ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿ ಜನಗಣತಿ ಸಿಲುಕಿದೆ, ವೈರುಧ್ಯಗಳ ಸುಳಿಯಲ್ಲಿ

Last Updated 9 ಮೇ 2011, 19:30 IST
ಅಕ್ಷರ ಗಾತ್ರ

ಭಾರತದಲ್ಲಿ ಹತ್ತು ವರ್ಷಗಳಿಗೊಮ್ಮೆ ನಡೆಯುವ ಜನಗಣತಿಯಾಗಲಿ, ಅದರಿಂದ ಹೊರಹೊಮ್ಮುವ ಅಂಕಿ ಅಂಶಗಳಾಗಲಿ ವ್ಯಾಪಕ ಸಾರ್ವಜನಿಕ ಅಥವಾ ಶೈಕ್ಷಣಿಕ ಚರ್ಚೆಗಳಿಗೆ ಗ್ರಾಸವಾಗಿರುವಂಥ ಸಂದರ್ಭಗಳು ಬಹು ಕಡಿಮೆ.
 
ಆದರೆ 2011ರ ಜನಗಣತಿಯ ವಿಚಾರ ವಿಶೇಷ ಆಸಕ್ತಿಯನ್ನು ಕೆರಳಿಸಿದ್ದು ಈ ದೇಶದ ಜನಸಂಖ್ಯೆಯ ಜಾತಿವಾರು ಎಣಿಕೆಯಾಗಬೇಕೆಂಬ ಪ್ರಸ್ತಾಪ ಮೂಡಿ ಬಂದಾಗ.

ಈ ಹಿಂದಿನ, ಎಂದರೆ 2001ರ ಜನಗಣತಿಯನ್ನು ಕೈಗೊಳ್ಳುವ ಸಂದರ್ಭದಲ್ಲೇ ಜಾತಿವಾರು ಎಣಿಕೆಯ ಆಲೋಚನೆಯನ್ನು ಸರ್ಕಾರ ಮಾಡಿತ್ತು. ಆದರೆ ಈ ವಿಷಯ ಬಹಿರಂಗವಾದಾಗ ಪ್ರಶ್ನೆ-ಪ್ರತಿಭಟನೆಗಳು, ಚರ್ಚೆ-ಸಮಾಲೋಚನೆಗಳು, ಒತ್ತಡ-ಪ್ರತಿ ಒತ್ತಡಗಳು ವಿವಿಧ ವಲಯಗಳಿಂದ ಮೂಡಿ ಬಂದಿದ್ದವು.

ಈ ಹಿನ್ನೆಲೆಯಲ್ಲಿ 2001ರ ಜನಗಣತಿಯಲ್ಲಿ ಜಾತಿಗಳ ಎಣಿಕೆಯನ್ನು ಕೈಗೊಳ್ಳಬೇಕೆಂಬ ಪ್ರಸ್ತಾವನೆಯನ್ನು ಕೈ ಬಿಡಲಾಯಿತು. ಜಾತಿ ಜನಗಣತಿಯ ಹೆಸರಿನಲ್ಲಿ ತಮ್ಮ ಮತ ಕ್ಷೇತ್ರಗಳನ್ನಷ್ಟೇ ಹೆಚ್ಚಿಸಿಕೊಳ್ಳಲು ರಾಜಕೀಯ ಪಕ್ಷಗಳು ನಡೆಸುತ್ತಿರುವ ಹುನ್ನಾರ ಎಂದು ಜಾತಿವಾರು ಎಣಿಕೆಯನ್ನು ನೇರವಾಗಿಯೇ ವಿರೋಧಿಸಿದ್ದವರೆಲ್ಲಾ ಈ ನಿರ್ಧಾರವನ್ನು ಸ್ವಾಗತಿಸಿದರು.

ಮತ್ತೆ ಜಾತಿವಾರು ಎಣಿಕೆಯ ವಿಚಾರ ತಲೆ ಎತ್ತಿದ್ದು 2011ರ ಜನಗಣತಿಯ ಸಂದರ್ಭದಲ್ಲಿ. ಪರ-ವಿರೋಧ ವಾದಗಳ ಸುಳಿಯಲ್ಲಿ ಸಿಲುಕಿದ್ದ ಜಾತಿಗಳ ಎಣಿಕೆಯ ಪ್ರಸ್ತಾವನೆಗೆ ಕಳೆದ ವರ್ಷದಲ್ಲೇ ಕೇಂದ್ರ ಸಚಿವ ಸಂಪುಟ ತನ್ನ ಅಂಕಿತವನ್ನು ಹಾಕಿತು.

2011ನೇ ದಶವಾರ್ಷಿಕ ಜನಗಣತಿಯಲ್ಲಿ ಜಾತಿ ದಾಖಲಾತಿಯಾಗುವುದಿಲ್ಲ. ಈ ಪ್ರಕ್ರಿಯೆಯನ್ನೇ ಪ್ರತ್ಯೇಕವಾಗಿ ಜೂನ್ ಮತ್ತು ಸೆಪ್ಟೆಂಬರ್ 2011ರ ನಡುವೆ ಕೈಗೊಳ್ಳಲಾಗುವುದು ಎಂಬ ಕೇಂದ್ರ ಸರ್ಕಾರದ ಹೇಳಿಕೆ ಸಹಜವಾಗಿಯೇ ಹಲವಾರು ಪ್ರಶ್ನೆಗಳನ್ನು ನಮ್ಮ ಮುಂದಿಟ್ಟಿದೆ.

ಜಾತಿ ಜನಗಣತಿಯನ್ನು ಪ್ರತ್ಯೇಕವಾಗಿ ಕೈಗೊಳ್ಳುವ ಸರ್ಕಾರದ ನಿರ್ಧಾರದಿಂದ ದೇಶದಲ್ಲಿ ನಡೆಯುತ್ತಿರುವ ಸಾಮಾಜಿಕ ಸಮಾನತೆಯ ಸಾಧನೆಯ ಪ್ರಯತ್ನಗಳಿಗೆ ವಿಶೇಷವಾದ ಕೊಡುಗೆಯನ್ನೇನೂ ನೀಡಿದಂತಾಗುವುದಿಲ್ಲ ಎಂಬುದು ಅದನ್ನು ವಿರೋಧಿಸುತ್ತಿರುವವರ ಪ್ರಮುಖ ವಾದ.
 
ಪ್ರತ್ಯೇಕ ಜನಗಣತಿಯಿಂದ ಸಾರ್ವಜನಿಕ ಬೊಕ್ಕಸಕ್ಕೆ ತಗಲಲಿರುವ 2,140 ಕೋಟಿ ರೂಪಾಯಿಗಳ ಹೆಚ್ಚುವರಿ ವೆಚ್ಚವನ್ನು ದೇಶ ಭರಿಸುವ ಸ್ಥಿತಿಯಲ್ಲಿದೆಯೇ ಎಂಬುದು ಮತ್ತೊಂದು ಪ್ರಶ್ನೆ.

ಈ ವರ್ಷದ ಫೆಬ್ರುವರಿ ಮಾರ್ಚ್ ತಿಂಗಳುಗಳಲ್ಲಷ್ಟೇ ಕೊನೆಗೊಂಡಿರುವ ಸಾಮಾನ್ಯ ಜನಗಣತಿಯ ಪ್ರಕ್ರಿಯೆಯಲ್ಲಿ ತೊಡಗಿಸಿದ್ದ ಅಪಾರ ಮಾನವ ಸಂಪನ್ಮೂಲವನ್ನು ಮತ್ತೆ ಜಾತಿವಾರು ಜನಗಣತಿಗೆ ಬಳಸುವುದು ಎಷ್ಟು ಸೂಕ್ತ?

ವಿಶೇಷವಾಗಿ 20 ಲಕ್ಷಕ್ಕೂ ಹೆಚ್ಚು ಶಿಕ್ಷಕರನ್ನು ಈ ಕೆಲಸಕ್ಕೆ ಬಳಸಿದರೆ ವ್ಯರ್ಥವಾಗುವ ಬೋಧನಾ ಕಲಿಕಾ ಸಮಯವೆಷ್ಟು? ಈ ಪ್ರಶ್ನೆಗಳೇ ಅಲ್ಲದೆ, ಜಾತಿ ಜನಗಣತಿಯ ಪ್ರಸ್ತುತತೆ-ಅಪ್ರಸ್ತುತತೆ ಕುರಿತ ಇನ್ನೂ ಕೆಲವು ಮೂಲಭೂತ ಅನುಮಾನಗಳಿಗೆ ನಮ್ಮಲ್ಲಿ ಉತ್ತರಗಳಿವೆಯೇ ಎನ್ನುವುದು ಎಲ್ಲ ಪ್ರಜ್ಞಾವಂತರನ್ನು ಕಾಡುತ್ತಿರುವ ಪ್ರಶ್ನೆ.

ಜಾತಿ ಜನಗಣತಿಯನ್ನು ವಸಾಹತುಶಾಹಿ ಆಳ್ವಿಕೆಯ ‘ಒಡೆದು ಆಳುವ ನೀತಿಯ ಕುರುಹು’ ಎಂದು ಟೀಕಿಸುವ ಅನೇಕರು ‘ಜಾತಿಗಳ ಎಣಿಕೆಯನ್ನೇನಾದರೂ ಕೈಗೆತ್ತಿಕೊಂಡರೆ ದೇಶದಲ್ಲಿ ಜಾತಿ ಕಲಹಕ್ಕೆ ಎಡೆ ಮಾಡಿಕೊಟ್ಟ ಹಾಗಾಗುತ್ತದೆ’ ಎನ್ನುತ್ತಾರೆ.
 
ಜಾತಿ ವ್ಯವಸ್ಥೆ ಸೃಷ್ಟಿಸಿರುವ ಅಭಿವೃದ್ಧಿ ಅವಕಾಶಗಳ ಅಸಮಾನ ಹಂಚಿಕೆಯನ್ನು ಸರಿಪಡಿಸಿ ಸಾಮಾಜಿಕ ನ್ಯಾಯ ಸ್ಥಾಪಿಸಲು ಜಾತಿವಾರು ಗಣತಿ ದಾರಿಯನ್ನು ತೋರುವ ಸಾಧ್ಯತೆಗಳಿವೆ ಎಂಬುದು ಅದರ ಪರ ಇರುವವರ ವಾದ.
 
ಜಾತಿ ಜನಗಣತಿಯನ್ನು ಕೈಗೊಂಡ ಮಾತ್ರಕ್ಕೆ ಜಾತಿ ಪ್ರಜ್ಞೆ ಜಾಗೃತವಾಗುತ್ತದೆ ಎನ್ನುವುದಾದರೆ, ಈಗಾಗಲೇ ದೇಶದ ನಾನಾ ಭಾಗಗಳಲ್ಲಿ ಜಾತಿಯ ಹೆಸರಿನಲ್ಲಿ ನಡೆಯುತ್ತಿರುವ ಲೆಕ್ಕಾಚಾರಗಳು ಹಾಗೂ ಅತ್ಯಾಚಾರಗಳ ಬಗ್ಗೆ ಜಾತಿ ಜನಗಣತಿಯ ವಿರೋಧಿಗಳ ನಿಲುವು ಏನು ಎಂಬ ಪ್ರಶ್ನೆಯೂ ಎದ್ದಿದೆ.
 
ಜಾತಿ, ಭಾರತೀಯ ಸಮಾಜದ ಕಟು ವಾಸ್ತವ, ಆದ್ದರಿಂದ ಜಾತಿವಾರು ಎಣಿಕೆಯ ಅಭಿಪ್ರಾಯವನ್ನೇ ತಿರಸ್ಕರಿಸಬೇಕಿಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು ಜಾತಿಗಳ ಎಣಿಕೆಯನ್ನು ಹೇಗೆ ನಡೆಸಬೇಕು ಎನ್ನುವುದರ ಬಗ್ಗೆ ಚರ್ಚೆ, ಸಮಾಲೋಚನೆಗಳಲ್ಲಿ ತೊಡಗುವುದು ಸೂಕ್ತ ಎನ್ನುವುದು ಜಾತಿ ಜನಗಣತಿಯನ್ನು ಕುರಿತ ಮತ್ತೊಂದು ದೃಷ್ಟಿಕೋನ.

ಜಾತಿ ಜನಗಣತಿ ಬ್ರಿಟಿಷರ ಆಳ್ವಿಕೆಯಲ್ಲಿ ಪ್ರಾರಂಭವಾದ ಒಂದು ಪ್ರಯೋಗ ಎನ್ನುವುದು ನಿಜ. 1872ರಲ್ಲಿ ಆರಂಭವಾದ ಜನಗಣತಿಯಲ್ಲಿ ಜಾತಿಯ ಜೊತೆ ಜೊತೆಗೆ ‘ಧರ್ಮ’, ‘ಬುಡಕಟ್ಟು’(ಟ್ರೈಬ್) ಮತ್ತು ‘ಜನಾಂಗ’ಗಳನ್ನು  (ರೇಸ್) ಕುರಿತಂತೆಯೂ ಮಾಹಿತಿಯನ್ನು ಪಡೆಯಲಾಗಿತ್ತು.

ಭಾರತೀಯ ಸಮಾಜದ ನೈಜ ಪರಿಚಯವನ್ನು ಪಡೆಯಬೇಕಾದರೆ ಇಲ್ಲಿರುವ ಜಾತಿಗಳು ಹಾಗೂ ವೃತ್ತಿಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸುವುದು ಅಗತ್ಯ ಎಂದು ನಂಬಿದ್ದ ವಸಹತುಶಾಹಿ ದೊರೆಗಳಿಗೆ ಭಾರತೀಯರಿಂದ ತೆರಿಗೆ ವಸೂಲಿ ಮಾಡಲು ಕೂಡ ಈ ಅಂಕಿ ಅಂಶಗಳು ಉಪಯುಕ್ತವಾಗಿದ್ದವು.

ಎಲ್ಲಕ್ಕಿಂತ ಮಿಗಿಲಾಗಿ ಈ ಸಮಾಜವನ್ನು ಪದರ ಪದರವಾಗಿ ಶ್ರೇಣೀಕೃತಗೊಳಿಸಿದ್ದ ಜಾತಿಗಳ ಬಗ್ಗೆ ಅಂಕಿ ಅಂಶಗಳನ್ನು ಶೇಖರಿಸುವುದು, ಬ್ರಿಟಿಷರಿಗೆ ಈ ಸಮಾಜದ ಮೇಲೆ ನಿಯಂತ್ರಣ ಸಾಧಿಸುವ ಒಂದು ಅಸ್ತ್ರವೂ ಆಗಿತ್ತು.

ಬ್ರಿಟಿಷರ ಆಳ್ವಿಕೆಯಲ್ಲಿ ಜಾತಿ ಜನಗಣತಿ ನಡೆದಿದ್ದರೂ ‘ಜಾತಿ’ ‘ಬುಡಕಟ್ಟು’ ಅಥವಾ ‘ಜನಾಂಗ’ ಎಂಬ ಪರಿಕಲ್ಪನೆಗಳಿಗೆ ಸಮರ್ಪಕವಾದ ನಿರೂಪಣೆಯನ್ನು ಎಲ್ಲೂ ನೀಡಿರಲಿಲ್ಲ. ಇವುಗಳ ನಡುವಣ ವ್ಯತ್ಯಾಸಗಳು ಬಹು ಸಂದರ್ಭಗಳಲ್ಲಿ ತೀರಾ ಅಸ್ಪಷ್ಟವಾಗಿದ್ದವು. ಆದರೆ ಜಾತಿ ಎನ್ನುವುದನ್ನು ಒಂದು ‘ಸ್ಥಿರ’ ಗುಂಪನ್ನಾಗಿ ನೋಡಲು ಸಾಧ್ಯವಿಲ್ಲ.
 
ಏಕೆಂದರೆ ಹಲವಾರು ಜಾತಿಗಳು ಪರಿಸ್ಥಿತಿಗಳಿಗೆ ತಕ್ಕ ಹಾಗೆ ತಮ್ಮ ಜಾತಿ ‘ಗುರುತಿಸುವಿಕೆ’ಯನ್ನು ಬದಲಿಸಿಕೊಳ್ಳುವಂಥ ಸಾಧ್ಯತೆಗಳಿವೆ ಎಂಬುದನ್ನು ಬ್ರಿಟಿಷರು ಮನಗಂಡಿದ್ದರು. ಈ ಹೊತ್ತು ಅನೇಕರು ಜಾತಿಯ ವಿಚಾರದಲ್ಲಿ ಅನುಸರಿಸುವ ‘ಬಹು ಅನನ್ಯತೆ’ಯ ಅನುಕೂಲ ನೀತಿ ಸ್ವಾತಂತ್ರ್ಯ ಪೂರ್ವದಲ್ಲೇ ಅಸ್ತಿತ್ವದಲ್ಲಿತ್ತು.

ಜಾತಿವಾರು ಜನಗಣತಿಯನ್ನು ಕೈಗೆತ್ತಿಕೊಂಡರೆ ರಾಜಕೀಯ ಅಧಿಕಾರದಲ್ಲಿ ಹೆಚ್ಚಿನ ಪ್ರಾತಿನಿಧ್ಯ, ಶಿಕ್ಷಣ ಹಾಗೂ ಉದ್ಯೋಗ ಕ್ಷೇತ್ರಗಳಲ್ಲಿ ಹೊಸ ಹೊಸ ಗುಂಪುಗಳಿಗೆ ಮೀಸಲಾತಿ-ಇವುಗಳಿಗೆ ಬೇಡಿಕೆ ಹೆಚ್ಚಾಗುತ್ತದೆ ಎಂಬುದು ಈ ಜಾತಿಗಳ ಎಣಿಕೆಯನ್ನು ಕುರಿತಂತೆ ವ್ಯಕ್ತವಾಗುತ್ತಿರುವ ಒಂದು ಆತಂಕ.
 
ಈಗಾಗಲೇ ಜಾತಿಯ ಹೆಸರಿನಲ್ಲಿ ಧ್ರುವೀಕರಣವಾಗುತ್ತಿರುವ ಈ ಸಮಾಜದಲ್ಲಿ ಜಾತಿವಾರು ಜನಗಣತಿ ಹೊಸ-ಹೊಸ ಜಾತಿಗಳ ಉದಯಕ್ಕೆ ಕಾರಣವಾಗುತ್ತದಷ್ಟೇ ಅಲ್ಲ, ಜಾತಿ ಸಂಘಟನೆಗಳ ಹೆಚ್ಚಳಕ್ಕೂ ದಾರಿ ಮಾಡಿಕೊಡುತ್ತದೆ ಎಂಬ ಭಯವನ್ನೂ ಅನೇಕರು ವ್ಯಕ್ತಪಡಿಸುತ್ತಿದ್ದಾರೆ.

ಆದರೆ ಬ್ರಿಟಿಷರ ಕಾಲದಲ್ಲೇ ಇಂಥ ಪರಿಸ್ಥಿತಿಗಳು ಉದ್ಭವವಾಗಿದ್ದು, ಜಾತಿವಾರು ಜನಗಣತಿಯ ಫಲಿತಾಂಶಗಳು ಪ್ರಕಟಗೊಂಡಾಗ ಹಲವಾರು ಜಾತಿಗಳು ತಮ್ಮ ಸ್ಥಾನ ಬದಲಾವಣೆಗೋ ಅಥವಾ ಹೊಸ ಹೊಸ ಬಗೆಯ ಜಾತಿ ಗುರುತಿಸುವಿಕೆಯನ್ನು ಹುಡುಕಲೋ ಯತ್ನಿಸಿದಂಥ ಉದಾಹರಣೆಗಳು ನಮ್ಮ ಮುಂದಿವೆ.

ಜಾತಿ ಎನ್ನುವುದು ‘ಮುಚ್ಚಿದಂಥ’ ಗುಂಪು, ಅದು ಹುಟ್ಟಿನಿಂದ ನಿರ್ಧರಿಸಲ್ಪಡುವಂತಹ ಒಂದು ಸ್ಥಿತಿ ಎಂದು ವಾದ ಮಾಡಿದರೂ ಜಾತಿ ವ್ಯವಸ್ಥೆಯ ಒಳಗಡೆಯೇ ಚಲನೆಯನ್ನು ಸಾಧಿಸಲು ಅನೇಕ ವ್ಯಕ್ತಿಗಳೂ, ಗುಂಪುಗಳೂ ಪ್ರಯತ್ನ ಪಡುತ್ತಾರೆ/ತ್ತವೆ ಎಂಬುದು ಅನೇಕರಿಗೆ ತಿಳಿದ ವಿಷಯವೇ ಆಗಿದೆ.

ಸಾಮಾಜಿಕ ನ್ಯಾಯ ಸ್ಥಾಪನೆಗಾಗಿ ಸೃಷ್ಟಿಯಾಗಿರುವ ಮೀಸಲಾತಿಯ ಪ್ರಯೋಜನವನ್ನು ಪಡೆಯಲು ‘ಹಿಂದುಳಿದಿರುವ’ ಜಾತಿಗಳ ಗುಂಪಿಗೆ ತಮ್ಮ ಜಾತಿಯನ್ನೂ ಸೇರ್ಪಡೆ ಮಾಡಬೇಕೆಂಬ ಒತ್ತಡಗಳು, ಪ್ರತಿಭಟನೆಗಳೂ ಆಗಿಂದಾಗ್ಗೆ ಹೊರಹೊಮ್ಮುತ್ತಲೇ ಇವೆ. ಈ ಹಿಂದುಳಿದಿರುವಿಕೆಗಾಗಿ ನಡೆಯುವ ಹೋರಾಟದಿಂದ, ಸಮಾಜದ ಅನುಕೂಲಗಳಿಂದ ನಿಜವಾಗಿ ವಂಚಿತರಾಗಿರುವಂಥ ಕೆಲ ವರ್ಗಗಳು, ವ್ಯಕ್ತಿಗಳು ಯಾವುದೇ ಬಗೆಯ ಸೌಲಭ್ಯಗಳನ್ನು ಪಡೆಯಲಾಗದಂಥ ಸ್ಥಿತಿಯೂ ನಿರ್ಮಾಣವಾಗಿದೆ.

ಕೆಲವು ಸಂದರ್ಭಗಳಲ್ಲಂತೂ ತಮ್ಮ ಜಾತಿಯನ್ನು ಮೂಲನಿವಾಸಿ ಸಮುದಾಯಗಳ ಗುಂಪಿಗೆ ಸೇರಿಸಬೇಕೆಂಬ ಬೇಡಿಕೆಯನ್ನೂ ಕೆಲ ಜಾತಿ ಸಂಘಟನೆಗಳು ಮುಂದಿಟ್ಟಿವೆ ! ಎಲ್ಲಿಯವರೆಗೆ ಸುಳ್ಳು ಜಾತಿ ಪತ್ರಗಳನ್ನು ನೀಡುವ ಭ್ರಷ್ಟ ವ್ಯವಸ್ಥೆಯೊಂದನ್ನು ಹೊಸಕಿ ಹಾಕಲು ಸಾಧ್ಯವಿಲ್ಲವೋ ಅಲ್ಲಿಯವರೆಗೂ ಈ ಪರಿಸ್ಥಿತಿ ಮುಂದುವರಿದುಕೊಂಡೇ ಹೋಗುತ್ತದೆ.

ಇನ್ನು ಜಾತಿ ಜನಗಣತಿ ನಡೆದು ಜಾತಿಗಳ ಸಂಖ್ಯಾತ್ಮಕ ಸ್ಥಿತಿಗಳ ಬಗ್ಗೆ ಮಾಹಿತಿ ಲಭ್ಯವಾದರೆ ಇಂಥ ಪ್ರವೃತ್ತಿಗಳು ಮತ್ತಷ್ಟು ಹೆಚ್ಚಬಹುದು ಎಂಬ ಆತಂಕವಿರುವುದು ಸಹಜವೇ ಆಗಿದೆ.

ಜಾತಿ ಆಧಾರಿತ ಜನಗಣತಿಯನ್ನು ಕೈಗೊಳ್ಳುವುದರಿಂದ ಹೆಚ್ಚು ಲಾಭವಾಗುವುದು ರಾಜಕೀಯ ಪಕ್ಷಗಳಿಗೆ. ಏಕೆಂದರೆ ಜಾತಿಯ ಹೆಸರಿನಲ್ಲಿ ಮತಗಳಿಕೆಯನ್ನು ಮಾಡಲು ಜಾತಿವಾರು ತಲೆ ಎಣಿಕೆ ನೇರ ಪ್ರಚೋದನೆ ನೀಡುತ್ತದೆ ಎನ್ನುವ ಆತಂಕದಲ್ಲಿ ಸಂಪೂರ್ಣ ಸತ್ಯವಿದೆ.

ಆದರೆ, ಈಗಲೂ ಕೂಡ ಜಾತಿಯ ಹೆಸರಿನಲ್ಲಿ ತಾನೇ ಹೆಚ್ಚಿನಂಶ ರಾಜಕೀಯ ವ್ಯವಹಾರಗಳು ನಡೆಯುತ್ತಿರುವುದು? ಅನೇಕ ಮಠಗಳು, ಜಾತಿ ಸಂಘಟನೆಗಳು, ಮೂಲಭೂತವಾದಿ ಶಕ್ತಿಗಳು, ಸ್ವಯಂ ಘೋಷಿತ ಸಾಂಸ್ಕೃತಿಕ ಆರಕ್ಷಕರು ನೇರವಾಗಿಯೇ ಜಾತಿಯ ಹೆಸರಿನಲ್ಲಿ ತಮ್ಮ ಸ್ವಜಾತಿ ಬಂಧುಗಳ ಸಮಾಜಕಂಟಕ ಕೃತ್ಯಗಳನ್ನು ಸಮರ್ಥಿಸಿಕೊಳ್ಳುತ್ತಿರುವಂಥ ಸಂದರ್ಭದಲ್ಲಿ ನಾವು ಬದುಕಿದ್ದೇವೆ ಎಂಬುದನ್ನು ಹೇಗೆ ತಾನೆ ಅಲಕ್ಷ್ಯ ಮಾಡಲು ಸಾಧ್ಯ?

ಜಾತಿ ಜನಗಣತಿಯನ್ನು ಸುತ್ತುವರೆದಿರುವ ಬಹುತೇಕ ವಾದ ವಿವಾದಗಳು ಜಾತಿವಾರು ಎಣಿಕೆಯ ಸಂಪೂರ್ಣ ‘ಸ್ವೀಕೃತಿ’ ಅಥವಾ ಸಂಪೂರ್ಣ ‘ತಿರಸ್ಕಾರ’ ಮಾರ್ಗಗಳನ್ನು ಅನುಸರಿಸುತ್ತಿವೆ.
 
ಜಾತಿ ಜನಗಣತಿಯ ಪರ ಒತ್ತಡವನ್ನು ತರುತ್ತಿರುವ ರಾಜಕೀಯ ಪಕ್ಷಗಳು, ವ್ಯಕ್ತಿಗಳು ಅಥವಾ ಇತರರಲ್ಲಿ ಅನೇಕರು ಸಾಮಾಜಿಕ ನ್ಯಾಯದ ಅವಕಾಶಗಳ ಬಳಕೆಯ ಪರಿಯನ್ನು ಜಾತಿವಾರು ವಿಶ್ಲೇಷಣೆ ಮಾಡಿ, ಈ ಅವಕಾಶಗಳ ಅಸಮಾನ ಹಂಚಿಕೆಯನ್ನು ಸರಿಪಡಿಸಲು ಇದೊಂದೇ ಮಾರ್ಗವೇನೋ ಎಂಬಂತೆ ಮಾತನಾಡುತ್ತಿದ್ದಾರೆ.

ಜಾತಿವಾರು ಎಣಿಕೆಯ ಪ್ರಕ್ರಿಯೆಯನ್ನು ವಿರೋಧಿಸುತ್ತಿರುವವರು ಜಾತಿ ಜನಗಣತಿಯಿಂದ ಭಾರತದ ರಾಷ್ಟ್ರೀಯತೆಗೇ ಭಂಗ ಬರುತ್ತದೆ, ಇದರಿಂದ ಜಾತಿ ಪ್ರಜ್ಞೆ ಹಾಗೂ ಜಾತಿ ಆಧಾರಿತ ರಾಜಕೀಯ-ಸಾಮಾಜಿಕ-ಆರ್ಥಿಕ ವ್ಯವಹಾರಗಳು ಮತ್ತಷ್ಟು ಜಾಗೃತವಾಗುತ್ತವೆ ಎನ್ನುತ್ತಿದ್ದಾರೆ.

ಆದರೆ ಈ ಪರ-ವಿರೋಧಗಳ ಬಹುತೇಕ ವಾದಗಳಲ್ಲಿ ಜಾತಿ ಜನಗಣತಿ ನಡೆದಿದ್ದೇ ಆದರೆ ಆ ಇಡೀ ಪ್ರಕ್ರಿಯೆಯನ್ನು ವೈಜ್ಞಾನಿಕವಾಗಿ ನಡೆಸಿಕೊಂಡು ಹೋಗಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಚರ್ಚೆಯಾಗುತ್ತಿಲ್ಲವೆನ್ನುವುದು ಗಮನಿಸಬೇಕಾದಂಥ ಅಂಶ.

ಭಾರತೀಯ ಸಮಾಜ ಬಹು ಜಾತಿಗಳನ್ನೊಳಗೊಂಡಿರುವಂಥ ಶ್ರೇಣಿಕೃತ ವ್ಯವಸ್ಥೆಯನ್ನು ಹೊಂದಿರುವುದು ಸಾಮಾಜಿಕ ಸತ್ಯ. ಈ ವ್ಯವಸ್ಥೆಯ ಸಂಖ್ಯಾತ್ಮಕ ಪರಿಗಣನೆ ನಾನಾ ರೀತಿಯಲ್ಲಿ ಈಗಾಗಲೇ ಆಗಿ ಹೋಗಿದೆ, ಇಂದಿಗೂ ಆಗುತ್ತಲೇ ಇದೆ.
 
ಆದ್ದರಿಂದ ಜಾತಿ ಜನಗಣತಿಯಿಂದಲೇ ಸಾಮಾಜಿಕ ನ್ಯಾಯ ಅನ್ಯಾಯಗಳು ಆಗಿಹೋಗುತ್ತವೆ ಅಥವಾ ತಪ್ಪುತ್ತವೆ ಎನ್ನುವ ದೃಷ್ಟಿಕೋನ ಏಕಮುಖಿಯಾದದ್ದು.

ಜಾತಿಗಣತಿ ಕೇವಲ ತಲೆ ಎಣಿಕೆಯ ಸಾಧನವಾಗಬಾರದಷ್ಟೆ. ಈ ಇಡೀ ಪ್ರಕ್ರಿಯೆಯನ್ನು ಕೈಗೊಳ್ಳುವ ಮೊದಲೇ ಅಂಕಿ-ಅಂಶಗಳ ಸಂಗ್ರಹಣೆ ಮಾಡಲು ಕೇಳಬೇಕಾದಂಥ ಪ್ರಶ್ನೆಗಳು, ಅವುಗಳನ್ನು ಕೇಳಬೇಕಾದ ರೀತಿ ಹಾಗೂ ಅವುಗಳ ವಿಶ್ಲೇಷಣೆ-ಈ ವಿಚಾರಗಳನ್ನು ಕುರಿತು ಕ್ರಮಬದ್ಧ ಕಟ್ಟುನಿಟ್ಟಾದ ಚಿಂತನೆ ಹಾಗೂ ತರಬೇತಿ ಅಗತ್ಯ.

ಜಾತಿ ಜನಗಣತಿಯನ್ನೇ ಪ್ರತ್ಯೇಕವಾಗಿ ಮಾಡುವ ಬದಲು ಸಾಮಾನ್ಯ ಜನಗಣತಿಯಲ್ಲೇ ಜಾತಿಯನ್ನು ಕುರಿತ ಪ್ರಶ್ನೆಯನ್ನೂ ಸೇರಿಸಬೇಕಾಗಿತ್ತು. ಆಗ ಇತರ ಜನಸಂಖ್ಯಾ ಮಾಹಿತಿಯನ್ನು ಜಾತಿಗೆ ಸಂಬಂಧಿಸಿದಂತೆ ವಿಶ್ಲೇಷಿಸಿ ವಿಮರ್ಶಿಸಲು ಸಾಧ್ಯವಾಗುತ್ತಿತ್ತು.

ಹಾಗಾಗದಿರುವುದರಿಂದ, ಈಗಲಾದರೂ ತಜ್ಞರ ಭಾಗವಹಿಸುವಿಕೆಯಿಂದ ಮತ್ತು ಗಂಭೀರವೂ-ಗಹನವೂ ಆದ ವಿಚಾರ ವಿನಿಮಯದಿಂದ ಜಾತಿ ಜನಗಣತಿಯ ಪ್ರಯೋಗವನ್ನು ಸರ್ಕಾರ ಅರ್ಥಪೂರ್ಣವಾಗಿಸುವಂತಾಗಲಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT