ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೌತಮ್ ಅದೃಷ್ಟವಂತ ಮಗು

Last Updated 25 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

ದೀರ್ಘಕಾಲದ ರೋಗಗಳಿಂದ ಬಳಲುತ್ತಿರುವ ಮಕ್ಕಳು, ಅಂದರೆ ಒಂದು ತಿಂಗಳು, ವರ್ಷ ಅಥವಾ ಸಾಯುವವರೆಗೂ ಕಾಯಿಲೆಗಳಿಂದ ನರಳುತ್ತಲೇ ಇರುವವರು, ಚಿಕಿತ್ಸೆ ಹಾಗೂ ಪರಿಶೀಲನೆಗಾಗಿ ನಿರಂತರವಾಗಿ ನಮ್ಮ ಬಳಿ ಬರುತ್ತಿರುತ್ತಾರೆ. ಹೀಗಾಗಿ ಅವರು ನಮ್ಮ ಮಕ್ಕಳೇ ಆಗಿರುತ್ತಾರೆ.
 
ಅವರ ರೋಗದ ಏರಿಳಿತಗಳನ್ನು ಹಂಚಿಕೊಳ್ಳುತ್ತಾ, ಅವರ ಚೇತರಿಕೆ ಹಾಗೂ ಉಳಿವಿಗಾಗಿ ಪ್ರಾರ್ಥಿಸುತ್ತಾ ಅವರೊಂದಿಗೇ ನಾವು ಬದುಕುತ್ತಿರುತ್ತೇವೆ. ಒಂದು ರೀತಿಯಲ್ಲಿ ಅವರ ಕುಟುಂಬಗಳು ನಮ್ಮ ವಿಸ್ತೃತಗೊಂಡ ಕುಟುಂಬವಾಗಿ ಬಿಡುತ್ತವೆ.
ಗೌತಮ್ ಕೂಡ ದೀರ್ಘಕಾಲೀನ ಕಾಯಿಲೆಯಿಂದ ಬಳಲುತ್ತಿದ್ದ ಮಗು. ಆಸ್ಪತ್ರೆಯ ನನ್ನ ಘಟಕದಲ್ಲಿ 2008ರಂದು ದಾಖಲಿಸುವಾಗ ಅವನಿಗೆ ಎಂಟು ವರ್ಷ.
 
ಅಲ್ಲಿ ಅವನಿದ್ದದ್ದು ಐದು ತಿಂಗಳು. ಅವನ ಊರು ಚಿಕ್ಕಮಗಳೂರು ಜಿಲ್ಲೆಯ ಗೆಜ್ಜೆಗೊಂಡನಹಳ್ಳಿ.ಕೆಳವರ್ಗದ ಹಾಗೂ ಸಾಮಾನ್ಯ ಆರ್ಥಿಕ ಹಿನ್ನೆಲೆಯವರಾದ ಕಾಂತರಾಜು ಹಾಗೂ ಉಮಾ ದಂಪತಿ, ಗೌತಮ್ ಜನಿಸಿದ ಬಳಿಕ ಶಾಶ್ವತ ಕುಟುಂಬ ಯೋಜನೆ ವಿಧಾನ ಅಳವಡಿಸಿಕೊಳ್ಳಲು ನಿರ್ಧರಿಸಿದ್ದರು. ಮಗಳು ಮತ್ತು ಮಗ- ಇದು ಅವರ ಕುಟುಂಬ. ಕಾಂತರಾಜು ಸಮಾರಂಭಗಳ ಅಡಿಗೆ ಗುತ್ತಿಗೆದಾರರಾಗಿದ್ದರೆ, ಉಮಾ ಗಾರ್ಮೆಂಟ್ ಕಾರ್ಖಾನೆಯೊಂದರಲ್ಲಿ ದುಡಿಯುತ್ತಿದ್ದಾರೆ. ಮಕ್ಕಳಿಗೆ ಉತ್ತಮ ಶಿಕ್ಷಣ ಒದಗಿಸುವುದು ಅವರ ಬಯಕೆ.

2008ರ ಏಪ್ರಿಲ್‌ವರೆಗೂ ಅವರ ಬದುಕಿನಲ್ಲಿ ಎಲ್ಲವೂ ಚೆನ್ನಾಗಿತ್ತು. ಗೌತಮ್‌ಗೆ ಬಿಟ್ಟುಬಿಡದ ಜ್ವರ ಅಂಟಿಕೊಂಡಿತು. ಹತ್ತುಹಲವು ಖಾಸಗಿ ಆಸ್ಪತ್ರೆಗಳಲ್ಲಿ ನಿರಂತರವಾಗಿ ಜೀವನಿರೋಧಕಗಳನ್ನು ಕೊಡಿಸಿದರೂ ಅವುಗಳಿಗೆ ಬಗ್ಗುವ ಸಾಮಾನ್ಯ ಜ್ವರ ಆಗಿರಲಿಲ್ಲವದು. ಕಡೂರಿನಲ್ಲಿರುವ ಆಸ್ಪತ್ರೆಗೆ ಕರೆದೊಯ್ದಾಗ ಅಲ್ಲಿ ಆತನ ಹೃದಯದಲ್ಲಿ ರಂಧ್ರ ಇರುವುದು ಪತ್ತೆಯಾಯಿತು. ಗೌತಮ್‌ನ ತಂದೆತಾಯಿಗಳು ಆತಂಕಕ್ಕೆ ಒಳಗಾದರು.

ನಮ್ಮ ದೇಹದ ಅತ್ಯಂತ ಪ್ರಮುಖ ಅಂಗವಾದ ಹೃದಯದಲ್ಲಿ ಸಮಸ್ಯೆಯುಂಟಾದರೆ ಅದಕ್ಕಿಂತ ದಿಗಿಲಿನ ಸಂಗತಿ ಮತ್ತೊಂದಿಲ್ಲ. ಮುಂದೇನು ಎಂದು ಅವರು ಚಿಂತೆಗೀಡಾಗಿದ್ದಾಗಲೇ ಮಗನ ಎಡಗಾಲಿನ ಪಾದದ ಭಾಗ ಕಡುನೀಲಿ ಬಣ್ಣಕ್ಕೆ ತಿರುಗಲಾರಂಭಿಸಿತು. ಕೂಡಲೇ ಅವನನ್ನು ಉಡುಪಿಯ ಆಸ್ಪತ್ರೆಯೊಂದಕ್ಕೆ ಕರೆದೊಯ್ದರು. ಗೌತಮ್ ಸ್ಥಿತಿ ತೀರಾ ಗಂಭೀರವಾಗಿದ್ದು, ಹೃದ್ರೋಗ ಸಂಸ್ಥೆಯಲ್ಲಿ ತಕ್ಷಣವೇ ಚಿಕಿತ್ಸೆ ನೀಡಬೇಕು ಎಂದು ಅಲ್ಲಿನ ವೈದ್ಯರು ಹೇಳಿದರು.
 
ಇನ್ನು ತಡೆಯಲು ಸಾಧ್ಯವಿಲ್ಲವೆಂದು ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಅವನನ್ನು ದಾಖಲಿಸಲಾಯಿತು. ಬದುಕುವ ಸಾಧ್ಯತೆ ತೀರಾ ಕಡಿಮೆಯಿದ್ದು, ಬದುಕಿದರೂ ಆತನ ಭವಿಷ್ಯ ಅತ್ಯಂತ ಕಠೋರವಾಗಿರಲಿದೆ ಎಂದು ಅಲ್ಲಿನ ವೈದ್ಯರು ಹೇಳಿದರು. ವಾಣಿ ವಿಲಾಸ ಮಕ್ಕಳ ಆಸ್ಪತ್ರೆಗೆ ಸೇರಿಸುವಂತೆ ಅಲ್ಲಿ ಸೂಚಿಸಲಾಯಿತು. ಈ ಅಸ್ವಸ್ಥ ಹೃದಯಕ್ಕೆ ದೀರ್ಘಕಾಲೀನ ಆಸ್ಪತ್ರೆವಾಸ ಅಗತ್ಯವಿತ್ತು.

ಔಷಧವನ್ನು ರಕ್ತನಾಳದ ಮೂಲಕ ಮಾತ್ರವೇ ನೀಡಬೇಕಿತ್ತು. ಏಕೆಂದರೆ, ಹೃದಯದಲ್ಲಿ ಬೆಳೆಯುವ ಬ್ಯಾಕ್ಟೀರಿಯಾ ಜೀವಿಗಳಿಗೆ ಅವುಗಳನ್ನು ತಲುಪಿಸುವುದು ಕಷ್ಟವಾಗಿರುತ್ತದೆ.

ಗೌತಮ್‌ನ ಕಾಯಿಲೆ ಬಗ್ಗೆ ಹಲವಾರು ಆಸ್ಪತ್ರೆಗಳಲ್ಲಿ ಅನೇಕ ವೈದ್ಯರ ಬಳಿ ಕೇಳಿ ಕೇಳಿ ಆತನ ತಂದೆತಾಯಿ `ತಳಮಳದ ಮುದ್ದೆ~ಯಂತಾಗಿದ್ದರು. ಸಾವಿನ ಕದ ತಟ್ಟುತ್ತಿರುವ ಮಗ ಹಾಗೂ ಚಿಕಿತ್ಸೆಗೆ ವ್ಯಯಿಸಲು ಕಡಿಮೆ ಸಂಪನ್ಮೂಲ ಹೊಂದಿದ್ದ ಅವರ ಮುಂದಿದ್ದ ಸವಾಲಿನ ನಡುವೆ, ಆ ಪೋಷಕರ ಮಾನಸಿಕ ಸ್ಥಿತಿ ಊಹಿಸುವುದು ಅಸಾಧ್ಯವಾಗಿತ್ತು. ತುಂಬಾ ಬಡ ಪೋಷಕರು, ತಮ್ಮ ಮಕ್ಕಳನ್ನು ಉಳಿಸುವ ಸಲುವಾಗಿ ಹಣ ಹೊಂದಿಸಲು ಸಾಧ್ಯವಾದದ್ದನ್ನೆಲ್ಲಾ ಮಾಡಲು ಪ್ರಯತ್ನಿಸುತ್ತಾರೆ.

ದೈಹಿಕವಾಗಿ ದುರ್ಬಲಗೊಂಡು, ನಿಸ್ತೇಜನಾಗಿದ್ದ ಗೌತಮ್ ಶಿಶುವೈದ್ಯ ವಿಭಾಗದ ತುರ್ತು ನಿಗಾ ಘಟಕಕ್ಕೆ ದಾಖಲಾದದ್ದು ನನಗೆ ಸ್ಪಷ್ಟವಾಗಿ ನೆನಪಿದೆ. ಜ್ವರದಿಂದ ಬಳಲುತ್ತಿದ್ದ ಆತ ತುಂಬಾ ಅಸ್ವಸ್ಥನಾಗಿದ್ದ. ಆಗ ನನ್ನ ದಿನಗಳು ಶುರುವಾಗುತ್ತಿದ್ದದ್ದು ಅವನ ಕಾಲುಗಳನ್ನು ಸ್ಪರ್ಶಿಸುವುದರ ಮೂಲಕ.
 
ಆತನ ಹೃದಯದಲ್ಲಿದ್ದ ಜೀವಕೋಶದ ರಕ್ತನಂಜಿನ ಚೆಂಡು ಸಡಿಲಗೊಂಡು ಹೃದಯ ಬಡಿತದ ಕಾರಣದಿಂದ ಆತನ ಎಡಗಾಲಿಗೆ ಚಲಿಸಿತ್ತು. ಹೀಗಾಗಿ ಆತನ ಎಡಗಾಲಿಗೆ ರಕ್ತ ಸಂಚಲನ ಕಡಿಮೆಯಾಗಿತ್ತು. ಕಾಲಿನ ರಕ್ತಸಂಚಾರದ ಮಿಡಿತವನ್ನು ನೋಡಿದ ಬಳಿಕವೇ ನನ್ನ ದಿನದ ಕೆಲಸ ಮುಂದುವರಿಸುತ್ತಿದ್ದದ್ದು. ಜೀವರಕ್ಷಕ ಔಷಧಗಳಿಗೆ ಆ ಚೆಂಡು ಪ್ರತಿಸ್ಪಂದಿಸುವ ಭರವಸೆಗೆ ಪ್ರತಿ ಭರವಸೆ ಸಣ್ಣಗೆ ಇತ್ತು. ಪ್ರತಿಬಾರಿ ನಾನು ಆತನ ಪಾದ ಮುಟ್ಟಿದಾಗಲೂ ಆ ಮಗುವಿನ ತಾಯಿ ನನ್ನೆರಡೂ ಕೈಗಳನ್ನು ಹಿಡಿದುಕೊಂಡು ನಮಸ್ಕರಿಸುತ್ತಿದ್ದಳು.

ಚಿಂತಾಜನಕ ಸ್ಥಿತಿಯಲ್ಲಿದ್ದ ಮಗನ ಆರೈಕೆಗಾಗಿ ಉಮಾ ಕೆಲಸವನ್ನು ತೊರೆದಿದ್ದರು. ತಂದೆ ಗೌತಮ್‌ನ ಚಿಕಿತ್ಸೆಗೆ ಹಣ ಹೊಂದಿಸಲು ಹೆಚ್ಚುವರಿ ಕೆಲಸ ಮಾಡುತ್ತಿದ್ದರು.
ಕಳೆದ ಹತ್ತು ವರ್ಷದಿಂದ ಬಹುತೇಕ ಎಲ್ಲಾ ಸರ್ಕಾರಿ ಆಸ್ಪತ್ರೆಗಳೂ ಬಳಕೆದಾರರ ಶುಲ್ಕವನ್ನು ಪಡೆದುಕೊಳ್ಳುತ್ತದೆ. ಸಮಾಜದ ಕೆಲವು ವರ್ಗಗಳಿಗೆ ಹಾಗೂ ಬಿಪಿಎಲ್ (ಬಡತನ ರೇಖೆಗಿಂತ ಕೆಳಗಿನ) ಕಾರ್ಡ್ ಹೊಂದಿರುವವರಿಗೆ ಉಚಿತ ಚಿಕಿತ್ಸೆ ಲಭ್ಯವಿರುತ್ತದೆ.
 
ಗೌತಮ್‌ನ ಹೃದಯದಲ್ಲಿ ಬೆಳೆಯುತ್ತಿದ್ದ ಜೀವಿಗಳು ಪ್ರತಿರೋಧಕ ಶಕ್ತಿ ಹೊಂದ್ದ್ದಿದರಿಂದ ಬಹುವೆಚ್ಚದಾಯಕವಾದ ಶಕ್ತಿಶಾಲಿ ಜೀವನಿರೋಧಕ ಔಷಧಗಳ ಅಗತ್ಯವಿತ್ತು. ಗಂಭೀರವಾಗಿ ಅಸ್ವಸ್ಥನಾಗಿದ್ದ ಗೌತಮ್‌ಗೆ ಪ್ರತಿನಿತ್ಯ ಇವುಗಳನ್ನು ನೀಡಿ ನೋಡಿಕೊಳ್ಳುವುದು ಪೋಷಕರಿಗೆ ಹಾಗೂ ವೈದ್ಯರಿಗೆ ಮಹತ್ವದ ಕೆಲಸವಾಗಿತ್ತು. ಹತಾಶರಾಗಿದ್ದ ಪೋಷಕರನ್ನು ಸಂತೈಸುವುದು ಸುಲಭದ ಮಾತಾಗಿರಲಿಲ್ಲ.

ಟ್ಯುಬೆಕ್ಟಮಿ ಚಿಕಿತ್ಸೆ ಮಾಡಿಸಿಕೊಂಡಿದ್ದಕ್ಕಾಗಿ ಆ ತಾಯಿ ಹಲವು ಬಾರಿ ಪಶ್ಚಾತ್ತಾಪಪಟ್ಟುಕೊಂಡಿದ್ದರು. `ಬಿ~ ಯುನಿಟ್‌ನಲ್ಲಿ ದಾಖಲಾಗಿ 15 ದಿನಗಳ ಬಳಿಕ ಗೌತಮ್, ತನ್ನ ದೇಹದ ಬಲಭಾಗಕ್ಕೆ ಹೊರಳಲು ಸಾಧ್ಯವಾಗದ ಸ್ಥಿತಿಗೆ ತಲುಪಿದ. ಜೊತೆಗೆ ಹಲವು ಸಮಸ್ಯೆಗಳು ಒಂದರ ಹಿಂದೆ ದಾಳಿ ಮಾಡಿದವು. ಸ್ನಾಯುಸೆಳೆತಕ್ಕೆ ಒಳಗಾದ ಆತ ಎರಡು ದಿನಗಳ ಬಳಿಕ ಮಾತನಾಡುವ ಸಾಮರ್ಥ್ಯವನ್ನೂ ಕಳೆದುಕೊಂಡ.
 
ಕೃಶಗೊಂಡಿದ್ದ ಆತನ ತಾಯಿ ದುಃಖವನ್ನು ಅದುಮಿಡಲಾಗದೆ ಬಿಕ್ಕಿಬಿಕ್ಕಿ ಅಳುತ್ತಿದ್ದ ಸನ್ನಿವೇಶ ನನ್ನ ಮನಸ್ಸಿನಲ್ಲಿ ಹಾಗೆಯೇ ಅಚ್ಚೊತ್ತಿದೆ. ಅಳುತ್ತಿದ್ದರೂ, ಅದೇ ವೇಳೆ ಆಕೆ ತನ್ನ ಮೂಕ ಮಗನ ಭಾವನೆಗಳಿಗೆ ಸ್ಪಂದಿಸುತ್ತಿದ್ದರು. ಇಷ್ಟೆಲ್ಲಾ ದುಬಾರಿ ಔಷಧ ನೀಡಿದ್ದರೂ ಮಗು ಯಾಕೆ ಚೇತರಿಸಿಕೊಳ್ಳುತ್ತಿಲ್ಲ ಎಂದು ನಮ್ಮನ್ನು ಪದೇ ಪದೇ ಕೇಳುತ್ತಿದ್ದರು. ಔಷಧಗಳ ವಿಚಾರದಲ್ಲಿ ಮಾತ್ರವಲ್ಲ, ಹೃದಯದಲ್ಲಿ ಸೂಕ್ಷ್ಮಾಣು ಜೀವಿಗಳ ಆಕ್ರಮಣ ಹಾಗೂ ಅವುಗಳ ವರ್ತನೆಯನ್ನು ಅಂದಾಜಿಸಲು ಸಾಧ್ಯವಿಲ್ಲ. ಈ ಕಾಯಿಲೆ ಮಗುವಿನ ಸಾವಿನೊಂದಿಗೆ ಮುಕ್ತಾಯವಾಗುವುದೇ ಹೆಚ್ಚು. ಒಮ್ಮೆ ಮಗು ಬದುಕಿದರೂ ಅಂಗವೈಕಲ್ಯ ಕಾಡುತ್ತದೆ.

ಇದೇ ಸಮಯದಲ್ಲಿ ಕನಕಪುರದ ಬಡ ರೈತ ಕುಟುಂಬದ ಹದಿಮೂರು ವರ್ಷದ ಏಕೈಕ ಮಗನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆತನೂ ಕೂಡ ಜಯದೇವ ಆಸ್ಪತ್ರೆಯ ಸಲಹೆಯಂತೆ ದಾಖಲಾದವನು. ಗೌತಮ್ ಬಳಲುತ್ತಿದ್ದ ವ್ಯಾಧಿಯಿಂದಲೇ ಆತನೂ ಬಳಲುತ್ತಿದ್ದ. ದಾಖಲಾದಾಗ ಆತನ ಸ್ಥಿತಿ ಅತಿ ಚಿಂತಾಜನಕವಾಗಿತ್ತು. ಆಸ್ಪತ್ರೆ ಸೇರಿ 24 ಗಂಟೆಯೊಳಗೆ ಆತನ ಪ್ರಾಣಪಕ್ಷಿ ಹಾರಿಹೋಗಿತ್ತು.
 
ಈ ಕಾಯಿಲೆ ನಮಗೆ ಒಂದು ಅವಕಾಶವನ್ನೂ ನೀಡಲಿಲ್ಲ. ಆತನ ಸಾವು ಗೌತಮ್‌ನ ಪೋಷಕರ ನೈತಿಕ ಸ್ಥೈರ್ಯವನ್ನು ಕುಂದಿಸಿತು. ಆತನ ತಾಯಿ ಮನೋವೈಕಲ್ಯಕ್ಕೆ ತುತ್ತಾದರೆ, ತಂದೆ ಕೆಲಸಕ್ಕೆ ಹೋಗುವುದನ್ನು ನಿಲ್ಲಿಸಿ ಪ್ರತಿ ನಿಮಿಷವನ್ನೂ ಮಗನೊಂದಿಗೇ ಕಳೆಯಲು ತೀರ್ಮಾನಿಸಿದರು. ತಾಯಿ ಆತನ ಹಾಸಿಗೆಯ ಎಡಭಾಗದಲ್ಲಿ ಕುಳಿತರೆ, ತಂದೆ ಬಲಭಾಗದಲ್ಲಿ ಕುಳಿತಿರುತ್ತಿದ್ದರು.

ನಿಯಮಾವಳಿ ಪ್ರಕಾರ ಒಂದು ಮಗುವನ್ನು ಒಬ್ಬರು ಮಾತ್ರ ನೋಡಿಕೊಳ್ಳಬೇಕು. ಇಲ್ಲಿ ನಾನು ನಿಯಮಗಳನ್ನು ಬಿಟ್ಟು ಕೊನೆಯುಸಿರು ಎಳೆಯುವ ಹಂತದಲ್ಲಿದ್ದ ಮಗುವಿನ ತಂದೆತಾಯಿಯ ವೇದನೆಯ ಕಂಡು ಭಾವನೆಗಳಿಗೆ ಅವಕಾಶವಿತ್ತೆ.

ಮಾತು ಕಳೆದುಕೊಂಡಿದ್ದ ಗೌತಮ್ ಎರಡು ದಿನದ ಬಳಿಕ ಇದ್ದಕ್ಕಿದ್ದಂತೆ ಏನನ್ನೋ ಹೇಳತೊಡಗಿದ. ರಕ್ತನಂಜಿನ ಚೆಂಡು ಆಂಟಿಬಯಾಟಿಕ್‌ಗಳಿಗೆ ಸ್ಪಂದಿಸಿ ನಾಶ ಹೊಂದಿರಬಹುದು ಅಥವಾ ಹೊರಕ್ಕೆ ಚಲಿಸಿರಲೂಬಹುದು. ಅವನ ಪೋಷಕರು ಸಂತೋಷಗೊಂಡರೂ ನನಗೆ ಸಂಶಯವಿತ್ತು. ಉಕ್ಕುತ್ತಿದ್ದ ಉದ್ವೇಗವನ್ನು ತಡೆದುಕೊಂಡು ಸಹಜ ಮುಖಭಾವದಿಂದ ಇರಲು ಪ್ರಯತ್ನಿಸುತ್ತಿದ್ದೆ.

ಗೌತಮ್‌ನ ತಂದೆತಾಯಿಯೊಂದಿಗೆ ದಿನಕ್ಕೆ ಎರಡು ಬಾರಿ ಸಮಾಲೋಚನೆ ನಡೆಸುತ್ತಿದ್ದೆ. ಕಾಯಿಲೆಯ ಗಂಭೀರತೆ ಅದನ್ನು ಬಯಸಿತ್ತು. ಅವರು ತಮ್ಮ ಮಗುವನ್ನು ಉಳಿಸುವಂತೆ ಪ್ರತಿದಿನವೂ ಬೇಡಿಕೊಳ್ಳುತ್ತಿದ್ದರು. ಎರಡು ವಾರದ ಬಳಿಕ ಆತನ ದೇಹದ ಬಲಭಾಗ ಬಿಗು ಕಳೆದುಕೊಳ್ಳತೊಡಗಿತು. ಎಡಭಾಗವೂ ನಿತ್ರಾಣಗೊಂಡಿತು. ಗೌತಮ್‌ನ ತೀವ್ರ ಅನಾರೋಗ್ಯದ ಪರಿಸ್ಥಿತಿಯ ನಡುವೆ ಪವಾಡ ಸಂಭವಿಸುವ ನಂಬಿಕೆಯೊಂದಿಗೆ ಜಯದೇವ ಆಸ್ಪತ್ರೆಗೆ ಸೇರಿಸುವಂತೆ ಹಲವು ಬಾರಿ ಸೂಚಿಸಿದೆವು.
 
ಶಿಶು ಹೃದ್ರೋಗ ಚಿಕಿತ್ಸೆ ವಿಭಾಗದ ಡಾ. ವಿಜಯಲಕ್ಷ್ಮಿ ಹಾಗೂ ಡಾ. ಎನ್. ಚಿತ್ರಾ ರೋಗ ಗುಣಮುಖವಾಗುವ ಭರವಸೆ ಇಲ್ಲದಿರುವುದು ತಿಳಿದಿದ್ದರೂ ನನ್ನ ಕೋರಿಕೆಗೆ ಸ್ಪಂದಿಸಿದರು. ವೈದ್ಯೆಯಾಗಿ ರೋಗಿಗಳೊಂದಿಗೆ ಭಾವನಾತ್ಮಕವಾಗಿ ಸಂಪರ್ಕವಿಟ್ಟುಕೊಳ್ಳಬಾರದು ಎಂದು ಸೌಮ್ಯವಾಗಿಯೇ ಬೈದರು.
ನಮಗೆ ಅಚ್ಚರಿ ಕಾದಿತ್ತು. ಗೌತಮ್ ನಿಧಾನವಾಗಿ ಹಾಗೂ ಸ್ಥಿರವಾಗಿ ಚೇತರಿಸಿಕೊಳ್ಳಲಾರಂಭಿಸಿದ. ಕೊನೆಗೆ 2008ರ ಸೆಪ್ಟೆಂಬರ್ 22ರಂದು ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾದ.

ಗೌತಮ್ ಸಂಧಿವಾತ ಹೃದಯ ಸಮಸ್ಯೆ ಹೊಂದಿದ್ದು, ಹೃದಯದ ಎಡದಲ್ಲಿರುವ ಕಿರೀಟ ಕವಾಟವನ್ನು (ಹೃದಯದ ಎರಡು ಕೋಣೆಗಳಾದ ಎಡ ಹೃತ್ಕರ್ಣ ಹಾಗೂ ಎಡ ಹೃತ್ಕಕ್ಷಿಗಳನ್ನು ಬೇರ್ಪಡಿಸುವ ಕವಾಟ) ಸಂಪೂರ್ಣ ಛಿದ್ರಗೊಳಿಸಿತ್ತು. ಈ ಛಿದ್ರಗೊಂಡ ಕವಾಟದ ಎಡ ಹೃತ್ಕಕ್ಷಿಯಿಂದ ರಕ್ತ ಎಲ್ಲಾ ಸಮಯವೂ ಸೋರುತ್ತಿದ್ದು, ದೇಹದ ವಿವಿಧ ಭಾಗಗಳಿಗೆ ರಕ್ತಪೂರೈಕೆಯು ಒಂದೇ ಸಮನೆ ಆಗುತ್ತಿತ್ತು. ಮಾತ್ರವಲ್ಲ, ಹೃದಯ ತುಂಬಾ ಕಲುಷಿತಗೊಂಡಿತ್ತು.
 
ಹೃದಯ ಸ್ನಾಯುವಿನ ಒಳಭಾಗದ ಪದರ (ಎಂಡೋಕಾರ್ಡಿಯಾ) ದುರ್ಬಲಗೊಂಡಿತ್ತು. ರಕ್ತನಂಜಿನ ಚೆಂಡುಗಳು ಬಹುಸಂಖ್ಯೆಯಲ್ಲಿದ್ದವು. ಇವು ಹೃದಯ ಬಡಿತದಿಂದಾಗಿ ಹೊರಹೋಗಿರುತ್ತದೆ. ಇವು ಯಾವಾಗ ಹೊರಚಿಮ್ಮುತ್ತವೆ ಮತ್ತು ಎಲ್ಲಿ ಹೋಗುತ್ತವೆ ಎಂಬುದನ್ನು ಹೇಳಲಾಗದು. ಯಾವ ರಕ್ತನಾಳ ಕಟ್ಟಿಕೊಂಡಿರುತ್ತದೆ ಎಂಬುದರ ಮೇಲೆ ಅದು ಅವಲಂಬಿತ.

ಇದರಿಂದ ಗೌತಮ್‌ನ ಪ್ರಕರಣದಲ್ಲಿದ್ದಂತೆ ಎಡಗಾಲಿನ ಬೆರಳ ಭಾಗ, ಬಲಭಾಗದ ಅರ್ಧ ದೇಹ, ಎಡಗೈ ಮತ್ತು ಧ್ವನಿ ಹೊರಡಿಸುವ ಮೆದುಳಿನ ಕೇಂದ್ರ ಹೀಗೆ ದೇಹದ ಬೇರಾವುದೋ ಭಾಗಕ್ಕೆ ಹಾನಿಯಾಗಬಹುದು. ಇದು ಸೋರುವ ಪೈಪಿಗೆ ಸದೃಶ. ಗಿಡಗಳಿಗೆ ನೀರು ಹಾಯಿಸುವ ಭಾಗಕ್ಕೆ ನೀರು ಸಾಗುವ ಮೊದಲೇ ಸೋರಿಕೆಯಾಗಿ ಹೋಗುವಂತೆ ಇದು. ಹೃದಯದಲ್ಲಿ ಬಾಂಬೊಂದನ್ನು ಇಟ್ಟಂತಹ ಪರಿಸ್ಥಿತಿ ಇದರದ್ದು.

ಕೆಲವೊಮ್ಮೆ ಅದು ಯಾವಾಗ ಸಿಡಿಯುತ್ತದೆ ಎಂಬುದನ್ನು ತಿಳಿಯಲು ಆಗುವುದಿಲ್ಲ ಮತ್ತು ಕೆಲವೊಮ್ಮೆ ಅದು ಮುನ್ನೆಚ್ಚರಿಕೆ ನೀಡದೆ ನಮಗೆ ಕ್ರಿಯೆ ಅಥವಾ ಪ್ರತಿಕ್ರಿಯೆಗೆ ಒಂದು ಕ್ಷಣ ಅವಕಾಶವನ್ನೂ ನೀಡದೆ ಸಿಡಿಯಬಹುದು (ಕನಕಪುರದ ಗಂಡುಮಗುವಿನ ಕಥೆಯನ್ನು ನೆನಪಿಸಿಕೊಳ್ಳಿ).

ಶಸ್ತ್ರಚಿಕಿತ್ಸೆ ಬಳಿಕ ಗೌತಮ್ ವಾಣಿ ವಿಲಾಸ ಆಸ್ಪತ್ರೆಗೆ ಜೀವರಕ್ಷಕ ಸೇವನೆಯ ದೀರ್ಘಾವಧಿ ಪ್ರಕ್ರಿಯೆಯನ್ನು ಮುಂದುವರಿಸಲು ಮರಳಿದ. ಈ ಬಾರಿ ಅವನು ಬಿ ಯುನಿಟ್‌ನ ಕ್ಯಾಬಿನ್ ವಾರ್ಡ್‌ನಲ್ಲಿದ್ದ ಕೊನೆಯ ಹಾಸಿಗೆಯಲ್ಲಿ ಉಳಿದುಕೊಂಡ. ಅದನ್ನು ಅವನು ತನ್ನ ಮನೆಯನ್ನಾಗಿ ಬದಲಿಸಿದ್ದ. ಚೇತನ್ (ಚೇತನ ನವಚೇತನನ ಕಥೆ ನೆನಪಿಸಿಕೊಳ್ಳಿ) ಮತ್ತು ರಾಮ್ ರಕ್ಷಿತ್ ಅವನ ನೆರೆಹೊರೆಯವರು.

ನನಗೆ ಏನನ್ನಾದರೂ ನೀಡಬೇಕು ಎಂದು ಅವನು ತಂದೆತಾಯಿಗಳಿಗೆ ಕಾಟಕೊಡುತ್ತಿದ್ದ. ಅವನು ಹೊರಹೋಗಿ ಹುಡುಗನೊಬ್ಬ ಗುಲಾಬಿ ಹೂ ಹಿಡಿದುಕೊಂಡಿರುವ `ಯೂ ಆರ್ ವೆಲ್‌ಕಂ~ ಎಂಬ ಶೀರ್ಷಿಕೆಯಿದ್ದ ಪಟವೊಂದನ್ನು ಖರೀದಿಸಿ ತಂದಿದ್ದ. ಅದರ ಕೆಳಗೆ ತನ್ನ ಎಡಗೈನಲ್ಲಿ `ಆಶಾ ಮೇಡಂ ಬಿ ವಾರ್ಡ್ ಗೌತಮ್ ಸ್ಟ್ಯಾಂಡರ್ಡ್ 5~ ಎಂದು ಬರೆದು, ವಾರ್ಡಿನ ತನ್ನ ಹಾಸಿಗೆ ಪಕ್ಕದಲ್ಲಿ ಅಂಟಿಸಿದ್ದ.

ಕಟ್ಟಡ ನವೀಕರಣದ ನಡುವೆ ಅದನ್ನು ರಕ್ಷಿಸಿಡುವುದು ಸುಲಭದ ಕೆಲಸವಾಗಿರಲಿಲ್ಲ. ನಾನು ಆ ಪೋಸ್ಟರ್ ಅನ್ನು ದಿನವೂ ಆ ಹಾಸಿಗೆ ಪಕ್ಕ ನೋಡುತ್ತಿದ್ದಂತೆ ಅವನನ್ನು ನೆನಪಿಸಿಕೊಳ್ಳಬೇಕು ಎಂಬುದು ಅವನ ಉದ್ದೇಶವಾಗಿತ್ತು. ತನ್ನ ನಿಯಮಿತ ಆಸ್ಪತ್ರೆ ಭೇಟಿ ಸಂದರ್ಭದಲ್ಲಿ ಆ ವಾರ್ಡ್‌ಗೆ ಹೋಗಿ ಅದು ಇದೆಯೇ ಎಂದು ಪರಿಶೀಲಿಸಿದ ಬಳಿಕವೇ ಅವನು ನಿರಾಳನಾಗುತ್ತಿದ್ದದ್ದು.

ಅವನು ನನಗಾಗಿ ಒಂದು ಆಟದ ಕಾರ್ ಒಂದನ್ನು ಸಹ ಕೊಂಡುಕೊಂಡಿದ್ದ. ನಾನು ಅದನ್ನು ತೆಗೆದುಕೊಳ್ಳಲು ನಿರಾಕರಿಸಿದ್ದಕ್ಕೆ ಮಾತುಗಳನ್ನು ಕೇಳಿಸಿಕೊಳ್ಳದೆ ಸಿಟ್ಟಿನಿಂದ ಅದನ್ನು ಎಸೆದಿದ್ದ. ಈಗ ಉಡುಗೊರೆ ನೀಡುವುದು ನನ್ನ ಸರದಿಯಾಗಿತ್ತು. ಕೈಯಲ್ಲಿದ್ದ ವಾಚನ್ನೇ ಬಿಚ್ಚಿ ಅವನಿಗೆ ನೀಡಿದೆ. ಗೌತಮ್‌ನ ಚಿಕಿತ್ಸೆ ಜೀವಿತಾವಧಿಯದ್ದು. ಅವನು ನಾಲ್ಕು ಬಗೆಯ ಔಷಧಗಳನ್ನು ನಿರಂತರವಾಗಿ ತೆಗೆದುಕೊಳ್ಳಬೇಕು.
 
ಒಂದು ಸೋಂಕಿನಿಂದ ಹೃದಯವನ್ನು ರಕ್ಷಿಸಿಕೊಳ್ಳಲು, ಒಂದು ರಕ್ತವನ್ನು ಪಂಪು ಮಾಡಿ ಹೃದಯಕ್ಕೆ ಸಹಾಯ ಮಾಡಲು, ಇನ್ನೊಂದು ಹೆಪ್ಪುಗಟ್ಟಿರುವ (ತ್ರಾಂಬಸ್) ರಕ್ತವನ್ನು ತೆಗೆಯಲು ಹಾಗೂ ಮತ್ತೊಂದು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು.
ಈಗ ಗೌತಮ್‌ಗೆ 13 ವರ್ಷ. ಎಂಟನೇ ತರಗತಿಯಲ್ಲಿ ಅನುತ್ತೀರ್ಣನಾಗಿದ್ದು ಅವನಿಗೆ ತೀರಾ ನಿರಾಸೆ ಉಂಟುಮಾಡಿತ್ತು.

ಒಂಬತ್ತನೇ ತರಗತಿಯಲ್ಲಿರುವ ಅವನೀಗ ಕಷ್ಟಪಟ್ಟು ಓದುತ್ತಿದ್ದಾನೆ. ಅವನ ಬಲಭಾಗದ ದೇಹ ದುರ್ಬಲವಾಗಿದೆ. ಮಾತುಗಳು ನಿಧಾನ. ಅವನ ಅಮ್ಮ ಎಚ್ಚರಿಕೆಯಿಂದ ತನ್ನ ಮಗ ಎಡಗೈಯಲ್ಲಿ ಬರೆಯುವುದನ್ನು ಹಾಗೂ ಎಡಭಾಗದ ದೇಹ ಬಳಸುವುದನ್ನು ಕಲಿಸಿಕೊಟ್ಟಿದ್ದಾರೆ. ಆ ಕುಟುಂಬ ಇಂದಿಗೂ ದೇವರ ಸಾಲ (ಹರಕೆ)ಗಳನ್ನು ಹಾಗೂ ಹಣದ ಸಾಲಗಳನ್ನು ತೀರಿಸುವುದರಲ್ಲಿ ನಿರತವಾಗಿದೆ. ಒಮ್ಮೆ ಅವರಿಗೆ ಕರೆ ಮಾಡಿದಾಗ ಅವರು ರಾಣೆಬೆನ್ನೂರಿನ ದೂರ ಹಳ್ಳಿಯೊಂದರ ದೇವಸ್ಥಾನದಲ್ಲಿ ಹರಕೆ ತೀರಿಸುತ್ತಿದ್ದರು.

ನನಗೆ ಗೌತಮ್‌ನ ಛಾಯಾಚಿತ್ರಗಳು ಬೇಕಾಗಿತ್ತು. ಅವನು ಸ್ಟುಡಿಯೋದಲ್ಲಿ ತೆಗೆಸುವುದಾಗಿ ಹಟ ಮಾಡಿದ. ನನ್ನ (ಅವನ) ವಾಚ್ ಅನ್ನು ತನ್ನ ಎಡಗೈಗೆ ಕಟ್ಟಿಕೊಂಡು ನನಗಾಗಿ ಪೋಸ್ ನೀಡಿದ. ಅವನಿಗೆ ನನ್ನ ಮೇಲೆ ಅತಿಯಾದ ಪ್ರೀತಿ ಮತ್ತು ವಿಶ್ವಾಸ. ಗೌತಮ್ ಚೇತರಿಸಿಕೊಳ್ಳಲು ಸಹಾಯ ಮಾಡಿದ್ದಕ್ಕೆ ದೇವರಿಗೆ ಧನ್ಯವಾದಗಳು. ಅದೃಷ್ಟಶಾಲಿ ಗೌತಮ್ ದೀರ್ಘಾಯುಷಿಯಾಗಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT