ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಳ್ಳಿಯಾಗಲು ಒಪ್ಪಿದ ಜಯಚಿತ್ರಾ

Last Updated 22 ಸೆಪ್ಟೆಂಬರ್ 2012, 19:30 IST
ಅಕ್ಷರ ಗಾತ್ರ

ಮೊದಲಿನಿಂದಲೂ ನನಗೆ ಅಂದುಕೊಂಡದ್ದನ್ನು ಮಾಡಿಯೇ ತೀರುವ ಉತ್ಕಟತೆ. `ಸಿಂಗಪುರ್‌ನಲ್ಲಿ ರಾಜಾ ಕುಳ್ಳ~ ಚಿತ್ರಕ್ಕೆ ವಿದೇಶದಲ್ಲಿ ಮೂವತ್ತು ದಿನ ಚಿತ್ರೀಕರಣ ನಡೆಸಿ ಬಂದಮೇಲೂ ನನ್ನ ಬಯಕೆ ಕಡಿಮೆಯಾಗಲಿಲ್ಲ. `ಪ್ರೇಮ ಪ್ರೀತಿ ನನ್ನುಸಿರು~ ಎಂಬ ಹಾಡನ್ನು ಸೊಗಸಾದ ಸೆಟ್‌ನಲ್ಲೇ ಚಿತ್ರೀಕರಿಸಬೇಕೆಂಬುದು ನನ್ನ ಪಟ್ಟು.

ವೀರಾಸ್ವಾಮಿಯವರು, `ಸಿಂಗಪುರ್‌ಗೆ ಹೋಗಿ, ಅಷ್ಟೆಲ್ಲ ಖರ್ಚು ಮಾಡಿಕೊಂಡು ಬಂದಮೇಲೆ ಮತ್ತೆ ಇಲ್ಲಿ ಯಾಕೆ ದುಬಾರಿ ಸೆಟ್ ಹಾಕಿಸುತ್ತೀಯ~ ಎಂದು ಕಿವಿಮಾತು ಹೇಳಿದರು. ನನಗೆ ಆ ಹಾಡು ಅದ್ಭುತವಾಗಿ ಮೂಡಿಬರಬೇಕೆಂಬ ಬಯಕೆ.

ಮುತ್ತುಗಳಲ್ಲೇ `ಲಸ್ಟರ್~ ಮಾಡಿಸಿ, ಸೊಗಸಾದ ಸೆಟ್ ಹಾಕಿಸಿದೆ. ಆ ಕಾಲದಲ್ಲಿ ಅದಕ್ಕೆ ಏಳೆಂಟು ಲಕ್ಷ ರೂಪಾಯಿ ಖರ್ಚಾಯಿತು. ನಲವತ್ತು ಅರವತ್ತು ಡಾನ್ಸರ್‌ಗಳನ್ನು ಹಾಕಿ, ಆ ಹಾಡನ್ನು ಚಿತ್ರೀಕರಿಸಿದೆವು. ಆ ಲಸ್ಟರ್‌ಗೆ ಉಪಯೋಗಿಸಿದ ಮುತ್ತುಗಳನ್ನೆಲ್ಲಾ ಬಾಬ್ಜಿ ಎಂಬ ವಿತರಕರಿಗೆ ಹುಬ್ಬಳ್ಳಿಯಲ್ಲಿ ಚಿತ್ರಮಂದಿರಗಳನ್ನು ಅಲಂಕಾರ ಮಾಡಲು ಕೊಟ್ಟೆ.

ನನ್ನ ಸಾಹಸಗಳಿಗೆ ನಾನೇ ಹೊಣೆಗಾರ. ಆದರೂ ಯಾರಾದರೂ ಆಪ್ತೇಷ್ಟರು ಫೋನ್ ಮಾಡಿದರೆ ನಾನು ಬೇಕಾದದ್ದನ್ನು ಕೇಳಿದ್ದೂ ಇದೆ. ನಾನು ಸಿಂಗಪೂರ್‌ನಲ್ಲಿ ಚಿತ್ರೀಕರಣಕ್ಕೆ ಹೋಗಿದ್ದ ಸಂಗತಿ ತಾರಣ್ಣನ ಕಿವಿಗೆ ಬಿತ್ತು. ಅಮೆರಿಕದಲ್ಲಿ ಅದಾಗಲೇ ನೆಲೆಸಿದ್ದ ಅವನು ಫೋನ್ ಮಾಡಿ, `ಸಿಂಗಪೂರ್‌ನಲ್ಲಿ ಶೂಟಿಂಗ್ ಮಾಡುತ್ತಿದ್ದೀಯಂತೆ... ಗುಡ್~ ಎಂದು ಮಾತಿಗೆ ಶುರುವಿಟ್ಟ. ಹತ್ತು ದಿನಗಳಿಂದ ಚಿತ್ರೀಕರಣ ನಡೆಯುತ್ತಿದೆ, ಎಲ್ಲಾ ಚೆನ್ನಾಗಿದೆ ಎಂದೆಲ್ಲಾ ನಾನು ಕೇಳಿದೆ.

ಆಮೇಲೆ ಅವನನ್ನು ಒಂದಿಷ್ಟು ಡಾಲರ್ ಕೇಳೋಣ ಎಂದುಕೊಂಡು ನಾನು, `ತಾರಣ್ಣ ಒಂದಿಷ್ಟು ಡಾಲರ್‌ಗಳನ್ನು ಕಳಿಸಪ್ಪಾ~ ಎಂದೆ. ತಕ್ಷಣ ಅವನು, `ಹಲೋ... ಹಲೋ... ಹಲೋ... ಸರಿಯಾಗಿ ಕೇಳಿಸುತ್ತಿಲ್ಲ~ ಎನ್ನತೊಡಗಿದ. ಬೇರೆ ಮಾತುಗಳೆಲ್ಲಾ ಕೇಳಿಸಿಕೊಳ್ಳುತ್ತಿದ್ದ ಅವನು ಡಾಲರ್ ಕೇಳಿದಾಕ್ಷಣ, ಧ್ವನಿಯೇ ಕೇಳುತ್ತಿಲ್ಲ ಎಂಬಂತೆ ನಟಿಸಿದ.

ಅದನ್ನೂ ನಾನು ತಮಾಷೆಯಾಗಿಯೇ ಸ್ವೀಕರಿಸಿದೆ ಎಂಬುದು ಬೇರೆ ಮಾತು. ನಾನು ಅನುಭವಿಸಿದ ಇದೇ ದೃಶ್ಯವನ್ನು ಪ್ರಿಯದರ್ಶನ್ ನಿರ್ದೇಶನದ ಚಿತ್ರವೊಂದರಲ್ಲಿ ನೋಡಿ, ಚಕಿತಗೊಂಡೆ. ನಮ್ಮ ಬದುಕಿನ ದೃಶ್ಯಗಳಿಗೂ ಸಿನಿಮಾ ದೃಶ್ಯಗಳಿಗೂ ಹೇಗೆ ಸಂಬಂಧ ಒದಗುತ್ತದೆ, ನೋಡಿ.

`ಪ್ರೀತಿ ಮಾಡು ತಮಾಷೆ ನೋಡು~ ಚಿತ್ರದ ಡಬ್ಬಿಂಗ್ ಕ್ಷಣಗಳು ಇನ್ನೂ ಕಣ್ಣಿಗೆ ಕಟ್ಟಿದಹಾಗಿವೆ. ಆಗ ಡಬ್ಬಿಂಗ್ ಮಾಡಲು `ಲೂಪ್ ಸಿಸ್ಟಂ~ ಇತ್ತು. ಈಗಿನಂತೆ ಒಬ್ಬೊಬ್ಬರೇ ಡಬ್ಬಿಂಗ್ ಮಾಡಲು ಆಗುತ್ತಿರಲಿಲ್ಲ. ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಎಲ್ಲರೂ ಒಟ್ಟಾಗಿ ಡಬ್ಬಿಂಗ್ ಮಾಡಿದೆವು. ಇದ್ದದ್ದು ಎರಡು ಮೈಕ್; ಎರಡೇ ಟ್ರ್ಯಾಕ್.

ನಾನು, ಶ್ರೀನಾಥ್, ಶಂಕರ್‌ನಾಗ್, ಮಂಜುಳಾ, ಪದ್ಮಪ್ರಿಯಾ, ಬಾಲಕೃಷ್ಣ, ನರಸಿಂಹರಾಜು, ಪ್ರಮೀಳಾ ಜೋಷಾಯ್ ಮತ್ತಿತರ ಕಲಾವಿದರು ಅಲ್ಲಿ ಜಮಾಯಿಸಿದ್ದೆವು. 15ರಿಂದ 20 ದಿನ ಸತತವಾಗಿ ಏಳು ದಿನ ಡಬ್ಬಿಂಗ್ ಮಾಡಿದೆವು. ನಮ್ಮ ನಮ್ಮ ಪಾತ್ರ ಬಂದಾಗ, ಮೈಕ್‌ನಲ್ಲಿ ಹೋಗಿ ಮಾತನಾಡುತ್ತಿದ್ದೆವು.

ಡಬ್ಬಿಂಗ್ ಮುಗಿಯುತ್ತಾ ಬಂದಾಗ ನರಸಿಂಹರಾಜಣ್ಣ ಬಂದು ನನ್ನನ್ನು ಮಾತನಾಡಿಸಿದರು. ಆ ದಿನ ಬಹುಶಃ ಭಾನುವಾರ. ಮಧ್ಯಾಹ್ನ 1.30 ಗಂಟೆ ಸಮಯ ಇರಬೇಕು. ಒಂಥರಾ ಮೂಡಲ್ಲಿದ್ದರು. ಬಂದು ಕೂತವರೇ, `ಡಬ್ಬಿಂಗ್ ಎಲ್ಲಾ ಮುಗೀತೇನಪ್ಪ?~ ಎಂದು ಕೇಳಿದರು. ಊಟ ಮಾಡಿದರು. ಆಮೇಲೆ ಅದೇ ಜಾಗದಲ್ಲಿ ಕುಳಿತು ಸುಮಾರು ಮೂರು ಗಂಟೆ ಮಾತನಾಡಿದರು.
 
`ಬಿ.ಆರ್. ಪಂತುಲು ತರಹದ ನಿರ್ಮಾಣ ಸಂಸ್ಥೆ ನಿನ್ನದಾಗಬೇಕು. ಸ್ಟೀಲ್ ತಟ್ಟೆ, ಲೋಟಗಳನ್ನು ತರಿಸಿಡು. ಒಳ್ಳೊಳ್ಳೆಯ ಸಿನಿಮಾಗಳನ್ನು ತೆಗಿ~ ಎಂದೆಲ್ಲಾ ಹೇಳುತ್ತಾ ಹೋದರು. ಕೊನೆಯಲ್ಲಿ, `ನೀನ್ಯಾಕೆ ನನ್ನನ್ನು ಸಿಂಗಪೂರ್‌ಗೆ ಕರೆದುಕೊಂಡು ಹೋಗಲಿಲ್ಲ? ಕೆಮ್ಮಣ್ಣುಗುಂಡಿಯಲ್ಲಿ ಶೂಟಿಂಗ್ ಆಗುವ ಸಿನಿಮಾಗೆ ನಾನು ಬೇಕು, ಸಿಂಗಪೂರ್‌ಗೆ ಬೇಡವಾದೆನೆ~ ಎಂದು ಬೇಸರಪಟ್ಟರು.

ಕನ್ನಡ ಚಿತ್ರರಂಗದಲ್ಲಿ `ಹಾಸ್ಯ ಚಕ್ರವರ್ತಿ~ ಎಂದೇ ಹೆಸರಾಗಿದ್ದ ನರಸಿಂಹರಾಜು ಒಮ್ಮೆಯೂ ವಿದೇಶದಲ್ಲಿ ಬಣ್ಣ ಹಚ್ಚಿರಲಿಲ್ಲ. ಛೆ, ಎಂಥಾ ಕೆಲಸವಾಯಿತು; ಅವರನ್ನು ಕರೆದುಕೊಂಡು ಹೋಗಬೇಕಿತ್ತು ಎಂದು ನನಗೆ ಅನ್ನಿಸಿದ್ದು ಆಗಲೇ. `ಮುಂದೆ ಲಂಡನ್‌ನಲ್ಲಿ ಇನ್ನೊಂದು ಸಿನಿಮಾ ತೆಗೆಯುತ್ತೇನೆ. ಅದರಲ್ಲಿ ಖಂಡಿತ ನಿಮಗೊಂದು ಪಾತ್ರ ಇದ್ದೇ ಇರುತ್ತದೆ~ ಎಂದು ಅವರಿಗೆ ಮಾತುಕೊಟ್ಟೆ.

ಆ ರಾತ್ರಿಯೇ ನಾನು ಮದ್ರಾಸ್‌ಗೆ ಹೋದೆ. ಮರುದಿನ ಬೆಳಗಿನ ಜಾವ ನರಸಿಂಹರಾಜಣ್ಣ ಹೋಗಿಬಿಟ್ಟರು ಎಂಬ ಸುದ್ದಿ ಗೊತ್ತಾಯಿತು. ವಾಪಸ್ ಬೆಂಗಳೂರಿಗೆ ಬಂದು, ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದೆ. ಗಂಟೆಗಟ್ಟಲೆ ತಮ್ಮ ಬದುಕಿನ ಸುಖ-ದುಃಖಗಳನ್ನು ಹಂಚಿಕೊಂಡಿದ್ದ ನರಸಿಂಹರಾಜಣ್ಣ, ತಮ್ಮ ಬೇಗುದಿಯ ನಡುವೆಯೇ ಅಷ್ಟೊಂದು ಜನರನ್ನು ಹಾಸ್ಯದಿಂದ ರಂಜಿಸಿದ್ದರು.

ಅವರ ಒಬ್ಬ ಮಗ ಅಪಘಾತದಲ್ಲಿ ತೀರಿಹೋಗಿದ್ದ. ಆ ಆಘಾತವನ್ನೂ ಅವರು ನನ್ನಲ್ಲಿ ಹೇಳಿಕೊಂಡಿದ್ದರು. ಅವರು ಕೊನೆಯುಸಿರೆಳೆಯುವ ಮುನ್ನಾದಿನ ನಾನು ಅವರೊಡನೆ ಕಳೆದ ಕ್ಷಣಗಳನ್ನು ಮರೆಯಲು ಸಾಧ್ಯವಿಲ್ಲ. `ಪ್ರೀತಿ ಮಾಡು ತಮಾಷೆ ನೋಡು~ ನರಸಿಂಹರಾಜಣ್ಣ ಅಭಿನಯಿಸಿದ ಕೊನೆ ಸಿನಿಮಾ ಆಯಿತು.

ನರಸಿಂಹರಾಜಣ್ಣ ಹಾಗೂ ಬಾಲಣ್ಣ ನಾನು ಮರೆಯಲಾಗದ ನಟರು. ಬಾಲಣ್ಣ ಕೂಡ ನನ್ನ ಸಿನಿಮಾಗಳಲ್ಲಿ ಅಭಿನಯಿಸುವಂತೆ ಕೇಳಿದಾಗಲೆಲ್ಲಾ ಸಂತೋಷದಿಂದ ಬರುತ್ತಿದ್ದರು. ಎಂದೂ ಇಷ್ಟೇ ಹಣ ಕೊಡು ಎಂದು ಕೇಳುತ್ತಿರಲಿಲ್ಲ. ನರಸಿಂಹರಾಜಣ್ಣ ನನ್ನನ್ನು ತಮ್ಮ ಮಗ ಎಂಬಂತೆಯೇ ಭಾವಿಸಿ ಎಷ್ಟೋ ಸಂಗತಿಗಳನ್ನು ಹಂಚಿಕೊಂಡಿದ್ದರು. ಅಂಥ ಅದ್ಭುತ ಹಾಸ್ಯನಟನನ್ನು ಕನ್ನಡ ಚಿತ್ರರಂಗ ಇದುವರೆಗೆ ನೋಡಲೇ ಇಲ್ಲ.

`ಕುಳ್ಳ ಕುಳ್ಳಿ~ ಸಿನಿಮಾ ಮಾಡಲು ಪ್ರೇರಣೆ ಸಿಕ್ಕಿದ್ದು `ಪ್ರೀತಿ ಮಾಡು ತಮಾಷೆ ನೋಡು~ ಚಿತ್ರೀಕರಣದ ಸಂದರ್ಭದಲ್ಲಿ. ನಾವು ಮಂಗಳೂರಿನಲ್ಲಿ ಉಳಿದುಕೊಂಡಿದ್ದೆವು. ವುಡ್‌ಸೈಡ್ ಹೋಟೆಲ್ ಎದುರು ಪ್ರಭಾ ಟಾಕೀಸ್ ಇತ್ತು. ಸಂಜೆ 6.30ರ ವೇಳೆ. ಅಲ್ಲಿ ಜನವೋ ಜನ. `ಹುಲಿಯ ಹಾಲಿನ ಮೇವು~ ಚಿತ್ರ ಆಗಿನ್ನೂ ಬಿಡುಗಡೆಯಾಗಿತ್ತು. ನಾನೂ ಹೋಗಿ ಸಿನಿಮಾ ನೋಡಿದೆ. ಅದರಲ್ಲಿ ತಮಿಳಿನಲ್ಲಿ ಜನಪ್ರಿಯರಾಗಿದ್ದ ಜಯಚಿತ್ರಾ ಅಭಿನಯಿಸಿದ್ದರು.

ಎನ್.ಟಿ.ಆರ್, ನಾಗೇಶ್ವರರಾವ್, ಶಿವಾಜಿಗಣೇಶನ್ ತರಹದ ಘಟಾನುಘಟಿಗಳ ಎದುರು ನಾಯಕಿಯಾಗಿ ಅಭಿನಯಿಸಿದ್ದ ಅನುಭವಿ ಅವರು. `ಹುಲಿಯ ಹಾಲಿನ ಮೇವು~ ಚಿತ್ರದಲ್ಲಿ ಅವರ ಹಾವಭಾವ, ಅಭಿನಯ ಕೌಶಲ ಕಂಡು ಅವರ ಜೊತೆ ನಾನೂ ಒಂದು ಸಿನಿಮಾ ಮಾಡಬೇಕು ಎಂಬ ಬಯಕೆ ಚಿಗುರೊಡೆಯಿತು.

ಆಮೇಲೆ ಮಂಗಳೂರಿನಿಂದಲೇ ಅವರಿಗೆ ಫೋನ್ ಮಾಡಿದೆ. `ನಿಮ್ಮ ಹುಲಿಯ ಹಾಲಿನ ಮೇವು ಚಿತ್ರ ನೋಡಿದೆ. ತುಂಬಾ ಚೆನ್ನಾಗಿ ಅಭಿನಯಿಸಿದ್ದೀರಿ. ನಾನೊಬ್ಬ ಸ್ಮಾಲ್‌ಟೈಮ್ ಕಾಮಿಡಿಯನ್. ಒಂದು ಸಿನಿಮಾ ಮಾಡಬೇಕೆಂದಿದ್ದೇನೆ. ನೀವು ಅದರಲ್ಲಿ ನಟಿಸಬೇಕು. ನಾನು ನಿಮ್ಮ ಅಭಿಮಾನಿ. ನಿಮ್ಮ ಜೊತೆ ನನಗೂ ನಟಿಸುವ ಅವಕಾಶ ಕಲ್ಪಿಸಿಕೊಡಿ~ ಎಂದು ವಿನಂತಿಸಿದೆ. ನನ್ನ ಮಾತುಗಳನ್ನು ಕೇಳಿದ ಮೇಲೆ ಅವರು ಒಮ್ಮೆ ಭೇಟಿ ಮಾಡಲು ಅವಕಾಶ ಕೊಡುವುದಾಗಿ ಹೇಳಿದರು.

`ಕುಳ್ಳ ಕುಳ್ಳಿ~ ಚಿತ್ರದ ನಾಯಕಿ ಜಯಚಿತ್ರಾ ಎಂದು ನಾನು ಆಪ್ತೇಷ್ಟರಲ್ಲಿ ಹೇಳಿದೆ. ಸಿನಿಮಾದ ಅನೇಕರು ನನ್ನನ್ನು ಹೆದರಿಸಿದರು. `ಅವರು ಸೆಟ್‌ಗೆ ಸರಿಯಾದ ಸಮಯಕ್ಕೆ ಬರುವುದಿಲ್ಲ. ಕಿರಿಕ್ ಮಾಡುತ್ತಾರೆ~ ಎಂದು ಏನೇನೋ ಹೇಳಿದರು. ನನಗೆ ಆತಂಕ ಶುರುವಾಯಿತು. ಪರದೆ ಮೇಲೆ ಅವರನ್ನು ನೋಡಿ ತುಂಬಾ ಮೆಚ್ಚಿಕೊಂಡಿದ್ದ ನನಗೆ ಅವರನ್ನು ಬಿಟ್ಟು ಸಿನಿಮಾ ಮಾಡಲು ಸುತರಾಂ ಇಷ್ಟವಿರಲಿಲ್ಲ.

ಮದ್ರಾಸ್‌ಗೆ ಹೋದಮೇಲೆ ಅವರಿಗೆ ಫೋನ್ ಮಾಡಿದೆ. ಮಾತನಾಡುವ ಅವಕಾಶ ಸಿಕ್ಕಿತು. ಅವರಿಗೆ ಚಿತ್ರಕತೆಯನ್ನು ವಿವರಿಸಿದೆ. ಚಿತ್ರೀಕರಣದ ವಿಷಯದಲ್ಲಿ ನಾನು ಶಿಸ್ತಿನ ಮನುಷ್ಯ ಎಂಬುದನ್ನೂ ಆಗಲೇ ಹೇಳಿದೆ. ಬೆಳಿಗ್ಗೆ 9- 9.30ಕ್ಕೆ ಚಿತ್ರೀಕರಣ ನಡೆಯುವ ಸ್ಥಳಕ್ಕೆ ಹಾಜರಾಗಬೇಕು ಎಂದು ಕೂಡ ಮೊದಲೇ ಕೇಳಿಕೊಂಡೆ. ಅವರಿಗೆ ನನ್ನ ನಿರೀಕ್ಷೆ ಅರ್ಥವಾಯಿತು. ಎಲ್ಲಕ್ಕೂ ಒಪ್ಪಿದ ಅವರು `ಕುಳ್ಳ ಕುಳ್ಳಿ~ ಚಿತ್ರದ ನಾಯಕಿಯಾಗಲು ಒಪ್ಪಿದರು. ಆಗ ನನ್ನ ಸಂತೋಷಕ್ಕೆ ಪಾರವೇ ಇರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT