ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏನು ಬಂದಿರಿ, ಹದುಳವಿದ್ದಿರೆ

Last Updated 17 ಮಾರ್ಚ್ 2012, 19:30 IST
ಅಕ್ಷರ ಗಾತ್ರ

ಬಸವಣ್ಣನ ಸುಪ್ರಸಿದ್ಧ ವಚನದ ಈ ಮಾತು. ಸಾಮಾಜಿಕ ಸಭ್ಯತೆಯನ್ನು ಕುರಿತದ್ದು. ಮಾತಿನಲ್ಲೂ ವ್ಯಕ್ತವಾಗಬೇಕಾದ ಸೌಜನ್ಯವನ್ನು ಕುರಿತದ್ದು. ಅದು ಮಕ್ಕಳು ಗಮನವಿಟ್ಟು ಕಲಿಯಬೇಕಾದ, ಹಿರಿಯರು ಗಮನವಿಟ್ಟು ಕಲಿಸಬೇಕಾದ ಸಂಗತಿ.

ಮಗುವಿಗೆ ಐದು ವರ್ಷ ತುಂಬುವ ಹೊತ್ತಿಗೆ ಅವರು ಈ ಭೂಮಿಗೆ ಬಂದು ಸುಮಾರು 40 ಸಾವಿರ ಗಂಟೆಗಳಾಗಿರುತ್ತವೆ. ನಿದ್ದೆಯ ಸಮಯ ಬಿಟ್ಟರೆ ಉಳಿದ ಹೆಚ್ಚಿನ ಸಮಯವೆಲ್ಲವೂ ಮಾತು ಕಲಿಯುವುದಕ್ಕೆ, ಭಾಷೆಯ ಬಳಕೆ ಅರಿಯುವುದಕ್ಕೆ ವಿನಿಯೋಗವಾಗಿರುತ್ತದೆ.
 
ಈ ಹೊತ್ತಿಗೆ ಮಕ್ಕಳು ತಮ್ಮ ಸುತ್ತಲೂ ಇರುವ ಭಾಷೆಯ ದನಿಗಳ ಒಡೆಯರಾಗಿರುತ್ತಾರೆ, ಸಾವಿರ ಸಾವಿರ ಪದ ಮನಸಿನಲ್ಲಿ ಇಟ್ಟುಕೊಂಡಿರುತ್ತಾರೆ, ವಾಕ್ಯ ರಚನೆಯ ನೂರಾರು ಬಗೆಗಳನ್ನು ಆಟವೆಂಬಂತೆ ಕಲಿತಿರುತ್ತಾರೆ. ಬಹು ಸಂಖ್ಯೆಯ ಮಕ್ಕಳು ಒಂದಕ್ಕಿಂತ ಹೆಚ್ಚು ಭಾಷೆಗಳ ವಾತಾವರಣದಲ್ಲಿ ಬೆಳೆಯುವುದರಿಂದ ಈ ಎಲ್ಲ ಕೆಲಸ ಒಂದಲ್ಲ ಎರಡು, ಮೂರು ಬಾರಿ ನಡೆದಿರುತ್ತದೆ.

ಭಾಷೆ ಯಾಕೆ ಅನ್ನುವುದಕ್ಕೆ ಹಲವು ಉತ್ತರಗಳಿದ್ದರೂ ಭಾಷೆಯ ಮುಖ್ಯ ಕೆಲಸಗಳಲ್ಲಿ ಒಂದು ಪರಸ್ಪರ ಮಾತುಕತೆಗೆ ಒದಗಿಬರುವುದು. ಒಬ್ಬರು ಇನ್ನೊಬ್ಬರೊಡನೆ ಸಂಭಾಷಣೆ ನಡೆಸುವುದು, ಮಾತುಕತೆ ಆಡುವುದು ಎಷ್ಟು ಸಹಜ ಅನಿಸುತ್ತದೆಂದರೆ ನಾವು ಆ ಬಗ್ಗೆ ಯೋಚನೆ ಮಾಡುವುದೇ ಇಲ್ಲ.

ಜಗತ್ತಿನ ಎಲ್ಲ ಸಂಗತಿಗಳ ವ್ಯವಹಾರಗಳ ಬುನಾದಿಯಲ್ಲೂ ಕೆಲವು ನಿಯಮಗಳು ಇರುವ ಹಾಗೇ ಮನುಷ್ಯರ ಮಾತುಕತೆಯೂ ಕೆಲವು ನಿಯಮಗಳಿಗೆ ಬದ್ಧವಾದದ್ದು. ಮೊದಲ ನಿಯಮ ಇದು: ಒಬ್ಬರು ಮಾತು ಮುಗಿಸಿದ ಮೇಲೆ ಇನ್ನೊಬ್ಬರು ಆಡಬೇಕು. ಜಗಳವೋ ವಾದವೋ ಕಾವೇರಿದಾಗ ಎಲ್ಲರೂ ಒಟ್ಟಿಗೆ ಮಾತಾಡುವುದು, ಸ್ವಲ್ಪ ಸಮಾಧಾನವಾದ ಮೇಲೆ ಒಬ್ಬರ ನಂತರ ಒಬ್ಬರು ಮಾತಾಡುವುದು ನೋಡಿದ್ದೀರಲ್ಲಾ. ಮಾತುಕತೆಯಲ್ಲಿ ಹಲವು ಜನ ತೊಡಗಿದ್ದಾಗ ಇದು ಬಹಳ ಮುಖ್ಯ.
 
ರಸ್ತೆ ಪಕ್ಕದಲ್ಲಿ ಚಹಾ ಕುಡಿಯುತ್ತಾ ಆಗ ತಾನೇ ನೋಡಿಕೊಂಡು ಬಂದ ಸಿನಿಮಾ ಬಗ್ಗೆ ನಾಲ್ಕಾರು ಸ್ನೇಹಿತರು ಮಾತಾಡುತ್ತಾ ಇದ್ದೀರಿ ಅಂದುಕೊಳ್ಳಿ. ಎಲ್ಲರಿಗೂ ತಾವು ನೋಡಿದ ಸಿನಿಮಾ ಬಗ್ಗೆ ಏನೋ ಹೇಳುವುದಿರುತ್ತದೆ. ಹೇಳಬೇಕು ಅನಿಸಿದ್ದನ್ನು ಹೇಳುವುದಕ್ಕೆ ಎಲ್ಲರಿಗೂ ಅವಕಾಶ ಸಿಕ್ಕರೆ ಖುಷಿಯಾಗಿ, ಇಲ್ಲದಿದ್ದರೆ ಇರಿಸುಮುರಿಸಾಗಿ ಸಂಜೆ ಮುಗಿಯುತ್ತದೆ.

ಒಂದೊಂದು ಸಾರಿ ಒಬ್ಬರೇ ಮಾತಾಡುತ್ತಾ ಮಾತಾಡುತ್ತಾ ಮಾತಾಡುತ್ತಲೇ ಇರುತ್ತಾರೆ. ಮಾತಿನ ಏಕಸ್ವಾಮ್ಯ ತಮ್ಮದೇ ಅನ್ನುವ ಹಾಗೆ. ಇಲ್ಲ, ನೀವು ಮಾತು ಶುರುಮಾಡಿ ಅರ್ಧವಾಕ್ಯ ಮುಗಿಸುವುದರೊಳಗೆ ಮತ್ತೆ ಅವರೇ ಶುರುಮಾಡುತ್ತಾರೆ.

ಹಾಗೆ ಇನ್ನೊಬ್ಬರ ಮಾತಿಗೆ ಅಡ್ಡಿ ಮಾಡುವವರು ಗಂಡಸರೇ ಹೆಚ್ಚು ಅನ್ನುವ ಸಂಶೋಧನೆಯೂ ನಡೆದಿದೆ. ಮಾತನಾಡುವ ನಮ್ಮ ಸರದಿ ಬರುವವರೆಗೆ ಕಾಯುವುದು ಸಹಜವಾಗಿ ಬರುವ ವಿದ್ಯೆಯಲ್ಲ. ಅದನ್ನ ಕಲಿಯಬೇಕು. ಮಕ್ಕಳು ಈ ವಿದ್ಯೆಯನ್ನು ತೀರ ಎಳೆತನದಲ್ಲೇ ಕಲಿಯುತ್ತಾರೆ, ಬದುಕಿನ ಮೊದಲ ವರ್ಷದಲ್ಲೇ.

ಕಿಲ ಕಿಲ ನಕ್ಕಾಗ ಅಮ್ಮ ಪ್ರತಿಕ್ರಿಯೆ ತೋರಿದ್ದು ಕಂಡು, ಮತ್ತೆ ಕಿಲಕಿಲಿಸಿ, ಮತ್ತೆ ಅಮ್ಮ ಪ್ರತಿಕ್ರಿಯೆ ತೋರಿ, ಇನ್ನೊಮ್ಮೆ ಕಿಲಕಿಲ... ಮಾತಾಡು-ಕೇಳು-ಮಾತಾಡು ಅನ್ನುವ ಪಾಠ ಆಗಲೇ ಶುರು. ಇದು ಎಲ್ಲ ಮಾತುಕತೆಯ ತಳಹದಿ. ನಾವು ಮಾತಾಡುವುದನ್ನು ಕಲಿಯುವ ಹಾಗೇ ಕೇಳಿಸಿಕೊಳ್ಳುವುದನ್ನೂ ಕಲಿಯಬೇಕು.

ಎರಡನೆಯ ವರ್ಷದಲ್ಲಿ ಮಾತುಕತೆ ಇನ್ನಷ್ಟು ಸದೃಢವಾಗುತ್ತದೆ. ಸಮರ್ಥನ ಜೊತೆ ಬೊಂಬೆ ಪುಸ್ತಕ ನೋಡುತ್ತಾ ಅವರಮ್ಮ `ಅದೇನು?~  ಅಂದಳು. `ನಾಯಿ~. `ಕರೆಕ್ಟ್, ನಾಯಿ. ಕರೀ ನಾಯೀ. ದೊಡ್ಡ ಕರೀ ನಾಯಿ~ ಅಂದಳು ಅಮ್ಮ. `ಕಯೀನಾಯಿ~ ಅಂದ ಸಮರ್ಥ. ಕರೀ ಅನ್ನುವುದು ಕಯೀ ಆಗಿ ಹೊಮ್ಮಿತ್ತು. ಹೊಸ ಪದವನ್ನು ವಾಕ್ಯಕ್ಕೆ ಸೇರಿಸುವುದು ಕಲಿಯುತಿದ್ದ. ಈ ಪುಟ್ಟ ಮಾತುಕತೆಯಲ್ಲಿ ಐದು ಭಾಗಗಳಿವೆ ನೋಡಿ.

ಅಮ್ಮ ಕೇಳಿದ ಪ್ರಶ್ನೆ, ಸಮರ್ಥ ನೀಡಿದ ಉತ್ತರ, ಅಮ್ಮನ ಒಪ್ಪಿಗೆ, ವಾಕ್ಯಕ್ಕೆ ಅಮ್ಮ ಹೊಸದೊಂದು ಪದ ಸೇರಿಸಿದ್ದು, ಸಮರ್ಥ ಅದನ್ನು ರಿಪೀಟ್ ಮಾಡಿದ್ದು. ಹೀಗೆ ಮಾಡುತ್ತ ಒಂದು ಪದದ ವಾಕ್ಯವನ್ನು ದೊಡ್ಡದು ಮಾಡುವುದು ಹೇಗೆ, ಎಂಥ ಪದ ಎಲ್ಲಿ ಸೇರಿಸಬೇಕು ಅನ್ನುವುದು ಕಲಿಯುತಿದ್ದ. ಕೆಲವೇ ವಾರಗಳಲ್ಲಿ ವಾಕ್ಯ ಪ್ರಯೋಗ ಶುರುವಾಗಿತ್ತು.
 
ಅಷ್ಟೇ ಅಲ್ಲ, ಸಮರ್ಥನ ಅಮ್ಮ ಮಗುವಿನ ಗಮನವನ್ನು ನಾಯಿಯ ಇತರ ವಿಶೇಷಗಳ ಬಗ್ಗೆ ಸೆಳೆದದ್ದು ಕೂಡ ಇದೆ ಇಲ್ಲಿ- `ದೊಡ್ಡ~, `ಕರಿಯ~ ಹೇಳಬೇಕಾಗಿರಲಿಲ್ಲ, ಆದರೂ ಹೇಳಿದಳು. ಅಮ್ಮ ಹೇಳಿದ್ದನ್ನು ಸಮರ್ಥ ತನ್ನ ಮಾತಿಗೆ ಸೇರಿಸಿಕೊಂಡ. ಅವನಿಗೂ ಗೊತ್ತಿಲ್ಲದ ಹಾಗೆ, ಅಮ್ಮನಿಗೂ ಗೊತ್ತಿಲ್ಲದ ಹಾಗೆ ಹೊಸ ಪದ, ವಾಕ್ಯದಲ್ಲಿ ಗುಣವಾಚಕ ಸೇರಿಸುವ ಬಗೆ ಕಲಿತಿದ್ದ.

ಎರಡು ವರ್ಷದ ಮಕ್ಕಳೊಡನೆ ತಂದೆ ತಾಯಿಯರು ಆಡುವ ಮಾತುಕತೆ ಸುಮಾರಾಗಿ ಹೀಗೇ ಇರುತ್ತದೆ. ಅಪ್ಪ ಅಮ್ಮಂದಿರು ಮಕ್ಕಳು ಬಳಸಿದ ವಾಕ್ಯಗಳನ್ನು ರಿಪೀಟ್ ಮಾಡುವಾಗ ಇನ್ನಷ್ಟು ಜಟಿಲವಾದ ವಾಕ್ಯಗಳನ್ನು ಆಡುತ್ತಾರೆ. ಅಪ್ಪ ಅಮ್ಮಂದಿರೇ ಭಾಷೆಯ ಗುರುಗಳು. ಇನ್ನೊಂದು ವರ್ಷ ಕಳೆಯುವಷ್ಟರಲ್ಲಿ `ತಾತಾ, ಬಿಸ್ಕತ್ತು ಕೊಡೂ~ ಅಂದಾಗ ಅವರಮ್ಮ `ಕೊಡು ಅಂತಾರಾ, ಕೊಡಿ ಪ್ಲೀಸ್ ಅನ್ನು~ ಅಂದಳು.

 ಸಮರ್ಥ ಇಷ್ಟವಿದೆಯೋ ಇಲ್ಲವೋ ಅಂದ. `ಬಿಸ್ಕತ್ತು ಕೊಟ್ಟಮೇಲೆ ಥ್ಯಾಂಕ್ಯೂ ತಾತಾ ಅನ್ನಬೇಕು ಅಂದಿರಲಿಲ್ಲವಾ~ ಅಂದಳು ಮಗಳು. ಮೊಮ್ಮಗ ಕಷ್ಟಪಟ್ಟು ತಾಂಕೂ ಅಂದ, ಅವನ ಗಮನವೆಲ್ಲ ಬಿಸ್ಕತ್ತಿನ ಮೇಲಿತ್ತು. ಅಷ್ಟಂದಿದ್ದೇ ಮಗಳಿಗೆ ಖುಷಿಯಾಗಿ `ಗುಡ್ ಬಾಯ್~ ಅಂದಳು.

ಎಷ್ಟೋ ಮನೆಗಳಲ್ಲಿ ದಿನವೂ ನಡೆಯುವ ಈ ಆಟ, ಸಭ್ಯ ಸಂಭಾಷಣೆಯ ಪಾಠವಲ್ಲದೆ ಇನ್ನೇನು. ಪ್ಲೀಸ್ ಅನ್ನಬೇಕು, ಥ್ಯಾಂಕ್ಸ್ ಹೇಳಬೇಕು, ಇವನ್ನೆಲ್ಲ ದೊಡ್ಡವರೇ ಕಲಿಸಿಕೊಡಬೇಕು, ಮತ್ತೆ ಮತ್ತೆ ಹೇಳಿ ಮಕ್ಕಳು ಅವನ್ನು ಮನದಟ್ಟುಮಾಡಿಕೊಳ್ಳುವ ತನಕ.

ಸಮಯಬೇಕು, ತಾಳ್ಮೆ ಬೇಕು. ಹಾಗಿದ್ದರೂ ನಾಲ್ಕು ವರ್ಷದವರಾಗುವ ಹೊತ್ತಿಗೆ ಬಹಳಷ್ಟು ಮಕ್ಕಳು ಭಾಷಿಕ ಸಭ್ಯತೆ ಕಲಿತಿರುತ್ತಾರೆ. ಭಾಷೆಯ ಸಾಮಾಜಿಕ ಮುಖ, ವ್ಯಕ್ತಿಗೆ ಭಾಷೆಯ ಮೂಲಕ ದೊರೆಯುವ ಸಾಮಾಜಿಕ ಚಹರೆಯ ರೂಪುರೇಖೆ ಎಳವೆಯಲ್ಲೇ ಸಿದ್ಧವಾಗುತ್ತದೆ.
 
ಪ್ಲೀಸ್, ಥ್ಯಾಂಕ್ಯೂ, ಸಾರಿ, ವೆಲ್‌ಕಮ್ ಇದನ್ನೆಲ್ಲ ಮಕ್ಕಳಿಗೆ ಕಲಿಸುವವರ ಸಾಮಾಜಿಕ ಆರ್ಥಿಕ ಹಿನ್ನೆಲೆ ಭಾಷೆಯಲ್ಲಿ ವ್ಯಕ್ತವಾಗುತ್ತ ಮಗುವಿಗೂ ಆ ಚಹರೆ ಮೈಗೂಡುತ್ತ ಹೋಗುತ್ತದೆ. ಇಂಥ ಸಭ್ಯತೆ ಇಲ್ಲದ ಜನರನ್ನು ಕೀಳಾಗಿ ಕಾಣುವ ದೃಷ್ಟಿಯೂ ಬೆಳೆಯುತ್ತದೆ.

ಸಭ್ಯ ಮಾತುಗಾರಿಕೆಯ ಎಷ್ಟೊಂದು ಅಂಶಗಳನ್ನು ಮಕ್ಕಳು ಕಲಿಯಬೇಕು. ಹಲೋ ಅನ್ನುವುದು, ಗುಡ್‌ಬೈ ಅನ್ನುವುದು, ಗುಡ್‌ಮಾರ್ನಿಂಗ್ ಅನ್ನುವುದು, ಗುಡ್‌ನೈಟ್, ಸಾರಿ; ಹಾಗೆ ಸಿಟ್ಟು ಬಂದಾಗ ಆಡಬಾರದ `ಕೆಟ್ಟ~ ಪದಗಳು ಯಾವುದು ಎಲ್ಲಾ. ಎಲ್ಲರೆದುರಿಗೆ ಆಡಬಾರದ ಪದಗಳು ಅನ್ನುವುದು ಸಾಮಾಜಿಕ ಅಂತಸ್ತಿನ ಸೂಚನೆಯೂ ಹೌದು.

ಯಾವ ಪದವೂ ತನ್ನಿಂದ ತಾನೇ  `ಕೆಟ್ಟ~ಪದವಲ್ಲ. ಅದಕ್ಕೆ `ಕೆಟ್ಟತನ~ `ಕೊಳಕುತನ~ವನ್ನು ನಮ್ಮ ಸಾಮಾಜಿಕ ಸ್ಥಿತಿಗತಿ, ನೀತಿಯ ಕಲ್ಪನೆಗಳು, `ಮಡಿವಂತಿಕೆ~ಯ ಧೋರಣೆಗಳು ಆರೋಪಿಸುತ್ತವೆ.

ಕೆಟ್ಟ, ಕೊಳಕು ಪದಗಳನ್ನು ಬಳಸುವವರು ತಾವೇ ಸ್ವತಃ ಕೆಟ್ಟವರು, ಕೊಳಕರು ಅನ್ನುವ ಧೋರಣೆ ಬೆಳೆಸಿಕೊಳ್ಳದೆ ಭಾಷೆಯಲ್ಲಿ ಕಾಣದೆ ಇರುವ ಅವರ ಒಳ ವ್ಯಕ್ತಿತ್ವವನ್ನು ಕಾಣುವ ಶಕ್ತಿ ಬೆಳೆಸಿಕೊಳ್ಳುವುದು ಮನಸಿನ ಆರೋಗ್ಯಕ್ಕೆ ತೀರ ಮುಖ್ಯ. ಅದು ಆರೋಪಿತ ಮೇಲು ಕೀಳುಗಳನ್ನು ಸ್ವಪ್ರಯತ್ನದಿಂದಲೇ ದಾಟಿ ಸಾಧಿಸಿಕೊಳ್ಳಬೇಕಾದದ್ದು. 

ಕೇಳಿಸಿಕೊಳ್ಳುವುದನ್ನೂ ಮಕ್ಕಳು ಕಲಿಯಬೇಕು. ಕೇಳಿಸಿಕೊಳ್ಳುವುದು ಅಂದರೆ. ಗಮನ ಕೊಟ್ಟು ಕೇಳುವುದೇ ಹೊರತು ಬೊಂಬೆಯ ಹಾಗೆ ಸುಮ್ಮನೆ ಇರುವುದಲ್ಲ. ಇಬ್ಬರು ಮಾತಾಡುವುದನ್ನು ಗಮನಿಸಿ.

 ಹೇಳುವಾತ ಏನೋ ಹೇಳುತಿರುತ್ತಾನೆ, ಕೇಳುವಾತ ಸುಮ್ಮನೆ ಇದ್ದರೂ ನಿಶ್ಚಲವಾಗಿರುವುದಿಲ್ಲ. ತಲೆದೂಗುತ್ತಲೋ, ಅಡ್ಡಡ್ಡ ತಲೆಯಾಡಿಸುತ್ತಲೋ, ಮುಖ ಸೊಟ್ಟಮಾಡುತ್ತಲೋ, ತುಟಿ ಕಚ್ಚುತ್ತಲೋ, ಮ್, ತ್ಚು, ತ್ಚು ಎನ್ನುತ್ತಲೋ, ಹೌದಾ, ಅಯ್ಯಬ್ಬಾ, ನಿಜ್ಜಾ ಅನ್ನುತ್ತಲೋ ಇರುತ್ತಾನೆ.
 
ಅಂದರೆ ಕೇಳುವವರು ಮಾತಾಡುತ್ತಿರುವವರಿಗೆ ಫೀಡ್‌ಬ್ಯಾಕ್ ಕೊಡುತ್ತಿರುತ್ತಾರೆ. ಅವರು ಹೇಳಿದ್ದು ತಿಳಿಯಿತು, ಅದು ಮುಖ್ಯ, ನಾನು ಒಪ್ಪುತ್ತೇನೆ ಅಥವಾ ಇಲ್ಲ ಅನ್ನುವುದನ್ನು ಸೂಚಿಸುತ್ತಿರುತ್ತಾರೆ. ಇದು ಮುಖ್ಯ. ಆಡುತ್ತಿರುವ ಮಾತು ಕೇಳುವವರ ಕಿವಿ ದಾಟಿ ಮನಸ್ಸಿಗೆ ಹೊಗುತ್ತಿದೆಯೋ ಇಲ್ಲವೋ ಗೊತ್ತಾಗದಿದ್ದರೆ ಮಾತಾಡುವುದೇ ಕಷ್ಟ.

ಮಕ್ಕಳು ಹೀಗೆ ಫೀಡ್‌ಬ್ಯಾಕ್ ಕೊಡುವುದಿಲ್ಲ. ಅದಕ್ಕೇ ನಾವು ಹೇಳಿದ್ದು ಮಕ್ಕಳಿಗೆ ತಿಳಿಯಿತೋ ಇಲ್ಲವೋ ಗೊತ್ತಾಗುವುದಿಲ್ಲ. ಮಕ್ಕಳು ಬೆಳೆಯುತ್ತ ಫೀಡ್‌ಬ್ಯಾಕ್ ಕಲಿಯುತ್ತಾರೆ. ಮಕ್ಕಳು ಹೀಗೆ ಕ್ರಿಯಾಶೀಲವಾಗಿ ಕೇಳಿಸಿಕೊಳ್ಳುವುದು ಕಲಿತಾಗ ಅವರು ಮಾತುಕತೆಯಲ್ಲಿ ಪ್ರಬುದ್ಧತೆ ತಲುಪಿದ್ದಾರೆ ಎಂದೇ ಅರ್ಥ.

ಮಕ್ಕಳು ಕಲಿಯುವ ಇನ್ನೊಂದು ಸಂಗತಿ ಅಂದರೆ ಹೇಳದೆ ಇರುವುದನ್ನೂ ಗ್ರಹಿಸುವುದು. ಜನ ಬಳಸುವ ಮಾತಿನ `ನಿಜ~ವಾದ ಅರ್ಥವನ್ನು ಗ್ರಹಿಸುವುದು. ಜನ ಹೇಳಿದ ಮಾತಿಗೆ ಯಾವಾಗಲೂ ಕಂಡಷ್ಟೇ ಅರ್ಥ ಇರುವುದಿಲ್ಲ, ಅದರಲ್ಲೂ ಅವರು ತುಂಬ ಸಭ್ಯವಾಗಿ ಸಂಭಾವಿತರಾಗಿ ಸೌಜನ್ಯಪೂರ್ಣರಾಗಿ ಇರುವಾಗ.

ಮನೆಗೆ ಬಂದ ಅತಿಥಿಗಳೊಡನೆ ಮಾತಾಡುತ್ತ ಇರುವಾಗ ಕೆಲವರು `ದಯವಿಟ್ಟು ಕಿಟಕಿ ಹಾಕುತ್ತೀರಾ, ಚಳಿ~ ಅಂತ ನವಿರಾಗಿ ಕೇಳಬಹುದು; ಅಥವ `ಕಿಟಕಿ ಮುಚ್ಚಿ, ತುಂಬ ಚಳಿ~ ಅಂತ ಅನ್ನಬಹುದು, ಇನ್ನು ಕೆಲವರು `ತುಂಬ ಚಳಿ ಅಲ್ಲವಾ~ ಅಂದಾರು. `ಅಯ್ಯಪ್ಪಾ, ಹುಹುಹು, ಎಂಥಾ ಚಳಿ~ ಅನ್ನುವವರೂ ಇದ್ದಾರು. ಹೇಗಂದರೂ ಅವರ ಉದ್ದೇಶ `ನೀವು ಎದ್ದು ಹೋಗಿ ಕಿಟಕಿ ಮುಚ್ಚಿ~  ಅಂತಲೇ.

ಜನ ಯಾಕೆ ಹೀಗೆ ಮಾತಾಡುತ್ತಾರೆ? ಬಾಗಿಲು ಮುಚ್ಚಿ ಅಂತ ನೇರವಾಗಿ ಹೇಳಿದರೆ ತಮ್ಮಲ್ಲಿ ಸಭ್ಯತೆ ಇಲ್ಲ ಎಂದು ನೀವೆಲ್ಲಿ ಭಾವಿಸುತ್ತೀರೋ ಅಂತಿರಬಹುದು. ಜನ ತಮ್ಮ ಭಾವನೆಗಳನ್ನು ಸೂಕ್ಷ್ಮವಾಗಿ ಸೂಚಿಸುವ ಮೂಲಕ ಕಿಟಕಿ ಮುಚ್ಚುವುದನ್ನು ನಿಮ್ಮ ಜವಾಬ್ದಾರಿಗೆ ಬಿಡುತ್ತಾರೆ. ಅವರ ಸಭ್ಯತೆಯ ದಾರಿ ಅದು. ಅವರ ಭಾವನೆಗಳನ್ನು ಗೌರವಿಸುವವರಾಗಿದ್ದರೆ ನೀವು ಎದ್ದು ಹೋಗಿ ಕಿಟಕಿ ಮುಚ್ಚುತ್ತೀರಿ.

ಸ್ಕೂಲಿನ ಮಿಸ್ಸು ಒಂದು ಸಾರಿ `ಸಮರ್ಥ, ಚಾಕ್‌ಪೀಸು ಬಿದ್ದು ಹೋಯಿತು~ ಅಂದರಂತೆ. ಸಮರ್ಥ `ಹೌದು ಮಿಸ್~ ಅಂದನಂತೆ. ಟೀಚರ್ ನಿರೀಕ್ಷಿಸಿದ್ದು ಅದನ್ನಲ್ಲ. `ಏಯ್, ಎತ್ತಿಕೊಡೋ ಅದನ್ನ~ ಅಂತ ಗದರಿದರಂತೆ. ಹೇಳಿದ ಮಾತಿನ ಹಿಂದೆ ಅವಿತಿರುವ ಅರ್ಥವನ್ನು ಗ್ರಹಿಸುವ ಪಾಠವನ್ನು ಲೋಕ ಸಮರ್ಥನಿಗೆ ಹೇಳಿಕೊಡುತ್ತಿತ್ತು.

ಅರ್ಥ ಪದದಲ್ಲಿ ಇಲ್ಲ, ವಾಕ್ಯದಲ್ಲೂ ಇಲ್ಲ, ಮಾತು ಆಡುವ ಸಂದರ್ಭದಲ್ಲಿ ಹುಟ್ಟುತ್ತದೆ; ಪದಕ್ಕೆ ಅರ್ಥವಿದ್ದರೂ ಸಂದರ್ಭಕ್ಕೆ ತಕ್ಕ ಹಾಗೆ ಅರ್ಥ ಹಿಗ್ಗುತ್ತದೆ, ಕುಗ್ಗುತ್ತದೆ. ಬಿದ್ದು ಹೋಯಿತು ಅನ್ನುವುದಕ್ಕೆ ಎತ್ತಿಕೊಡು ಅನ್ನುವ ಅರ್ಥ ವಿಸ್ತಾರ ಸಾಧ್ಯವಾಗುವುದು ಮನುಷ್ಯ ಭಾಷೆಯಲ್ಲಿ ಇರುವ ವಿಶಿಷ್ಟ ಸಾಧ್ಯತೆಯಿಂದ. ಅದೇ ರೂಪಕದ ಶಕ್ತಿ. ರೂಪಕವು ಭಾಷೆಯ ಹೃದಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT