ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಡ್‍ಚಿರೋಲಿ ಗಾಂಧಿವಾದಿಗಳು ಮತ್ತು ಸೇವೆ

Last Updated 7 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಮಹಾರಾಷ್ಟ್ರದ ಕೆಲವು ಸಾಧಕರನ್ನು ಸನ್ಮಾನಿಸುವುದಕ್ಕಾಗಿ ಜನವರಿಯಲ್ಲಿ ಪುಣೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ಸಮಾಜ ಸುಧಾರಕಿ ಮೆಹರುನ್ನಿಸಾ ದಳ್ವಾಯಿ ಮತ್ತು ಲೇಖಕ ಅರುಣ್‌ ಸಾಧು ಸನ್ಮಾನಿತರಲ್ಲಿ ಸೇರಿದ್ದರು. ಈ ವರ್ಷದಲ್ಲಿ ಈ ಇಬ್ಬರೂ ನಿಧನರಾದರು. ಆದರೆ, ಉಳಿದ ಸನ್ಮಾನಿತರು ಇದ್ದಾರೆ ಎಂಬುದು ಸಂತಸದ ವಿಚಾರ. ಅವರಲ್ಲಿ, ಗಡ್‌ಚಿರೋಲಿ ಜಿಲ್ಲೆಯ ಧನೋರಾ ತಾಲ್ಲೂಕಿನ ಮೆಂಡಾ ಗ್ರಾಮದ ಆದಿವಾಸಿ ಕಾರ್ಯಕರ್ತ ದೇವಜಿ ತೋಫಾ ಒಬ್ಬರು.

ವೈದ್ಯ ದಂಪತಿ ಅಭಯ್‌ ಮತ್ತು ರಾಣಿ ಬಾಂಗ್‌ ಅವರು ಗಡ್‌ಚಿರೋಲಿಯ ಶೋಧಗ್ರಾಮದಲ್ಲಿ ಸ್ಥಾಪಿಸಿರುವ ಸಮುದಾಯ ಆರೋಗ್ಯ ಕೇಂದ್ರವನ್ನು ಸಂದರ್ಶಿಸುವ ನನ್ನ ಅಪೇಕ್ಷೆ ಬಹಳ ಕಾಲದಿಂದ ಬಾಕಿ ಉಳಿದಿತ್ತು. ಹಾಗಾಗಿ ನವೆಂಬರ್‌ನಲ್ಲಿ ನಾನು ಗಡ್‌ಚಿರೋಲಿಗೆ ಹೋದೆ. ಚಿನ್ನದ ಪದಕದೊಂದಿಗೆ ವೈದ್ಯಕೀಯ ವಿದ್ಯಾಭ್ಯಾಸ ಪೂರ್ಣಗೊಳಿಸಿದ್ದ ಈ ಇಬ್ಬರೂ ಮನಸ್ಸು ಮಾಡಿದ್ದರೆ ಖಾಸಗಿ ಆರೋಗ್ಯ ಸಂಸ್ಥೆಗಳಲ್ಲಿ ಆಕರ್ಷಕ ವೃತ್ತಿ ಕಟ್ಟಿಕೊಳ್ಳಬಹುದಿತ್ತು. ಆದರೆ ಇವರು ಭಾರತದ ಗ್ರಾಮಗಳಲ್ಲಿ ನೆಲೆಸಿ, ಅಲ್ಲಿನವರ ಸೇವೆ ಮಾಡುವುದರ ಜತೆಗೆ ಹಳ್ಳಿಗಳ ಅಧ್ಯಯನ ಮಾಡುವುದನ್ನು ಆಯ್ಕೆ ಮಾಡಿಕೊಂಡರು. ಸುಮಾರು ಮೂವತ್ತು ವರ್ಷ ಹಿಂದೆ ಪಶ್ಚಿಮ ಮಹಾರಾಷ್ಟ್ರದ, ಅರಣ್ಯದಿಂದ ಆವೃತವಾಗಿರುವ ಈ ಕುಗ್ರಾಮಕ್ಕೆ ಸ್ಥಳಾಂತರಗೊಂಡರು. ಅಲ್ಲಿ ‘ಸರ್ಚ್‌’ (ದ ಸೊಸೈಟಿ ಫಾರ್‌ ಎಜುಕೇಷನ್‌, ಆ್ಯಕ್ಷನ್‌ ಅಂಡ್‌ ರಿಸರ್ಚ್‌ ಇನ್‌ ಕಮ್ಯುನಿಟಿ ಹೆಲ್ತ್‌) ಎಂಬ ಸಂಸ್ಥೆ ಕಟ್ಟಿದರು.

‘ಸರ್ಚ್’ ಕೆಲಸ ಮಾಡುವ ಗ್ರಾಮಗಳಿಗೆ ಭೇಟಿ ನೀಡಿದಾಗ ಸಂಸ್ಥೆಯ ಸಿಬ್ಬಂದಿಯ ವೃತ್ತಿಪರತೆ ನನ್ನಲ್ಲಿ ಮೆಚ್ಚುಗೆ ಮೂಡಿಸಿತು; ಅಮೆರಿಕದಲ್ಲಿ ಶಿಕ್ಷಣ ಪಡೆದ ವೈದ್ಯರಿಂದ ಹಿಡಿದು ತರಬೇತಿ ಪಡೆದ ಬುಡಕಟ್ಟು ಸ್ವಯಂಸೇವಕರವರೆಗೆ ಎಲ್ಲರಲ್ಲೂ ವೃತ್ತಿಪರ ಉತ್ಕೃಷ್ಟತೆಗೆ ಬದ್ಧತೆ ಎದ್ದು ಕಾಣುತ್ತಿತ್ತು. ನವಜಾತ ಶಿಶುಗಳ ಸರಿಯಾದ ಆರೈಕೆ ಹೇಗೆ ಎಂಬುದನ್ನು ಸಮುದಾಯ ಆರೋಗ್ಯ ಕಾರ್ಯಕರ್ತರು ಗ್ರಾಮದ ಮಹಿಳೆಯರಿಗೆ ಹೇಳಿಕೊಡುತ್ತಿದ್ದುದನ್ನು ನಾನು ಕಂಡೆ. ನಿಪುಣ ಮೇಲ್ವಿಚಾರಕರು ಆರೋಗ್ಯ ಕಾರ್ಯಕರ್ತರ ಕೆಲಸದ ಉಸ್ತುವಾರಿ ನೋಡಿಕೊಳ್ಳುತ್ತಿದ್ದರೆ, ವೈದ್ಯರು ಅವರಿಗೆ ನಿರ್ದೇಶನಗಳನ್ನು ನೀಡುತ್ತಿದ್ದರು.

‘ಸರ್ಚ್‌’ನ ಕೆಲಸಗಳಿಂದಾಗಿ ಶೋಧಗ್ರಾಮದ ಸುತ್ತಲಿನ ಗ್ರಾಮಗಳಲ್ಲಿ ನವಜಾತ ಶಿಶು ಮತ್ತು ಮಕ್ಕಳ ಮರಣ ಪ್ರಮಾಣ ಗಣನೀಯವಾಗಿ ತಗ್ಗಿದೆ. ಅದರ ಜತೆಗೆ, ಕ್ಷೇತ್ರದಿಂದ ವ್ಯವಸ್ಥಿತವಾಗಿ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿ ಸರಣಿ ಸಂಶೋಧನಾ ಪ್ರಬಂಧಗಳು ರಚನೆಯಾಗಿವೆ. ಜಗತ್ತಿನಾದ್ಯಂತ ವೈದ್ಯಕೀಯ ವಲಯದಲ್ಲಿ ಈ ಪ್ರಬಂಧಗಳು ಚರ್ಚೆಗೊಳಗಾಗುತ್ತಿವೆ ಮತ್ತು ಸಾರ್ವಜನಿಕ ನೀತಿಯ ಮೇಲೆ ದೊಡ್ಡ ಮಟ್ಟದ ಪ್ರಭಾವವನ್ನೂ ಬೀರಿವೆ.

ಬಾಂಗ್ ದಂಪತಿಯ ಸಹಭಾಗಿತ್ವ ವೈಯಕ್ತಿಕ ಮತ್ತು ವೃತ್ತಿಪರ, ವೈಜ್ಞಾನಿಕ ಮತ್ತು ಆಧ್ಯಾತ್ಮಿಕ. ‘ಸರ್ಚ್’ನ ಕೆಲಸಗಳಲ್ಲಿ ಈ ಎರಡರ ಪ್ರಭಾವವನ್ನೂ ಕಾಣಬಹುದು. ಶ್ರಮ ವಿಭಜನೆಗೆ ಸಂಬಂಧಿಸಿದಂತೆ, ಅಭಯ್ ಹೆಚ್ಚಾಗಿ ಸಂಶೋಧನೆಯಲ್ಲಿ ತೊಡಗಿಕೊಂಡಿದ್ದರೆ, ಆರೋಗ್ಯ ಸೇವೆಯನ್ನು ರಾಣಿ ನೋಡಿಕೊಳ್ಳುತ್ತಾರೆ. ವರ್ಷಕ್ಕೆ ಸುಮಾರು 40 ಸಾವಿರ ರೋಗಿಗಳಿಗೆ ಚಿಕಿತ್ಸೆ ನೀಡುವ ಆಸ್ಪತ್ರೆಯ ಮೇಲ್ವಿಚಾರಣೆ ರಾಣಿ ಅವರದ್ದಾಗಿದೆ. ಇದಲ್ಲದೆ, ಗ್ರಾಮಗಳಲ್ಲಿ ಶಿಬಿರಗಳನ್ನು ನಡೆಸುವುದರ ಜತೆಗೆ, ಅವರು ರೋಗಿಗಳನ್ನೂ ನೋಡುತ್ತಾರೆ.

ಸುಮಾರು ಹತ್ತು ವರ್ಷಗಳ ಹಿಂದೆ ಅಭಯ್ ಮತ್ತು ರಾಣಿ ಬಾಂಗ್ ದಂಪತಿ ಆರಂಭಿಸಿದ ನಿರ್ಮಾಣ್ ಎಂಬ ಕಾರ್ಯಕ್ರಮ ಪ್ರತಿವರ್ಷ ನೂರಕ್ಕೂ ಹೆಚ್ಚು ಯುವ ವೃತ್ತಿಪರರಿಗೆ ತರಬೇತಿ ನೀಡುತ್ತದೆ. ನಾನು ಶೋಧಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿಯೇ ನಿರ್ಮಾಣ್ ಹಳೆ ವಿದ್ಯಾರ್ಥಿಗಳ ಶಿಬಿರವೂ ಏರ್ಪಾಡಾಗಿತ್ತು. ಇಪ್ಪತ್ತು, ಮೂವತ್ತರ ಆಸುಪಾಸಿನಲ್ಲಿರುವ ವೈದ್ಯರು ಮತ್ತು ಎಂಜಿನಿಯರ್‌ಗಳ ಜತೆಗೆ ನಾನು ಹಲವು ತಾಸು ಮಾತುಕತೆ ನಡೆಸಿದೆ. ಬಾಂಗ್ ದಂಪತಿಯ ಹಾಗೆಯೇ ಇವರೆಲ್ಲರೂ ಉನ್ನತ ಶಿಕ್ಷಣ ಪಡೆದವರು ಮತ್ತು ತಮ್ಮ ಶಿಕ್ಷಣವನ್ನು ಸ್ವಾರ್ಥಕ್ಕೆ ಬಳಸುವ ಬದಲು ಸಮಾಜ ಸೇವೆಗೆ ಬಳಸುವ ಬದ್ಧತೆ ಹೊಂದಿರುವವರು.

ಶೋಧಗ್ರಾಮವು ಗಡ್‍ಚಿರೋಲಿ ಪಟ್ಟಣದಿಂದ ಸುಮಾರು ಹತ್ತು ಕಿ.ಮೀ. ದೂರದಲ್ಲಿದೆ. ಅಲ್ಲಿಂದ ಮತ್ತೂ ಕೆಲವು ಮೈಲು ದೂರದಲ್ಲಿ ಮೆಂಡಾ ಗ್ರಾಮ ಇದೆ. ಅದು ದೇವಜಿ ತೋಫಾ ಅವರ ಊರು. ಪುಣೆಯಲ್ಲಿ ಸನ್ಮಾನಿತರಾದ ತೋಫಾ ಅವರನ್ನು ಜನವರಿಯಲ್ಲಿ ನಾನು ಕಂಡಿದ್ದೆ; ಈಗ ನಾನು ಅವರನ್ನು ಅವರದ್ದೇ ಸ್ಥಳದಲ್ಲಿ ಕಂಡೆ. ‘ಸರ್ಚ್‌’ನ ಸ್ವಯಂಸೇವಕನೊಬ್ಬ ಒಂದು ಬೆಳಿಗ್ಗೆ ನನ್ನನ್ನು ಮೆಂಡಾ ಗ್ರಾಮಕ್ಕೆ ಕರೆದೊಯ್ದ; ಗ್ರಾಮ ಪಂಚಾಯಿತಿ ಕಟ್ಟಡದ ಹೊರಗಿನ ಮರವೊಂದರ ಅಡಿಯಲ್ಲಿ ತೋಫಾ ಮತ್ತು ಅವರ ಸಹೋದ್ಯೋಗಿಗಳು ಕುಳಿತಿದ್ದರು. ಸರ್ಕಾರವು ಅತಿಕ್ರಮಿಸಿಕೊಂಡಿರುವ ಅರಣ್ಯವನ್ನು ಗ್ರಾಮಕ್ಕೆ ಬಿಟ್ಟುಕೊಡಬೇಕು ಎಂಬ ಹೋರಾಟ ನಡೆಸುತ್ತಿರುವುದಾಗಿ ತೋಫಾ ಮತ್ತು ಇತರರು ಹೇಳಿದರು.

ಮೆಂಡಾ ಜನವಸತಿ ಪ್ರದೇಶದ ಸುತ್ತಲೂ ಸಮೃದ್ಧ ಜೀವ ವೈವಿಧ್ಯ ಮತ್ತು ಮಾರುಕಟ್ಟೆಯಲ್ಲಿ ಭಾರಿ ಮೌಲ್ಯ ಇರುವ ಎಕರೆಗಟ್ಟಲೆ ಕಾಡು ಇದೆ. ಒಂದು ಕಾಲದಲ್ಲಿ ಗ್ರಾಮಸ್ಥರು ಬಿದಿರು ಕಡಿದು ಬಲ್ಲಾರ್‍ಪುರ ಕಾಗದ ಕಾರ್ಖಾನೆಗೆ ಮಾರುತ್ತಿದ್ದರು. ನೂರು ಗಳಗಳ ಒಂದು ಹೊರೆಗೆ ಒಂದು ರೂಪಾಯಿ ಅವರಿಗೆ ದೊರೆಯುತ್ತಿತ್ತು. ಈ ನಡುವೆ, ಭ್ರಷ್ಟ ಅಧಿಕಾರಿಗಳ ಜತೆ ಶಾಮೀಲಾದ ಗುತ್ತಿಗೆದಾರರು ದೊಡ್ಡ ದೊಡ್ಡ ಮರಗಳನ್ನು ಕಡಿಯತೊಡಗಿದರು ಮತ್ತು ಕಲ್ಲು ಗಣಿಗಾರಿಕೆಯನ್ನೂ ಆರಂಭಿಸಿದರು. ಕಾಡು ನಾಶದಿಂದಾದ ವಿನಾಶ, ಅದಕ್ಕೆ ತೆರಬೇಕಾದ ಬೆಲೆ (ಮಣ್ಣು ಸವೆತ ಮತ್ತು ನೀರಿನ ಕೊರತೆ) ಕಣ್ಣಿಗೆ ರಾಚತೊಡಗಿತು. ಅದನ್ನು ತಡೆಯಲು ಗ್ರಾಮಸ್ಥರು ಒಗ್ಗಟ್ಟಾದರು. ಅರಣ್ಯದ ಮೇಲಿನ ತಮ್ಮ ಹಕ್ಕುಗಳನ್ನು ಸಾಧಿಸುವಲ್ಲಿ ಯಶಸ್ವಿಯಾದರು.

2007ರಲ್ಲಿ ಅರಣ್ಯ ಹಕ್ಕು ಕಾಯ್ದೆ ಜಾರಿಗೆ ಬಂದ ಬಳಿಕ ತಮ್ಮದೇ ಆದ ‘ಸಮುದಾಯ’ ಕಾಡನ್ನು ಸೃಷ್ಟಿಸಿಕೊಂಡ ಗಡ್‍ಚಿರೋಲಿಯ ಕೆಲವು ಗ್ರಾಮಗಳಲ್ಲಿ ಮೆಂಡಾ ಕೂಡ ಒಂದು. ಮರಗಳನ್ನು ಕಡಿದು ಮಾರುವ ಅರಣ್ಯ ಇಲಾಖೆಯಂತಲ್ಲದೆ, ಆದಿವಾಸಿಗಳು ಬಿದಿರು ಮತ್ತಿತರ ಕಾಡುತ್ಪತ್ತಿಗಳನ್ನು ಮಾತ್ರ ಸಂಗ್ರಹಿಸುತ್ತಾರೆ. ಕಾಡುತ್ಪತ್ತಿ ಸಂಗ್ರಹ ಆದಿವಾಸಿಗಳಿಗೆ ಸುಸ್ಥಿರವಾದ ಆದಾಯ ಒದಗಿಸುವುದರ ಜತೆಗೆ ಪರಿಸರ ನಾಶವನ್ನು ತಡೆಗಟ್ಟುತ್ತದೆ.

ತಮ್ಮ ಕೆಲಸದ ಹಿನ್ನೆಲೆಯನ್ನು ವಿವರಿಸಿದ ಬಳಿಕ ತೋಫಾ ಅವರು ಮೆಂಡಾ ಗ್ರಾಮದ ಸ್ವಾಮ್ಯದ ವಿಸ್ತಾರವಾದ ಅರಣ್ಯ ನೋಡಲು ನಮ್ಮನ್ನು ಕರೆದೊಯ್ದರು. ಅರಣ್ಯ ಸುಂದರವೂ ವೈವಿಧ್ಯವೂ ಆಗಿದೆ; ವೈವಿಧ್ಯಮಯ ಸಸ್ಯಗಳು, ಪಕ್ಷಿಗಳು ಮತ್ತು ಕೀಟಗಳಿಂದ ಸಮೃದ್ಧವಾಗಿದೆ. ಅರಣ್ಯ ಇಲಾಖೆಯ ಕಾಡಿನಂತಲ್ಲದೆ ವಿವಿಧ ರೀತಿಯ ಮರಗಳು ಬೆಳೆದಿವೆ. ಅರಣ್ಯ ಇಲಾಖೆಯ ಕಾಡುಗಳಲ್ಲಿ ತೇಗ, ಪೀತದಾರು, ನೀಲಗಿರಿಯಂತಹ ಒಂದೇ ಜಾತಿಯ ಮರಗಳು ಮಾತ್ರ ಇರುತ್ತವೆ. ಸ್ವಯಂಪ್ರೇರಣೆಯಿಂದ ಕಾಡು ಕಾಯುವ ಕೆಲಸಕ್ಕೆ ಹೋಗುವ ಯುವ ಜನರನ್ನು ದಾರಿಯಲ್ಲಿ ಕಂಡೆವು; ಕಲ್ಲುಗಣಿಗಾರಿಕೆಯ ಪಳೆಯುಳಿಕೆಯೂ ಅಲ್ಲಿ ಇತ್ತು. ಆದರೆ ಈಗ ಗಣಿಗಾರಿಕೆ ನಿಂತಿದೆ. ಅರಣ್ಯ ಮಧ್ಯದಲ್ಲಿ ಎರಡು ಸಣ್ಣ ಕೆರೆಗಳಿದ್ದವು. ನೋಡಲು ಸುಂದರವಾಗಿದ್ದ ಕೆರೆಗಳಲ್ಲಿ ಸಾಕಷ್ಟು ಮೀನುಗಳಿವೆ. ಮೀನಿನಲ್ಲಿ ಮನುಷ್ಯರಿಗೆ ಅತ್ಯಗತ್ಯವಾದ ಪ್ರೊಟೀನ್ ಹೇರಳವಾಗಿದೆ.

ಮೆಂಡಾದಲ್ಲಿ ಕಂಡ ದೃಶ್ಯಗಳು ಮೆಚ್ಚುಗೆ ಮೂಡಿಸುತ್ತವೆ. ನನ್ನ ಜತೆಗೆ ಬಂದಿದ್ದ ‘ಸರ್ಚ್‌’ನ ಸಿಬ್ಬಂದಿ ಅದೇ ಜಿಲ್ಲೆಯಲ್ಲಿ ಬೆಳೆದವನು. ತೋಫಾ ಅವರ ಕೆಲಸ ಮೆಚ್ಚುವಂತಹುದೇ. ಆದರೆ, ಈ ಪ್ರದೇಶದಲ್ಲಿ ಇಂತಹ ಕೆಲಸ ಮಾಡಿದ ಇತರರೂ ಇದ್ದಾರೆ ಎಂದು ಆತ ಹೇಳಿದ. ಗಡ್‍ಚಿರೋಲಿಯ ಕೆಲವು ಆದಿವಾಸಿ ಮುಖಂಡರು ತಮ್ಮ ತಮ್ಮ ಪ್ರದೇಶಗಳಲ್ಲಿ ಸಮುದಾಯ ಅರಣ್ಯಗಳನ್ನು ಯಶಸ್ವಿಯಾಗಿ ಬೆಳೆಸಿದ್ದಾರೆ ಎಂದು ಆತ ತಿಳಿಸಿದ.

ಗಡ್‍ಚಿರೋಲಿಗೆ ಇದು ನನ್ನ ಮೊದಲ ಭೇಟಿ. ಆದರೆ, ಹಿಂದೆ ಬಸ್ತಾರ್‌ಗೆ ಹೋಗಿದ್ದರಿಂದಾಗಿ ಇಲ್ಲಿನ ಸಾಮಾಜಿಕ ಮತ್ತು ನೈಸರ್ಗಿಕ ಮೇಲ್ಮೈ ನನಗೆ ಪರಿಚಿತವಾಗಿತ್ತು. ಗಡ್‍ಚಿರೋಲಿ ಮತ್ತು ಬಸ್ತಾರ್ ಒಂದು ಕಾಲದಲ್ಲಿ ವಿಸ್ತಾರವಾದ ಆದಿವಾಸಿ ಅರಣ್ಯ ವಲಯವಾಗಿತ್ತು. ನಿಸರ್ಗ, ಸಂಸ್ಕೃತಿ, ಇತಿಹಾಸ ಮತ್ತು ಪರಂಪರೆ ಮೂಲಕ ಒಗ್ಗಟ್ಟಾಗಿತ್ತು. ಆದರೆ ಈಗ ರಾಜಕೀಯ ಗಡಿಗಳಿಂದಾಗಿ ಪ್ರತ್ಯೇಕವಾದ ರಾಜ್ಯಗಳಾಗಿವೆ.

ಬಸ್ತಾರ್‌ನ ಹಾಗೆಯೇ ಗಡ್‍ಚಿರೋಲಿ ಕೂಡ ಇತ್ತೀಚಿನ ದಶಕಗಳಲ್ಲಿ ಮಾವೊವಾದಿ ಬಂಡುಕೋರರ ಕೈಯಲ್ಲಿ ನಲುಗಿದೆ. ಈಗ, (ಅದೃಷ್ಟವಶಾತ್) ನಕ್ಸಲರ ಪ್ರಭಾವ ತಗ್ಗಿ, ಅವರು ರಕ್ಷಣಾತ್ಮಕ ತಂತ್ರಕ್ಕೆ ಇಳಿದಿದ್ದರೂ ಸಂಪೂರ್ಣನಾಶವಾಗಿಲ್ಲ; ನಾನು ಅಲ್ಲಿಗೆ ಭೇಟಿ ಕೊಟ್ಟ ವಾರದಲ್ಲಿಯೇ ಶೋಧಗ್ರಾಮದಿಂದ ಮೂವತ್ತು ಕಿಲೋಮೀಟರ್ ದೂರದಲ್ಲಿ ಪೊಲೀಸರ ಮೇಲೆ ನಕ್ಸಲರು ದಾಳಿ ನಡೆಸಿದ್ದಾರೆ.

ಬಸ್ತಾರ್‌ನಂತೆಯೇ ಗಡ್‍ಚಿರೋಲಿಯಲ್ಲಿ ಕೂಡ ಸಾಲ್ ಮರಗಳು, ಬಿದಿರು, ಬೆಟ್ಟಗಳು, ನದಿಗಳು ಮತ್ತು ಕೆರೆಗಳಿವೆ. ಹಿಂದೂ ಧರ್ಮದ ವಿವಿಧ ಜಾತಿಗಳಿಗೆ ಸೇರಿದ ಜನರು ಮತ್ತು ನಕ್ಸಲರಿದ್ದಾರೆ. ಗಣನೀಯವಾದ ಹಲವು ಸಾಮ್ಯಗಳಿವೆ. ಜತೆಗೆ, ವ್ಯತ್ಯಾಸಗಳೂ ಇವೆ; ವ್ಯತ್ಯಾಸಗಳು ಕೆಲವೇ ಆದರೂ ಅವು ಗಟ್ಟಿಯಾದ ಭಿನ್ನತೆಗಳು. ಬಸ್ತಾರ್‌ನಂತಲ್ಲದೆ, ಗಡ್‍ಚಿರೋಲಿಗೆ ಪ್ರಜಾಸತ್ತಾತ್ಮಕ, ಅಹಿಂಸಾತ್ಮಕ ಹೋರಾಟದ ದೊಡ್ಡ ಇತಿಹಾಸವಿದೆ. ಇದರಲ್ಲಿ ಗಾಂಧಿಪ್ರೇರಿತ ಮತ್ತು ಆದಿವಾಸಿಗಳಲ್ಲಿಯೇ ಸೃಷ್ಟಿಯಾದ ಹೋರಾಟಗಳೆರಡೂ ಸೇರಿವೆ. ಇನ್ನೊಂದೆಡೆ, ಬಸ್ತಾರ್‌ನಲ್ಲಿ ಸರ್ಕಾರವೇ ಪ್ರಾಯೋಜಿಸಿರುವ ಸಾಲ್ವಾ ಜುಡುಂ ಎಂಬ ಪಡೆ ಇದೆ. ಇದು ದೊಡ್ಡ ಪ್ರಮಾಣದಲ್ಲಿ ಹಿಂಸೆ ಮತ್ತು ವಿನಾಶಕ್ಕೆ ಕಾರಣವಾಗಿದೆ. ಇಂತಹ ವ್ಯವಸ್ಥೆ ಗಡ್‍ಚಿರೋಲಿಯಲ್ಲಿ ಇಲ್ಲ.

ನಾನು ಈ ಅಂಕಣದಲ್ಲಿ ಹಿಂದೆಲ್ಲ ಪ್ರತಿಪಾದಿಸಿದಂತೆ, ಆದಿವಾಸಿಗಳು ಈ ದೇಶದಲ್ಲಿ ಅತ್ಯಂತ ಹೆಚ್ಚು ಶೋಷಣೆಗೆ ಒಳಗಾದ ಸಾಮಾಜಿಕ ಗುಂಪು. ದಲಿತರು ಮತ್ತು ಮುಸ್ಲಿಮರಿಗಿಂತ ಹೆಚ್ಚು ಬಲಿಪಶುಗಳಾದವರು ಮತ್ತು ಕಳಂಕದ ಹಣೆಪಟ್ಟಿ ಹಚ್ಚಿಕೊಂಡವರು ಆದಿವಾಸಿಗಳು. ಆರ್ಥಿಕ ಮತ್ತು ಸಾಮಾಜಿಕ ಸೂಚಕಗಳ ಪ್ರಕಾರ, ಮಹಾರಾಷ್ಟ್ರದ ಅತ್ಯಂತ ಬಡ ಜಿಲ್ಲೆಗಳಲ್ಲಿ ಗಡ್‍ಚಿರೋಲಿ ಕೂಡ ಒಂದು. ಕೆಲವೆಡೆ ಪರಿಸ್ಥಿತಿ ಇನ್ನೂ ಕೆಟ್ಟದಾಗಿದೆ.  ಆದರೆ, ಜಿಲ್ಲೆಯ ಕೆಲವು ಭಾಗಗಳ ಸ್ಥಿತಿ ಈಗ ಸುಧಾರಣೆಗೊಳ್ಳುತ್ತಿದೆ. ಗಾಂಧಿವಾದಿ ಸಮಾಜ ಸೇವಕರು ಮತ್ತು ಆದಿವಾಸಿ ಹೋರಾಟಗಾರರ ಶ್ರಮದಿಂದಾಗಿ ಆರೋಗ್ಯ ಸೇವೆ ಮತ್ತು ಜೀವನೋಪಾಯ ಭದ್ರತೆ ಉತ್ತಮಗೊಂಡಿದೆ. ಅದೇ ಹೊತ್ತಿಗೆ, ರಾಜಕಾರಣಿಗಳ ಕುಮ್ಮಕ್ಕಿನ ರಕ್ಷಣಾ ಗುಂಪುಗಳಿಗೆ ಇಲ್ಲಿನ ಕಾನೂನು ಸುವ್ಯವಸ್ಥೆಯನ್ನು ಹೊರಗುತ್ತಿಗೆ ಕೊಡಲಾಗಿಲ್ಲ. ಸಾಮಾಜಿಕ ಪರಿಸರ ಸಂಪೂರ್ಣ ಸುರಕ್ಷಿತ ಎಂದು ಹೇಳಲಾಗದಿದ್ದರೂ ನಿಜಕ್ಕೂ ಯುದ್ಧಭೂಮಿಯೇ ಆಗಿರುವ ಛತ್ತೀಸಗಡದ ಆದಿವಾಸಿ ಜಿಲ್ಲೆಗಳಿಗಿಂತ ಕಡಿಮೆ ಅಪಾಯಕಾರಿ.

ಛತ್ತೀಸಗಡದ ಬಸ್ತಾರ್ ವಲಯದಲ್ಲಿ ಅಳಿದುಳಿದ ನಾಗರಿಕ ಸಮಾಜವನ್ನು ಸಾಲ್ವಾ ಜುಡುಂ ನಾಶ ಮಾಡಿದೆ. ಈಗ, ಪತ್ರಕರ್ತರಿಗೂ ಕಾಟ ಕೊಡುವ ಮೂಲಕ ಛತ್ತೀಸಗಡದ ಸರ್ಕಾರ ಪೊಲೀಸ್ ಆಡಳಿತವನ್ನು ಹೋಲುತ್ತದೆ. ದಾಂತೇವಾಡ, ಬಿಜಾಪುರ, ಬಸ್ತಾರ್ ಮತ್ತು ಸುಕ್ಮಾದ ಆದಿವಾಸಿಗಳು ಆಂತರಿಕ ಸಂಘರ್ಷದ ಭೀತಿಯಲ್ಲಿದ್ದಾರೆ. ಅವರ ವರ್ತಮಾನ ಕಳೆಗುಂದಿದೆ; ರಾಜ್ಯ ಸರ್ಕಾರವು ಹೆಚ್ಚು ಮಾನವೀಯ ಮತ್ತು ಪ್ರಜಾಸತ್ತಾತ್ಮಕ ನೀತಿಗಳನ್ನು ಅಳವಡಿಸಿಕೊಳ್ಳದಿದ್ದರೆ ಅವರ ಭವಿಷ್ಯ ಇನ್ನಷ್ಟು ಕಳೆಗುಂದಲಿದೆ.

ಮತ್ತೊಮ್ಮೆ ಬಸ್ತಾರ್‌ಗೆ ಹೋಗಬೇಕು ಎಂಬ ಇಚ್ಛೆ ನನ್ನಲ್ಲಿ ಇದೆ. ಆದರೆ, ಈಗ ಅಲ್ಲಿಗೆ ನಾನು ಹೋಗುವುದು ಬುದ್ಧಿವಂತಿಕೆ ಅಲ್ಲ. ಈ ಪ್ರದೇಶ ಹೊರಗಿನವರಿಗೆ ಸುರಕ್ಷಿತ ಅಲ್ಲವೇ ಅಲ್ಲ; ಸಾಲ್ವಾ ಜುಡುಂ ವ್ಯವಸ್ಥೆಯನ್ನು ರದ್ದುಗೊಳಿಸಿ ಎಂದು ಸುಪ್ರೀಂ ಕೋರ್ಟ್‌ಗೆ ದೂರು ಕೊಟ್ಟವರಲ್ಲಿ ನಾನೂ ಒಬ್ಬ. ಹಾಗಾಗಿ ಛತ್ತೀಸಗಡದ ಆಡಳಿತ ಪಕ್ಷದ ಘೋಷಿತ ಶತ್ರುಗಳಲ್ಲಿ ನನ್ನ ಹೆಸರೂ ಇದೆ.

ಆದರೆ, ಭಾರತದ ಯಾವುದೇ ಪ್ರದೇಶದ ಯಾರೇ ಆದರೂ ಗಡ್‍ಚಿರೋಲಿಗೆ ಹೋಗುವುದು ಸುರಕ್ಷಿತ. ಮುಖ್ಯಮಂತ್ರಿ ಯಾವಾಗಲೂ ಕೆಲಸದ ಒತ್ತಡದಲ್ಲಿಯೇ ಇರುತ್ತಾರೆ.

ಆದರೆ ಛತ್ತೀಸಗಡದ ರಮಣ್ ಸಿಂಗ್ ಅವರು ನಾರಾಯಣಪುರದ ಗಡಿ ದಾಟಿ ಗಡ್‍ಚಿರೋಲಿಗೆ ಭೇಟಿ ಕೊಟ್ಟರೆ ಅವರು ವ್ಯಯ ಮಾಡುವ ಸಮಯ ವ್ಯರ್ಥವಾಗದು. ಗ್ರಾಮಸ್ಥರು ಅವರಿಗೆ ಪ್ರೀತಿಯ ಸ್ವಾಗತ ನೀಡುತ್ತಾರೆ; ಹಾಗೆಯೇ ಮಹಾರಾಷ್ಟ್ರದಲ್ಲಿಯೂ ಬಿಜೆಪಿಯ ಸರ್ಕಾರವೇ ಇರುವುದರಿಂದ ಸರ್ಕಾರದಿಂದಲೂ ಒಳ್ಳೆಯ ಸ್ವಾಗತವೇ ದೊರೆಯುತ್ತದೆ. ‘ಸರ್ಚ್’, ಅದು ಕೆಲಸ ಮಾಡುವ ಸುತ್ತಲಿನ ಗ್ರಾಮಗಳು ಹಾಗೂ ಮೆಂಡಾದ ಸಮುದಾಯ ಅರಣ್ಯಗಳನ್ನು ಅವರು ಕಂಡರೆ ನನಗೆ ಸಿಕ್ಕಷ್ಟು ಶಿಕ್ಷಣ ಅವರಿಗೂ ದೊರೆಯುತ್ತದೆ ಎಂಬುದರಲ್ಲಿ ಅನುಮಾನ ಇಲ್ಲ. ಅಲ್ಲಿ ಅವರಿಗೆ ದೊರೆತ ಕಲಿಕೆಯನ್ನು ರಚನಾತ್ಮಕವಾಗಿ ಬಳಸುವುದಕ್ಕೆ ಸಾಧ್ಯವಾಗಬಹುದು. ಲೇಖಕನೊಬ್ಬ ಕಂಡದ್ದನ್ನು ಲೇಖನವಾಗಿ ಬರೆಯಬಹುದು ಮತ್ತು ಪುಸ್ತಕವಾಗಿ ಪ್ರಕಟಿಸಬಹುದು; ಆದರೆ, ಮುಖ್ಯಮಂತ್ರಿ ರಾಜ್ಯದ ನೀತಿಗಳನ್ನು ಉತ್ತಮಗೊಳಿಸಿ ಜನರ ಜೀವನವನ್ನು ಪರಿವರ್ತಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT