ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೀಟಲೆ ಪ್ರಕರಣ ದಳ್ಳುರಿಯಾಗಿದ್ದು ಹೇಗೆ?

Last Updated 22 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಪಶ್ಚಿಮ ಉತ್ತರ ಪ್ರದೇಶದಲ್ಲಿ ಧರ್ಮದ ಹೆಸರಿನಲ್ಲಿ ಜೀವಗಳ ಬೇಟೆ ನಡೆದಿದೆ.  ಒಂದೇ ಕುಟುಂಬದವರಂತಿದ್ದ ಜಾಟ್‌ ಮತ್ತು ಮುಸ್ಲಿಂ ಸಮುದಾಯದ  ಜನರು ಹಗೆತನಕ್ಕೆ ಇಳಿದಿದ್ದಾರೆ. ಹುಡುಗನೊಬ್ಬ ಯುವತಿಯನ್ನು ಚುಡಾಯಿಸಿದ ಎನ್ನುವ ಘಟನೆ 50 ಜೀವಗಳನ್ನು ಬಲಿ ಪಡೆದಿದೆ. 50 ಸಾವಿರಕ್ಕೂ ಹೆಚ್ಚು ಜನ ಹಳ್ಳಿಗಳನ್ನು ತೊರೆದಿದ್ದಾರೆ. ಊರು, ಕೇರಿ ಯಾವುದೂ ಬೇಡ; ಜೀವ ಉಳಿದರೆ ಸಾಕು ಎನ್ನುವ ವಾತಾವರಣ ಮುಜಫ್ಫರ್‌ನಗರ ಮತ್ತು ಸುತ್ತಮುತ್ತಲ ಜಿಲ್ಲೆಗಳಲ್ಲಿದೆ.

ಕೋಮು ಗಲಭೆಯೇ ಹೀಗೆ. ಅತ್ಯಂತ ಕ್ರೂರವಾದುದು. ಹೃದಯ, ಕಣ್ಣುಕಿವಿಗಳು ಇರುವುದಿಲ್ಲ. ನೆತ್ತರ ರುಚಿ ನೋಡುವ ಒಂದಂಶದ ಕಾರ್ಯಕ್ರಮ ಬಿಟ್ಟು, ಮತ್ಯಾವ ಉದ್ದೇಶ ಅದಕ್ಕಿರುವುದಿಲ್ಲ. ಒಮ್ಮೆ ಗಲಾಟೆ ಶುರುವಾದರೆ ಮುಗಿಯಿತು. ಆಮೇಲೆ ತಡೆ­ಯುವುದು ಕಷ್ಟ. ಕಾಳ್ಗಿಚ್ಚಿನಂತೆ ಹರಡುತ್ತಾ ಹೋಗುತ್ತದೆ. ಅಮಾಯಕರನ್ನು ಬಲಿ ಪಡೆಯುತ್ತದೆ. ಪಶ್ಚಿಮ ಉತ್ತರ ಪ್ರದೇಶದಲ್ಲಿ ನಡೆದದ್ದೂ  ಇದೇ.

ಪಶ್ಚಿಮ ಉತ್ತರ ಪ್ರದೇಶದಲ್ಲಿ ಜಾಟರು ಮತ್ತು ಮುಸ್ಮಿಮರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಎರಡೂ ಸಮುದಾಯಗಳ ಜನ ಪ್ರೀತಿ– ವಿಶ್ವಾಸದಿಂದ ಇದ್ದವರು. ಪರಸ್ಪರರಿಗೆ ಆಸರೆಯಾಗಿ ಬದುಕಿದವರು. ಕೋಮು ಗಲಭೆ, ಎರಡು ಸಮುದಾಯಗಳ ಸಂಬಂಧವನ್ನು ಹಾಳು ಮಾಡಿದೆ. ಅಪನಂಬಿಕೆ ಹುಟ್ಟಿಸಿದೆ. ಬಹಳ ವರ್ಷಗಳಿಂದ ಕಾಪಾಡಿಕೊಂಡು ಬಂದಿದ್ದ ಅನ್ಯೋನ್ಯವನ್ನು ನಾಶಪಡಿಸಿದೆ. ಕಳೆದು ಹೋಗಿರುವ ಹಳೇ ಬಾಂಧವ್ಯ ಮರಳಲು ಇನ್ನೆಷ್ಟು ವರ್ಷ ಹಿಡಿಯುವುದೋ?

ಒಂದು ಮಾತನ್ನು ಹೇಳಲೇಬೇಕು. ಮರಳುಗಾಡಿನಲ್ಲಿ ಬಾಯಾರಿದವರಿಗೆ ನೀರಿನ ಬುಗ್ಗೆಗಳು ಕಂಡರೆ ಖುಷಿ ಆಗುವಂತೆ ಗಲಭೆ ಪೀಡಿತ ಹಳ್ಳಿಗಳಲ್ಲೂ ಅಲ್ಲೊಂದು, ಇಲ್ಲೊಂದು ಮಾನವೀಯತೆ ಮೆರೆದ ಪ್ರಸಂಗಗಳು ನಡೆದಿವೆ. ಉಭಯ ಸಮುದಾಯಗಳ  ಜನ ದಾಳಿ ಕೋರರಿಂದ ನೆರೆಹೊರೆಯ ಕುಟುಂಬ ಗಳನ್ನು ರಕ್ಷಣೆ ಮಾಡಿದ್ದಾರೆ. ಕ್ರೌರ್ಯ ತೊಲಗಲಿ, ಮಾನವೀಯತೆ ಮೆರೆಯಲಿ ಎಂದು ಸಾರಿದ್ದಾರೆ.

ಪಶ್ಚಿಮ ಉತ್ತರ ಪ್ರದೇಶ, ರಾಜ್ಯದ ಸಕ್ಕರೆ ಕಣಜ. ಸಕ್ಕರೆ ಉದ್ಯಮ ಸಂಕಷ್ಟದಲ್ಲಿದೆ. ಕಬ್ಬು ನೀತಿಯಿಂದ ಸಕ್ಕರೆ ಕಾರ್ಖಾನೆಗಳು ಭಾರೀ ನಷ್ಟ ಅನುಭವಿಸುತ್ತಿವೆ. ದೊಡ್ಡ ಪ್ರಮಾಣದಲ್ಲಿ ಉದ್ಯಮ ಅವಲಂಭಿಸಿರುವ ಜಾಟ್‌ ಸಮುದಾಯ ಆರ್ಥಿಕ ಸಮಸ್ಯೆಗೆ ಸಿಕ್ಕಿಕೊಂಡಿದೆ. ಇನ್ನೊಂದೆಡೆ ಮುಸ್ಲಿಮರು ವ್ಯಾಪಾರ– ಉದ್ಯಮಗಳನ್ನು ನಡೆಸುತ್ತಿದ್ದಾರೆ. ತಮಗೆ ಸರಿಸಮನಾಗಿ ಈ ಸಮುದಾಯ ಬೆಳೆಯುತ್ತಿದೆ ಎನ್ನುವ ಸಣ್ಣ ಅಸಮಾಧಾನ ಜಾಟ್‌ ಸಮುದಾಯದಲ್ಲಿದೆ.

ಮಾಜಿ ಪ್ರಧಾನಿ ಚೌಧರಿ ಚರಣ್‌ ಸಿಂಗ್‌ ರಾಜಕೀಯವಾಗಿ ಜಾಟ್‌ ಮತ್ತು ಮುಸ್ಲಿಂ ಸಮುದಾಯವನ್ನು ಒಟ್ಟಿಗೆ ಕರೆದೊಯ್ಯುವ ಪ್ರಯತ್ನ ಮಾಡಿದ್ದರು. ನಂತರ ಅವರ ಪುತ್ರ ಅಜಿತ್‌ ಸಿಂಗ್‌ ಅವರನ್ನು ಮುಸ್ಲಿಮರು ನಿಧಾನವಾಗಿ ದೂರವಿಟ್ಟರು. ಮುಸ್ಲಿಮರ ಮತಗಳಿಗೆ ಮುಲಾಯಂ ಕೈ ಹಾಕಿದರು. ಮುಸ್ಲಿಂ, ಯಾದವರನ್ನು ಒಗ್ಗೂಡಿಸಲು ಸಫಲರಾದರು. ಇದುವರೆಗೂ ಸಮಾಜವಾದಿ ಪಕ್ಷದ ಕೈಹಿಡಿದಿದ್ದು ಇವೆರಡೂ ಸಮುದಾಯಗಳು. ಮುಂದೆಯೂ ಈ ಸೂತ್ರ  ಫಲಿಸುತ್ತದೆ ಎಂದು ಹೇಳುವುದು ಕಷ್ಟ. ಏಕೆಂದರೆ ಈಗಾಗಲೇ ಮುಸ್ಲಿಮರು ಸಮಾಜವಾದಿ ಪಕ್ಷವನ್ನು ಅನುಮಾನದಿಂದ ನೋಡುತ್ತಿದ್ದಾರೆ.

ಕೋಮು ಗಲಭೆ ಬಳಿಕ ಜಾಟರು ಮತ್ತು ಮುಸ್ಲಿಮರು ಬದ್ಧ ವೈರಿಗಳೆಂದೇ ಅಪಪ್ರಚಾರ ಮಾಡಲಾಗುತ್ತಿದೆ. ಎರಡೂ ಸಮುದಾಯಗಳ  ನಡುವಿನ ಅವಿಶ್ವಾಸ, ಅಪನಂಬಿಕೆ ದೂರ ಮಾಡುವ ಬದಲು ಉರಿಯುವ ಗಾಯಕ್ಕೆ ಉಪ್ಪು ಸವರಿದಂತೆ  ಇನ್ನಷ್ಟು ಹೆಚ್ಚಿಸುವ ಪಿತೂರಿ ನಡೆಯುತ್ತಿದೆ. ‘ಸಾಮ್ರಾಜ್ಯ’ ರಕ್ಷಿಸಿಕೊಳ್ಳಲು ವಸಾಹತುಶಾಹಿ ಅನುಸರಿಸಿದ ಕುತಂತ್ರಗಳನ್ನು ಮುಂದುವರಿಸಲಾಗಿದೆ. ಬೆಂದ ಮನೆಯಲ್ಲಿ ಬೊಂಬು ಎಳೆಯುವ ಕೆಲಸಕ್ಕೆ ರಾಜಕಾರಣಿಗಳು ಕೈಹಾಕಿದ್ದಾರೆ.

ಇತಿಹಾಸ ಓದಿದವರಿಗೆ ಇದು ನೆನಪಿರಬಹುದು. 1857ರ ಮೊದಲ ಸ್ವಾತಂತ್ರ್ಯ ಸಂಗ್ರಾಮವನ್ನು ವಿಫಲಗೊಳಿಸಲು ಬ್ರಿಟಿಷರು  ಬಳಸಿದ್ದು ಕೋಮು ದ್ವೇಷದ ಅಸ್ತ್ರವನ್ನೇ. ನೂರೈವತ್ತು ವರ್ಷಗಳಲ್ಲಿ ಎಷ್ಟೊಂದು ಹಿಂಸಾಚಾರಗಳು ನಡೆದಿವೆ. ಅವೆಲ್ಲವನ್ನೂ ನೆನಪು ಮಾಡಿಕೊಂಡು ಲೆಕ್ಕ ಹಾಕುವುದು ಕಷ್ಟ. ಆದರೆ, ವಿಭಜನೆ ಸಂದರ್ಭದ ಹಿಂಸಾಚಾರ, ಬಾಬರಿ ಮಸೀದಿ ನೆಲಸಮದ ಗಲಭೆ, ಹತ್ತು ವರ್ಷದ ಹಿಂದಿನ ಗುಜರಾತ್‌ ದಳ್ಳುರಿಗಳು ಇತಿಹಾಸದಲ್ಲಿ ಶಾಶ್ವತವಾಗಿ ಉಳಿಯುತ್ತವೆ. ಪಶ್ಚಿಮ ಉತ್ತರ ಪ್ರದೇಶದ್ದು ಗುಜರಾತ್‌ ನಂತರದ ಅತೀ ದೊಡ್ಡ ಗಲಭೆ ಎಂದು ವ್ಯಾಖ್ಯಾನಿಸಲಾಗಿದೆ.

ಸರ್ಕಾರ ಮನಸ್ಸು ಮಾಡಿದ್ದರೆ ಮೊಳಕೆಯಲ್ಲೇ ಈ ಕೋಮು ಗಲಭೆಯನ್ನು ಚಿವುಟಿ ಹಾಕಬಹುದಿತ್ತು. ಯಾವ ಶಕ್ತಿಗಳು ಅಡ್ಡಿ ಮಾಡಿದವೋ? ಗಲಭೆ ಮೂರು ವಾರ ಅಡೆತಡೆಯಿಲ್ಲದೆ ಮುಂದುವರಿಯಿತು. ಮುಜಫ್ಫರ್‌ನಗರದ ಕಿಡಿಗಳು ಅಕ್ಕಪಕ್ಕದ ಜಿಲ್ಲೆಗಳಿಗೂ ಹರಡಿತು.  ಮುಖ್ಯಮಂತ್ರಿ ಅಖಿಲೇಶ್‌ ಅದಕ್ಷತೆ, ಅನುಭವದ ಕೊರತೆ ಮತ್ತೊಮ್ಮೆ ಎದ್ದು ಕಂಡಿತು.

ಅತ್ಯಂತ ಕಿರಿಯ ವಯಸ್ಸಿನ ಮುಖ್ಯಮಂತ್ರಿ ಅಖಿಲೇಶ್‌  ಅವರಿಂದ ರಾಜ್ಯ ಬಹಳಷ್ಟು ನಿರೀಕ್ಷಿಸಿತ್ತು. ಆದರೆ, ಅವರಿಗಿನ್ನೂ ಆಡಳಿತದ ಮೇಲೆ ಹಿಡಿತ ಸಿಕ್ಕಂತೆ ಕಾಣುತ್ತಿಲ್ಲ. ಉತ್ತರ ಪ್ರದೇಶದ ರಾಜಕಾರಣವನ್ನು ಹತ್ತಿರದಿಂದ ಕಂಡವರು ಹೇಳುವಂತೆ ಅಖಿಲೇಶ್‌ ನೆಪಕ್ಕೆ ಮಾತ್ರ ಮುಖ್ಯಮಂತ್ರಿ. ಅವರ ಕೈಯಲ್ಲಿ ಏನೂ ಇಲ್ಲ. ಪೂರ್ಣ ಅಧಿಕಾರ ಇರುವುದು ಮುಲಾಯಂ ಸಿಂಗ್‌ ಬಳಿಯಂತೆ.

ಗಲಭೆ ಕುರಿತು ಅಧ್ಯಯನ ನಡೆಸಿರುವ ‘ಸೆಂಟರ್‌ ಫಾರ್‌ ಪಾಲಿಸಿ ಅನಾಲಿಸಿಸ್‌’ ರಾಜ್ಯ ಸರ್ಕಾರದ ವೈಫಲ್ಯಗಳನ್ನು ಪಟ್ಟಿ ಮಾಡಿದೆ. ಪೊಲೀಸರು ಮುನ್ನೆಚ್ಚರಿಕೆ ವಹಿಸಿದ್ದರೆ ಗಲಭೆ ತಪ್ಪಿಸಬಹುದಿತ್ತು ಎಂದು ಹೇಳಿದೆ. ನಿವೃತ್ತ ಐಎಎಸ್‌ ಅಧಿಕಾರಿ ಹರ್ಷ್‌ ಮಂದಿರ್‌, ಗಡಿ ಭದ್ರತಾ ಪಡೆ ನಿವೃತ್ತ ಮಹಾ ನಿರ್ದೇಶಕ ಇ.ಎನ್. ರಾಮಮೋಹನ್‌, ಜೆಎನ್‌ಯು ಪ್ರಾಧ್ಯಾಪಕ ಕಮಲ್‌ ಮಿತ್ರ ಮುಂತಾದ ಗಣ್ಯರು  ಇದರಲ್ಲಿದ್ದಾರೆ.

ಸಮಾಜವಾದಿ ಪಕ್ಷ, ಮುಸ್ಲಿಮರ  ಪಕ್ಷಪಾತಿಯಂತೆ ವರ್ತಿಸಿದೆ ಎಂಬ  ಆರೋಪ ಇದೆ. ‘ಅಲ್ಪಸಂಖ್ಯಾತ ಸಮುದಾಯದ ಯುವಕರು ಕಾನೂನು ಕೈಗೆ ತೆಗೆದುಕೊಂಡರೂ ಸರ್ಕಾರ ಮೂಕ ಪ್ರೇಕ್ಷಕವಾಗಿತ್ತು. ಗಲಭೆ ಬಳಿಕವೂ ಜಾಟ್‌ ಸಮುದಾಯದವರ ಮೇಲೆ ಮಾತ್ರ ಮೊಕದ್ದಮೆ ದಾಖಲು ಮಾಡಿತೇ ವಿನಾ ಮುಸ್ಲಿಮರ ವಿರುದ್ಧ ಕ್ರಮಕ್ಕೆ ಮುಂದಾಗಲಿಲ್ಲ’ ಎಂಬ ದೂಷಣೆಗೆ ಒಳಗಾಗಿದೆ.

ಬಿಜೆಪಿ, ಜಾಟರನ್ನು ಒಗ್ಗೂಡಿಸುತ್ತಿದೆ. ಹಿಂದೂತ್ವದ ಕಾರ್ಡ್‌ ಬಳಸಲು ಮೋದಿ ಅವರ ನಿಷ್ಠಾವಂತ ಅಮಿತ್ ಷಾ ಅವರನ್ನು ಉತ್ತರ ಪ್ರದೇಶಕ್ಕೆ ಕಳುಹಿಸಿದೆ. ದೇಶದ ರಾಜಕಾರಣದಲ್ಲಿ ನಿರ್ಣಾಯಕ ಪಾತ್ರ ವಹಿಸುವ ದೊಡ್ಡ ರಾಜ್ಯದ ಹೊಣೆಯನ್ನು ಷಾ ಅವರಿಗೆ ವಹಿಸಿದಾಗಲೇ ಏನೋ ಕಾದಿದೆ ಎಂದು ಅನುಮಾನ ಬಂದಿತ್ತು. ಅಚ್ಚರಿ ಸಂಗತಿ ಎಂದರೆ ಗಲಭೆ ಸ್ಫೋಟಗೊಂಡ ಬಳಿಕ ಅಮಿತ್‌ ಷಾ ಉತ್ತರ ಪ್ರದೇಶದಿಂದ ನಾಪತ್ತೆ ಆಗಿದ್ದಾರೆ. ಅಪ್ಪಿತಪ್ಪಿ ಅವರ ಹೆಸರನ್ನು ಯಾರೂ ಪ್ರಸ್ತಾಪಿಸಿಲ್ಲ. ಆದರೆ, ಬಿಜೆಪಿಯು ಗಲಭೆ ಹರಡಲು ಪ್ರಯತ್ನ ಮಾಡಿದೆ. ರಾಜ್ಯದಲ್ಲಿ ಕಳೆದುಕೊಂಡಿರುವ ನೆಲೆ ಪುನರ್‌ ಸ್ಥಾಪನೆಗೆ ಮುಂದಾಗಿದೆ. ಸತ್ಯ ಶೋಧನಾ ಸಮಿತಿ ಇದೇ ಆರೋಪ ಹೊರಿಸಿದೆ.

ಪಕ್ಷಪಾತ ಯಾರೇ ಮಾಡಿದರೂ ತಪ್ಪು. ಸಮಾಜವಾದಿ ಪಕ್ಷ ಮುಸ್ಲಿಮರನ್ನು ಓಲೈಸುವುದನ್ನು ಅಥವಾ ಬಿಜೆಪಿ ಹಿಂದೂಗಳನ್ನು ಒಗ್ಗೂಡಿಸುವುದನ್ನು ಒಪ್ಪಲು ಸಾಧ್ಯವಿಲ್ಲ. ಸಾಚಾರ್ ಸಮಿತಿ ಪ್ರಕಾರ ಮುಸ್ಲಿಮರು ಸಾಮಾಜಿಕವಾಗಿ,  ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ. ಶಿಕ್ಷಣ, ಉದ್ಯೋಗ, ಕೃಷಿ ಕ್ಷೇತ್ರಗಳಲ್ಲಿ ರಾಷ್ಟ್ರೀಯ ಸರಾಸರಿಗಿಂತ ಹಿಂದೆ ಬಿದ್ದಿದ್ದಾರೆ. 2006ರಲ್ಲಿ ವರದಿ ಹೊರಬಂದಿದೆ.

ಅಲ್ಪಸಂಖ್ಯಾತರಿಗೆ ಸೂಕ್ತ ಅವಕಾಶ ಕೊಡುವುದನ್ನು ವಿರೋಧಿಸುವುದು ಸರಿಯಲ್ಲ.  ಆದರೆ, ಕಾಂಗ್ರೆಸ್‌ ಮತ್ತಿತರ ಪಕ್ಷಗಳು ಈ ಸಮುದಾಯವನ್ನು ‘ಮತ ಬ್ಯಾಂಕ್‌’ ಎಂದು ಪರಿಗಣಿಸಿವೆಯೇ ವಿನಾ  ಅದರಾಚೆಗೆ ಆಲೋಚಿಸಿಲ್ಲ. ಅವರ ಪ್ರಗತಿಗಾಗಿ ಪ್ರಾಮಾಣಿಕ ಕೆಲಸ ಮಾಡಿದ್ದರೆ ಈಗಿನ ಪರಿಸ್ಥಿತಿ ಇರುತ್ತಿರಲಿಲ್ಲ.  ಮುಸ್ಲಿಮರು ಈ ಸತ್ಯ ಅರ್ಥ ಮಾಡಿ ಕೊಳ್ಳಬೇಕು. ಮುಖ್ಯವಾಹಿನಿಗೆ ಬರಬೇಕು. ಮಿಕ್ಕವರಂತೆ ಅವರಿಗೂ ಸಮಾನ ಅವಕಾಶಗಳಿವೆ.

  ಈಗಿನ ಪರಿಸ್ಥಿತಿಯಲ್ಲಿ ರಾಜಕೀಯ ಪಕ್ಷಗಳ ಕಾರ್ಯಕ್ರಮ, ಆದ್ಯತೆಗಳು ಬೇರೆಯೇ ಆಗಿರಬೇಕಿತ್ತು. ಕುಸಿದಿರುವ ರೂಪಾಯಿ ಮೌಲ್ಯ, ಹಣದುಬ್ಬರ, ಬೆಲೆ ಏರಿಕೆ, ಅನಕ್ಷರತೆ, ನಿರುದ್ಯೋಗ, ಅಪೌಷ್ಟಿಕತೆ ಮುಂತಾದ ವಿಷಯಗಳ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಿತ್ತು. ಅದನ್ನು ಬಿಟ್ಟು ಧರ್ಮದ ಹೆಸರಲ್ಲಿ ಸಮಾಜ ಒಡೆಯುವ ಕೆಲಸ ಮಾಡುತ್ತಿವೆ. ಹಿಂದೂ– ಮುಸ್ಲಿಂ ಗಲಭೆ ಹುಟ್ಟುಹಾಕುತ್ತಿವೆ.

ಉತ್ತರ ಪ್ರದೇಶದ ಜನ ಬುದ್ಧಿವಂತರು. ಸಮಾಜವಾದಿ ಸರ್ಕಾರವನ್ನು ಹಿಂದಿನ ಮಾಯಾವತಿ ಆಡಳಿತದೊಂದಿಗೆ ಹೋಲಿಸುತ್ತಿದ್ದಾರೆ. ಬಿಎಸ್‌ಪಿ ಸರ್ಕಾರದಲ್ಲಿ ಮತೀಯ ಗಲಭೆಗಳಿಗೆ ಅವಕಾಶವಿರಲಿಲ್ಲ. ರೌಡಿಗಳ ಬೆನ್ನುಮೂಳೆ ಮುರಿದಿದ್ದರು. ಅಖಿಲೇಶ್‌ ಅಧಿಕಾರಕ್ಕೆ ಬಂದ ಒಂದೂವರೆ ವರ್ಷದಲ್ಲಿ 30ಕ್ಕೂ ಹೆಚ್ಚು ಮತೀಯ ಗಲಭೆಗಳು ನಡೆದಿವೆ. ರೌಡಿಗಳ ಉಪಟಳ ಹೆಚ್ಚಿದೆ ಎಂದು ಆರೋಪಿಸುತ್ತಿದ್ದಾರೆ.

ಉತ್ತರ ಪ್ರದೇಶ ಸರ್ಕಾರದಂತೆ ಕೇಂದ್ರ ಸರ್ಕಾರವೂ ಹೊಣೆಗಾರಿಕೆ ನಿರ್ವಹಿಸಲು ವಿಫಲವಾಗಿದೆ. ಎಲ್ಲವನ್ನೂ ಮೌನವಾಗಿ ನೋಡಿಕೊಂಡು ಕುಳಿತಿದೆ. ಯಾವುದೇ ರಾಜ್ಯದಲ್ಲಿ ಕಾನೂನು– ಸುವ್ಯವಸ್ಥೆ ಕುಸಿದುಬಿದ್ದಾಗ, ಸಾರ್ವಜನಿಕರ ಪ್ರಾಣ ಮತ್ತು ಆಸ್ತಿಪಾಸ್ತಿ ರಕ್ಷಣೆ ಕೇಂದ್ರದ ಹೊಣೆ. ಸಂವಿಧಾನ ಇದಕ್ಕೆ ಅವಕಾಶ ಮಾಡಿಕೊಟ್ಟಿದೆ. ರಾಜ್ಯಪಾಲರಿಂದ ವರದಿ ಪಡೆದು ಸಂವಿಧಾನದ 356ನೇ ಕಲಂ ಅನ್ವಯ ರಾಜ್ಯ ಸರ್ಕಾರವನ್ನು ವಜಾ ಮಾಡುವ ಅಧಿಕಾರವಿದೆ.

ಅವಕಾಶವಾದಿ ರಾಜಕಾರಣಕ್ಕೆ ಜೋತು ಬಿದ್ದಿರುವ ಕೇಂದ್ರ ಸರ್ಕಾರ ಅಂಥ ಸಾಹಸಕ್ಕೆ ಕೈ ಹಾಕುವುದಿಲ್ಲ. ಯುಪಿಎ ಮಿತ್ರ ಕೂಟದಲ್ಲಿ ಸೇರಿರುವ ಪ್ರಾದೇಶಿಕ ಪಕ್ಷಗಳು ಅದಕ್ಕೆ ಆಸ್ಪದ ಕೊಡುವುದು ಅನುಮಾನ. ಈ ಮಾತು ಬರೀ ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರಕ್ಕೆ ಮಾತ್ರ ಅನ್ವಯ ಆಗುವುದಿಲ್ಲ. 2002ರಲ್ಲಿ ಗುಜರಾತ್‌ನಲ್ಲಿ ಗಲಭೆ ನಡೆದಾಗ ಕೇಂದ್ರದಲ್ಲಿ ಆಡಳಿತ ನಡೆಸಿದ್ದ ಅಟಲ್‌ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರಕ್ಕೂ ಅನ್ವಯಿಸುತ್ತದೆ. ಮುಲಾಜಿಲ್ಲದೇ ಆಗ ತನ್ನದೇ ಸರ್ಕಾರವನ್ನು ವಜಾ ಮಾಡಬಹುದಿತ್ತು. ಏನು ಒತ್ತಡವಿತ್ತೋ? ವಾಜಪೇಯಿ ಕೂಡಾ ಅವಕಾಶವಾದಿ ರಾಜಕಾರಣ ಮಾಡಿದರು. ಗುಜರಾತ್‌ ಮುಖ್ಯಮಂತ್ರಿ ‘ರಾಜಧರ್ಮ’ ಪಾಲಿಸಬೇಕು ಎಂದು ಹೇಳಿ ಸುಮ್ಮನಾದರು.

ಉತ್ತರ ಪ್ರದೇಶದ ಗಲಭೆ ಯನ್ನು ರಾಜಕೀಯಕ್ಕೆ ಬಳಸಿಕೊಳ್ಳಲು ಎಲ್ಲಾ  ಪಕ್ಷಗಳು ಪೈಪೋಟಿಗೆ ಇಳಿದಿವೆ. ಸಮಾಜವಾದಿ ಪಕ್ಷ ಮತ್ತು ಬಿಜೆಪಿ ನೇರವಾಗಿ ಅಖಾಡಕ್ಕೆ ಇಳಿದಿವೆ. ಮಧ್ಯದಲ್ಲಿ ಇಣುಕಲು ಕಾಂಗ್ರೆಸ್‌ ಪ್ರಯತ್ನಿಸಿದೆ. ಬಹುಜನ ಸಮಾಜ ಪಕ್ಷ ಬಹಿರಂಗವಾಗಿ ಎಲ್ಲೂ ಕಾಣಿಸಿಕೊಂಡಿಲ್ಲ. ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಪಡೆಯಲು ಸಫಲವಾದರೆ ಕೇಂದ್ರದಲ್ಲಿ ನಿರ್ಣಾಯಕ ಪಾತ್ರ ವಹಿಸಬಹುದು ಎನ್ನುವ ಲೆಕ್ಕಾಚಾರ ಎಸ್‌ಪಿ ಮತ್ತು ಬಿಎಸ್‌ಪಿಗಿದೆ. ಬಿಜೆಪಿ ಪ್ರಾಬಲ್ಯ ಮೆರೆದರೆ ಮೋದಿ ದಾರಿ ಸುಲಭವಾಗಬಹುದು. ಇಷ್ಟು ಬೇಗ ರಾಜಕೀಯ ಪಕ್ಷಗಳ ಭವಿಷ್ಯ ನಿರ್ಧಾರ ಮಾಡುವುದು ಕಷ್ಟ.

ನಿಮ್ಮ ಅನಿಸಿಕೆ ತಿಳಿಸಿeditpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT