ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕತ್ತೆಯ ಕೊರಳಿನ ಹರಳು

Last Updated 23 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಅವನೊಬ್ಬ ಬಡವ. ಅವನು ದಿನಾಲು ಕಾಡಿಗೆ ಹೋಗಿ ಕಟ್ಟಿಗೆ ಕಡಿದುಕೊಂಡು ಊರಿಗೆ ಬಂದು, ಅದನ್ನು ಮಾರಿ ಜೀವನ ಸಾಗಿಸುತ್ತಿದ್ದ. ಏನು ಮಾಡಿದರೂ ಬಡತನ ಹಿಂಗದು. ಅವನ ಕಾರ್ಯದಲ್ಲಿ ಸಹಕಾರಿಯಾಗಿದ್ದುದು ಅವನ ಕತ್ತೆ. ಹತ್ತು ವರ್ಷದಿಂದ ಕಟ್ಟಿಗೆ ಹೊತ್ತು ಹೊತ್ತು ಸಣ್ಣದಾಗಿತ್ತು.

ಚಳಿಗಾಲದ ಒಂದು ದಿನ ಸಂಜೆ ಹೀಗೆ ಕಟ್ಟಿಗೆಯನ್ನು ಕತ್ತೆಯ ಮೇಲೆ ಹೊರಿಸಿ ಕಾಡಿನಿಂದ ಬರುತ್ತಿದ್ದಾಗ ರಸ್ತೆಯ ಮಧ್ಯದಲ್ಲಿ ಹೊಳೆಹೊಳೆಯುವ ಕಲ್ಲೊಂದು ಅವನ ಗಮನ ಸೆಳೆಯಿತು. ಅದೊಂದು ಗಾಜಿನ ಚೂರು ಇರಬೇಕೆಂದುಕೊಂಡು ಎತ್ತಿಕೊಂಡ.

ಆ ಕಲ್ಲಿನ ಮಧ್ಯದಲ್ಲೊಂದು ಸಣ್ಣ ತೂತಿತ್ತು. ಚೆನ್ನಾಗಿದೆ ನೋಡುವುದಕ್ಕೆ ಎಂದುಕೊಂಡು ಆ ತೂತಿನಲ್ಲಿ ದಾರ ಪೋಣಿಸಿ ಅದನ್ನು ತನ್ನ ಕತ್ತೆಯ ಕೊರಳಿನಲ್ಲಿ ಹಾರದಂತೆ ಹಾಕಿದ. ಪಾಪ! ಇದುವರೆಗೂ ಕತ್ತೆಗೆ ತಾನು ಏನೂ ಮಾಡಲಿಲ್ಲ, ಹೀಗಾದರೂ ಒಂದು ಮರ್ಯಾದೆ ಇರಲಿ ಎಂದು ಸಮಾಧಾನ ಪಟ್ಟುಕೊಂಡ.

ಮುಂದೆ ನಡೆಯುತ್ತಿರುವಾಗ ಎದುರಿಗೆ ಒಬ್ಬ ವರ್ತಕ ಬಂದ. ಅವನು ಕತ್ತೆಯ ಕೊರಳಲ್ಲಿ ನೇತಾಡುತ್ತಿದ್ದ ಹೊಳೆಯುವ ಹರಳು ನೋಡಿದ. ಅವನ ತರಬೇತಾದ ಕಣ್ಣುಗಳಿಗೆ ಅದು ಒಂದು ವಜ್ರವೆಂದು ತಕ್ಷಣ ಹೊಳಿಯಿತು.
 
ಬಹುಶಃ ಈ ಬಡವನಿಗೆ ಅದು ವಜ್ರವೆಂದು ತಿಳಿದಿಲ್ಲ, ಅದಕ್ಕೇ ಕತ್ತೆಯ ಕೊರಳಲ್ಲಿ ಕಟ್ಟಿದ್ದಾನೆ ಎಂದು ಗೊತ್ತಾಗಿ ಅದನ್ನು ಲಪಟಾಯಿಸಲು ಹೊಂಚು ಹಾಕಿದ.  `ಏನಪ್ಪಾ, ಕತ್ತೆಯ ಕೊರಳಲ್ಲಿ ಯಾಕೆ ಈ ಸಿಂಗಾರ? ನನಗೆ ಈ ಕಲ್ಲು ಕೊಡುತ್ತೀಯಾ?

ಎಷ್ಟು ಕೊಡಬೇಕು ಹೇಳು~ ಎಂದು ಕೇಳಿದ. ಬಡವನಿಗೆ ಆಶ್ಚರ್ಯವಾಯಿತು. ಈ ಕಲ್ಲನ್ನು ಯಾಕೆ ಕೊಂಡುಕೊಳ್ಳುತ್ತಾನೆ ಈತ ಎಂದು ಚಿಂತಿಸಿ `ನೂರು ರೂಪಾಯಿ ಕೊಟ್ಟರೆ ಕೊಟ್ಟೇನು~ ಎಂದ.

ವ್ಯಾಪಾರಿಗೆ ದುರಾಸೆ. ಹೇಗಿದ್ದರೂ ಮೂರ್ಖನಿಗೆ ವಜ್ರದ ಬೆಲೆ ಗೊತ್ತಿಲ್ಲ. ಲಕ್ಷಾಂತರ ರೂಪಾಯಿ ಬೆಲೆ ಬಾಳುವ ವಜ್ರವನ್ನು ನೂರು ರೂಪಾಯಿಗೆ ಕೊಡಲು ಸಿದ್ಧನಿದ್ದಾನೆ. ಅವನು ಕೇಳಿದಷ್ಟೇ ಕೊಟ್ಟರೆ ಸಂಶಯ ಬಂದೀತು, ಇನ್ನಷ್ಟು ಚೌಕಾಸಿಮಾಡೋಣವೆಂದು, `ಇಲ್ಲಪ್ಪ, ನೂರು ರೂಪಾಯಿ ಹೆಚ್ಚಾಯಿತು, ಐವತ್ತು ರೂಪಾಯಿ ಕೊಡುತ್ತೇನೆ.

ಏನು ಹೇಳುತ್ತೀ?~ ಎಂದು ಕೇಳಿದ. ಬಡವನಿಗೆ ಗೊತ್ತಾಯಿತು, ಈ ಕಲ್ಲಿನ ಬೆಲೆ ಐವತ್ತಕ್ಕಿಂತ ಹೆಚ್ಚಾಗಿದೆ. ಇಲ್ಲದಿದ್ದರೆ ಬುದ್ಧಿವಂತ ವ್ಯಾಪಾರಿ ಕಲ್ಲಿಗೆ ಇಷ್ಟೇಕೆ ಬೆಲೆಕೊಡುತ್ತಿದ್ದ? ಗೋಣು ಅಲ್ಲಾಡಿಸಿ ಹೇಳಿದ, `ಬೇಡ ಬಿಡಿ ಸ್ವಾಮಿ. ನನ್ನ ಕತ್ತೆಯ ಕೊರಳಲ್ಲಿ ಚೆನ್ನಾಗಿ ಕಾಣುತ್ತದೆ. ಹಾಗೆಯೇ ಇರಲಿ.~  ರೈತ ಗಮನಿಸಿದ, ಕೊಡುವುದಿಲ್ಲವೆಂದರೂ ವ್ಯಾಪಾರಿ ಹಿಂದೆಯೇ ಬರುತ್ತಿದ್ದಾನೆ.

ಆಗ ದಾರಿಯಲ್ಲಿ ಮತ್ತೊಬ್ಬ ವ್ಯಾಪಾರಿ ಬಂದ. ಅವನೂ ಹರಳು ನೋಡಿದ ಅವನಿಗೂ ಆದರ ಬೆಲೆ ಅರ್ಥವಾಯಿತು. ಹಿಂದೆಯೇ ಬರುತ್ತಿದ್ದ ವ್ಯಾಪಾರಿಯನ್ನು ಕಂಡ. ಇವನೂ ಈ ಹರಳಿನ ಹಿಂದೆಯೇ ಬಿದ್ದಿದ್ದಾನೆ ಎಂದು ತಿಳಿಯಿತು.

ತಾನೇ ಬಡವನನ್ನು ಕೇಳಿದ, `ಏನಪ್ಪಾ, ನಿನಗೆ ಸಾವಿರ ರೂಪಾಯಿ ಕೊಡುತ್ತೇನೆ, ಕಲ್ಲು ಕೊಡುತ್ತೀಯಾ?~ ಇವನಿನ್ನೂ ಪ್ರಶ್ನೆಯನ್ನು ಮುಗಿಸಿರಲಿಲ್ಲ, ಆಗ ಹಿಂದೆ ಬರುತ್ತಿದ್ದ ವ್ಯಾಪಾರಿ ಥಟ್ಟನೇ ಹಾರಿ ಬಂದ. `ನೀನು ಬರೀ ಸಾವಿರ ರೂಪಾಯಿ ಕೊಟ್ಟು ಹರಳು ಹೊಡೆಯಬೇಕೆಂದು ಮಾಡಿದ್ದೀಯಾ?
 
ನಾನು ಐದು ಸಾವಿರ ಕೊಡುತ್ತೇನೆ~ ಎಂದು ಅರಚಿದ. ಇನ್ನೊಬ್ಬ ಬಿಟ್ಟಾನೆಯೇ, `ಏನಯ್ಯೊ ಐದು ಸಾವಿರಕೊಟ್ಟು ಈ ಮುಗ್ಧನಿಗೆ ಟೋಪಿ ಹಾಕಲು ನೋಡುತ್ತೀಯಾ? ನಾನು ಹತ್ತು ಸಾವಿರ ರೂಪಾಯಿ ಕೊಡುತ್ತೇನೆ.~ ಇಬ್ಬರ ನಡುವೆ ಪೈಪೋಟಿ ನಡೆಯಿತು.

ಕಟ್ಟಿಗೆ ಮಾರುವ ಬಡವ ನಕ್ಕು. ತನ್ನ ಕತ್ತೆಗೆ, ಸ್ನೇಹಿತ, `ನಮ್ಮಿಬ್ಬರ ಬಡತನ ಕೊನೆಗೂ ನೀಗಿತು. ನಿನ್ನ ಕೊರಳಲ್ಲಿ ಇರುವುದು ವಜ್ರವೆಂದು ತಿಳಿಯಿತು. ನಾವು ವಜ್ರದ ವ್ಯಾಪಾರಿಗೆ ಇದನ್ನು ಮಾರಿ ಮುಂದೆ ಸುಖವಾಗಿರೋಣ.
 
ನೀನಿನ್ನು ಕೆಲಸ ಮಾಡುವುದು ಬೇಡ. ಈ ಮೂರ್ಖರು ಹೊಡೆದಾಡುತ್ತ ಇರಲಿ~ ಎಂದು ಹೇಳಿ ನಡೆದ. ಮುಂದೆ ಸಂತೋಷವಾಗಿ ಬದುಕಿದ.

ಮಾಸ್ತಿ ಹೇಳುತ್ತಿದ್ದರು :  ಪ್ರತಿಯೊಬ್ಬರ ಮನೆಯಲ್ಲೂ ಒಂದು ಕಪಾಟಿದೆ. ಅದರೊಳಗೆ ನೂರು ಕೋಟಿ ರೂಪಾಯಿ ನಗದು ಇದೆ. ಆದರೆ ನಾವು ಮನೆ ಮನೆಗೆ ಹೋಗಿ ಹತ್ತು ರೂಪಾಯಿ ಕೊಡಿ ಎಂದು ಬೇಡುತ್ತೇವೆ.

ಯಾಕೆ ಗೊತ್ತೇ? ನಮಗೆ ಕಪಾಟಿನ ಕೀಲಿಕೈ ನಮ್ಮ ಜೇಬಿನಲ್ಲೇ ಇದೆ ಎಂಬುದು ತಿಳಿದಿಲ್ಲ. ಅದನ್ನು ಹುಡುಕಿ ಹೊರ ತೆಗೆದರೆ ನಮ್ಮ ಜೀವನವೇ ಬದಲಾಗಿ ಹೋಗುತ್ತದೆ .
ನಿಜ, ನಮ್ಮಳಗಿರುವ ಅಸಾಮಾನ್ಯ ಶಕ್ತಿಯನ್ನು ತಿಳಿಯದೇ ನಾವು ಬರೀ ಕಲ್ಲೆಂದುಕೊಳ್ಳುತ್ತೇವೆ.

ಅದು ವಜ್ರವೆಂದು ಒಂದು ಬಾರಿ ತಿಳಿದರೆ ಸಾಕು ನಮಗೇ ಆಶ್ಚರ್ಯವಾಗುವಂತೆ ಜೀವನ ಅದ್ಭುತವಾಗಿ ತೆರೆದುಕೊಳ್ಳುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT