ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೀನ್ಯಾದಲ್ಲಿ ಕನ್ನಡದ ಶ್ರೀಗಂಧ

Last Updated 15 ಮಾರ್ಚ್ 2014, 19:30 IST
ಅಕ್ಷರ ಗಾತ್ರ

ಆವಿಮಾನದಲ್ಲಿ ಅರ್ಧ ಭಾಗದಷ್ಟು ಜನ ಕನ್ನಡಿಗರೇ ತುಂಬಿದ್ದೆವು. ಯಾನದುದ್ದಕ್ಕೂ ವೈಮಾನಿಕ ಚಲನೆಯ ಸದ್ದಿನ ಏಕತಾನತೆಯನ್ನು ಮುರಿದು ಕನ್ನಡದ ಕಲರವ ಜಕ್ಕಣಕ್ಕ ಮಾಡುತ್ತಿತ್ತು.

ಯಾಕೆಂದರೆ ಅಲ್ಲಿದ್ದ ಕನ್ನಡಿಗರಲ್ಲಿ ನುರಿತ ಜನಪದ ಮತ್ತು ಯಕ್ಷಗಾನ ಕಲಾವಿದರು, ಜಿಂಕೆಗಳಂತೆ ಚಿಮ್ಮುವ ಭರತನಾಟ್ಯ ಕಲಾವಿದೆಯರು, ಚತುರೋಕ್ತಿಗಳನ್ನು ಸಿಡಿಸುವ ಹಾಸ್ಯಪಟುಗಳು, ಉದ್ಘೋಷ ಶ್ರುತಿಯ ಗಾಯಕ ಗಾಯಕಿಯರು, ಶ್ವೇತ ಮೇಘ ಮಾಲೆಯ ಮೇಲೂ ಯದ್ವಾ ತದ್ವಾ ವರ್ಣಮಯ ಕಾವ್ಯ ರಚಿಸುವವರು, ಶೂನ್ಯ ಬಂಡವಾಳ ಹಾಕಿ ಬಹಳ ಸಂಪಾದನೆ ಮಾಡಿದೆ ಎನ್ನುವ ಅಪರೂಪದ ಕೃಷಿಕರು, ಲಯಬದ್ಧ ಪ್ರಾಸಬದ್ಧ ನಿರೂಪಕರು, ಪ್ರಾಥಮಿಕ ಶಾಲೆಯಲ್ಲೂ-ವಿಶ್ವವಿದ್ಯಾನಿಲಯದಲ್ಲೂ ಪಾಠ ಹೇಳುವ ಮಾಸ್ತರುಗಳು, ಸಾಮಾಜಿಕ ವೈದ್ಯರು, ಸಮಾಜ ಸೇವಕರು, ಗಣ್ಯರು, ಸಂಘಟಕರು, ಸುಮ್ಮನೆ ಪ್ರತಿನಿಧಿಗಳಾಗಿ ಬಂದ ಕನ್ನಡಾಸಕ್ತರು ಮುಂತಾದವರೆಲ್ಲ ಕೂಡಿ ಮಿನಿ ಕನ್ನಡ ನಾಡೊಂದು ಲೋಹದ ಪಕ್ಷಿ ರೂಪ ತಾಳಿ ಹಾರುವಂತಿತ್ತು.

ಎಲ್ಲ ಸಂಭ್ರಮಗಳ ನಡುವೆ ದುರಂತ ಪ್ರಜ್ಞೆ ಸುಳಿದು ಹೋಗುವುದು ನನ್ನ ದುರ್ಗುಣ. ಈಗ ಏನೋ ಒಂದು ಹೆಚ್ಚೂಕಮ್ಮಿಯಾಗಿ ವಿಮಾನವು ಕೆಳಗಿನ ಹಿಂದೂ ಮಹಾಸಾಗರಕ್ಕೆ ಬಿದ್ದರೆ ಕನ್ನಡ ನಾಡಿಗೆ ತುಂಬಲಾರದ ನಷ್ಟವೋ, ಗಣನೀಯ ಲಾಭವೋ ಎಂದು ಯೋಚಿಸತೊಡಗಿದೆ. ಆದರೆ ಯಾರಿಗೂ ಅದನ್ನು ಹೇಳುವ ಧೈರ್ಯ ಮಾಡಲಿಲ್ಲ. ಕೀನ್ಯಾದ ಕನ್ನಡ ಸಾಂಸ್ಕೃತಿಕ ಸಂಘದ ಆಹ್ವಾನದ ಮೇರೆಗೆ ಹೃದಯ ವಾಹಿನಿ ಬಳಗದ ಉತ್ಸಾಹಿ ಸಂಘಟಕ ಮಂಜುನಾಥ್ ಸಾಗರ್ ನಮ್ಮನ್ನೆಲ್ಲ ಹೆಕ್ಕಿ ಕರೆದುಕೊಂಡು ಹೋಗುತ್ತಿದ್ದರು. ಕೀನ್ಯಾ ಕನ್ನಡಿಗರ ಜತೆಗೂಡಿ ಹತ್ತನೇ ವಿಶ್ವಕನ್ನಡ ಸಂಸ್ಕೃತಿ ಸಮ್ಮೇಳನವನ್ನು ಮಾರ್ಚ್ ೧ಮತ್ತು ೨ರಂದು ನೈರೋಬಿಯಲ್ಲಿ ಆಚರಿಸಲು ಹೊರಟಿದ್ದೆವು. ಆಫ್ರಿಕೆ ಎಂಬ ಕಪ್ಪುಕನ್ನೆಯ ನೆಲದ ಮೇಲೆ ಕನ್ನಡದ ಖುಷಿಯ ಹೂಗಳನ್ನರಳಿಸಲು ಸರ್ವಸನ್ನದ್ಧರಾಗಿದ್ದೆವು.

ನೈರೋಬಿಯಲ್ಲಿಳಿದಾಗ ನಡುಹಗಲು. ಮೊದಲ ಬಾರಿಗೆ ನೋಡುವಾಗಲೂ ಎಲ್ಲೋ ನೋಡಿದಂತಿದೆ ಎನಿಸುವ ಊರು. ನೆನಪಾದದ್ದು ಈಜಿಪ್ಟಿನ ಕೈರೋ ನಗರ. ಅದರ ಚಿಕ್ಕತಮ್ಮನಂತಿದ್ದ ನೈರೋಬಿ. ಕೀನ್ಯಾ ಕನ್ನಡ ಸಂಘದ ಸ್ಥಾಪಕ ಅಧ್ಯಕ್ಷ ಅಶೋಕ್‌ ರೆಡ್ಡಿ ವಿಮಾನ ನಿಲ್ದಾಣದೊಳಕ್ಕೆ ಬಂದು ನಮ್ಮನ್ನು ಬರಮಾಡಿಕೊಳ್ಳದಿದ್ದರೆ ಕಸ್ಟಮ್ಸ್ ಮತ್ತು ಇಮಿಗ್ರೇಶನ್ ಎಂಬ ಹೆಸರಿನ ಲಂಚದ ಪೀಡೆಗಳಿಂದ ನಾವು ಹಣ್ಣಾಗುತ್ತಿದ್ದೆವು. ಸ್ಥಳೀಯ ಭಾಷೆ ಸೊಹಿಲಿಯನ್ನು ಚೆನ್ನಾಗಿ ಬಲ್ಲ ಅಶೋಕ್‌ರ ಕಾರಣದಿಂದ ಕೈ ಬೀಸಿ ಹೊರ ನಡೆದೆವು. ನಾವು ಬೆಂಗಳೂರಿನಲ್ಲಿ ಕಷ್ಟಪಟ್ಟು ಚುಚ್ಚಿಸಿಕೊಂಡಿದ್ದ ಹಳದಿ ಜ್ವರದ ಇಂಜೆಕ್ಷನ್ ಮತ್ತು ನಾಲಗೆಯ ಮೇಲೆ ತೊಟ್ಟಿಕ್ಕಿಸಿ­ಕೊಂಡಿದ್ದ ಪೋಲಿಯೊ ಹನಿಗಳ ಬಗ್ಗೆ ಜತನದಿಂದ ಕಂಕುಳಲ್ಲಿ ಇರುಕಿಕೊಂಡು ಹೋಗಿದ್ದ ನಮ್ಮ ದಾಖಲೆಗಳನ್ನು ಅಲ್ಲಿ ಯಾರೂ ಕ್ಯಾರೇ ಅನ್ನಲಿಲ್ಲ.

ಹೊರಬಂದರೆ ಮುಂಜಾನೆಯಂಥ ಮಧ್ಯಾಹ್ನ. ಎಳೆಬಿಸಿಲು. ಅಶೋಕ್‌ ರೆಡ್ಡಿ ತಮ್ಮ ಹುಲಿಯಂಥ ಕಾರಿನಲ್ಲಿ ಕೂರಿಸಿಕೊಂಡು ಜಕರಂದ ಹೋಟೆಲ್ಲಿನತ್ತ ಹೊರಟರು. ಬೆಂಗಳೂರನ್ನೂ ಮೀರಿಸುವ ಟ್ರಾಫಿಕ್ಕು. ಒಂದು ಕಡೆ ಮಾಲ್‌ಗಳು. ಮತ್ತೊಂದು ಕಡೆ ಸ್ಲಮ್ಮುಗಳು. ರಸ್ತೆ ತುಂಬ ಕಾರುಗಳು. ಫುಟ್‌ಪಾತ್‌ನಲ್ಲಿ ವೇಗವಾಗಿ ನಡೆದೋಡುತ್ತಿದ್ದ ಜನ. ನಿಜವಾಗಿಯೂ ಅವರು ಓಡುತ್ತಿದ್ದರು! ದ್ವಿಚಕ್ರವಾಹನಗಳೇ ನಾಪತ್ತೆ.

ಮಧ್ಯಮವರ್ಗವೇ ಇಲ್ಲದ ಸಮಾಜ. ಕಾರಿನವರು ಮತ್ತು ಬರಿಗಾಲಿನವರು ಎಂಬ ಎರಡೇ ವರ್ಗ. ಭಾರತದಂತೆಯೇ ಕಂಠಪೂರ್ತಿ ಭ್ರಷ್ಟಾಚಾರ. ‘ಸಮಸ್ಯೆಗಳು ನಿಮಗಿರಲಿ-, ಅಧಿಕಾರ ಮಾತ್ರ ನನಗಿರಲಿ’ ಎಂದು ನೆಮ್ಮದಿಯಿಂದಿರುವ ಅಧ್ಯಕ್ಷ ಉಹುರು ಕಿನ್ಯಾಟ. ನಮ್ಮ ಕಷ್ಟಕಾಲಕ್ಕಾದೀತಾ ಎಂದು ಸೊಹಿಲಿ ಭಾಷೆಯ ಮೂರು ಪದಗಳನ್ನು ಅಶೋಕ್‌ರಿಂದ ಕಲಿತೆವು. ಜಾಂಬೋ ಎಂದರೆ ಹಲೋ ಅಥವಾ ನಮಸ್ಕಾರ, ಅಸಾಂಟೆ ಎಂದರೆ ವಂದನೆಗಳು, ಕರೀಬು ಅಂದರೆ ಸ್ವಾಗತ. ಇದಾದ ನಂತರ ಅವರು ಕೀನ್ಯಾದ ಚರಿತ್ರೆ, ಬ್ರಿಟಿಷರ ವಸಾಹತುಷಾಹಿ ದರ್ಬಾರು, ಅಲ್ಲಿನ ಸುಂದರ ಭೂಮಿ, ಫಲವತ್ತತೆ, ನದಿಗಳು, ಪರ್ವತ, ಪ್ರಾಣಿ ಜಗತ್ತು, ಜನರ ಒಳ್ಳೆಯತನ ಇತ್ಯಾದಿಗಳನ್ನು ಕುರಿತು ಅಭಿಮಾನದಿಂದ ಗಂಭೀರವಾಗಿ ಮತ್ತು ವಿವರವಾಗಿ ಮಾತನಾಡಿದರು. ಕೊನೆಯಲ್ಲಿ ಏನಾದರೂ ಪ್ರಶ್ನೆಗಳಿವೆಯೆ? ಎಂದರು.

ರಾಮನಗರದ ಉದಯೋನ್ಮುಖ ಕವಿಯೊಬ್ಬರು ಅಷ್ಟೇ ಗಾಂಭೀರ್ಯದಿಂದ ‘ಇಲ್ಲಿ ಮೇಕೆ ಮಾಂಸ ಕೇಜಿಗೆ ಈಗ ಎಷ್ಟು ನಡೀತಾ ಇದೆ?’ ಎಂದರು. ಅಲ್ಲಿಗೆ ಸ್ತಬ್ಧವಾಯಿತು ಸಂಭಾಷಣೆ. ಹೊರಗೆ ಭೀಕರ ಟ್ರಾಫಿಕ್ಕು. ಸಂಸ್ಕೃತಿ ವಿನಿಮಯವು ಎಷ್ಟೊಂದು ಅಸೂಕ್ಷ್ಮ ಮತ್ತು ರುಚಿಕರ ವಿಷಯಗಳನ್ನಾಧರಿಸಿದೆ ಎಂದು ಚಕಿತನಾದೆ. ಓಸ್ವಾಲ್ ಸಭಾಂಗಣದಲ್ಲಿ ಚಿಕ್ಕ-ಚೊಕ್ಕ ಸಮ್ಮೇಳನ. ಕನ್ನಡ ಸಾಹಿತ್ಯ ಸಮ್ಮೇಳನಗಳು ಇಲ್ಲಿ ಹೇಗಿರುತ್ತವೆ? ಗೋಷ್ಠಿಗಳು, ಪ್ರಬಂಧ ಮಂಡನೆ, ಸಂಗೀತ, ನೃತ್ಯ, ಸ್ಮರಣ ಸಂಚಿಕೆ ಬಿಡುಗಡೆ, ಭಾವಗೀತೆ ಗಾಯನ, ಗಣ್ಯರಿಗೆ-, ಸಾಧಕರಿಗೆ ಸನ್ಮಾನ, ಹಾಸ್ಯಗೋಷ್ಠಿ, ಕವಿಗೋಷ್ಠಿ... ಇತ್ಯಾದಿ. ನೈರೋಬಿಯಲ್ಲಿ ಇವೆಲ್ಲವೂ ಇದ್ದವು. ಆದರೆ ಅವು ಔಪಚಾರಿಕವಾಗಿರದೆ ಆಪ್ತವಾಗಿದ್ದುವು.

ಆಫ್ರಿಕಾ ಖಂಡದ ಮೊದಲ ಕನ್ನಡ ಸಮಾವೇಶವಾದ್ದರಿಂದ ಸಡಗರ- ಸಂಭ್ರಮಗಳಿದ್ದುವು. ಚಿಗುರುತ್ತಿರುವ ಸಂಘಟನೆಯಾದ್ದರಿಂದ ಬಿರುಕು, ಮನಸ್ತಾಪ, ರಾಜಕೀಯಗಳು ಕಾಣಿಸುತ್ತಿರಲಿಲ್ಲ. ಎಲ್ಲರೂ ಎಲ್ಲ ಕೆಲಸಗಳನ್ನು ಹಂಚಿಕೊಂಡು ನಿರ್ವಹಿಸುತ್ತಿದ್ದರು. ಕೆಲವು ಕಾರ್ಯಕ್ರಮಗಳಂತೂ ಉತ್ಕೃಷ್ಟ ದರ್ಜೆಯವಾಗಿದ್ದುವು. ಇಲ್ಲಿಂದ ಹೋದವರು ನೀಡಿದ ಕಾರ್ಯಕ್ರಮಗಳಿಗೆ ಸರಿಸಾಟಿಯಾಗಿ ಕೆಲವೊಮ್ಮೆ ಅವರಿಗಿಂತ ಒಂದು ಕೈ ಮುಂದಾಗಿ ಕೀನ್ಯಾದ ಕನ್ನಡಿಗರು ತಮ್ಮ ಪ್ರತಿಭೆಯನ್ನು ಉತ್ಸಾಹದಿಂದ ಪ್ರದರ್ಶಿಸಿದರು.

ಅವರು ಮಕ್ಕಳನ್ನು ತೊಡಗಿಸಿದ್ದು ವಿಶೇಷ. ಎರಡೂ ತಂಡದವರು ಪ್ರದರ್ಶಿಸಿದ, ನಮ್ಮ ಐತಿಹ್ಯ ಮತ್ತು ಪರಂಪರೆಯನ್ನು ನೆನಪಿಸುವ ಗೋವಿನ ಹಾಡು, ಒನಕೆ ಓಬವ್ವ, ಅಭಿಮನ್ಯು ಕಾಳಗ, ಪೂಜಾ ಕುಣಿತ, ಡೊಳ್ಳು ಕುಣಿತ, ಕೃಷ್ಣಲೀಲೆ, ಹಚ್ಚೇವು ಕನ್ನಡದ ದೀಪ ಎಲ್ಲರ ಗಮನ ಸೆಳೆದವು. ಶ್ರೀಗಂಧ ಎಂಬ ಸ್ಮರಣ ಸಂಚಿಕೆ ಸಂಗ್ರಹಯೋಗ್ಯ ಎನ್ನುವಷ್ಟು ಚೆನ್ನಾಗಿತ್ತು.

ಕೀನ್ಯಾ ಕನ್ನಡ ಕೂಟದ ಸದಸ್ಯರು ಇದನ್ನು ಅರ್ಥಪೂರ್ಣವಾಗಿ ರೂಪಿಸಿದ್ದರು. ಪಂಪನ ಸಾಲುಗಳಿಂದ ಆಧುನಿಕ ಕನ್ನಡ ಬರಹಗಾರರವರೆಗೆ ಅಲ್ಲಿ ಮಾಹಿತಿಗಳಿದ್ದುವು. ಸಂಘದ ಅಧ್ಯಕ್ಷ ಜಯತೀರ್ಥ ಕರ್ಜಗಿ, ಕಾರ್ಯದರ್ಶಿ ಶ್ರೀರಾಮ ಫಡ್ಕೆ, ಮೋಕ್ಷಗುಂಡಂ ವಿಶ್ವೇಶ್ವರಯ್ಯ ಅವರ ಮೊಮ್ಮಗಳು ರಮಾ, ಆಕೆಯ ಪತಿ ಬಾಲಾಜಿ, ಧೀರೇಂದ್ರನಾಥ್, ನಾಗರತ್ನ ಮುಂತಾದವರ ಶ್ರಮ ಮತ್ತು ಕಾಳಜಿಯಿಂದ ವೇದಿಕೆಯ ಕಾರ್ಯಕ್ರಮಗಳು, ವೇದಿಕೆಯ ಬದಿಗಿದ್ದ ಊಟೋಪಚಾರದ ಸತ್ಕಾರಗಳು ರುಚಿಕಟ್ಟಾಗಿದ್ದುವು.

ನನ್ನ ಬಡಹೆಗಲಿಗೆ ಸರ್ವಾಧ್ಯಕ್ಷ ಪಟ್ಟ ಹೊರಿಸಿದ್ದರಿಂದ ಎರಡೂ ದಿನ ವೇದಿಕೆಯ ಮೇಲೆ ಅಥವಾ ಕೆಳಗೆ ಕಾಯಂ ಆಗಿ ಕುಳಿತು ಎಲ್ಲವನ್ನೂ ಕಣ್ಣಿಗಿಳಿಸಿಕೊಳ್ಳಲು, ಆಸ್ವಾದಿಸಲು ಸಾಧ್ಯವಾಯಿತು. ನಾಡಗೀತೆಗೆ ಮೊದಲು ಎರಡು ದೇಶಗಳ ರಾಷ್ಟ್ರಗೀತೆಗಳನ್ನು ನುಡಿಸಲಾಯಿತು. ಯಾವ ದೇಶಕ್ಕೆ ಹೋದರೂ ನನಗೆ ಅಲ್ಲಿನ ರಾಷ್ಟ್ರಗೀತೆಯ ಬಗ್ಗೆ ಕುತೂಹಲ. ಕೀನ್ಯಾದ ರಾಷ್ಟ್ರಗೀತೆಯ ಮಟ್ಟು, ಲಯ ಮತ್ತು ಓಘ ಕೊಂಚ ಯುದ್ಧಾಭಿಮುಖಿಯಂತೆ ಗೋಚರಿಸಿತು. ಸಾಹಿತ್ಯವಿರದೆ ವಾದ್ಯೋಪಕರಣಗಳು ಮಾತ್ರವಿದ್ದುದರಿಂದ ಹಾಗನ್ನಿಸಿರ ಬಹುದು. ಕೀನ್ಯಾದ ಬಾವುಟದಲ್ಲೂ ಎರಡು ಭರ್ಜಿಗಳು ಯುದ್ಧಾಕಾಂಕ್ಷಿಗಳಾಗಿ ನಿಂತಿವೆ. ಶ್ರೀಲಂಕಾದ ರಾಷ್ಟ್ರಗೀತೆ ನಮ್ಮ ಜೈ ಭಾರತ ಜನನಿಯ ತನುಜಾತೆಯಂತಿರುವುದು ಇಲ್ಲಿ ನೆನಪಾಗುತ್ತಿದೆ.

ಕೀನ್ಯಾದ ಭಾರತೀಯ ರಾಯಭಾರಿ ಕಚೇರಿಯಲ್ಲಿ ಉನ್ನತಾಧಿಕಾರಿಯಾಗಿರುವ ನಾರಾಯಣಸ್ವಾಮಿ ಮೂಲತಃ ಮೈಸೂರಿನವರು. ಅವರು ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಬಂದಿದ್ದರು. ನಮಗಾಗಿ ಭೋಜನ ಕೂಟವನ್ನು ಏರ್ಪಡಿಸಿ ಸತ್ಕರಿಸಿದರು. ಕನ್ನಡ ಸಮ್ಮೇಳನದ ನೆಪದಲ್ಲಿ ಅವರಿಂದ ಕೀನ್ಯಾದ ಅನೇಕ ಮಗ್ಗುಲುಗಳನ್ನು ಕಾಣಲು ಸಾಧ್ಯವಾಯಿತು. ಭಾರತದಂತೆಯೇ ಬ್ರಿಟಿಷರಿಂದ ಆಳಲ್ಪಟ್ಟ, ಶೋಷಿಸಲ್ಪಟ್ಟ, ಹೇರಲ್ಪಟ್ಟ ದೇಶ. ಅಧ್ಯಕ್ಷೀಯ ಆಳ್ವಿಕೆಯ ಪ್ರಜಾಸತ್ತಾತ್ಮಕ ಗಣರಾಜ್ಯ. ಬ್ರಿಟಿಷರ ಆಳ್ವಿಕೆಯಲ್ಲಿ ಇಲ್ಲಿ ರೈಲು ಮಾರ್ಗ ಹಾಕಲು ಹಡಗಿನಲ್ಲಿ ಲೋಡುಗಟ್ಟಳೆ ಭಾರತೀಯರನ್ನು ಕಚ್ ಮತ್ತು ಸಿಂಧ್ ಪ್ರಾಂತ್ಯಗಳಿಂದ ಕರೆತರಲಾಯಿತು. ಹೀಗೆ ಬಂದವರು ಬ್ರಿಟಿಷ್ ಪೌರತ್ವವನ್ನು ಪಡೆದು ಅಲ್ಲೇ ಉಳಿದರು.

ಇವರಲ್ಲಿ ಬಹಳಷ್ಟು ಮಂದಿ ಗುಜರಾತಿಗಳು ಮತ್ತು ಪಂಜಾಬಿಗಳು. ಅಪಾರ ಶ್ರೀಮಂತಿಕೆ ಹೊಂದಿರುವ ಈ ಸಮುದಾಯಗಳು ಮೂರನೇ ತಲೆಮಾರು ದಾಟಿ ಕೀನ್ಯಾ-ಭಾರತೀಯರಾಗಿದ್ದಾರೆ. ಕೀನ್ಯಾ, ಉಗಾಂಡ, ಟಾಂಜಾನಿಯಾ ಈ ಮೂರು ದೇಶಗಳಲ್ಲಿ ಕಾಲೊನಿ ಕಟ್ಟಿಕೊಂಡ ಬ್ರಿಟಿಷರು ಇದನ್ನು ಪೂರ್ವ ಆಫ್ರಿಕಾ ಎಂದು ಕರೆದರು. ಇವು ಸಮಭಾಜಕ ವೃತ್ತಕ್ಕೆ ಸಮೀಪವಿರುವುದರಿಂದ ನಿತ್ಯ ಹರಿದ್ವರ್ಣ ಮಳೆ ಕಾಡುಗಳು, ಅಪರಿಮಿತ ವನ್ಯ ಸಂಪತ್ತು, ವಿಕಾಸವಾದದ ಆರಂಭ ಬಿಂದುಗಳಂತಿರುವ ಬುಡಕಟ್ಟು ಜನಾಂಗ ಎಲ್ಲವೂ ಇಲ್ಲಿ ದಟ್ಟವಾಗಿವೆ.

*
ಉತ್ತರ ಧ್ರುವದಿಂದ ದಕ್ಷಿಣ ಧ್ರುವದವರೆಗೆ, ಪೂರ್ವ­ದಿಂದ ಪಶ್ಚಿಮದವರೆಗೆ ನನ್ನ ಲೋಕ ಪರ್ಯಟನೆಯಲ್ಲಿ ಹಲ­ವಾರು ಚಿಕ್ಕ, ದೊಡ್ಡ ಕನ್ನಡ ಸಂಘಟನೆಗಳನ್ನು ಕಂಡಿದ್ದೇನೆ. ನನ್ನ ಅನುಭವಕ್ಕೆ ಮೂರು ಬಗೆಯ ಕನ್ನಡಿಗ ನಿಲುಕಿದ್ದಾನೆ. ಒಳನಾಡ ಕನ್ನಡಿಗನಿಗೆ ಕನ್ನಡವೆಂಬುದು ಹಿತ್ತಿಲಗಿಡ. ಅವನು ಕ್ಷೇಮದ ನೆಲೆಯಲ್ಲಿ ಕೂತವ. ಹಾಗಾಗಿ ಅವನು ನಿರ್ಲಿಪ್ತ. ಗಡಿನಾಡ ಕನ್ನಡಿಗ ಅರಕ್ಷಿತ ಪ್ರಜ್ಞೆಯಿಂದ ಬಳಲುತ್ತಾನೆ.

ಅವ­ನಿ­ಗೆ ಆಕ್ರೋಶ ಹೆಚ್ಚು. ಇವನು ತನ್ನ ಭಂಗ ಬವಣೆ ಒಳನಾಡಿ­ನವನಿಗೆ ಕೇಳಿಸುತ್ತಿಲ್ಲ ಎಂದು ಸಿಟ್ಟುಗೊಳ್ಳುತ್ತಾನೆ. ಇವನು ಬೆಳಗಾವಿ, ಕಾಸರಗೋಡು, ಸೊಲ್ಲಾಪುರದಂಥ ಊರುಗಳಲ್ಲಿ ಅನ್ಯಭಾಷೆಗಳ ಆರ್ಭಟದೊಂದಿಗೆ ಕಂಗಾಲಾಗಿ ಬದುಕುವವ. ಮೂರನೆಯವನು ಹೊರನಾಡಿನ ಕನ್ನಡಿಗ. ಬಿಟ್ಟು ಬಂದ ಊರಲ್ಲಿ ಏನನ್ನೋ ಕಳೆದುಕೊಂಡಿದ್ದೇನೆ ಎಂದು ಪರಿತಪಿಸುವ ಭಾವುಕ. ಬಿಟ್ಟು ಬಂದಿದ್ದಕ್ಕೇ ಅದು ಅಮೂಲ್ಯ ಎಂದು ನಂಬಿದವ. ಅವನಿರುವ ಪ್ರದೇಶದಲ್ಲಿ ಕನ್ನಡ ಯಾರೊಂದಿಗೂ ಸ್ಪರ್ಧಿಸಬೇಕಿಲ್ಲ. ಆದರೆ ಆತ್ಮದ ಅಳಲಿಗೆ, ಪ್ರಸನ್ನತೆಗೆ ಅವನಿಗೆ ಕನ್ನಡ ಬೇಕು.

ಸಾವಿರಾರು ಮೈಲು ದೂರವಿರುವ ತಾಯ್ನಾಡಿಗೆ, ತಾಯಿ ಭಾಷೆಗೆ ಗಂಟು ಹಾಕಿಕೊಳ್ಳುವ ತವಕ. ‘ನೀ ಮೆಟ್ಟುವ ನೆಲ ಅದೆ ಕರ್ನಾಟಕ’ ಎಂದು ಇದ್ದಲ್ಲೇ ಹೇಳಿಕೊಳ್ಳುತ್ತಾನೆ. ‘ಎಲ್ಲಾದರು ಇರು ಎಂತಾದರೂ ಇರು ಎಂದೆಂದಿಗು ನೀ ಕನ್ನಡವಾಗಿರು’ ಎಂದು ರಸಋಷಿಯ ಆತ್ಮಕ್ಕೇ ಉಸಿರು ಕಟ್ಟಿಸುವಷ್ಟು ಸಲ ಹಾಡಿಕೊಳ್ಳುತ್ತಾನೆ. ಒಳನಾಡಿನವನ ನಿರ್ಲಿಪ್ತತೆ, ಗಡಿನಾಡಿನವನ ಆಕ್ರೋಶ, ಹೊರನಾಡಿನವನ ಭಾವುಕತೆ- ಮೂವರಲ್ಲೂ ಕನ್ನಡ ಪ್ರೀತಿ ಸಮಾನವಾಗಿದ್ದರೂ ಅವರ ಅಭಿವ್ಯಕ್ತಿಯ ಸ್ವರೂಪ ಮಾತ್ರ ಭಿನ್ನ. ಕೀನ್ಯಾ ಕನ್ನಡಿಗರ ಪ್ರೀತಿ ನನ್ನ ಅನುಭವಕ್ಕೆ ಹೊಸ ಸೇರ್ಪಡೆ.

ಇಷ್ಟೆಲ್ಲಾ ಸುತ್ತಾಡುತ್ತಿ, ನಮ್ಮನ್ನು ನೋಡದೆ ಹೋಗುತ್ತೀಯಾ? ನಿನ್ನ ಪೂರ್ವಜರನ್ನು ನೋಡದೆ ಹಾಗೆಯೇ ವಾಪಸ್ಸಾಗುವುದು ಸರಿಯೇ? ಎಂದು ಆನೆ, ಸಿಂಹ, ಹೇಸರಗತ್ತೆಗಳು ಕೀನ್ಯಾದಲ್ಲಿ ಕನಸಿನಲ್ಲಿ ಬಂದು ಮುನಿಸಿನಿಂದ ಹೇಳಿದಂತಾಯಿತು. ಆ ಅನಿಮಿತ್ತ ಬಂಧುಗಳನ್ನು ನಿರಾಶೆಗೊಳಿಸಬಾರದೆಂದು ನಿರ್ಣಯಿಸಿ ಪುಟ್ಟ ತಂಡದೊಡನೆ ಕೀನ್ಯಾದಿಂದ ಟಾಂಜಾನಿಯಾದತ್ತ ಹೊರಟೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT