ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಗೆಯೋ ಕಂತೇನಾ, ಗುಂಡಾ ಹೊಡಿಯೋ ಗಂಟೇನಾ!

Last Updated 1 ಜನವರಿ 2016, 11:23 IST
ಅಕ್ಷರ ಗಾತ್ರ

ಕವಿ ಗೋಪಾಲಕೃಷ್ಣ ಅಡಿಗರು ಹೊಸತನ ಬದುಕಿಗೆ ಎಷ್ಟು ಅವಶ್ಯ ಎನ್ನುವುದನ್ನು ಹೀಗೆ ಹೇಳುತ್ತಾರೆ:

ಜಗಕೊಂದು ಯುಗಕೊಂದು ಹೊಸ ಹೆಸರು ಬೇಕು;
ನಗೆಗೊಂದು, ಬಗೆಗೊಂದು, ಹೊಸ ಕುಸುರು ಬೇಕು;
ಹೊಸತನವೆ ಜೀವನದ ಪ್ರಗತಿಯ ರಹಸ್ಯ
ಹೊಸತನವೆ ಮನುಜತೆಯ ಮೈಸಿರಿಯ ಲಾಸ್ಯ!


ನಮ್ಮ ಅರಿವಿಗೆ ಬಾರದಂತೆ ಮತ್ತೊಂದು ವರ್ಷ ಬದುಕಿನ ಖಾತೆಯಿಂದ ಖರ್ಚಾಗಿ ಹೋಗಿದೆ. ನೂತನ ವರ್ಷ ಸಂಭ್ರಮದಿಂದ ತೆರೆದುಕೊಂಡಿದೆ. ಗೋಡೆಗೆ ನೇತುಬಿದ್ದ ಕ್ಯಾಲೆಂಡರ್ ಬದಲಾಗಿದೆ, ಮೇಜಿಗೆ ಹೊಸ ದಿನಚರಿ ಪುಸ್ತಕ ಬಂದು ಕುಳಿತಿದೆ. ಹೊಸ ಸ್ನೇಹ ಸಂಬಂಧಗಳು ಅರಳಿವೆ, ಹಳೆಯವೆಷ್ಟೋ ಮುದುಡಿವೆ. ವೃತ್ತಿ, ಪ್ರವೃತ್ತಿಯ ಏಳು ಬೀಳುಗಳು ಚಿತ್ತದಲ್ಲಿ ಅಚ್ಚೊತ್ತಿವೆ, ಕನಸು ನನಸುಗಳ ಜೂಟಾಟ ನಡೆದೇ ಇದೆ.

ಹಲವರ ಪಾಲಿಗೆ ಕಳೆದ ವರ್ಷದ ರೆಸಲ್ಯೂಷನ್ ಪಟ್ಟಿ ಕರಗದೇ ಉಳಿದಿರಬಹುದು, ಕೆಲವರಂತೂ ತರಾತುರಿಯಲ್ಲಿ ತಮ್ಮ ಸಂಕಲ್ಪ ಈಡೇರಿಸಿಕೊಳ್ಳಲು ಕೊನೆಯ ತಿಂಗಳಿನಲ್ಲಿ ಶ್ರಮಪಟ್ಟಿರಬಹುದು. ತಮಾಷೆಯಾಗಿ ನೋಡುವುದಾದರೆ, ಪ್ರಧಾನಿ ನರೇಂದ್ರ ಮೋದಿ ಯಾವ ಸೂಚನೆಯನ್ನೂ ನೀಡದೆ ಕಾಬೂಲ್‌ನಿಂದ ಲಾಹೋರಿಗೆ ಜಿಗಿದು ನಂತರ ದೆಹಲಿಗೆ ಬಂದಿಳಿದು ಅಚ್ಚರಿ ಮೂಡಿಸಿದರಲ್ಲಾ ಹಾಗೇ. ಅವರ ಕಳೆದ ವರ್ಷದ ಠರಾವಿನಲ್ಲಿ ಪಾಕ್‌ನೊಂದಿಗೆ ಸಂಬಂಧ ಸುಧಾರಿಸಿಕೊಳ್ಳುವ, ಪಾಕಿಸ್ತಾನಕ್ಕೆ ಭೇಟಿ ಕೊಡುವ ಸಂಕಲ್ಪ ಇತ್ತೇನೋ, ಯಾರಿಗೆ ಗೊತ್ತು?

ಅದಿರಲಿ, ಸಾಮಾನ್ಯವಾಗಿ ವರ್ಷಾರಂಭ ವೈಯಕ್ತಿಕವಾಗಿ, ವೃತ್ತಿಗೆ ಸಂಬಂಧಿಸಿದಂತೆ ಮತ್ತು ಸಾಂಸ್ಥಿಕವಾಗಿ ಒಂದಿಷ್ಟು ಗುರಿಗಳನ್ನು ನಿಗದಿಪಡಿಸಿಕೊಳ್ಳುವುದಕ್ಕೆ, ಗುರಿಯೆಡೆಗಿನ ಮಾರ್ಗದ ಅವಲೋಕನಕ್ಕೆ ಒಂದು ನೆಪವಾಗುತ್ತದೆ. ದಾರ್ಶನಿಕ, ಕವಿ ಡಿ.ವಿ.ಗುಂಡಪ್ಪನವರು ‘ಬಾಳಿಗೊಂದು ನಂಬಿಕೆ’ ಎಂಬ ಮಹತ್ವದ ಕೃತಿಯಲ್ಲಿ ಗುರಿಯ ಪ್ರಾಮುಖ್ಯತೆಯ ಬಗ್ಗೆ ಬರೆಯುತ್ತಾ ‘ಗುರಿ ಎಂಬುದು  ಕ್ರಮಕ್ರಮವಾಗಿ ಬೆಳೆಯುತ್ತದೆ.

ನಾವು ಮನೆಯಲ್ಲಿರುವಾಗ ಬೆಟ್ಟದ ಪಾದ ಗುರಿ. ಆ ಪಾದವನ್ನು ಮುಟ್ಟಿದ ಮೇಲೆ ಶಿಖರ ಗುರಿ. ಶಿಖರಕ್ಕೇರಿದ ಮೇಲೆ, ಅಲ್ಲಿ ಕಾಣುವ ಗುಡಿಯ ಗೋಪುರ ಗುರಿ, ಗೋಪುರ ದ್ವಾರ ಸೇರಿದ ಮೇಲೆ ಗರ್ಭಗೃಹ ಗುರಿ, ಅಲ್ಲಿಗೆ ಹೋದಮೇಲೆ, ದೇವರ ದರ್ಶನ ಗುರಿ, ಹೀಗೆ ಗುರಿಯೆಂಬುದು ಒಂದು ಗುರಿಗಳ ಸಾಲು. ಒಂದು ಮೆಟ್ಟಿಲನ್ನೇರಿದ ಮೇಲೆ ಅದಕ್ಕಿಂತ ಮೇಲಿನದು ನಮ್ಮನ್ನು ಕರೆಯುತ್ತದೆ. ಅದೇ ಪ್ರಗತಿ. ಇದರಲ್ಲೆಲ್ಲ ಮೊದಲ ಮೆಟ್ಟಿಲನ್ನು ಕಂಡುಕೊಳ್ಳುವುದು ದೊಡ್ಡದು. ಯಾವ ದಿಕ್ಕಿಗೆ ನಾವು ಮುಖ ಮಾಡಬೇಕು, ಯಾವ ಕಡೆಗೆ ಹೆಜ್ಜೆಯಿಡಬೇಕು? ಇದೇ ಮುಖ್ಯವಾದ ಪ್ರಶ್ನೆ’ ಎನ್ನುತ್ತಾರೆ.

ವೃತ್ತಿ ಮತ್ತು ಸಾಂಸ್ಥಿಕ ಗುರಿಗಳು ಬಿಡಿ, ಅವು ಆಯಾ ವೃತ್ತಿ ಮತ್ತು ಸಂಸ್ಥೆಯ ಬೆಳವಣಿಗೆಗೆ ಪೂರಕವಾಗಿ ಹಾಗೂ ಭಿನ್ನವಾಗಿ ಇರುತ್ತವೆ. ಆದರೆ ವ್ಯಕ್ತಿ ನೆಲೆಯಲ್ಲಿ, ಹೇಗೇ ಸುತ್ತಿ ಬಳಸಿ ಮೆಟ್ಟಿಲು ಹತ್ತಿದರೂ ಕೊನೆಯ ಗಮ್ಯ ನೆಮ್ಮದಿಯ, ಸಂತಸದ ಬದುಕನ್ನು ಸಾಧ್ಯವಾಗಿಸಿಕೊಳ್ಳುವುದೇ ಆಗಿರುತ್ತದೆ. ಇತ್ತೀಚೆಗೆ ಅಮೆರಿಕದ ಪ್ಯೂ ರಿಸರ್ಚ್ ಸೆಂಟರ್ 18ರಿಂದ 33 ವರ್ಷದೊಳಗಿನ ಯುವಪೀಳಿಗೆಯ ಮುಂದೆ, ‘ನಿಮ್ಮ ಬದುಕಿನ ಅಂತಿಮ ಗುರಿ ಏನು?’ ಎಂಬ ಪ್ರಶ್ನೆ ಇಟ್ಟು ಸಮೀಕ್ಷೆ ನಡೆಸಿತ್ತು.

ಶೇಕಡ 60ರಷ್ಟು ಮಂದಿ, ತಮ್ಮ ಗುರಿ ಶ್ರೀಮಂತನಾಗುವುದು ಎಂದರೆ, ಶೇಕಡ 40ರಷ್ಟು ಜನ ಪ್ರಖ್ಯಾತರಾಗುವುದೇ ತಮ್ಮ ಗುರಿ ಎಂದಿದ್ದರು. ಪ್ರಾಯಃ ಯಾವುದೇ ದೇಶದ ಯುವಪೀಳಿಗೆ ಈ ಎರಡರ ಹೊರತಾಗಿ ಭಿನ್ನ ಗುರಿ ಇರಿಸಿಕೊಂಡಿರುವುದು ಅನುಮಾನ. ಹಣ, ಕೀರ್ತಿ ಸುಖದ ಬದುಕಿಗೆ ಕೀಲಿಕೈ ಎಂದು ನಂಬಿದವರೇ ಅಧಿಕ. ಇದಕ್ಕೆ ಅಪವಾದವೆಂಬಂತೆ ಅತ್ತ ಹಾರ್ವರ್ಡ್ ವಿಶ್ವವಿದ್ಯಾಲಯ ತನ್ನ ‘Study of Adult Development’ ವರದಿಯಲ್ಲಿ ನೆಮ್ಮದಿಯ ಬದುಕಿಗೆ ಬೇಕಿರುವುದು ಹಣ, ಕೀರ್ತಿಯಲ್ಲ. ವೈಯಕ್ತಿಕ ನೆಲೆಯಲ್ಲಿ ಸಂಬಂಧಗಳನ್ನು ಉತ್ತಮ ರೀತಿಯಲ್ಲಿ ಕಾಯ್ದುಕೊಳ್ಳುವುದು, ಬದುಕಿನ ಸಣ್ಣಪುಟ್ಟ ಸಂಗತಿಗಳನ್ನೂ ಆಸ್ವಾದಿಸುವ ಗುಣ ಬೆಳೆಸಿಕೊಳ್ಳುವುದು ಮುಖ್ಯ ಎನ್ನುತ್ತಿದೆ. ಇದು ಕಳೆದ 75 ವರ್ಷಗಳಲ್ಲಿ, ವಿವಿಧ ಸ್ತರದ 700ಕ್ಕೂ ಅಧಿಕ ಮಂದಿಯನ್ನು ಬಾಲ್ಯದಿಂದ ಹಿಡಿದು ಅವರ ಬೆಳವಣಿಗೆಯ ವಿವಿಧ ಹಂತಗಳಲ್ಲಿ ಗಮನಿಸಿ, ನಿರ್ಣಯಿಸಿರುವ ಸಂಗತಿ.

ಅಯ್ಯೋ ರಾಮಾ, ಸಂಶೋಧನೆ, ಸಮೀಕ್ಷೆ, ಅಂಕಿಅಂಶ ಎಂದೆಲ್ಲಾ ವರ್ಷದ ಮೊದಲ ದಿನವೇ ಕೊರೆಯಬೇಡ ಮಾರಾಯ ಎನ್ನುತ್ತಿದ್ದೀರಾ. ಹಾಗಾದರೆ ಕೃಷ್ಣನ ಕತೆಯನ್ನೇ ಕೇಳಿ. ಒಬ್ಬ ಬಹುದೊಡ್ಡ ಸಾಹುಕಾರ, ನಿದ್ದೆ ನೆಮ್ಮದಿ ಖೋತಾ ಆದವ. ತಿಮ್ಮಪ್ಪನ ದರ್ಶನಕ್ಕೆಂದು ತಿರುಪತಿಗೆ ಹೊರಟ, ಅಲ್ಲಿಗೆ ತಲುಪುವಾಗ ಸಂಜೆಯಾಗಿತ್ತು. ಸಾಹುಕಾರನಾದ ಕಾರಣ ಕೂಡಲೇ ದೇವರ ಅಪಾಯಿಂಟ್ಮೆಂಟ್ ಸಿಕ್ಕಿತು. ಅರ್ಚಕರನ್ನು ಕೇಳಿದ ‘ಅರ್ಚಕರೇ, ತಿಮ್ಮಪ್ಪನಿಗೆ ನಾನು ಸೇವೆ ಸಲ್ಲಿಸಬೇಕು. ಅತಿಹೆಚ್ಚು ಮೌಲ್ಯದ ಯಾವುದಾದರೂ ಸೇವೆಯನ್ನೇ ಹೇಳಿ’.

ಅರ್ಚಕರು ‘ಇದಾಗಲೇ ಸಂಜೆ ಆಗಿರುವುದರಿಂದ, ಎಲ್ಲ ಸೇವೆಗಳು ಮುಗಿದಿವೆ, ಶಯನೋತ್ಸವ ಸೇವೆ ಮಾತ್ರ ಬಾಕಿ ಇದೆ. ಶ್ರೀನಿವಾಸನ ಉತ್ಸವ ಮೂರ್ತಿಯನ್ನು ತೊಟ್ಟಿಲಲ್ಲಿ ಮಲಗಿಸುತ್ತೇವೆ. ನೀವು ತೂಗಬಹುದು’. ‘ಸರಿ, ಸೇವೆಯ ಮೌಲ್ಯವೆಷ್ಟು?’ ‘50 ಸಾವಿರ’. ಸೇವೆ ಪ್ರಾರಂಭವಾಯಿತು. ₹ 50 ಸಾವಿರ ನೀಡಿದ್ದ ಶ್ರೀಮಂತನಿಗೆ 30 ನಿಮಿಷ ತೊಟ್ಟಿಲು ತೂಗುವ ಭಾಗ್ಯ ಒದಗಿತು. ಶ್ರೀಮಂತ ಖುಷಿಯಾದ.

ಬಾಲಾಜಿಯ ನಂತರ ನವನೀತ ಚೋರ ಕೃಷ್ಣನ ದರ್ಶನಕ್ಕಾಗಿ ಉಡುಪಿಗೆ ಬಂದ. ಆಗಲೂ ಸಂಜೆಯಾಗಿತ್ತು. ಇದ್ದದ್ದು ಲಾಲಿ ಸೇವೆ ಮಾತ್ರ. ಅಲ್ಲೂ ₹ 50 ಸಾವಿರ ಹಣ ನೀಡಿ ಸೇವೆಗೆ ಹೆಸರು ಬರೆಸಿದ. ಲಾಲಿ ಸೇವೆ ಆರಂಭವಾಯಿತು. ತೊಟ್ಟಿಲಲ್ಲಿರಿಸಿದ್ದ ಬಾಲ ಕೃಷ್ಣನನ್ನು ಶ್ರೀಮಂತ ತೂಗುತ್ತಿದ್ದ. ಎರಡೇ ನಿಮಿಷದಲ್ಲಿ ಅರ್ಚಕರು ‘ಇಲ್ಲಿಗೆ ಲಾಲಿ ಸೇವೆ ಮುಗಿಯಿತು’ ಎಂದುಬಿಟ್ಟರು. ಸಾಹುಕಾರನಿಗೆ ರೇಗಿಹೋಯಿತು. ‘ತಿರುಪತಿಯಲ್ಲಿ ₹ 50 ಸಾವಿರ ಹಣ ನೀಡಿದ್ದಕ್ಕೆ 30 ನಿಮಿಷ ತೊಟ್ಟಿಲು ತೂಗಲು ಬಿಟ್ಟರು, ನೀವು 2 ನಿಮಿಷಕ್ಕೇ ಮುಗಿಯಿತು ಎನ್ನುತ್ತಿದ್ದೀರಲ್ಲಾ’ ಎಂದು ಅರ್ಚಕರನ್ನು ದಭಾಯಿಸಿದ.

ಅರ್ಚಕರು ತಣ್ಣನೆಯ ದನಿಯಲ್ಲಿ ‘ಸ್ವಾಮಿ, ತಿಮ್ಮಪ್ಪನಿಗೆ ಹೆಚ್ಚೆಚ್ಚು ದುಡ್ಡು ಬರ್ತಿರತ್ತೆ, ಅದಲ್ಲದೇ ಕುಬೇರನ ಸಾಲ ತೀರಿಸಬೇಕು ಎಂಬ ಚಿಂತೆ ಬೇರೆ. ಆದ್ದರಿಂದ 30 ನಿಮಿಷ ತೂಗಿದರೂ ತಿಮ್ಮಪ್ಪನಿಗೆ ನಿದ್ದೆಬರಲ್ಲ. ಆದರೆ ನಮ್ಮ ಕೃಷ್ಣ ನಿಶ್ಚಿಂತಮೂರ್ತಿ. ದನ ಕಾಯುವ ಗೊಲ್ಲ, ಮರದ ಕೆಳಗೆ ಕುಳಿತು ನಿದ್ದೆ ಹೋಗುತ್ತಿದ್ದವ. ಆತನಿಗೆ ತೊಟ್ಟಿಲೂ ಬೇಡ, ತೂಗುವುದೂ ಬೇಡ. ನೀವು ಸೇವೆಗೆಂದು ಹಣ ನೀಡಿದ್ದರಿಂದ 2 ನಿಮಿಷ ತೂಗಿಸಿದೆವಷ್ಟೇ’ ಎಂದರು. ಸಾಹುಕಾರ ತನ್ನ ನಿದ್ರಾಭಂಗಕ್ಕೆ ಔಷಧಿ ಕಂಡುಕೊಂಡಿದ್ದ.

ಇನ್ನು, ತುಂಬಾ ಪ್ರಸಿದ್ಧರಾದವರ ಸಂಕಟ ಬೇರೆಯದೇ ಆಗಿರುತ್ತದೆ ಎನ್ನುವುದಕ್ಕೆ, ‘ಬ್ರಹ್ಮಪುರಿಯ ಭಿಕ್ಷುಕ’ ಕೃತಿಯಲ್ಲಿ ಉಲ್ಲೇಖವಾಗಿರುವ ಡಿ.ವಿ.ಗುಂಡಪ್ಪನವರ ಜೀವನದ ಒಂದು ಸ್ವಾರಸ್ಯಕರ ಪ್ರಸಂಗ ಕೇಳಿ. ಒಮ್ಮೆ ಬನ್ನೂರಿನಲ್ಲೊಂದು ಸಾಹಿತ್ಯ ಸಮಾರಂಭ ಆಯೋಜನೆಗೊಂಡಿತ್ತು. ಅಲ್ಲಿನ ಕಾರ್ಯಕರ್ತರು ಸಮಾರಂಭಕ್ಕೆ ಡಿವಿಜಿ ಅವರನ್ನು ಆಹ್ವಾನಿಸಲು ಬಂದರು. ಮೂಲವ್ಯಾಧಿಯಿಂದ ಬಳಲುತ್ತಿದ್ದ ಗುಂಡಪ್ಪನವರು, ಆಹ್ವಾನವನ್ನು ನಯವಾಗಿ ನಿರಾಕರಿಸಿದರು. ಆದರೆ ಕಾರ್ಯಕರ್ತರು ಪಟ್ಟು ಬಿಡಲಿಲ್ಲ, ಡಿವಿಜಿ ಅವರ ಸಂದೇಶವನ್ನಾದರೂ ತೆಗೆದುಕೊಂಡು ಹೋಗಬೇಕೆಂಬ ಹಟ ಅವರದು. ‘ಹೋಗಿ ಬನ್ನಿ, ಎಲ್ಲರಿಗೂ ಒಳ್ಳೆಯದಾಗಲಿ’ ಎಂದರೂ ಕಾರ್ಯಕರ್ತರು ಮೇಲೇಳಲಿಲ್ಲ.

ತಮ್ಮ ಸಮಸ್ಯೆಯನ್ನು ವಿವರಿಸುವುದು ಹೇಗೆ? ಕೊನೆಗೆ ಡಿವಿಜಿ ‘ಹಾಗಿದ್ರೆ, ನನ್ನ ಸಂದೇಶ ಏನಾದರೂ ಅದನ್ನು ಸಭೆಯಲ್ಲಿ ಓದಿ ಹೇಳ್ತೀರೇನ್ರೋ’ ಎಂದರು, ಕಾರ್ಯಕರ್ತರು ಖುಷಿಯಿಂದ ‘ಹೌದು’ ಎಂಬ ವಾಗ್ದಾನ ಇತ್ತರು. ಡಿವಿಜಿ ಅವರು ‘ಗುಂಡಪ್ಪನಾದೊಡೇಂ ಕುಂಡೆಯದು ನೋಯದೇಂ...’ ಎಂಬ ಸಂದೇಶ ನೀಡಿದೊಡನೆ ಕಾರ್ಯಕರ್ತರು ಕಣ್ಮರೆಯಾಗಿದ್ದರು. 

ಹೀಗೆ ನೋವನ್ನು, ನಗುವಾಗಿ ಪರಿವರ್ತಿಸುವ ಕಲೆಯನ್ನು ಹೃದ್ಗತ ಮಾಡಿಕೊಂಡಿದ್ದ ಡಿವಿಜಿ, ಬದುಕು ಒಡ್ಡಿದ ಕಷ್ಟಗಳಿಗೆ ಮಣಿದವರಲ್ಲ. ಬದುಕೆಷ್ಟು ಭಾರವಾದರೂ, ಈಸಬೇಕು ಇದ್ದು ಜೈಸಬೇಕು ಎಂಬುದನ್ನೇ ಧ್ಯೇಯವಾಗಿಸಿಕೊಂಡವರು. ಆಗಿಹೋದ ಕಹಿ ಘಟನೆಗಳನ್ನೇ ಜಗಿಯುತ್ತಾ ಕುಳಿತುಕೊಳ್ಳಬೇಡಿ ಎಂಬ ಸಂದೇಶ ನೀಡಿದವರು. ಎಷ್ಟರ ಮಟ್ಟಿಗೆ ಎಂದರೆ ತಮ್ಮನ್ನು ತಾವೇ ಪ್ರೇರಿಸಿಕೊಳ್ಳಲು, ಸಂತೈಸಿಕೊಳ್ಳಲು ಆಶುಕವಿತೆಗಳನ್ನು ಬರೆದು ಹಾಡಿಕೊಳ್ಳುತ್ತಿದ್ದರಂತೆ. 

ಆದದ್ದಾಯಿತು| ಹೋದದ್ಹೋಯಿತು|
ಒಗೆಯೋ ಕಂತೇನಾ| ಗುಂಡಾ
ಹೊಡಿಯೋ ಗಂಟೇನಾ||


ಇಲ್ಲಿ ‘ಗುಂಡಾ’ ಎಂಬುದರ ಬದಲಿಗೆ ನಮ್ಮ ಹೆಸರನ್ನು ಸೇರಿಸಿಕೊಂಡರೆ, ಇದು ನಮಗೂ ಸಾಂತ್ವನ ನೀಡುವ, ಉತ್ಸಾಹ ತುಂಬುವ ಮಾತಾಗುತ್ತದೆ. ಅಡಿಗರು ಕೂಡ ತಮ್ಮ ಕವನದಲ್ಲಿ ಇದೇ ಆಶಯವನ್ನೇ ವ್ಯಕ್ತಪಡಿಸುತ್ತಾರೆ. ಭೂತ ಭವಿಷ್ಯಗಳ ಬಗ್ಗೆ ಅತಿಯಾಗಿ ಚಿಂತಿಸದೇ ವರ್ತಮಾನವನ್ನು ಆಸ್ವಾದಿಸುವ ಕಲೆ ಅರಿಯುವುದೇ ಮಧುರ ಬದುಕಿನ ಸೂತ್ರ ಎನ್ನುತ್ತಾರೆ.

ಹಿಂದುಮುಂದಿನೆಣಿಕೆಯೇಕೆ?
ಇಂದಿನಮೃತದೂಟೆ ಇರಲು,
ಅದನು ಸವಿಯ ಬಾರದೆ?
ಅದುವೆ ಮುದವ ತಾರದೆ?


ಈ ಸಾಲುಗಳನ್ನು ಓದಿದಾಗಲೆಲ್ಲಾ ನೆನಪಾಗುವವರು, ಬದುಕಿನ ಬವಣೆಯನ್ನು ನಗುವಿನ ಮೂಲಕ ನೀವಾಳಿಸಿದ ಕೈಲಾಸಂ. ಅವರನ್ನು ನೆನಪಿಸಿಕೊಳ್ಳದೇ ಹೊಸ ವರ್ಷ ಕಳೆ ಕಟ್ಟೀತು ಹೇಗೆ?

ಒಮ್ಮೆ ಬೆಂಗಳೂರಿನ ರಸ್ತೆಯೊಂದರಲ್ಲಿ ರಾಜರತ್ನಂ, ಮಾಸ್ತಿ, ಕೈಲಾಸಂ ವಾಕಿಂಗ್ ಹೊರಟಿದ್ದರು. ಅದು ಬ್ರಿಟಿಷರನ್ನು ನಾವು ಎಲ್ಲ ವಿಷಯದಲ್ಲೂ ಅನುಕರಿಸಲು ಆರಂಭಿಸಿದ್ದ ಕಾಲ. ಮನೆಗೆ ಹೆಸರಿಡುವ ವಿಷಯದಲ್ಲೂ ಅನುಕರಣೆ ನಡೆದಿತ್ತು. ‘ಕೃಪಾ’, ‘ನಿಲಯ’, ‘ನಿವಾಸ’ಗಳೆಲ್ಲಾ ‘ವಿಲ್ಲಾ’ ಆಗಿ ಬದಲಾಗುತ್ತಿದ್ದವು. ಸಾಮಾನ್ಯವಾಗಿ ರಸ್ತೆಯಲ್ಲಿ ನಡೆಯುವಾಗ ಇಕ್ಕೆಲಗಳನ್ನು ಗಮನಿಸಿ, ಎಲ್ಲವನ್ನೂ ಹಾಸ್ಯ ಲೇಪದೊಂದಿಗೆ ವ್ಯಾಖ್ಯಾನಿಸುತ್ತಿದ್ದ ಕೈಲಾಸಂಗೆ ‘ಆನಂದ ವಿಲ್ಲಾ’ ಕಂಡಿತು. ‘ಅಯ್ಯೋ ಪಾಪ, ಮನೇಲಿರೋರ ಮುಖ ನೋಡಿದ್ರೆ ಗೊತ್ತಾಗುತ್ತದಲ್ಲ’ ಎಂದು ಮನ್ನಡೆದರು. ‘ಜ್ಞಾನ ವಿಲ್ಲಾ’ ಎದುರಾದಾಗ, ‘ಜಗತ್ತಿಗೇ ಗೊತ್ತಿರೋ ವಿಷಯ ಬಿಡಿ, ಬರೆದು ಹೇಳಬೇಕೆ’ ಎಂದರು.

‘ಸೌಂದರ್ಯ ವಿಲ್ಲಾ’ ಕಂಡೊಡನೆ, ಕೂತೂಹಲ ಹೆಚ್ಚಾಗಿ ಆ ಮನೆಯ ತೆರೆದ ಕಿಟಕಿಯಲ್ಲಿ ಇಣುಕಿದರು. ಒಳಗೆ ಡ್ರೆಸ್ಸಿಂಗ್ ಟೇಬಲ್ ಎದುರು ನಿಂತು ಮೇಕಪ್ ಮಾಡಿಕೊಳ್ಳುತ್ತಿದ್ದ ಮಧ್ಯವಯಸ್ಸಿನ ಆ ಮನೆಯೊಡತಿ, ಇವರನ್ನು ಕಂಡದ್ದೇ ಕೊಂಚ ನಾಚಿ, ಕಣ್ಣಲ್ಲೇ ನಕ್ಕು ಒಳಗೆ ಹೋದರು. ತಕ್ಷಣ ಕೈಲಾಸಂ, ಉತ್ಸಾಹದಿಂದ ಕೆಳಗೆ ಬಿದ್ದಿದ್ದ ಇದ್ದಿಲು ತೆಗೆದುಕೊಂಡು, ‘ಸೌಂದರ್ಯ ವಿಲ್ಲಾ’ ಎಂಬುದಕ್ಕೆ ಕಾಟುಹೊಡೆದು, ಅದರ ಕೆಳಗೆ ಬರೆದರು… ‘ಪರವಾಗಿಲ್ಲ’.

ಇದು ನೀರಸ ಬದುಕಿನ ಕಣಕಕ್ಕೆ, ನಗೆಯ ಹೂರಣ ತುಂಬಿ ಬದುಕನ್ನು ಹೋಳಿಗೆಯಾಗಿಸಿಕೊಳ್ಳುವ ಪರಿ. ನಿಜ, ಜಾಗತಿಕ ಭಯೋತ್ಪಾದನೆಯ ಕರಾಳ ಅಧ್ಯಾಯ, ಪ್ರಕೃತಿ ವಿಕೋಪದ ಸೂತಕ, ವೈಯಕ್ತಿಕ ಬದುಕಿನ ಸೋಲು ಹಿಂದಿನ ವರ್ಷ ನಮ್ಮನ್ನು ಕಂಗೆಡಿಸಿರಬಹುದು, ಆದರೆ ನಾಳೆಗಳತ್ತ ನಾವು ಆಸೆಕಣ್ಣುಗಳಿಂದಲೇ ನೋಡಬೇಕಿದೆ. ಮತ್ತೆ ಅಡಿಗರದೇ ಮಾತು,
 
ಇಂದಲ್ಲ ನಾಳೆ ಹೊಸ ಬಾನು ಬಗೆ ತೆರೆದೀತು,
ಕರಗೀತು ಮುಗಿಲ ಬಳಗ|
ಬಂದೀತು ಸೊದೆಯ ಮಳೆ, ತುಂಬೀತು
ಎದೆಯ ಹೊಳೆ
ತೊಳೆದೀತು ಒಳುಗು- ಹೊರಗ|


ಈ ಆಶಾವಾದದಿಂದಲೇ ಕ್ಯಾಲೆಂಡರ್ ವರ್ಷ 2016 ಅನ್ನು ಆಲಿಂಗಿಸಿಕೊಳ್ಳೋಣ. ನೆಮ್ಮದಿಯ ಬದುಕೆಂಬ ಗಮ್ಯದತ್ತ ಹೆಜ್ಜೆ ಇರಿಸೋಣ. ಓದುಗರೆಲ್ಲರಿಗೂ ಶುಭಾಶಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT