ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೀಡೆಗಳಲ್ಲಿ ಮರೆಯಾಗಿದೆ ‘ಕ್ರೀಡಾಸ್ಫೂರ್ತಿ’

Last Updated 7 ಜನವರಿ 2017, 19:53 IST
ಅಕ್ಷರ ಗಾತ್ರ

ಮೊನ್ನೆ ಗುರುವಾರ ಸಂಜೆ ನಾನು ಮನೆಯಿಂದ ಹೊರಗೆ ಹೊರಟಿದ್ದೆ. ಆ ಸಂದರ್ಭದಲ್ಲಿ ನನ್ನ ಮನದಲ್ಲಿ ದೇಶಿ ಕ್ರೀಡಾಲೋಕದಲ್ಲಿನ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಚಿಂತನ–ಮಂಥನ  ನಡೆದಿತ್ತು.  ದೇಶಿ ಕ್ರಿಕೆಟ್‌ ಬಗ್ಗೆಯಾಗಲಿ ಅಥವಾ ಸುಪ್ರೀಂ ಕೋರ್ಟ್‌ ನೇಮಿಸಿದ್ದ ನ್ಯಾಯಮೂರ್ತಿ  ಲೋಧಾ ಸಮಿತಿ ಭಾರತದ ಕ್ರಿಕೆಟ್‌ ನಿಯಂತ್ರಣ ಮಂಡಳಿಯ ವಿರುದ್ಧ ನಡೆಸಿದ್ದ ನಿರ್ದಿಷ್ಟ ದಾಳಿ (ಸರ್ಜಿಕಲ್‌) ಬಗ್ಗೆ ತಾಕಲಾಟ ನಡೆಯುತ್ತಿರಲಿಲ್ಲ. ಆ ಸಂದರ್ಭದಲ್ಲಿ ನಾನು ದೇಶಿ ಕುಸ್ತಿ ಬಗ್ಗೆ ಮಾತ್ರ ಚಿಂತಿಸುತ್ತಿದ್ದೆ. ಕುಸ್ತಿ ಎನ್ನುತ್ತಿದ್ದಂತೆ ಹಿಂದಿ ಚಲನಚಿತ್ರ ‘ದಂಗಲ್‌’ ಬಗ್ಗೆಯಂತೂ ಅಲ್ಲವೇ ಅಲ್ಲ. 

ನಿಜ ಜೀವನದಲ್ಲಿನ ಕುಸ್ತಿಪಟುಗಳ ಬಗೆಗಿನ ವಿಚಾರಗಳು ನನ್ನ ಸ್ಮೃತಿಪಟಲದ ಮೇಲೆ ಹಾದು ಹೋಗುತ್ತಿದ್ದವು. ಕೆಲ ನಿಮಿಷಗಳ ಹಿಂದಷ್ಟೇ ನಾನು ನಿಜ ಜೀವನದ ಬಬಿತಾ ಪೋಗಟ್‌ ಅವರು ಸೋಫಿಯಾ ಮ್ಯಾಟ್ಸನ್‌ ಅವರ ವಿರುದ್ಧ ಒಂದೇ ಪಟ್ಟಿನಲ್ಲಿ ಸೋಲು ಕಂಡಿದ್ದಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿದ್ದೆ. ಏಕಪಕ್ಷೀಯವಾಗಿದ್ದ ಆ ಕುಸ್ತಿ ಪಂದ್ಯದಲ್ಲಿ 46  ಸೆಕೆಂಡುಗಳಲ್ಲಿ ಪೋಗಟ್‌ ಸೋತಿದ್ದರು.  ಕುಸ್ತಿ ಅಭಿಮಾನಿಗಳಿಂದ ಭರ್ತಿಯಾಗಿದ್ದ  ಕ್ರೀಡಾಂಗಣದಲ್ಲಿನ ಕೆಲವರು ಪೋಗಟ್‌ ಅವರ ಎದುರಾಳಿ ಪರ ಬೆಂಬಲಕ್ಕೆ ನಿಂತಿದ್ದರು.

ನಂತರ ನಡೆದ ಪಂದ್ಯದಲ್ಲಿ ನಿರ್ಮಲಾ ದೇವಿ, ಕರೋಲಿನಾ  ಕ್ಯಾಸ್ಟಿಲ್ಲೊ ಹಿಡಾಲ್ಗೊ ಅವರನ್ನು ಪಾಯಿಂಟ್ ಲೆಕ್ಕದಲ್ಲಿ ಸೋಲಿಸಿದ್ದರು. ಕೆಲ ಸಮಯದವರೆಗೆ ವಿಶ್ವದ ಅತ್ಯುತ್ತಮ ಕುಸ್ತಿಪಟು ಆಗಿದ್ದ, ಅಜರ್‌ಬೈಜಾನ್‌ನ ತೋರ್ಗುಲ್‌ ಅಸ್ಗರೊವ್‌, ಭಾರತದ ಅಷ್ಟೇನೂ ಪರಿಚಿತರಲ್ಲದ ಕುಸ್ತಿಪಟು ವಿಕಾಸ್ ಕುಮಾರ್‌ ಅಸ್ಗರೊವ್‌ ಅವರಿಗೆ ಸವಾಲು ಒಡ್ಡಿದ್ದರು. ಮೊದಲ ಸುತ್ತಿನಲ್ಲಿ ಕುಮಾರ್ ಅವರು ‘ದಂಗಲ್‌’ನ ಮಹಾವೀರ್‌ ಪೋಗಟ್‌ ಅವರಂತೆ (5–0) ಅಸ್ಗರೊವ್‌ ಅವರನ್ನು ನಿಯಂತ್ರಿಸಿದ್ದರು. ಎರಡನೇ ಸುತ್ತಿನಲ್ಲಿಯೂ 3–2 ಮುನ್ನಡೆ ಕಾಯ್ದುಕೊಂಡಿದ್ದರು. ಅಂತಿಮವಾಗಿ ಪಂದ್ಯ ಸೋತರು. ಆದರೆ, ಜಾಗತಿಕ ಮಟ್ಟದ ಎದುರಾಳಿಯನ್ನು ಎದುರಿಸುವ ಧೈರ್ಯ ಪ್ರದರ್ಶಿಸಿ ಕ್ರೀಡಾಭಿಮಾನಿಗಳ ಮನ ಗೆಲ್ಲುವಲ್ಲಿ ಅವರು ಸಫಲರಾಗಿದ್ದರು.

ದೇಶದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಪ್ರೊ ಕುಸ್ತಿ ಲೀಗ್‌ ಸಾಕಷ್ಟು ಹಣ ಮತ್ತು ಖ್ಯಾತಿ ಒಳಗೊಂಡಿದೆ. ‘ಐಪಿಎಲ್‌’ನಂತೆ  ನಗರ ಮತ್ತು ರಾಜ್ಯಗಳನ್ನು ಪ್ರತಿನಿಧಿಸುವ ಶ್ರೀಮಂತ ಉದ್ದಿಮೆದಾರರ ಮಾಲೀಕತ್ವದ ಫ್ರಾಂಚೈಸ್‌ಗಳು ಅಸ್ತಿತ್ವಕ್ಕೆ ಬಂದಿವೆ. ಬಹುಮಾನ ಮತ್ತು ಆಟಗಾರರ ಖರೀದಿಯಲ್ಲಿನ ಭಾರಿ ಮೊತ್ತವು ವಿಶ್ವದ ಖ್ಯಾತನಾಮ ಕುಸ್ತಿಪಟುಗಳನ್ನೂ ಸೆಳೆಯುತ್ತಿದೆ. ಮೊನ್ನೆ ನಡೆದ ಪಂದ್ಯದಲ್ಲಿ ಅಸ್ಗರೊವ್‌ ಅವರು ಎನ್‌ಸಿಆರ್‌ ಪಂಜಾಬ್‌ ರಾಯಲ್ಸ್‌ ಪರವಾಗಿ ಮುಂಬೈ ಮಹಾರಥಿ ತಂಡದ ಎದುರಾಳಿ ವಿರುದ್ಧ ಕಣಕ್ಕೆ ಇಳಿದಿದ್ದರು.

ಕುಸ್ತಿ ಅಭಿಮಾನಿಗಳು ಜಾಗತಿಕ ದರ್ಜೆಯ ಕುಸ್ತಿ ಪಂದ್ಯಗಳನ್ನು ಹತ್ತಿರದಿಂದಲೇ ನೋಡಿ ಆನಂದಿಸಲು ಇಚ್ಛಿಸಿದ್ದರೆ, ಸುಸಜ್ಜಿತ ಒಳಾಂಗಣ ಕ್ರೀಡಾಂಗಣದಲ್ಲಿ ವೀಕ್ಷಿಸಲು ಈಗ ಸಾಧ್ಯವಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ, ದೇಶಿ ಹೊಸ ಕುಸ್ತಿ ಪಟುಗಳು ಪ್ರವರ್ಧಮಾನಕ್ಕೆ ಬರುತ್ತಿರುವುದನ್ನೂ ಕಾಣಬಹುದಾಗಿದೆ.

ಈಗ ದೇಶಿ ಕುಸ್ತಿಗೆ ಶುಕ್ರದೆಸೆಯಂತೂ ಒದಗಿದೆ. ಕ್ರೀಡಾಭಿಮಾನಿಗಳ ಪಾಲಿಗೆ ವಿವಿಧ ಚಾನೆಲ್‌ಗಳು ವಿಭಿನ್ನ ಬಗೆಯ ಕ್ರೀಡಾ ಪಂದ್ಯಗಳನ್ನು ನೇರವಾಗಿ ಪ್ರಸಾರ ಮಾಡುತ್ತಿರುವುದರಿಂದ ಮನೆಯಲ್ಲಿ ಕುಳಿತುಕೊಂಡೇ ತಮ್ಮ ಇಷ್ಟದ ಕ್ರೀಡೆಗಳನ್ನು ವೀಕ್ಷಿಸಿ ಆನಂದಿಸಬಹುದಾಗಿದೆ.

ಒಂದೆಡೆ ಕುಸ್ತಿ ಪಂದ್ಯಗಳು ನಡೆಯುತ್ತಿರುವಾಗಲೇ ಇನ್ನೊಂದು ಚಾನೆಲ್‌ನಲ್ಲಿ  ಪ್ರೀಮಿಯರ್‌ ಬ್ಯಾಡ್ಮಿಂಟನ್‌ ಲೀಗ್‌ (ಪಿಬಿಎಲ್‌) ಪಂದ್ಯಗಳು ನಡೆಯುತ್ತಿವೆ. ದೇಶದ ಹೊಸ ಬ್ಯಾಡ್ಮಿಂಟನ್‌ ತಾರೆ ಕಿದಂಬಿ ಶ್ರೀಕಾಂತ್‌, ವಿಶ್ವದ ನಂಬರ್‌ 2 ಆಟಗಾರರಾಗಿರುವ ಡೆನ್ಮಾರ್ಕ್‌ನ ಜನ್‌ ಒಸ್ಟೆಗಾರ್ಡ್‌ ಜಾರ್ಗನ್‌ಸೆನ್‌ ಅವರ ಮೇಲೆ ಆಟದ ಅಂಗಳದಲ್ಲಿ ಹಿಡಿತ ಹೊಂದಲು ಹೋರಾಟ ನಡೆಸುತ್ತಿದ್ದರು.

ಶ್ರೀಕಾಂತ್ ಅವರು ಜಾಗತಿಕ ಮಟ್ಟದಲ್ಲಿ ಸದ್ಯಕ್ಕೆ 15ನೇ ರ್‍ಯಾಂಕ್‌ನಲ್ಲಿದ್ದರೂ, ಗೆಲುವು ಸಾಧಿಸಿದ್ದರು. ಲಖನೌದಲ್ಲಿನ ಸ್ಟೇಡಿಯಂ ಪೂರ್ಣಪ್ರಮಾಣದಲ್ಲಿ ಭರ್ತಿಯಾಗಿತ್ತು.  ಹೊಸ ಶಕ್ತಿಯಾಗಿ ಬೆಳೆಯುತ್ತಿರುವ ಭಾರತದ ಚಾಂಪಿಯನ್ನರ ಜತೆ ಪಂದ್ಯಗಳನ್ನಾಡಲು ವಿಶ್ವದ ಬ್ಯಾಡ್ಮಿಂಟನ್‌ ಪ್ರತಿಭಾನ್ವಿತರು ಭಾರತಕ್ಕೆ ಬಂದಿದ್ದಾರೆ.

ಒಂದು ವೇಳೆ ನೀವು ಪ್ರೀಮಿಯರ್‌ ಬ್ಯಾಡ್ಮಿಂಟನ್‌ ಲೀಗ್‌ನ ಪಂದ್ಯಗಳನ್ನು ವೀಕ್ಷಿಸುವಾಗ, ಮೊದಲ ಸಾಲಿನಲ್ಲಿ ವಿರಾಜಮಾನರಾಗಿರುವ ರಾಜಕಾರಣಿ ಅಖಿಲೇಶ್‌ ದಾಸ್‌ ಖಂಡಿತವಾಗಿಯೂ ನಿಮ್ಮ ಕಣ್ಣಿಗೆ ಬೀಳುತ್ತಾರೆ. ಭಾರತದ ಬ್ಯಾಡ್ಮಿಂಟನ್‌ ಸಂಘದ (ಬಿಎಐ) ಮುಖ್ಯಸ್ಥರಾಗಿರುವ ದಾಸ್‌, ಯಾವತ್ತೂ ಬ್ಯಾಡ್ಮಿಂಟನ್‌ ಆಡಿದವರಲ್ಲ. ಆದರೂ ಬ್ಯಾಡ್ಮಿಂಟನ್‌ ಪಂದ್ಯಗಳನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ.

ಹಲವಾರು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿರುವ ದಾಸ್‌ ಅವರು ಉತ್ತರ ಪ್ರದೇಶದ  ಮುಖ್ಯಮಂತ್ರಿಯಾಗಿದ್ದ ದಿವಂಗತ ಬನಾರಸಿ ದಾಸ್‌ ಅವರ ಮಗ. ‘ಯುಪಿಎ–1’ ಅಧಿಕಾರಾವಧಿಯಲ್ಲಿ ಉಕ್ಕು ರಾಜ್ಯ ಸಚಿವರೂ ಆಗಿದ್ದರು. ರಾಹುಲ್‌ ಗಾಂಧಿ ಅವರ ಜತೆಗಿನ ಮುನಿಸಿನಿಂದಾಗಿ ಪಕ್ಷ ತೊರೆದು ಬಿಎಸ್‌ಪಿ ಸೇರಿಕೊಂಡಿದ್ದರು. ಇವರ ನೇತೃತ್ವದಲ್ಲಿನ ‘ಬಿಎಐ’ ವಿವಾದಗಳಿಂದೇನೂ ಮುಕ್ತವಾಗಿಲ್ಲ. ಜ್ವಾಲಾ ಗುಟ್ಟಾ ಸೇರಿದಂತೆ ಅನೇಕ ಆಟಗಾರರು ಸಂಘದ ವಿರುದ್ಧ ಹಲವು ಮೊಕದ್ದಮೆಗಳನ್ನು ದಾಖಲಿಸಿದ್ದಾರೆ. ಇದೆಲ್ಲ ಏನೇ ಇರಲಿ, ದೇಶಿ ಬ್ಯಾಡ್ಮಿಂಟನ್‌ ವಲಯವು ಈ ಹಿಂದೆ ಯಾವತ್ತೂ ಈಗ ಕಾಣುತ್ತಿರುವ ಉತ್ತಮ ಪರಿಸ್ಥಿತಿಯಲ್ಲಿ ಇದ್ದಿರಲಿಲ್ಲ ಎನ್ನುವುದು ಮಾತ್ರ ನಿಜ.

ಭಾರತದ ಕುಸ್ತಿ ಫೆಡರೇಷನ್‌ ರಾಜಕಾರಣಿ ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌ ಅವರ ಹಿಡಿತದಲ್ಲಿ ಇದೆ. ಪೂರ್ವ ಉತ್ತರ ಪ್ರದೇಶದ ಗೊಂಡಾ ಲೋಕಸಭಾ ಮತಕ್ಷೇತ್ರವನ್ನು ಐದು ಬಾರಿ ಪ್ರತಿನಿಧಿಸಿರುವ (ನಾಲ್ಕು ಬಾರಿ ಬಿಜೆಪಿ ಮತ್ತು 2009ರಲ್ಲಿ ಒಂದು ಬಾರಿ ಎಸ್‌ಪಿ) ಇವರು ಹಲವು ದಶಕಗಳ ಅವಧಿಯಲ್ಲಿ ಖ್ಯಾತಿ ಗಳಿಸಿರುವುದಕ್ಕಿಂತ ಕುಖ್ಯಾತಿ ಪಡೆದಿರುವುದೇ ಹೆಚ್ಚು. 16ನೇ ವಯಸ್ಸಿನಲ್ಲಿದ್ದಾಗಲೇ ಬಾಬ್ರಿ– ಅಯೋಧ್ಯೆ   ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಶಿಕ್ಷೆಗೆ ಗುರಿಯಾಗಿದ್ದರು. ಆನಂತರ ‘ಟಾಡಾ’ ಕಾಯ್ದೆಯಡಿ ಬಂಧಿತರಾಗಿದ್ದರು. ಇವರ ಬಗ್ಗೆ ಹೆಚ್ಚಿನ ವೈಯಕ್ತಿಕ ಮಾಹಿತಿ ಬೇಕಿದ್ದರೆ ಅವರ ಅಂತರ್ಜಾಲ ತಾಣಕ್ಕೆ ಭೇಟಿ ನೀಡಬಹುದು.

ರಾಜಕೀಯವಾಗಿ ಬೆಳೆಯುತ್ತಿದ್ದಂತೆ ಅವರು, ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಕ್ರೀಡಾ ಸಂಘ ಸಂಸ್ಥೆಗಳಲ್ಲಿ ನಾಯಕತ್ವ ಹೊಂದಲು ಹೊಸ ಹೊಸ ಕುಸ್ತಿ ಪಟ್ಟುಗಳನ್ನು ಹಾಕುತ್ತಲೇ ಹೋದರು. ಭಾರತದ ಕುಸ್ತಿ ಫೆಡರೇಷನ್‌ಗೆ (ಡಬ್ಲ್ಯುಎಫ್‌ಐ) ಕೂಡ  ‘ಬಿಸಿಸಿಐ’ಗೆ ಅನ್ವಯಿಸಿರುವ ನಿಯಮಗಳನ್ನು ಪಾಲಿಸಲು ಸೂಚಿಸಿದರೆ ಮತ್ತು ಲೋಧಾ ಸಮಿತಿ ತಕ್ಷಣಕ್ಕೆ ಪರೀಕ್ಷೆ ನಡೆಸಿದರೆ ಅದರಲ್ಲಿ ಬ್ರಿಜ್ ಭೂಷಣ್‌ ಶರಣ್‌ ಮತ್ತು ಅಖಿಲೇಶ್‌ ಇಬ್ಬರೂ ಅನುತ್ತೀರ್ಣಗೊಳ್ಳುತ್ತಾರೆ. ಆದರೆ, ಇವರಿಬ್ಬರ ನಿಯಂತ್ರಣದಲ್ಲಿ ಇರುವ ಬ್ಯಾಡ್ಮಿಂಟನ್‌ ಮತ್ತು ಕುಸ್ತಿ ವಲಯಗಳು ಈ ಹಿಂದೆ ಯಾವತ್ತೂ ಇಂದಿನಷ್ಟು  ಉತ್ತಮ ಸಾಧನೆ ಮಾಡಿರಲಿಲ್ಲ.

ಇತರ ಕ್ರೀಡೆಗಳಲ್ಲಿನ ಪ್ರಗತಿ ಬಗ್ಗೆಯೂ ನಾವಿಲ್ಲಿ ಚರ್ಚಿಸಬಹುದು. ಅಭಯ್‌ ಚೌತಾಲಾ ಅವರು ಬಾಕ್ಸಿಂಗ್‌ ಫೆಡರೇಷನ್ನಿನ ಮುಖ್ಯಸ್ಥರಾಗಿದ್ದ 2007–12ರ ಅವಧಿಯಲ್ಲಿ ದೇಶಿ ಬಾಕ್ಸಿಂಗ್‌ ವಲಯವು ಉಚ್ಛ್ರಾಯ ಸ್ಥಿತಿ ತಲುಪಿತ್ತು. (ಭಾರತದ ಒಲಿಂಪಿಕ್ಸ್‌ ಸಂಘ  ‘ಐಒಎ’ದ ಆಜೀವ ಪೋಷಕರನ್ನಾಗಿ ಇವರನ್ನು ನೇಮಿಸಿದ ನಿರ್ಧಾರಕ್ಕೆ ವಾರದ ಹಿಂದಷ್ಟೇ ತೀವ್ರ ಆಕ್ಷೇಪ ಕೇಳಿ ಬಂದಿತ್ತು.) ಭ್ರಷ್ಟಾಚಾರದ ಆರೋಪಗಳಿಗಾಗಿ ಚೌತಾಲಾ ಅವರ ತಂದೆ ಮತ್ತು ಸೋದರನನ್ನು ಕೋರ್ಟ್‌ ಜೈಲಿಗೆ ಹಾಕಿದಾಗ ಹರಿಯಾಣದಲ್ಲಿ ಭೂಪಿಂದರ್‌ ಸಿಂಗ್ ಹೂಡಾ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಅಧಿಕಾರದಲ್ಲಿತ್ತು.

ಆದರೆ, ಈ ಚೌತಾಲಾ ಕುಟುಂಬದವರು ಹರಿಯಾಣವನ್ನು ಬಾಕ್ಸಿಂಗ್‌ ಅಲ್ಲದೆ ಇತರ ಕ್ರೀಡೆಗಳ  ರಾಜಧಾನಿಯನ್ನಾಗಿ ಬೆಳೆಸುವಲ್ಲಿ ಸಂಘಟಿತ ಪ್ರಯತ್ನ ಮಾಡಿದ್ದರು. ಫೆಡರೇಷನ್‌ನಿಂದ ಚೌತಾಲಾ ಹೊರ ಬೀಳುತ್ತಿದ್ದಂತೆ ರಾಜ್ಯದಲ್ಲಿ  ಬಾಕ್ಸಿಂಗ್‌ ಮಹತ್ವ ಕಳೆದುಕೊಂಡಿತು. ಸ್ಪೈಸ್‌ಜೆಟ್‌ನ ಹೊಸ ಮಾಲೀಕರೂ ಆಗಿರುವ ಮತ್ತು ದಿವಂಗತ ಪ್ರಮೋದ್‌ ಮಹಾಜನ್‌ ಅವರ ಹಳೆಯ ಸ್ನೇಹಿತರೂ ಆಗಿರುವ ಅಜಯ್‌ ಸಿಂಗ್‌ ಅವರ ನೇತೃತ್ವದಲ್ಲಿ ಈಗ ಫೆಡರೇಷನ್‌ಗೆ ಹೊಸ ಕಾಯಕಲ್ಪ ನೀಡಲಾಗುತ್ತಿದೆ.

ಇನ್ನೊಂದೆಡೆ ಕಬಡ್ಡಿಯೂ ಪ್ರವರ್ಧಮಾನಕ್ಕೆ ಬರುತ್ತಿದೆ. ಅಂತರರಾಷ್ಟ್ರೀಯ ಮಟ್ಟದ ಲೀಗ್‌ಗಳನ್ನು ಸಂಘಟಿಸಲಾಗುತ್ತಿದೆ. ಅಂತರರಾಷ್ಟ್ರೀಯ ಕಬಡ್ಡಿ ಫೆಡರೇಷನ್ನಿನ ಸ್ಥಾಪಕ ಅಧ್ಯಕ್ಷ ಮತ್ತು 28 ವರ್ಷಗಳ  ಕಾಲ ಅಮೆಚೂರ್‌ ಕಬಡ್ಡಿ ಫೆಡರೇಷನ್ನಿನ ಅಧ್ಯಕ್ಷರಾಗಿದ್ದ ರಾಜಕಾರಣಿ ಜನಾರ್ದನ ಸಿಂಗ್‌ ಗೆಹ್ಲೋಟ್‌ ಇತ್ತೀಚೆಗಷ್ಟೇ ವಿಶ್ವ ಕಬಡ್ಡಿ ಒಕ್ಕೂಟದ (ಡಬ್ಲ್ಯುಕೆಎಫ್‌)  ಮುಖ್ಯಸ್ಥರಾಗಿದ್ದಾರೆ.

ಕ್ರೀಡೆಗಳಲ್ಲಿ ಗಮನಾರ್ಹ ಸುಧಾರಣೆ ತಂದಿರುವ ಇವರಲ್ಲಿ ಯಾರೊಬ್ಬರೂ ಲೋಧಾ ಸಮಿತಿಯ ವಯಸ್ಸು, ವೃತ್ತಿ ಮತ್ತು ಅಧಿಕಾರಾವಧಿಯ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದಿಲ್ಲ. ಆದರೆ, ಇದಕ್ಕೆ ಅಥ್ಲೆಟಿಕ್ಸ್‌ಗಳು ಅಪವಾದವಾಗಿದ್ದಾರೆ. ಶ್ರೇಷ್ಠ ಕ್ರೀಡಾಪಟುಗಳಲ್ಲಿ ಒಬ್ಬರಾಗಿರುವ ಅಥ್ಲೆಟಿಕ್ಸ್‌ ಫೆಡರೇಷನ್‌ ಮುಖ್ಯಸ್ಥ ಅದಿಲ್‌ ಸುಮಾರಿವಾಲ ಈಗಲೂ ಯುವಕರಾಗಿದ್ದು, ಲೋಧಾ ಅವರ ಪರೀಕ್ಷೆಯಲ್ಲಿ ಪೂರ್ಣ ಅಂಕ ಗಳಿಸಲಿದ್ದಾರೆ.

ರಾಷ್ಟ್ರೀಯ ಆಯ್ಕೆಗಾಗಿ ಅಧಿಕಾರಿಗಳು ಲಂಚ ಪಡೆಯುತ್ತಿದ್ದ ಕೃತ್ಯ ಬಯಲಿಗೆ ಬಂದಾಗ ಕೆ.ಪಿ.ಎಸ್‌. ಗಿಲ್‌ ನೇತೃತ್ವದ ಭಾರತದ ಹಾಕಿ ಫೆಡರೇಷನ್‌ ಅನ್ನು (ಐಎಚ್‌ಎಫ್‌) ಅಮಾನತುಗೊಳಿಸಲಾಗಿತ್ತು. ಸುರೇಶ್‌ ಕಲ್ಮಾಡಿ ನೇತೃತ್ವದಲ್ಲಿನ ಭಾರತ ಒಲಿಂಪಿಕ್ ಸಂಘ (ಐಒಎ) ಮತ್ತು ಕ್ರೀಡಾ ಸಚಿವಾಲಯಗಳು ಜಂಟಿಯಾಗಿ ಹಾಕಿ ಇಂಡಿಯಾ ಸಂಘಟನೆ ಸ್ಥಾಪಿಸಿದ್ದವು. ದೆಹಲಿಯ ಬಾತ್ರಾ ಆಸ್ಪತ್ರೆಯ ಮಾಲೀಕ  ನರೀಂದರ್‌ ಬಾತ್ರಾ ಇತ್ತೀಚಿನವರೆಗೂ ಇದರ ಮುಖ್ಯಸ್ಥರಾಗಿದ್ದರು. ಇವರ ಅಧಿಕಾರಾವಧಿಯಲ್ಲಿ ಭಾರತದ ಪುರುಷ  ಮತ್ತು ಮಹಿಳಾ ತಂಡಗಳು ಏಷ್ಯಾದ ಚಾಂಪಿಯನ್‌ ಪಟ್ಟವನ್ನು ಮರಳಿ ಪಡೆದುಕೊಂಡವು.

ಅಂತರರಾಷ್ಟ್ರೀಯ ಹಾಕಿ ಫೆಡರೇಷನ್‌ಗೆ (ಎಫ್‌ಐಎಚ್‌) ಬಾತ್ರಾ ಇತ್ತೀಚೆಗಷ್ಟೇ ಮುಖ್ಯಸ್ಥರಾಗಿದ್ದಾರೆ. ಹಾಕಿ ಇಂಡಿಯಾ ಲೀಗ್ ವಿಶ್ವದ ಅತ್ಯುತ್ತಮ ಆಟಗಾರರನ್ನೂ ಸೆಳೆಯುತ್ತಿದೆ. ಆಟಗಾರರ ಹರಾಜಿನ ಮೊತ್ತವನ್ನು ನೋಡಿದರೆ, ಹಾಕಿ ಕ್ರೀಡೆಯು ಇಷ್ಟು ದೊಡ್ಡ ಮೊತ್ತವನ್ನು ಕನಸು ಮನಸುಗಳಲ್ಲಿಯೂ ಊಹಿಸಿರಲಿಕ್ಕಿಲ್ಲ. ಹಾಕಿ ಅಭಿಮಾನಿಗಳು ಮತ್ತೆ ಕ್ರೀಡಾಂಗಣದತ್ತ ಮುಖ ಮಾಡುತ್ತಿದ್ದಾರೆ. ಕ್ರಿಕೆಟ್‌ ‘ಟಿ20’ ಮಾದರಿಯಲ್ಲಿಯೇ ಹಾಕಿ ಲೀಗ್‌ ಪಂದ್ಯಗಳು ನಡೆಯುತ್ತಿವೆ.

ವಯಸ್ಸು, ರಾಜಕೀಯ, ಸಿರಿವಂತಿಕೆ ಮತ್ತು ಕ್ರೀಡಾ ದಾಖಲೆಗಳನ್ನು ಪರಿಗಣಿಸುವ  ಅಥವಾ ಇಂತಹ ಯಾವುದೇ ಗುಣವಿಶೇಷಗಳು ಇರದ ಕ್ರೀಡೆ ಯಶಸ್ಸು ಕಾಣುವುದೇ ಎನ್ನುವುದು ಗೊಂದಲಕಾರಿಯಾಗಿದೆ. ಇಂತಹ ಅನಿಶ್ಚಿತ ವಿದ್ಯಮಾನಗಳಿಂದ ನಾವು ಯಾವುದಾದರೂ ನಿರ್ಧಾರಕ್ಕೆ ಬರಲು ಸಾಧ್ಯವೇ? ಮಾನದಂಡಗಳನ್ನು ಗುರುತಿಸುವುದಾದರೂ ಹೇಗೆ? ಅದರಲ್ಲೂ, ದೇಶದ ಅತ್ಯಂತ ಯಶಸ್ವಿ ಕ್ರಿಕೆಟ್‌ಗೆ ಈ ಎಲ್ಲ ಮಾನದಂಡಗಳನ್ನು ಅನ್ವಯಿಸುವುದಾದರೂ ಹೇಗೆ ಎನ್ನುವ ಪ್ರಶ್ನೆಗಳು ಇಲ್ಲಿ ಎದುರಾಗುತ್ತಿವೆ. ಭಾರತದ ಕ್ರಿಕೆಟ್‌ ತಂಡ ಸದ್ಯಕ್ಕೆ ಅಂತರರಾಷ್ಟ್ರೀಯ ತಂಡಗಳ ಪಟ್ಟಿಯಲ್ಲಿ ಮುಂಚೂಣಿ ಸ್ಥಾನ ಕಾಯ್ದುಕೊಂಡಿದೆ. ಇಷ್ಟೇ ಅಲ್ಲದೆ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯು ವಿಶ್ವದ ಅತ್ಯಂತ  ಶ್ರೀಮಂತ ಕ್ರಿಕೆಟ್‌ ಮಂಡಳಿಯಾಗಿಯೂ ಬೆಳೆದಿದೆ.

ಬಿಸಿಸಿಐ ಅಪಾರದರ್ಶಕ ವಹಿವಾಟಿನಿಂದಾಗಿ ಭ್ರಷ್ಟತೆ ಮತ್ತು ಅಹಂಕಾರ ಮೈಗೂಡಿಸಿಕೊಂಡಿರುವ ಸಂಸ್ಥೆಯಾಗಿದೆ. ಬಿಸಿಸಿಐನಲ್ಲಿ ಇರುವ ಬಹುತೇಕ ಅಧಿಕಾರಿಗಳು ಹಿತಾಸಕ್ತಿ ಸಂಘರ್ಷದ ಆರೋಪ ಎದುರಿಸುತ್ತಿದ್ದಾರೆ. ಇತರ ಯಾವುದೇ ಪ್ರತಿಷ್ಠಿತ ಕ್ಲಬ್‌ನಂತೆ ದೇಶಿ ಕ್ರಿಕೆಟ್‌ ಕೂಡ ಹೊಟ್ಟೆಕಿಚ್ಚಿಗೆ ಬಲಿಯಾಗಿದೆ. ಸುಪ್ರೀಂ ಕೋರ್ಟ್‌ನ ಆದೇಶವನ್ನು ಪಾಲಿಸದೇ ಬಿಸಿಸಿಐ ಪ್ರಮಾದ ಎಸಗಿದೆ. ಆದರೆ, ಲೋಧಾ ಸಮಿತಿಯ ಶಿಫಾರಸು ಜಾರಿಗೊಳಿಸುವ ಆದೇಶವು ಸಿಟ್ಟಿನ ಭರದಲ್ಲಿ ಕೈಗೊಂಡ ನಿರ್ಧಾರವಾಗಿದೆ ಎಂದು ನಾನು ವಿನಯಪೂರ್ವಕವಾಗಿ ಹೇಳಲು ಬಯಸುತ್ತೇನೆ.

ಕೋರ್ಟ್‌ ಅಥವಾ ಅದರ ಸಮಿತಿಗಳು ಬಿಸಿಸಿಐ ಸುಧಾರಣೆಯ ಗೋಜಲಿನಲ್ಲಿ ಸಿಲುಕಿಕೊಳ್ಳಬಾರದಿತ್ತು. ಈಗ ಆಗಿರುವುದು ಏನೆಂದರೆ, ಶಸ್ತ್ರಚಿಕಿತ್ಸೆಯ ಮೇಜಿನ ಮೇಲೆ ರೋಗಿಯ ದೇಹ ಛೇದನ ಮಾಡಿ ಅದಕ್ಕೆ ಹೊಲಿಗೆ ಹಾಕದೆಯೆ ಹಾಗೇ ಬಿಟ್ಟಿರುವಂತೆ ಭಾಸವಾಗುತ್ತಿದೆ. ಸಮಿತಿಯ ಶಿಫಾರಸು ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿ, ಅದಕ್ಕೆ ಸರ್ಕಾರ ಕೈಗೊಂಡ ಕ್ರಮಗಳ ವರದಿ ಬಯಸಿ, ಸಮಾಲೋಚನೆ ನಂತರವೇ ಸುಪ್ರೀಂ ಕೋರ್ಟ್‌ ಅಗತ್ಯ ಕ್ರಮ ಕೈಗೊಳ್ಳಬೇಕಾಗಿತ್ತು.

ಬಿಸಿಸಿಐ ಸುಧಾರಣೆ ವಿಷಯದಲ್ಲಿ ನ್ಯಾಯಮೂರ್ತಿಗಳು ತುಂಬ ಪರಿಶ್ರಮಪಟ್ಟಿದ್ದಾರೆ. ಆದರೆ, ಅವರು ಆಧುನಿಕ ಕ್ರೀಡೆಯಲ್ಲಿನ ಬದಲಾವಣೆಗಳನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ. ಕ್ರೀಡೆಗಳು ಈಗ ಗೌಜು ಗದ್ದಲ, ದುಂದುವೆಚ್ಚ ಮುಂತಾದ ಕಾರಣಗಳಿಂದ ವರ್ಣರಂಜಿತವಾಗಿವೆ. ಉದ್ಯಮಶೀಲತೆಯು ಲಾಭದಾಯಕ ರೀತಿಯಲ್ಲಿ ಯಶಸ್ವಿಯಾದರೆ ಮಾತ್ರ ಕ್ರೀಡಾಸ್ಫೂರ್ತಿ ಕೂಡ ಯಶಸ್ಸು ಕಾಣುವುದು.

ಈ ವಿಷಯದಲ್ಲಿ ಭಾರತದಲ್ಲಿ ‘ಐಪಿಎಲ್‌’ನ ಜನಪ್ರಿಯತೆ ಇದಕ್ಕೆ ನಿದರ್ಶನವಾಗಿದೆ. ಈ ಅಂಕಣದ ಆರಂಭದಲ್ಲಿ ಉಲ್ಲೇಖಿಸಿರುವ ಇತರ ಕ್ರೀಡೆಗಳು ಕೂಡ ಜನಪ್ರಿಯತೆಯ ಹಾದಿಯಲ್ಲಿ ಸಾಗಿರುವುದಕ್ಕೆ ಅವೆಲ್ಲವೂ ‘ಐಪಿಎಲ್‌’ನ ಸೂತ್ರಗಳನ್ನು ಪಾಲಿಸುತ್ತಿರುವುದೇ ಮುಖ್ಯ ಕಾರಣ. ಹಣ ಕೊಟ್ಟು ಕ್ರಿಕೆಟ್‌ ನೋಡಲು ಬರುವ ಅಭಿಮಾನಿಗಳು ವಿರಾಟ್‌ ಕೊಹ್ಲಿ ಮತ್ತು ರವೀಂದ್ರ ಜಡೇಜಾ ಅವರಂತಹ ಆಕ್ರಮಣಕಾರಿ ಆಟದ ಸೊಬಗು ಆನಂದಿಸುವರೇ ಹೊರತು, ಬೌಲರ್‌ ಬಾಪು ನಾಡಕರ್ಣಿ ಅವರಂತಹ ನಿರಂತರ 21 ಮೇಡನ್‌ ಓವರ್‌ಗಳ ಎಸೆತವನ್ನಲ್ಲ.

ಕ್ರೀಡೆಯು ಈಗ ಹಣ ಮತ್ತು ರಂಜನೆಯ ಸರಕಾಗಿದೆ. ಲೋಧಾ ಸಮಿತಿಯ ಗೌರವಾನ್ವಿತ ಸದಸ್ಯರು 1996ರಲ್ಲಿ ಬಿಡುಗಡೆಯಾಗಿ ಭರ್ಜರಿ ಯಶಸ್ಸು ಕಂಡ ಚಲನಚಿತ್ರ ‘ಜೆರ್ರಿ ಮ್ಯಾಗ್ವೈರ್‌’ ನೋಡಲು ಸಮಯಾವಕಾಶ ಮಾಡಿಕೊಂಡಿರುವ ಬಗ್ಗೆಯಾಗಲಿ ಅಥವಾ ಆ ಚಲನಚಿತ್ರದ ಕುರಿತು ಅವರಲ್ಲಿ ಯಾವುದೇ ಮಾಹಿತಿ ಇರುವ ಬಗ್ಗೆಯಾಗಲಿ ನಾನು ಖಚಿತವಾಗಿ ಹೇಳಲಾರೆ.
(ಲೇಖಕ ಮೀಡಿಯಾಸ್ಕೇಪ್ ಪ್ರೈ.ಲಿ. ಸಂಸ್ಥಾಪಕ ಸಂಪಾದಕ ಹಾಗೂ ಅಧ್ಯಕ್ಷ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT