ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಶ್ಮೀರದಲ್ಲಿ ಬೆಂಕಿಗೆ ತುಪ್ಪ ಸುರಿಯುವುದೇಕೆ?

Last Updated 9 ಜುಲೈ 2013, 19:59 IST
ಅಕ್ಷರ ಗಾತ್ರ

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವುದಕ್ಕೆ ಸಂಬಂಧಿಸಿದಂತೆ ಸಂವಿಧಾನದ 370ನೇ ಕಲಂ ಮತ್ತೆ ಸುದ್ದಿಯಲ್ಲಿದೆ. ಬಿಜೆಪಿಯೇ ಮೊದಲ ಕಲ್ಲು ಎಸೆದಿದೆ. ಪಕ್ಷದ ಹಿರಿಯ ಮುಖಂಡ ಎಲ್.ಕೆ.ಅಡ್ವಾಣಿ ಅವರು ಈ  ಕಲಮನ್ನೇ ಕಿತ್ತು ಹಾಕಬೇಕು ಎಂದು ಹೇಳಿದ್ದಾರೆ. ತಕ್ಷಣ ಅದಕ್ಕೆ ಪ್ರತಿಕ್ರಿಯಿಸಿರುವ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ `ಅದು ಸಾಧ್ಯವೇ ಇಲ್ಲ. ಅದೇನಿದ್ದರೂ ನಮ್ಮ ಮೃತದೇಹಗಳ ಮೇಲೆ ನಡೆದು ಆ ಕಲಂ ಅನ್ನು ತೆಗೆದು ಹಾಕಬೇಕಷ್ಟೆ' ಎಂದು ಗುಡುಗಿದ್ದಾರೆ. ಒಮರ್ ತೀರಾ ಆವೇಶದಿಂದ ಕಟುವಾದ  ಪ್ರತಿಕ್ರಿಯೆ ನೀಡಿದ್ದಾರೆ. ಅವರು ನ್ಯಾಯಸಮ್ಮತ ಎಂದು ಭಾವಿಸಿರುವ ಆ ಕಲಂ ವಿರುದ್ಧ ಯಾರೇ ಮಾತನಾಡಿದರೂ ಇಂತಹ ಪ್ರತಿಕ್ರಿಯೆ ಸಹಜ ತಾನೆ!

ಈ ಕಲಂ ವಿವಾದ ಇಂದು ನಿನ್ನೆಯದಲ್ಲ. ಕಾಶ್ಮೀರವನ್ನು ಭಾರತದ ಚೌಕಟ್ಟಿನೊಳಗೆ ಸೇರಿಸಿಕೊಳ್ಳುವ ಪ್ರಕ್ರಿಯೆ ವೇಳೆ ಶ್ರೀನಗರ ಮತ್ತು ದೆಹಲಿ ನಡುವೆ ಇದರ ಬಗ್ಗೆ ಬಹಳಷ್ಟು ಮಾತುಕತೆ ನಡೆದಿದೆ. 1947ರಲ್ಲಿ ಬ್ರಿಟಿಷರು ಭಾರತವನ್ನು ಬಿಟ್ಟು ಹೋಗುವಾಗ ಇಲ್ಲಿನ ಸ್ವತಂತ್ರ ಸಂಸ್ಥಾನಗಳು ಭಾರತದ ಒಳಗಾದರೂ ಇರಬಹುದು, ಪಾಕಿಸ್ತಾನಕ್ಕಾದರೂ ಸೇರಬಹುದು ಎಂಬ ಆಯ್ಕೆಯನ್ನು ಆ ಸಂಸ್ಥಾನಗಳಿಗೇ ಬಿಟ್ಟು ಹೋದರು. ಭೌಗೋಳಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಭಾರತ ಮತ್ತು ಪಾಕಿಸ್ತಾನದ ಗಡಿಯ ಆಚೆ ಮತ್ತು ಈಚೆ ಜಮ್ಮು ಮತ್ತು ಕಾಶ್ಮೀರಕ್ಕೆ ಹಲವು ಸಾಮ್ಯತೆಗಳಿದ್ದವು. ಜತೆಗೆ ಅಲ್ಲಿನ ಬಹುಸಂಖ್ಯಾತ ಜನರು ಇಸ್ಲಾಂ ಧರ್ಮಾವಲಂಬಿಗಳಾಗಿದ್ದರು.

ಆಗ ಆ ಸಂಸ್ಥಾನವನ್ನು ಹಿಂದೂ ರಾಜ ಆಳುತ್ತಿದ್ದ. ಆತ ಭಾರತ ಮತ್ತು ಪಾಕಿಸ್ತಾನದಿಂದ ದೂರವಿದ್ದು ತನ್ನ ಸಂಸ್ಥಾನವನ್ನು ಸ್ವತಂತ್ರವಾಗಿ ಉಳಿಸಿಕೊಳ್ಳುವ ಬಗ್ಗೆ ಯೋಚಿಸಿದ್ದ. ಆದರೆ ಆ ರೀತಿ ಇರಲು ಆತನಿಗೆ ಕಷ್ಟವಿತ್ತು. ಏಕೆಂದರೆ ಆ ಸಂಸ್ಥಾನದ ಸುತ್ತಲೂ ಎರಡೂ ದೇಶಗಳ ಭೂ ಪ್ರದೇಶವಿತ್ತು. ಆಗ ಪಾಕಿಸ್ತಾನದ ಆಡಳಿತಗಾರರು ಆ ರಾಜನೊಡನೆ ಸಂಧಾನ ನಡೆಸಿದ್ದಲ್ಲದೆ, ಆ ರಾಜನಿಗೆ ಪಾಕ್ ಸರ್ಕಾರದಿಂದ ಸರ್ವ ರೀತಿಯ ಬೆಂಬಲ ನೀಡುವುದಾಗಿ ಘೋಷಿಸಿತು. ಒಪ್ಪಂದವೊಂದನ್ನು ಮಾಡಿಕೊಳ್ಳಲಾಗಿತ್ತು ಕೂಡ. ಆ ಒಪ್ಪಂದವನ್ನು ಭಾರತ ಸರ್ಕಾರ ತೀವ್ರವಾಗಿ ಖಂಡಿಸಿತು. ಏಕೆಂದರೆ ಆ ದಿನಗಳಲ್ಲೇ ಮಹಾರಾಜ ಹರಿಸಿಂಗ್ ಅವರು ಭಾರತ ದೇಶದೊಳಗೆ ಸೇರುವುದಕ್ಕೆ ಸಂಬಂಧಿಸಿದಂತೆ ಮಾತುಕತೆ ನಡೆಸುತ್ತಿದ್ದರು.

ಆಗ ಹರಿಸಿಂಗ್ ಅವರನ್ನು ಒಲಿಸಿಕೊಳ್ಳುವ ನಿಟ್ಟಿನಲ್ಲಿ ಭಾರತ ಸರ್ಕಾರ ವಿದೇಶಾಂಗ ವ್ಯವಹಾರ, ರಕ್ಷಣೆ ಮತ್ತು ಸಂಪರ್ಕ ಖಾತೆಗಳನ್ನು ಹೊರತು ಪಡಿಸಿ ಇತರ ಎಲ್ಲಾ ವಿಷಯಗಳನ್ನೂ ಕಾಶ್ಮೀರ ರಾಜ್ಯಕ್ಕೇ ಬಿಟ್ಟುಕೊಡುವುದಾಗಿ ಹೇಳಿತ್ತು. ಕೊನೆಗೆ ಮಹಾರಾಜ ಹರಿಸಿಂಗ್ ಅವರು ಭಾರತದ ಜತೆಗಿನ ಆ ಒಪ್ಪಂದಕ್ಕೆ ಸಹಿ ಹಾಕಿದರು. ಆಗಿನ ಜನಪ್ರಿಯ ಹೋರಾಟಗಾರ, ಜನನಾಯಕ ಷೇಕ್ ಅಬ್ದುಲ್ಲಾ ಅವರೂ ಅದನ್ನು ಒಪ್ಪಿಕೊಂಡರು.

ಆದರೆ ಭಾರತ ಸಂವಿಧಾನದ 370ನೇ ಕಲಂ ಅತ್ಯಂತ ಸ್ಪಷ್ಟ ಮತ್ತು ವಿಶ್ವಾಸಾರ್ಹವಾಗಿರಬೇಕೆಂದು ಷೇಕ್ ಅಬ್ದುಲ್ಲಾ ಬಯಸಿದ್ದರು. ಅದರಂತೆ ವಿದೇಶಾಂಗ ವ್ಯವಹಾರ, ರಕ್ಷಣೆ ಮತ್ತು ಸಂಪರ್ಕ ವಿಷಯಗಳನ್ನು ಹೊರತುಪಡಿಸಿದರೆ ಕಾಶ್ಮೀರ ಎಲ್ಲಾ ರೀತಿಯಲ್ಲಿಯೂ ಸ್ವತಂತ್ರ ಎಂದು ಆಗ ಹೇಳಲಾಗಿತ್ತು.

ಆದರೆ ಇವತ್ತು 370ನೇ ಕಲಂ ಅನ್ನು ಸಂಸದರ ಬಲದೊಂದಿಗೆ ತಿದ್ದುಪಡಿ ಮಾಡಬೇಕು ಇಲ್ಲವೇ ಕಿತ್ತು ಹಾಕಬೇಕೆನ್ನುವವರು ಇದಕ್ಕೆ ಸಂಬಂಧಿಸಿದ ಕಾರಣಗಳನ್ನೆಲ್ಲಾ ಮರೆಯುತ್ತಿದ್ದಾರೆ. ಕಾಶ್ಮೀರ ಸಂಸ್ಥಾನವು ಆ ದಿನಗಳಲ್ಲಿ ಹಲವು ಷರತ್ತುಗಳನ್ನು ಮುಂದಿಟ್ಟು, ಅದಕ್ಕೆ ಸಂಬಂಧಿಸಿದಂತೆ ಭಾರತ ನೀಡಿದ ನಂಬಿಕೆಯ  ಹಸ್ತವನ್ನು ಹಿಡಿದಿತ್ತು. ಈಗ ಆ ಕಲಮನ್ನು ಬದಲು ಮಾಡಲಿಕ್ಕೆ ಹೊರಡುವವರು ಮೊದಲಿಗೆ ಕಾಶ್ಮೀರ ಜನರ ಒಪ್ಪಿಗೆ ಪಡೆಯುವ ಅಗತ್ಯವಿದೆ. ಈ ಬಗ್ಗೆ ಭಾರತ ಸರ್ಕಾರ ತನಗಿಷ್ಟ ಬಂದಂತೆ ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಳ್ಳಲು ಬರುವುದಿಲ್ಲ. ಹೀಗಾಗಿ ಒಮರ್ ಅಬ್ದುಲ್ಲಾ ಅವರ ಕೋಪೋದ್ರಿಕ್ತ ಮಾತುಗಳಲ್ಲಿ ಅರ್ಥವಿದ್ದೇ ಇದೆ. ಒಮರ್ ತಮ್ಮ ವಾದವನ್ನು ಗಟ್ಟಿಯಾಗಿಯೇ ಮುಂದಿಟ್ಟಿದ್ದಾರಷ್ಟೆ. ಒಮರ್ ಅವರ ಅಜ್ಜ ಷೇಕ್ ಅಬ್ದುಲ್ಲಾ ಅವರು ಕಾಶ್ಮೀರದ ಸ್ವಾಯತ್ತೆಯನ್ನು ಕಾಪಾಡಿಕೊಳ್ಳುವ ದಿಸೆಯಲ್ಲಿ ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ವಿದೇಶಾಂಗ ವ್ಯವಹಾರ, ರಕ್ಷಣೆ ಮತ್ತು ಸಂಪರ್ಕ ವಿಷಯಗಳೇ ಅಲ್ಲದೆ ಇನ್ನೂ ಕೆಲವು ವಿಷಯಗಳನ್ನು ಕೇಂದ್ರ ಪಡೆದುಕೊಳ್ಳಲು ನಂತರ ಯತ್ನಿಸಿದಾಗ ಷೇಕ್ ಅಬ್ದುಲ್ಲಾ ಅವರು ಆ ಯತ್ನಗಳನ್ನು ತೀವ್ರವಾಗಿ ವಿರೋಧಿಸಿದರು. ಈ ಪ್ರಕ್ರಿಯೆಯಲ್ಲಿ ಷೇಕ್ ಅಬ್ದುಲ್ಲಾ ಅವರು ಸುಮಾರು 12 ವರ್ಷ ಗೃಹಬಂಧನದಲ್ಲಿದ್ದರು ಎನ್ನುವುದನ್ನು ನಾವು ಮರೆಯುವಂತಿಲ್ಲ.

ಇನ್ನೂ ಕೆಲವು ಸತ್ಯಗಳು ನಮ್ಮ ನೆನಪಿನಲ್ಲಿರಬೇಕು. ಆ ದಿನಗಳಲ್ಲಿ ಜಮ್ಮು ಭಾಗವನ್ನು ಹೊರತುಪಡಿಸಿ, ಕಾಶ್ಮೀರದ ಬಹುಸಂಖ್ಯಾತರು ಸ್ವತಂತ್ರವಾಗಿ ಉಳಿಯಲು ಬಯಸಿದ್ದರು. ಆಗ ನೆಹರೂ ಅವರು ಪ್ರಕಟಣೆ ನೀಡಿ `ಈಗಿರುವ ಗೊಂದಲಗಳೆಲ್ಲಾ ಮುಗಿದ ನಂತರ ಜನರ ಆಯ್ಕೆ ಏನೆಂದು ಕೇಳಲಾಗುತ್ತದೆ ಮತ್ತು ಆ ಜನಮತಕ್ಕೇ ಮನ್ನಣೆ ನೀಡಲಾಗುತ್ತದೆ' ಎಂದಿದ್ದರು. ಆದರೆ ಜಾಗತಿಕ ಮಟ್ಟದಲ್ಲಿ ನಡೆದಿದ್ದ ವಿಭಿನ್ನ ರಾಜಕೀಯ ಬೆಳವಣಿಗೆಗಳ ನಡುವೆ ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದ ಜನಾಭಿಪ್ರಾಯ ಕೇಳುವ ವಿಚಾರ ಮೂಲೆಗುಂಪಾಯಿತು. ಭಾರತ ಸರ್ಕಾರ ಈ ಬಗ್ಗೆ ಜಾಣಕಿವುಡು ಪ್ರದರ್ಶಿಸಿತು. ಆ ಸಂದರ್ಭದಲ್ಲಿಯೇ ಪಾಕಿಸ್ತಾನವು ಅಮೆರಿಕ ನೇತೃತ್ವದ `ಸೆಂಟೊ' ಮತ್ತು `ನ್ಯಾಟೊ' ಗುಂಪಿಗೆ ಸೇರಿತ್ತು. ಆಗ ಸೋವಿಯತ್ ಯೂನಿಯನ್ ಮತ್ತು ಅಮೆರಿಕ ನಡುವೆ ಶೀತಲ ಸಮರ ತೀವ್ರವಾಗಿತ್ತು. ಏಷ್ಯಾದ ಆಯಕಟ್ಟಿನ ಸ್ಥಳದಲ್ಲಿದ್ದ ಪಾಕಿಸ್ತಾನದ ಬೆನ್ನಿಗೆ ಅಮೆರಿಕ ನಿಂತುಬಿಟ್ಟಿತ್ತು. ಈ `ಶಕ್ತಿ ಸಮರ'ದ ನಡುವೆ ಜಮ್ಮು ಮತ್ತು ಕಾಶ್ಮೀರ ಸಮಸ್ಯೆ ಬೇರೆಯೇ ಆಯಾಮ ಕಂಡುಕೊಳ್ಳತೊಡಗಿತು.

ಕಾಶ್ಮೀರ ಕಣಿವೆಯಲ್ಲಿ ಇವತ್ತು ಎಲ್ಲವೂ ಸರಿ ಇಲ್ಲ. ಜನರ ಮನಸ್ಸಿನ ದುಃಖ ದುಮ್ಮಾನ ಅರಣ್ಯ ರೋದನವಾಗಿದೆ. ಅಲ್ಲಿನ ಜನ ಮಾನಸಿಕವಾಗಿ ಈ ದೇಶದ ಮುಖ್ಯವಾಹಿನಿಯಿಂದ ದೂರವಾಗುವುದನ್ನು ನೋಡುತ್ತಾ ಕೇಂದ್ರ ಸರ್ಕಾರ ಕಣ್ಣು ಮುಚ್ಚಿ ಕುಳಿತುಕೊಳ್ಳಲೇಬಾರದು. ಅಫ್ಜಲ್ ಗುರುವನ್ನು ನೇಣುಗಂಬಕ್ಕೆ ಏರಿಸಿದ ಮೇಲಂತೂ ಆ ಕಣಿವೆಯ ವಾತಾವರಣ ಬೂದಿ ಮುಚ್ಚಿದ ಕೆಂಡದಂತಿದೆ. ಮುಖ್ಯವಾಗಿ ಯುವಕರು ಕಿಡಿಕಿಡಿಯಾಗಿದ್ದಾರೆ. ದಕ್ಷಿಣ ಏಷ್ಯಾದಲ್ಲಿಯೇ ಪ್ರಜಾಪ್ರಭುತ್ವ ಮೌಲ್ಯಗಳನ್ನು ಅತ್ಯುತ್ತಮವಾಗಿ ಎತ್ತಿ ಹಿಡಿದಿರುವ ಭಾರತದ ಸಂಸತ್ತಿನ ಮೇಲೆಯೇ ಹಿಂದೆ ಕೆಲವು ದುಷ್ಕರ್ಮಿಗಳು ದಾಳಿ ನಡೆಸಿದ್ದರು. ಅದಕ್ಕೆ ಸಂಬಂಧಿಸಿದಂತೆ ಕೆಲವರನ್ನು ಬಂಧಿಸಿ ಸುದೀರ್ಘ ವಿಚಾರಣೆ ನಡೆಸಲಾಯಿತು. ಕೊನೆಗೆ  ಸುಪ್ರೀಂ ಕೋರ್ಟ್ ಅಫ್ಜಲ್‌ ಗಲ್ಲು ಶಿಕ್ಷೆ ವಿಧಿಸಿತು.

ಕಾಶ್ಮೀರ ಸಮಸ್ಯೆ ಇವತ್ತು ಸುಖಾಂತ್ಯ ಕಾಣುವ ಹಂತದಿಂದ ಬಲುದೂರ  ಹೋಗಿದೆ. ಕಾಶ್ಮೀರ ಜನರ ಮನಸ್ಸನ್ನು ಅರಿತುಕೊಳ್ಳುವ ಕೆಲಸ ಇವತ್ತು ನಾವು ಮಾಡಬೇಕಿದೆ. ಆದರೆ ಇಂತಹ ಸಂದಿಗ್ಧ ಕಾಲಘಟ್ಟದಲ್ಲಿ 370ನೇ  ಕಲಂ ಅನ್ನು ಕಿತ್ತು ಹಾಕಬೇಕೆಂಬ ಹೇಳಿಕೆ ಕಣಿವೆಯ ಜನರನ್ನು ಮತ್ತಷ್ಟು ರೊಚ್ಚಿಗೆಬ್ಬಿಸುತ್ತದೆ. ಅಲ್ಲದೆ ಭಾರತದ ಪರ ಒಲವು ಇರಿಸಿಕೊಂಡಿರುವ ಬಹಳಷ್ಟು ಮಂದಿ ರೋಸಿ ಹೋಗುವಂತೆ ಮಾಡುತ್ತದೆ. ಅದೆಷ್ಟೋ ಒತ್ತಡ, ಆತಂಕಗಳ ನಡುವೆ ಬಹಳಷ್ಟು ಜನ ಭಾರತದ ಜತೆ ನಿಂತಿದ್ದಾರೆ. ಅಂತಹವರಲ್ಲಿ ಎಷ್ಟೋ ಮಂದಿ ತಮ್ಮ ಮನೆ ಮಠ ಎಲ್ಲಾ ಕಳೆದುಕೊಂಡಿದ್ದಾರೆ. ಮುಂದೊಂದು ದಿನ ಎಲ್ಲವೂ ಸುಖಾಂತ್ಯಗೊಳ್ಳಬೇಕೆಂದು ಬಯಸಿದವರು ಅವರು. ಅಂತಹವರಲ್ಲಿ ಹಲವರು ತಮ್ಮ ಪ್ರಾಣಾರ್ಪಣೆ ಮಾಡಿದ್ದಾರೆ. ಇದೀಗ ಅಡ್ವಾಣಿಯವರು ನೀಡಿದಂತಹ ಹೇಳಿಕೆ ಭಾರತದ ಪರ ಇರುವ ಅಂತಹ ಸಹಸ್ರಾರು ಮಂದಿ ಮುಜುಗರಕ್ಕೆ  ಒಳಗಾಗುವಂತೆ ಮಾಡುತ್ತದೆಯಲ್ಲದೆ ಇನ್ನೇನು ಅಲ್ಲ.

ಈ ನಡುವೆ ಕಾಶ್ಮೀರ ಕಣಿವೆಯಲ್ಲಿ ಕೆಲವು ಸಲ ಸೇನೆ ಅತಿರೇಕದಿಂದ ವರ್ತಿಸಿದೆ ಎಂದು ಹೇಳುವವರ ಮಾತು ಅತಿಶಯೋಕ್ತಿಯಂತೆ ಕಾಣುವುದಿಲ್ಲ. ಭಾರತದ ಗಡಿಯನ್ನು ಕಾಯುವುದು ಮತ್ತು ತೀರಾ ಪರಿಸ್ಥಿತಿ ಹದಗೆಟ್ಟಾಗ ಅಲ್ಲಿನ ಆಡಳಿತಗಾರರಿಗೆ ನೆರವು ನೀಡುವುದಷ್ಟೇ ಸೇನೆಯ  ಜವಾಬ್ದಾರಿ ತಾನೆ. ಆದರೆ ಇವತ್ತು ಸೇನೆ ತನ್ನನ್ನು ಅಷ್ಟಕ್ಕೇ ಸೀಮಿತಗೊಳಿಸಿಕೊಂಡಿಲ್ಲ. ಅದರ ವ್ಯಾಪ್ತಿ ಹೆಚ್ಚಿದೆ. ಹೀಗಾಗಿ ಅಲ್ಲಿನ ಮುಖ್ಯಮಂತ್ರಿಯವರೇ ಒಮ್ಮೆ “ನಮ್ಮ ಮೇಲೆ ಸೇನೆಯನ್ನು ಹೇರಿರುವುದನ್ನು ನಿಲ್ಲಿಸಿ. ನಮ್ಮ ರಾಜ್ಯದ ಪೊಲೀಸರೇ ಹೆಚ್ಚಿನ ಜವಾಬ್ದಾರಿ ವಹಿಸಿಕೊಳ್ಳಲು ಅವಕಾಶ ನೀಡಿ” ಎಂದು ಕೇಂದ್ರ ಸರ್ಕಾರವನ್ನು ಕೋರಿ ಕೊಂಡಿದ್ದರು. ಈಚೆಗೆ ಇಬ್ಬರು ನಾಗರಿಕರು ಸೇನೆಯ ಗುಂಡೇಟಿನಿಂದ ಸತ್ತ ಪ್ರಕರಣದ ವಿರುದ್ಧ ಕಾಶ್ಮೀರದಾದ್ಯಂತ ಪ್ರತಿಭಟನೆ ನಡೆಯಿತು. ಸ್ವತಃ ಅಲ್ಲಿನ ಮುಖ್ಯಮಂತ್ರಿಯವರೇ ತೀವ್ರ ಅಸಮಾಧಾನಗೊಂಡಿದ್ದರು. ಸೇನೆಯೂ ತಕ್ಷಣ ಪ್ರತಿಕ್ರಿಯೆ ನೀಡಿದ್ದು `ಈ ಘಟನೆಯ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಿ, ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳುತ್ತೇವೆ' ಎಂದಿದೆ.

ಇಂತಹ ಪರಿಸ್ಥಿತಿಯಲ್ಲಿ 370ನೇ ಕಲಮನ್ನು ಯಥಾರೀತಿಯಲ್ಲಿ ಜಾರಿಗೊಳಿಸುವುದೇ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಎಂಬುದು ಕಣಿವೆಯ ಒಂದು ವರ್ಗದ ಜನರ ಅಭಿಪ್ರಾಯವಾಗಿದೆ. ಭಾರತವು ಜಮ್ಮು ಮತ್ತು ಕಾಶ್ಮೀರವನ್ನು ಸೇರ್ಪಡೆಗೊಳಿಸುವಾಗ ನಡೆಸಿದ ಮಾತುಕತೆ, ಸಂಧಾನ, ಒಪ್ಪಂದಗಳ ಅಂಶಗಳೆಲ್ಲಾ ಈಗ ವಿಷಯಾಂತರವಾಗಿಬಿಟ್ಟಿವೆ. ಷೇಕ್ ಅಬ್ದುಲ್ಲಾ ಮತ್ತು ನೆಹರೂ ನಂತರದ ಪ್ರಧಾನಿ ಇಂದಿರಾ ಗಾಂಧಿಯವರ ನಡುವೆಯೂ ಮಾತುಕತೆ ನಡೆದು ಒಪ್ಪಂದಗಳಾಗಿವೆ. ಈ ಬಗ್ಗೆಯೂ ಈಗ ಸೂಕ್ಷ್ಮವಾಗಿ ಗಮನಿಸಬೇಕಿದೆ. ಈ ವಿವಾದಕ್ಕೆ ಸಂಬಂಧಿಸಿದಂತೆ ಕಾನೂನು ಮೂಲಕವೇ ಎಲ್ಲವನ್ನೂ ಮಾಡುತ್ತೇವೆಂದು ಹೊರಟರೆ ಅದಕ್ಕೆ ಕೊನೆ ಎಂಬುದಿರುವುದಿಲ್ಲ. ಜನರ ಮನಸ್ಸನ್ನು ಗೆಲ್ಲಬೇಕಿದೆ. ಜನರೂ ಗೆಲ್ಲಬೇಕಿದೆ. ಈ ದಿಕ್ಕಿನಲ್ಲಿ ಇದೀಗ ಕೇಂದ್ರ ಸರ್ಕಾರ ಕೆಲವು ಸಕಾರಾತ್ಮಕ ಹೆಜ್ಜೆಗಳನ್ನು ಇಡುತ್ತಿದೆ.

ಇಂತಹ ಸೂಕ್ಷ್ಮ ಸಂದರ್ಭದಲ್ಲಿ ಎಲ್.ಕೆ.ಅಡ್ವಾಣಿಯವರ ಮಾತುಗಳು ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗುತ್ತದೆಯಲ್ಲದೆ ಮತ್ತೇನೂ ಅಲ್ಲ. ಹಿಂದೆ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವಿದ್ದಾಗ `ಸಂವಿಧಾನದ 370ನೇ ಕಲಮಿನ ತಂಟೆಗೆ ನಾವು ಹೋಗುವುದಿಲ್ಲ' ಎಂದು ಮಿತ್ರಪಕ್ಷಗಳಿಗೆ ಆಗಿನ ಉಪ ಪ್ರಧಾನಮಂತ್ರಿ ಅಡ್ವಾಣಿಯವರು ಆಶ್ವಾಸನೆ ನೀಡಿ ಅದರಂತೆಯೇ ನಡೆದುಕೊಂಡಿದ್ದರಲ್ಲ. ನಾಳೆಯೇ ಮತ್ತೆ ಬಿಜೆಪಿ ನೇತೃತ್ವದ ಸರ್ಕಾರ ಬರುವ ಸಾಧ್ಯತೆ ಇದೆ ಎಂದಿಟ್ಟುಕೊಳ್ಳಿ, ಆಗ ಇದೇ ಅಡ್ವಾಣಿಯವರು `ನಾವು 370ನೇ ಕಲಮನ್ನು ಮುಟ್ಟುವುದಿಲ್ಲ' ಎಂದು ರಾಜಾರೋಷವಾಗಿ ಹೇಳುತ್ತಾರೆ. ಆ ರೀತಿ ಹೇಳಿ ಮಿತ್ರಪಕ್ಷಗಳನ್ನು ಒಲಿಸಿಕೊಂಡು ಅಧಿಕಾರದ ಗದ್ದುಗೆ ಏರಲು ಯತ್ನಿಸುತ್ತಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಈಗ 370ನೇ ಕಲಮನ್ನು ಕಿತ್ತು ಹಾಕಬೇಕೆಂದು ಹೇಳಿಕೆ ನೀಡಿದ್ದಾರೆ. ಇಂತಹ ಕಪಟ ಹೇಳಿಕೆಗಳ ಹಿಂದಿರುವ ಹುನ್ನಾರ ಅಡ್ವಾಣಿಯವರಿಗಷ್ಟೇ ಗೊತ್ತಿರಬಹುದು.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT