ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆತುರದ ಸಹಾಯ

Last Updated 20 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಅದೊಂದು ದಟ್ಟವಾದ ಕಾಡು. ಆ ಕಾಡಿನ ಮಧ್ಯದಲ್ಲಿ ಹರಿದು ಹೋಗುವ ಸುಂದರವಾದ ನದಿ. ಅದರ ಪ್ರವಾಹ ತುಂಬ ಶಾಂತ. ನೀರಿನ ಸೆಳೆತವೂ ಅಷ್ಟಿಲ್ಲ. ಅದರ ಸುತ್ತಮುತ್ತ ಹಸಿರು ಹುಲ್ಲು. ನಗರದಿಂದ ದೂರವಾಗಿದ್ದ ಈ ಶಾಂತಪ್ರದೇಶದಲ್ಲಿ ಪಶು, ಪಕ್ಷಿ ನಿರಾತಂಕವಾಗಿ ಬದುಕಿದ್ದವು. ಅವುಗಳ ಮತ್ತು ನಿಸರ್ಗದ ನಡುವೆ ಅದ್ಭುತವಾದ ಅವಿನಾಸಂಬಂಧ.

ಇಲ್ಲಿ ಎರಡು ಜೀವಿಗಳ ನಡುವೆ ವಿಚಿತ್ರವಾಗಿದ್ದ ಸ್ನೇಹ ಬೆಳೆದು ಬಂದಿತ್ತು. ಒಂದು ನದಿಯಲ್ಲಿದ್ದ ಮೀನು. ತುಂಬ ಸುಂದರವಾದ ಮೀನು ಅದು. ಅದರ ಮೈಯ ಹೊಳಪೇನು? ರೆಕ್ಕೆಗಳ ಬಣ್ಣವೇನು? ನೀರಿನಲ್ಲಿ ಸರಸರನೇ ಈಜಿ ಹೋಗುವಾಗ ಅತ್ತಿತ್ತ ಮೈಯನ್ನು ಬಳುಕಿಸಿ ಸಾಗುವ ವೈಯಾರವೇನು? ಅದು ನೀರಿನಲ್ಲಿದ್ದ ಬೇರೆ ಪ್ರಾಣಿಗಳ ಅಸೂಯೆಗೆ ಪಾತ್ರವಾಗಿತ್ತು.

ಇನ್ನೊಂದು ಪ್ರಾಣಿ ನದೀತೀರದಲ್ಲಿದ್ದ ಒಂದು ಎತ್ತರದ ಮರದ ಮೇಲೆ ವಾಸವಾಗಿದ್ದ ಕೋತಿ. ಅದೂ ಒಂದು ಅದ್ಭುತ ಕೋತಿ. ಅದರ ದೊಡ್ಡ ದೇಹ, ಕೆಂಪು ಮೂತಿ, ಕೋಪದಿಂದ ಹೂಂಕರಿಸಿದಾಗ ತೋರುವ ಚೂಪಾದ ಹಲ್ಲುಗಳ ಸಾಲು ಯಾವ ಪ್ರಾಣಿಯ ಗಮನವನ್ನಾದರೂ ಸೆಳೆಯುತ್ತಿದ್ದವು.
 
ಅದರ ಚಾಕಚಕ್ಯತೆ ಎಲ್ಲರನ್ನೂ ಗಾಬರಿಗೊಳಿಸುತ್ತಿತ್ತು. ಅದು ಮರದಿಂದ ಮರಕ್ಕೆ ಹಾರುವಾಗ, ಕೊಂಬೆಯಿಂದ ಸರಸರನೇ ಇಳಿಯುವಾಗ ಬೇರೆ ಪ್ರಾಣಿಗಳು ಅದನ್ನೇ ಗಮನವಿಟ್ಟು ನೋಡುತ್ತಿದ್ದವು.

   ಈ ಮೀನಿಗೆ ಕೋತಿಯ ಆಟ ಕಂಡರೆ ಬಲು ಇಷ್ಟ. ತನ್ನ ಬೊಚ್ಚುಬಾಯಿಯನ್ನು ಹಿಗ್ಗಿಸಿ ತೆಗೆದು ಪಕಪಕನೇ ನಕ್ಕು, ತನ್ನ ಬಣ್ಣಬಣ್ಣದ ರೆಕ್ಕೆಗಳಿಂದ ಚಪ್ಪಾಳೆ ತಟ್ಟುತ್ತಿತ್ತು. ಕೋತಿಗೆ ಈ ಮೀನಿನ ನಡವಳಿಕೆಯನ್ನು ಕಂಡು ತುಂಬ ಇಷ್ಟವಾಗುತ್ತಿತ್ತು.
 
ಕೋತಿ ನದೀ ತೀರಕ್ಕೆ ಬಂದು ಈ ಮೀನನ್ನೇ ನೋಡುತ್ತ ಮಾತನಾಡುತ್ತ ಕುಳಿತುಕೊಳ್ಳುತ್ತಿತ್ತು. ಆಗಾಗ ತನಗೆ ದೊರೆತ ಕಡಲೆಬೀಜ ಅಥವಾ ಮತ್ತಾವುದಾದರೂ ಕಾಳು ಸಿಕ್ಕರೆ ತಂದು ಮೀನಿಗೆ ಕೊಡುತ್ತಿತ್ತು. ಮೀನು ಸಹ ತನ್ನ ಕಷ್ಟ ಸುಖಗಳನ್ನು ಹೇಳಿಕೊಳ್ಳುತ್ತಿತ್ತು. ಇವರಿಬ್ಬರ ಸ್ನೇಹ ಹೀಗೆಯೇ ನಡೆಯಿತು, ಬಲಿಯಿತು.

ಒಂದು ಬಾರಿ ಕಾಡಿನ ಮೇಲಿನ ಭಾಗದಲ್ಲಿ ಎಲ್ಲಿಯೋ ಭಾರೀ ಮಳೆಯಾದ್ದರಿಂದ ನದಿಯಲ್ಲಿ ನೀರಿನ ಪ್ರವಾಹ ಏರಿತು. ದಿನದಿನಕ್ಕೆ ಏರುತ್ತಲೇ ಹೋಗಿ ಸೆಳೆತ ಹೆಚ್ಚಾಯಿತು. ಮೀನಿಗೆ ಆತಂಕವಾಯಿತು.
 
ತಾನು ಕೊಚ್ಚಿಕೊಂಡು ಹೋಗಿಬಿಡುತ್ತೇನೆಂಬ ಭಯವಾಯಿತು. ತನ್ನ ಸ್ನೇಹಿತನಾದ ಕೋತಿಗೆ ಕೂಗಿ ತನ್ನ ಅಸಹಾಯಕತೆುನ್ನು ಹೇಳಿಕೊಂಡಿತು. ತಕ್ಷಣ ಕೋತಿ ಮರದಿಂದ ನೆಗೆದು ಕೆಳಗೆ ಹಾರಿ, ನೀರಿನೊಳಗೆ ಧುಮುಕಿ.
 
ಮೀನನ್ನು ಕೈಯಲ್ಲಿ ಎತ್ತಿಕೊಂಡು ಸರಸರನೆ ಮರವನ್ನೇರಿತು. ಎತ್ತರದ ಕೊಂಬೆಯ ಮೇಲೆ ಎಲೆಗಳನ್ನು ಹಾಸಿ ಮೆತ್ತೆಯನ್ನು ಸಿದ್ಧಮಾಡಿ ಅದರ ಮೇಲೆ ಮೀನನ್ನು ಮಲಗಿಸಿ ಅದರ ಮೇಲೆ ಇನ್ನಷ್ಟು ಎಲೆಗಳನ್ನು ಹಾಕಿ ಮೀನು ಬೆಚ್ಚಗೆ ಇರುವಂತೆ ನೋಡಿಕೊಂಡಿತು.

 ಅದಕ್ಕೀಗ ತುಂಬ ಸಂತೋಷ. ತನ್ನ ಸ್ನೇಹಿತನನ್ನು ಸಾವಿನ ದವಡೆಯಿಂದ ಪಾರು ಮಾಡಿದ ಹೆಮ್ಮೆ. ಬೆಳಗಿನ ಹೊತ್ತಿಗೆ ನೀರಿನ ಪ್ರವಾಹ ಕುಗ್ಗಿತು. ಆಗ ಕೋತಿ ಮೀನನ್ನು ಎತ್ತಿ ನೀರಿನಲ್ಲಿ ಬಿಡಬೇಕೆಂದು ಎಲೆಗಳನ್ನು ಸರಿಸಿ ನೋಡಿದರೆ ಆತ್ಮೀಯ ಗೆಳತಿಯಾದ ಮೀನು ಸತ್ತು ಹೋಗಿತ್ತು.

ನೀರಿನ ಪ್ರವಾಹದಿಂದ ಮೀನನ್ನು ಪಾರುಮಾಡುವ ಆತುರದಲ್ಲಿ ಅದು ನೀರಿಲ್ಲದೇ ಬದುಕುವುದು ಅಸಾಧ್ಯವೆಂಬುದನ್ನು ಮರೆತುಬಿಟ್ಟಿತ್ತು. ಸಹಾಯ ಮಾಡುವ ಭರದಲ್ಲಿ ಅಪಾಯವನ್ನು ಮಾಡಿತ್ತು.

  ಮತ್ತೊಬ್ಬರಿಗೆ ಸಹಾಯ ಮಾಡುವ ಉತ್ಸಾಹದಲ್ಲಿ ನಮ್ಮ  ಕ್ರಿಯೆಯಿಂದ ಅವರಿಗೆ ನಿಜವಾಗಿಯೂ ಪ್ರಯೋಜನವಾಗುತ್ತದೆಯೇ ಎಂದು ಯೋಚಿಸಿ ನೋಡಬೇಕು. ಪರಿಸ್ಥಿತಿಯ ನಿಜವಾದ ಅರ್ಥವಾಗದೇ ಮಾಡಲು ಹೊರಟ ಸಹಾಯ ಅವರಿಗೆ ತೊಂದರೆಯನ್ನು ಮಾಡುವ ಸಾಧ್ಯತೆ ಹೆಚ್ಚು.
 
ಈ ವಿಷಯದಲ್ಲಿ ಆತುರ, ಒಳಿತಲ್ಲ. ಸ್ವಲ್ಪ ತಾಳ್ಮೆ, ಸ್ವಲ್ಪ ಚಿಂತನೆಯ ನಂತರದ ಪ್ರಯತ್ನ ಪ್ರಯೋಜನಕಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT