ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುರುಡು ಕಾಂಚಾಣದಲ್ಲಿ ಸೊರಗಿದ ಕ್ರಿಕೆಟ್

Last Updated 22 ಜನವರಿ 2012, 19:30 IST
ಅಕ್ಷರ ಗಾತ್ರ

`ಹನ್ನೊಂದು ಮೂರ್ಖರು ಕ್ರಿಕೆಟ್ ಆಡುತ್ತಾರೆ. ಅದನ್ನು ಹನ್ನೊಂದು ಸಾವಿರ ಮೂರ್ಖರು ನೋಡುತ್ತಾರೆ~ ಎಂದು ಬರ್ನಾರ್ಡ್ ಷಾ ಬಹಳ ಹಿಂದೆಯೇ ಹೇಳಿದ ಮಾತನ್ನು ಈಗ ಭಾರತ ಕ್ರಿಕೆಟ್ ತಂಡದ ಮಟ್ಟಿಗೆ ಬದಲಾಯಿಸಲೇಬೇಕಾಗಿದೆ. `ಹನ್ನೊಂದು ಮಂದಿ ಜಾಣರು ಕ್ರಿಕೆಟ್ ಆಡುತ್ತಾರೆ ಹಾಗೂ ಅದನ್ನು ಹನ್ನೊಂದು ಕೋಟಿ ಮಂದಿ ಮೂರ್ಖರು ನೋಡುತ್ತಾರೆ~ ಎಂಬುದು ಸೂಕ್ತವಾಗಬಹುದೇನೋ! ಯಾಕೆಂದರೆ ಭಾರತದ ಕ್ರಿಕೆಟ್ ಎಂದರೆ ಇಂದು ಕಿಸೆ ತುಂಬುವ ಆಟ. ಆಡುವವರು, ಆಡಿಸುವವರು ಜಾಣರು. ಅವರನ್ನು ನೋಡುವ ಕ್ರಿಕೆಟ್‌ಪ್ರೇಮಿ ಮಾತ್ರ ಪೆಚ್ಚು. ಭಾರತದಲ್ಲಿ ಕ್ರಿಕೆಟ್ ದೊಡ್ಡ ಪ್ರಮಾಣದಲ್ಲಿ ಬೆಳೆಯಲು ದುಡ್ಡು ಕೊಟ್ಟು ನೋಡುವ ಪ್ರೇಕ್ಷಕನ ಪಾತ್ರ ಮಹತ್ವದ್ದಾಗಿದೆ. ಕ್ರಿಕೆಟ್ ನೋಡುವುದು ಒಂದು ರೀತಿಯ ಚಟವಾಗಿದೆ. ಪ್ರೇಕ್ಷಕನಿಗೆ ತನಗೆ ಬೇಕಾದ ಪಂದ್ಯಗಳನ್ನು ನೋಡುವ ಸ್ವಾತಂತ್ರ್ಯ ಇದೆಯಾದರೂ, ಸಮೂಹ ಸನ್ನಿಯಾಗಿ ಬೆಳೆದುಬಿಟ್ಟಿರುವ ಕ್ರಿಕೆಟ್ ವೀಕ್ಷಣೆ ಅರ್ಥಪೂರ್ಣ, ಕೌಶಲಪೂರ್ಣ ಹಾಗೂ ಮೂಲ ಅಂಶಗಳಿರುವ   ಟೆಸ್ಟ್ ಕ್ರಿಕೆಟ್ ಬೆಳವಣಿಗೆಗೆ ಅಡ್ಡಿಯಾಗಿದೆ ಎಂಬ ಸತ್ಯ ಜನರಿಗೆ ಗೊತ್ತಾಗಬೇಕು. ಐಪಿಎಲ್ ಎಂಬ ಚುಟುಕು ಕ್ರಿಕೆಟ್‌ನಲ್ಲಿ ಒಬ್ಬ ಆಟಗಾರ ಒಂದೊಂದು ಸಿಕ್ಸರ್ ಹೊಡೆದಾಗಲೂ ತನ್ನ ಬ್ಯಾಂಕ್ ಖಾತೆಯ ಕಡೆಯೇ ನೋಡುತ್ತಿರುತ್ತಾನೆ. ಭಾರತದ ಕ್ರಿಕೆಟ್‌ಗೆ ಈ ಐಪಿಎಲ್ ಮಾಡಿರುವ ಹಾನಿ ಕೆಲವು ತಿಂಗಳುಗಳ ಹಿಂದೆ ಇಂಗ್ಲೆಂಡ್‌ನಲ್ಲಿ ಹಾಗೂ ಈಗ ಆಸ್ಟ್ರೇಲಿಯ ಪ್ರವಾಸದಲ್ಲಿ ಎದ್ದುಕಂಡಿದೆ. 

ಆದರೆ, ಆಟಗಾರರಿಗಾಗಲೀ ಅವರಂತೆಯೇ ತುಂಬಿರುವ ಖಜಾನೆಯ ಮೇಲೆ ಕುಳಿತಿರುವ ಕ್ರಿಕೆಟ್ ನಿಯಂತ್ರಣ ಮಂಡಳಿಯ ಕುಬೇರರಿಗಾಗಲೀ ಭಾರತ ತಂಡ ಟೆಸ್ಟ್‌ನಲ್ಲಿ ಸೋತರೆ ಚಿಂತೆಯೂ ಆಗುವುದಿಲ್ಲ, ಬೇಸರವೂ ಮೂಡುವುದಿಲ್ಲ. ಆಸ್ಟ್ರೇಲಿಯದಲ್ಲಿ ತಂಡ ಸೋಲಲು ವಿ.ವಿ.ಎಸ್. ಲಕ್ಷ್ಮಣ್ ಕಾರಣ ಎಂದು ಆತನೊಬ್ಬನ ಮೇಲೆಯೇ ಗೂಬೆ ಕೂಡಿಸುವ ಯತ್ನ ಈ ಮಂಡಳಿಯ ಪಂಡಿತರಿಂದ ಆಗುತ್ತದೆ. ಇದೇ ಲಕ್ಷ್ಮಣ್ ಆಸ್ಟ್ರೇಲಿಯ ವಿರುದ್ಧ ಹಿಂದೆ ತಂದುಕೊಟ್ಟ ಗೆಲುವು ಅವರ ಗಮನಕ್ಕೆ ಬರುವುದಿಲ್ಲ. ಅಲ್ಲದೇ ಸಚಿನ್ ತೆಂಡೂಲ್ಕರ್ ಅವರನ್ನು ಟೀಕಿಸುವ ಧೈರ್ಯ ಯಾರಿಗೂ ಇಲ್ಲ. ಅವರು ಇನ್ನೂ ಹತ್ತಿಪ್ಪತ್ತು  ಇನಿಂಗ್ಸ್‌ಗಳಲ್ಲಿ ನೂರು ಹೊಡೆಯದಿದ್ದರೂ ಅವರ `ನೂರನೇ ಶತಕ~ ಬರುವ ವರೆಗೂ ಆಡಲಿ ಬಿಡಿ ಎಂಬ ಉದ್ದೇಶ ಮಂಡಳಿ ಹಾಗೂ ಆಯ್ಕೆ ಸಮಿತಿಯವರಿಗೆ ಇದ್ದಂತಿದೆ! ಅಥವಾ ಅವರನ್ನು ತೆಗೆಯುವ ಧೈರ್ಯ ಯಾರಿಗೂ ಇಲ್ಲ ಎಂದು ಕಾಣುತ್ತದೆ. ವಿಶ್ವ ಕಪ್ ನಂತರ ಅವರು ಒಂದು ದಿನದ ಪಂದ್ಯಗಳಲ್ಲಿ ಆಡುವುದಿಲ್ಲ ಎಂದೇ ಹೇಳಿದ್ದರು. ಅದರಂತೆ ಆಡಲಿಲ್ಲ ಕೂಡ. ಈಗ ಅವರನ್ನು ಆಸ್ಟ್ರೇಲಿಯದಲ್ಲಿ ನಡೆಯುವ ತ್ರಿಕೋನ ಸರಣಿಗೆ ಆರಿಸುವ ಬದಲು ಯುವ ಆಟಗಾರನೊಬ್ಬನಿಗೆ ಅವಕಾಶ ಕೊಡಬಹುದಿತ್ತು.

ಭಾರತದಲ್ಲಿ ಮೂಢನಂಬಿಕೆಗಳು ಹಾಗೂ ಅಂಧವಿಶ್ವಾಸಗಳಿಗೆ ಕೊರತೆಯೇನೂ ಇಲ್ಲ. ಕ್ರಿಕೆಟ್‌ನಲ್ಲೂ ಇಂಥ ವಿಪರೀತವಾದ ಅಂಧಾಭಿಮಾನ ತುಂಬಿದೆ. ದೋನಿಪಡೆ ವಿಶ್ವ ಕಪ್ ಗೆದ್ದ ನಂತರ ಹೋದಲ್ಲೆಲ್ಲ ಜಯಭೇರಿ ಬಾರಿಸುವುದೆಂಬ ನಿರೀಕ್ಷೆ ಹಾಗೂ ಭಾವನೆ ಎಲ್ಲ ಕ್ರಿಕೆಟ್‌ಪ್ರೇಮಿಗಳಿಗೂ ಇತ್ತು. ಆದರೆ ವಿಶ್ವ ಕಪ್ ಹಾಗೂ ನಂತರದ ಐಪಿಎಲ್ ಟೂರ್ನಿ ತಂದುಕೊಟ್ಟ ಹಣ ಮತ್ತು ಪ್ರಚಾರದ ಹೊಳೆಯಲ್ಲಿ ಆಟಗಾರರು ಮುಳುಗಿಹೋದರು. ಅದರಿಂದಾಗಿ ಇಂಗ್ಲೆಂಡ್ ಪ್ರವಾಸದಲ್ಲಿ ಮೇಲೇಳಲು ಆಗಲೇ ಇಲ್ಲ. ಆದರೂ ಆಟಗಾರರಾಗಲೀ ಮಂಡಳಿಯಾಗಲೀ ಪಾಠ ಕಲಿಯಲಿಲ್ಲ. ಟೀಕೆಗಳನ್ನು ತಾತ್ಸಾರದಿಂದಲೇ ನೋಡಿದ ಇವರೆಲ್ಲರಿಗೆ ಆಸ್ಟ್ರೇಲಿಯ ಪ್ರವಾಸದಲ್ಲಿಯ ಕೆಟ್ಟ ಸೋಲೂ ಪಾಠ ಕಲಿಸುವುದಿಲ್ಲ. ಕೆಲವು ಆಟಗಾರರನ್ನು ತಂಡದಿಂದ ಹೊರಗೆ ಹಾಕುವುದರಿಂದ ಪರಿಸ್ಥಿತಿ ಸುಧಾರಿಸುವುದಿಲ್ಲ ಎಂಬುದು ಗೊತ್ತಿಲ್ಲದಷ್ಟು ದಡ್ಡರೇನೂ ಈ ಆಯ್ಕೆಗಾರರಲ್ಲ. ತಂಡದ ಮೂಲ ಸಮಸ್ಯೆ ಏನು ಮತ್ತು ಈಗಿನ ಕ್ರಿಕೆಟ್ ವ್ಯವಸ್ಥೆಯಲ್ಲಿ ಏನು ತಪ್ಪಿದೆ ಎಂಬುದನ್ನು ಕಂಡುಹಿಡಿಯುವ ವ್ಯವಧಾನ ಯಾರಿಗೂ ಇಲ್ಲ. ಜನರಿಗೆ ಯಾವುದೂ ಬಹಳ ದಿನ ನೆನಪಿರುವುದಿಲ್ಲ ಎಂಬುದು ಅವರಿಗೆ ಗೊತ್ತಿದೆ. ಕೆಲಸ ಕಾರ್ಯ ಬಿಟ್ಟು ಹಣ ಕೊಟ್ಟು ಪಂದ್ಯ ನೋಡುವ ಪ್ರೇಕ್ಷಕ (ಹಾಗೂ ಜೂಜಾಡಲು ಪಂದ್ಯ ನೋಡುವ ಬಾಜೀದಾರ!) ಹೇಗೂ ಪಂದ್ಯ ನೋಡಲು ಬಂದೇಬರುತ್ತಾನೆ ಎಂಬ ಧಿಮಾಕು ಮಂಡಳಿಗೆ ಇದೆ. ಹೀಗಾಗಿ ಟೆಸ್ಟ್‌ಗಳಲ್ಲಿ ಭಾರತ ಸೋತಾಗ ಅದೊಂದು ಗಂಭೀರ ವಿಷಯವಾಗುವುದೇ ಇಲ್ಲ. ಪಿಎಲ್ ಪಂದ್ಯಗಳ ಮೂಲಕ ಪ್ರೇಕ್ಷಕರನ್ನು ಮೂರ್ಖರನ್ನಾಗಿ ಮಾಡಲು ಮಂಡಳಿ ಕಾಯುತ್ತಿರುತ್ತದೆ.

ಇಂಥ ಒಂದು ಕುರುಡು ಕಾಂಚಾಣದ ಹುಚ್ಚರಾಟದಲ್ಲಿ ಭಾರತದ ಟೆಸ್ಟ್ ಕ್ರಿಕೆಟ್ ಹಾಗೂ ಅದಕ್ಕೆ ಪೂರಕವಾಗಿರಬೇಕಾದ ರಣಜಿ ಟ್ರೋಫಿ , ದುಲೀಪ್ ಟ್ರೋಫಿ ಮುಂತಾದ ರಾಷ್ಟ್ರೀಯ ಟೂರ್ನಿಗಳು ಸೊರಗಿಹೋಗಿವೆ. ಇವುಗಳನ್ನು ನೋಡಲು ಯಾರಿಗೂ ಆಸಕ್ತಿ ಇಲ್ಲ. ಬೆಂಗಳೂರಿನಲ್ಲಿ ಕರ್ನಾಟಕ ಆಡಿದ ರಣಜಿ ಟ್ರೋಫಿ ಕ್ವಾರ್ಟರ್‌ಫೈನಲ್ ಪಂದ್ಯವನ್ನು ನೋಡಲು, ಪುಕ್ಕಟೆ ಪ್ರವೇಶ ಇದ್ದರೂ ನೂರು ಜನ ಬಂದಿರಲಿಲ್ಲ. ಈ ಪಂದ್ಯಗಳಿಗೆ ಪ್ರೇಕ್ಷಕರನ್ನು ಸೆಳೆಯುವ ಯಾವ ಯತ್ನವನ್ನೂ ಮಂಡಳಿ ಮಾಡಿಲ್ಲ. ಹದಿವಯಸ್ಸಿನ ಆಟಗಾರರು ರಣಜಿ ಪಂದ್ಯಗಳನ್ನು ನೋಡಿ ಕಲಿಯಲು ಸಾಕಷ್ಟು ಉತ್ತಮ ಅಂಶಗಳಿರುತ್ತವೆ. ಟೆಸ್ಟ್ ಕ್ರಿಕೆಟ್ ಮಟ್ಟಕ್ಕೇರಲು ರಣಜಿ ಪಂದ್ಯಗಳೇ ಸಹಾಯಕ ಎಂಬುದನ್ನು ಈ ಕಿರಿಯ ಆಟಗಾರರಿಗೆ ಯಾರೂ ಮನವರಿಕೆ ಮಾಡಿಕೊಟ್ಟಿಲ್ಲ.

ಐಪಿಎಲ್‌ನಂಥ ಬ್ಯಾಂಗ್ ಬ್ಯಾಂಗ್ ಕ್ರಿಕೆಟ್ ನೋಡಲು ಇರುವ ಹುಮ್ಮಸ್ಸು ನಿಜವಾದ ಕ್ರಿಕೆಟ್ ಎನಿಸಿದ ರಣಜಿ ಮತ್ತು ಅದಕ್ಕೆ ಸಮಾನವಾದ ಪಂದ್ಯಗಳನ್ನು ನೋಡಲು ಇಲ್ಲ. ಹುಚ್ಚು ಕ್ರಿಕೆಟ್‌ನ ಹತ್ತೂ ಮುಖಗಳಲ್ಲಿ ಹಣವೇ ಕಾಣುವುದರಿಂದ ಯುವ ಆಟಗಾರರಿಗೆ (ಅವರ ಪೋಷಕರಿಗೆ) ಚುಟುಕು ಪಂದ್ಯಗಳೇ ಹೆಚ್ಚು ಆಕರ್ಷಕವಾಗಿವೆ. ರಾಹುಲ್ ದ್ರಾವಿಡ್ ಅವರಂತೆ ತಾಂತ್ರಿಕ ಕೌಶಲದಲ್ಲಿ ಪರಿಪೂರ್ಣತೆ ಪಡೆಯುವುದಕ್ಕಿಂತ, ಚೆಂಡಿರುವುದೇ ಹೊಡೆಯುವುದಕ್ಕಾಗಿ ಅದೂ 20-30 ಎಸೆತಗಳಲ್ಲಿ ಆರೆಂಟು ಸಿಕ್ಸರುಗಳಿರುವ 50-60    ಹೊಡೆಯುವುದು ಹೆಚ್ಚು ಲಾಭಕರ ಎಂಬ ಮಂತ್ರವನ್ನು ಎಲ್ಲ ಹುಡುಗರು ಪಠಿಸುತ್ತಿದ್ದಾರೆ.

ಇದರ ಪರಿಣಾಮವಾಗಿಯೇ ಈ ಬ್ಯಾಟ್ಸಮನ್ನರು ನಿಜವಾದ ವೇಗದ ಬೌಲರುಗಳನ್ನು ಎದುರಿಸಲು ಪರದಾಡುತ್ತಾರೆ. ಹೀಗಾಗಿ ಐದು ದಿನಗಳ ಕಾಲ ಉತ್ತಮ ಆಟ ನೋಡುವ ಮನಸ್ಸಿನಿಂದ ಟಿವಿ ಮುಂದೆ ಕುಳಿತರೆ ಎರಡೂವರೆ ದಿನಗಳಲ್ಲೇ ಪಂದ್ಯ ಮುಗಿದುಹೋಗುತ್ತಿದೆ.

ಈಗ ಸಚಿನ್ ತೆಂಡೂಲ್ಕರ್ ಅವರೊಬ್ಬರನ್ನು ಬಿಟ್ಟು ಉಳಿದ ಹಿರಿಯ ಆಟಗಾರರು ನಿವೃತ್ತರಾಗಬೇಕು ಎಂಬ ಕೂಗು ಕೇಳಿಬರುತ್ತಿದೆ. ಸರಿ, ಆದರೆ ಇವರನ್ನು ಹೊರದೂಡಲು ಬೆಂಚ್ ಮೇಲೆ ಕುಳಿತಿರುವ ಆಟಗಾರರು ಸಮರ್ಥರಾಗಿರಬೇಕಲ್ಲವೇ? ವಿರಾಟ್ ಕೊಹ್ಲಿ ಮೂರನೇ ಟೆಸ್ಟ್‌ನಲ್ಲಿ ಹೋರಾಟ ತೋರಿದರಾದರೂ ಅವರು ತಮ್ಮಲ್ಲಿ ತುಂಬಿರುವ ಅಹಂಕಾರವನ್ನು ಹೊರಹಾಕದೇ ಉತ್ತಮ ಬ್ಯಾಟ್ಸಮನ್ ಆಗಿ ದೀರ್ಘ ಕಾಲ ಆಡಲು ಆಗುವುದಿಲ್ಲ.  ಐಪಿಎಲ್‌ನಲ್ಲಿ ಆಟಕ್ಕಿಂತ ಹೆಚ್ಚಾಗಿ ಹಣದ ಮದ ಎದ್ದುಕಾಣುತ್ತದೆ. ಇದಕ್ಕಿಂತ ರಾಷ್ಟ್ರ ತಂಡದ ಪರ ಆಡಿ ಯಶಸ್ವಿಯಾಗುವುದು ಹೆಚ್ಚು ಗೌರವದ ವಿಷಯ ಎಂಬುದು ಆಟಗಾರರ ಮನಸ್ಸಿನಲ್ಲಿ ಮೂಡಿಯೇ ಇಲ್ಲ. ಅಂಥ ಭಾವನೆ ಮೂಡಿಸಲು ಮಂಡಳಿಯಾಗಲೀ ಐಪಿಎಲ್‌ನಲ್ಲಿ ಫಲಾನುಭವಿಗಳಾಗಿರುವ ಹಿರಿಯ ಆಟಗಾರರಾಗಲೀ ಮಾಡಿಲ್ಲ.

ಸಿಹಿ ಕೂಡ ಅತಿಯಾದರೆ ವಿಷವಾಗುತ್ತದೆ. ಐಪಿಎಲ್‌ನಿಂದ ಆಗಿದ್ದೂ ಇದೇ. ಆಸ್ಟ್ರೇಲಿಯ ಮತ್ತು ಇಂಗ್ಲೆಂಡ್ ಇದನ್ನು ಅರ್ಥಮಾಡಿಕೊಂಡಿದ್ದರಿಂದಲೇ ಅಲ್ಲಿಯ ಪ್ರಮುಖ ಆಟಗಾರರು ಐಪಿಎಲ್ ಆಡಲು ಬರಲಿಲ್ಲ. ನಿವೃತ್ತರಾದ ಆಟಗಾರರಷ್ಟೇ ಬಂದರು. ಆದರೆ ಭಾರತದ ಕೆಲವು ಆಟಗಾರರು ಐಪಿಎಲ್ ನಂತರ ವಿಶ್ರಾಂತಿಬೇಕೆಂದು ಟೆಸ್ಟ್ ಸರಣಿ ಆಡಲು ಹೋಗಲಿಲ್ಲ. ಭಾರತ ತಂಡದ ಆಯ್ಕೆಗಾರರು ಮೂಲ ಸಮಸ್ಯೆ ಬಗ್ಗೆ ಚಿಂತಿಸದೇ ಪರಿಹಾರ ಸಿಗುವುದಿಲ್ಲ. ನಲವತ್ತರ ಸಮೀಪ ಬಂದಿರುವ ಸಚಿನ್  ತೆಂಡೂಲ್ಕರ್, ರಾಹುಲ್ ದ್ರಾವಿಡ್, ವಿ.ವಿ.ಎಸ್. ಲಕ್ಷ್ಮಣ್ ಇವತ್ತಲ್ಲ ನಾಳೆ ನಿವೃತ್ತಿ ಯಾಗಲೇಬೇಕಲ್ಲವೇ? ಅವರ ಸ್ಥಾನ ತುಂಬುವ ಆಟಗಾರರ ಬಗ್ಗೆ ಆಯ್ಕೆಗಾರರು ಗಂಭೀರವಾಗಿ ಯೋಚಿಸಬೇಕಿತ್ತಲ್ಲವೇ?

ಸುರೇಶ್ ರೈನಾ, ವಿರಾಟ್ ಕೊಹ್ಲಿ, ರೋಹಿತ್ ಶರ್ಮ, ಚೇತೇಶ್ವರ ಪೂಜಾರಾ, ಮುರಳಿ ವಿಜಯ್ ಅವರ ಮೇಲೆ ಹೆಚ್ಚಿನ ವಿಶ್ವಾಸ ತೋರಬೇಕಲ್ಲವೇ? ಹಾಗೆಯೇ ಪ್ರಸಕ್ತ ಸಾಲಿನ ರಣಜಿ ಪಂದ್ಯಗಳಲ್ಲಿ ಚೆನ್ನಾಗಿ ಆಡಿದವರಿಗೂ ಅವಕಾಶ ಕೊಟ್ಟು ನೋಡಬೇಕು. ಬೇಕಾದರೆ ಐಪಿಎಲ್ ಅದರ ಪಾಡಿಗೆ ಅದು ನಡೆದುಕೊಂಡು ಹೋಗಲಿ. ಆದರೆ ಮಂಡಳಿಗೆ ಅದೇ ಆದ್ಯತೆಯ ಟೂರ್ನಿಯಾಗಬಾರದು. ಬೇರೆ ಯಾವುದೇ ಪ್ರಮುಖ ಸರಣಿ ಇಲ್ಲದ ಸಮಯದಲ್ಲಿ ಅದರ ಕಾರ್ಯಕ್ರಮ ರೂಪಿಸಬೇಕು. ಇಲ್ಲದಿದ್ದರೆ ಭಾರತ ಕ್ರಿಕೆಟ್ ತಂಡ ಇದೇ ರೀತಿ ವಿದೇಶ ಪ್ರವಾಸಗಳಲ್ಲಿ ಹೊಡೆಸಿಕೊಳ್ಳುತ್ತಲೇ ಇರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT