ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಳುವ ಯೋಗಿಯ ಅಳುವ ಕೇಳುವ...

Last Updated 14 ಸೆಪ್ಟೆಂಬರ್ 2015, 19:44 IST
ಅಕ್ಷರ ಗಾತ್ರ

ರೈತರ ಆತ್ಮಹತ್ಯೆಗಳ ಸರಣಿಯಿಂದ ತತ್ತರಿಸುತ್ತಿರುವ ನಮ್ಮ ರಾಜ್ಯದಲ್ಲಿ, ಮಹಾದಾಯಿ ನೀರು, ಕಳಸಾ- ಬಂಡೂರಿ ನಾಲೆಗೆ ಆಗ್ರಹಿಸುವ ರೈತರ ಪ್ರತಿಭಟನೆಗಳ ಕಿಚ್ಚು ಹೊತ್ತಿ ಉರಿಯುತ್ತಿದೆ. ಬರದ ಬೇಗೆ ಸಾಲದೆಂಬಂತೆ ವಿದ್ಯುತ್ ಅಭಾವ ರೈತರನ್ನು ಇನ್ನಷ್ಟು ಸುಡುತ್ತಿದೆ. ಈ ಹೊತ್ತಿನಲ್ಲಿ ಹುಬ್ಬಳ್ಳಿಯಲ್ಲಿ ರೈತರ ಪರವಾಗಿ ನಡೆದ ಕನ್ನಡ ಚಿತ್ರರಂಗದ ಬೃಹತ್ ಪ್ರದರ್ಶನ ಮತ್ತು ಮೈಸೂರಿನಲ್ಲಿ ನಡೆದ ಬಿಜೆಪಿಯ ಮೊದಲ ಹಂತದ ರೈತರ ಚೈತನ್ಯ ಯಾತ್ರೆಯ ಸಮಾರೋಪ ಇವೆಲ್ಲವೂ ತಮ್ಮ ಅಳಲನ್ನು ಯಾರೋ ಆಲಿಸುತ್ತಿದ್ದಾರೆ ಎಂಬ ಸಣ್ಣ ಸಮಾಧಾನವನ್ನು ರೈತರಲ್ಲಿ ಮೂಡಿಸಿರಬಹುದು ಎಂದು ಭಾವಿಸೋಣ.

ಮೊನ್ನೆ ಭಾನುವಾರ ನಡೆದ ಎರಡೂ ಸಮಾವೇಶಗಳಲ್ಲಿ ತಮ್ಮನ್ನೇ ಕುರಿತ ಭಾಷಣಗಳನ್ನು ಕೇಳುತ್ತಾ ಕುಳಿತ ಲಕ್ಷಾಂತರ ರೈತರು ಒಮ್ಮೆಲೇ ರಾಜ್ಯದ ಜನರ ಕಣ್ಣಿಗೆ ಬಿದ್ದರು. ಬರಗಾಲದಲ್ಲಿ ಬೆಂದ ರೈತರಿಗೆ ಬೇರೆ ಏನಿಲ್ಲವಾದರೂ ಭರವಸೆಗಳ ಸುರಿಮಳೆ ದೊರೆಯಿತು. ಹಾಗೇ ಟಿವಿ ಚಾನೆಲ್‌ಗಳಿಗೆ ಟಿಆರ್‌ಪಿ ದಯಪಾಲಿಸುವ ಭಾಗ್ಯವೂ ಅವರಿಗೆ ದಕ್ಕಿತು.

ಈ ಸಮಾವೇಶಗಳ  ಉದ್ದೇಶಗಳು ಏನಾದರೂ ಇರಲಿ, ಈಗ ಅವು ನಡೆದದ್ದು ರೈತರಿಗಾಗಿ ಎಂಬುದಂತೂ ಸದ್ಯಕ್ಕೆ ಬಹಳ ಮುಖ್ಯ. ‘ರೈತರನ್ನು ಬಳಸಿಕೊಂಡು ರಾಜಕಾರಣಿಗಳು, ಚಿತ್ರರಂಗದವರು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ’ ಎಂಬ ಆರೋಪ ಇದ್ದೇ ಇರುತ್ತದೆ. ಯಾರು ಏನಾದರೂ ಬೇಯಿಸಿಕೊಳ್ಳಲಿ ಒಟ್ಟಿನಲ್ಲಿ ಬೇಳೆ ಬೆಳೆಯುವ ರೈತರು, ಬೆಳೆದಿದ್ದಕ್ಕೆ ಬೆಲೆ ಸಿಗದೆ ಬೇಯುವ ರೈತರು ಈಗ ಮತ್ತೊಮ್ಮೆ ಚರ್ಚೆಯ ಕೇಂದ್ರವಾಗಿದ್ದಾರೆ. 

ದೇಶದ ಜನಸಂಖ್ಯೆಯ ಶೇ 60ಕ್ಕಿಂತಲೂ ಹೆಚ್ಚುಪಾಲು ಜನರು ಕೃಷಿಯಲ್ಲಿ ತೊಡಗಿರುವುದರಿಂದ ‘ನಮ್ಮದು ಕೃಷಿ ಪ್ರಧಾನ ದೇಶ’ ಎಂದೇ ಲಾಗಾಯ್ತಿನಿಂದ ಹೇಳಿಕೊಳ್ಳುತ್ತಿ ದ್ದೇವೆ. ಆದರೆ ದೇಶದ ಯಾವ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಸಂಕಥನಗಳಲ್ಲೂ ಕೃಷಿ ಮಾಡುವ ರೈತರು ಚರ್ಚೆಯ ಪ್ರಧಾನ ವಸ್ತುವಾಗುವುದಿಲ್ಲ. ದೇಶದ ಅಭಿವೃದ್ಧಿಯ ವ್ಯಾಖ್ಯಾನ ಮತ್ತು ಮೌಲ್ಯಮಾಪನ ನಡೆಯುವುದು ಉದ್ಯಮ ಎಂಬ ಪರಿಕಲ್ಪನೆಯ ಮೇಲೆ. ಯುವಜನರಿಗೆ ಹೊಸ ಉದ್ಯೋಗ ಸೃಷ್ಟಿ ಎಂದರೆ ಹೊಸ ಉದ್ಯಮಗಳ ಸ್ಥಾಪನೆ ಎಂಬ ಅರ್ಥವೇ ರೂಢಿಯಲ್ಲಿದೆ. ದೇಶದ ಪ್ರಗತಿ, ಉನ್ನತಿ, ಅಭಿವೃದ್ಧಿ ಇತ್ಯಾದಿ ಮಾತುಗಳೆಲ್ಲವೂ ಔದ್ಯಮೀಕರಣದ ಪ್ರಮಾಣವನ್ನೇ ಅವಲಂಬಿಸುತ್ತದೆ. ನಿರಂತರ ಉತ್ಪಾದನಾ ಚಟುವಟಿಕೆ ನಡೆಯುವ ಕೃಷಿಯನ್ನು ಒಂದು ‘ಉದ್ಯಮ’ ಎಂದು ಯಾರೂ ಯಾವತ್ತೂ
ಪರಿಗಣಿಸುವುದಿಲ್ಲ.

ಇಂಥ ಪರಿಸ್ಥಿತಿಯಲ್ಲಿ ರೈತರ ಕಷ್ಟನಷ್ಟಗಳು ಅವರದೇ ಆಗಿ ಉಳಿದುಬಿಡುತ್ತವೆ. ಈ ಸಮಸ್ಯೆ ಇವತ್ತಿನದಲ್ಲ. ಮನುಷ್ಯನಿಗೆ ಬೇಸಾಯ ಎನ್ನುವುದು ಪರಿಚಯವಾದ ದಿನದಿಂದಲೂ ಇದು ಕಾಣುತ್ತದೆ. ಜಗತ್ತಿನ ಇತಿಹಾಸವನ್ನು ಸಾಮ್ರಾಟರ ಮತ್ತವರ ಸಮರ ಸಂಗ್ರಾಮಗಳ ರಮ್ಯಕಥೆ ಎಂದೇ ನಿರೂಪಿಸುವಾಗ, ಅದರಲ್ಲಿ ರೈತರ ಸಮಸ್ಯೆ ಇಣುಕುವುದು ಕಷ್ಟ. ನಮ್ಮ ದೇಶದ ರಾಜರೂ ನಿರಂತರವಾಗಿ ಯುದ್ಧಗಳನ್ನು ಮಾಡಲು ಅವರ ಬೊಕ್ಕಸ ತುಂಬಿರಲೇ ಬೇಕಿತ್ತು. ರೈತರು, ಕಾಯಕಜೀವಿಗಳಿಂದ ವಸೂಲು ಮಾಡುತ್ತಿದ್ದ ಕಂದಾಯದಿಂದಲೇ ಅವರ ಬೊಕ್ಕಸ ತುಂಬುತ್ತಿತ್ತು. ರಾಜರ ಜೊತೆಗೆ ಸಂಸ್ಥಾನ, ಸಾಮ್ರಾಜ್ಯದಲ್ಲಿದ್ದ ಅಗ್ರಹಾರಗಳು, ದೇವಸ್ಥಾನಗಳು, ಮಠಗಳು ಕೂಡ ರೈತರಿಂದ ಸುಂಕ ವಸೂಲಿ ಮಾಡುತ್ತಿದ್ದವು ಎನ್ನುವ ಸತ್ಯಸಂಗತಿ ಶಾಸನಗಳಲ್ಲಿ ದಾಖಲಾಗಿದೆ. ರೈತರಿಂದ ಉತ್ಪನ್ನಗಳನ್ನು ಕೊಳ್ಳುತ್ತಿದ್ದ ವರ್ತಕ ವರ್ಗ ಮಾಡುತ್ತಿದ್ದ ಶೋಷಣೆಗಂತೂ ಮಿತಿಯೇ ಇರಲಿಲ್ಲ.

ಫಸಲು ಬಂದೊಡನೆ ರೈತರಿಂದ ಹೇಗೆ ವಸೂಲು ಮಾಡಬೇಕು, ಒಳ್ಳೆಯ ಮಳೆ ಬೆಳೆ ಆದಾಗ ಅವರಿಂದ ಹೇಗೆ ಹೆಚ್ಚು ವಸೂಲು ಮಾಡಿ ಭಂಡಾರ ತುಂಬಿಕೊಳ್ಳಬೇಕು, ಯಾವ್ಯಾವುದರ ಮೇಲೆ ಎಷ್ಟೆಷ್ಟು ತೆರಿಗೆ ಹಾಕಬೇಕು, ರೈತರು, ಕುಶಲಕರ್ಮಿಗಳು ಕೊಡದಿದ್ದರೆ ಏನೇನು ಶಿಕ್ಷೆ ಕೊಡಬೇಕು ಮುಂತಾದ್ದರ ಬಗ್ಗೆ ಆಳುವವರಿಗೆ ಮಾಡಿದ ಬೋಧನೆಗಳೇ ಕೌಟಿಲ್ಯನ ‘ಅರ್ಥಶಾಸ್ತ್ರ’ದ ಬಹುಮುಖ್ಯ ಅಧ್ಯಾಯಗಳಾಗಿವೆ.

ಕನ್ನಡನಾಡಿನ ಉದಾಹರಣೆಯನ್ನೇ ಕೊಡುವುದಾದರೆ, ಕಾಲಘಟ್ಟಗಳ ವ್ಯತ್ಯಾಸ ಇದ್ದರೂ ರೈತರ ಕೆಲಸಕಾರ್ಯಗಳಿಗೆ ಅತ್ಯಗತ್ಯವಾಗಿದ್ದ ಎಲ್ಲದರ ಮೇಲೂ ತೆರಿಗೆಗಳಿದ್ದವು. ನೇಗಿಲು, ಎತ್ತು, ಎಮ್ಮೆ, ಹಸು, ಕುರಿ, ಕತ್ತೆ, ಆಡು, ಗಾಡಿ ಇವುಗಳ ಮೇಲೆ ಮಾತ್ರವಲ್ಲದೆ, ಬೇಸಾಯಕ್ಕೆ ಬಹಳ ಅಗತ್ಯವಾದ ತಿಪ್ಪೆಯ ಮೇಲೂ ತೆರಿಗೆ ಹಾಕಲಾಗುತ್ತಿತ್ತು ಎಂಬುದನ್ನು ಶಾಸನ ನೋಡಿಯೇ ನಂಬಬೇಕು. ಕೃಷಿಯ ಆಸುಪಾಸಿನ ಕೆಲಸಗಳಿಗೆ ಬಳಸಲಾಗುತ್ತಿದ್ದ ಕುಲುಮೆ, ಗಾಣ, ಮಗ್ಗ, ಬಣ್ಣ ಇವುಗಳಿಗೂ ತೆರಿಗೆ ಇತ್ತು. ಒಬ್ಬ ರಾಜನ ತೆರಿಗೆ ವಸೂಲಿ ವ್ಯವಸ್ಥೆ ಎಷ್ಟು ಬಿಗಿ ಆಗಿರುತ್ತಿತ್ತೋ ಅವನ ಆಡಳಿತ ಅಷ್ಟು ಗೆಲುವು ಕಾಣುತ್ತಿತ್ತು, ಕಾದಾಟಗಳಲ್ಲಿ ಆಗುತ್ತಿದ್ದ ಸೋಲು ಮಾತ್ರ ಆಳುವವರನ್ನು ಅಡಗಿಸುತ್ತಿತ್ತು.

ನಾಗರಿಕತೆಗಳ ಪಳೆಯುಳಿಕೆಗಳಲ್ಲಿ ಕೃಷಿಗೆ ಬೇಕಾದ ನೀರಾವರಿ ಕಾಲುವೆಗಳು ಮುಖ್ಯವಾಗಿ ಕಾಣಿಸುತ್ತವೆ. ಕೃಷಿ ಉತ್ಪನ್ನಗಳು ವಿಭಿನ್ನ ನಾಗರಿಕತೆಗಳನ್ನು ಬೆಸೆದಿವೆ. ರೈತರು ಬೆಳೆದ ಹತ್ತಿ, ಕರಿಮೆಣಸು, ದಾಲ್ಚಿನ್ನಿ ಮುಂತಾದುವು ದೂರತೀರ ವ್ಯಾಪಾರಿಗಳನ್ನು ಆಕರ್ಷಿಸಿವೆ. ಪರದೇಶಗಳಿಗೆ ಧರ್ಮ ಪ್ರಚಾರಕ್ಕೆ ಹೋದ ಮುನಿಗಳು ಕೃಷಿ ಉತ್ಪನ್ನಗಳ ಪ್ರಸಾರವನ್ನೂ ಮಾಡಿದ್ದಿದೆ. ಅವುಗಳ ವ್ಯಾಪಾರದ ನೆಪದಲ್ಲಿ ಬಂದ ವರ್ತಕರು ದಬ್ಬಾಳಿಕೆ ನಡೆಸಿ ದೇಶವನ್ನೇ ಆಕ್ರಮಿಸಿಕೊಂಡದ್ದಕ್ಕಂತೂ ಲೆಕ್ಕವಿಲ್ಲ. ಬರಗಾಲ, ಪ್ರವಾಹಗಳಿಂದ ಕೃಷಿಗೆ ಹಾನಿಯಾದಾಗ, ಮೊಘಲರೂ ಸೇರಿ ಕೆಲವು ರಾಜರು ತೆರಿಗೆ ವಸೂಲಿಯಲ್ಲಿ ರೈತರಿಗೆ ಅಲ್ಪಸ್ವಲ್ಪ ರಿಯಾಯ್ತಿ ತೋರಿರಬಹುದು. ಆದರೆ ಎಲ್ಲರೂ ರೈತರತ್ತ ಗಮನ ಕೊಡುತ್ತಿದ್ದದ್ದು ಅವರು ಗೋಳು ಕೇಳಿಸಿದಾಗ ಮಾತ್ರ.

ಯಾವ ಕಾಲದಲ್ಲಾದರೂ ಆಗಿರಲಿ, ರೈತರು ‘ಸುಂಕದವನ ಮುಂದೆ ಸುಖ ದುಃಖ’ ಹೇಳಿಕೊಂಡರೆ ಏನೂ ಪ್ರಯೋಜನ ಇರುತ್ತಿರಲಿಲ್ಲ. ಎಲ್ಲಾ ರೀತಿಯ ಸುಲಿಗೆಯನ್ನು ಸಹಿಸಿಕೊಳ್ಳುವುದು ರೈತರಿಗೆ ಅನಿವಾರ್ಯವಾಗಿತ್ತು. ಹಾಗಿದ್ದ ಪರಿಸ್ಥಿತಿಯಲ್ಲೂ ‘ನಮ್ಮ ಊರಿನಲ್ಲಿ ಎಮ್ಮೆಗಳ ಮೇಲೆ ಇದುವರೆಗೆ ಸುಂಕ ಇರಲಿಲ್ಲ, ಈಗ  ಹೇರಿದರೆ ಅದನ್ನು ಕೊಡುವುದಿಲ್ಲ’ ಎಂದು ಜನರು ಪ್ರತಿಭಟಿಸಿದ ವಿವರ ಕೋಲಾರದ ಕ್ರಿ.ಶ. 1072ರ ಶಾಸನದಲ್ಲಿ ಸಿಗುತ್ತದೆ! ಏನೆಂದರೂ ರೈತರ ಸಂಕಷ್ಟಕ್ಕೆ ತಕ್ಕ ಸ್ಪಂದನ ಯಾವ ಕಾಲದಲ್ಲೂ ಕಾಣುವುದಿಲ್ಲ. ಯಾವ ದೇಶ ಅಥವಾ ಪ್ರದೇಶದ ಇತಿಹಾಸವನ್ನಾದರೂ ರೈತರ ದೃಷ್ಟಿಕೋನದಿಂದ ಅಧ್ಯಯನ ಮಾಡಿದರೆ ಅದು ಹಸಿರುಹಸಿರಾಗಿ ಕಾಣುವುದಿಲ್ಲ. ರೈತರ ಪಾಲಿಗೆ ಎಂದಾದರೂ ‘ಸುವರ್ಣ ಯುಗ’ ಅನ್ನುವುದು ಸಿಗಲು, ಅಸಲಿಗೆ ಅದು ಇತಿಹಾಸದಲ್ಲಿ ಇದ್ದರೆ ತಾನೇ?

ಬ್ರಿಟಿಷರ ಆಡಳಿತ ಕಾಲದಲ್ಲಿ ನಮ್ಮ ರೈತರ ಬೇಗೆ ಬವಣೆ ಬೆಳೆದದ್ದು ಬೇರೆ ಕಥೆ. ತಮ್ಮ ಉದ್ಯಮಗಳಿಗೆ ನೆರವಾಗಲೆಂದು ಅವರು ನಮಗೆ ಉದ್ಯಮವನ್ನು ಪರಿಚಯಿಸಿದರು. ಬರಗಾಲವಿದ್ದಾಗಲೂ ಬೇಸಾಯಗಾರರಿಗೆ ತೆರಿಗೆ ಹಾಕಿದ್ದ ಅವರು, ನಂತರ ಬರಗಾಲಕ್ಕೆ ಪರಿಹಾರ ಕೊಡುವ ಕಾನೂನನ್ನೂ ತಂದರು. ಕ್ರಿ.ಶ. 1875 ರಲ್ಲಿ ‘ಡೆಕ್ಕನ್ ದಂಗೆ’ ಯಂಥ ಪ್ರತಿಭಟನೆ ಅಡಗಿಸುವುದು ಅವರಿಗೆ  ಕಷ್ಟವಾಗಿರಲಿಲ್ಲ. ನಮ್ಮ ದೇಶದ ಕೃಷಿಯಲ್ಲಿ ಬ್ರಿಟಿಷರಿಗೆ ಏನಾದರೂ ಆಸಕ್ತಿ ಇದ್ದರೆ- ಮ್ಯಾಂಚೆಸ್ಟರ್ ಸೇರಿ ಅನೇಕ ಸ್ಥಳಗಳಲ್ಲಿದ್ದ ಅವರ ಜವಳಿ ಗಿರಣಿಗಳಿಗೆ ಇಲ್ಲಿನ ನೆಲದಲ್ಲಿ ಹತ್ತಿ ಬೆಳೆಸಿ ಕಳಿಸುವಂಥ, ತಮ್ಮ ಮಾರುಕಟ್ಟೆಗಳಿಗೆ ಇಲ್ಲಿನ ಗುಡ್ಡಗಾಡುಗಳಲ್ಲಿ ಚಹಾ ಬೆಳೆದು ಕಳಿಸುವಂಥ ವಿಷಯಗಳಲ್ಲಿ ಮಾತ್ರ. ತಂಬಾಕು, ಕಾಫಿ ಸೇರಿದಂತೆ, ತಮ್ಮ ವ್ಯಾಪಾರ ವಿಸ್ತರಿಸಲು ಭಾರತದ ಕೃಷಿ ಎಷ್ಟು ಎಂಬುದಕ್ಕೇ ಅವರ ಗಮನ. ಬ್ರಿಟಿಷರ ಕೃಷಿ ಆರ್ಥಿಕತೆ ಕುರಿತು ಅರ್ಥಶಾಸ್ತ್ರಜ್ಞರು ಹೇಳಿರುವುದು ಎಷ್ಟಿದೆಯೋ ಹೇಳಲಿರುವುದು ಅದರ ಹತ್ತರಷ್ಟಿದೆ.

ಸ್ವಾತಂತ್ರ್ಯ ಬಂದ ಮೇಲೆ ರೈತರ ದುಃಖದ ಬೇರು ಬಿಳಿಲುಗಳ ಪುರಾಣ ಬೇರೆಯದು. ಒಂದಾದ ಮೇಲೊಂದು ಪಂಚವಾರ್ಷಿಕ ಯೋಜನೆ ಮಾಡಿ, ಹಲವೆಡೆ ಭಾರೀ ಅಣೆಕಟ್ಟುಗಳನ್ನು ಕಟ್ಟಿ ‘ನಾವು ಬೆಳೆದದ್ದೇನು ಬರಿ ಹಸಿವೆ?’ ಎಂಬ ಕವಿವಾಣಿ ನೆನಪಿಗೆ ಬರುತ್ತದೆ. ಕೊನೆಗಿಂದು ‘ರೈತರ ಆತ್ಮಹತ್ಯೆಗಳ ದೇಶ’ ಎಂಬ ಬಿರುದೂ ನಮಗೆ ಸಿಕ್ಕಿದೆ. ನಮ್ಮ ರೈತರಿಗೆ ಮೊದಲೇ ಇದ್ದ ಮಳೆ ಕೊರತೆ, ಬೀಜಧನದ ಕೊರತೆ, ಹಾಯಿನೀರಿನ ಕೊರತೆ, ಕೀಟಬಾಧೆ, ಬೆಳೆ ವೈಫಲ್ಯ ಮುಂತಾದ ಹಲವು ಬಾಧೆಗಳು ಇದ್ದದ್ದು ನಿಜ. ಈಗ ಅವುಗಳ ಜೊತೆ ಬೆಳೆಸಾಲ ಉಳಿಕೆ, ಬೆಳೆಗಳ ಬೆಲೆ ಕುಸಿತ, ಬೀಜ-ಗೊಬ್ಬರಗಳ ಬೆಲೆ ಏರಿಕೆ, ಹೊಸ ರೋಗ ಬಾಧೆ, ಬಗೆ ಬಗೆಯ ವಿಷ ಪ್ರಸಾರ ಮುಂತಾದ ಹಲವು ಹೊಸ ಬಾಧೆಗಳು ಸೇರಿಕೊಂಡಿವೆ.

ನಮ್ಮ ಬಡ ಬೋರೇಗೌಡನ ಒಂದೆರಡು ಗುಂಟೆ ಹೊಲ ಬಹುರಾಷ್ಟ್ರೀಯ ಕಂಪೆನಿಗಳ ಆಡುಂಬೊಲವಾದ ರೀತಿಯಂತೂ ನಿಜಕ್ಕೂ ನಮ್ಮ ದೇಶದ ವ್ಯಥೆಯ ಕಥೆ. ಜಾಗತೀಕರಣ ಯಾವುದರ ಪಾಲಿಗೆ ಎಂಥ ಸಂಜೀವಿನಿ ಆಗಿದೆಯೋ ಗೊತ್ತಿಲ್ಲ, ರೈತರ ಪಾಲಿಗಂತೂ ಅದು ಮರಣಶಾಸನವಲ್ಲದೆ ಬೇರೆಯಲ್ಲ. ಜಾಗತೀಕರಣ, ಉದಾರೀಕರಣ, ಖಾಸಗೀಕರಣ ಇವೆಲ್ಲವೂ ರೈತರನ್ನು ‘ತ್ರಿಕರಣ ಪೂರ್ವಕ’ವಾಗಿ ಹೀರಿ ಹಿಂಡಿ ಹಿಪ್ಪೆ ಮಾಡುತ್ತಿರುವುದು ಸುಳ್ಳಲ್ಲ. ಹಳ್ಳಿಗಳ ಮೇಲೆ ನಗರೀಕರಣದ ದಾಳಿಯ ಬಗ್ಗೆಯಂತೂ ಹೇಳುವಂತೆಯೇ ಇಲ್ಲ.

ತೊಂಬತ್ತರ ದಶಕದಲ್ಲಿ ಜಾಗತೀಕರಣ ಆರಂಭವಾಗಿದ್ದಕ್ಕೂ ರೈತರ ಆತ್ಮಹತ್ಯೆಗಳು ಹೆಚ್ಚಿದ್ದಕ್ಕೂ ಸಂಬಂಧ ಇಲ್ಲ ಎಂದು ಹೇಳಲು ಸಾಧ್ಯವೇ ಎಂಬ ಗ್ರಾಮೀಣ ಪತ್ರಕರ್ತ ಪಿ. ಸಾಯಿನಾಥ್ ಅವರ ಪ್ರಶ್ನೆಗೆ ಅವರೇ ಮುಂದಿಡುವ ಆತ್ಮಹತ್ಯೆಯ ಅಂಕಿಅಂಶಗಳು ಉತ್ತರ ಕೊಡುತ್ತವೆ. ಕರ್ನಾಟಕ, ಮಹಾರಾಷ್ಟ್ರ, (ಇಬ್ಭಾಗಕ್ಕೆ ಮುಂಚಿನ) ಆಂಧ್ರ ಪ್ರದೇಶ, ಮಧ್ಯ ಪ್ರದೇಶ ಮತ್ತು ಛತ್ತೀಸಗಡ ಮುಖ್ಯವಾಗಿ ಈ ಐದು ರಾಜ್ಯಗಳಲ್ಲಿ ರೈತರ ಆತ್ಮಹತ್ಯೆಗಳು ಹುಲುಸಾಗಿವೆ. ಈ ಕ್ಷಣದ ಸತ್ಯವೆಂದರೆ, ನಮ್ಮ ದೇಶದಲ್ಲಿ ಪ್ರತೀ ದಿನ 46 ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ; ಅಂದರೆ ಪ್ರತೀ ಅರ್ಧ ಗಂಟೆಗೆ ಒಬ್ಬ ರೈತ...

ರೈತರ ಆತ್ಮಹತ್ಯೆಗಳನ್ನು ತಡೆಯಬೇಕು- ಹೇಗೆ ತಡೆಯಲಾಗುತ್ತಿದೆ ಗೊತ್ತೇ? ‘ನ್ಯಾಷನಲ್ ಕ್ರೈಮ್ಸ್ ರೆಕಾರ್ಡ್ ಬ್ಯೂರೋ’ ಎಂಬ ಹೆಸರಿನ ಒಂದು ರಾಷ್ಟ್ರೀಯ ಸಂಸ್ಥೆ ಚಿತ್ರಗುಪ್ತನಂತೆ ಸತ್ತ ರೈತರ ಲೆಕ್ಕ ಇಡುತ್ತಿದೆ. ದೇಶದಲ್ಲಿ ನಡೆಯುವ ಎಲ್ಲ ಇತರ ಅಪರಾಧಗಳು, ಆತ್ಮಹತ್ಯೆಗಳ ಜೊತೆ ರೈತರದೂ ಸೇರುತ್ತದೆಯೇ ಹೊರತು ಅದಕ್ಕೇ ಪ್ರತ್ಯೇಕ ಗಮನ ಇರುವುದಿಲ್ಲ. ಸಾಮಾನ್ಯವಾಗಿ ಅಪರಾಧಗಳಲ್ಲಿ ಸತ್ತ, ಕೊಲೆಯಾದ ವ್ಯಕ್ತಿಗಳ ವೃತ್ತಿ, ವಲಯ, ಕ್ಷೇತ್ರಗಳ ವಿವರವನ್ನು ಅಲ್ಲಿ ದಾಖಲಿಸಲಾಗುತ್ತದೆ. ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡರೆ, ಅವನ ವಿವರದಲ್ಲಿ ‘ಕೃಷಿ’ ಎಂಬುದರ ಬದಲಿಗೆ ‘ಇತರೆ’ ಎಂಬ ಅಥವಾ ‘ಸ್ವಂತ ಉದ್ಯೋಗ’ ಎಂಬ ಪಟ್ಟಿಯ ಅಡಿಯಲ್ಲಿ ಅದನ್ನು ಸೇರಿಸಿಬಿಟ್ಟರಾಯಿತು, ರೈತರ ಆತ್ಮಹತ್ಯೆ ತಾನಾಗಿ ಕಡಿಮೆ ಆಗುತ್ತದೆ. ಇದನ್ನು ಸಾಯಿನಾಥ್ ‘ರೈತರ ಆತ್ಮಹತ್ಯೆ  ಮಾಹಿತಿಯ ಹತ್ಯೆ’ ಎಂದು ಕರೆದಿರುವುದು ಎಷ್ಟೊಂದು ಸೂಕ್ತವಾಗಿದೆ!

ರೈತರು ಆತ್ಮಹತ್ಯೆ ಮಾಡಿಕೊಳ್ಳುವುದನ್ನು ತಡೆಯಬೇಕು. ರೈತರು ಕೃಷಿ ಸಾಲ ಪಡೆದು ಕುಡಿಯಬಹುದು, ಜೂಜಾಡಬಹುದು, ಮನೆಗೆ ಹೆಂಚು ಹೊದಿಸಬಹುದು, ತಂಗಿಗೆ ಒಡವೆ ಮಾಡಿಸಬಹುದು, ಮಗಳ ಮದುವೆ ಮಾಡಬಹುದು, ತಂದೆಯ ತಿಥಿ ಮಾಡಬಹುದು, ಇನ್ನೂ ಏನೇನಕ್ಕೋ ಖರ್ಚು ಮಾಡಬಹುದು. ಆದರೆ ಅವರ ಆತ್ಮಹತ್ಯೆಗೆ ಕಾರಣವಾದ ಪೂರ್ವ ಪುರಾಣ ಮತ್ತು ನಂತರದ ಗರುಡ ಪುರಾಣ ಬೇರೆಯೇ ಆಗಿರುತ್ತದೆ. ಅದು ಒಬ್ಬ ರೈತನ ಆರ್ಥಿಕತೆಯ ಕಥೆಯನ್ನು ಮಾತ್ರವಲ್ಲ, ಒಂದು ದೇಶದ ಆರ್ಥಿಕತೆಯ ಕಥೆಯನ್ನೂ ಹೇಳುತ್ತದೆ. ಒಂದೆರಡು ಲಕ್ಷ ರೂಪಾಯಿಗಳ ಸಾಲದ ಹೊರೆ ತಡೆದುಕೊಳ್ಳಲಾರದೆ ರೈತರು ತಲೆದಂಡ ಕೊಡುವುದೆಂದರೆ? ಇಪ್ಪತ್ತು ಮೂವತ್ತು ಸಾವಿರ ಕೋಟಿಗಳ ಸಾಲ ಉಳಿಸಿಕೊಂಡ ಉದ್ಯಮಿಗಳು ತಲೆಎತ್ತಿ ತಿರುಗುವುದೆಂದರೆ? ನಮ್ಮ ಆರ್ಥಿಕ ನೀತಿಯ ಬೀಜವೂ ಸರಿಯಿಲ್ಲ, ಅದರಿಂದ ಬೆಳೆಯೂ ಸರಿಯಿಲ್ಲ.

ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳು ಮಾತ್ರವಲ್ಲ, ಅವರಿವರೆನ್ನದೆ ನಾವೆಲ್ಲರೂ ರೈತರ ಆತ್ಮಹತ್ಯೆ ತಡೆಯಲು ಏನು ಮಾಡಬಹುದೋ ಅದೆಲ್ಲವನ್ನೂ ಬೇಗ ಮಾಡುವುದು ಉಚಿತ. ಇಲ್ಲದಿದ್ದರೆ ನಮ್ಮ ಅನ್ನದಲ್ಲಿ ನಮ್ಮ ಆತ್ಮ-ಹತ್ಯೆಯ ವಾಸನೆ ಸೇರುವುದು ಖಚಿತ.

editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT