ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಳ್ಳ ಏಜೆಂಟ್ ಪ್ರಸವ

Last Updated 4 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

ಪೈಲಟ್ ಚಿತ್ರಮಂದಿರದಲ್ಲಿ ನಾನು `ಆಪರೇಷನ್ ಲವ್‌ಬರ್ಡ್ಸ್~ ಸಿನಿಮಾ ನೋಡಿಬಂದ ನಂತರ ಅದು ಮನಸ್ಸಿನಲ್ಲಿ ಗುಂಗಿಹುಳದಂತೆ ಕೊರೆಯತೊಡಗಿತು. ರಾಜ್‌ಕುಮಾರ್ ಕಾಲ್‌ಷೀಟ್ ನನಗೆ ಸಿಗದೆ ಬೇರೆ ಇನ್ನ್ಯಾರಿಗೆ ಸಲೀಸಾಗಿ ಸಿಕ್ಕೀತೆಂದುಕೊಂಡು ಬೀಗುತ್ತಿದ್ದ ನನಗೆ ಅದು ಆಗ ಮರೀಚಿಕೆ ಅನ್ನಿಸತೊಡಗಿ ಕೊರಗಿದ್ದ ಸಂದರ್ಭ.

ಮೆಡಿಕಲ್ ರೆಪ್ರೆಸೆಂಟಿಟಿವ್ ಒಬ್ಬನ ಸೂಟ್‌ಕೇಸ್ ಬದಲಾಗಿ ಅವನನ್ನು ಬಾಂಡ್ ಅಂದುಕೊಂಡು, ಅದರ ಸುತ್ತ ನಡೆಯುವ ಘಟನಾವಳಿಗಳ ಸುತ್ತ ಹೆಣೆದುಕೊಂಡ ಚಿತ್ರಕ್ಕೆ ನಾಯಕ ಯಾರಾಗಬಹುದು ಎಂದು ಕಲ್ಪಿಸಿಕೊಳ್ಳುತ್ತಾ ಹೋದೆ. ನನಗೆ ರಾಜ್‌ಕುಮಾರ್ ಹೊರತುಪಡಿಸಿ ಆ ಪಾತ್ರಕ್ಕೆ ಬೇರೆಯವರು ಯೋಗ್ಯರು ಎಂದು ಅನ್ನಿಸಲೇ ಇಲ್ಲ. ಅವರು ಕೂಡ ಆ ಕಾಲಘಟ್ಟದಲ್ಲಿ `ಜೇಡರಬಲೆ~,  ಚಿತ್ರದಲ್ಲಿ ಅಭಿನಯಿಸಿದ್ದರು. ಅವು ಸೂಪರ್ ಡೂಪರ್ ಹಿಟ್ ಆಗಿದ್ದವು.

ಸಾಕಷ್ಟು ಯೋಚಿಸಿದ ನಂತರ ನನ್ನ ತಲೆಯಲ್ಲಿ ಆ ಪಾತ್ರವನ್ನು ನಾನೇ ಮಾಡಿದರೆ ಹೇಗೆ ಎಂಬ ಯೋಚನೆ ಮೊಳೆಯಿತು. ನೋಡನೋಡುತ್ತಾ ನನ್ನೊಳಗೇ ಹುಟ್ಟಿದ್ದ ಕಥೆ ಒಂದು ರೂಪು ಪಡೆಯಿತು. ಸುಮಾರು ಅರವತ್ತು ಸೀನ್‌ಗಳನ್ನು ನಾನೇ ಸಿದ್ಧಪಡಿಸಿಕೊಂಡೆ. ಒಮ್ಮೆ ಮದ್ರಾಸ್‌ನ ಪೆಟ್ರೋಲ್ ಬಂಕ್ ಒಂದರಲ್ಲಿ ಪೂವೈ ಕೃಷ್ಣನ್ ಎಂಬ ಹೆಸರಾಂತ ಲೇಖಕ ಸಿಕ್ಕರು. ಸಿನಿಮಾ ಕಥೆ ಬರೆಯುವುದರಲ್ಲಿ ಅವರು ನಿಸ್ಸೀಮರಾಗಿದ್ದರು. ಅವರನ್ನು ಕರೆದು ಮಾತನಾಡಿದೆ. ನನ್ನ ಸಿನಿಮಾ ಯೋಚನೆಯನ್ನೂ ಹೇಳಿದೆ. ಅವರು ಆ ಎಳೆಯನ್ನಿಟ್ಟುಕೊಂಡು ಒಂದಿಷ್ಟು ಚಿತ್ರಕಥೆಗಳನ್ನು ಬೆಳೆಸಿ ಕೊಟ್ಟರು. ಒಂದು ನಮಗೆ ಹಿಡಿಸಿತು. ಅದೇ `ಕುಳ್ಳ ಏಜೆಂಟ್ 000~ ಎಂದು ಹೆಸರಾದದ್ದು. ಹಿಂದೆ ಸಿನಿಮಾ ಹಾಡಿನ ಮೂಲಕ ಕುಳ್ಳ ಎನ್ನಿಸಿಕೊಂಡು ಕುಣಿದಿದ್ದ ನನಗೆ ಅದೇ ಐಡೆಂಟಿಟಿ ಆಗಿತ್ತು. ಏನೂ ಇಲ್ಲದೆ ನಾಯಕನಾಗಲು ಹೊರಟಿದ್ದ ನನ್ನನ್ನು ನಾನು `ಜೀರೋ~ ಎಂದೇ ಭಾವಿಸಿದ್ದೆ. ಹಾಗಾಗಿಯೇ ಆ ಚಿತ್ರಕ್ಕೆ `ಕುಳ್ಳ ಏಜೆಂಟ್ 000~ ಅಂತ ಹೆಸರಿಟ್ಟಿದ್ದು.

ದೇವರು ನನಗೆ ಒಂದು ಐಡಿಯಾ ಕೊಟ್ಟ. ರಾಜ್‌ಕುಮಾರ್ ಅನುಪಸ್ಥಿತಿಯಲ್ಲೂ ಅವರ ಅಸ್ತಿತ್ವ ನನಗೆ ಮುಖ್ಯವಾಗಿತ್ತು. ಅದಕ್ಕೇ ಎದೆ ಮೇಲೆ ಅವರ ಫೋಟೊ ಇಟ್ಟುಕೊಂಡು, `ಗುರು ನಿನ್ನ ಮೇಲೆ ಭಕ್ತಿ, ಕೊಡು ನನಗೆ ಶಕ್ತಿ~ ಅಂದರೆ ನನಗೆ ಶಕ್ತಿ ಬರುತ್ತದೆ ಎಂಬಂತೆ ಪಾತ್ರಪೋಷಣೆ ಮಾಡಿದೆ. `ಜೇಡರಬಲೆ~ ಚಿತ್ರದಲ್ಲಿ ಯಾವ್ಯಾವ ಖಳನಾಯಕರಿಗೆ ರಾಜ್‌ಕುಮಾರ್ ಒದೆ ಕೊಟ್ಟಿದ್ದರೋ ನಾನು ಅವರನ್ನೇ ಕರೆಸಿ, ಈ ಚಿತ್ರದಲ್ಲೂ ಒದ್ದೆ. ಆ ಚಿತ್ರಗಳಲ್ಲಿನ ಆ್ಯಕ್ಷನ್ ದೃಶ್ಯಗಳ ಪರಿಕಲ್ಪನೆ ಹೊಸ ರೀತಿಯಲ್ಲಿ ಮೂಡುವಂತೆ ಮಾಡಿದೆ.

ಹಣಕಾಸು ನೆರವು ನೀಡುತ್ತಿದ್ದ ವೀನಸ್ ಮೂವೀಸ್‌ನ ರತ್ನಂ ಅಯ್ಯರ್ ಅವರಿಗೂ ನನ್ನ ಈ ಐಡಿಯಾ ಬಗ್ಗೆ ಹೇಳಿದ್ದೆ. ಈ ಚಿತ್ರವನ್ನು ಯಾರು ಕೊಂಡುಕೊಳ್ಳುತ್ತಾರೋ ಎಂಬ ಜಿಜ್ಞಾಸೆ ನನಗೂ ಇದ್ದಿದ್ದರಿಂದ ಅಳುಕಿನಿಂದಲೇ ಅವರಿಗೆ `ಕುಳ್ಳ ಏಜೆಂಟ್ 000~ ಚಿತ್ರದ ಎಳೆಯನ್ನು ಹೇಳಿದ್ದೆ. ಅವರೂ ಅದನ್ನು ಕೇಳಿ ಥ್ರಿಲ್ ಆಗಿದ್ದರು.

ಒಮ್ಮೆ ರೈಲು ಹತ್ತಿದೆ. ಫಸ್ಟ್‌ಕ್ಲಾಸ್ ಬೋಗಿ. ರವಿಚಂದ್ರನ್ ಅವರ ತಂದೆ ವೀರಾಸ್ವಾಮಿಯವರು ಅಲ್ಲಿ ಮಲಗಿದ್ದರು. ನನ್ನ ಕಂಡವರೇ `ಬನ್ರೀ ಬನ್ರೀ ದ್ವಾರಕೀಶ್~ ಎಂದು ಕರೆದರು. ಥರ್ಮಾ ಫ್ಲಾಸ್ಕ್‌ನಲ್ಲಿ ಅದಾಗಲೇ ಅವರು `ಗುಂಡ~ನ್ನು ಬೆರೆಸಿಕೊಂಡು ತಂದಿದ್ದರು. ನನಗೂ ಲೋಟಕ್ಕೆ ಬಗ್ಗಿಸಿಕೊಟ್ಟು, ತಾವೂ ಕುಡಿಯುತ್ತಾ ಮಾತಿಗೆಳೆದರು.

`ಮುಂದೆ ಯಾವ ಪಿಕ್ಚರ್ ಮಾಡಬೇಕು ಅಂತ ಇದೀರಾ~ ಕೇಳಿದರು. `ನಾನು ಕುಳ್ಳ ಏಜೆಂಟ್ 000~ ವಿಷಯವನ್ನು ಅವರಿಗೂ ಹೇಳಿದೆ. ಒಂದು ಪಿಕ್ಚರ್‌ಗೆ ಎಷ್ಟು ಕೊಡುತ್ತೀರಾ ಎಂದು ಅವರ ವ್ಯವಹಾರದ ಬಗ್ಗೆ ಕುತೂಹಲ ಇಟ್ಟುಕೊಂಡು ಕೇಳಿದೆ.

ಎಂ.ಪಿ.ಶಂಕರ್ `ಕಾಡಿನ ರಹಸ್ಯ~ ಮಾಡಿದಾಗ 90 ಸಾವಿರ ರೂಪಾಯಿ ಕೊಟ್ಟಿದ್ದಾಗಿ ಅವರು ತಿಳಿಸಿದರು. ನನಗೂ ಅಷ್ಟೇ ಹಣಕಾಸು ನೆರವು ನೀಡಲು ಅವರು ಸಿದ್ಧರಿರಬಹುದು ಅನ್ನಿಸಿತು. ಅದು ಕಡಿಮೆ ಮೊತ್ತ ಅನ್ನಿಸಿ ನಾನು ಸುಮ್ಮನಾದೆ.

ಮರುದಿನ ನನ್ನ ಪಾಡಿಗೆ ನಾನು ಕೆಲಸದಲ್ಲಿ ನಿರತನಾಗಿದ್ದೆ. `ಕುಳ್ಳ ಏಜೆಂಟ್ 000~ಗೆ ನಾನು, ರವಿ ಅಣ್ಣ ಹಾಗೂ ಚಂದೂಲಾಲ್ ಜೈನ್ ಮೂವರೂ ನಿರ್ಮಾಪಕರು. ಆ ದಿನ ಚಂದೂಲಾಲ್ ಫೋನ್ ಮಾಡಿ, `ವೀರಾಸ್ವಾಮಿಯವರು ಕರೀತಿದಾರೆ. ಬೇಗ ಹೊರಟು ಬಾ~ ಎಂದರು. ನಾನು ಮತ್ತೆ ಬೆಂಗಳೂರಿಗೆ ಹೋದೆ. ಸೆಂಚುರಿ ಕ್ಲಬ್‌ಗೆ ಚಂದೂಲಾಲ್ ನನ್ನನ್ನು ಕರೆದುಕೊಂಡು ಹೋದರು. ವೀರಾಸ್ವಾಮಿಯವರ ಪಾರ್ಟ್‌ನರ್ ಗಂಗಪ್ಪ ಕೂಡ ನಮ್ಮ ಜೊತೆಯಲ್ಲಿದ್ದರು.

ವೀರಾಸ್ವಾಮಿಯವರು `ನನ್ನ ಮೇಲೆ ಕೋಪಿಸಿಕೊಂಡು ಸುಮ್ಮನಾಗಿಬಿಟ್ಟಿರಿ. ಬೇರೆ ಯಾರಿಗೋ ಸಿನಿಮಾ ಕೊಡ್ತೀರೇನ್ರೀ?~ ಅಂತ ನೇರವಾಗಿ ಕೇಳಿದರು. ನಾನು ತೊಂಬತ್ತು ಸಾವಿರ ಸಾಲದು ಎಂಬ ಕಾರಣಕ್ಕೆ ಸುಮ್ಮನಾದೆ ಎಂದೆ. `ಎಂ.ಪಿ. ಶಂಕರ್ ಸಿನಿಮಾಗೆ ಅಷ್ಟು ಕೊಟ್ಟಿದ್ದೆ ಎಂದು ಹೇಳಿದ್ದಷ್ಟೆ. ಈ ಸಿನಿಮಾಗೆ ಎಷ್ಟು ಬೇಕು?~ ಎಂದಾಗ ನಾನೂ ನೇರವಾಗಿ `ಒಂದು ಲಕ್ಷದ ನಲವತ್ತು ಸಾವಿರ ಆದರೆ ಓಕೆ~ ಎಂದೆ.

`ಯಾವ್ಯಾವಾಗ ಎಷ್ಟೆಷ್ಟು ಬೇಕು ಅಂತ ಚೀಟಿ ಬರೆದುಕೊಡಿ~ ಎಂದಾಗ ನನ್ನ ಮುಖ ಅರಳಿತು. ವೀರಾಸ್ವಾಮಿಯವರಿಗೆ ನಾನೆಂದರೆ ಬಲು ಪ್ರೀತಿ. ನಾವಿಬ್ಬರೂ ಪಾರ್ಟಿಗಳಿಗೆ ಹೋಗಿ, ಆಮೇಲೆ ಮನೆ ತಲುಪಿದ ಮೇಲೆ ಅವರು ನನ್ನ ಹೆಂಡತಿ ಅಂಬುಜಾಗೆ ಫೋನ್ ಮಾಡಿ `ಕುಳ್ಳ ಮನೆಗೆ ಬಂದ್ನೇನಮ್ಮಾ~ ಅಂತ ಕೇಳುತ್ತಿದ್ದರು. ಆಮೇಲೆ ಅವರು ಮಲಗುತ್ತಿದ್ದರು. ನನ್ನ ಬಗ್ಗೆ ಅವರಿಗೆ ಅಷ್ಟು ಕಾಳಜಿ. ಮುಂದೆ ನಾನು ಅವರಿಗಾಗಿಯೇ ನಾಲ್ಕು ಸಿನಿಮಾ ಮಾಡಿದೆ.

ವೀರಾಸ್ವಾಮಿಯವರ ಹಣಕಾಸಿನ ನೆರವಿನಿಂದ `ಕುಳ್ಳ ಏಜೆಂಟ್ 000~ ಚಿತ್ರವನ್ನು ಕೇವಲ ಮೂರು ತಿಂಗಳಲ್ಲಿ ಮಾಡಿ ಮುಗಿಸಿದೆವು. ನಾನು ಬೆಂಗಳೂರಿನ ಹೊರವಲಯ ಎಂದುಕೊಂಡು ಆಗ ಎಲ್ಲೆಲ್ಲಿ ಚಿತ್ರೀಕರಣ ಮಾಡಿದ್ದೆನೋ ಆ ಜಾಗಗಳೆಲ್ಲಾ ಈಗ ನಗರದ ಭಾಗಗಳೇ ಆಗಿಬಿಟ್ಟಿವೆ.

ರವಿ ಅಣ್ಣ (ಕೆ.ಎಸ್.ಎಲ್.ಸ್ವಾಮಿ) ನಿರ್ದೇಶಿಸಿದ ಆ ಚಿತ್ರಕ್ಕೆ ರಾಜನ್-ನಾಗೇಂದ್ರ ಸಂಗೀತ ಸಂಯೋಜನೆ ಮಾಡಿದ್ದರು. ರಾಜ್‌ಕುಮಾರ್ ಇಲ್ಲದೇ ಇದ್ದ ಕೊರತೆ ನೀಗಿಕೊಳ್ಳುವ ದಾರಿ ಹುಡುಕುತ್ತಿದ್ದಾಗ ಹೊಳೆದ ಇನ್ನೊಂದು ಯೋಚನೆಯೇ ಕಿಶೋರ್ ಕುಮಾರ್ ಕೈಲಿ ಹಾಡಿಸುವುದು. 1970ರ ದಶಕದಲ್ಲಿ ಕಿಶೋರ್ ಕುಮಾರ್ ಟಾಪ್ ಗಾಯಕ. ಮುಂಬೈನಲ್ಲಿ ರವಿ ಅಣ್ಣನ ಸಂಬಂಧಿಕರ ಫ್ಲಾಟ್‌ನಲ್ಲಿ ನಾವು ಇಳಿದುಕೊಂಡು ಕಿಶೋರ್ ಕುಮಾರ್ ಅವರನ್ನು ಪತ್ತೆಹಚ್ಚಿದ್ದೆವು. ಕಿಶೋರ್ ಕುಮಾರ್ ಅವರಿಗೆ ಅಬ್ದುಲ್ಲಾ ಎಂಬ ಡ್ರೈವರ್ ಇದ್ದ. ಅವನನ್ನು ಹಿಡಿದು ನಾವು ಪ್ರಯತ್ನಿಸಿದೆವು. ಆ ಕಾಲದಲ್ಲಿ ಒಂದು ಒಂದೂವರೆ ಸಾವಿರ ರೂಪಾಯಿ ಇದ್ದರೆ ಒಂದು ಹಾಡು ಸಿದ್ಧವಾಗುತ್ತಿತ್ತು.

ಪಿ.ಬಿ.ಶ್ರೀನಿವಾಸ್, ಪಿ.ಸುಶೀಲಾ ಇಬ್ಬರ ಸಂಭಾವನೆ ಬರೀ 125 ರೂಪಾಯಿ. 40 ರೂಪಾಯಿ ವಯಲಿನ್, 50 ರೂಪಾಯಿ ವೀಣೆಗೆ ಸಂಭಾವನೆ ಹೋಗುತ್ತಿತ್ತು. 250 ರೂಪಾಯಿ ಕಾಲ್‌ಷೀಟ್. ಒಂದು ಇಡೀ ಹಾಡಿನ ಚಿತ್ರೀಕರಣವನ್ನು ಒಂದೂವರೆ ಸಾವಿರ ರೂಪಾಯಿಯಲ್ಲಿ ಸಲೀಸಾಗಿ ಮುಗಿಸುತ್ತಿದ್ದೆವು. ಬೆಳಿಗ್ಗೆ 9ಕ್ಕೆ ಜೇಬಿನಲ್ಲಿ ಒಂದೂವರೆ ಸಾವಿರ ಇಟ್ಟುಕೊಂಡು ಹೋದರೆ ಮಧ್ಯಾಹ್ನ ಒಂದು ಗಂಟೆ ಹೊತ್ತಿಗೆ ಇಡೀ ಹಾಡನ್ನು ರೆಕಾರ್ಡ್ ಮಾಡಿಕೊಂಡು ಮರಳುತ್ತಿದ್ದೆವು. ಅಂಥ ಸಂದರ್ಭದಲ್ಲಿ ಕಿಶೋರ್ ಕುಮಾರ್‌ಗೆ ಏಳು ಸಾವಿರ ರೂಪಾಯಿ ಸಂಭಾವನೆ ಕೊಟ್ಟೆವು. ಹೆಸರಾಂತ ಸಂಗೀತ ನಿರ್ದೇಶಕರಾಗಿದ್ದ ಲಕ್ಷ್ಮೀಕಾಂತ್ ಪ್ಯಾರೆಲಾಲ್ ಅವರ ಟ್ರೂಪ್ ಇಟ್ಟುಕೊಂಡು ತಾರ್‌ದೇವ್ ಸ್ಟುಡಿಯೋದಲ್ಲಿ `ಆಡೂ ಆಟ ಆಡೂ~ ಹಾಡನ್ನು ರೆಕಾರ್ಡ್ ಮಾಡಿದೆವು.

ಮೊದಲ ವಾರದಲ್ಲೇ `ಕುಳ್ಳ ಏಜೆಂಟ್ 000~ ಗಳಿಕೆ ವೀರಾಸ್ವಾಮಿಯವರು ಕೊಟ್ಟ ಅಸಲನ್ನು ಮೀರಿತ್ತು. ತಮಿಳು, ತೆಲುಗು, ಹಿಂದಿಗೂ ಡಬ್ ಆಯಿತು. ಹಿಂದಿಯಲ್ಲಿ `ಬಸ್ತಿ ಮೆ ಸವಾಲ್~ ಹೆಸರಿನಲ್ಲಿ ಚಿತ್ರ ಬಿಡುಗಡೆಯಾಯಿತು. ನನ್ನ 45 ಗಿ 50 ಅಡಿ ಕಟೌಟನ್ನು ಆಗ ಮುಂಬೈನಲ್ಲಿ ಹಾಕಲಾಗಿತ್ತು. `ಕುಳ್ಳ ಏಜೆಂಟ್ 000~ ಬಿಡುಗಡೆಯಾದಾಗಲೂ ಮೆಜೆಸ್ಟಿಕ್ ಸರ್ಕಲ್‌ನಲ್ಲಿ ನನ್ನ 90 ಅಡಿಯ ಕಟೌಟನ್ನು ವೀರಾಸ್ವಾಮಿಯವರು ಹಾಕಿಸಿದ್ದರು. ಅವರು ನನ್ನ ಮೇಲಿಟ್ಟ ವಿಶ್ವಾಸಕ್ಕೆ ಅದೇ ಸಾಕ್ಷಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT