ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಟ ನಿಲ್ಲಿಸಿದ ಮೋಡಿಗಾರರು!

ಅಕ್ಷರ ಗಾತ್ರ

ಪೆಕರ ಬಹಳ ಡಲ್ಲಾಗಿದ್ದ. ವಾಂಖೆಡೆ ಕ್ರೀಡಾಂಗಣದಲ್ಲಿ ನೆಚ್ಚಿನ ‘ದೇವರ’ ಹೆಸರು ಕೂಗಿ ಕೂಗಿ ಗಂಟಲು ಬೇರೆ ಬಿದ್ದು ಹೋಗಿತ್ತು. ದೇವರೇ ಶತಕ ಹೊಡಿ, ಆಮೇಲೆ ನಡಿ ಎಂದು ಕೂಗಿಕೊಂಡದ್ದೆಲ್ಲಾ ತಿರುಪತಿ ತಿರುಮಲನಿಗೆ ಕೇಳಲೇ ಇಲ್ಲ. ಆದರೂ ಸೊಗಸಾದ ಕಟ್‌ಗಳ ಮೂಲಕ ಎಪ್ಪತ್ನಾಲ್ಕು ರನ್‌ ಸಿಡಿಸಿ, ಸಬ್‌ಕೋ ಸಲಾಮ್‌ ಎಂದು ಹೇಳುತ್ತಾ ನಿವೃತ್ತಿಯೇ ಆಗಿಬಿಟ್ಟ ರನ್‌ಮಷಿನ್‌ ಅವರನ್ನು ಮತ್ತೊಮ್ಮೆ ಮೈದಾನದಲ್ಲಿ ನೋಡಲಾಗದಲ್ಲ ಎಂಬ ದುಃಖದಲ್ಲಿ ಭಾರವಾದ ಹೃದಯದಿಂದ ವಾಪಸು ಬಂದ.

‘ಯಾಕ್ರೀ, ಪೆಕರ ಅವರೇ, ಬಹಳ ದುಃಖದಲ್ಲಿದ್ದೀರಿ, ಏನ್ಸಮಾಚಾರ?’ ಎಂದು ಅವನ ಆತ್ಮೀಯ ಸ್ನೇಹಿತರು ಕೇಳಿಯೇ ಬಿಟ್ಟರು.

‘ದೇವರು ನಿವೃತ್ತಿ ಆಗಿಬಿಟ್ಟರು’ ಪೆಕರ ಕ್ಷೀಣವಾಗಿ ಉತ್ತರಿಸಿದ.
‘ಮೂಢನಂಬಿಕೆ, ಮೌಢ್ಯ ನಿಷೇಧ ಕಾಯ್ದೆ ಜಾರಿಯಾಗಿಬಿಟ್ಟಿತಾ?!’ ಸ್ನೇಹಿತರು ಬೆಚ್ಚಿ ಬಿದ್ದು ಪ್ರಶ್ನಿಸಿದರು.

‘ಛೆ! ನಾನೇನು ಹೇಳ್ತಾ ಇದ್ದೀನಿ, ನೀವೇನು ಕೇಳ್ತಾ ಇದ್ದೀರಿ? ನಾನು ಹೇಳಿದ್ದು ಕ್ರಿಕೆಟ್‌ ದೇವರ ಬಗ್ಗೆ. ಬಹಳ ಬೇಜಾರಾಗ್ತಾ ಇದೆ, ತಮಾಷೆ ಮಾಡ್ಬೇಡಿ’ ಪೆಕರ ವಿವರಿಸಿದ.

‘ದೇವರುಗಳೇ ರಿಟೈರ್ ಆಗೋದನ್ನು ನಾನು ಇವತ್ತೇ ಕೇಳಿದ್ದು. ಇನ್ನೆಲ್ಲಿಯ ಆಟ? ಹಾಗಾದ್ರೆ, ‘ಸರ್ಕಾರಿ ಕೆಲಸ ದೇವರ ಕೆಲಸ’ ಅಂತಾ ಹೇಳ್ತಾರಲ್ಲಾ ಸರ್ಕಾರಿ ದೇವರುಗಳೂ ರಿಟೈರ್ ಆಗಿಬಿಡ್ತಾರಾ?’

‘ಸುಮ್ನಿರಿ ಸಾರ್‌, ನಿಮಗೆ ತಮಾಷೆನೇ ಆಗೋಯ್ತು. ದೇವರು ಕೊನೇ ಆಟದಲ್ಲಾದರೂ ಶತಕ ಹೊಡೀಬಹುದು ಅಂತ ಬೆಟ್ಟಿಂಗ್‌ ಕಟ್ಟಿದ್ದೆ. ನನ್‌ ಬೇಜಾರ್‌ ನನಗೆ, ನಿಮಗೆ ಬೇಜಾನ್‌ ಪ್ರಶ್ನೆ’ ಎಂದು ಪೆಕರ ಮತ್ತೆ ದುಃಖ ತೋಡಿಕೊಂಡ.

‘ಅಯ್ಯೋ ಅದ್‌ಬೇರೆ, ನಿಮ್ಮ ದೇವರು ಸೆಂಚುರಿ ಹೊಡೆದಾಗಲೆಲ್ಲಾ ಬಹುತೇಕ ಮ್ಯಾಚ್‌ ತೋಪೆದ್ದು ಹೋಗಿದೆ ಅನ್ನೋದನ್ನ ಮರೀಬೇಡಿ ಪೆಕರ ಅವರೇ. ಇಪ್ಪತ್ನಾಲ್ಕು ವರ್ಷದಿಂದ ಆಡಿದ್ದು ಸಾಕು, ನಿವೃತ್ತಿ ಬೇಕು. ನಿಮ್ಮ ದೇವರು ತರಹವೇ ಐವತ್ತು ಅರವತ್ತು ವರ್ಷದಿಂದ ರಾಜಕೀಯ ರಂಗದಲ್ಲಿ ಪಟ್ಟಭದ್ರರಾಗಿ ಕುಳಿತಿರುವ ರಾಜಕೀಯ ದ್ಯಾವ್ರುಗಳೂ ನಿವೃತ್ತರಾದರೆ ಜನ ಸರಾಗವಾಗಿ ಉಸಿರಾಡ್ಕೊಂಡು ಇರಬಹುದಲ್ಲವೇ?’ ಪೆಕರನ ಸ್ನೇಹಿತರು ಹೊಸ ಐಡಿಯಾವೊಂದನ್ನು ಮುಂದಿಟ್ಟರು.

ಹೌದಲ್ಲಾ ಎಂದುಕೊಂಡ ಪೆಕರ. ನಮ್ಮ ರಾಜಕೀಯ ದೇವರುಗಳ ನಿವೃತ್ತಿ ಯಾವಾಗ? ಕೇಳಿಯೇ ಬಿಡೋಣ ಎಂದು ನಿರ್ಧರಿಸಿದ.

ಆದರೂ ‘ದೇವರ’ ಗುಂಗು ಪೆಕರನನ್ನು ಆವರಿಸಿಕೊಂಡಿತ್ತು. ಅವನ ಕವಿ ಮನಸ್ಸು ತುಂಬಿ ಬಂತು.

ಕನಸು ನಂಬಿ ಕೋಟೆ ಸುತ್ತ
ತೋಡಿದರೂ ಸಿಗಲಿಲ್ಲ
ನೂರು ಟನ್‌ ಚಿನ್ನ
ಅಡವಿಡ್ತಾರಂತೆ ದೇವರ ಚಿನ್ನ
ರೆಡ್ಡಿ ಮನೆ ಕುರ್ಚಿಯೂ ಚಿನ್ನ
ವಿದಾಯ ಹೇಳಿಯೇ ಬಿಟ್ನಲ್ಲ
ನಮ್ಮ ಸ‘ಚಿನ್ನ’

ಹೀಗೆ, ನವ್ಯ ಕವಿಯಂತೆ ಗುನುಗುತ್ತಾ ಪೆಕರ ದೊಡ್ಡಗೌಡರ ಮನೆ ತಲುಪಿದ. ತಮ್ಮದೇ ಟಿ.ವಿ.ಯಲ್ಲಿ ತಮ್ಮದೇ ಸಂದರ್ಶನ ನೋಡುತ್ತಾ ಆರಾಮವಾಗಿ ಕುಳಿತಿದ್ದ, ದೊಡ್ಡಗೌಡರನ್ನು ಪೆಕರ ಸಂದರ್ಶಿಸಿಯೇ ಬಿಟ್ಟ.

‘ಸಾರ್‌, ‘ದೇವರು’ ನಿವೃತ್ತಿ ಆಗಿಬಿಟ್ರು, ನಿಮ್ಮ ಅಭಿಪ್ರಾಯವೇನು?’
ದೊಡ್ಡಗೌಡ್ರು ತಮ್ಮದೇ ಶೈಲಿಯಲ್ಲಿ ತಲೆಯ ಮೇಲೆ ಕೈಯಿಟ್ಟುಕೊಂಡು, ‘ಆಗ್ಲಿ ಬಿಡಿ, ಅವರ ಎಲ್ಲ ಫೈಲ್‌ ನನ್ನತ್ರ ಇದೆ, ಸಮಯ ಬಂದಾಗ ಎಲ್ಲ ಜಾತಕ ಬಿಚ್ತೀನಿ’ ಎಂದರು.

‘ಛೆ, ಅವರು ರಾಜಕೀಯ ರಂಗದವರಲ್ಲ ಸಾರ್‌, ಕ್ರಿಕೆಟ್‌ ಲೋಕದವರು. ಇಪ್ಪತ್ನಾಲ್ಕು ವರ್ಷ ಸತತವಾಗಿ ಅಲ್ಲೇ ನಿಂತಿದ್ದವರು. ಶನಿವಾರ ಆಟದಿಂದ ರಿಟೈರ್ ಆದ್ರು. ತಾವು?’ ಪೆಕರ ಧೈರ್ಯವಾಗಿಯೇ ಪ್ರಶ್ನಿಸಿದ.

‘ನೋಡಿ, ಇವೆಲ್ಲಾ ಬೇಡ. ನಾನೂ ಈ ಕ್ರೀಸ್‌ನಲ್ಲಿ ನಲವತ್ತು ವರ್ಷದಿಂದ ನಿಂತೇ ಇದ್ದೀನಿ. ನಿಮ್‌ ದೇವ್ರಿಗಿಂತ ಹೆಚ್ಚಾಗಿ ಕವರ್‌ ಡ್ರೈವ್‌ ಮಾಡಿದ್ದೇನೆ. ಅಪ್ಪರ್‌ಕಟ್ಟೂ ಮಾಡಿದ್ದೀನಿ. ಲೋಯರ್‌ಕಟ್ಟೂ ಮಾಡಿದ್ದೀನಿ. ನ್ಯಾಷನಲ್‌ ಲೆವೆಲ್‌ನಲ್ಲೂ, ಪಂಚಾಯ್ತಿ ಲೆವೆಲ್‌ನಲ್ಲೂ ಡೆಲಿಕೇಟು ಹಾಗೂ ರಿಸ್ಕಿ ಶಾಟ್‌ಗಳನ್ನೆಲ್ಲಾ ಹೊಡೆದಿದ್ದೇನೆ. ಇನ್ನೊಂದು ಸಲ ನಾನ್‌ ಪಿ.ಎಂ ಆಗೋ ಚಾನ್ಸೂ ಇದೆ. ಅದಕ್ಕೂ ಸ್ಟೇಡಿಯಂ ರೆಡಿ ಮಾಡಿದ್ದೇನೆ. ನನ್‌ ಸನ್ಸು ಮತ್ತೆ ಸಿಎಮ್ಮು ಆಗೋದನ್ನೂ ನೋಡುವ ಭಾಗ್ಯ ಇದೆ ಅಂತ ಕೇರಳ ಜ್ಯೋತಿಷಿಗಳು ಹೇಳಿದ್ದಾರೆ. ನಾನ್ಯಾಕ್ರೀ ರಿಟೈರ್ ಆಗ್ಬೇಕು?’ ದೊಡ್ಡಗೌಡ್ರು ಗುಡುಗಿದರು.

‘ಆದ್ರೂ, ನಿಮ್ದು ಫ್ಯಾಮಿಲಿ ಪಾರ್ಟಿ ಅಂತ ವಿರೋಧ ಪಕ್ಷಗಳು ಚುಡಾಯಿಸ್ತಾವಲ್ಲಾ ಸಾರ್‌’ ಪೆಕರ ಕೆಣಕಿದ.
‘ಇದೆಲ್ಲಾ ಪಿತೂರಿ. ಇದಕ್ಕೆಲ್ಲಾ ನಾನು ಜಗ್ಗೋದಿಲ್ಲ. ನಿಮ್‌ ದೇವ್ರು ಶತಕ ಹೊಡೆದು ಅದನ್ನು ತಂದೆಗೆ ಅರ್ಪಿಸ್ತಾರೆ. ‘ಭಾರತರತ್ನ’ ಕೊಟ್ರೆ ತಾಯಿಗೆ ಅರ್ಪಿಸ್ತಾರೆ. ಕಾಂಪಿಟೇಷನ್‌ಗೆ ನಿಂತ್ರೆ ರನ್‌ ಔಟ್‌ ಮಾಡ್ತಾರೆ. ಅವರದು ಫ್ಯಾಮಿಲಿ ಆಟ ಅಲ್ಲವಾ? ನಾನು ಒಬ್ಬರಿಗೆ ಹಾಸನ, ಮತ್ತೊಬ್ಬರಿಗೆ ರಾಮನಗರ ಬಳುವಳಿಯಾಗಿ ಕೊಟ್ರೆ ನನ್ನ ಬಗ್ಗೆ ಟೀಕೆ ಮಾಡ್ತೀರಾ? ಮೀಡಿಯಾದವರಿಗೆಲ್ಲಾ ಇದೇ ಕೆಲಸ ಆಗೋಯ್ತು, ಗೆಟೌಟ್‌’ ದೊಡ್ಡಗೌಡ್ರು ಕೂಗುತ್ತಾ ಎದ್ದು ಹೋದರು.

ಮಾತಿನ ಬ್ರಹ್ಮಾಸ್ತ್ರಕ್ಕೆ ಹೆಸರಾದ ಮಾಜಿ ಉ.ಮು.ಮ. ನಶ್ವರಪ್ಪ ಎದುರಿಗೇ ಸಿಕ್ಕರು. ಪೆಕರ ಅವರನ್ನೂ ಪ್ರಶ್ನಿಸಿದ. ‘ನಿಮ್ಮ ನಿವೃತ್ತಿ ಯಾವಾಗ ಸ್ವಾಮಿ?’

‘ನಾನ್ಯಾಕ್ರಿ ರಿಟೈರ್ ಆಗಬೇಕು? ನಾನು ಸಿ.ಎಂ ಮೆಟಲ್ಲು. ಬಾಯ್ಬಿಟ್ರೆ ಫೋರು, ಸಿಕ್ಸು ಹೇಗೆ ಉದುರಿಸ್ತೀನಿ ಅಂತ ನಿಮಗೆ ಗೊತ್ತಿಲ್ವಾ? ಯಾರೋ ಅಪಪ್ರಚಾರ ಮಾಡ್ತಾರೆ ಅಂದ್ರೆ ನೀವೂ ಅದನ್ನೇ ಕೇಳ್ತೀರಲ್ರಿ’ ನಶ್ವರಪ್ಪನವರ ಅಬ್ಬರಕ್ಕೆ ಬೆಚ್ಚಿಬಿದ್ದ ಪೆಕರ, ‘ಇವರಿಗೆ ನಮೋ ನಮೋ’ ಎನ್ನುತ್ತಾ ಜಾಗ ಖಾಲಿ ಮಾಡಿದ.

ರಪ್ಪ ಅವರು ಬೇಷರತ್ತಾಗಿ ಹೋಗ್ತೀನಿ, ರಾತ್ರಿಯೆಲ್ಲಾ ರಸ್ತೇಲಿ ಮಲಗ್ತೀನಿ ಎಂದು ಆಣೆ ಪ್ರಮಾಣ ಮಾಡಿ ಹೇಳುತ್ತಿದ್ದಾಗ ಎದುರು ನಿಂತು, ‘ನಿವೃತ್ತಿ ಎಂದು?’ ಎಂಬ ಪ್ರಶ್ನೆಯನ್ನು ಮುಂದಿಟ್ಟ ಪೆಕರ.

‘ಸ್ವಾಮಿ, ರಾಜ್ಯದ ರಾಜಕೀಯ ರಂಗದಲ್ಲಿ ಟ್ವೆಂಟಿ– ಟ್ವೆಂಟಿ ಮ್ಯಾಚ್‌ಗೆ ಅಡಿಗಲ್ಲು ಹಾಕಿದ್ದೇ ನಾನು. ಮ್ಯಾಚ್‌
ಫಿಕ್ಸಿಂಗ್‌ ಮಾಡ್ಕೊಂಡು, ನನಗೆ ಕೈಕೊಟ್ಟವರು ವಚನ ಭ್ರಷ್ಟರಾಗಿ ಪಕ್ಷದ ಅಧ್ಯಕ್ಷ ಸ್ಥಾನವನ್ನೂ ಕಳಕೊಂಡು ಕೂತಿರೋದು ನೀವು ನೋಡ್ತಾ ಇಲ್ವೆ? ಐದು ವರ್ಷದ ಟೆಸ್‌್ಟನಲ್ಲಿ ನನ್ನನ್ನು ಮೂರೇ ವರ್ಷಕ್ಕೆ ರನ್‌ಔಟ್‌ ಮಾಡಿದ್ದು ತಪ್ಪು. ಥರ್ಡ್‌ ಅಂಪೈರ್ರೂ ಸರಿಯಾದ ತೀರ್ಮಾನ ಕೊಡಲಿಲ್ಲ. ಆದ್ರೂ ನಾನು ಎಲ್‌ಬಿಡಬ್ಲ್ಯು ಆಗಿಲ್ಲ. ತೆಂಗಿನಕಾಯಿ ಈಡುಗಾಯಿ ಹೊಡೆದಂಗೆ ಎಲ್ಲರನ್ನೂ ಚಚ್ಚಿ ಹಾಕಿಯೇ ನಾನು ನಿವೃತ್ತಿ ಆಗೋದು’ ರಪ್ಪ ಅವರು ಆವೇಶ ಭರಿತರಾಗಿದ್ದರು.

‘ನಾನು ಈಗಲೂ ಸ್ಟ್ರಾಂಗು ಕಣ್ರೀ, ನನ್ನ ಹಿಂದೆ ನೂರಾರು ಮಠ ಇದೆ. ಈಗಲೂ ಸ್ಟ್ರೇಟ್‌ ಡ್ರೈವ್‌, ಕವರ್‌ ಡ್ರೈವ್‌ಗಳನ್ನು ನನ್‌ ತರ ಯಾರ್ರೀ ಹೊಡೀತಾರೆ? ಇಡೀ ರಾಜ್ಯದ ಜನ ರಪ್ಪ ಅವರು ಇರಬೇಕು ಎಂದು ಭಾವುಕರಾಗಿ ಹಾಡ್ತಾ ಇದ್ದಾರೆ. ನನ್‌ ಬಗ್ಗೆ ಸಮಿತಾ ಹಾಡು ಬರೆದು ಆಲ್ಬಂ ಮಾಡಿದ್ದಾರೆ. ನೀವೂ ಕೇಳಿ, ನಾಳೆ ಎಫ್‌ಎಮ್ಮಲ್ಲೂ ಬರುತ್ತೆ’ ಎಂದು ಹೇಳಿ ರಪ್ಪಾ ಅವರು ಸಿ.ಡಿ.ಯೊಂದನ್ನು ಪೆಕರನ ಕೈಗಿಟ್ಟರು.

ಉತ್ಸಾಹದಿಂದ ಪೆಕರ ಸಿ.ಡಿ. ಪ್ಲೇ ಮಾಡಿದ.
ರಪ್ಪ ರಪ್ಪ ಎಂದು ಸಿಡಿಯುವೆ
ಮತ್ತೆ ನೂರು ಮಠ ಕಟ್ಟುವೆ
ಮಾರಸ್ವಾಮಿ ಆದರೇನು, ಅಯ್ಯ ಆದರೇನು?
ಎಲ್ಲರಿಗೂ ಮಾರ್‌ ಮಾರ್‌ ಮಾರ್‌ ...
...........
ಪೆಕರ ಮೂರ್ಛೆ ಹೋಗಿದ್ದ!
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT