ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪ್ಪು ನೀರು ತಡೆ: ರೈತರ ಹಿತವಷ್ಟೇ ಇರಲಿ

Last Updated 29 ಜೂನ್ 2014, 19:30 IST
ಅಕ್ಷರ ಗಾತ್ರ

ಒಂದೊಂದು ಭಾಗದಲ್ಲಿ ಒಂದೊಂದು ರೀತಿಯ ಸಮಸ್ಯೆಗಳು ರೈತರನ್ನು ಹಣ್ಣುಗಾಯಿ-– ನೀರುಗಾಯಿ ಮಾಡುತ್ತಿವೆ. ಬಯಲುಸೀಮೆಯಲ್ಲಿ ನೀರಿಗಾಗಿ ರೈತನದು ಹರಸಾಹಸ. ಮಳೆ ಬಂದರೆ ಬೆಳೆ, ಇಲ್ಲವಾದಲ್ಲಿ ಗೋಣು ನೋಯುವವರೆಗೆ ಆಕಾಶ ದಿಟ್ಟಿಸುತ್ತಾ ಕುಳಿತುಕೊಳ್ಳಬೇಕು; ಅಥವಾ ಲಕ್ಷಗಟ್ಟಲೆ ಸುರಿದು ಭೂಮಿಗೆ ರಂಧ್ರ ಕೊರೆಯಿಸಿ ನೀರು ಪಡೆದು ಬೆಳೆ ಮಾಡಬೇಕು. ಆದರೆ ಕರಾವಳಿ ಭಾಗದ ರೈತನ ಸಮಸ್ಯೆ ಮತ್ತೊಂದು ಬಗೆಯದು.

ಕರಾವಳಿ ಪ್ರದೇಶದಲ್ಲಿ ಸಮುದ್ರಕ್ಕೆ ಸಮಾನಾಂತರವಾಗಿ ಕೃಷಿಭೂಮಿ ಚಾಚಿಕೊಂಡಿದೆ. ಮಳೆಗಾಲದಲ್ಲಿ ಇಲ್ಲಿ ಸಾಕಷ್ಟು ಮಳೆಯೇನೋ ಆಗುತ್ತದೆ. ಆದರೆ, ಆ ಮಳೆಯನ್ನೇ ನಂಬಿ ಬೆಳೆದ ಬೆಳೆಯನ್ನು ಉಪ್ಪು ನೀರು ಒಂದೇ  ಹೊಡೆತಕ್ಕೆ ಕಬಳಿಸಿ, ರೈತರನ್ನು ಕಣ್ಣೀರಿನಲ್ಲಿ ಕೈತೊಳೆಯುವಂತೆ ಮಾಡಿ ಬಿಡುತ್ತದೆ. ಮಳೆಯಾದರೂ ಬೆಳೆ ದಕ್ಕದಂಥ ಸ್ಥಿತಿ. ಸಮುದ್ರದಲ್ಲಿ ಉಬ್ಬರ ಕಾಣಿಸಿಕೊಂಡಾಗ ಈ ಭಾಗದ ಕೃಷಿಕರ ಹೃದಯದಲ್ಲಿ ಭತ್ತ ಕುಟ್ಟಿದಂತೆ ಆಗುತ್ತದೆ.

ನಳನಳಿಸುತ್ತಿದ್ದ ಬೆಳೆಯು ಸಮುದ್ರದ ನೀರು ಗದ್ದೆಗೆ ನುಗ್ಗಿದಾಗ ಸರ್ವನಾಶ­ವಾಗುತ್ತದೆ. ಕರಾವಳಿ ರೈತರಿಗೆ ಈ ಸಮಸ್ಯೆ ಮಳೆಗಾಲದಲ್ಲಿ ಮಾತ್ರ ಕಾಡುತ್ತದೆ ಎಂದೇನೂ ಇಲ್ಲ; ಅದು ಬೇಸಿಗೆಯಲ್ಲೂ ಅವರ ನಿದ್ದೆಗೆಡಿ­ಸುತ್ತದೆ. ಅಲ್ಲಿ ಉಪ್ಪು ನೀರಿನ ಆರ್ಭಟ ಎಷ್ಟಿದೆ ಎಂದರೆ, ಕಟಾವು ಮಾಡಿ ಒಟ್ಟಿರುವ ಮೆದೆಗೆ ಅದು ತಾಗಿದರೂ ಸಾಕು ಭತ್ತ ಕೈಬಿಟ್ಟಿತೆಂದೇ ಲೆಕ್ಕ. ಕಾಳು ಕೈ ಸೇರುವುದಿಲ್ಲ; ಸಿಗುವುದು ಭತ್ತದ ಹೊಟ್ಟು ಮಾತ್ರ. ಇನ್ನು ಭೂಮಿಯಲ್ಲಿನ ಬೆಳೆಯ ಸ್ಥಿತಿಯನ್ನು ಹೇಳುವಂತೆಯೇ ಇಲ್ಲ.

ಉತ್ತರಕನ್ನಡ ಜಿಲ್ಲೆಯ ಕುಮಟಾ, ಹೊನ್ನಾವರ, ಅಂಕೋಲಾ, ಭಟ್ಕಳ ತಾಲ್ಲೂಕಿನ ಅಳಿವೆ (ನದಿ ಸಮುದ್ರ ಸೇರುವ ಜಾಗ) ಅಂಚಿನಲ್ಲಿರುವ ರೈತರ ಗೋಳು ಇದು. ಸುಮಾರು 2,500 ಹೆಕ್ಟೇರ್‌ ಪ್ರದೇಶದಲ್ಲಿನ ಬೆಳೆ ಪ್ರತಿ ವರ್ಷವೂ ಸಮುದ್ರದ ನೀರಿನಿಂದ ಹಾನಿಗೀಡಾಗುತ್ತಿದೆ. ಈ ರೀತಿ ಆದಾಗಲೆಲ್ಲ ರೈತರು, ಸ್ಥಳೀಯ ರಾಜಕೀಯ ಮುಖಂಡರ ಮುಂದಾಳತ್ವದಲ್ಲಿ ಪರಿಹಾರಕ್ಕಾಗಿ ಮತ್ತು ಖಾರ್ಲೆಂಡ್ ಬಂಡ್ (ಬಾಂದಾರ್) ನಿರ್ಮಾಣಕ್ಕಾಗಿ ಮೊರೆ ಹೋಗುವುದು ಇಲ್ಲಿ ಸಾಮಾನ್ಯ ಸಂಗತಿ. ಆದರೆ, ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಯಾರೂ ಮುತುವರ್ಜಿ ವಹಿಸಿಲ್ಲ.

ರೈತರು ಕೂಡ ತಮ್ಮ ಸಮಸ್ಯೆಗೆ ಆ ಕ್ಷಣದಲ್ಲಿ ಮರುಕ ವ್ಯಕ್ತಪಡಿಸುವ ರಾಜಕೀಯ ಮುಖಂಡರ ಮೇಲೆ ಮಮಕಾರ ತೋರುತ್ತಾರೆ. ಆ ಮುಖಂಡರಿಗೆ ಬೇಕಿರುವುದೂ ಅದೇ. ಅಂತಹ ವಿಶ್ವಾಸವನ್ನೇ ಮೆಟ್ಟಿಲು ಮಾಡಿಕೊಂಡು ಮೇಲೇರಲು ಅವರು ಮುಂದಾಗುತ್ತಾರೆಯೇ ಹೊರತು ಕೃಷಿಕರ ಸಮಸ್ಯೆ ನೀಗಿಸುವ ಬಗ್ಗೆ ಲಕ್ಷ್ಯ ಕೊಡುವುದಿಲ್ಲ. ಜನರು ಸದಾಕಾಲ ತಮ್ಮ ಮನೆ ಬಾಗಿಲಿಗೆ ಎಡತಾಕುತ್ತಿರಬೇಕು ಎಂದು ನಿರೀಕ್ಷಿ­ಸುವ ರಾಜಕಾರಣಿಗಳ ಸಂಖ್ಯೆ ಕಡಿಮೆ ಏನಿಲ್ಲ.

ಕರಾವಳಿ ಭಾಗದ ರೈತರ ಈ ತೊಂದರೆಯನ್ನು ತಪ್ಪಿಸಲು ಖಂಡಿತ ಸಾಧ್ಯವಿದೆ. ಸರ್ಕಾರ ಕಟ್ಟುನಿಟ್ಟಾಗಿ ಗುಣಮಟ್ಟದ ಕಾಮಗಾರಿಗೆ ಒತ್ತು ನೀಡಿ ಯೋಜನಾಬದ್ಧವಾಗಿ ಖಾರ್ಲೆಂಡ್ ಬಂಡ್‌ ನಿರ್ಮಿಸಬೇಕು. ಸಮುದ್ರದ ಉಬ್ಬರವನ್ನು ವಿಶ್ಲೇಷಿಸಿ, ಅದಕ್ಕೆ ಅನುಗುಣವಾಗಿ ಖಾರ್ಲೆಂಡ್‌ ಬಂಡ್ ಎತ್ತರವಿರುವಂತೆ ನೋಡಿಕೊಳ್ಳಬೆೇಕು. ಮಳೆಗಾಲದಲ್ಲಿ ಗದ್ದೆಯಲ್ಲಿ ಸಂಗ್ರಹವಾದ ನೀರನ್ನು ಹೊರಕ್ಕೆ ಬಿಡಲು ಹಾಗೂ ಬೇಸಿಗೆಯಲ್ಲಿ ಉಪ್ಪು ನೀರು ಒಳ ನುಗ್ಗದಂತೆ ತಡೆಯಲು ಖಾರ್ಲೆಂಡ್‌ಗೆ ಸಮರ್ಪಕವಾದ ಹಲಗೆಯನ್ನು ಅಳವಡಿಸಬೇಕು. ಜೊತೆಗೆ ಖಾರ್ಲೆಂಡ್‌ನ ಅಕ್ಕಪಕ್ಕದಲ್ಲಿ ದೃಢವಾದ ತಡೆಗೋಡೆ (ಮಣ್ಣಿನ ಏರಿ) ನಿರ್ಮಿಸಬೇಕು.

ಆಗಾಗ್ಗೆ ಇಂಥ ಒಂದಿಷ್ಟು ಕೆಲಸಗಳನ್ನು ಸರ್ಕಾರ ಮಾಡಿದೆ. ಆದರೆ, ಇದರ ಹಿಂದೆ ರೈತರ ಹಿತ ಕಾಪಾಡುವ ಮನೋಭಾವ ಇಲ್ಲ. ಬೇರೆ ಯಾರದೋ ಹಿತ ಇರುತ್ತದೆ. ಖಾರ್ಲೆಂಡ್ ಬಂಡ್ ನಿರ್ಮಿಸಿ ಒಂದು ಮಳೆಗಾಲ ಕಳೆಯುವುದರೊಳಗೆ ಅದರ ಹಲಗೆಗಳು, ಏರಿ ಇರುವುದೇ ಇಲ್ಲ. ಮಳೆಯ ಹೊಡೆತಕ್ಕೋ ಅಥವಾ ಸಮುದ್ರ ಸೇರುವ ನೀರಿನ ರಭಸಕ್ಕೋ ಅವು ಕೊಚ್ಚಿ ಹೋಗಿರುತ್ತವೆ. ಅಂದರೆ ಸಣ್ಣ ನೀರಾವರಿ ಇಲಾಖೆಯಿಂದ ಕೈಗೊಂಡ ಕಾಮಗಾರಿ ಅಷ್ಟು ಕಳಪೆಯಾಗಿರುತ್ತದೆ.

ಇಂಥ ಕಳಪೆ ಕಾಮಗಾರಿಯಿಂದಾಗಿ ಹಲವು ಕಡೆ ಏರಿಯು ಶಿಥಿಲವಾಗಿ ಉಪಯೋಗಕ್ಕೆ ಬಾರದಂ­ತಾ­ಗುತ್ತದೆ. ಆದರೆ, ಆ ವೇಳೆಗೆ ಕಾಮಗಾರಿ ನಿರ್ವಹಿಸಿದವರಿಗೆ ಬಿಲ್ಲು ಸಂದಾಯವಾ­ಗಿ­ರುತ್ತದೆ. ಹಣ ಮಾಡಿಕೊಳ್ಳುವ ಉದ್ದೇಶದಿಂದ ಕೈಗೊ­ಳ್ಳುವ ಇಂಥ ಕಳಪೆ ಕಾಮಗಾರಿಗಳಿಂದ ರೈತರ ಸಮಸ್ಯೆ ಸಮಸ್ಯೆಯಾಗಿಯೇ ಉಳಿಯುತ್ತಿದೆ.

ಇದರ ಬದಲಿಗೆ ಸರ್ಕಾರ, ತಜ್ಞರೊಂದಿಗೆ ಸಮಾಲೋಚಿಸಿ ಎಷ್ಟು ಎತ್ತರದ ಬಂಡ್‌ ನಿರ್ಮಿಸಬೇಕು ಎಂಬುದನ್ನು ತೀರ್ಮಾನಿಸಬೇಕು. ಹಲಗೆಯೂ ಚೆನ್ನಾಗಿರಬೇಕು. ನೀರಿನಲ್ಲಿ ಸದಾ ತೋಯುವುದರಿಂದಲೂ ಅವು ಹಾಳಾಗುತ್ತವೆ. ಅವನ್ನೂ ಆಗಾಗ್ಗೆ ಬದಲಿಸಬೇಕು. ಅದರಲ್ಲಿ ಒಂದು ರಂಧ್ರ ಕೂಡ ಇರದಂತೆ ಎಚ್ಚರ ವಹಿಸಬೇಕು. ಒಂದೇ ಒಂದು ರಂಧ್ರವಿದ್ದರೂ ಉಪ್ಪು ನೀರು ನುಗ್ಗಿ, ಆಚೆ ಬದಿಯ ಕೃಷಿ ಭೂಮಿಯನ್ನು ಸೇರಿ ಬೆಳೆಯನ್ನು ಹಾಳು ಮಾಡುತ್ತದೆ. ಆದ್ದರಿಂದ ಸರ್ಕಾರ ಈ ಕಾಮಗಾರಿ ಕೈಗೊಂಡಾಗ ಕಿಂಚಿತ್ತೂ ಲೋಪವಾಗದಂತೆ ಎಚ್ಚರ ವಹಿಸಬೇಕು. ಆದರೆ, ಈವರೆಗೆ ಹಲವೆಡೆ ಕೈಗೊಂಡ ಕಾಮಗಾರಿಗಳನ್ನು ನೋಡಿದರೆ ನಿರ್ಲಕ್ಷ್ಯವೇ ಕಾಣುತ್ತದೆ.

ಉಪ್ಪು ನೀರು ನುಗ್ಗಿ ಹಾನಿಯಾಗಿದೆ ಎಂಬ ದೂರು ಬಂದಾಗ, ಸ್ಥಳಕ್ಕೆ ಭೇಟಿ ನೀಡುವ ಅಧಿಕಾರಿಗಳು ತಮ್ಮೊಂದಿಗೆ ತಜ್ಞರನ್ನೂ ಕರೆದುಕೊಂಡು ಹೋದರೆ ಉಬ್ಬರದ ಎತ್ತರವನ್ನು ಅಂದಾಜಿಸಲು ಅನುಕೂಲವಾಗುತ್ತದೆ. ಖಾರ್ಲೆ-­ಂಡ್‌ ಬಂಡ್ ನಿರ್ಮಿಸಿದ ಮಾತ್ರಕ್ಕೆ ಸಮಸ್ಯೆಗೆ ಪರಿಹಾರ ಸಿಕ್ಕಿತು ಎಂದಲ್ಲ. ಇದು ಹಾಳಾಗ­ದಂತೆ ಸಮರ್ಪಕವಾಗಿ ನಿರ್ವಹಣೆಯನ್ನೂ ಮಾಡ­ಬೇಕು. ಈ ಜವಾಬ್ದಾರಿಯನ್ನು ಸ್ಥಳೀಯ ಗ್ರಾಮ ಪಂಚಾಯ್ತಿಗಳಿಗೆ ವಹಿಸಿ, ಇದಕ್ಕೆ ಬೇಕಾದ ಅನುದಾನವನ್ನು ಒದಗಿಸಬೇಕು. ಬಾಂದಾರ ಸಡಿಲಗೊಂಡಿದ್ದರೆ ಪ್ರತಿ ಬೇಸಿಗೆಯಲ್ಲೂ ಅವನ್ನು ದುರಸ್ತಿಪಡಿಸಬೇಕು.

ಉಪ್ಪು ನೀರು ಸಿಹಿ ನೀರಿನೊಂದಿಗೆ ಬೆರೆಯುವುದನ್ನು ತಡೆದರೆ ಇನ್ನಷ್ಟು ಪ್ರದೇಶದಲ್ಲಿ ಬೆಳೆ ಮಾಡಲು ಸಾಧ್ಯವಾಗುತ್ತದೆ. ಅನ್ನದ ಬಟ್ಟಲಿನ ವಿಸ್ತರಣೆಗೆ ಅವಕಾಶ ಇರುವುದರಿಂದ ಇದಕ್ಕೆ ಸರ್ಕಾರ ಒತ್ತು ನೀಡಬೇಕಿದೆ. ಜತೆಗೆ, ಉಪ್ಪಿನ ಉದ್ಯಮಕ್ಕೆ ಉತ್ತೇಜನ ನೀಡುವ ಭರದಲ್ಲಿ ಕೃಷಿ ಜಮೀನಿಗೆ ತೊಂದರೆಯಾಗದಂತೆ ಎಚ್ಚರ ವಹಿಸಬೇಕಾದ ಜವಾಬ್ದಾರಿ ಅಧಿಕಾರಿಗ­ಳದ್ದಾಗಿದೆ. ಉಪ್ಪಿನ ಆಗರಕ್ಕೆ ಹೊಂದಿಕೊಂಡ

ಕೃಷಿ ಜಮೀನಿಗೆ ಉಪ್ಪು ನೀರಿನ ಅಂಶ ಸೇರುವುದರಿಂದ ಬೆಳೆ ಮಾಡಲು ಆಗುತ್ತಿಲ್ಲ ಎಂಬ ರೈತರ ಆರೋಪ ಕೇಳಲು ಅಧಿಕಾರಿಗಳಿಗೆ ವ್ಯವಧಾನವೇ ಇಲ್ಲ. ಇದರೊಟ್ಟಿಗೆ ರೈತರು ಕೂಡ ತಮ್ಮ ಮನೆಯನ್ನು ಜೋಪಾನ ಮಾಡುವಂತೆಯೇ ಜಮೀ­ನನ್ನೂ ರಕ್ಷಿಸಿಕೊಳ್ಳಬೇಕು. ಉಪ್ಪು ನೀರು ತಮ್ಮ ಜಮೀನಿಗೆ ಸೇರದಂತೆ ಸ್ವಲ್ಪ ಎತ್ತರಿಸಿದ ಒಡ್ಡುಗಳನ್ನು ಕಟ್ಟಿಕೊಳ್ಳಬೇಕು. ಜತೆಗೆ, ಸ್ಥಳೀಯ ತಳಿಯ ಭತ್ತ ಬೆಳೆಯಬೇಕು. ಆದರೆ ಈಗ ಎಲ್ಲೆಡೆಯಂತೆ ಇಲ್ಲೂ ಹೆಚ್ಚು ಇಳುವರಿ ನೀಡುವ ಆಧುನಿಕ ತಳಿಗಳ ಮೊರೆ ಹೋಗಿದ್ದಾರೆ.

ಹೊಸ ತಳಿಗಳನ್ನು ಬೆಳೆಯುವುದರಿಂದ ಕಾಳಿನ ಜೊತೆಗೆ ಸಿಗುವ ಹುಲ್ಲು ಮಾರಿ ಒಂದಿಷ್ಟು ಹಣ ಗಳಿಸಬ­ಹುದು ಎಂಬ ಉದ್ದೇಶವೂ ಇದರ ಹಿಂದಿದೆ. ಆದರೆ ಉಪ್ಪು ನೀರು ಪ್ರತಿರೋಧಿಸುವ ಶಕ್ತಿ ಈ ತಳಿ­ಗಳಿಗೆ ಇಲ್ಲ ಎಂಬುದನ್ನು ರೈತರು ಮರೆಯ­ಬಾ­ರದು. ಸಮುದ್ರದ ಮಟ್ಟ ದಿನದಿಂದ ದಿನಕ್ಕೆ ಏರುತ್ತಿದೆ ಎಂಬುದನ್ನು ಗಮನದಲ್ಲಿ ಇಟ್ಟುಕೊ­ಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT