ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಷ್ಟಗಳ ಮಳೆಯಲ್ಲಿ ಮಿಂದವರು

Last Updated 20 ಆಗಸ್ಟ್ 2011, 19:30 IST
ಅಕ್ಷರ ಗಾತ್ರ

ಐಷಾರಾಮಿ ಕುರ್ಚಿಯ ಮೇಲೆ ಕೂತ ಅಧಿಕಾರಿ ಕಾಫಿ  ಗುಟುಕರಿಸುತ್ತಾ ಪತ್ರಿಕೆಯ ಸುದ್ದಿಗಳನ್ನು ಮನಸ್ಸಿನೊಳಕ್ಕೆ ಹಾಕಿಕೊಳ್ಳುವ ಹೊತ್ತಿಗೇ ದೂರದ ಸಣ್ಣ ಮನೆಯಲ್ಲಿನ ಚಾಲಕನ ಸ್ನಾನವಾಗಿರುತ್ತದೆ. ಈ ಅಧಿಕಾರಿಯನ್ನು ಸರಿಯಾದ ಸಮಯಕ್ಕೆ ಕಚೇರಿ ತಲುಪಿಸಲು ವಾಹನವನ್ನು `ಇನ್ ಟೈಮ್~ಗೆ ತರಬೇಕಲ್ಲ. ಅಧಿಕಾರಿಯ ಮನೆಗೂ ಚಾಲಕನ ಮನೆಗೂ ದೂರ ಬಲು ದೂರ. ಪಕ್ಕಪಕ್ಕದಲ್ಲಿ ಇರಲು ಸಾಧ್ಯವೇ ಇಲ್ಲ. ಚಾಲಕ ಕನಿಷ್ಠ ಎರಡು ತಾಸು ಮುಂಚಿತವಾಗಿಯೇ ಸಿದ್ಧಗೊಂಡು ವಾಹನವನ್ನು ಅಧಿಕಾರಿಯ ಮನೆಮುಂದಕ್ಕೆ ತರಬೇಕು. ಅಲ್ಲಿಂದ ದಿನದ ಜಂಜಾಟ ಪ್ರಾರಂಭ. ಸಂಜೆ ಕಚೇರಿ ಸಮಯ ಮುಗಿದ ನಂತರ ಅಧಿಕಾರಿಯನ್ನು ಮನೆಮುಟ್ಟಿಸಿ, ತಾನೂ ಮನೆಯ ಕಡೆಗೆ ಹೊರಡೋಣ ಎಂದುಕೊಳ್ಳುವ ಸ್ವಾತಂತ್ರ್ಯವೂ ಚಾಲಕನಿಗಿಲ್ಲ. ಯಾಕೆಂದರೆ, ಅಧಿಕಾರಿ ಕಾರನ್ನು ಮನೆಗೆ ನಡೆಸು ಎನ್ನದಿರುವ ಸಾಧ್ಯತೆಯೇ ಹೆಚ್ಚು. ಪಾರ್ಟಿಗೋ, ಕ್ಲಬ್ಬಿಗೋ ಹೋಗಿ ತಡರಾತ್ರಿಯಾದ ನಂತರ ಚಾಲಕ ಅವರನ್ನು ಮನೆತಲುಪಿಸಬೇಕು. ಗಂಟೆ ಹತ್ತೋ, ಹನ್ನೆರಡೋ ಆದರೂ ಚಕಾರವೆತ್ತುವಂತಿಲ್ಲ. ಚಾಲನೆಯ ಚಾಕರಿ ಮುಗಿಸಿ ಚಾಲಕ ಮನೆಮುಟ್ಟುವಷ್ಟರಲ್ಲಿ ಮನೆಮಂದಿ ನಿದ್ದೆಗೆ ಜಾರಿರುತ್ತಾರೆ. ಮರುದಿನ ಅದೇ ಪುನರಾವರ್ತನೆ. ಅಧಿಕಾರಿಗಳ ಪತ್ನಿಯರು ಕ್ಲಬ್‌ಗೆ ಹೋಗಲು ಬಯಸಿದರೆ ಅವರನ್ನು ಸಾಗಿಸುವ ಉಸಾಬರಿಯೂ ಇದೇ ಚಾಲಕರದ್ದು.

ಸರ್ಕಾರದ ವಿವಿಧ ಇಲಾಖೆಗಳ ಬಹುಪಾಲು ಚಾಲಕರ ವೃತ್ತಿ ಬದುಕಿನ ಸತ್ಯವಿದು. ಅವರನ್ನು ಕಚೇರಿ ಕೆಲಸಕ್ಕೆ ಮಾತ್ರ ಹಚ್ಚುವ ಅಧಿಕಾರಿಗಳು ತೀರಾ ವಿರಳ. ಕೈಯಲ್ಲಿ ಸರ್ಕಾರಿ ಕೆಲಸ ಇದೆ ಎಂಬ ಏಕೈಕ ಸುಖ ಬಿಟ್ಟರೆ ಚಾಲಕರಿಗೆ ಬೇರೇನೂ ಸಿಗುವುದಿಲ್ಲ. ಮಕ್ಕಳ ಜೊತೆ ಕಾಲ ಕಳೆಯುವ ಅವಕಾಶ ಅವರಿಗೆ ಸಿಗುವುದು ಅಪರೂಪ. ಎಷ್ಟೋ ಸಲ ದಿನಗಟ್ಟಲೆ ತಂದೆಯನ್ನು ಮಕ್ಕಳು ನೋಡುವುದೇ ಇಲ್ಲ. ರಾತ್ರಿ ಅಪ್ಪ ಬರುವಷ್ಟರಲ್ಲಿ ಮಕ್ಕಳು ಮಲಗಿರುತ್ತವೆ. ಬೆಳಗ್ಗೆ ಏಳುವಷ್ಟರಲ್ಲಿ ಅದೇ ಅಪ್ಪ ಕೆಲಸಕ್ಕೆ ಹೋಗಿ ಆಗಿರುತ್ತದೆ. ಚಾಲಕರು ತಮ್ಮ ಬದುಕಿನ ಸಣ್ಣ ಸಣ್ಣ ಖುಷಿಗಳನ್ನು, ಬಹುಪಾಲು ಹಕ್ಕುಗಳನ್ನು ಕಳೆದುಕೊಂಡೇ ವೃತ್ತಿಯಲ್ಲಿ ಜೀವ ತೇಯುತ್ತಾರೆ.

ಚಾಲಕ, ಹೆಡ್ ಕಾನ್‌ಸ್ಟೇಬಲ್ಸ್, ಕಾನ್‌ಸ್ಟೇಬಲ್ಸ್, ಎಎಸ್‌ಐಗಳು ಎಲ್ಲರ ಸ್ಥಿತಿಯೂ ಹೆಚ್ಚೂಕಡಿಮೆ ಹೀಗೇ ಇದೆ. ಆಗೀಗ ರಜೆ ಸಿಕ್ಕಾಗ ಇವರು ತಮ್ಮ ಮಕ್ಕಳನ್ನು ಹದ್ದುಬಸ್ತಿಗೆ ತರಲು ಯತ್ನಿಸುತ್ತಾರೆ. ಆದರೆ, ಅಪ್ಪ- ಮಕ್ಕಳ ನಡುವೆ ಆಪ್ತತೆಯೇ ಇಲ್ಲದಿರುವುದರಿಂದ ಎಷ್ಟೋ ಕುಟುಂಬಗಳಲ್ಲಿ ಸಂಬಂಧಗಳೇ ಹದಗೆಟ್ಟುಹೋಗುತ್ತದೆ. ಚಾಲಕರು, ಕೆಳಹಂತದ ಪೊಲೀಸ್ ಸಿಬ್ಬಂದಿಯ ಪತ್ನಿಯರು ಗಟ್ಟಿಗಿತ್ತಿಯರಾಗಿದ್ದು, ಪರಿಸ್ಥಿತಿಯನ್ನು ನಿಭಾಯಿಸಿದರೆ ಮಾತ್ರ ಅವರ ಸಂಸಾರನೌಕೆ ಯಾವುದೇ ಅಡೆತಡೆಯಿಲ್ಲದೆ ಸಾಗುತ್ತದೆ. ಇಲ್ಲದಿದ್ದರೆ ಕಷ್ಟ. ಇದು ವ್ಯವಸ್ಥೆಯ ದುರಂತ.

ಆರ್ಡರ್ಲಿಗಳ ಕಷ್ಟದ ಬಗ್ಗೆ ಹೇಳುತ್ತಿರುವಾಗಲೇ ನನಗೆ ವಿವಿಧ ಸರ್ಕಾರಿ ಇಲಾಖೆಗಳ ನಾಲ್ಕನೇ ದರ್ಜೆಯ ನೌಕರರು ನೆನಪಾದರು. ಅದರಲ್ಲೂ ವಾಹನ ಚಾಲಕರು ಕಾಡತೊಡಗಿದರು. ಕೆಲವು ಅಧಿಕಾರಿಗಳು ನಾಲ್ಕನೇ ದರ್ಜೆಯ ನೌಕರರಿಂದಲೂ ಅನಧಿಕೃತವಾಗಿ ಆರ್ಡರ್ಲಿಗಳ ಕೆಲಸ ಮಾಡಿಸುತ್ತಾರೆ.

ಕೆಲವರು ಇನ್ನೂ ಒಂದು ಹೆಜ್ಜೆ ಮುಂದೆಹೋಗಿ ಕೈದಿಗಳನ್ನೂ ಕೆಲಸಕ್ಕೆ ಉಪಯೋಗಿಸಿಕೊಳ್ಳುತ್ತಾರೆ. ಇತ್ತೀಚೆಗೆ ಜೈಲುಗಳಲ್ಲಿ ಇದ್ದ ಕೈದಿಗಳು ಎಲ್ಲರಂತೆ ಮಾರುಕಟ್ಟೆಯಲ್ಲಿ ನಿರಾಳವಾಗಿ ಓಡಾಡಿಕೊಂಡಿದ್ದು, ಮತ್ತೆ ಜೈಲಿಗೇ ಸೇರಿಕೊಂಡ ಸುದ್ದಿ ಮಾಧ್ಯಮದಲ್ಲಿ ವರದಿಯಾಯಿತು. ಇದು ಹೊಸತೇನಲ್ಲ. ಎಷ್ಟೋ ಅಧಿಕಾರಿಗಳು ಕೈದಿಗಳನ್ನು ತಮ್ಮ ಮನೆ ಕೆಲಸಕ್ಕೆ ಉಪಯೋಗಿಸಿಕೊಂಡ ಉದಾಹರಣೆ ಇದೆ.

ಜೀವಾವಧಿ ಶಿಕ್ಷೆ ಅನುಭವಿಸುವ ಕೈದಿಯ ಪತ್ನಿ ಇದ್ದಕ್ಕಿದ್ದಂತೆ ಗರ್ಭಿಣಿಯಾದದ್ದನ್ನೂ ಕಂಡೂ ಇಲಾಖೆಯ ಅನೇಕರು ಬೆರಗಾಗಿದ್ದರು. ಇದು ಆದದ್ದು ಹೇಗೆ ಎಂದು ಗುಸುಗುಸು ಮಾತಾಡಿಕೊಳ್ಳುತ್ತಿದ್ದರು. ಕೋರ್ಟ್‌ನಿಂದ ಜೈಲಿಗೆ, ಜೈಲಿನಿಂದ ಕೋರ್ಟ್‌ಗೆ ಕೈದಿಗಳನ್ನು ಕರೆದುಕೊಂಡು ಹೋಗುವುದು, ಬರುವುದು ಮಾಡುವ ಸಿಬ್ಬಂದಿಯಲ್ಲಿ ದಾರಿ ತಪ್ಪಿದ ಪೊಲೀಸರೂ ಇರುತ್ತಾರೆ. ಅವರು ಕೈದಿಗಳನ್ನು ಕೆಲಕಾಲ ತಮ್ಮ ಮನೆಗೆ ಹೋಗಲು ಬಿಡುತ್ತಾರೆ. ಆ ಸಮಯದಲ್ಲೇ ಹೆಂಡತಿಯರ ಮೇಲೆ ಅವರು ಪ್ರೀತಿ ಸುರಿಸಿ ಬರುವುದರ ಫಲವೇ ಗರ್ಭಧಾರಣೆ! ತನ್ನ ಪತ್ನಿ ಗರ್ಭ ಧರಿಸಿರುವ ಸುದ್ದಿ ಕಿವಿಮೇಲೆ ಬಿದ್ದಾಗ ಜೈಲುವಾಸಿ ಕೈದಿಗಳು ಖುಷಿಪಟ್ಟಿರುವ ಹಲವು ಪ್ರಸಂಗಗಳನ್ನು ನಾನು ಕಂಡಿದ್ದೇನೆ. ಇದು  ಆರ್ಡರ್ಲಿ ವ್ಯವಸ್ಥೆಗಿಂತಲೂ ಅಪಾಯಕಾರಿ.

* * *
ಪೊಲೀಸ್ ಕಾಯ್ದೆ ಜಾರಿಗೆ ಬಂದದ್ದು 1861ರಲ್ಲಿ. 1903ರಲ್ಲಿ ಮೊದಲ ಪೊಲೀಸ್ ಆಯೋಗ ರಚಿತವಾಯಿತು. `ಎಸ್ಕಾರ್ಟ್~, `ಟ್ರೆಷರಿ ಗಾರ್ಡ್~, `ಬೀಟ್~, ದಸ್ತಗಿರಿ ಮಾಡುವ ಅಧಿಕಾರ- ಇವೆಲ್ಲವುಗಳ ಕುರಿತು ಮೊದಲು ಹೇಳಿದ್ದೇ ಆ ಆಯೋಗದ ವರದಿ. ಧರ್ಮವೀರ ಆಯೋಗ ರಚಿತವಾದ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳ ದರ್ಪ, ಹಿಂಸೆಯ ಕುರಿತು ಸೊಲ್ಲೆದ್ದಿತ್ತು. ಆ ಆಯೋಗ ಸಲ್ಲಿಸಿದ ವರದಿಯಲ್ಲಿ ಆ ಲೋಪಗಳನ್ನು ಸರಿಪಡಿಸಿಕೊಳ್ಳುವ ಬಗೆಯ ಪ್ರಸ್ತಾಪವೂ ಇತ್ತು. ಆದರೆ, ಈಗಲೂ ಅದರ ಶಿಫಾರಸುಗಳು ಜಾರಿಗೆ ಬಂದಿಲ್ಲ.

ಪೊಲೀಸರ ಸ್ಥಿತಿಯೂ ಶೋಚನೀಯ. ವಸತಿಯ ವಿಷಯದಲ್ಲಂತೂ ಕಾನ್‌ಸ್ಟೇಬಲ್ ಹಾಗೂ ಹೆಡ್ ಕಾನ್‌ಸ್ಟೇಬಲ್ ದರ್ಜೆಯವರು ತುಂಬಾ ನತದೃಷ್ಟರಾಗಿದ್ದರು. ಬರುವ ಸಂಬಳದಲ್ಲಿ ಸೂರು ದಕ್ಕಿಸಿಕೊಳ್ಳುವುದು ಕಷ್ಟವಿತ್ತು. ಇದ್ದ ಪೊಲೀಸ್ ಕ್ವಾರ್ಟ್ರಸ್‌ಗಳೂ ಸರಿ ಇರಲಿಲ್ಲ. ಅದನ್ನು ಪಡೆಯಲು ಕಾನ್‌ಸ್ಟೇಬಲ್ ದರ್ಜೆಗಿಂತ ಮೇಲ್ಪಟ್ಟವರ ನಡುವೆಯೇ ಸ್ಪರ್ಧೆ ಇತ್ತು. ಪಡಿತರ ವ್ಯವಸ್ಥೆಯೂ ಉತ್ತಮವಾಗಿರಲಿಲ್ಲ. ಬದುಕಿಗೆ ಬೇಕಾದ ಈ ಎಲ್ಲಾ ಮೂಲ ಸೌಕರ್ಯಗಳನ್ನು ಸುಧಾರಿಸುವ ಶಿಫಾರಸುಗಳನ್ನು ಪೊಲೀಸ್ ಆಯೋಗಗಳು ಮಾಡಿವೆ. ಒಂದಿಷ್ಟು ಸುಧಾರಣೆಯೂ ಆಗಿದೆ. ಆದರೆ, ಅದರ ಕುರಿತು ತೃಪ್ತಿಪಟ್ಟುಕೊಳ್ಳುವ ಸ್ಥಿತಿಯೇನೂ ಇಲ್ಲ.

ಸುಪ್ರೀಂಕೋರ್ಟ್ ಕೂಡ ಪೊಲೀಸ್ ಸುಧಾರಣೆ ಕುರಿತು ನಿರ್ದೇಶನಗಳನ್ನು ಕೊಟ್ಟಿತು. ಅವುಗಳಲ್ಲಿ ಮುಖ್ಯವಾದದ್ದು ಪೊಲೀಸರ ವರ್ಗಾವಣೆಯಲ್ಲಿ ಯಾರ ಹಸ್ತಕ್ಷೇಪವೂ ಇರಬಾರದು ಎಂಬುದು. ಹಾಗಿದ್ದೂ ಚಾಪೆ ಕೆಳಗೆ ನುಸುಳುವ ಬುದ್ಧಿಯವರು ಈಗಲೂ ಇದ್ದಾರೆ. ವರ್ಗಾವಣೆಯಲ್ಲಿ ಹಸ್ತಕ್ಷೇಪ ಮಾಡುವುದು ಮುಂದುವರಿದೆ.

ಗಡಿ ಭಾಗದಲ್ಲಿ ಕೆಲಸ ಮಾಡುವ ಸಿಪಾಯಿಗಳದ್ದಂತೂ ತ್ಯಾಗದ ಜೀವನ. ಅವರು ತಮ್ಮ ಸರ್ವಸ್ವವನ್ನೂ ದೇಶಕ್ಕಾಗಿ ಅರ್ಪಿಸುತ್ತಾರೆ. ನಿಸ್ವಾರ್ಥ ಪೊಲೀಸರ ಪ್ರಸ್ತಾಪ ಬಂದಾಗಲೆಲ್ಲಾ ನನಗೆ ಯೋಧನೊಬ್ಬ ಹೇಳಿದ ಮಾತು ನೆನಪಾಗುತ್ತದೆ: `ಇಫ್ ಐ ಡೈ ಇನ್ ಎ ಬ್ಯಾಟಲ್‌ಜೋನ್ ಪ್ಯಾಕ್ ಮಿ ಅಪ್ ಅಂಡ್ ಸೆಂಡ್ ಮಿ ಹೋಮ್/ ಪುಟ್ ಆಲ್ ದಿ ಮೆಡಲ್ಸ್ ಆನ್ ಮೈ ಚೆಸ್ಟ್/ ಟೆಲ್ ಮೈ ಮಾಮ್ ಐ ಆ್ಯಮ್ ದಿ ಬೆಸ್ಟ್/ ಟೆಲ್ ಮೈ ಲವ್ ನಾಟ್ ಟು ಕ್ರೈ ಬಿಕಾಸ್ ಐ ಆ್ಯಮ್ ಬಾರ್ನ್ ಟು ಡೈ~ (ನಾನು ಯುದ್ಧಭೂಮಿಯಲ್ಲಿ ಸತ್ತರೆ ನನ್ನ ದೇಹವನ್ನು ಮನೆಗೆ ಮುಟ್ಟಿಸಿ/ ಎದೆಮೇಲೆ ನನ್ನೆಲ್ಲಾ ಪದಕಗಳ ಹರಡಿ/ ಅಮ್ಮನೆದುರು ನಾನು ಶ್ರೇಷ್ಠನೆಂದು ಹಾಡಿ/ ಗೆಳತಿಗೆ ಅಳದಿರಲು ಹೇಳಿ; ಯಾಕೆಂದರೆ, ನಾನು ಹುಟ್ಟಿದ್ದೇ ಸಾಯಲು). ಸರಳವಾದ ಈ ಮಾತುಗಳಿಗೆ ಎಂಥವರನ್ನೂ ಅಲ್ಲಾಡಿಸುವ ಶಕ್ತಿಯಿದೆ. ಆ ಯೋಧನ ಮಾತು ಮುಂದುವರಿದು, ದೇಶದ ಶಾಂತಿಗಾಗಿ ವಾರದ ಅಷ್ಟೂ ದಿನ ದಿನದ ಅಷ್ಟೂ ಗಂಟೆ ಹೋರಾಡುವ ಎಲ್ಲರಿಗೂ ಸಲ್ಯೂಟ್ ಹೇಳುತ್ತಾನೆ. ಹೀಗೆ ಜೀವ ತೇಯುವವರಿಗೆ ನಮ್ಮ ಸಮಾಜ, ವ್ಯವಸ್ಥೆ ಕೊಡುತ್ತಿರುವುದು ತುಂಬಾ ಕಡಿಮೆ.

ಪೊಲೀಸ್ ಇಲಾಖೆಯ ಆಧಾರಸ್ತಂಭಗಳೇ ಕಾನ್‌ಸ್ಟೇಬಲ್‌ಗಳು. ಅವರಲ್ಲಿ ಅನೇಕರಿಗೆ ಯೋಧರಿಗೆ ಇರುವಷ್ಟೇ ಬದ್ಧತೆ ಇರುತ್ತದೆ. ರಾತ್ರಿಪಾಳಿಯಲ್ಲಿ ಅವರಷ್ಟು ಕೆಲಸ ಮಾಡಿದರೆ ಪಿತ್ಥ ಮೊದಲಾದ ಸಮಸ್ಯೆ ಬರುವ ಸಾಧ್ಯತೆ ಇದೆ. ಎಷ್ಟೋ ಅಧಿಕಾರಿಗಳು ಅಪರೂಪಕ್ಕೊಮ್ಮೆ ರಾತ್ರಿಪಾಳಿಯಲ್ಲಿ ಕೆಲಸ ಮಾಡಲು ಪರದಾಡಿದ್ದನ್ನು ನಾನು ಕಂಡಿದ್ದೇನೆ. ಆದರೆ, ಕಾನ್‌ಸ್ಟೇಬಲ್‌ಗಳು ಅದಕ್ಕೆ ಸಲೀಸಾಗಿ ಒಗ್ಗಿಕೊಂಡು ಕೆಲಸ ಮಾಡುತ್ತಾರೆ.

ಹೀಗೆ ನಿಸ್ವಾರ್ಥದಿಂದ ದುಡಿಯುವ ಕಾನ್‌ಸ್ಟೇಬಲ್‌ಗಳನ್ನು ಇಂದಿನ ಮಾಧ್ಯಮ, ಅದರಲ್ಲೂ ಸಿನಿಮಾ ಮಾಧ್ಯಮ ಬಫೂನುಗಳಂತೆ ಚಿತ್ರಿಸುತ್ತದೆ. ಕಿರುತೆರೆ ಮಾಧ್ಯಮದ ಕಣ್ಣಿಗೂ ಅವರು ದಡ್ಡರು. ಸಮಾಜದಲ್ಲಿ ಅವರಿಗೆ ಸಿಗುವ ಗೌರವವೂ ಅಷ್ಟಕ್ಕಷ್ಟೆ. ಬೇರೆ ಯಾವ ಕೆಲಸವೂ ಸಿಗದೇ ಇರುವವನು ಕೊನೆಗೆ ವಿಧಿಯಿಲ್ಲದೆ ಕಾನ್‌ಸ್ಟೇಬಲ್ ಆದ ಎಂದು ಆಡಿಕೊಳ್ಳುವವರೇ ಹೆಚ್ಚು.

ನನ್ನ ಅನುಭವದಲ್ಲಿ ಅನೇಕ ನಿಸ್ಸೀಮ ಕಾನ್‌ಸ್ಟೇಬಲ್‌ಗಳನ್ನು ಕಂಡಿದ್ದೇನೆ. ಅವರ ನೆರವಿಲ್ಲದೆ ಮಹತ್ವದ ಅನೇಕ ಪ್ರಕರಣಗಳನ್ನು ಭೇದಿಸುವುದು ಸಾಧ್ಯವೇ ಇಲ್ಲ. ನನ್ನ ಪ್ರಕಾರ ಅವರು ಗಂಧದ ಕೊರಡಿನಂತೆ. ತೇಯುತ್ತಲೇ ಇರುತ್ತಾರೆ. ವ್ಯವಸ್ಥೆ ತಮ್ಮ ಬಗ್ಗೆ ತೋರುವ ಅವಗಣನೆಯಿಂದ ಅನೇಕ ಕಾನ್‌ಸ್ಟೇಬಲ್‌ಗಳು ಉತ್ಸಾಹ ಕಳೆದುಕೊಂಡು ನಿರ್ಲಕ್ಷ್ಯದಿಂದ ಕೆಲಸ ಮಾಡುವಂತಾಗಿದೆ. ಇದರ ಪರಿಣಾಮವೇ ಪರ್ಯಾಯ ಪೊಲೀಸ್ ವ್ಯವಸ್ಥೆಯೆಂಬ ಪ್ರಹಸನ.

ಮುಂದಿನ ವಾರ: ಪರ್ಯಾಯ ಪೊಲೀಸ್ ವ್ಯವಸ್ಥೆಯ ದುಷ್ಪರಿಣಾಮ

ಶಿವರಾಂ ಅವರ ಮೊಬೈಲ್ ಸಂಖ್ಯೆ 94483 13066

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT