾತು ಕೇಳಿ ಪಕ್ಷಿಗೆ ಸಂತೋಷವಾಯಿತು. ಅದೂ ಕೂಡ ಪಂಜರದಲ್ಲಿ ತಂದಿಟ್ಟ ಯಾವ ಆಹಾರ­ವನ್ನು ತೆಗೆದುಕೊಳ್ಳುವುದನ್ನು ಬಿಟ್ಟಿತು. ಬೇಡನಿಗೆ ಚಿಂತೆಯಾಯಿತು.

ಆತ ಪಕ್ಷಿಗೆ ಇಷ್ಟವಾಗಬಹುದಾದ ಕಾಳುಗಳನ್ನು ತಂದು ಹಾಕಿದ. ಆದರೆ ಅದು ಏನನ್ನು ತಿನ್ನದೇ ಸುಮ್ಮನೇ ಬಿದ್ದುಕೊಂಡಿತ್ತು.  ಮರುದಿನದಿಂದ ನೀರನ್ನು ಕುಡಿಯಲಿಲ್ಲ. ಮೂರು-ನಾಲ್ಕು ದಿನಗಳಲ್ಲಿ ಅದು ಬರೀ ಮೂಳೆ ಚಕ್ಕಳವಾಯಿತು.  ಐದನೇ ದಿನ ಅದು ಪಂಜರದಲ್ಲಿ ಬಿದ್ದುಕೊಂಡಿದ್ದಾಗ ಅದು ಸತ್ತೇ ಹೋಯಿತೋ ಎಂದು ನೋಡಲು ಬೇಡ ಅದನ್ನು ಹೊರಗೆ ತೆಗೆದು ನೆಲದ ಮೇಲಿಟ್ಟ. ಅವನ ಕೈಯಿಂದ ಬಿಡುಗಡೆ ಪಡೆದ ತಕ್ಷಣ ಪಕ್ಷಿ ಗರಿಗೆದರಿ ಹಾರಿ ಹೋಗಿ ಮರದ ಮೇಲೆ ಕುಳಿತಿತು. ನಂತರ ತನ್ನ ಆಹಾರ ಸಂಪಾದಿಸಿಕೊಂಡು, ಸುಧಾರಿಸಿ ತನ್ನ ಗೂಡಿಗೆ ಮರಳಿ ಹೋಯಿತು. ತರುಣಿಗೆ ಪಾರಾಗುವ ವಿಧಾನ ಹೊಳೆದದ್ದು ಯಜಮಾನಿಯ ಹಲ್ಲುಗಳನ್ನು ಕಂಡಾಗ.  ಪಕ್ಷಿಗೆ ತಾನು ಪಾರಾಗುವ ವಿಧಾನ ತಿಳಿದದ್ದು ಸನ್ಯಾಸಿನಿಯ ಜೀವ­ನದ ಪ್ರಸಂಗದಿಂದ.  ನಮಗೂ ನಮ್ಮ ಸಮಸ್ಯೆಗಳಿಗೆ ಪರಿಹಾರ ದೊರೆ­ಯು­ವುದು ಯಾವುದೋ ಒಂದು ಮಾತಿ­ನಿಂದ, ಘಟನೆಯಿಂದ, ಉದಾಹರಣೆ­ಯಿಂದ. ಯಾವುದೇ ಅನುಭವವನ್ನು ವ್ಯರ್ಥವೆಂದು ಪರಿಗಣಿಸದೇ ಗಮನಿ­ಸಿದರೆ ಅದು ನಮ್ಮ ಬದುಕಿನ ಕಠಿಣ  ಪ್ರಸಂಗಗಳಲ್ಲಿ ಊರುಗೋಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT