ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಲಿಂಪಿಕ್ಸ್: ನಿರಾಸೆ ಯಾಕೆ?

Last Updated 13 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ಒಲಿಂಪಿಕ್ಸ್‌, ಏಷ್ಯನ್‌ ಮತ್ತು ಕಾಮನ್‌ವೆಲ್ತ್‌ ಕ್ರೀಡೆಗಳಿಗೆ ಸಂಬಂಧಿಸಿದಂತೆ ನಮ್ಮಲ್ಲಿ ಎರಡು ಬಗೆಯ ಅಭಿಪ್ರಾಯಗಳು ಕಂಡು ಬರುತ್ತವೆ. ಮೊದಲನೆಯದಾಗಿ ಬಹುಸಂಖ್ಯಾತರನ್ನು ಪ್ರತಿನಿಧಿಸುವ ಜನಸಾಮಾನ್ಯರ ಅಭಿಪ್ರಾಯದಲ್ಲಿ, ಭಾರತದ ಸ್ಪರ್ಧಾಳುಗಳು ಕ್ರೀಡಾಕೂಟಗಳಲ್ಲಿ ಹಲವಾರು ಅಡೆತಡೆಗಳ ಮಧ್ಯೆಯೂ ತಮ್ಮ ಶಕ್ತಿಯನ್ನೆಲ್ಲ ಪಣಕ್ಕಿಟ್ಟಿರುತ್ತಾರೆ.

ಅವರು ಕೆಲವೇ ಕೆಲ ಪದಕಗಳನ್ನು ಗೆದ್ದು ತಂದರೂ ಜನಸಾಮಾನ್ಯರ ಪಾಲಿಗೆ ಅದೊಂದು ಅದ್ಭುತ ಸಾಧನೆಯಾಗಿರುತ್ತದೆ. ಎರಡನೇ ಬಗೆಯ ಅಭಿಪ್ರಾಯ ಹೊಂದಿರುವವರನ್ನು ಬೇಕಿದ್ದರೆ ನಾವು  ಶೋಭಾ ಡೇ ಗುಂಪು ಎಂದು ಕರೆಯಬಹುದು. ಈ ಗುಂಪಿನ ಸದಸ್ಯರ ಸಂಖ್ಯೆ ಕಡಿಮೆ. ‘ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಭಾಗವಹಿಸುವುದು ಭಾರತೀಯರ ಪಾಲಿಗೆ ವ್ಯರ್ಥ ಕಸರತ್ತಾಗಿದೆ, ಸುಮ್ಮನೆ ಹಣ ಖರ್ಚು ಮಾಡಲಾಗುತ್ತಿದೆ.

ಕ್ರೀಡಾಕೂಟದಲ್ಲಿ ಭಾಗಿಯಾಗಿರುವ ನಮ್ಮ ಕ್ರೀಡಾಳುಗಳು ಮತ್ತು ಅಧಿಕಾರಿಗಳಿಂದ ನಮ್ಮಷ್ಟಕ್ಕೆ ನಾವೇ ತೇಜೋವಧೆ ಮಾಡಿಕೊಳ್ಳುವುದು ಏಕೆ’ ಎನ್ನುವುದು ಈ ಗುಂಪಿನ ನಿಲುವಾಗಿದೆ. ಶೋಭಾ ಡೇ ಅವರ ಹೇಳಿಕೆಗೆ ವ್ಯಕ್ತವಾದ ಟೀಕೆ ಕಂಡು ಈ ಎರಡೂ ಗುಂಪುಗಳ ಅಭಿಪ್ರಾಯಗಳು ಸರಿಯಾಗಿವೆ ಎಂದು ನಾನು ಹೇಳಿದರೆ ಓದುಗರು ಚಕಿತರಾಗಬಹುದು. ಎರಡೂ ಬಣಗಳ ಅನಿಸಿಕೆಗಳು ತಪ್ಪು ಎಂದೂ ಹೇಳುವ ಮೂಲಕ ಈ ವಿಷಯವನ್ನು ಇನ್ನಷ್ಟು ಸಂಕೀರ್ಣಗೊಳಿಸುವೆ.

ಈ ಮೇಲಿನ ಪ್ರತಿ ಅನಿಸಿಕೆ ಸರಿಯಾಗಿದೆ ಎನ್ನುವುದನ್ನು ತಿಳಿದುಕೊಳ್ಳುವುದು ತುಂಬಾ ಸುಲಭ. ಜಾಗತಿಕ ಕ್ರೀಡಾ ವೇದಿಕೆಯಲ್ಲಿ ತನ್ನ ಕ್ರೀಡಾಪಟುಗಳು ವಿಶಿಷ್ಟ ಸಾಧನೆ ಮೆರೆಯುವುದನ್ನು ಪ್ರತಿ ದೇಶವೂ ನಿರೀಕ್ಷಿಸುತ್ತಿರುತ್ತದೆ. ಅಂತಹ ನಿರೀಕ್ಷೆ ಈಡೇರದೆ ಇದ್ದಾಗ ಯಾರಿಗೆ ಆದರೂ ಖಂಡಿತವಾಗಿಯೂ ನಿರಾಸೆ ಆಗುತ್ತದೆ.

ಕ್ರೀಡಾಪಟುಗಳ ಸಾಧನೆಯ ಬಗ್ಗೆ ಯಾರಾದರೂ ಹೆಚ್ಚು ಆಶಾವಾದಿಗಳಾಗಿದ್ದಾಗ ಅವರವೈಫಲ್ಯಗಳನ್ನು ಮನ್ನಿಸಬಹುದು ಅಥವಾ ಮನ್ನಿಸದೇ ಇರಬಹುದು. ಆದರೆ, ಭಾವನೆಗಳಲ್ಲಿ ದೋಷ ಹುಡುಕಬಾರದು.

ಸದ್ಯದ ರಾಷ್ಟ್ರೀಯವಾದ ಗರಿಷ್ಠ ಪ್ರಮಾಣದಲ್ಲಿ ಉದ್ದೀಪನಗೊಂಡಿರುವ ದಿನಗಳಲ್ಲಿ (ನಾನು ಇಲ್ಲಿ ಸ್ವಾತಂತ್ರ್ಯ ದಿನೋತ್ಸವದ ಸಂದರ್ಭವನ್ನು ಪ್ರಸ್ತಾಪಿಸುತ್ತಿಲ್ಲ), ನಮ್ಮವರು ರಿಯೊ ಒಲಿಂಪಿಕ್ಸ್‌ನಲ್ಲಿ  ವಿಶ್ವದ ಕ್ರೀಡಾಪಟುಗಳನ್ನು ಸೋಲಿಸುವ ಅಪೂರ್ವ ಸಾಧನೆಯನ್ನು ನಿರೀಕ್ಷಿಸುತ್ತಿದ್ದೇವೆ.

ನಮ್ಮ ಆರ್ಥಿಕತೆಯ ಬೆಳವಣಿಗೆಯ ದರವು ಚೀನಾಕ್ಕಿಂತ ಹೆಚ್ಚಿಗೆ ಇದೆ ಎಂದೂ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದೇವೆ.  ಆಶಾವಾದ ಮತ್ತು ಅವಹೇಳನದ ಎರಡೂ ಬಗೆಯ ಈ ಮೇಲಿನ ಚಿಂತನೆಗಳಲ್ಲಿ, ಒಲಿಂಪಿಕ್ಸ್‌ ಪದಕಗಳನ್ನು ಗೆಲ್ಲುವುದರಲ್ಲಿಯೇ ಯಶಸ್ಸನ್ನು ವ್ಯಾಖ್ಯಾನಿಸುತ್ತಿರುವುದರಲ್ಲಿ ಮೂಲ ದೋಷ ಇದೆ.

ರಿಯೊದಲ್ಲಿ ಟ್ರ್ಯಾಕ್‌ ಮತ್ತು ಫೀಲ್ಡ್‌  ವಿಭಾಗಗಳಲ್ಲಿ ಕ್ರೀಡಾಳುಗಳು ತಮ್ಮ ಸಾಧನೆ ಒರೆಗೆ ಹಚ್ಚುವುದಕ್ಕೆ ಆರಂಭಿಸಿದ ದಿನವೇ ನಾನು ಈ ಅಂಕಣ ಬರೆಯುತ್ತಿದ್ದೇನೆ. ಈ ಒಲಿಂಪಿಕ್ಸ್‌ ಕ್ರೀಡಾಕೂಟವು ಇನ್ನೂ ಕೊನೆಗೊಂಡಿಲ್ಲ. ಇದೇ ಮೊದಲ ಬಾರಿಗೆ ಅತಿದೊಡ್ಡ ಪ್ರಮಾಣದಲ್ಲಿ (118) ಭಾಗಿಯಾಗಿರುವ ಭಾರತದ ಕ್ರೀಡಾಪಟುಗಳು ಪದಕಗಳನ್ನು ಬೇಟೆಯಾಡಲು ಇನ್ನೂ ಕೆಲ ಅವಕಾಶಗಳಿವೆ ಎಂದು ನಾನು ಆಶಿಸುತ್ತಿದ್ದೇನೆ. ಜತೆಗೆ, ಹೆಚ್ಚೆಚ್ಚು ಪದಕಗಳನ್ನು ಗೆದ್ದು ಬರಲಿ ಎಂದೂ ಪ್ರಾರ್ಥಿಸುತ್ತಿದ್ದೇನೆ.

ಒಲಿಂಪಿಕ್ಸ್‌ ಕ್ರೀಡಾಕೂಟಗಳಲ್ಲಿ 96 ವರ್ಷಗಳಿಂದ ಭಾಗವಹಿಸುತ್ತಿರುವ ಭಾರತವು ಈ ಹಿಂದೆ ವೈಯಕ್ತಿಕ ವಿಭಾಗದಲ್ಲಿ ಒಂದು ಚಿನ್ನ, ಐದು ಬೆಳ್ಳಿ ಮತ್ತು 9 ಕಂಚು ಪದಕಗಳನ್ನಷ್ಟೇ ಗೆದ್ದಿದೆ. ಹೀಗಾಗಿ ಈ ಬಾರಿ ಭಾಗವಹಿಸಿರುವ ಕ್ರೀಡಾಪಟುಗಳಿಂದ ಇದಕ್ಕಿಂತ ಹೆಚ್ಚಿನ ಸಾಧನೆ ನಿರೀಕ್ಷಿಸಬಾರದು.

ಈ ಡಜನ್‌ ವೈಯಕ್ತಿಕ ಪದಕಗಳ ಪಟ್ಟಿಯಲ್ಲಿ 11 ಪದಕಗಳು 2004ರಿಂದ ನಡೆದ ಮೂರು ಒಲಿಂಪಿಕ್ಸ್‌ಗಳಾದ ಅಥೆನ್ಸ್‌ (2004), ಬೀಜಿಂಗ್‌ (2008) ಮತ್ತು ಲಂಡನ್ (2012) ಕ್ರೀಡಾಕೂಟಗಳಿಂದ ಬಂದಿವೆ.  ಅದಕ್ಕೂ ಹಿಂದಿನ 80 ವರ್ಷಗಳಲ್ಲಿ 1952ರಲ್ಲಿ ಹೆಲ್ಸಿಂಕಿಯಲ್ಲಿ ನಡೆದಿದ್ದ ಕ್ರೀಡಾಕೂಟದಲ್ಲಿ ಕುಸ್ತಿಯಲ್ಲಿ ಒಂದೇ ಒಂದು ಕಂಚಿನ ಪದಕವು ಭಾರತದ ಪಾಲಿಗೆ ದಕ್ಕಿತ್ತು.

ಒಲಿಂಪಿಕ್ಸ್‌ ಕ್ರೀಡಾಕೂಟಗಳಲ್ಲಿ  ಇದುವರೆಗಿನ ನಮ್ಮ ಸಾಧನೆ ಇಷ್ಟು ಕಳಪೆಯಾಗಿದ್ದರೂ, ಪದಕಗಳ  ಪಟ್ಟಿಯಲ್ಲಿ ಮೊದಲ 25 ಸ್ಥಾನಗಳಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವ ಸಾಮರ್ಥ್ಯ ನಮಗಿದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದೇವೆ. ಬೀಜಿಂಗ್‌ನಲ್ಲಿನ ನಮ್ಮ ಸಾಧನೆ 50ನೇ ಸ್ಥಾನದಲ್ಲಿತ್ತು. ಟೆಸ್ಟ್‌ ಕ್ರಿಕೆಟ್‌ ಮತ್ತು ಒಂದು ದಿನದ ಕ್ರಿಕೆಟ್‌ ಪಂದ್ಯಗಳಲ್ಲಿ ನಾವು ಮೊದಲ ಅಥವಾ ಎರಡನೇ ಸ್ಥಾನದಲ್ಲಿ ಇದ್ದೇವೆ. ಕೆಲ ವರ್ಷಗಳಿಂದ ನಮ್ಮ ಆರ್ಥಿಕ ವೃದ್ಧಿ ದರ ಗರಿಷ್ಠ ಪ್ರಮಾಣದಲ್ಲಿದೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಶಾಶ್ವತ ಸದಸ್ಯತ್ವಕ್ಕೆ ನಾವು ಹಕ್ಕು ಸಾಧಿಸುತ್ತಿದ್ದೇವೆ. ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣ ವ್ಯವಸ್ಥೆಯ ಪೂರ್ಣ ಪ್ರಮಾಣದ ಸದಸ್ಯ ದೇಶ ಎಂದು ಹೇಳಿಕೊಳ್ಳುತ್ತಿದ್ದೇವೆ. ಇವೆಲ್ಲವೂ, ನಾವು ನಮ್ಮ ಆರ್ಥಿಕ ವೃದ್ಧಿ ದರವು ಚೀನಾಕ್ಕಿಂತ  ಹೆಚ್ಚಿಗೆ ಇದೆ ಎಂದು  ಹೇಳಿಕೊಳ್ಳುವಂತಹ ಮೂರ್ಖತನದ ಮತ್ತು ಭ್ರಮಾತ್ಮಕ ಹೇಳಿಕೆಗಳಾಗಿವೆ.

ವಾಸ್ತವ ಸ್ಥಿತಿಗತಿಯು ಇದಕ್ಕಿಂತ ಹೆಚ್ಚು ಭಿನ್ನವಾಗಿದೆ.  25 ವರ್ಷಗಳ ಕಾಲ ಎಲ್‌ಟಿಟಿಇ ಜತೆಗಿನ ಸಮರದಲ್ಲಿ ಮುಳುಗಿದ್ದ  ಶ್ರೀಲಂಕಾದ ತಲಾ ಜಿಡಿಪಿ ಆದಾಯವು  ಭಾರತಕ್ಕಿಂತ ಶೇ 50ರಷ್ಟು ಹೆಚ್ಚಿಗೆ ಇದೆ. ನಮ್ಮ ಆರ್ಥಿಕ ವೃದ್ಧಿ ದರ ಏರುಗತಿಯಲ್ಲಿ ಸಾಗುತ್ತಿದ್ದಂತೆ ಮತ್ತು ಕಾಲಕ್ರಮೇಣ ಭಾರತ ಮತ್ತು ಇತರ ದೇಶಗಳ ನಡುವಣ ಅಂತರ ಕಡಿಮೆಯಾಗುತ್ತಿದ್ದಂತೆ ನಮ್ಮ ಕ್ರೀಡಾ ಸಾಧನೆಯೂ ಗಮನಾರ್ಹ ಪ್ರಗತಿ ದಾಖಲಿಸಬೇಕಾಗಿತ್ತು. ಆದರೆ, ಅದು ಇದುವರೆಗೂ ಸಾಧ್ಯವಾಗಿಲ್ಲ.

ಒಲಿಂಪಿಕ್ಸ್‌ ಕ್ರೀಡಾಕೂಟಗಳಲ್ಲಿ ಪದಕ ಗೆಲ್ಲುವುದು ಅಷ್ಟು ಸುಲಭವಲ್ಲ. ‘ಸುಲ್ತಾನ್‌’ ಚಿತ್ರದಲ್ಲಿ ಸಲ್ಮಾನ್ ಖಾನ್ ಅವರು 30ನೇ ವಯಸ್ಸಿನಲ್ಲಿ ತರಬೇತಿ ಆರಂಭಿಸಿ ಚಿನ್ನದ ಪದಕ ಗೆಲ್ಲುತ್ತಾರೆ. ಆದರೆ, ವಾಸ್ತವ ಬದುಕಿನಲ್ಲಿ ಇಂತಹ ಸಾಧನೆ ಮಾಡಲು ವರ್ಷಗಳ ಪೂರ್ವಸಿದ್ಧತೆ ಬೇಕಾಗುತ್ತದೆ. ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಅರ್ಹತೆ ಗಿಟ್ಟಿಸಲು ಕುಸ್ತಿಪಟುವೊಬ್ಬನಿಗೆ ಹತ್ತು ವರ್ಷಗಳಷ್ಟು ಸುದೀರ್ಘ ಅವಧಿಯ ತರಬೇತಿ ಅಗತ್ಯ ಇರುತ್ತದೆ.

ಈ ತರಬೇತಿ ಅದೆಷ್ಟು ಕಠಿಣವಾಗಿರುತ್ತದೆ ಎನ್ನುವುದಕ್ಕೆ  ನರಸಿಂಗ್‌ ಯಾದವ್‌ ಅವರ ನಿದರ್ಶನ ನೀಡಬೇಕಾಗುತ್ತದೆ. ಅವರು ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕೊನೆಯ ಕ್ಷಣದಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಲು ಸಫಲರಾದರು ಎನ್ನುವುದನ್ನು ನಾವಿಲ್ಲಿ ಮರೆಯುವಂತಿಲ್ಲ.

ಅಥ್ಲೆಟಿಕ್ಸ್‌ನಲ್ಲಿ, ಈ ಹಿಂದಿನ ಒಲಿಂಪಿಕ್ಸ್‌ನಲ್ಲಿ 6ನೇ ಸ್ಥಾನದಲ್ಲಿದ್ದ ಕ್ರೀಡಾಪಟುವಿನ ಸಾಧನೆಗಿಂತ ಉತ್ತಮ ಪ್ರದರ್ಶನ ತೋರಿದ್ದರೆ ಮಾತ್ರ ಈ ಬಾರಿ ಅರ್ಹತೆ ಪಡೆಯಬಹುದು ಎನ್ನುವುದು ಸಾಮಾನ್ಯ  ಮಾನದಂಡವಾಗಿರುತ್ತದೆ. ಈ ವಿಷಯದಲ್ಲಿ ಭಾರತದ  ಅಥ್ಲೀಟ್‌ಗಳ ಸಾಧನೆಯು ತುಂಬ ಕಳಪೆಯಾಗಿದೆ. ಮುಂಚೂಣಿ 25 ಸ್ಥಾನಗಳಲ್ಲಿ ಸೇರ್ಪಡೆಗೊಳ್ಳುವುದು ನಮ್ಮ ಅಥ್ಲೀಟ್‌ಗಳಿಂದ ಇದುವರೆಗೂ ಸಾಧ್ಯವಾಗಿಲ್ಲ.

ಹಾಕಿ ವಿಷಯದಲ್ಲಿಯೂ ಕಾಂಟಿನೆಂಟಲ್‌ ಚಾಂಪಿಯನ್‌ಶಿಪ್‌ನಲ್ಲಿ ಅಥವಾ ಕಠಿಣ ಸ್ವರೂಪದ ಅರ್ಹತಾ ಟೂರ್ನಮೆಂಟ್‌ನಲ್ಲಿ ಗೆಲುವು ಸಾಧಿಸುವುದೇ ಮುಖ್ಯ ಮಾನದಂಡವಾಗಿರುತ್ತದೆ. ಇಂತಹ ಸಾಧನೆ ಮಾಡದ ಕಾರಣಕ್ಕೇ ಭಾರತದ ಹಾಕಿ ತಂಡ ಬೀಜಿಂಗ್‌ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿರಲಿಲ್ಲ. ರಿಯೊ ಒಲಿಂಪಿಕ್ಸ್‌ನಲ್ಲಿ ಪಾಕಿಸ್ತಾನ ಪಾಲ್ಗೊಳ್ಳದಿರಲೂ ಇದೇ ಕಾರಣವಾಗಿದೆ.

ರಿಯೊ ಒಲಿಂಪಿಕ್ಸ್‌ನಲ್ಲಿ 118 ಕ್ರೀಡಾಪಟುಗಳು ಭಾಗವಹಿಸುತ್ತಿದ್ದಾರೆ ಎನ್ನುವುದೇ ಜಾಗತಿಕ ಕ್ರೀಡಾಕೂಟಗಳಲ್ಲಿ ಭಾಗವಹಿಸುವ ಭಾರತೀಯರ ಗುಣಮಟ್ಟ ಸುಧಾರಣೆಯಾಗಿರುವುದನ್ನು ಸೂಚಿಸುತ್ತದೆ. ಭಾರತೀಯರ ಸಾಧನೆಯು ಈಗ ಸಾಂಪ್ರದಾಯಿಕ ಹಾಕಿ, ಕುಸ್ತಿ, ಬಾಕ್ಸಿಂಗ್‌ ಮತ್ತು ಶೂಟಿಂಗ್‌ ವಿಭಾಗಕ್ಕೆ ಮಾತ್ರ ಸೀಮಿತಗೊಂಡಿಲ್ಲ. ಆರ್ಚರಿ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ  ಜಿಮ್ನಾಸ್ಟಿಕ್‌್ಸನಲ್ಲಿಯೂ ನಮ್ಮವರ ಸಾಮರ್ಥ್ಯ ಗಮನಾರ್ಹ ಪ್ರಗತಿ ಕಂಡಿದೆ.

ಮಹಿಳಾ ಜಿಮ್ನಾಸ್ಟ್‌ ಒಬ್ಬರು ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಳ್ಳುವುದರ ಜತೆಗೆ, ಅಂತಿಮ ಸುತ್ತಿನ  ಹಾದಿಯಲ್ಲಿ ಸಾಗಿದ್ದು ಗಮನಾರ್ಹ ಸಾಧನೆಯಾಗಿದೆ. ಭಾರತದ 25 ವರ್ಷದವರಲ್ಲಿ ಬಹುಸಂಖ್ಯಾತರು ಬಾಗಿ ತಮ್ಮ ಹೆಬ್ಬೆರಳು ಸ್ಪರ್ಶಿಸಲೂ ಹರಸಾಹಸ ಪಡುತ್ತಿರುವಾಗ ಈ ಸಾಧನೆ ಹೆಚ್ಚು ಮುಖ್ಯವಾಗುತ್ತದೆ. ಇಬ್ಬರು ಈಜುಪಟುಗಳಿಗೆ ‘ಆಹ್ವಾನ’ ನೀಡಿರುವುದನ್ನು ಹೊರತುಪಡಿಸಿದರೆ, ಉಳಿದವರೆಲ್ಲ ಅರ್ಹತೆ ಪಡೆದಿದ್ದಾರೆ.

ಒಲಿಂಪಿಕ್ಸ್‌ನಲ್ಲಿ ಅರ್ಹತೆ ಪಡೆಯುವ ಪ್ರಕ್ರಿಯೆ ಈಗ ಇನ್ನಷ್ಟು ಕಠಿಣ ಸ್ವರೂಪದ ನಿಯಂತ್ರಣ ಕ್ರಮಗಳಿಗೆ ಒಳಪಟ್ಟಿದೆ. ಉದ್ದೀಪನಾ ಮದ್ದು ಸೇವನೆ ಪರೀಕ್ಷೆಯ ನಿಯಮಗಳೂ ಕಠಿಣಗೊಂಡಿವೆ.  ಯಾವುದೇ ದೇಶದ ಕ್ರೀಡಾಪಟುಗಳು ಹಠಾತ್ತಾಗಿ ವಿಶ್ವದ ದಿಗ್ಗಜರನ್ನು ಸೋಲಿಸುವ ಮಟ್ಟಕ್ಕೆ ತಮ್ಮ ಸಾಧನೆಯನ್ನು ಗಮನಾರ್ಹವಾಗಿ ಸುಧಾರಿಸಿಕೊಳ್ಳಲು ಸಾಧ್ಯವಾಗಲಾರದು.

ಅದೊಂದು ಸುದೀರ್ಘ ಮಾರ್ಗ. ಪದಕಗಳ ಪಟ್ಟಿಯಲ್ಲಿ ಮೊದಲ 50, 25 ಮತ್ತು 10ನೇ ಸ್ಥಾನಕ್ಕೆ ಬಡ್ತಿ ಪಡೆಯುವುದು ಮೊದಲ ಮೆಟ್ಟಿಲು ಆಗಿರುತ್ತದೆ. 1998ರಲ್ಲಿ ನಡೆದ ಸೋಲ್‌ ಒಲಿಂಪಿಕ್ಸ್‌ಗೆ ಮುಂಚೆ ಭಾರತದ ಸಾಧನೆ ತುಂಬ ಕಳಪೆಯಾಗಿತ್ತು. ಹಾಕಿ ಹೊರತುಪಡಿಸಿದರೆ ಉಳಿದ ಕ್ರೀಡಾ ವಿಭಾಗಗಳಲ್ಲಿ ಭಾರತೀಯರ ಪ್ರಾತಿನಿಧ್ಯ ತುಂಬ ಕಡಿಮೆ ಇರುತ್ತಿತ್ತು. ಈಗ ಕ್ರೀಡಾಕೂಟದ ವಿವಿಧ ವಿಭಾಗಗಳಲ್ಲಿನ ಪ್ರಾತಿನಿಧ್ಯದ ಪ್ರಮಾಣ ಹೆಚ್ಚಿದೆ.

ಭಾರತದ ಕನಿಷ್ಠ 30 ಕ್ರೀಡಾಪಟುಗಳು ತಮ್ಮ ತಮ್ಮ ವಿಭಾಗದಲ್ಲಿ ಮುಂಚೂಣಿ 10 ಮಂದಿಯಲ್ಲಿ ಸ್ಥಾನ ಪಡೆದಿದ್ದಾರೆ. ಅವರಲ್ಲಿ ಬೆರಳೆಣಿಕೆಯಷ್ಟು ಪ್ರತಿಭಾನ್ವಿತರು ಮೊದಲ ಐವರಲ್ಲಿ ಒಬ್ಬರಾಗಿದ್ದಾರೆ. ಸೈನಾ ನೆಹ್ವಾಲ್‌ (ಇತ್ತೀಚೆಗೆ ಇವರು ಎರಡು ಬಾರಿ ಮೊದಲ ಸ್ಥಾನ ತಲುಪಿದ್ದರು) ಮತ್ತು ಹಾಕಿ ತಂಡವು 5ನೇ ಸ್ಥಾನದಲ್ಲಿದೆ. ಭಾರತವು ಈಗಲೂ ಇಷ್ಟು ಸಂಖ್ಯೆಯಲ್ಲಿ ಪದಕ ಗೆಲ್ಲುತ್ತದೆ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ನಮ್ಮಲ್ಲಿ ಮೈಕಲ್‌ ಫೆಲ್ಪ್ಸ್‌ನಂತಹವರು ಒಬ್ಬರೂ ಇಲ್ಲ.

ವಿಶ್ವದಲ್ಲಿ ಇಂತಹ ಸಾಧನೆ ಮಾಡಿದವರು ಅವರೊಬ್ಬರೇ ಆಗಿದ್ದಾರೆ. ಈ ಬಗ್ಗೆ ನಾವು ಹೆಚ್ಚು ತಳಮಳಗೊಳ್ಳಬೇಕಾಗಿಲ್ಲ. ಈಜುಕೊಳ ಸ್ಪರ್ಧೆಗಳಲ್ಲಿ ಭಾರತೀಯರ ಸಾಧನೆ ನಿಧಾನವಾಗಿ ಸುಧಾರಿಸಿಕೊಳ್ಳುತ್ತಿದೆ. ಈಜುಕೊಳದಲ್ಲಿ ಪುರುಷರ ಸಾಧನೆಯು ಜಾಗತಿಕ ಮಟ್ಟದಲ್ಲಷ್ಟೇ ಅಲ್ಲದೆ ಏಷ್ಯಾದ ಮಟ್ಟದಲ್ಲಿಯೂ ನಮ್ಮ  ಮಹಿಳಾ ಈಜುಪಟುಗಳ ಸಾಧನೆಗಿಂತ ಕಡಿಮೆ ಮಟ್ಟದಲ್ಲಿ ಇರುವುದು ಮಾತ್ರ ಕಳವಳಕಾರಿ ಸಂಗತಿಯಾಗಿದೆ.

ಕ್ರೀಡಾಲೋಕದಲ್ಲಿ ಭಾರತ ಮತ್ತು ವಿಶ್ವದ ಇತರ ದೇಶಗಳ ಮಧ್ಯೆ ಅತಿದೊಡ್ಡ ಅಂತರ ಇದ್ದರೂ, ಒಂದೆರಡು ಕ್ಷೇತ್ರಗಳಲ್ಲಿ ನಾವು ಪದಕ ಗೆಲ್ಲಲು ಸಾಧ್ಯವಾಗಿದೆ. ಮೇರಿ ಕೋಮ್‌ ಅಥವಾ ಸೈನಾ ನೆಹ್ವಾಲ್‌ ಅವರು ತಮ್ಮ ಅದ್ಭುತ ಸಾಮರ್ಥ್ಯ ಪ್ರದರ್ಶಿಸಿ ದೇಶಕ್ಕೆ ಪದಕ ಗೆದ್ದು ಕೊಟ್ಟಿದ್ದಾರೆ.

ಕೆಲ ಕ್ರೀಡಾಪಟುಗಳ ಕೋಚ್‌ಗಳು ಬದ್ಧತೆಯಿಂದ ಕಾರ್ಯ ನಿರ್ವಹಿಸಿ ತಮ್ಮ  ಕ್ರೀಡಾಪಟುಗಳು ಭಾರತದ ಸಾಂಪ್ರದಾಯಿಕ ಶಕ್ತಿಯಲ್ಲಿ ಅದ್ಭುತ ಸಾಧನೆ ತೋರುವಂತೆ ಮಾಡುವಲ್ಲಿ ಸಫಲರಾಗಿದ್ದಾರೆ.

ಹಾಕಿ ಮತ್ತು ಕುಸ್ತಿ ವಿಭಾಗದಲ್ಲಿ ನಮ್ಮವರ ಸಾಧನೆ ಮೆಚ್ಚುವಂತಿದೆ. ಸುಶೀಲ್‌, ವಿಜೇಂದರ್‌ ಮತ್ತು ಯೋಗೇಶ್ವರ್‌ ಅವರ ಸಾಧನೆಯ ಹಿಂದೆ ಕೋಚ್‌ಗಳ ಶ್ರಮವೂ ಕೆಲಸ ಮಾಡಿದೆ. ಅದ್ಭುತ ಸಾಮರ್ಥ್ಯ ಹೊಂದಿರುವ ಕ್ರೀಡಾಪಟುಗಳು ತಮ್ಮ ತರಬೇತಿಗೆ ಹಣಕಾಸಿನ ಮುಗ್ಗಟ್ಟು ಎದುರಿಸಿಯೂ ಅತ್ಯುತ್ತಮ ಸಾಧನೆ ಮಾಡಿದ ನಿದರ್ಶನಗಳೂ ನಮ್ಮ ಕಣ್ಣೆದುರು ಇವೆ.

ಅಭಿನವ್‌ ಬಿಂದ್ರಾ ಅಥವಾ ರಾಜವರ್ಧನ್‌ ಸಿಂಗ್‌ ರಾಥೋಡ್ ಅವರ ಸಾಧನೆಯೇ ಈ ಮಾತಿಗೆ ಸಾಕ್ಷಿ. ಇಂತಹ ವಿಶೇಷ ಪ್ರತಿಭಾನ್ವಿತ ಕ್ರೀಡಾಪಟುಗಳಿಂದ ಮಾತ್ರ ಅನಿರೀಕ್ಷಿತ ಸಾಧನೆ ನಿರೀಕ್ಷಿಸಬಹುದಾಗಿದೆ.

ಭಾರತ ಉಪಖಂಡದ ಜೀವನಶೈಲಿ ಮತ್ತು ತಲೆಮಾರುಗಳ ಆಹಾರ ಅಭ್ಯಾಸವು ಭಾರತೀಯರನ್ನು ಸಹಜ ಕ್ರೀಡಾಪಟುಗಳನ್ನಾಗಿ ರೂಪಿಸಿಲ್ಲ. ಕ್ರಿಕೆಟ್‌  ಲೋಕದಲ್ಲಿ ಹೆಸರು ಮಾಡುತ್ತಿರುವ ಬಾಂಗ್ಲಾದೇಶದ ಜನಸಂಖ್ಯೆಯು ಗಮನಾರ್ಹ ಮಟ್ಟದಲ್ಲಿ ಇದ್ದರೂ, ಇದುವರೆಗೂ ಒಲಿಂಪಿಕ್ಸ್‌ನಲ್ಲಿ ಒಂದೇ ಒಂದು ಪದಕ ಗೆದ್ದಿಲ್ಲ.

ಪಾಕಿಸ್ತಾನವು ಇದುವರೆಗೆ ಎರಡೇ ಎರಡು ಪದಕಗಳಿಗೆ ತೃಪ್ತಿಪಟ್ಟುಕೊಂಡಿದೆ. ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ಜನರಂತೆಯೇ ಅಂಗಸೌಷ್ಟವ ಹೊಂದಿರುವ ಭಾರತದ ಕ್ರೀಡಾಪಟುಗಳು ಜಾಗತಿಕ ಮಟ್ಟದ ಕ್ರೀಡಾಕೂಟಗಳಲ್ಲಿ ಸಮಯ, ಅಂತರ ಮತ್ತು ಅಂಕಗಳನ್ನು ಪಡೆಯುವಲ್ಲಿ ತೀರ ಹಿಂದುಳಿದಿದ್ದಾರೆ.

ನಮ್ಮ ಸೇನಾ ಪಡೆಗಳೂ ಈ ಹಿಂದಿನಂತೆ ಟ್ರ್ಯಾಕ್‌ ಮತ್ತು ಫೀಲ್ಡ್‌, ಕುಸ್ತಿ ಮತ್ತಿತರ ಕ್ರೀಡಾ ವಿಭಾಗದಲ್ಲಿ ದೇಶವನ್ನು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿನಿಧಿಸುತ್ತಿಲ್ಲ. ಕ್ರೀಡಾ ಕ್ಷೇತ್ರದಲ್ಲಿ ಶ್ರೇಷ್ಠತೆ ಸಾಧಿಸುವುದಕ್ಕೂ ಜನಸಂಖ್ಯೆಯ ಗಾತ್ರಕ್ಕೂ ಯಾವುದೇ ಸಂಬಂಧ ಇಲ್ಲ. ಕ್ರೀಡಾ ಸಾಧನೆಯ ಮೇಲೆ ಸಂಸ್ಕೃತಿ, ಸಂಪ್ರದಾಯ ಮತ್ತು ಆದರ್ಶ ವ್ಯಕ್ತಿಗಳು ಪ್ರಭಾವ ಬೀರುತ್ತಾರೆ. 

ದೇಶದ ಜನಸಂಖ್ಯೆಯಲ್ಲಿ ಶೇ 2ಕ್ಕಿಂತ ಕಡಿಮೆ ಪ್ರಮಾಣ ಹೊಂದಿರುವ ಹರಿಯಾಣ ರಾಜ್ಯವು, ಭಾರತವು ಇದುವರೆಗೆ ಗೆದ್ದಿರುವ ಒಲಿಂಪಿಕ್ಸ್ ಪದಕಗಳಲ್ಲಿ ಹೆಚ್ಚಿನ ಪಾಲು ಹೊಂದಿದೆ. 30 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರುವ, ರಾಜಕೀಯ ಅವ್ಯವಸ್ಥೆಯ, ದಿಕ್ಕೆಟ್ಟ ಆಡಳಿತದ ಪುಟ್ಟ ಮಣಿಪುರ ರಾಜ್ಯವು ಹಾಕಿ, ಬಾಕ್ಸಿಂಗ್‌, ಮಹಿಳಾ ವೇಟ್‌ಲಿಫ್ಟ್‌ ಮತ್ತು ಆರ್ಚರಿಯಲ್ಲಿ ಜಾಗತಿಕ ಮಟ್ಟದಲ್ಲಿ ಮಿಂಚುತ್ತಿದೆ.

ಹರಿಯಾಣಕ್ಕಿಂತ ಮೂರು ಪಟ್ಟು ಹೆಚ್ಚು ಜನಸಂಖ್ಯೆ ಹೊಂದಿರುವ, ಮಣಿಪುರಕ್ಕಿಂತ 20 ಪಟ್ಟು ದೊಡ್ಡದಾದ ಗುಜರಾತ್‌ ರಾಜ್ಯವು, ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸುವ ಒಬ್ಬನೇ ಒಬ್ಬ ಕ್ರೀಡಾಪಟುವಿನ ಕೊಡುಗೆ ನೀಡಲು ಈಗಲೂ ಹೆಣಗಾಡುತ್ತಿದೆ.

ರಿಯೊದಲ್ಲಿ ನಮ್ಮ ಕ್ರೀಡಾಪಟುಗಳು ಪದಕ ಗೆದ್ದು ಬರಲಿ ಎಂದು ಪ್ರಾರ್ಥಿಸೋಣ. ಆದರೆ ನಮ್ಮ ಆಸೆ ಈಡೇರದಿದ್ದರೆ ಎಲ್ಲವನ್ನೂ ಕಳೆದುಕೊಂಡಂತೇನೂ ಭಾವಿಸಬೇಕಾಗಿಲ್ಲ. ರಿಯೊ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ 100ಕ್ಕೂ ಹೆಚ್ಚು ಮಂದಿ ಭಾಗವಹಿಸಿರುವುದೇ ಭರವಸೆ ಮೂಡಿಸುವ ಬೆಳವಣಿಗೆಯಾಗಿದೆ. ಏಷ್ಯಾಡ್‌ ಕ್ರೀಡಾಕೂಟದಲ್ಲಿ 11 ಚಿನ್ನದ ಪದಕ ಸೇರಿದಂತೆ 57 ಪದಕಗಳನ್ನು ಭಾರತವು ಗೆದ್ದುಕೊಂಡಿತ್ತು.

ಏಷ್ಯಾಡ್‌ನಲ್ಲಿ ನಾಲ್ಕನೇ ಸ್ಥಾನಕ್ಕೆ ತಲುಪುವುದು ನಮ್ಮ ಮುಂದಿನ ಗುರಿಯಾಗಿರಬೇಕು.  ಉತ್ತರ ಕೊರಿಯಾ, ಥಾಯ್ಲೆಂಡ್‌, ಕಜಕಸ್ತಾನ್‌, ಇರಾನ್‌ಗಳನ್ನೂ ಹಿಂದೆ ಹಾಕಬೇಕಾಗಿದೆ. ಇದೇ ಭಾರತದ ಮುಂದಿರುವ ಹೆಚ್ಚು ವಾಸ್ತವಿಕ ಮತ್ತು ಮಹತ್ವಾಕಾಂಕ್ಷೆಯ ಗುರಿಯಾಗಿರಬೇಕಾಗಿದೆ.
(ಲೇಖಕ ಮೀಡಿಯಾಸ್ಕೇಪ್ ಪ್ರೈ.ಲಿ. ಸಂಸ್ಥಾಪಕ ಸಂಪಾದಕ ಹಾಗೂ ಅಧ್ಯಕ್ಷ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT