ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಸಂಖ್ಯೆ ಪುರುಷ ಕೇಂದ್ರಿತವಾಗುತ್ತಿದೆಯೇ ?

Last Updated 11 ಏಪ್ರಿಲ್ 2011, 19:30 IST
ಅಕ್ಷರ ಗಾತ್ರ

ಇತ್ತೀಚೆಗೆ ಬಿಡುಗಡೆಯಾದ 2011ನೇ ಜನಗಣತಿಯ ಪ್ರಾಥಮಿಕ ಅಂಕಿ - ಅಂಶಗಳು ಲಿಂಗ ಸಮಾನತೆಗೆ ಬದ್ಧವಾದ ಸಮಾಜದ ಸ್ಥಾಪನೆಯ ಬಗ್ಗೆ ಕಾಳಜಿಯಿರುವವರಲ್ಲಿ ಸ್ವಲ್ಪ ಸಮಾಧಾನ ಹಾಗೂ ಅಪಾರ ನಿರಾಶೆಯನ್ನು ಮೂಡಿಸಿವೆ. ಒಂದೆಡೆ, ಸೀಮಿತ ಪ್ರಮಾಣದಲ್ಲಾದರೂ ಹೆಚ್ಚಳವನ್ನು ಕಂಡಿರುವ ದೇಶದ ಹಾಗೂ ರಾಜ್ಯದ ಸ್ತ್ರೀ-ಪುರುಷ ಅನುಪಾತ ಮತ್ತು ಮಹಿಳಾ ಸಾಕ್ಷರತೆ. ದೇಶದ ಅಭಿವೃದ್ಧಿ ಸೂಚ್ಯಂಕಗಳು ಪ್ರಗತಿಗೆ ಅಭಿಮುಖವಾಗಿ ಚಲಿಸುವ ಸಾಧ್ಯತೆಯನ್ನು ಸೂಚಿಸಿದರೆ, ಮತ್ತೊಂದೆಡೆ, ಇಡೀ ದೇಶದಲ್ಲೇ ಹಾಗೂ ಕರ್ನಾಟಕ ರಾಜ್ಯದಲ್ಲಿ ಇಳಿಮುಖವಾಗಿರುವ ಹೆಣ್ಣು - ಗಂಡು ಮಕ್ಕಳ (0 - 6 ನೇ ವಯೋಗುಂಪು)  ಅನುಪಾತ ಭಾರತದಲ್ಲಿ ಹೆಣ್ಣು ಮಕ್ಕಳ ಭವಿಷ್ಯದ ಬದುಕಿನ ಆಯ್ಕೆಗಳ ಬಗ್ಗೆ ಭಯ ಹುಟ್ಟಿಸುವಂಥ ಪರಿಸ್ಥಿತಿಯನ್ನು ತಲುಪಿದೆ.

ದೇಶದ ಒಟ್ಟು ಜನಸಂಖ್ಯೆಯಲ್ಲಿ ಸ್ತ್ರೀಯರ ಪ್ರಮಾಣ 100ಕ್ಕೆ 940 ಆಗಿದ್ದು, ಹಿಂದಿನ ಜನಗಣತಿಯ (2001) ಸಂದರ್ಭದಲ್ಲಿ ಇದ್ದ 933ಕ್ಕಿಂತ 7 ಅಂಕಗಳಷ್ಟು ಮಾತ್ರ ಏರಿದ್ದರೆ, ಸ್ತ್ರೀ ಸಾಕ್ಷರತೆ ಇದೇ ಅವಧಿಯಲ್ಲಿ ಶೇಕಡ 53.67 ರಿಂದ 65.46ಕ್ಕೆ ಏರಿರುವುದು (ಹೆಚ್ಚು ಕಡಿಮೆ ಶೇ 12) ಗಮನಾರ್ಹವಾದ ಬೆಳವಣಿಗೆಯೆಂದೇ ಗುರುತಿಸಬೇಕಾಗುತ್ತದೆ. ಆದರೆ ಹೆಚ್ಚಿನ ಸಂಖ್ಯೆಯಲ್ಲಿ ಸ್ತ್ರೀಯರು ಸಾಕ್ಷರರಾದರೆ ಅವರ ಅರಿವಿನ ವರ್ತುಲವೂ ಹೆಚ್ಚು ವ್ಯಾಪಕವಾಗುತ್ತದೆ. ತಮ್ಮ ದೇಹ, ಮನಸ್ಸು ಹಾಗೂ ಬದುಕುಗಳ ಮೇಲೆ ನಿಯಂತ್ರಣವನ್ನು ಪಡೆಯುವ ಸಾಧ್ಯತೆಗಳು ಹೆಚ್ಚುತ್ತವೆ ಎಂಬುದು ಸಾಮಾನ್ಯವಾದ ಒಂದು ನಂಬಿಕೆ. ಆದರೆ ಈಗ ನಮ್ಮ ಮುಂದಿರುವ ಜನಸಂಖ್ಯಾ ಮಾಹಿತಿಯನ್ನು ವಿಶ್ಲೇಷಿಸಿದಾಗ ಸ್ತ್ರೀಯರ ಅರಿವಿನ ಮಟ್ಟ ಹೆಚ್ಚಾಗುವುದಕ್ಕೂ ಅವರಿಗೆ ದೊರೆಯುವ ಬದುಕಿನ ಆಯ್ಕೆಗಳ ವ್ಯಾಪ್ತಿ ವಿಸ್ತೃತವಾಗುವುದಕ್ಕೂ ನಡುವೆ ವಿಶೇಷವಾದ ಸಂಬಂಧವಿಲ್ಲವೆನ್ನುವುದು ಸ್ಪಷ್ಟವಾಗಿ ಹೊರಹೊಮ್ಮುವ ಸತ್ಯ. ಸ್ವಾತಂತ್ರ್ಯಾನಂತರದಲ್ಲಿ ಅತ್ಯಂತ ಕೆಳಮಟ್ಟವನ್ನು ತಲುಪಿರುವ ಹೆಣ್ಣು - ಗಂಡು ಮಕ್ಕಳ ಅನುಪಾತಕ್ಕಿಂತ ಇದಕ್ಕೆ ಬೇರೆ ನಿದರ್ಶನದ ಅಗತ್ಯವಿಲ್ಲ.

ಯಾವುದೇ ದೇಶದಲ್ಲಿ ವೈದ್ಯಕೀಯ ಸೌಲಭ್ಯಗಳು ಹೆಚ್ಚುತ್ತಾ ಹೋದ ಹಾಗೆಲ್ಲಾ ಶಿಶು ಮರಣ ಪ್ರಮಾಣ ಸಹಜವಾಗಿದೇ ಇಳಿಮುಖವಾಗುತ್ತಾ ಹೋಗುತ್ತದೆ. ಇತ್ತೀಚೆಗಂತೂ ದೇಶದಾದ್ಯಂತ ಶಿಶು ಜನನಪೂರ್ವ ಹಾಗೂ ಜನನಾನಂತರದಲ್ಲಿ ತಾಯಂದಿರು ಹಾಗೂ ಮಕ್ಕಳ ಆರೋಗ್ಯ ರಕ್ಷಣೆಗೂ ಅಪಾರವಾದ ಹಣವನ್ನು ಸರ್ಕಾರ ಹಾಗೂ ಖಾಸಗಿ ಸಂಸ್ಥೆಗಳೆರಡೂ ವೆಚ್ಚಮಾಡುತ್ತಿವೆ. ಎಲ್ಲಕ್ಕಿಂತ ಮಿಗಿಲಾಗಿ ಇಂದು ಮಕ್ಕಳನ್ನು ಸಾಂಕ್ರಾಮಿಕ ಹಾಗೂ ಮಾರಣಾಂತಿಕ ರೋಗಗಳಿಂದ ರಕ್ಷಿಸುವಂಥ ಚುಚ್ಚುಮದ್ದುಗಳು ಹಾಗೂ ಇತರ ಚಿಕಿತ್ಸಾ ವಿಧಾನಗಳ ಬಗ್ಗೆ ತಿಳಿವಳಿಕೆಯ ಮಟ್ಟವೂ ಹೆಚ್ಚಾಗಿದೆ. ಆದಾಗ್ಯೂ 1961ರಲ್ಲಿ, ಎಂದರೆ 50 ವರ್ಷಗಳ ಹಿಂದೆ ಪ್ರತಿ 1000 ಗಂಡು ಮಕ್ಕಳಿಗೆ 976 ರಷ್ಟು ಇದ್ದ ಹೆಣ್ಣು ಮಕ್ಕಳ ಸಂಖ್ಯೆ 2011 ರಲ್ಲಿ 914 ರಷ್ಟಕ್ಕೆ ಇಳಿಯಲು ಕಾರಣವಾದರೂ ಏನು?

ಸ್ತ್ರೀ ಸ್ವಾತಂತ್ರ್ಯ ಮತ್ತು ಸಮಾನತೆಯ ಸಂಘರ್ಷ ಪರಾಕಾಷ್ಠೆಯನ್ನು ತಲುಪಿರುವ ಈ ಹೊತ್ತಿನಲ್ಲೂ ಪ್ರತಿ ವರ್ಷವೂ ಹತ್ತು ಲಕ್ಷ ಹೆಣ್ಣು ಮಕ್ಕಳನ್ನು (ನಮಗೆ ಲಭ್ಯವಿರುವ ಅಂಕಿ - ಅಂಶಗಳ ಪ್ರಕಾರ) ಹತ್ಯೆ ಮಾಡಲಾಗುತ್ತಿದೆ ಎಂದರೆ ಹೆಣ್ಣನ್ನು ಕುರಿತ ಈ ಸಮಾಜದ ಧೋರಣೆಯ ಸ್ವರೂಪದ ಒಂದು ಚಿತ್ರಣ ನಮಗೆ ಲಭಿಸುತ್ತದೆ. 2001ನೇ ಜನಗಣತಿಯ ಅಂಕಿ - ಅಂಶಗಳನ್ವಯ ದೇಶದ ಶೇಕಡ 80 ರಷ್ಟು ಜಿಲ್ಲೆಗಳಲ್ಲಿ ಹೆಣ್ಣು - ಗಂಡು ಮಕ್ಕಳ ಅನುಪಾತ ಇಳಿಮುಖವಾಗಿದ್ದು, ಗ್ರಾಮೀಣ ಪ್ರದೇಶಗಳಿಗಿಂತ ನಗರ ಪ್ರದೇಶಗಳಲ್ಲೇ ಈ ಅನುಪಾತ ತೀವ್ರ ಗತಿಯಲ್ಲಿ ಇಳಿಯುತ್ತಿರುವುದು!
‘ನಗರವಾಸ’ ಹಾಗೂ ‘ಶ್ರೀಮಂತಿಕೆ’ - ಇವೆರಡೂ ಪ್ರಗತಿಪರ ಚಿಂತನೆಗಳಿಗೆ ಪೂರಕವಾದ ಪರಿಸ್ಥಿತಿಗಳನ್ನು ಸೃಷ್ಟಿಸುತ್ತವೆ ಎಂಬುದು ಸಾಮಾನ್ಯವಾಗಿ ಜನರಲ್ಲಿರುವಂಥ ಭಾವನೆ. ಆದರೆ ಹೆಣ್ಣು ಮಕ್ಕಳ ವಿಚಾರಕ್ಕೆ ಬಂದಾಗ ಇದೊಂದು ಭ್ರಮೆ ಎಂಬುದು ನಮಗೆ ವೇದ್ಯವಾಗುತ್ತದೆ. ದೇಶದ ಅತ್ಯಂತ ಶ್ರೀಮಂತ ರಾಜ್ಯಗಳೆಂದು ಗುರುತಿಸಲ್ಪಟ್ಟಿರುವ ಹರಿಯಾಣ ಮತ್ತು ಪಂಜಾಬುಗಳಲ್ಲಿ ದಶಕದಿಂದ ದಶಕಕ್ಕೆ ಹೆಣ್ಣು - ಗಂಡು ಮಕ್ಕಳ ಅನುಪಾತ ಕಡಿಮೆಯಾಗುತ್ತಾ ಹೋಗುತ್ತಿದೆ.

1991ರ ಜನಗಣತಿಯ ಪ್ರಕಾರ ಹರಿಯಾಣ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 1000 ಗಂಡು ಮಕ್ಕಳಿಗೆ 895 ರಿಂದ 854 ಹೆಣ್ಣು ಮಕ್ಕಳಿದ್ದರೆ 2001ರ ಜನಗಣತಿಯ ವೇಳೆಗೆ ಈ ಸಂಖ್ಯೆ 856 ರಿಂದ 770ಕ್ಕೆ ಇಳಿದಿತ್ತು. ಇದೇ ಅವಧಿಗಳಲ್ಲಿ, ಎಂದರೆ 1991ರಲ್ಲಿ ಪಂಜಾಬಿನಲ್ಲಿ 900 ರಿಂದ - 858 ಹಾಗೂ 2001 ರಲ್ಲಿ 819 - 754 ಹೆಣ್ಣು ಮಕ್ಕಳು ಇರುವುದನ್ನು ಜನಗಣತಿಯ ಅಂಕಿ ಅಂಶಗಳು ತೋರಿಸಿದ್ದವು. 2011ರ ಜನಗಣತಿಯ ಪ್ರಾಥಮಿಕ ಮಾಹಿತಿ ಹರಿಯಾಣದಲ್ಲಿ  ಪ್ರತಿ 1000 ಗಂಡು ಮಕ್ಕಳಿಗೆ 830 ಹಾಗೂ ಪಂಜಾಬಿನಲ್ಲಿ ಪ್ರತಿ 1000 ಗಂಡು ಮಕ್ಕಳಿಗೆ 846 ಹೆಣ್ಣು ಮಕ್ಕಳಿದ್ದಾರೆ ಎಂದು ಸೂಚಿಸಿದೆ. ಈ ಅಂಕಿ ಅಂಶಗಳು ಇಡೀ ರಾಜ್ಯದ ಸರಾಸರಿ ಚಿತ್ರಣವನ್ನು  ನೀಡುತ್ತಿದ್ದು ಜಿಲ್ಲಾವಾರು  ಅಂಕಿ ಅಂಶಗಳು ಸಂಪೂರ್ಣವಾಗಿ ಲಭ್ಯವಾದಾಗ ಇನ್ನೆಷ್ಟು ಆಘಾತಕಾರಿ ಸಂಗತಿಗಳನ್ನು ನಮ್ಮ ಮುಂದಿಡುತ್ತದೆಯೋ ತಿಳಿಯದು.

2011ರ ಜನಗಣತಿಯ ಒಂದು ವರದಿಯ ಪ್ರಕಾರ ಹರಿಯಾಣದ ಜಜ್ಜರ್ ಜಿಲ್ಲೆಯಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಈಗ 774ಕ್ಕೆ ಇಳಿದಿದೆ. ಹಿಂದಿನ ಎರಡು ಜನಗಣತಿಗಳ ಮಾಹಿತಿಯ ಅನ್ವಯ ಇದೇ ಜಿಲ್ಲೆಯಲ್ಲಿ 1991ರಲ್ಲಿ 1000 ಗಂಡು ಮಕ್ಕಳಿಗೆ 886 ರಷ್ಟಿದ್ದ ಹೆಣ್ಣು ಮಕ್ಕಳ ಸಂಖ್ಯೆ, 2001ರಲ್ಲಿ 805ಕ್ಕೆ ಇಳಿದಿತ್ತು.

ಹರಿಯಾಣ ಮತ್ತು ಪಂಜಾಬು ರಾಜ್ಯಗಳು ಹಸಿರು ಕ್ರಾಂತಿಯ ಸಮೃದ್ಧಿಯನ್ನು ಕಂಡವು ಹಾಗೂ ಅಪಾರ ಸಂಖ್ಯೆಯಲ್ಲಿರುವ ಅನಿವಾಸಿ ಭಾರತೀಯರು ತಂದು - ತುಂಬಿರುವ ಲೌಕಿಕ ಸಂಪತ್ತಿಗೆ ಒಡೆಯರಾಗಿರುವ ಜನಸಂಖ್ಯೆಯನ್ನು ಗಮನಾರ್ಹವಾದ ಪ್ರಮಾಣದಲ್ಲಿ ಹೊಂದಿರುವಂಥವು. ಎಲ್ಲಕ್ಕಿಂತ ಮಿಗಿಲಾಗಿ ಈ ರಾಜ್ಯಗಳ ಬಹುತೇಕ ಹೆಣ್ಣು ಮಕ್ಕಳು ಕಾಲೇಜು ಶಿಕ್ಷಣವನ್ನು ಪಡೆದಿರುವಂಥವರು. ಆದಾಗ್ಯೂ ಈ ಎರಡು ರಾಜ್ಯಗಳಲ್ಲೂ ಹೆಣ್ಣು ಭ್ರೂಣ ಹತ್ಯೆ ವ್ಯಾಪಕವಾಗಿ ನಡೆಯುತ್ತಿದೆ ಎಂದರೆ ನಂಬುವುದು ಕಷ್ಟವೇ. ಹಣ ಹೆಚ್ಚಾದಂತೆ ದುರಾಸೆಯೂ ಹೆಚ್ಚುತ್ತಾ ಹೋಗುವುದರಿಂದ ಹೆಣ್ಣು ಮಕ್ಕಳಿಗೆ ಮದುವೆ ಮಾಡಿಸುವುದು ಅನೇಕ ಪೋಷಕರಿಗೆ ಅತ್ಯಂತ ಭಯಾನಕ ದುಃಸ್ವಪ್ನವಿದ್ದಂತೆ. ಗಂಡು ಭಾರತದ ನಿವಾಸಿಯೇ ಆಗಲಿ, ಅನಿವಾಸಿ ಭಾರತೀಯನೇ ಆಗಲಿ, ಆತನಿಗೆ ತೆರಬೇಕಾದ ವರದಕ್ಷಿಣೆ ಮಾತ್ರ ಅಪಾರ. ಧನ - ಕನಕ - ವಸ್ತು - ವಾಹನ - ನಿವೇಶನ - ವಿದೇಶ ಪ್ರಯಾಣ - ಉದ್ದಿಮೆಗಳನ್ನು ವೃದ್ಧಿಸಲು ಮೂಲಧನ, ಹೀಗೆ ವರನ ಹಾಗೂ ಆತನ ಕುಟುಂಬದವರ ಬೇಡಿಕೆಗಳಿಗೆ ಕೊನೆಯೇ ಇಲ್ಲದಿರುವುದರಿಂದ ಇಂದಿಗೂ ಅನೇಕ ಪೋಷಕರು ಹೆಣ್ಣು ಮಕ್ಕಳನ್ನು ಭಾರವೆಂಬಂತೆ ಪರಿಗಣಿಸುತ್ತಾರೆ. ಹೆಣ್ಣು ಹುಟ್ಟಿ ತಾನೂ ಕಷ್ಟ ಪಟ್ಟು ತಂದೆ - ತಾಯಿಯರಿಗೂ ಜೀವನ ಪರ್ಯಂತ ಕಷ್ಟ ಕೊಡುವುದರ ಬದಲು ಆಕೆಯ ಜೀವವನ್ನು ಜನನ ಪೂರ್ವದಲ್ಲಿಯೇ ಹೊಸಕಿ ಹಾಕಿ ಬಿಟ್ಟರೆ ಮುಂದೆ ಬಂದೊದಗುವ ಬವಣೆಗಳಿಂದೆಲ್ಲ ಒಂದೇ ಬಾರಿಗೆ ವಿಮುಕ್ತಿಯನ್ನು ಪಡೆಯಬಹುದು ಎಂಬುದು ಇವರ ವಾದ.

ಹಣ ಮತ್ತು ಶಿಕ್ಷಣ - ಇವೆರಡೂ ಒಂದುಗೂಡುವುದರಿಂದ ಹೆಣ್ಣು ಸಂತತಿಯ ನಾಶಕ್ಕೆ ಲಭ್ಯವಾಗಿರುವ ತಂತ್ರಜ್ಞಾನ ಹಾಗೂ ಅದನ್ನು ಸುತ್ತುವರೆದಿರುವ ಜಾಲಗಳ ಬಗ್ಗೆ ಮಾಹಿತಿ ಈ ರಾಜ್ಯಗಳಲ್ಲಿ ಬಹು ಸುಲಭವಾಗಿ ಲಭ್ಯವಾಗುತ್ತದೆ. ಆದುದರಿಂದಲೇ ಭ್ರೂಣ ಹತ್ಯೆ ವ್ಯಾಪಕ ಪ್ರಮಾಣದಲ್ಲಿ  ನಡೆಯಲು ಸಾಧ್ಯವಾಗಿರುವುದು ಎಂಬುದು ಅಧ್ಯಯನಗಳಿಂದ ತಿಳಿದು ಬಂದಿರುವಂಥ ವಿಷಯ. ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಮುಂಬರುವ ದಶಕದಲ್ಲಿ ನೂರು ಲಕ್ಷ ಹೆಣ್ಣು ಮಕ್ಕಳು ಭೂಮಿಯ ಬೆಳಕನ್ನು ಕಾಣುವ ಮೊದಲೇ ಸಾವನ್ನಪ್ಪುತ್ತಾರೆ ಎಂಬುದು ಜನಸಂಖ್ಯಾ ತಜ್ಞರ ಅಂಬೋಣ! ಭಾರತದ ವಿವಿಧ ರಾಜ್ಯಗಳಲ್ಲಿ ಹೆಣ್ಣು ಭ್ರೂಣ ಹತ್ಯೆ ಹಾಗೂ ಹೆಣ್ಣು ಶಿಶು ಹತ್ಯೆಗಳು ಬಹು ಕಾಲದಿಂದ ನಡೆಯುತ್ತಿವೆ ಎಂದು ಪದೇ ಪದೇ ಮಾಧ್ಯಮ ವರದಿಗಳು, ಜನಸಂಖ್ಯಾ ಅಧ್ಯಯನಗಳು ಹಾಗೂ ಮಹಿಳಾ ಚಳವಳಿ ಸರ್ಕಾರದ ಗಮನವನ್ನು ಸೆಳೆಯುತ್ತಿದ್ದರೂ ಇದುವರೆಗೂ ಈ ಪಿಡುಗುಗಳನ್ನು ತಡೆಗಟ್ಟಲಾಗಲಿ, ಈ ಕಾನೂನುಬಾಹಿರ ಕೃತ್ಯಗಳಲ್ಲಿ ತೊಡಗಿರುವವರಿಗೆ ಶಿಕ್ಷೆ ವಿಧಿಸಲಾಗಲಿ ಯಾವುದೇ ಗಂಭೀರವಾದ ಪ್ರಯತ್ನಗಳನ್ನು ಮಾಡಿಲ್ಲವೆನ್ನುವುದು ದುರದೃಷ್ಟಕರ.

ದೂರದ ಹರಿಯಾಣ - ಪಂಜಾಬುಗಳ ಮಾತಿರಲಿ, ನಮ್ಮ ರಾಜ್ಯದ ರಾಜಧಾನಿ ಬೆಂಗಳೂರು ನಗರ ಕರ್ನಾಟಕದಲ್ಲೇ ಅತ್ಯಂತ ಕಡಿಮೆ ಸ್ತ್ರೀ - ಪುರುಷ ಅನುಪಾತವನ್ನು ಹೊಂದಿರುವ ವಿಷಯ ಕೂಡ - 2011ರ ಜನಗಣತಿಯ ಪ್ರಾಥಮಿಕ ಮಾಹಿತಿಯಿಂದ ಹೊರಬಂದಿದೆ. ಇಡೀ ದೇಶದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರ, ಸಿಲಿಕಾನ್ ಸಿಟಿ, ಭಾರತದ ಸಿಂಗಾಪುರ - ಹೀಗೆ  ನಾನಾ ಬಗೆಯ ಹೊಗಳಿಕೆಗಳಿಗೆ ಪಾತ್ರವಾಗಿರುವ ಬೆಂಗಳೂರು ನಗರದಲ್ಲೇ ಸ್ತ್ರೀ - ಪುರುಷ ಅನುಪಾತ ಇಷ್ಟು ಕಡಿಮೆಯಾದರೆ ಇನ್ನು ಯಾವುದೇ ಬಗೆಯ ಮೂಲ ಸೌಕರ್ಯಗಳನ್ನು ಪಡೆಯದ ಸ್ತ್ರೀ ಸಾಕ್ಷರತೆಯ ಪ್ರಮಾಣ ಅತ್ಯಂತ ಕಡಿಮೆಯಿರುವ ಜಿಲ್ಲೆಗಳ ಸ್ಥಿತಿಯೇನು? ಬಾಗಲಕೋಟೆ ಹಾಗೂ ಬಿಜಾಪುರ ಜಿಲ್ಲೆಗಳು ಅತಿ ಕಡಿಮೆ ಮಟ್ಟದ ಹೆಣ್ಣು - ಗಂಡು ಮಕ್ಕಳ ಅನುಪಾತವನ್ನು ಹೊಂದಿರುವುದು ಇದಕ್ಕೆ ಒಂದು ನಿದರ್ಶನವಷ್ಟೆ.

ಭಾರತದ ಜನಸಂಖ್ಯೆ ಪುರುಷ ಕೇಂದ್ರಿತವಾಗುತ್ತಿದೆ. ದೇಶದ ನಾನಾ ಭಾಗಗಳಲ್ಲಿ ಕ್ರಮೇಣ ಈ ಜನಸಂಖ್ಯೆಯಿಂದ ಮಾಯವಾಗುತ್ತಿರುವ ಹೆಣ್ಣು ಶಿಶುಗಳ (ಹೆಣ್ಣು ಭ್ರೂಣ ಹತ್ಯೆಯಾಗಲಿ, ಹೆಣ್ಣು ಶಿಶು ಹತ್ಯೆಯಾಗಲಿ ಕೊಲೆಗೆ ಸಮಾನವೆಂದೇ ಪರಿಗಣಿಸಬೇಕು) ಹತ್ಯಾಕಾಂಡವನ್ನು ತಡೆಗಟ್ಟದಿದ್ದಲ್ಲಿ ಶೀಘ್ರದಲ್ಲಿಯೇ ಭಾರತ ಚೀನಾ ದೇಶವನ್ನು ಮೀರಿಸಲಿದೆ (ಇಡೀ ವಿಶ್ವದಲ್ಲಿಯೇ ಒಂದೇ ಮಗು - ಗಂಡು ಮಗು ಎಂಬ ಭ್ರಮೆಯ ಬೆನ್ನಟ್ಟಿರುವ ಚೀನಾ ದೇಶದಲ್ಲಿಯೇ ಅತಿ ಹೆಚ್ಚಿನ ಸಂಖ್ಯೆಯ ಹೆಣ್ಣು ಮಕ್ಕಳು ಈ ಹೊತ್ತು ಹತ್ಯೆಗೆ ಒಳಗಾಗುತ್ತಿರುವುದು) ಎಂಬ ಎಚ್ಚರಿಕೆಯ ಕರೆ ಗಂಟೆಯನ್ನು ಆಗಾಗ್ಗೆ ಬಾರಿಸುತ್ತಲೇ ಇದ್ದರೂ ಜನನ - ಪೂರ್ವ ಭ್ರೂಣದ ಲಿಂಗ ಪರೀಕ್ಷಾ ನಿಷೇಧ ಕಾಯಿದೆಯನ್ನು ಜಾರಿಗೆ ತಂದು ಸರ್ಕಾರ ತಣ್ಣಗೆ ಕುಳಿತಿದೆ. ಇದರ ಜೊತೆಗೆ ತಮ್ಮ ವೃತ್ತಿ ಹಾಗೂ ಸಾಮಾಜಿಕ ಜವಾಬ್ದಾರಿಗಳನ್ನು ಮರೆತು ಹಣ ಗಳಿಕೆಯೇ ಜೀವನದ ಹೆಗ್ಗುರಿಯೆಂಬಂತೆ ನಡೆದುಕೊಳ್ಳುತ್ತಿರುವ ವೈದ್ಯರು ಹಾಗೂ ಅಂತಃಕರಣವನ್ನೇ ಮರೆತು ತಮ್ಮ ಮಕ್ಕಳನ್ನು ತಾವೇ ಕೊಲೆ ಮಾಡಲು ಸನ್ನದ್ಧರಾಗಿರುವ ತಂದೆ - ತಾಯಿಗಳು ಸೇರಿದ್ದಾರೆ. ಇಂಥವರ ನಡುವೆ ಸಿಲುಕಿ ಹಾಕಿಕೊಂಡಿರುವ ಹೆಣ್ಣು ಮಕ್ಕಳನ್ನು ರಕ್ಷಿಸುವವರು ತಾನೇ ಯಾರು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT