ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಕಮೂರ್ತಿಯವರ ಕಲ್ ತರಂಗ್ ಪ್ರಯೋಗ

Last Updated 21 ಜುಲೈ 2013, 19:59 IST
ಅಕ್ಷರ ಗಾತ್ರ

ಲ್ಲಿನಿಂದ ವಾದ್ಯ ತಯಾರಿಸಲು ಸಾಧ್ಯವೇ? ಕಲ್ಲಿನ ವಾದ್ಯದಲ್ಲಿ ಸಂಗೀತ ನುಡಿಸಬಹುದೆ? ಇಂಥ ಪ್ರಶ್ನೆಗಳನ್ನು ಕೇಳಿಕೊಂಡು ಶಿಲ್ಪಕಲಾವಿದೆ ಕನಕ ಮೂರ್ತಿಯವರು ಎರಡು ವರ್ಷದಿಂದ ಒಂದು ಪ್ರಯೋಗದಲ್ಲಿ ತೊಡಗಿದ್ದಾರೆ. ಹಿತ್ತಾಳೆ, ಚರ್ಮದಂತೆ ಕಲ್ಲು ಸ್ವರ ಹೊಮ್ಮಿಸುವುದಿಲ್ಲ. ಆದರೂ ಶಿಲ್ಪಿಗಳು ಹಠ ಬಿಡದೆ ಕಲ್ಲಿನಲ್ಲಿ ಅಡಗಿರುವ ನಾದವನ್ನು ಅರಸಿ ಹೊರಟ್ಟಿದ್ದಾರೆ.

ಹಂಪಿಯ ಗುಡಿಯೊಂದರ ಕಂಬಗಳು ಸಂಗೀತದ ಸ್ವರಗಳನ್ನು ಹೊಮ್ಮಿಸುತ್ತವೆ. ಅದೇ ಸೂತ್ರವನ್ನು ಆಧರಿಸಿ ವಾದ್ಯದ ರೀತಿ ಏನಾದರೂ ಮಾಡಬಹುದೇ ಎಂದು ಕನಕ ಚಿಂತಿಸುತ್ತಿದ್ದಾರೆ. ಕನಕ ಅವರು ವಾಸವಿರುವುದು ಲಿಂಗರಾಜಪುರಂನಲ್ಲಿ. ಇಲ್ಲಿ ತಮಿಳರು, ಮಲಯಾಳಿಗಳು ಹೆಚ್ಚಾಗಿದ್ದರೆ. ಈ ಪ್ರದೇಶದಲ್ಲಿ ನಾನು ಕಂಡ ಆಶ್ಚರ್ಯ: ಸಂಜೆ ಬೀದಿಯಲ್ಲಿ ಇಡಿಯಪ್ಪಂ (ಅಂದರೆ ಒತ್ತು ಶಾವಿಗೆ)  ಮಾರಿಕೊಂಡು ಹೋಗುತ್ತಾರೆ.

ಮಲಯಾಳಿಗಳಿಗೆ ಪ್ರಿಯವಾದ ತಿಂಡಿ ಇದು. ಕನಕ ಅವರು ಬಹಳ ವರ್ಷ ಬಸವನಗುಡಿಯ ಒಂದು ದೊಡ್ಡ ಮನೆಯಲ್ಲಿ ಇದ್ದರು. ಅವರ ಮನೆಗೆ ಗಂಗೂಬಾಯಿ ಹಾನಗಲ್, ಲಾಲ್ಗುಡಿ ಜಯರಾಮನ್ ಮೊದಲ್ಗೊಂಡು ಕಲಾವಿದರು ಬರುತ್ತಿದ್ದರು.

ಕನಕ ಅವರ ಅಭಿರುಚಿ ಕ್ಲಾಸ್ಸಿಸಿಸ್ಟ್ ಅನ್ನಬಹುದು. ಅವರ ಹೊಸ ಪ್ರಯೋಗವನ್ನು ಸಂಗೀತಗಾರರಿಗೆ, ಪುರಾತತ್ವಶಾಸ್ತ್ರಜ್ಞರಿಗೆ ತೋರಿಸಲು ಮೊನ್ನೆ ಒಂದು ಪುಟ್ಟ ಸಭೆ ಕರೆದಿದ್ದರು. ಇಬ್ಬರು ಖ್ಯಾತ ಸಂಗೀತಗಾರರು ಕನಕ ಅವರು ಕಡೆದಿರುವ ವಾದ್ಯವನ್ನು ಹತ್ತಿರದಿಂದ ನೋಡಿ ತಮ್ಮ ಸಲಹೆಗಳನ್ನು ಕೊಟ್ಟರು.

ತಬಲಾ ವಾದಕ ರವಿಂದ್ರ ಯಾವಗಲ್ ಮತ್ತು ಹಾರ್ಮೋನಿಯಂ ವಾದಕ ವ್ಯಾಸಮುರ್ತಿ ಕಟ್ಟಿಯವರು ಸ್ವರಸ್ಥಾನಗಳನ್ನು ಪರೀಕ್ಷಿಸಿದರು. ಕಲಾ ತಜ್ಞರಾದ ಡಾ. ಚಿರಂಜೀವಿ ಸಿಂಗ್ ಅವರು ಇದಕ್ಕೆ ಒಂದು ಹೆಸರು ಕೊಟ್ಟರು: ಕಲ್ ತರಂಗ್. ಪಿಂಗಾಣಿ ಬಟ್ಟಲುಗಳಲ್ಲಿ ನೀರು ಹಾಕಿ ನುಡಿಸುವ ವಾದ್ಯ ಜಲ ತರಂಗ್. ಅದೇ ರೀತಿ ಕಲ್ಲನ್ನು ಬಳಸಿ ಮಾಡಿದ ವಾದ್ಯಕ್ಕೆ ಕಲ್ ತರಂಗ್ ಎಂದು ಹೆಸರಿಡಬಹುದು ಎಂದು ಸಿಂಗ್ ಹೇಳಿದರು.
 
ಕನಕ ಅವರು ಮಾಡಿರುವುದು ವಾದ್ಯವೋ ಕಲಾಕೃತಿಯೋ ಎಂದು ಒಂದು ಚರ್ಚೆ ಶುರುವಾಯಿತು. ವಾದ್ಯವಾದರೆ ಅದನ್ನು ನುಡಿಸಬಹುದೇ? ಅವರ ಕೃತಿ ನುಡಿಸುವ ವಾದ್ಯವಾಗಿ ಮೂಡಿಬಂದಿಲ್ಲ. ಈಗ ಅದು ಪ್ರೊಟೋಟೈಪ್ (ಮೂಲ ಮಾದರಿ) ರೀತಿಯಲ್ಲಿದೆ. ಸ್ವರಸ್ಥಾನಗಳು ಸ್ಥಿರವಾಗಿಲ್ಲ. ಒಂದೇ ಕಂಬದ ಬೇರೆ ಬೇರೆ ಎಡೆಯಲ್ಲಿ ಬೇರೆ ಬೇರೆ ಸ್ವರ ನುಡಿಯುತ್ತಿದೆ. ಇದನ್ನೆಲ್ಲಾ ಸುಧಾರಿಸಿ ಇನ್ನೊಂದು ಶಿಲ್ಪ ವಾದ್ಯವನ್ನು ಮಾಡಲು ಕನಕ ನಿರ್ಧರಿಸಿದ್ದಾರೆ.

ಶಿಲ್ಪಕಲೆಯಲ್ಲಿ ಮಹಿಳೆಯರ ಸಂಖ್ಯೆ ಕಡಿಮೆ. ಕಲ್ಲು ಕಡೆದು ಶಿಲ್ಪ ನಿರ್ಮಿಸಿವುದು ಕಲೆಯ ಕೆಲಸದಂತೆಯೇ ಶ್ರಮದ ಕೆಲಸ ಕೂಡ. ಇದು ಹೆಂಗಸರಿಗೆ ಒಗ್ಗಿ ಬಾರದ ಕಸುಬು ಎಂದು ಒಂದು ನಂಬಿಕೆ ಇದೆ. ಇಂಥ ಮಿತಿಗಳನ್ನು ಮೀರಿ ಹೆಸರಾಗಿರುವ ಶಿಲ್ಪಿ ಕನಕ. ಸಹಾಯಕರೊಂದಿಗೆ ತಾವೂ ಉಳಿ ಹಿಡಿದು ಕಷ್ಟ ಪಡುತ್ತಾರೆ.

ಸಾಂಪ್ರದಾಯಿಕ ಶಿಲ್ಪದಲ್ಲಿ ಪಳಗಿದ ಕನಕ ತಮ್ಮ ಕಸುಬನ್ನು ಕಲಿತದ್ದು ಖ್ಯಾತ ಶಿಲ್ಪಿ ವಾದಿರಾಜ್ ಅವರಿಂದ. ದೇವಸ್ಥಾನದಲ್ಲಿ ಪ್ರತಿಷ್ಠಾಪನೆಯಾಗುವ ಮೂರ್ತಿಗಳನ್ನು ಸಾಮಾನ್ಯವಾಗಿ ಗಂಡಸರು ನಿರ್ಮಿಸಿರುತ್ತಾರೆ. ಆದೂ ಒಂದು ಅರ್ಥವಿಲ್ಲದ ಕಟ್ಟುಪಾಡು ಎಂದು ಕನಕ ಸಾಬೀತು ಪಡಿಸಿದ್ದಾರೆ. ಅವರ ಗಣೇಶ ವಿಗ್ರಹ ಬೆಂಗಳೂರಿನ ಒಂದು ದೇವಸ್ಥಾನದಲ್ಲಿ ಪೂಜೆಯಾಗುತ್ತಿದೆ. ಅವರಿಗೆ ಹೆಮ್ಮೆ ತಂದ ಕುವೆಂಪು ವಿಗ್ರಹ ಲಾಲ್ ಬಾಗ್‌ನ ಪಶ್ಚಿಮ ದ್ವಾರದ ಎದುರು ನೀವು ನೋಡಿರಬಹುದು.  

ಕನಕ ಅವರ ಕಲಾವಂತಿಕೆ ಇರುವುದು ಸಾಂಪ್ರದಾಯಿಕ ಶಿಲ್ಪದಲ್ಲಿ. ಈಗ ಮಾಡ ಹೊರಟಿರುವ ಕೃತಿ ಅವರ ಸಾಂಪ್ರದಾಯಿಕ ಕೌಶಲವನ್ನು ಅಷ್ಟಾಗಿ ಬಳಸಿಕೊಳ್ಳುತ್ತಿಲ್ಲ. ಕಲ್ಲಿನಲ್ಲಿ ಅಡಗಿರುವ ಭೌತಶಾಸ್ತ್ರ, ಸಂಗೀತಶಾಸ್ತ್ರದತ್ತ ಅವರ ಗಮನ ಹೊರಳಿದೆ. ರಾಗ ಸಂಗೀತ ನುಡಿಸಬಲ್ಲ ವಾದ್ಯವನ್ನು ಕಲ್ಲಿನಲ್ಲಿ ತಯಾರಿಸುವುದು ಕಷ್ಟಸಾಧ್ಯ ಅನ್ನುವುದಕ್ಕಿಂತ ಅಸಾಧ್ಯ ಎನ್ನುವುದೇ ಸರಿಯೇನೋ.

ಆಲಂಕಾರಿಕವಾಗಿ ಏನಾದರೂ ಮಾಡಬಹುದೇ ಹೊರತು ವೈಬ್ರಫೋನ್ ಥರದ ವಾದ್ಯ ಕಲ್ಲಿನಲ್ಲಿ ಮೂಡಿಸುವ ದಿನ ಇನ್ನೂ ತುಂಬ ದೂರವಿದೆ. ನನಗನ್ನಿಸಿದ್ದನ್ನು ಕನಕ ಅವರಿಗೆ ಹೇಳಿದೆ: “ನಿಮ್ಮ ಸಂಗೀತ ಕಂಬಗಳು ಸರಸ್ವತಿ ಮಡಿಲ ಸ್ವರಮಂಡಲವಾಗೋ, ರಾಗಿಣಿಯನ್ನು ಚಿತ್ರಿಸುವ ಶಿಲ್ಪದ ಕಿಟಕಿಯ ಸರಳಾಗಿಯೂ ಮೂಡಿಬಂದರೆ ನಿಮ್ಮ ಕಲಾವಂತಿಕೆ ಮೆರೆಯುತ್ತದೆ'.

ರಂಜಾನ್ ತಿಂಗಳ ಆಕರ್ಷಣೆ
ಬೆಂಗಳೂರಿನ ತವಕ್ಕಲ್ ಮಸ್ತಾನ್ ದರ್ಗಾ ಕರ್ನಾಟಕದ ಅತಿ ಹಳೆಯ ಸೂಫಿ ಕ್ಷೇತ್ರಗಳಲ್ಲಿ ಒಂದು. ಇದು ಕಾಟನ್‌ಪೇಟೆಯಲ್ಲಿದೆ. ಇನ್ನೂರು ವರ್ಷದ ಇತಿಹಾಸವಿರುವ ಇಲ್ಲಿಗೆ ಮುಸಲ್ಮಾನರಷ್ಟೇ ಅಲ್ಲದೆ ಹಿಂದೂಗಳೂ ಹೋಗುತ್ತಾರೆ. ಇದರ ಸುತ್ತ ಒಂದು ಕಥೆ ಇದೆ. ಹೈದರ್ ಆಲಿ ಕೋಟೆ ಕಟ್ಟಿಸುತ್ತಿದ್ದಾಗ ಬಂದ ಕೆಲಸಗಾರರಲ್ಲಿ ಮಸ್ತಾನ್ ಸಾಬ್ ಒಬ್ಬರು. ಆತ ಕೆಲಸ ಮಾಡಿ ಊಟದ ಸಂಬಳದ ಸಮಯಕ್ಕೆ ನಾಪತ್ತೆಯಾಗುತ್ತಿದ್ದರು.

ಈ ರಹಸ್ಯವನ್ನು ಶೋಧಿಸಲು ಹೈದರ್ ಆಲಿ ಒಬ್ಬ ಅಧಿಕಾರಿಯನ್ನು ನೇಮಕ ಮಾಡುತ್ತಾನೆ. ಆತನಿಗೆ ಗೊತ್ತಾಗುವುದೇನೆಂದರೆ, ಮೂರು ಕೆಲಸಗಾರರು ಸಂಬಳದ ದಿನ ಕುಂಬಾರಪೇಟೆಯ ಒಂದು ಮಸೀದಿಗೆ ಹೊಗುತ್ತಾರೆ. ಒಳಗೆ ಹೋಗಿ ನೋಡಿದಾಗ ಅಧಿಕಾರಿಗೆ ಕೆಲವು ಅಂಗಾಂಗಗಳು ಕಾಣುತ್ತವೆಯೇ ಹೊರತು ಕೆಲಸಗಾರರ ಪೂರ್ಣ ದೇಹ ಕಾಣುವುದಿಲ್ಲ.

ಇದನ್ನು ದೊರೆಗೆ ತಿಳಿಸಿದಾಗ ಅವನಿಗೆ ಒಂದು ವಿಷಯ ಹೊಳೆಯುತ್ತದೆ: ಇವರು ಸಂತರು, ಸಾಮಾನ್ಯ ಕೂಲಿಗಳಲ್ಲ. ಹೈದರ್ ಆಲಿ ತವಕ್ಕಲ್ ಮಸ್ತಾನರನ್ನು ಗೌರವದಿಂದ ಕಂಡು, ಅವರಿಗೆ ಕಾಣಿಕೆ ಕೊಡಲು ಮುಂದಾದಾಗ ಅವರು ಏನನ್ನೂ ಸ್ವೀಕರಿಸುವುದಿಲ್ಲ. ಮಸೀದಿಯೊಂದನ್ನು ಕಟ್ಟಿಸು ಎನ್ನುತ್ತಾರೆ. ಆ ಮಸೀದಿಯನ್ನು ಹೈದರ್ ಆಲಿ ಪ್ರಾರಂಭಿಸಿ ಮಗ ಟಿಪ್ಪು ಸುಲ್ತಾನ್ ಪೂರ್ಣಗೊಳಿಸುತ್ತಾನೆ. ತವಕ್ಕಲ್ ಮಸ್ತಾನ್ ಇರಾನ್ ದೇಶದಿಂದ ಬಂದ ಕುದುರೆ ವ್ಯಾಪಾರಿ ಎಂದೂ ಕೆಲವರು ಹೇಳುತ್ತಾರೆ.

ತಮಿಳು ನಾಡಿನಿಂದ ತಿಗಳರನ್ನು ಹೈದರ್ ಆಲಿ ಬೆಂಗಳೂರಿಗೆ ಕರೆತಂದ ವಿಷಯ ಇತಿಹಾಸದಲ್ಲಿ ದಾಖಲಾಗಿದೆ. ಈ ಜನಾಂಗದ ಒಬ್ಬನ ಹೆಸರು ಧರ್ಮರಾಯ. ಆತ ವಿದ್ವಾಂಸ, ದಾನಿಯಾಗಿದ್ದನಂತೆ. ಆತನ ಸಲಹೆಯ ಮೇರೆಗೆ ದೊರೆ ಒಂದು ದೇವಸ್ಥಾನವನ್ನು ಕಟ್ಟಿಸಿದನಂತೆ. ಅದನ್ನೇ ಇಂದು ಧರ್ಮರಾಯ ಸ್ವಾಮಿ ಗುಡಿ ಎಂದು ಕರೆಯುವುದು ಎಂದು ಒಂದು ಪ್ರತೀತಿ. ಬೆಂಗಳೂರಿನ ಕರಗ ಅಲ್ಲಿಂದಲೇ ಪ್ರಾರಂಭವಾಗುವುದು.

ಒಮ್ಮೆ ಕರಗ ಹೊತ್ತವ ತವಕ್ಕಲ್ ಕ್ಷೇತ್ರದ ಮುಂದೆ ನಿಂತು ತಲೆಯ ಮೇಲಿನ ದೇವರು ಬೀಳದಿರಲಿ ಎಂದು ಮೊರೆ ಇಟ್ಟನಂತೆ. ಆಗ ತವಕ್ಕಲ್ ಆಶೀರ್ವಾದ ಮಾಡಿ, `ಧಿನ್ ಧಿನ್' ಎನ್ನುವಂತೆ ಹೇಳಿದರಂತೆ. ಈ ಸಾಮರಸ್ಯದ ಕೊಡು ಕೊಳ್ಳುವಿಕೆಯಿಂದ ಇಂದಿಗೂ ಕರಗ ಹೊತ್ತವ ತವಕ್ಕಲ್ ದರ್ಗಾದ ಮುಂದೆ ನಿಂತು ಗೌರವ ಸೂಚಿಸುವುದು ತಪ್ಪದ ಪಧ್ಧತಿಯಾಗಿ ಉಳಿದಿದೆ.

  ರಂಜಾನ್ ತಿಂಗಳಲ್ಲಿ ಇಂಥ ಕ್ಷೇತ್ರಗಳು ಸಂಭ್ರಮದಿಂದ ಕೂಡಿರುತ್ತವೆ. ಫ್ರೇಜರ್ ಟೌನ್‌ನ ಎಂ.ಎಂ. ರಸ್ತೆ ದೀಪಗಳಿಂದ ಅಲಂಕೃತವಾಗಿ ಝಗಮಗಿಸುತ್ತಿರುತ್ತದೆ. ರಾತ್ರಿಯೆಲ್ಲಾ ಇಲ್ಲಿ ರಂಜಾನ್ ವಿಶೇಷ ತಿನಿಸುಗಳು ಸಿಗುತ್ತವೆ. ಹಬ್ಬವನ್ನು ನೆಪ ಮಾಡಿಕೊಂಡು ಇಂಥ ಸ್ಥಳಗಳನ್ನು ನೋಡಿ ಬರಲು ಇದು ಸರಿಯಾದ ಸಮಯ. ನಮ್ಮ ನಗರದ ಇತಿಹಾಸದ ತುಣುಕನ್ನು ಕಣ್ಣಾರೆ ಕಂಡಂತೆ ಆಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT