ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡಿಮೆ ಬೆಲೆಯ ಇನ್ನೊಂದು ಫೋನ್

Last Updated 15 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಟೆಕ್ನೊ ಮೊಬೈಲ್ ಮೂಲತಃ ಹಾಂಗ್‌ಕಾಂಗ್‌ ಕಂಪನಿ. ತನ್ನ ಫೋನ್‌ಗಳನ್ನು ಚೀನಾ ದೇಶದಲ್ಲಿ ತಯಾರಿಸುತ್ತಿದೆ. ಈ ಕಂಪನಿ 2006ರಲ್ಲಿ ಭಾರತವನ್ನು ಪ್ರವೇಶಿಸಿದೆ. ಐ3, ಐ3 ಪ್ರೊ, ಐ5, ಐ5 ಪ್ರೊ ಮತ್ತು ಐ7 ಎಂಬ ಮಾದರಿಯ ಫೋನ್‌ಗಳನ್ನು ಏಪ್ರಿಲ್ ತಿಂಗಳಿನಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಭಾರತದಲ್ಲಿ ಬಹುತೇಕ ಮಂದಿ 15 ಸಾವಿರಕ್ಕಿಂತ ಕಡಿಮೆ ಬೆಲೆಯ ಫೋನ್‌ಗಳನ್ನು ಕೊಳ್ಳಲು ಇಚ್ಛಿಸುತ್ತಾರೆ. ಅದರಂತೆ ಈ ಕಂಪನಿಯು ಈ ಮಾರುಕಟ್ಟೆಯ ಮೇಲೆ ಕಣ್ಣಿಟ್ಟು ಫೋನ್‌ಗಳನ್ನು ತಯಾರಿಸಿದೆ. ಈ ವಾರ ನಾವು ವಿಮರ್ಶೆ ಮಾಡುತ್ತಿರುವುದು ಟೆಕ್ನೊ ಐ3 (Tecno I3) ಫೋನನ್ನು.

ಇದೊಂದು ಕಡಿಮೆ ಬೆಲೆಯ ಫೋನ್. ಅಂತೆಯೇ ನಾವು ವಿಮರ್ಶೆ ಮಾಡುವಾಗ ಈ ಅಂಶವನ್ನು ಗಮನದಲ್ಲಿಟ್ಟುಕೊಳ್ಳಬೇಕು. ಪ್ಲಾಸ್ಟಿಕ್ಕಿನ ದೇಹವಿದೆ. ಬಲಗಡೆ ಆನ್/ಆಫ್ ಮತ್ತು ವಾಲ್ಯೂಮ್ ಬಟನ್‌ಗಳಿವೆ. ಎಡಗಡೆ ಸಿಮ್ ಮತ್ತು ಮೆಮೊರಿ ಕಾರ್ಡ್ ಹಾಕುವ ಟ್ರೇ ಇದೆ. ಮೇಲ್ಗಡೆ 3.5 ಮಿ.ಮೀ. ಇಯರ್‌ಫೋನ್ ಕಿಂಡಿ ಮತ್ತು ಕೆಳಗಡೆ ಮೈಕ್ರೊಯುಎಸ್‌ಬಿ ಕಿಂಡಿಗಳಿವೆ.

ಹಿಂಭಾಗದಲ್ಲಿ ಮೂಲೆಯಲ್ಲಿ ಕ್ಯಾಮೆರಾ ಮತ್ತು ಅದರ ಕೆಳಗಡೆ ಫ್ಲಾಶ್ ಇದೆ. ಹಿಂಭಾಗದ ಕವಚ ತೆಗೆಯಲಸಾಧ್ಯ. ಅಂದರೆ ಬ್ಯಾಟರಿಯನ್ನು ನಾವೇ ಬದಲಿಸುವಂತಿಲ್ಲ. ಹಿಂಭಾಗದ ಕವಚ ಬದಿಗಳಲ್ಲಿ ವಕ್ರವಾಗಿದೆ. ತುಂಬ ನಯವೂ ಅಲ್ಲ, ದೊರಗೂ ಅಲ್ಲದ ಕವಚ. ಕೈಯಲ್ಲಿ ಹಿಡಿದಾಗ ಕಡಿಮೆ ಬೆಲೆಯ ಫೋನ್ ಎಂದು ತಕ್ಷಣ ವೇದ್ಯವಾಗುತ್ತದೆ. ರಚನೆ ಮತ್ತು ವಿನ್ಯಾಸದಲ್ಲಿ ಹೇಳಿಕೊಳ್ಳುವಂಥದ್ದೇನಿಲ್ಲ. ನೀಡುವ ಹಣಕ್ಕೆ ತಕ್ಕಂತಿದೆ.

ಇದು ಕಡಿಮೆ ಬೆಲೆಯ ಫೋನ್. ಇದರಲ್ಲಿರುವುದು ಮೇಲ್ದರ್ಜೆಯ ಪ್ರೊಸೆಸರ್ ಅಲ್ಲ. ಇದರ ಅಂಟುಟು ಬೆಂಚ್‌ಮಾರ್ಕ್ ಕೇವಲ 29,483 ಇದೆ. ಅಂದರೆ ಇದು ಅತಿ ಕಡಿಮೆ ವೇಗದಲ್ಲಿ ಕೆಲಸ ಮಾಡುವ ಫೋನ್ ಎನ್ನಬಹುದು. ಸಾಮಾನ್ಯ ಮಟ್ಟದ ಆಟಗಳನ್ನು ಆಡುವಾಗಲೂ ಇದು ಕಡಿಮೆ ವೇಗದ ಫೋನ್ ಎನ್ನುವುದು ಗಮನಕ್ಕೆ ಬರುತ್ತದೆ. ತುಂಬ ಶಕ್ತಿಯನ್ನು ಬೇಡುವ ಆಟಗಳನ್ನು ಆಡುವುದಕ್ಕಂತು ಇದು ತಕ್ಕ ಫೋನ್ ಅಲ್ಲವೇ ಅಲ್ಲ. ಹಲವು ಕೆಲಸಗಳನ್ನು ಏಕಕಾಲಕ್ಕೆ ಮಾಡಲೂ ಇದು ತಕ್ಕದ್ದಲ್ಲ.

ಕ್ಯಾಮೆರಾ, ಹೆಸರಿಗೆ 8 ಮೆಗಾಪಿಕ್ಸೆಲ್ ಇದೆ. ಆದರೆ ಗುಣಮಟ್ಟ ತೃಪ್ತಿದಾಯಕವಾಗಿಲ್ಲ. ತುಂಬ ಬೆಳಕಿದ್ದಲ್ಲಿ ತೆಗೆದ ಫೋಟೊ ಪರವಾಗಿಲ್ಲ ಎನ್ನಬಹುದು. ಆದರೆ ಹಿನ್ನೆಲೆಯಲ್ಲಿ ಹಸಿರಿದ್ದು ಕೆಂಪು ವಸ್ತುವಿನ ಫೋಟೊ ತೆಗೆಯುವಾಗ, ಉದಾಹರಣೆಗೆ, ಕೆಂಪು ಗುಲಾಬಿಯ ಫೋಟೊ ತೆಗೆಯುವಾಗ, ಸರಿಯಾಗಿ ಫೋಕಸ್ ಆಗುವುದಿಲ್ಲ. ಇನ್ನೂ ಹಲವು ಸಂದರ್ಭಗಳಲ್ಲಿ ಸರಿಯಾಗಿ ಫೋಕಸ್ ಮಾಡಲು ಒದ್ದಾಡುವುದು ನನ್ನ ಅನುಭವಕ್ಕೆ ಬಂತು. ಕಡಿಮೆ ಬೆಳಕಿನಲ್ಲಂತೂ ಉತ್ತಮ ಫೋಟೊ ಬರುವುದಿಲ್ಲ. ವಿಡಿಯೊ ಚಿತ್ರೀಕರಣವೂ ಚೆನ್ನಾಗಿಲ್ಲ. ಈ ಬೆಲೆಗೆ ಇನ್ನೆಷ್ಟು ಸಾಧ್ಯ ಹೇಳಿ?

ಇದರ ಪರದೆ ಪರವಾಗಿಲ್ಲ. ವಿಡಿಯೊ ನೋಡುವ ಅನುಭವ ಒಂದು ಮಟ್ಟಿಗೆ ತೃಪ್ತಿದಾಯಕವಾಗಿದೆ. ಹೈಡೆಫಿನಿಶನ್ ವಿಡಿಯೊ ಪ್ಲೇ ಆಗುತ್ತದೆ. ಆದರೆ 4k ವಿಡಿಯೊ ಪ್ಲೇ ಆಗುವುದಿಲ್ಲ. ಇದರ ಆಡಿಯೊ ಇಂಜಿನ್ ಪರವಾಗಿಲ್ಲ. ಆದರೆ ಅವರು ನೀಡಿರುವ ಇಯರ್‌ಫೋನ್ ಮಾತ್ರ ಚೆನ್ನಾಗಿಲ್ಲ. ನಿಮ್ಮಲ್ಲಿ ಯಾವುದಾದರೂ ಉತ್ತಮ ಇಯರ್‌ಫೋನ್ ಇದ್ದಲ್ಲಿ ಅದನ್ನು ಜೋಡಿಸಿದರೆ ಒಂದು ಮಟ್ಟಿಗೆ ತೃಪ್ತಿದಾಯಕವಾಗುವಂತಹ ಸಂಗೀತ ಆಲಿಸಬಹುದು.

ಭಾರತೀಯ ಭಾಷೆಗಳಿಗೆ ಬೆಂಬಲವಿದೆ. ಕನ್ನಡವೂ ಇದೆ. ಕನ್ನಡ ಭಾಷೆಯ ತೋರುವಿಕೆ ಸರಿಯಾಗಿದೆ. ಆದರೆ ಯೂಸರ್ ಇಂಟರ್‌ಫೇಸ್ ಕನ್ನಡ ಎಂದು ಆಯ್ಕೆ ಮಾಡಿದಾಗ ಫೋನ್ ನಿಧಾನವಾಗಿ ಕೆಲಸ ಮಾಡಲು ಪ್ರಾರಂಭಿಸಿತು. ಇದು ಯಾಕೆ ಎಂದು ಗೊತ್ತಾಗಲಿಲ್ಲ.

3050mAh ಶಕ್ತಿಯ ಬ್ಯಾಟರಿ ಇದೆ. ಸುಮಾರು ಎರಡು ಗಂಟೆಗಳಲ್ಲಿ ಪೂರ್ತಿ ಚಾರ್ಜ್ ಆಗುತ್ತದೆ. ಇಷ್ಟು ಶಕ್ತಿಯ ಬ್ಯಾಟರಿ ಇರುವುದು ಬಳಕೆಯಲ್ಲಿ ಅನುಭವಕ್ಕೆ ಬರುತ್ತಿಲ್ಲ. ಸ್ವಲ್ಪ ಬೇಗನೆ ಬ್ಯಾಟರಿ ಖಾಲಿಯಾಗುತ್ತದೆ. ಒಟ್ಟಿನಲ್ಲಿ ಹೇಳುವುದಾದರೆ ನೀಡುವ ಹಣಕ್ಕೆ ಅಲ್ಲಿಂದಲ್ಲಿಗೆ ತೃಪ್ತಿ ನೀಡಬಹುದಾದ ಫೋನ್.

*


ವಾರದ ಆ್ಯಪ್‌(app): ಕರ್ನಾಟಕ ಪಠ್ಯ ಪುಸ್ತಕಗಳು
ಕರ್ನಾಟಕ ಸರ್ಕಾರವು ಒಂದನೆಯ ತರಗತಿಯಿಂದ ಹಿಡಿದು ಹತ್ತನೆಯ ತರಗತಿಯ ತನಕ ಎಲ್ಲ ವಿಷಯಗಳ ಪಠ್ಯ ಪುಸ್ತಕಗಳನ್ನು ತಯಾರಿಸಿ ವಿತರಿಸುತ್ತಿದೆ. ಬಹುತೇಕ ಶಾಲೆಗಳಿಗೆ ಈ ಪಠ್ಯಪುಸ್ತಕಗಳು ಸಮಯಕ್ಕೆ ಸರಿಯಾಗಿ ತಲುಪುತ್ತಿಲ್ಲ ಎಂಬುದನ್ನು ನಾವು ಪ್ರತಿ ವರ್ಷ ಪತ್ರಿಕೆಗಳಲ್ಲಿ ಓದುತ್ತಿದ್ದೇವೆ. ಈ ಸಮಸ್ಯೆಗೆ ಪರಿಹಾರವಾಗಿ ಸರ್ಕಾರವು ಪಠ್ಯ ಪುಸ್ತಕಗಳನ್ನು ಜಾಲತಾಣದಲ್ಲಿ ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಲು ನೀಡಿದೆ (www.ktbs.kar.nic.in/New/index.html#!/).

ಪಠ್ಯಪುಸ್ತಕಗಳನ್ನು ನಿಮ್ಮ ಆ್ಯಂಡ್ರಾಯ್ಡ್ ಫೋನಿಗೆ ಡೌನ್‌ಲೋಡ್ ಮಾಡಿಕೊಳ್ಳಲು ಕಿರುತಂತ್ರಾಂಶ (ಆ್ಯಪ್) ಕೂಡ ಇದೆ. ಅದು ಬೇಕಿದ್ದಲ್ಲಿ ನೀವು ಗೂಗಲ್ ಪ್ಲೇ ಸ್ಟೋರಿನಲ್ಲಿ Karnataka Textbooks 1st to 10th Std ಎಂದು ಹುಡುಕಬೇಕು ಅಥವಾ http://bit.ly/gadgetloka303 ಜಾಲತಾಣಕ್ಕೆ ಭೇಟಿ ನೀಡಬೇಕು. ಪುಸ್ತಕಗಳನ್ನು ನೀವು ಪಿಡಿಎಫ್ ಫೈಲ್ ಆಗಿ ಇಳಿಸಿಕೊಳ್ಳಬಹುದು. ಅವುಗಳನ್ನು ಓದಲು ನಿಮ್ಮ ಫೋನಿನಲ್ಲಿ ಯಾವುದಾದರು ಪಿಡಿಎಫ್ ರೀಡರ್ ಇರುವುದು ಅಗತ್ಯ.

*


ಗ್ಯಾಜೆಟ್‌ ಸುದ್ದಿ: ಸ್ಮಾರ್ಟ್‌ಫೋನ್ ನಿಯಂತ್ರಿತ ಕಾಗದದ ವಿಮಾನ
ಕಾಗದದ ವಿಮಾನ ಹಾರಿಸಿ ಗೊತ್ತಿದೆ ತಾನೆ? ಈ ಕಾಗದದ ವಿಮಾನಕ್ಕೆ ಎಂಜಿನ್ ಜೋಡಿಸಿದರೆ ಹೇಗೆ? ಕೇವಲ ಎಂಜಿನ್ ಜೋಡಿಸಿದರೆ ಸಾಲದು. ಅದನ್ನು ದೂರದಿಂದ ನಿಯಂತ್ರಿಸಲೂಬೇಕು. ಹೌದು. ಈಗ ಅದೆಲ್ಲ ಸಾಧ್ಯವಾಗುತ್ತಿದೆ. ಕಾಗದವನ್ನು ಮಡಚಿ ವಿಮಾನ ಮಾಡಿ ಅದಕ್ಕೆ ಎಂಜಿನ್ ಜೋಡಿಸಿದರೆ ಮುಗಿಯಿತು. ನಿಮ್ಮ ವಿಮಾನ ಸಿದ್ಧ. ನಂತರ ಈ ವಿಮಾನವನ್ನು ನಿಯಂತ್ರಿಸುವ ಕಿರುತಂತ್ರಾಂಶವನ್ನು ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ಹಾಕಿಕೊಂಡು ಅದರ ಮೂಲಕ ವಿಮಾನದ ಹಾರಾಟವನ್ನು ನಿಯಂತ್ರಿಸಬಹುದು. ಈ ಎಂಜಿನ್ ಸ್ಮಾರ್ಟ್‌ಫೋನಿಗೆ ನಿಸ್ತಂತು (ವಯರ್‌ಲೆಸ್) ವಿಧಾನದಲ್ಲಿ ಸಂಪರ್ಕಗೊಳ್ಳುತ್ತದೆ. ಈ ವಿಮಾನ ಇನ್ನೂ ಮಾರುಕಟ್ಟೆಗೆ ಬಂದಿಲ್ಲ.

*
ಗ್ಯಾಜೆಟ್‌ ಸಲಹೆ: ಶ್ರೀನಾಥ ಡೋಂಗ್ರೆಯವರ ಪ್ರಶ್ನೆ: ಗ್ಯಾಜೆಟ್ ಲೋಕದ ನಿಮ್ಮ ಪ್ರತಿ ವಾರದ ಎಲ್ಲಾ ಬರಹಗಳನ್ನು ಎಲ್ಲಿ ಓದಬಹುದು?
ಉ:
ಈ ಪ್ರಶ್ನೆಗೆ ಹಲವು ಸಲ ಉತ್ತರಿಸಿದ್ದೇನೆ. http://bitly.com/gadgetloka ಜಾಲತಾಣಕ್ಕೆ ಭೇಟಿ ನೀಡಿ.

*
ಗ್ಯಾಜೆಟ್‌ ತರ್ಲೆ: ಕಾಲೇಜಿನಲ್ಲಿ ಅಥವಾ ಆಫೀಸಿನಲ್ಲಿ ಹುಡುಗಿಗೆ ಪ್ರೇಮಪತ್ರವನ್ನು ಕಾಗದದ ವಿಮಾನ ಮಾಡಿ ಹಾರಿಸಿ ಅದು ಇನ್ನೊಬ್ಬರ ಮೇಲೆ ಬಿದ್ದಿತ್ತಾ? ಈಗ ಆ ಸಮಸ್ಯೆಯಿಲ್ಲ. ಮೇಲೆ ತಿಳಿಸಿದ ಸ್ಮಾರ್ಟ್‌ಫೋನ್ ನಿಯಂತ್ರಿತ ಕಾಗದದ ವಿಮಾನದ ಮೂಲಕ ಪ್ರೇಮಪತ್ರ ರವಾನಿಸಿ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT