ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಡ್ ನ್ಯೂಸ್, ಬ್ಯಾಡ್ ನ್ಯೂಸ್!

ಅಕ್ಷರ ಗಾತ್ರ

ಸಂಪಾದಕರು ತುರ್ತಾಗಿ ಫೋನ್ ಮಾಡಿದ್ದರಿಂದ ಪೆಕರ ಗಾಬರಿ­ಯಾಗಿದ್ದ. ಏನು ಕೆಲಸ ಕಾದಿದೆಯೋ? ಚುನಾ­ವಣೆ ಹತ್ತಿರ ಬರ್‍ತಾ ಇರೋದ್ರಿಂದ ಎಲ್ಲೆಲ್ಲಿಗೆ ಹೋಗಿ ಸಮೀಕ್ಷೆ ಮಾಡಿ ಬರಬೇಕೋ ಎಂಬೆಲ್ಲಾ ಆತಂಕ ಇಟ್ಟುಕೊಂಡೇ ‘ಹಲೋ’ ಎಂದ.

‘ಏನ್ರೀ, ಮಿಸ್ಟರ್ ಪೆಕರ, ಸಾಹಿತ್ಯ ಸಮ್ಮೇಳನ ಮುಗಿದ ಮೇಲೂ, ಸಾಹಿತ್ಯದ ಗುಂಗಿನಲ್ಲೇ ಇರೋ ಆಗಿದೆ. ೯೮ ತಾಲ್ಲೂಕುಗಳಲ್ಲಿ ಬರ ಬಂದಿದೆ. ಸ್ವಲ್ಪ ಟೂರ್ ಮಾಡ­ಬಾರದೇ? ಶಾಸಕರು ಏನು ಮಾಡ್ತಾ ಇದಾರೆ ಅಂತ ನೋಡ­ಬಾರದೇ?’ ಎಂದು ತರಾಟೆಗೆ ತೆಗೆದುಕೊಂಡರು.

‘ಸಾರ್, ಶಾಸಕರು ಕ್ಷೇತ್ರಕ್ಕೆ ಭೇಟಿ ಕೊಡ್ತಾರೆ ಎಂದು ಅಂದು­ಕೊಳ್ಳೋದೇ ಒಳ್ಳೆ ಕಾಮಿಡಿ. ಅವರಿಗೆ ಕ್ಷೇತ್ರ ನೆನಪಿಗೆ ಬರೋದೇ ಐದು ವರ್ಷ­ಕ್ಕೊಂದ್ಸಲ. ಈಗಂತೂ ಶಾಸಕರ ಒಂದು ಟೀಮ್ ಪರದೇಶ ಪ್ರವಾಸ ಮಾಡಿ ಬಂದಾಗಿದೆ. ಇನ್ನೆ­ರಡು ಟೀಮ್, ಪ್ರವಾಸ ರದ್ದಾಯ್ತು ಅಂತ ಹ್ಯಾಪ್‌­­ಮೋರೆ ಹಾಕಿಕೊಂಡು ಕುಂತಿವೆ’ -ಪೆಕರ ವಿವರಿಸಿದ.

‘ವಿದೇಶಕ್ಕೆ ಹೋಗಿ ಬಂದ ಶಾಸಕರನ್ನು, ಹೋಗಲು ತುದಿ­ಗಾಲ­ಲ್ಲಿ ನಿಂತಿದ್ದ ಶಾಸಕರನ್ನು ಸ್ವಲ್ಪ ಮಾತನಾಡಿಸಿ ಸ್ಟೋರಿ ಮಾಡಬಹುದಿತ್ತಲ್ಲ’ ಎಂದು ಸಂಪಾದಕರು ಸೂಚಿಸಿದರು.

‘ಆಯ್ತು ಸಾರ್, ಅಲ್ಲಿ ಏನು ಮಾಡಿ ಬಂದ್ರು ಅಂತ ವಿಚಾ­ರಿಸಿ ಬರೀತೀನಿ ಸಾರ್, ಅಯ್ಯ ಅವರ ರಾಜ್ಯಭಾರ ಬಂದ ಮೇಲೆ ಎಂಥೆಂಥವರಿಗೆಲ್ಲಾ ಪರದೇಶ ಪ್ರಯಾಣದ ಛಾನ್ಸು ಸಿಕ್ತಾ ಇದೆ­ಯಲ್ಲಾ, ಖುಷಿಯಾಗ್ತಾ ಇದೆ ಸಾರ್’ ಎಂದು ಪೆಕರ ತನ್ನ ಸಂತೋಷ ವ್ಯಕ್ತಪಡಿಸಿದ.

‘ಮಿಸ್ಟರ್ ಪೆಕರ, ಸ್ವಲ್ಪ ಯೋಚಿಸಿ ಮಾತ­ನಾಡಿ. ರಪ್ಪ ಅವರ ತರ ದಿನಕ್ಕೊಂದು ವ್ಯತಿರಿಕ್ತ ಮಾತು ಆಡಬೇಡಿ. ರಾಜ್ಯ­ದಲ್ಲಿ ಬರಗಾಲ ಅಡರಿ­ಕೊಂಡಿರುವಾಗ ವಿದೇಶ ಪ್ರಯಾಣ ಬೇಕಾ­ಗಿತ್ತಾ? ಯೋಚಿಸಿ’.

‘ಜನಬಲದಿಂದ ಆರಿಸಿಬಂದು, ಡೆಮಾಕ್ರಸಿ ಮೂಲಕವೇ ಶಾಸಕ­ರಾಗಿರೋವ್ರು   ಹೋದ್ರೆ ಏನು ತಪ್ಪು ಬುಡಿ ಸಾ...ಅಲ್ಲಿ ಸ್ಟಡೀ ಮಾಡಿ ಬಂದು, ಇಲ್ಲಿ ಒಳ್ಳೇದನ್ನು ಇಂಪ್ಲಿಮೆಂಟ್ ಮಾಡಿದ್ರೆ ರಾಜ್ಯಕ್ಕೇ ಅನುಕೂಲವಲ್ಲವೇ?’ ಪೆಕರ ಶಾಸಕರನ್ನು ಸಮರ್ಥಿಸಿಕೊಂಡ.

‘ಸ್ವಲ್ಪ ವೈಚಾರಿಕವಾಗಿ ಚಿಂತಿಸೋದನ್ನು ಕಲ್ತು­ಕೊಳ್ಳಿ. ಗರಬಡಿದ ಗುಗ್ಗು ತರಹ ಮಾತನಾಡ­ಬೇಡಿ. ಶಾಸಕರ ವಿದೇಶ ಪ್ರಯಾಣದಿಂದ ಜನ­ಕ್ಕೇನು ಲಾಭ? ನಮ್ಮ ಟ್ಯಾಕ್ಸ್ ದುಡ್ಡ­ಲ್ಲವೇ ಅದು. ಅದರಲ್ಲಿ ಅವರು ಮಜಾ ಮಾಡೋದಾ? ಅರ್ಜಂಟೈನಾ, ಪೆರು, ಬ್ರೆಜಿಲ್‌ಗಳಿಗೆ ಹೋಗಿ ಅವರು ಕಡಿದುಕಟ್ಟೆ ಹಾಕೋದು ಏನಿದೆ? ಅವೆಲ್ಲಾ ಯಾವ ಮಹಾ ದೊಡ್ಡ ದೇಶಾರೀ?’

‘ಶಾಸಕರು ಪರದೇಶಕ್ಕೆ ಹೋದ್ರೆ ತಪ್ಪಿಲ್ಲ. ಹಿಂದು­ಳಿದವರು, ಮುಂದುವರೆದವರಾಗಿ ಬರ್ತಾರೆ ಅಂಥ ರಾಮಭಕ್ತ ಆಂಜ­ನೇಯ ಸ್ವಾಮಿ­ಗಳೂ, ಡಾಜಿಪ ಅವರೂ ಒಂದೇ ಸಮನೆ ಹೇಳಿಕೆ ಕೊಡ್ತಾನೇ ಇದ್ರಲ್ಲ ಸಾರ್, ಅದಕ್ಕೆ ಜನಾ ಎಲ್ಲಾ ನಂಬಿಬಿಟ್ರು’ ಎಂದು ವಿವರಿಸಿದ ಪೆಕರ, ಚುಟು­ಕೊಂದನ್ನು ಸಂಪಾದಕರ ಮುಂದಿಟ್ಟ.

ವಿದೇಶ ಪ್ರವಾಸ ಎಂದರೆ ಸರ್ಕಾರ
ಶಾಸಕರಿಗೆ ಕೊಡುವ ಲಂಚ
ಹೋಗಲು ರೆಡಿ ಆಗುವ ಮೊದಲು
ಯೋಚಿಸಬೇಡವೇ ಕೊಂಚ
‘ನಾನು ಮೊದಲೇ ಹೇಳಲಿಲ್ಲವೇ, ನೀವಿನ್ನೂ ಸಾಹಿ­ತ್ಯ ಸಮ್ಮೇಳನದ ಗುಂಗಿನಲ್ಲೇ ಇದ್ದೀರಿ ಅಂತ. ಒಂದು ಜೋಕ್ ಹೇಳ್ತೀನಿ ಕೇಳಿ. ಶಾಸಕರು ಪರದೇಶ ಪ್ರಯಾಣ ಮಾಡೋದು ನಿಜಕ್ಕೂ ಗುಡ್ ನ್ಯೂಸ್. ಅವರು ಟೂರ್ ಮುಗಿಸಿ ವಾಪಸ್ ಬರ್‍ತಾರೆ ಅನ್ನೋದು ಬ್ಯಾಡ್ ನ್ಯೂಸ್’.

ಪೆಕರ ಅಬ್ಬರಿಸಿ, ಬೊಬ್ಬಿರಿದು ನಕ್ಕ.
‘ನಗು ಸಾಕು, ಹಕ್ಕುಚ್ಯುತಿ ಆಗುತ್ತೆ. ಹೋದ ಶಾಸಕರು, ಹೋಗದ ಶಾಸಕರು ಯಾರು ಸಿಕ್ಕರೂ ಸರಿ, ಇಂಟರ್‌ವ್ಯೂ ಮಾಡಿ ಕಳುಹಿಸಿ. ಸ್ವಲ್ಪ ಸ್ವಾರಸ್ಯಕರವಾಗಿರುತ್ತೆ. ರಾಹುಲ್ ಪ್ರಧಾನಿ ಆಗ್ತಾರಾ? ಮೋದಿ ಆಗೇಬಿಟ್ರಾ? ಕೇಜ್ರಿವಾಲ್ ಲೋಕ­ಸಭೆ ಗೆಲ್ತಾರಾ? ಎಂಬ ಹಳೇ ಸುದ್ದಿಗಳನ್ನೇ ಓದಿ, ಓದಿ, ಓದುಗರು ಕಂಗೆಟ್ಟಿದ್ದಾರೆ’ ಎಂದು ಸಂಪಾದಕರು ಅದೇಶಿಸಿದರು.

ಫೋನ್ ಸಂವಾದ ಮುಗಿಸಿದ ಪೆಕರ ಮತ್ತೊಂದು ಚುಟುಕ ಗುನುಗಿಕೊಂಡು ಮುನ್ನಡೆದ:
ಶಾಸಕನಾಗಿ ಜೀವನದಲ್ಲಿ ಏನೇನ್‌ ಕಂಡಿ?
ಫಾರಿನ್‌ಟೂರ್‌ಗಳಿದೆ ದಂಡಿದಂಡಿ
ಇಂಡಿಯಾದಲ್ಲೇನಿದೆ ಬರೀಗುಂಡಿ
ನುಂಗಬೇಕು ಎಲ್ಲವನ್ನು ಜನರ ಪ್ರಾಣಹಿಂಡಿ
ಶಾಸಕರ ಭವನದ ಕ್ಯಾಂಟೀನಿನಲ್ಲಿ ಪ್ರವಾಸ ಸಮಿತಿ ಅಧ್ಯಕ್ಷರೇ ಎದುರಾಗಬೇಕೇ?

‘ನಮಸ್ಕಾರ ಮಾವಗಲ್ ಸಾಹೇಬರೇ? ಫಾರಿನ್ ಟೂರ್ ಬಗ್ಗೆ ವಿಪರೀತ ಕಾಮೆಂಟ್ ಆಗ್ತಾ ಇದೆಯಲ್ಲಾ ಏನಂತೀರಿ?’

‘ನಾವು ಟೂರ್ ಮಾಡಿದ್ರೆ ಆಕಾಶವೇನೂ ಕಳಚಿ ಬೀಳ­­­­ಲ್ವ­ಲ್ಲ? ನಾವೆಲ್ಲಾ ಅಪರಾಧ ಮಾಡಿ­ದ್ದೀವಿ ಅಂಥ ನೀವೆ­ಲ್ಲಾ ಹೇಳ್ತಾ ಇದ್ದೀರಿ. ಅಂಥಾ ಅಪರಾಧ ನಾವೇನೂ ಮಾಡಿಲ್ಲ. ಯಾವಯಾವು­ದಕ್ಕೋ ಕೋಟ್ಯಂತರ ರೂಪಾಯಿ ಖರ್ಚು ಮಾಡ್ತಾ­ರೆ, ಹಿಂದುಳಿದ ವರ್ಗದ ಸಮ್ಮೇಳನಕ್ಕೇ ರೂ ೨೦ ಕೋಟಿ ಖರ್ಚಾಗುತ್ತೆ. ನಮ್ಮ ಟ್ರಿಪ್‌ಗೆ ತಲಾ ೯ ಲಕ್ಷ ಖರ್ಚಾ­­ದರೆ ಕಳದುಕೊಳ್ಳೋದು ಏನಿದೆ, ಸುಮ್ನೆ ಹೋಗ್ರಿ ಸಾಕು’.

‘ಆದರೂ ರಾಜ್ಯದಲ್ಲಿ ಬರ ಇದ್ದಾಗ ಟೂರ್ ಅಂತ ಆಕಾಶಕ್ಕೆ ಹಾರಬಹುದೇ?’
‘ಬರ ಬಂತು ಅಂತ ಜಗತ್ತೇ ನಿಂತು ಹೋಗಿದೆ­ಯೇನ್ರಿ? ಜನ ಮಸಾಲೆ ದೋಸೆ ತಿನ್ನೋದು ಬಿಟ್ಟಿ­ದ್ದಾರಾ? ಸಂಕ್ರಾಂತಿ ಆಚರಿ­ಸೋದು ನಿಲ್ಲಿಸಿ­ಬಿಟ್ರಾ? ಏನ್ ಮಾತಾಡಕ್ ಹತ್ತೀರಿ? ಮಾವ­ಗಲ್ ಅವರು ಮಾತು ಮಾತಿಗೂ ಎಗರಿ­ಬೀಳುತ್ತಿದ್ದರು.

‘ಸಾರ್, ಲಾಸ್ಟ್ ಕೊಶ್ಚನ್. ಆಸ್ಟ್ರೇಲಿಯಾ ಈಜು­ಕೊಳದಲ್ಲಿ ಶಾರ್ಟ್ಸ್ ಹಾಕಿಕೊಂಡು ತುಂಬಾ­ನೇ ಈಜಾಡಿ ಬಿಸಿಲು ಸ್ನಾನ ಮಾಡಿ­ದ್ರಂತೆ. ನಿಮ್ಮ ಕ್ಷೇತ್ರದಲ್ಲಿ ಜನ ನೀರಿಲ್ಲದೆ ಒದ್ದಾಡ್ತಾ ಇರೋ ಚಿತ್ರ ನಿಮ್ಮ ಕಣ್ಮುಂದೆ ಬರಲಿಲ್ಲವೇ?’

‘ಜುಬ್ಬಾ ಪಂಚೆ ಹಾಕ್ಕೊಂಡು ಈಜೋಕ್ಕಾಗು­ತ್ತೇನ್ರಿ? ಎಂಥಾ ಪ್ರಶ್ನೆ ಕೇಳ್ತೀರಿ, ನೆಮ್ಮದಿಯಿಂದ ತಿಂಡಿ ತಿನ್ನೋಕೂ ಬಿಡ­ಲ್ಲವಲ್ರಿ’ ಎಂದು ಸಿಡಿಮಿಡಿ­ಗೊಳ್ಳುತ್ತಾ ಮಾವಗಲ್ ಸಾಹೇಬ­ರು ಎದ್ದು ನಡೆದರು.

ಹೀಗೇ ಇನ್ಯಾರಾದರೂ ಸಿಗ್ತಾರಾ ಎಂದು ಹುಡುಕುತ್ತಾ ಹೋಗು­ವಾಗ ಅಲ್ಲಾವುದ್ದೀನ್ ಬಾಬಾ ಅವರು ಪೆಕರ ನಿಗೆದುರಾದರು.
‘ನೀವು ಈ ಹಿಂದೆ ಟೂರ್ ಮಾಡಿದ ಫಲಾನುಭವಿಗಳು. ಹೇಗಾಯ್ತು?’

‘ದಿನಕ್ಕೆ ಎರಡು–ಮೂರು ಗಂಟೆ ಅಧಿಕಾರಿಗಳ ಜೊತೆ ಚರ್ಚೆ ಮಾಡ್ತಾ ಇದ್ವಿ. ಉಳಿದ ಟೈಂನಲ್ಲಿ ರೂಂನಲ್ಲಿ ಸುಮ್ನೆ ಕೂತಿರೋಕೆ ನಾವೇನ್ ಸಪ್ಪೆ ಊಟ ಮಾಡೋ ಸ್ವಾಮಿಗಳಾ? ಶಾಪಿಂಗ್ ಮಾಡೋದು ಬೇಡ್ವಾ?’ ಬಾಬಾ ಸಿಡಿದೆದ್ದರು.

ಅಷ್ಟರಲ್ಲಿ ಟ್ರಿಪ್‌ಕ್ಯಾನ್ಸಲ್ ಆದ ಶಾಸಕರು­ಗಳೆಲ್ಲಾ ಅಲ್ಲಿ ಜಮಾಯಿಸಿ, ಪೆಕರನಿಗೆ ಧಿಕ್ಕಾರ ಕೂಗತೊಡಗಿದರು. ‘ಸರ್ಕಾರಿ ದುಡ್ಡಿನಲ್ಲಿ ವಿದೇಶ ಪ್ರವಾಸ ಹೋಗಬೇಕೆನ್ನುವುದು ನಮ್ಮ ಜೀವಮಾನದ ಆಸೆ. ಅದಕ್ಕೂ ಕಲ್ಲು ಹಾಕಿದರಲ್ರೀ’ ಎಂದು ಶಾಪ ಹಾಕತೊಡಗಿದರು.
ಬದುಕಿದೆಯಾ ಬಡಜೀವವೇ ಎಂದು ಪೆಕರ ಅಲ್ಲಿಂದ ಎಸ್ಕೇಪ್ ಆದ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT