ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡು ಭ್ರಷ್ಟರ ನಡುವೆ ಕೆಲವು ಕಣ್ಮಣಿಗಳು

Last Updated 23 ಜುಲೈ 2017, 19:30 IST
ಅಕ್ಷರ ಗಾತ್ರ

ರಾಜಕಾರಣವನ್ನು ಸಂಪತ್ತು ಕೂಡಿ ಹಾಕುವ ಏಣಿಯನ್ನಾಗಿ ಬಳಸಿದ ನಾಯಕರು ದೇಶದ ಎಲ್ಲ ರಾಜಕೀಯ ಪಕ್ಷಗಳಲ್ಲೂ ಇದ್ದಾರೆ. ಅಂತಹವರ ಸಂಖ್ಯೆ  ಒಂದರಲ್ಲಿ ಹೆಚ್ಚಿರಬಹುದು, ಮತ್ತೊಂದರಲ್ಲಿ ಕಡಿಮೆ ಇದ್ದೀತು. ಕಳ್ಳ ದಾರಿಗಳಿಂದ ದೇಶವನ್ನು ದೋಚಿದ ಸಂಪತ್ತನ್ನು ಉಳಿಸಿಕೊಳ್ಳಲು ರಾಜಕಾರಣವನ್ನು ರಕ್ಷಣೆಯ ಗುರಾಣಿಯಂತೆ ಬಳಸಿಕೊಂಡವರೂ ಬಹು ಮಂದಿ ಉಂಟು. ಅಂತಹವರನ್ನು ಹೆಸರು ಹೇಳದೆಯೇ ಜನ ಗುರುತಿಸಬಲ್ಲರು. ಬಡವರನ್ನು ಹುರಿದು ತಿನ್ನುವ ದಟ್ಟ ದಾರಿದ್ರ್ಯದ ನಟ್ಟ ನಡುವೆಯೂ ವಿಲಾಸ- ವೈಭೋಗಗಳಲ್ಲಿ ಮುಳುಗೇಳಬಲ್ಲವರು ಇವರು. ಆತ್ಮಸಾಕ್ಷಿ ಎಂಬುದನ್ನು ಎಂದೋ ಕೊಂದುಕೊಂಡವರು.

ಆ ಪಕ್ಷ ಅಧಿಕಾರದಲ್ಲಿದ್ದಾಗ ಈ ಪಕ್ಷದ ಸಿರಿವಂತರ ಮೇಲೆ ತೆರಿಗೆ-ಸಿಬಿಐ ದಾಳಿಗಳು ನಡೆಯುತ್ತವೆ. ಈ ಪಕ್ಷ ಅಧಿಕಾರದಲ್ಲಿದ್ದಾಗ ಆ ಪಕ್ಷದವರ ಮೇಲೆ. ಒಂದು ವೇಳೆ ಆ ಪಕ್ಷದ ಆತ ಈ ಪಕ್ಷದ ಈತನ ಜೊತೆ ಒಳ ಒಪ್ಪಂದ ಮಾಡಿಕೊಂಡನೆಂದರೆ ಇಂತಹ ದಾಳಿಗಳನ್ನೂ ತಪ್ಪಿಸಿಕೊಳ್ಳಬಹುದು. ಇಂತಹ ಹೊಲಬುಗೆಟ್ಟ ರಾಜಕಾರಣದ ಇತಿಹಾಸ ಇಂದು ನೆನ್ನೆಯದಲ್ಲ.

ಇಂತಹವರ ಸಂಖ್ಯೆ ಏರುಮುಖವೇ ವಿನಾ ಇಳಿಮುಖ ಅಲ್ಲ. ಅವರೊಬ್ಬರಿದ್ದರು ಮುಖ್ಯಮಂತ್ರಿ. ಹತ್ತು ವರ್ಷಗಳ ಕಾಲ ಅವರ ಸರ್ಕಾರಿ ನಿವಾಸ ಅವರ   ಪಕ್ಷದ ಸಹವಾಸಿಗಳಿಗೂ ಆಶ್ರಯ ನೀಡಿತ್ತು. ಸರಳತೆಯಲ್ಲಿ ನಂಬಿಕೆ ಇರಿಸಿದ ಸರ್ಕಾರಿ ಅಧಿಕಾರಿಗಳೂ ಅಲ್ಲಿಯೇ ವಾಸವಿದ್ದರು. ಬ್ರಹ್ಮಚಾರಿ ಆಗಿದ್ದ ಮುಖ್ಯಮಂತ್ರಿಗೆ ಬಂಧು ಬಳಗ ಇರಲಿಲ್ಲ. ಅವರು ಮಲಗುವ ಕೊಠಡಿಯಲ್ಲಿ ಏರ್ ಕಂಡೀಷನರ್ ಇರಲಿಲ್ಲ. ತಮ್ಮ ಬಟ್ಟೆಗಳನ್ನು ತಾವೇ ಒಗೆದುಕೊಳ್ಳುತ್ತಿದ್ದರು. ಒಂದು ಬಟ್ಟಲು ಮಂಡಕ್ಕಿ ಮತ್ತು ಚಹಾದಲ್ಲಿ ಅವರ ಬೆಳಗಿನ ಉಪಾಹಾರ ಮುಗಿದು ಹೋಗುತ್ತಿತ್ತು. ಅತಿಥಿಗಳು ಬಂದರೆ ಅವರಿಗೂ ಅದೇ ತಿಂಡಿ.

ಚಹಾವೊಂದೇ ಅವರ ಅಚ್ಚುಮೆಚ್ಚಿನ ಪೇಯ. ಮೂರು ಚಮಚೆಯ ಧಾರಾಳ ಸಕ್ಕರೆ ಅವರ ದೌರ್ಬಲ್ಯ. ಇಷ್ಟೊಂದು ಸಕ್ಕರೆ ಯಾಕೆ ಬೆರೆಸಿಕೊಳ್ತೀರಿ ಎಂದು  ಕೇಳಿದರೆ ‘ದಿನವಿಡೀ ಕೆಲಸ ಮಾಡಲು Stamina ಸಿಗೋದು ಈ ಸಕ್ಕರೆಯಿಂದ್ಲೇ’ ಎಂಬ ಉತ್ತರ ಸಿದ್ಧವಿರುತ್ತಿತ್ತು. 1988ರ ಚುನಾವಣೆಗಳಲ್ಲಿ ಅವರಿಗೆ ಪುನಃ ಜನಾದೇಶ ದೊರೆಯಲಿಲ್ಲ. ಮುಖ್ಯಮಂತ್ರಿಯ ಅಧಿಕೃತ ನಿವಾಸವನ್ನು ಖಾಲಿ ಮಾಡಿದರು. ಅವರು ಹೊರಸಾಗಿಸಿದ ಸಾಮಾನೆಂದರೆ ದಪ್ಪ ತಗಡಿನಿಂದ ಮಾಡಿದ ಆ ಕಾಲದ ಒಂದು ಹಳೆಯ ಟ್ರಂಕು. ಹತ್ತು ವರ್ಷದ ಹಿಂದೆ ಮುಖ್ಯಮಂತ್ರಿಯಾಗಿ ತಂದಿದ್ದ ಟ್ರಂಕು ಅದು. ಟ್ರಂಕು ಮತ್ತು ಮಾಜಿ ಮುಖ್ಯಮಂತ್ರಿ ಇಬ್ಬರೂ ಹೊರಬಿದ್ದದ್ದು ಸರಳ ಸೈಕಲ್ ರಿಕ್ಷಾದಲ್ಲಿ. ನೇರವಾಗಿ ಹೊರಟದ್ದು ಶಾಸಕರ ಭವನದ ಕೊಠಡಿಗೆ. ಜನಸಾಮಾನ್ಯರಿಗೆ ಸೂರು ಅರಿವೆ ಅನ್ನದ ಬದುಕು ಕಟ್ಟಿಕೊಡಲು ನಿಜ ಅರ್ಥದಲ್ಲಿ ಬದುಕು ಸವೆಸಿದ ಅವರ ಹೆಸರು ನೃಪೇನ್ ಚಕ್ರವರ್ತಿ.

ತ್ರಿಪುರಾ ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್.ಆರ್.ಶಂಕರನ್ ಕೂಡ ಮುಖ್ಯಮಂತ್ರಿಯಂತೆಯೇ ಸರಳ ಜೀವಿ. ಒಮ್ಮೆ ತ್ರಿಪುರಾಕ್ಕೆ ಭೇಟಿ ನೀಡಿದ್ದ ಕೇಂದ್ರ ಕಾರ್ಮಿಕ ಮಂತ್ರಿ ರಘುನಾಥ ರೆಡ್ಡಿಯವರನ್ನು ಬೆಳಗಿನ ಉಪಾಹಾರಕ್ಕೆ ಕರೆದಿದ್ದರು ಚಕ್ರವರ್ತಿ. ಶಂಕರನ್ ಅವರಿಗೂ ಆಹ್ವಾನವಿತ್ತು. ರೆಡ್ಡಿ ಕೂಡ ಸರಳ ಬದುಕಿಗೆ ಹೆಸರಾಗಿದ್ದವರು. ತಲಾ ಎರಡು ಗುಲಾಬ್ ಜಾಮೂನುಗಳ ನಂತರ ಚಹಾ ಬಂದಿತ್ತು. ಮುಖ್ಯ ತಿಂಡಿಗಾಗಿ ಕಾದು ಕುಳಿತಿದ್ದರು ರೆಡ್ಡಿ.  ಉಪಾಹಾರ ಮುಗಿಯಿತೆಂದು ಮೆಲುಮಾತಿನ ತೆಲುಗಿನಲ್ಲಿ ಹೇಳಿದ್ದರು ಶಂಕರನ್. ಕಮ್ಯುನಿಸ್ಟರು ಮಿತವ್ಯಯಿಗಳು ಹೌದು, ಆದರೆ ಅವರು ಹೊಟ್ಟೆ ತುಂಬಾ ತಿನ್ನುವುದನ್ನು ಕಲಿಯಬೇಕು ಎಂದು ರೆಡ್ಡಿ ಆನಂತರ ಹಲವರ ಮುಂದೆ ಹೇಳಿದ್ದುಂಟು.

ಶಂಕರನ್ ಅವಧಿ ಮುಗಿದಿತ್ತು. ವಿದಾಯ ಭೋಜನಕ್ಕೆ ಅವರನ್ನು ಕರೆದಿದ್ದರು ಮುಖ್ಯಮಂತ್ರಿ. ಭೋಜನದಲ್ಲಿ ಅವರಿಬ್ಬರೇ, ಮರದ ಮೇಜಿನ ಮುಂದೆ ಎರಡು ಮರದ ಕುರ್ಚಿಗಳು. ಅನ್ನದ ಜೊತೆಗೆ ಬಡಿಸಿದ್ದೊಂದೇ ಪಲ್ಯ. ಕಲೆಸಿದ ಅನ್ನವನ್ನು ಬಾಯಿಗಿಟ್ಟ ಶಂಕರನ್ ಮುಖ ಕಿವಿಚಿದ್ದರು. ‘ನೀವು ಬಡಜನರಿಗೆ ರೇಷನ್ ಅಂಗಡಿಗಳ ಮೂಲಕ ವಿತರಿಸಿದ ಅದೇ ಅಕ್ಕಿಯ ಅನ್ನವಿದು’ ಎಂದಿದ್ದ ಚಕ್ರವರ್ತಿ ಅವರ ಉತ್ತರಾಧಿಕಾರಿ ಮಾಣಿಕ್ ಸರ್ಕಾರ್ ಕಳೆದ 18 ವರ್ಷಗಳಿಂದ ಸತತವಾಗಿ ತ್ರಿಪುರಾದ ಮುಖ್ಯಮಂತ್ರಿ. ಬಡ ದರ್ಜಿಯೊಬ್ಬರ ಮಗ. ತಮ್ಮ ಬಟ್ಟೆಗಳನ್ನು ತಾವೇ ಒಗೆದುಕೊಳ್ಳುವವರು.

ನೃಪೇನ್ ಚಕ್ರವರ್ತಿ ಅವರಂತೆಯೇ ಸರಳ ಬದುಕು. ಹುಟ್ಟಿದ ಹಳ್ಳಿಯಲ್ಲೊಂದು ಮನೆ ಮತ್ತು ಬ್ಯಾಂಕಿನಲ್ಲಿ ಹತ್ತು ಸಾವಿರ ರೂಪಾಯಿ ಅಷ್ಟೇ ಅವರ ಆಸ್ತಿಪಾಸ್ತಿ.  ಸ್ಥಿರ ಮತ್ತು ಚರಾಸ್ತಿಗಳ ಒಟ್ಟು ಮೌಲ್ಯ ಎರಡೂವರೆ ಲಕ್ಷ ರೂಪಾಯಿಗೂ ಕಡಿಮೆ. ಕೇಂದ್ರ ಸರ್ಕಾರದ ಅಧಿಕಾರಿಯಾಗಿದ್ದು ನಿವೃತ್ತರಾಗಿರುವ ಪತ್ನಿಯ ಫಿಕ್ಸೆಡ್ ಡೆಪಾಸಿಟ್ ಖಾತೆಯಲ್ಲಿ ₹ 23,58,380. ಇಪ್ಪತ್ತು ಗ್ರಾಂ ಬಂಗಾರ.

ಪಕ್ಷದ ನಿಯಮದಂತೆ ತಮ್ಮ ಸಂಬಳವನ್ನು ಇಡಿಯಾಗಿ ಪಕ್ಷದ ಖಾತೆಗೆ ವರ್ಗಾಯಿಸುತ್ತಾರೆ. ಪ್ರತಿಯಾಗಿ ಪಕ್ಷ ಮಾಣಿಕ್ ಸರ್ಕಾರ್ ಅವರಿಗೆ ನೀಡುವ ತಿಂಗಳ ವೆಚ್ಚ ಐದಾರು ಸಾವಿರ ರೂಪಾಯಿ. ಸರ್ಕಾರಿ ಸೇವೆಯಿಂದ ನಿವೃತ್ತಿ ಪಡೆದಿರುವ ಪತ್ನಿಯ ಪಿಂಚಣಿ ಸೇರಿದರೆ ಖರ್ಚು ವೆಚ್ಚಕ್ಕೆ ಸಾಕು ಬೇಕಾದಷ್ಟು. ಮಕ್ಕಳಿಲ್ಲ. ಕಾರಿನ ಮೇಲೆ ಕೆಂಪು ದೀಪ ಹಿಂದೆಯೂ ಇರಲಿಲ್ಲ, ಈಗಲೂ ಇಲ್ಲ. ದಿನಕ್ಕೆ ಒಂದು ಪುಟ್ಟ ಡಬ್ಬಿ ಭರ್ತಿ ನಶ್ಯಪುಡಿ, ಒಂದೇ ಒಂದು ಸಿಗರೇಟು ಅವರ ದುಶ್ಚಟದ ಖರ್ಚು ವೆಚ್ಚ. ರೈಲು ಪ್ರಯಾಣಕ್ಕೆ ಹಿಂಜರಿಯುವುದಿಲ್ಲ.

ಇವರಂತೆಯೇ ಉನ್ನತ ಪದವಿಯಲ್ಲಿದ್ದೂ ಸರಳವಾಗಿ ಬದುಕಿದ ಮತ್ತೊಬ್ಬ ಮನುಷ್ಯ ಜೋಸ್ ಮುಜೀಕ. ವಯಸ್ಸು ಎಂಬತ್ತೆರಡು. 2010-15ರ ನಡುವೆ ಲ್ಯಾಟಿನ್ ಅಮೆರಿಕೆಯ ಉರುಗ್ವೆ ದೇಶದ ಅಧ್ಯಕ್ಷರಾಗಿದ್ದರು. ಆ ಭೂಭಾಗದ ಅತಿ ಸುರಕ್ಷಿತ ಮತ್ತು ಅತಿ ಕನಿಷ್ಠ ಭ್ರಷ್ಟ ದೇಶ ಉರುಗ್ವೆ. ಜೀವನಾವಶ್ಯಕ ವಸ್ತುಗಳ ದರವನ್ನು ಸರ್ಕಾರವೇ ನಿಗದಿ ಮಾಡುತ್ತದೆ. ಉಚಿತ ಶಿಕ್ಷಣ, ಮುಫತ್ತು ಕಂಪ್ಯೂಟರುಗಳು. ಬೆವರು ಸುರಿಸುವ ಶ್ರಮಜೀವಿ ವರ್ಗದ ತಾತನಂತೆ ತೋರುವ ಮುಜೀಕ ಖುದ್ದು ಮೃಷ್ಟಾನ್ನ ಮೆದ್ದು, ಸುಪ್ಪತ್ತಿಗೆಯಲ್ಲಿ ಮಲಗಿ ಸರಳ ಬದುಕಿನ ಪೊಳ್ಳು ಪಾಠ ಹೇಳುವ ಆಷಾಢಭೂತಿ ಅಲ್ಲ.

ಉರುಗ್ವೆ ದೇಶದ ಅಧ್ಯಕ್ಷರಿಗೆಂದೇ ಕಟ್ಟಲಾಗಿರುವ ವಿಲಾಸಿ ವಸತಿಯನ್ನು ಒಲ್ಲೆ ಎಂದಿದ್ದರು ಮುಜೀಕ. ಒಂದು ಕೋಣೆಯ ಪುಟ್ಟ ಸಾದಾ ತೋಟದ ಮನೆಯಲ್ಲಿ ಅವರ ವಾಸ. ಆ ಮನೆ ಕೂಡ ಪತ್ನಿಗೆ ಸೇರಿದ್ದು. ಅಧಿಕಾರದ ಪದವಿಯ ಜೊತೆಗೇ ದಕ್ಕುವ ವಿಲಾಸಿ ಲಿಮೋಸಿನ್ ಕಾರನ್ನು ತೊರೆದು ಹಳೆಯ ಪುಟಾಣಿ Volkswagen Beetle ಕಾರನ್ನು ತಾವೇ ಡ್ರೈವ್ ಮಾಡಿಕೊಂಡು ಓಡಾಡುತ್ತಾರೆ. ಚಾಲಕನ ಹಂಗಿಲ್ಲ. ವಿಮಾನ ಏರಿದರೆ ಎಕಾನಮಿ ದರ್ಜೆಯಲ್ಲೇ ಪಯಣ. ಸಾಧಾರಣ ಉಡುಪು, ಸವೆದ ಚಪ್ಪಲಿ, ಪೊದೆ ಹುಬ್ಬುಗಳ ಉರುಟು ಮೈಯ ದಡೂತಿ ತಾತ. ಈತನನ್ನು ಬಹುವಾಗಿ ಬಾಧಿಸಿರುವ ಸಂಕಟ ಮನುಷ್ಯ ಮನುಷ್ಯನ ನಡುವಣ ಅಸಮಾನತೆ.

ಇವರ ಪತ್ನಿ ಲೂಸಿಯಾ ಟೊಪೋಲಾನ್ಸ್ಕಿ ಕಾಂಗ್ರೆಸ್ಸಿನ ಹಿರಿಯ ಸದಸ್ಯೆ. ಉರುಗ್ವೆಯ ಹಂಗಾಮಿ ಅಧ್ಯಕ್ಷೆಯಾಗಿದ್ದವರು. ಇಬ್ಬರೂ ಹಂಚಿಕೊಂಡಿರುವುದು ಪತ್ನಿ ಒಡೆತನದ  ಅದೇ ಒಂದು ಕೋಣೆಯ ಪುಟ್ಟ ಮನೆ. ರಾಜಧಾನಿ ಮಾಂಟೆವೀಡೋದ ಹೊರವಲಯದ ಈ ಮನೆಗೆ  ಹೋಗಬೇಕಿದ್ದರೆ ಕೆಸರು ರಸ್ತೆ ಹಾಯಬೇಕು. ಮನೆಯ ಸುತ್ತಮುತ್ತ ಕಳೆ ಬೆಳೆದ  ಚೆಂಡು ಹೂಗಳ ಮತ್ತು ತರಕಾರಿ ತೋಟ.

ಪತಿ – ಪತ್ನಿ ಇಬ್ಬರೂ ತೋಟದಲ್ಲಿ ಮೈದಣಿಸಿ ಹೂವು, ತರಕಾರಿ ಬೆಳೆಯುತ್ತಾರೆ.  ರಾಷ್ಟ್ರಾಧ್ಯಕ್ಷರ ಬಂಗಲೆಗೆ ಇರಬೇಕಾದ ಯಾವುದೇ ಭದ್ರತೆ ಈತನ ಪುಟ್ಟಮನೆಗೆ ಇಲ್ಲ. ಮುಖ್ಯ ರಸ್ತೆಯಿಂದ ಈತನ ಮನೆಯತ್ತ ಕವಲೊಡೆಯುವ ರಸ್ತೆಯ ತುದಿಯಲ್ಲಿ  ಇಬ್ಬರು ಭಟರನ್ನು ಬಿಟ್ಟರೆ ಮೂರು ಕಾಲಿನ ಕುಂಟ ನಾಯಿ ಮನುವೇಲನೇ ಮೂರನೆಯ ಸೆಕ್ಯೂರಿಟಿ ಗಾರ್ಡು. ಮುಜೀಕ ಅವರ ದೀರ್ಘ ಕಾಲದ ಸಂಗಾತಿ ಮನುವೇಲ.

ಸಂಬಳದ ತೊಂಬತ್ತು ಭಾಗವನ್ನು ಸಾಮಾಜಿಕ ಯೋಜನೆಗಳಿಗೆ ದೇಣಿಗೆಯಾಗಿ ನೀಡುವ ಇವರನ್ನು ಜಗತ್ತಿನ ಅತಿ ನಿರ್ಗತಿಕ ರಾಷ್ಟ್ರಾಧ್ಯಕ್ಷ ಎಂದು ಕರೆಯಲಾಗುತ್ತಿತ್ತು.  ಕೈಗೆ ಉಳಿಯುತ್ತಿದ್ದ ಸಂಬಳ 1,200 ಡಾಲರುಗಳು. ಉರುಗ್ವೆಯ ನಾಗರಿಕನ ಸರಾಸರಿ ಮಾಸಿಕ ಆದಾಯಕ್ಕೆ ಸಮನಾದ ಮೊತ್ತವಿದು. 2010ರಲ್ಲಿ ಈತ ಘೋಷಿಸಿದ ತನ್ನ ಆಸ್ತಿಪಾಸ್ತಿಯ ಮೊತ್ತ 1,800 ಡಾಲರುಗಳು. ಅದು ಕೂಡ 1987ರ ಮಾಡೆಲಿನ ತನ್ನ ಕಾರು Volkswagen Beetleನ ಬೆಲೆ.

ತಮ್ಮನ್ನು ನಿರ್ಗತಿಕ ಎಂದು ಕರೆಯುವವರು ಖುದ್ದು ನಿರ್ಗತಿಕರು. ಕಂಡದ್ದೆಲ್ಲ ಬೇಕು ಎಂದು ಅತಿಯಾಗಿ ಕೂಡಿ ಇಟ್ಟುಕೊಳ್ಳುವ ನಿಜ ದರಿದ್ರರು. ಕಂಡದ್ದೆಲ್ಲ ಬೇಕೆಂದು ಖರೀದಿ ಮಾಡುವ ನಿರಂತರ ಅತೃಪ್ತ ಆತ್ಮಗಳು ಎನ್ನುತ್ತಾರೆ ಮುಜೀಕ. ಅವರ ನಡೆ ನುಡಿಗಳು ದೇಶ ವಿದೇಶಗಳ ಜನರ ಪ್ರೀತಿ ಗೌರವಗಳನ್ನು ಗೆದ್ದಿವೆ.

1960-70ರ ದಶಕಗಳಲ್ಲಿ ಟುಪಾಮೋರೋಸ್ ಕ್ರಾಂತಿಕಾರಿ ಪಡೆಯಲ್ಲಿ ಸಕ್ರಿಯರಾಗಿದ್ದರು ಮುಜೀಕ. Robin Hood guerrillas ಎಂದು ಕರೆಯಲಾಗುತ್ತಿದ್ದ ಈ ಪಡೆ ಬ್ಯಾಂಕುಗಳು ಮತ್ತು ಸರಕುಗಳನ್ನು ಸಾಗಿಸುವ ಲಾರಿಗಳನ್ನು ಲೂಟಿ ಮಾಡಿ ಆಹಾರವಸ್ತುಗಳು ಮತ್ತು ಹಣವನ್ನು ಬಡವರಿಗೆ ಹಂಚುತ್ತಿತ್ತು. ದಸ್ತಗಿರಿಯಾಗುವ ಮುಜೀಕ, ಎರಡು ಬಾರಿ ಜೈಲಿನಿಂದ ಸುರಂಗ ಕೊರೆದು ಪರಾರಿಯಾಗುತ್ತಾರೆ.

ಗುಂಡೇಟುಗಳನ್ನು ತಿನ್ನುತ್ತಾರೆ. ಬಾವಿಯ ತಳದಲ್ಲಿ ಎರಡು ವರ್ಷಗಳ ಏಕಾಂತ ಸೆರೆವಾಸದ ಶಿಕ್ಷೆ. ಹುಚ್ಚು ಹಿಡಿಯದೆ ಇರಲು ಕಪ್ಪೆಗಳು ಮತ್ತಿತರೆ ಜಂತುಗಳ ಜೊತೆ ಮಾತಾಡುತ್ತ ಕಾಲ ಸವೆಸುತ್ತಾರೆ. ಉರುಗ್ವೆಗೆ ಸಾಂವಿಧಾನಿಕ ಜನತಂತ್ರ ಮರಳಿದ್ದು 1985ರಲ್ಲಿ. ಆಗ ಕ್ಷಮಾದಾನ ಪಡೆದು ಜೈಲಿನಿಂದ ಬಿಡುಗಡೆ ಆಗುವ ಮುಜೀಕ 25 ವರ್ಷಗಳ ನಂತರ  ರಾಷ್ಟ್ರಾಧ್ಯಕ್ಷ ಆಗುತ್ತಾರೆ.

ದುಂದುಗಾರಿಕೆ ಮತ್ತು ಉಡಾಫೆಯ ಜೀವನಶೈಲಿಯನ್ನು ಹಂಗಿಸಿ ಆತ ವಿಶ್ವಸಂಸ್ಥೆಯ ಮಹಾ ಅಧಿವೇಶನದಲ್ಲಿ ಮಾಡಿದ್ದ ಭಾಷಣ ಜಾಗತಿಕ ಗಮನ ಸೆಳೆದಿತ್ತು.

ಹಳೆಯಪಳೆಯ ದೇವರುಗಳನ್ನು ಬಿಟ್ಟುಕೊಟ್ಟಿರುವ ನಾವು ಇದೀಗ ಮಾರುಕಟ್ಟೆ ದೇವತೆಯ ಮಂದಿರದಲ್ಲಿ ಶರಣು ಹೇಳಿ ಕುಳಿತಿದ್ದೇವೆ. ನಮ್ಮ ಅರ್ಥವ್ಯವಸ್ಥೆ, ನಮ್ಮ ರಾಜಕಾರಣ, ನಮ್ಮ ಹವ್ಯಾಸಗಳು, ನಮ್ಮ ಬದುಕುಗಳ ಸಂಘಟಿಸುವವನು ಮಾರುಕಟ್ಟೆಯ ಭಗವಂತನೇ.  ಕ್ರೆಡಿಟ್ ಕಾರ್ಡುಗಳ ದಾತ ಅವನು. ನಮಗೆಲ್ಲ  ನಲಿವು ನೆಮ್ಮದಿಗಳ ತೋರಿಕೆಯ ಚಹರೆಯನ್ನು ಏರ್ಪಾಟು ಮಾಡವವನೂ ಅವನೇ.

ಬಳಸಲು, ಬಳಸಲು ಮತ್ತು ಕೇವಲ ಬಳಸಲೆಂದೇ ನಾವು ಜನಿಸಿದ್ದೇವೆಂದು ತೋರುತ್ತದೆ. ಇನ್ನು ಬಳಸಲು ಸಾಧ್ಯವಿಲ್ಲ ಎಂಬ ಪರಿಸ್ಥಿತಿ ಒದಗಿದರೆ ಹತಾಶೆ ನಮ್ಮನ್ನು ಆವರಿಸಿಕೊಳ್ಳುತ್ತದೆ, ‘ಬಡತನ’ದಿಂದ ಬಳಲತೊಡಗುತ್ತೇವೆ. ನಮ್ಮನ್ನು ನಾವೇ ಅಂಚಿಗೆ ತಳ್ಳಿಕೊಳ್ಳುತ್ತೇವೆ ಎಂಬ ಮುಜೀಕ ಅವರ ಮಾತುಗಳು ಸಮಕಾಲೀನ ಸಂದರ್ಭಕ್ಕೆ ಅತ್ಯಂತ ಪ್ರಸ್ತುತ.

2010ರಲ್ಲಿ ಅಧಿಕಾರ ವಹಿಸಿಕೊಂಡ ಮುಜೀಕ ಅವರ ಆಡಳಿತ, ಬಂಡವಾಳವನ್ನು ಆರಾಧಿಸುವ  ಪಶ್ಚಿಮ ಜಗತ್ತಿನ ಮನ ಗೆದ್ದಿತ್ತು. ಪಾದ ಕಾಣಿಸುವ ಸಾಧಾರಣ ಚಪ್ಪಲಿಗಳನ್ನು ಮೆಟ್ಟಿದ ಈ ಮಾಜಿ ಮಾರ್ಕ್ಸ್‌ವಾದಿಯನ್ನು The Economistನಂತಹ ಪ್ರಸಿದ್ಧ ಅರ್ಥಶಾಸ್ತ್ರೀಯ ನಿಯತಕಾಲಿಕ ಕೊಂಡಾಡಿದೆ. ಉರುಗ್ವೆಯನ್ನು ‘ವರ್ಷದ ದೇಶ’ ಎಂದು ಹೆಸರಿಸಿತ್ತು.

ಬಳಕೆಬಾಕತನವನ್ನು ಬದಿಗಿಟ್ಟು ಅಗತ್ಯವಿದ್ದಷ್ಟನ್ನು ಮಾತ್ರವೇ ಬಳಕೆ ಮಾಡುವುದೇ ಆದಲ್ಲಿ ಜಗತ್ತಿನ ಸಮಸ್ತ ಜನ ತಿಂದು ಉಂಡು ಸುಖವಾಗಿ ಬದುಕಬಹುದಾದಷ್ಟು ಸಂಪನ್ಮೂಲ ಇದ್ದೇ ಇದೆ. ಜಾಗತಿಕ ರಾಜಕಾರಣ ಚಲಿಸಬೇಕಾದದ್ದು ಈ ದಿಸೆಯಲ್ಲೇ ವಿನಾ ದಿನಬೆಳಗಾಗುವುದರಲ್ಲಿ ಇದ್ದದ್ದನ್ನೆಲ್ಲ ತಿಂದು ತೇಗಿ ಖಾಲಿ ಮಾಡುವುದರ ಅತಿಭೋಗದತ್ತ ಅಲ್ಲ.

ಮುಂದುವರೆದ ದೇಶಗಳ ಸಿರಿವಂತ ಸಮಾಜಗಳು ಬದುಕುವ ಅಂಧಾದುಂಧಿಯ ಶೈಲಿಯನ್ನು ಎಲ್ಲ ದೇಶಗಳೂ ಅನುಕರಿಸಿದರೆ ಭೂಮಿ ಉಳಿದೀತೇ? ನಾವು ಬೇರೆ ಬೇರೆ ದೇಶಗಳಾಗಿ, ಭಿನ್ನ ಜನಾಂಗಗಳಾಗಿ ಆಲೋಚಿಸುತ್ತೇವೆಯೇ ವಿನಾ ಮನುಕುಲವೆಲ್ಲ ಒಂದು ಎಂದು ಅಲ್ಲ. ಈ ಆಲೋಚನಾ ವಿಧಾನದಲ್ಲೇ ದೋಷವಿದೆ ಎಂಬುದು ಮುಜೀಕ ಅವರ ನಿಚ್ಚಳ ನಂಬಿಕೆ. ಕ್ರಾಂತಿಯ ಅರ್ಥ ಗುಂಡು ಹಾರಿಸುವುದು, ರಕ್ತ ಹರಿಸುವುದಲ್ಲ. ನಿಮ್ಮ ಆಲೋಚನಾ ವಿಧಾನವನ್ನು ಬದಲಾಯಿಸಿಕೊಂಡರೆ ಅದು ಕೂಡ ಕ್ರಾಂತಿಯೇ ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT