ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಡರ್ಲಿಗಳ ಸಂತೆಯಲ್ಲಿ...

Last Updated 6 ಆಗಸ್ಟ್ 2011, 19:30 IST
ಅಕ್ಷರ ಗಾತ್ರ

ನಮ್ಮ ವ್ಯವಸ್ಥೆಯಲ್ಲಿ ಎರಡು ರೀತಿಯ ಪೊಲೀಸರಿರುತ್ತಾರೆ. ಒಂದು- ದಿಟ್ಟ ಪೊಲೀಸರು. ಇನ್ನೊಂದು- ಭಟ್ಟಂಗಿ ಪೊಲೀಸರು. ಇತಿಹಾಸದಲ್ಲೂ ಹೀಗೆಯೇ.

ಬ್ರಿಟಿಷರ ಪರವಾಗಿದ್ದ ಭಾರತೀಯ ಪೊಲೀಸರಿಗೆ ವಿಶೇಷ ಆದ್ಯತೆ, ಸವಲತ್ತು ಸಿಗುತ್ತಿತ್ತು. ಭಾರತೀಯ ಎಂಬ ಪ್ರಜ್ಞೆ ಇಟ್ಟುಕೊಂಡು ಕೆಲಸಕ್ಕೆ ಸೇರಿದವರನ್ನು ಬ್ರಿಟಿಷರು ಗುಲಾಮರಂತೆ ನಡೆಸಿಕೊಳ್ಳುತ್ತಿದ್ದರು. ಪೊಲೀಸರು ಪರಿಚಾರಿಕೆ ಮಾಡಬೇಕೆಂಬ `ಆರ್ಡರ್ಲಿ~ ವ್ಯವಸ್ಥೆಯ ಮೂಲ ಇದೇ.

ಕೆಲವು ರಾಜ-ಮಹಾರಾಜರು ಕೈಗೊಬ್ಬ ಕಾಲಿಗೊಬ್ಬ ಸೇವಕನನ್ನು ಇಟ್ಟುಕೊಳ್ಳುತ್ತಿದ್ದರು. ಎಲ್ಲಾ ಸಾಮ್ರಾಜ್ಯಶಾಹಿ, ವಸಾಹತುಶಾಹಿ ವ್ಯವಸ್ಥೆಗಳಲ್ಲೂ ಇದೇ ನಡೆದುಕೊಂಡು ಬಂದಿತು. ಜಮೀನ್ದಾರಿ ಪದ್ಧತಿಯಲ್ಲೂ ಜೀತದಾಳುಗಳನ್ನು ಕಂಡಿದ್ದೇವೆ.

ಮಲೇಷ್ಯಾ, ಇಂಡೋನೇಷ್ಯಾ, ಶ್ರೀಲಂಕಾ, ಆಫ್ರಿಕನ್ ದೇಶಗಳು ಮೊದಲಾದೆಡೆ ಬ್ರಿಟಿಷರು ಭಾರತೀಯರನ್ನೇ ಜೀತದಾಳುಗಳಾಗಿ ಕರೆದುಕೊಂಡು ಹೋಗಿದ್ದರು. ಫಿಜಿ ದ್ವೀಪದಲ್ಲಿ ಕಬ್ಬು ಬೆಳೆಯುವ ಕಡೆ ಈಗಲೂ ಭಾರತದ ಜೀತದಾಳುಗಳಿದ್ದಾರೆ. ಸ್ವಾತಂತ್ರ್ಯಾ ನಂತರವೂ ಪೊಲೀಸ್ ಇಲಾಖೆಯಲ್ಲಿ `ಆರ್ಡರ್ಲಿ ವ್ಯವಸ್ಥೆ~ಯನ್ನು ಅಳವಡಿಸಿಕೊಂಡರು.

ಎಲ್ಲಾ ಪೊಲೀಸರನ್ನೂ ಸರ್ಕಾರ ಸುಸಜ್ಜಿತ ರೀತಿಯಲ್ಲಿ ಪಳಗಿಸುತ್ತದೆ. ಪೊಲೀಸ್ ತರಬೇತಿ ಶಾಲೆ, ಪೊಲೀಸ್ ತರಬೇತಿ ಅಕಾಡೆಮಿಗಳಲ್ಲಿ ಕಾನೂನು, ಆಯುಧ, ಶಸ್ತ್ರಾಸ್ತ್ರ ಮೊದಲಾದವುಗಳ ಬಗ್ಗೆ ತಲಸ್ಪರ್ಶಿಯಾಗಿ ಹೇಳಿಕೊಡುವವರಿದ್ದಾರೆ.

ತಜ್ಞರಿಂದ ವಿಶೇಷ ತರಗತಿಗಳನ್ನು ನಡೆಸುವುದರಿಂದ ಪೊಲೀಸರ ಸಾಮಾನ್ಯ ಜ್ಞಾನವೂ ವೃದ್ಧಿಸುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಕವಾಯತಿನ ಮೂಲಕ ಶಿಸ್ತಿನ ಪಾಠ ನಡೆಯುತ್ತದೆ. ಇಷ್ಟೆಲ್ಲವನ್ನು ಹೇಳಿಕೊಡಲೆಂದೇ ಒಂದು ವರ್ಷ ಮೀಸಲು. ಆನಂತರ ಇನ್ನೊಂದು ವರ್ಷ ಪ್ರಾಯೋಗಿಕ ತರಬೇತಿ ನಡೆಯುತ್ತದೆ. ತರಬೇತಿಗೆಂದೇ ಸರ್ಕಾರ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತದೆ. ಖಾಸಗಿ ಬದುಕಿನ ಆದ್ಯತೆ ಪೊಲೀಸರಿಗೆ ಕಡಿಮೆ. ಬೇಕೆಂದಾಗ ರಜೆ ಸಿಗುವ ಕೆಲಸ ಇದಲ್ಲ.

ಪ್ರಕ್ಷುಬ್ಧ ಪರಿಸ್ಥಿತಿಗಳಲ್ಲಿ ಸಮಯದ ಪರಿವೇ ಇಲ್ಲದಂತೆ ಕಾನೂನು-ಸುವ್ಯವಸ್ಥೆ ಕಾಪಾಡಲು ಟೊಂಕಕಟ್ಟಬೇಕು. ಒಬ್ಬ ಒಳ್ಳೆಯ ಪೊಲೀಸ್ ಆಗಬೇಕೆಂದರೆ ಸಾಕಷ್ಟು ಸಣ್ಣಪುಟ್ಟ ಸುಖಗಳನ್ನು ತ್ಯಾಗ ಮಾಡಬೇಕು. ಕೆಲವು ಪೊಲೀಸರು ತ್ಯಾಗಕ್ಕೆ ಸಿದ್ಧರಿರುವುದಿಲ್ಲ. ಕಷ್ಟಗಳಿಗೆ ಎದೆಗೊಡುವುದಂತೂ ಅವರಿಗೆ ಬೇಡವೇ ಬೇಡ.
ಅಂಥವರು ಸಮವಸ್ತ್ರ ತೊಡದೆಯೇ ತಮ್ಮ ಇಡೀ ಸೇವಾವಧಿಯನ್ನು ಕಳೆಯುತ್ತಾರೆ.

ಫಿಂಗರ್‌ಪ್ರಿಂಟ್ ಬ್ಯೂರೋ, ಲೋಕಾಯುಕ್ತ, ಕೆಇಬಿ (ಈಗಿನ ಕೆ.ಪಿ.ಟಿ.ಸಿ.ಎಲ್), ಹೈಕೋರ್ಟ್, ಆಹಾರ ಘಟಕ, ಅಬಕಾರಿ ಮೊದಲಾದೆಡೆ ಅಂಥ ಅವಕಾಶವಿದೆ.

ಪೊಲೀಸ್ ಇಲಾಖೆಯ ಸಕಲ ಸೌಕರ್ಯ ಪಡೆದೂ ಅವರೆಲ್ಲಾ ಬೇರೆ ಪೊಲೀಸರಂತೆ ಕಷ್ಟಕ್ಕೆ ಎದೆಗೊಡುವುದಿಲ್ಲ. ಒಂದು ವೇಳೆ ಈ ಅವಕಾಶಗಳಲ್ಲಿ ಯಾವುದೂ ಸಿಗದಿದ್ದರೆ `ಆರ್ಡರ್ಲಿ~ಗಳಾಗಿಯೇ ಕಾಲ ಕಳೆಯುತ್ತಾರೆ.

`ಆರ್ಡರ್ಲಿ~ಗಳಲ್ಲಿ ಎರಡು ಬಗೆ. ಒಂದು- `ಆಫೀಸ್ ಆರ್ಡರ್ಲಿಗಳು~. ಇನ್ನೊಂದು- `ಮನೆಗೆಲಸದ ಆರ್ಡರ್ಲಿಗಳು~. ಠಾಣೆಗೆ ಬರುವ ಸಂದರ್ಶಕರನ್ನು ಮಾತನಾಡಿಸಿ ಸಂಬಂಧಪಟ್ಟ ಅಧಿಕಾರಿಯ ಜೊತೆ ಅವರು ಮಾತನಾಡಲು ಏರ್ಪಾಟು ಮಾಡುವುದು, ಅಧಿಕಾರಿಗಳು ಇಲ್ಲದೇ ಇರುವಾಗ ಫೋನ್ ಕರೆಗಳಿಗೆ ಉತ್ತರಿಸಿ; ಕರೆ ಮಾಡಿದವರ ಸಮಸ್ಯೆಗಳನ್ನು ಬರೆದಿಟ್ಟುಕೊಳ್ಳುವುದು ಮೊದಲಾದ ಜನೋ ಪಯೋಗಿ ಕೆಲಸಗಳನ್ನು `ಕಚೇರಿ ಆರ್ಡರ್ಲಿಗಳು~ ಮಾಡುತ್ತಾರೆ.
 
ಆದರೆ, ಅಧಿಕಾರಿವರ್ಗದ ಕೆಲವರು ಲಭ್ಯವಿರುವ ಈ ಸೌಕರ್ಯವನ್ನೇ ದುರುಪಯೋಗ ಪಡಿಸಿಕೊಳ್ಳಲು ಪ್ರಾರಂಭಿಸಿದರು. ತಮ್ಮ ಮನೆಗೆಲಸ ಮಾಡಲು `ಆರ್ಡರ್ಲಿ~ಗಳನ್ನು ನಿಯೋಜಿಸಿಕೊಂಡರು. ಇವರೇ `ಮನೆಗೆಲಸದ ಆರ್ಡರ್ಲಿಗಳು~. ಅಡುಗೆ ಮಾಡುವುದು, ಕಸ ಗುಡಿಸಿ ನೆಲ ಒರೆಸುವುದು, ನಾಯಿಯನ್ನು ನೋಡಿಕೊಳ್ಳುವುದು, ಒಂದು ವೇಳೆ ಆ ನಾಯಿಯ ಆರೋಗ್ಯದಲ್ಲಿ ಏರುಪೇರಾದರೆ ಪ್ರಾಣಿ ಚಿಕಿತ್ಸಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಶುಶ್ರೂಷೆ ಮಾಡಿಸುವುದು, ಮನೆತೋಟದಲ್ಲಿ ಮಾಲಿಯಂತೆ ಕೆಲಸ ಮಾಡುವುದು ಇಂಥ ಹಲವು ಬಗೆಯ ಕೆಲಸಗಳನ್ನು ಅಧಿಕಾರಿಗಳ `ಮನೆಯ ಆರ್ಡರ್ಲಿ~ಗಳು ಮಾಡುತ್ತಾರೆ.

ಕೆಲವು ಅಧಿಕಾರಿಗಳಂತೂ ಮನೆ ಕಟ್ಟಿಸುವಾಗ, `ಆರ್ಡರ್ಲಿ~ಗಳಿಗೇ ಉಸ್ತುವಾರಿ ವಹಿಸುತ್ತಾರೆ. ಸಣ್ಣಪುಟ್ಟ ಕೆಲಸ ಬಂದರಂತೂ, ಅವನ್ನೂ ಅವರಿಂದಲೇ ಮಾಡಿಸುತ್ತಾರೆ. `ಆರ್ಡರ್ಲಿ~ ಗಳಾಗಿರುವ ಎಷ್ಟೋ ಪೊಲೀಸರು ಅದನ್ನು ಅವಮಾನ ಎಂದು ಭಾವಿಸುವುದಿಲ್ಲ. ಕೆಲಸದ ಅವಧಿ ಅನುಕೂಲಕ್ಕೆ ತಕ್ಕಂತೆ ಇರುವುದರಿಂದ ಉಳಿದ ಸಮಯವನ್ನೆಲ್ಲಾ ರಜೆಯಂತೆಯೇ ಅವರು ಅನುಭವಿಸುತ್ತಾರೆ. ಅಧಿಕೃತ ಸಂಬಳ. ಅಧಿಕೃತ ಕೆಲಸ. ಆದರೆ, ಅನಧಿಕೃತ ರಜೆ ಎಂಬಂಥ ಸ್ಥಿತಿಯಲ್ಲೇ ಅವರು ಬದುಕುತ್ತಾರೆ.

ಕರ್ನಾಟಕದಲ್ಲಿ ಇಂತಿಂಥ ಅಧಿಕಾರಿಗೆ ಇಷ್ಟಿಷ್ಟು `ಆರ್ಡರ್ಲಿ~ಗಳನ್ನು ಕೊಡಬೇಕು ಎಂದು `ಪೊಲೀಸ್ ಮ್ಯಾನ್ಯುಯಲ್~ನಲ್ಲಿ ಸ್ಪಷ್ಟವಾಗಿ ನಮೂದಾಗಿದೆ. ಎಸ್ಪಿಗೆ ಇಬ್ಬರು, ಡಿವೈಎಸ್ಪಿ ಹಾಗೂ ಸರ್ಕಲ್ ಇನ್ಸ್‌ಪೆಕ್ಟರ್‌ಗೆ ಒಬ್ಬರು, ಇನ್ನೂ ಹೆಚ್ಚಿನ ರ‌್ಯಾಂಕ್‌ನ ಅಧಿಕಾರಿಗಳಿಗೆ ಹೆಚ್ಚೆಂದರೆ ಮೂವರು `ಆರ್ಡರ್ಲಿ~ ಗಳನ್ನು ಕೊಡುವ ಅವಕಾಶವಿದೆ. ಆದರೆ, ತಮ್ಮ ಪ್ರಭಾವ ಹಾಗೂ ಸ್ಥಾನಮಾನದ ವ್ಯಾಪ್ತಿ ದೊಡ್ಡದಿರುವ ಕೆಲವು ಅಧಿಕಾರಿಗಳು ತಮಗಿಷ್ಟ ಬಂದಷ್ಟು `ಆರ್ಡರ್ಲಿ~ಗಳನ್ನು ಇಟ್ಟುಕೊಳ್ಳುತ್ತಾರೆ.

ಕರ್ನಾಟಕದಲ್ಲಿ ಕೆಲಸ ಮಾಡುವ ಹೊರರಾಜ್ಯದ ಅಧಿಕಾರಿ ತಮ್ಮ ತವರಿಗೆ `ಆರ್ಡರ್ಲಿ~ಗಳನ್ನು ಕಳುಹಿಸಿ ಕೆಲಸ ಮಾಡಿಸಿಕೊಂಡ ಉದಾಹರಣೆಗಳೂ ಇವೆ. ಹೀಗಾದಾಗ ಇಲ್ಲಿನ ಲೆಕ್ಕ, ಅಲ್ಲಿ ಕೆಲಸ ಎಂಬಂತಾಗುತ್ತದೆ. ಕೆಲವು ಅಧಿಕಾರಿಗಳು `ಆರ್ಡರ್ಲಿ~ ಗಳನ್ನೇ ತಮ್ಮ ಕಾರುಗಳ ಚಾಲಕರಾಗಿಯೂ ಬಳಸಿಕೊಳ್ಳುವುದಿದೆ. ವಿಶೇಷ ಪರಿಣತಿ ಪಡೆದಿರುವ ಪೊಲೀಸರನ್ನು ಇಂಥ ಕೆಲಸಕ್ಕೆ ನಿಯೋಜಿಸುವುದು ಎಷ್ಟು ಸರಿ ಎಂಬ ಪ್ರಶ್ನೆ ಪದೇಪದೇ ಎದ್ದಿದೆ.

ಬೆಳೆಯುತ್ತಿರುವ ಜನಸಂಖ್ಯೆಗೆ ಹೋಲಿಸಿದರೆ ಪೊಲೀಸರ ಸಂಖ್ಯೆ ಕಡಿಮೆ ಎಂಬುದು ಸುಸ್ಪಷ್ಟ. ಹೀಗಿರುವಾಗ ಸುಮಾರು ಎರಡು ಸಾವಿರ ಪೊಲೀಸರನ್ನು ಅನಧಿಕೃತವಾಗಿ `ಆರ್ಡರ್ಲಿ~ಗಳಾಗಿ ನಿಯೋಜಿಸಿಕೊಳ್ಳುವುದು ಪ್ರಶ್ನಾರ್ಹ. ಬೆಂಗಳೂರನ್ನು ಹೊರತುಪಡಿಸಿ ರಾಜ್ಯದ ಒಂದಿಡೀ ಜಿಲ್ಲೆಗೆ ಎರಡು ಸಾವಿರ ಪೊಲೀಸರಿಂದ ರಕ್ಷಣೆ ನೀಡಬಹುದು.

ಕೆಲವು ಪೊಲೀಸ್ ಅಧಿಕಾರಿಗಳು ತಮ್ಮ ಸ್ಥಾನವನ್ನು ದುರುಪಯೋಗಪಡಿಸಿಕೊಳ್ಳುತ್ತಾರೆ. ಇಲಾಖೆ ಕೊಟ್ಟ ವಾಹನಗಳನ್ನು ದುರುಪಯೋಗಪಡಿಸಿಕೊಳ್ಳುತ್ತಾರೆ. ಅಷ್ಟೇ ಏಕೆ, ಯಾರದ್ದೋ ಖರ್ಚಿನಲ್ಲಿ ಅದ್ದೂರಿ ಸಮಾರಂಭ ಮಾಡಿಕೊಳ್ಳುತ್ತಾರೆ. ಹುಟ್ಟುಹಬ್ಬವನ್ನು ದಾಂ ಧೂಂ ಎಂದು ಆಚರಿಸಿಕೊಂಡವರಿದ್ದಾರೆ.

ಜಿಲ್ಲೆಯ ಅನೇಕ ಪ್ರಮುಖರನ್ನು ಆ ಸಮಾರಂಭಕ್ಕೆ ಆಹ್ವಾನಿಸಿ ದುಬಾರಿ ಗಿಫ್ಟ್‌ಗಳನ್ನು ಪಡೆಯುವುದು ಅಂಥ ಅಧಿಕಾರಿಗಳಿಗೆ ಪ್ರತಿಷ್ಠೆಯ ಸಂಕೇತ. ಅವರ ಈ ಶೋಕಿಗಾಗಿ `ಆರ್ಡರ್ಲಿ~ಗಳು ದುಡಿಯುತ್ತಾರೆ. ಊಟದ ವ್ಯವಸ್ಥೆ ಮಾಡುವುದರಿಂದ ಹಿಡಿದು ಕೇಕ್ ತರಿಸುವವರೆಗೆ ಎಲ್ಲಾ ಕೆಲಸವನ್ನು ನೋಡಿ ಕೊಳ್ಳುತ್ತಾರೆ. ಇದು `ಆರ್ಡರ್ಲಿ~ಗಳ ದುರ್ಬಳಕೆಯ ಒಂದು ನಮೂನೆ.

ಇನ್ನೊಂದು ನಮೂನೆ ಅಚ್ಚರಿ ಹುಟ್ಟಿಸುವಂಥದ್ದು. ಕೆಲವು ಜಿಲ್ಲಾ ಕೇಂದ್ರಗಳಿಗೆ ಅಧಿಕಾರಿಗಳಾಗಿ ಬಂದವರು ಮೊದಲಿಗೆ `ಇಲ್ಲಿ ಒಳ್ಳೆ ಹಾಲೇ ಸಿಗೋದಿಲ್ಲ~ ಎಂದು ರಾಗ ತೆಗೆಯುತ್ತಾರೆ. ಒಂದು ಹಸು ಕಟ್ಟುವ ಪ್ರಸ್ತಾಪ ಮುಂದಿಡುತ್ತಾರೆ. ಠಾಣೆಯಲ್ಲಿ ಕೆಲಸ ಮಾಡುವ `ಬಕೆಟ್ ಹಿಡಿಯುವ~ ಜಾಯಮಾನದವರು ಯಾರದ್ದೋ ತಲೆ ಹಿಡಿದು, ಹಸು ಕೊಡಿಸುತ್ತಾರೆ.

ಹಸು ಆಕಾಂಕ್ಷಿ ಅಧಿಕಾರಿ ಕೆಲಸ ಮಾಡುವ ಜಿಲ್ಲೆಯಲ್ಲಿ ಎಂಟು ಠಾಣೆಗಳಿರುತ್ತವೆ ಎಂದಿಟ್ಟುಕೊಳ್ಳಿ; ಅಷ್ಟೂ ಠಾಣೆಗಳಿಗೆ ಹಸು ಬೇಕೆಂಬ ಬೇಡಿಕೆ ಹೋಗುತ್ತದೆ. ಎಲ್ಲೆಡೆಯಿಂದಲೂ ಹಸುಗಳು ಸರಬರಾಜಾಗುತ್ತವೆ. ಅವುಗಳನ್ನು ಕಟ್ಟಲು ಜಾಗದ ವ್ಯವಸ್ಥೆಯೂ ಆಗುತ್ತದೆ. ಆದರೆ, ಅವನ್ನು ನೋಡಿಕೊಳ್ಳುವವರು, ಮೇವು ಹಾಕುವವರು, ಸಗಣಿ ಬಾಚುವವರು, ಹಾಲು ಕರೆಯುವವರು ಯಾರು?

ಆ ಕೆಲಸ ಮಾಡಿದ `ಆರ್ಡರ್ಲಿ~ಗಳೂ ಇದ್ದಾರೆ! ಒಂದು ಹಸುವಿನ ಬೆಲೆ ಈಗ 30-40 ಸಾವಿರ ರೂಪಾಯಿ ಇದೆ. ಎಂಟು-ಹತ್ತು ಹಸುಗಳೆಂದರೆ ಲಕ್ಷಾಂತರ ರೂಪಾಯಿ ದೋಚಿದಂತೆಯೇ ಸರಿ. ಇನ್ನು ಕೆಲವು ಅಧಿಕಾರಿಗಳು ಹೀಗೆ ಪಡೆದ ಹಸುಗಳನ್ನು ತಮ್ಮೂರಿಗೆ ಸ್ಥಳಾಂತರಿಸಿ ಉಪ ಆದಾಯದ ಮೂಲವಾಗಿ ಪರಿವರ್ತಿಸಿಕೊಂಡಿದ್ದಾರೆ.
ನಿವೃತ್ತಿಯಾದ ನಂತರವೂ `ಆರ್ಡರ್ಲಿ~ಗಳ ಸೌಕರ್ಯವನ್ನು ಬಳಸಿಕೊಂಡವರೂ ಉಂಟು. ನಿಯಮದ ಪ್ರಕಾರ ನಿವೃತ್ತಿಯ ನಂತರ ಅಧಿಕಾರಿ `ಆರ್ಡರ್ಲಿ~ಗಳನ್ನು ಇಟ್ಟುಕೊಳ್ಳುವಂತಿಲ್ಲ. ಆದರೂ ಕೆಲವರು ತಮ್ಮ ಪ್ರಭಾವ, ಶಿಫಾರಸು ಬಳಸಿಕೊಂಡು ದರ್ಪ ಮುಂದುವರಿಸುತ್ತಾರೆ. ನಿ

ವೃತ್ತ ಅಧಿಕಾರಿಯೊಬ್ಬರು `ಹೇರ್ ಕಟಿಂಗ್ ಮಾಡಿಸಬೇಕು. ಸಲೂನ್ ಒಬ್ಬನನ್ನು ಕಳಿಸಿಕೊಡಿ~ ಎಂದು ಇಲಾಖೆಗೆ ಇತ್ತೀಚೆಗೆ ಬೇಡಿಕೆ ಇಟ್ಟಿದ್ದರೆಂದು ಕರ್ನಾಟಕ ರಾಜ್ಯ ಮೀಸಲು ಪಡೆಯ (ಕೆ.ಎಸ್.ಆರ್.ಪಿ) ಒಬ್ಬರು ಇತ್ತೀಚೆಗೆ ನನಗೆ ಹೇಳಿದರು.

ಕೆ.ಎಸ್.ಆರ್.ಪಿಯಲ್ಲಿ ಅಡುಗೆ ಮಾಡಲು, ಬಟ್ಟೆ ಒಗೆಯಲು, ಕೂದಲು ಕತ್ತರಿಸಿ ಶೇವ್ ಮಾಡಲು ಕೂಡ ಪ್ರತ್ಯೇಕವಾಗಿ ಸಿಬ್ಬಂದಿ ಇರುತ್ತಾರೆ (ಇಂಥ ಬೆಟಾಲಿಯನ್‌ಗೆ `ಸರ್ವೆಂಟ್ ಬೆಟಾಲಿಯನ್~ ಎಂದೇ ಹೆಸರು ಬಂದುಬಿಟ್ಟಿದೆ). ಅಂಥವರನ್ನು ನಿವೃತ್ತಿಯ ನಂತರವೂ ಕರೆಸಿಕೊಳ್ಳುವ ಅಧಿಕಾರಿಗಳನ್ನು ಕಂಡರೆ ಅಸಹ್ಯ ಹುಟ್ಟುತ್ತದೆ.

ತಿಂಗಳಿಗೆ ಐವತ್ತು ಅರುವತ್ತು ಸಾವಿರ ರೂಪಾಯಿ ಪಿಂಚಣಿ ಪಡೆಯುವ ಅಧಿಕಾರಿಗಳೇ `ಆರ್ಡರ್ಲಿ~ಗಳೇ ಮನೆಗೆ ಬಂದು ಪುಕ್ಕಟ್ಟೆ ಚಾಕರಿ ಮಾಡಿಕೊಡಲಿ ಎಂದು ಬಯಸುವುದು ಅಮಾನವೀಯ. ಅನೈತಿಕವೂ ಹೌದು.

ಮುಂದಿನ ವಾರ: ಆರ್ಡರ್ಲಿ ವ್ಯವಸ್ಥೆಯ ಲೋಪಕ್ಕೆ ಧರ್ಮವೀರ ಆಯೋಗದ ಕನ್ನಡಿ
ಶಿವರಾಂ ಅವರ ಮೊಬೈಲ್ ನಂಬರ್: 94483 13066

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT