ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿ, ಮತಗಳ ಮೀರಿದರೆ ಮಾತ್ರ ಯಶಸ್ಸು

Last Updated 29 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಲೋಕಸಭಾ ಚುನಾವಣಾ ಪ್ರಕ್ರಿ­ಯೆ­ಯ ಕೊನೆಯ ಹಂತದಲ್ಲಿ­ದ್ದೇವೆ. ನಾವು ಇದೀಗ ನೋಡುತ್ತಿರುವಂತೆಯೇ ಚುನಾವಣೆಯಲ್ಲಿ ಜಾತಿ ಮತ್ತು ಹಣದ ಪಾತ್ರ ಎದ್ದು ಕಾಣುತ್ತಿದೆ. ಜಾತಿಯ ಪಾತ್ರವಂತೂ ಸಹಜ ಎನಿಸಿ ಬಿಟ್ಟಿದೆ. ದೇಶಕ್ಕೆ ಸ್ವಾತಂತ್ರ ಸಿಕ್ಕಿ 67 ವರ್ಷಗಳು ಕಳೆದಿವೆಯಲ್ಲಾ, ಅದರ ಜತೆಜತೆಗೇ ಇವೆಲ್ಲವೂ ಬೆಳೆದು ಬಂದು ಬಿಟ್ಟಿವೆ. ಕೊನೆಯ­ದಾಗಿ ಭಾರತೀಯ ಜನತಾ ಪಕ್ಷವು ಧರ್ಮ ಅಥವಾ ಮತೀಯ ವಿಚಾರವನ್ನೂ ಇದರೊಳಗೆ ಸೇರಿಸಿ ಬಿಟ್ಟಿದೆ.

ಐವತ್ತರ ದಶಕದ ಆರಂಭದಲ್ಲಿ ಚುನಾವಣೆಗೆ ನಿಂತವರು ಧರ್ಮದ ಹೆಸರಲ್ಲಿ ಮತಯಾಚನೆ ನಡೆಸಿದ್ದರೆ ಅದರ ಹಿಂದಿನ ಕಾರಣ ಅರ್ಥವಾಗು­ತಿತ್ತು. ಏಕೆಂದರೆ 1947ರ ಆಗಸ್ಟ್‌ನಲ್ಲಿ ದೇಶವು ಧರ್ಮದ ನೆಪದಲ್ಲಿಯೇ ಇಬ್ಭಾಗವಾಯಿತಲ್ಲ. ಆಗ ನಡೆದ ಹಿಂಸಾಚಾರಗಳಿವೆಯಲ್ಲಾ ಅದು, ಜಗತ್ತಿನ ಬಲುದೊಡ್ಡ ನರಮೇಧಗಳಲ್ಲಿ ಒಂದೆನಿಸಿ­ಬಿಟ್ಟಿತು. ಸುಮಾರು ಮೂರೂವರೆ ಕೋಟಿಗೂ ಹೆಚ್ಚು ಜನರ ಸಾಮೂಹಿಕ ವಲಸೆ ನಡೆದು ಹೋಯಿತು. ಆ ಹಿನ್ನೆಲೆಯಲ್ಲಿ ಆ ದಿನಗಳ ಚುನಾವಣೆಯಲ್ಲಿ ಮತೀಯ ವಿಚಾರ­ಗಳು ಪ್ರಾಮುಖ್ಯ ಪಡೆದುಕೊಂಡಿದ್ದರೆ ಅಚ್ಚರಿ ಎನಿಸುತ್ತಿರಲಿಲ್ಲ, ಬಿಡಿ. ಆದರೆ ಈಗ ?

ರಾಜಕಾರಣದಲ್ಲಿ ಯಾವುದೇ ಕಾರಣಕ್ಕೂ ಧಾರ್ಮಿಕ ವಿಷಯಗಳನ್ನು ಬೆರೆಸಬಾರದು ಎಂಬುದು ಮಹಾತ್ಮ ಗಾಂಧೀಜಿ ಮತ್ತು ಆಗಿನ ಪ್ರಧಾನಿ ಜವಾಹರಲಾಲ್‌ ನೆಹರು ಅವರ ಆಶಯವಾಗಿತ್ತು. ಸ್ವಾತಂತ್ರ್ಯಾನಂತರದ ಕೆಲವು ವರ್ಷಗಳಲ್ಲಿ ಈ ನೆಲದ ರಾಜಕಾರಣ ಆ ಇಬ್ಬರು ಮಹನೀಯರ ಆಶಯಗಳಿಗೆ ಪೂರಕ­ವಾಗಿಯೇ ಇತ್ತು. ಅರವತ್ತರ ದಶಕದಲ್ಲಿ ಚೀನಾದ ಎದುರು ಭಾರತ ಸೋತಿತಲ್ಲಾ, ಆಗ ನಡೆದ ಚುನಾವಣೆಯ ಸಂದರ್ಭದಲ್ಲಿ ಆ ಸೋಲಿನ ಸಂಗತಿಯೇ ಮುಖ್ಯ ವಿಷಯವಾಗಿತ್ತು. ನೆಹರು ಅವರ ನಿರ್ಲಕ್ಷ್ಯ ಧೋರಣೆಯಿಂದಾಗಿ ಭಾರತದ ಸೇನೆ ಅಂದು ಸರ್ವ ರೀತಿಯಿಂದಲೂ ಸಿದ್ಧಗೊಂಡಿರಲಿಲ್ಲ. ಹೀಗಾಗಿ ಅಂತಹದ್ದೊಂದು ಸೋಲು ಭಾರತಕ್ಕೆ ಎದುರಾಯಿತು ಎಂಬ ಭಾವನೆ ಮತದಾರರಲ್ಲಿ ಕಂಡು ಬಂದಿತ್ತು.

ಎಪ್ಪತ್ತರ ದಶಕದಲ್ಲಿ ಆಗಿನ ಪ್ರಧಾನಿ ಇಂದಿರಾ­ಗಾಂಧಿಯವರು ತುರ್ತುಪರಿಸ್ಥಿತಿ ಹೇರಿ­ದ್ದರು. ಅದನ್ನು ಪ್ರತಿಭಟಿಸಿದ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಮಂದಿಯನ್ನು ವಿಚಾರಣೆಯೇ ಇಲ್ಲದೆ ಜೈಲಿಗೆ ಕಳುಹಿಸಲಾಗಿತ್ತು. ಆಗ ನಡೆದ ಚುನಾವಣೆಯಲ್ಲಿ ತುರ್ತುಪರಿಸ್ಥಿತಿಯ ಕರಾಳ ಸಂಗತಿಗಳೇ ಮುಖ್ಯ ವಿಷಯಗಳಾಗಿದ್ದವು. ಉತ್ತರ ಭಾರತದಲ್ಲಿ ಕಾಂಗ್ರೆಸ್‌ ಆಗ ಮೂಲೆ ಪಾಲಾಯಿತು. ಜನತಾ ಪಕ್ಷದೊಳಗಿನ ಕಿತ್ತಾ­ಟವೇ ಮತ್ತೆ 1980ರಲ್ಲಿ ಇಂದಿರಾಗಾಂಧಿ­ಯವರು ಅಧಿಕಾರಕ್ಕೆ ಬರಲು ಕಾರಣವಾಯಿತು. ಅಂದು ಜನ ಇಷ್ಟ ಪಟ್ಟು ಕಾಂಗ್ರೆಸ್‌ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಲ್ಲ, ಜನತಾ ಪಕ್ಷದ ಕಿತ್ತಾಟದಿಂದ ರೋಸಿ ಹೋಗಿ ಬೇರೆ ದಾರಿಯೇ ಇಲ್ಲದೆ ಜನ ಆ ರೀತಿ ನಡೆದುಕೊಂಡಿದ್ದರು. ಈ ಎಲ್ಲಾ ಸಂದರ್ಭಗಳಲ್ಲಿಯೂ ಜಾತಿ ಪ್ರಧಾನ ಪಾತ್ರವನ್ನೇನೂ ವಹಿಸಿಲ್ಲ ಬಿಡಿ.

ಆದರೆ ಚುನಾವಣೆಯಲ್ಲಿ ಹಣದ ಪಾತ್ರ­ವನ್ನು ಅಲ್ಲಗಳೆಯುವಂತೆಯೇ ಇಲ್ಲ. 1951ರಲ್ಲಿ ಮೊದಲ ಸಾರ್ವತ್ರಿಕ ಚುನಾವಣೆ ನಡೆದಿದ್ದಾಗ ಅಭ್ಯರ್ಥಿಯೊಬ್ಬರ ಖರ್ಚುವೆಚ್ಚ 40 ಲಕ್ಷ ರೂಪಾಯಿಗಳನ್ನು ಮೀರಬಾರದೆಂದು ಚುನಾ­ವಣಾ ಆಯೋಗ ಹೇಳಿತ್ತು. ಇವತ್ತು ಅದನ್ನು ಎಪ್ಪತ್ತು ಲಕ್ಷ ರೂಪಾಯಿಗಳಿಗೆ ಏರಿಸಲಾಗಿದೆ. ಇವತ್ತು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿ­ಸುವ ಅಭ್ಯರ್ಥಿಗಳ ಸರಾಸರಿ ಖರ್ಚುವೆಚ್ಚ ಮೂರು ಕೋಟಿ ರೂಪಾಯಿಗಳನ್ನೂ ಮೀರ­ಬಹುದು ಎಂಬುದು ಒಂದು ಅಂದಾಜು. ಕೆಲ­ವರು ಇದರ ಹಲವು ಪಟ್ಟು ಹೆಚ್ಚು ಖರ್ಚು ಮಾಡುತ್ತಿದ್ದರೆ ಅಚ್ಚರಿ ಏನಿಲ್ಲ.

ಚುನಾವಣಾ ಆಯೋಗ ಅಭ್ಯರ್ಥಿಗಳ ವೆಚ್ಚ­ಗಳ ಮೇಲೆ ಕಡಿವಾಣ ಹಾಕುವ ದಿಸೆಯಲ್ಲಿ ಕಾನೂನು­ಗಳ ಚಾವಟಿಯನ್ನು ಹೊಂದಿದೆ. ಆದರೆ ಎಲ್ಲೆ ಮೀರಿ ಖರ್ಚು ಮಾಡಿದ ಕಾರಣ­ಕ್ಕಾಗಿ ಈವರೆಗೆ ಈ ಕಾನೂನಿನ ನೆರವಿನಿಂದ ಆಯೋಗ ಯಾರನ್ನೂ ಅನರ್ಹಗೊಳಿಸಿಲ್ಲ. ಆದರೆ ನಮ್ಮ ದೇಶದ ರಾಜಕೀಯ ಪಕ್ಷಗಳು ಯಾವುದೇ ಕಾನೂನು ಕಟ್ಟಳೆಗಳಿಗೆ ಬದ್ಧವಾ­ಗಿಲ್ಲ. ಇಂತಹ ಪಕ್ಷಗಳ ಅಪ್ರಾಮಾಣಿಕತೆಯೇ ಇವತ್ತಿನ ಬಲು ದೊಡ್ಡ ಸಮಸ್ಯೆಯಾಗಿದೆ. ರಾಜಕೀಯ ಪಕ್ಷಗಳ ಆಂತರಿಕ ವಹಿವಾಟು­ಗಳನ್ನು ಮಾಹಿತಿ ಹಕ್ಕು ಕಾಯ್ದೆಯ ವ್ಯಾಪ್ತಿಗೆ ತರಬೇಕೆಂಬ ಪ್ರಸ್ತಾಪ ಕೇಳಿ ಬರುತ್ತಿದ್ದಂತೆಯೇ ಅದನ್ನು ದೇಶದ ಎಲ್ಲಾ ರಾಜಕೀಯ ಪಕ್ಷಗಳೂ ತೀವ್ರವಾಗಿ ವಿರೋಧಿಸಿದವು.

ಇಂತಹ ಅಂಶಗಳಿಗೆ ಸಂಬಂಧಿಸಿದಂತೆ ಕಟ್ಟು­ನಿಟ್ಟಿನ ಕ್ರಮ ಕೈಗೊಳ್ಳುವಲ್ಲಿ ಚುನಾವಣಾ ಆಯೋಗ ಬಹಳ ಹಿಂದೆ ಬಿದ್ದಿರುವುದು ವಾಸ್ತವ. ಹೀಗಾಗಿ ಚುನಾವಣೆಯ ಇಂತಹ ಆಗು­ಹೋಗುಗಳ ಬಗ್ಗೆ ಹದ್ದಿನ ಕಣ್ಣಿಡುವ ದಿಸೆಯಲ್ಲಿ ವಿಶ್ವಾಸಾರ್ಹತೆಯ ಆಯೋಗದ ಅಗತ್ಯವಿದೆ ಎಂದೆನಿಸುತ್ತಿದೆ. ಒಂದು ವೇಳೆ ಇಂತಹದ್ದೊಂದು ಮಸೂದೆ ಮಂಡನೆಯಾಗು­ತ್ತದೆ ಎಂದಿಟ್ಟುಕೊಳ್ಳಿ, ಅದಕ್ಕೆ ಲೋಕಸಭೆಯ ಯಾವ ಸದಸ್ಯ ಒಪ್ಪಿಗೆ ನೀಡುತ್ತಾನೆ ಹೇಳಿ.

ಇವತ್ತು ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಗಳ ಅಭ್ಯರ್ಥಿಗಳು ಮನ ಬಂದಂತೆ ಹಣ ಖರ್ಚು ಮಾಡಿರುವುದು ನಿಜ. ಈ ದಿಸೆ­ಯಲ್ಲಿ ಸೂಕ್ಷ್ಮವಾಗಿ ಗಮನಿಸಿದಾಗ ಬಿಜೆಪಿಯ ಬೆನ್ನಿಗೆ ಕಾರ್ಪೊರೇಟ್‌ ವಲಯ ಹಣದ ಥೈಲಿ ಹಿಡಿದು ನಿಂತಿರುವುದರಿಂದ ಆ ಪಕ್ಷವೇ ಹೆಚ್ಚು ಹಣ ಖರ್ಚು ಮಾಡಿದೆ ಎಂದೆನಿಸುತ್ತಿದೆ. ಒಂದು ವೇಳೆ ನರೇಂದ್ರ ಮೋದಿ ಪ್ರಧಾನಿಯಾದರೆ, ಈ ಕಾರ್ಪೊರೇಟ್‌ ವಲಯದ ಮಂದಿ
ಆಡಿದ್ದೇ ಆಟ ಎಂದರೆ ಅತಿಶಯೋಕ್ತಿಯಂತೂ ಅಲ್ಲವೇ ಅಲ್ಲ.

ಹಾಗೆ ನೋಡಿದರೆ ಇವತ್ತು ಧಾರ್ಮಿಕ ವಿಷಯಗಳು ಹಿಂದಿನ ಸಾಲಿನಲ್ಲಿವೆ. ನರೇಂದ್ರ ಮೋದಿಯವರು ಹಿಂದುತ್ವ ಎಂಬ ಕೇಂದ್ರದ ಸುತ್ತಲೇ ಗಿರಕಿ ಹೊಡೆಯುತ್ತಿದ್ದಾರೆ ನಿಜ. ಆದರೆ ಅವರು ತಮ್ಮ ಭಾಷಣಗಳಲ್ಲಿ ಆ ವಿಷಯವನ್ನೇ ಕೇಂದ್ರವನ್ನಾಗಿಸಿಕೊಂಡಿಲ್ಲ. ಇದೊಂದು ಗಮ­ನಾರ್ಹ ಸಂಗತಿಯೂ ಹೌದು. ಇದೂ ಒಂದು ತೆರನಾದ ತಂತ್ರಗಾರಿಕೆ.

ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಿಂದಿ­ನಿಂದಲೂ ತಾನೊಂದು ಸಾಂಸ್ಕೃತಿಕ ಸಂಘ ಎಂದೇ ಬಿಂಬಿಸಿಕೊಂಡು ಬರುತ್ತಿದೆ. ಆದರೆ ಈ ಸಲದ ಚುನಾವಣೆಯಲ್ಲಿ ಅದು ನೇರವಾಗಿಯೇ  ಬಿಜೆಪಿ ಪರ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದೆ. ಆರ್‌ಎಸ್‌ಎಸ್‌ನ ಮುಖ್ಯಸ್ಥ ಮೋಹನ್‌ ಭಾಗ­ವತ್‌ ಅವರೇ ಖುದ್ದು ಬಿಜೆಪಿಯ ರಾಷ್ಟ್ರೀಯ ಚುನಾವಣಾ ಸಮಿತಿಯ ಸಭೆಯಲ್ಲಿ ಕುಳಿತು ಅಭ್ಯರ್ಥಿಗಳ ಆಯ್ಕೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈ ದೇಶದ ರಾಜಕಾರಣದ ಭವಿಷ್ಯ ಅದೆಷ್ಟು ಆತಂಕಕಾರಿಯಾಗಿದೆ ಎನ್ನುವುದರ ಮುನ್ಸೂಚನೆ ಇದಾಗಿದೆ.

ರಾಜಕೀಯದ ಜತೆಗೆ ಮತೀಯ ವಿಚಾರಗಳು ಬೆರೆತುಕೊಳ್ಳುತ್ತಿರುವುದು ಈಚಿನ ದಿನಗಳಲ್ಲಿ ಹೆಚ್ಚಾಗುತ್ತಿರುವುದು ನನ್ನ ಆತಂಕವನ್ನು ಹೆಚ್ಚಾಗಿ­ಸಿದೆ. ಬಿಜೆಪಿಯಂತಹ ಪಕ್ಷ ಇವತ್ತು ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ಮಾತನಾಡುತ್ತಾ, ಉದ್ದೇಶ­ಪೂರ್ವಕ­ವಾಗಿಯೇ ಮೌಲಾನಾ ಅಬುಲ್‌ ಕಲಾಂ ಆಜಾದ್‌ ಮತ್ತು ಅಬ್ದುಲ್‌ ಗಫಾರ್‌ ಖಾನ್‌ ಅವರಂತಹ ಧೀಮಂತರ ಹೆಸರನ್ನು ಮರೆಯುತ್ತಿದೆ. ಈ ನಾಡಿನಲ್ಲಿ ಹಿಂದೂಗಳೇ ಸರ್ವಮಾನ್ಯರು ಎಂಬ ಸೂಕ್ಷ್ಮ  ಬಿಜೆಪಿಯ ಅಂತರಾಳದಲ್ಲಿರುವಂತಿದೆ. ಜಗತ್ತಿನ ಪ್ರತಿಯೊಬ್ಬ ಯಹೂದಿ ಕೂಡಾ ಇಸ್ರೇಲನ್ನು ತನ್ನ ಮಾತೃ­ಭೂಮಿ ಎಂದು ಭಾವಿಸಬಹುದು ಮತ್ತು ಆತ  ಯಾವಾಗ ಬೇಕಿದ್ದರು ಇಸ್ರೇಲ್‌ಗೆ ಬಂದು ಹೋಗ­ಬಹುದು ಎಂಬ ನೀತಿಯನ್ನು ಇಸ್ರೇಲ್‌ ಸರ್ಕಾರ ಹೊಂದಿದೆ. ಅದೇ ದಿಕ್ಕಿನಲ್ಲಿ ಭಾರತ­ದಲ್ಲಿಯೂ ಈ ಬಲಪಂಥೀಯ ಪಕ್ಷ ಸಾಗುತ್ತಿ­ದೆಯೇ ಎಂಬ ಅನುಮಾನ ಕಾಡುತ್ತಿದೆ.

ನರೇಂದ್ರ ಮೋದಿಯವರ ಬಲಗೈ ಬಂಟ ಅಮಿತ್‌ ಷಾ ಅವರ ಈಚೆಗಿನ ಹೇಳಿಕೆಗಳಂತೂ  ಬಿಜೆಪಿಯ ಬಲಪಂಥೀಯ ಕಟ್ಟರ್‌ವಾದಕ್ಕೆ ಇನ್ನಷ್ಟು ಇಂಬು ಕೊಡುವಂತಿದೆ. ಉತ್ತರ ಪ್ರದೇಶ­ದಲ್ಲಿ ಚುನಾವಣಾ ಪ್ರಚಾರ ಕಾರ್ಯ­ಕ್ರಮ­ವೊಂದರಲ್ಲಿ ಮಾತನಾಡಿದ ಅವರು ಬಿಜೆಪಿಗೆ ಮತ ಚಲಾಯಿಸುವ ಮೂಲಕ ‘ಸೇಡು’ ತೀರಿಸಿಕೊಳ್ಳಬೇಕೆಂದು ಜನರಿಗೆ ಕರೆ ನೀಡಿದರು. ಅವರು ಪರೋಕ್ಷವಾಗಿ ಮುಸ್ಲಿಮರ ವಿರುದ್ಧವೇ ಮಾತನಾಡಿರುವುದಂತೂ ನಿಜ. ಈ ನಿಲುವು ಏನನ್ನು ಹೇಳುತ್ತದೆ.

ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದ ಅಜಮ್‌ ಖಾನ್‌ ಎಂಬುವವರು ‘ಮುಸ್ಲಿಮರ ಮೋದಿ’ ಎಂದೆನಿಸಿಕೊಳ್ಳಲು ಪ್ರಯತ್ನಿಸುತ್ತಿ­ದ್ದಾರೆ. ಅವರು ಈ ದೇಶದ ಸೇನೆಗೂ ತಮ್ಮ ಹೇಳಿಕೆಯ ಮೂಲಕ ಕೋಮು ಬಣ್ಣ ಹಚ್ಚಲು ಯತ್ನಿಸಿದ್ದನ್ನು ಮರೆಯುವುದೆಂತು. ಪಾಕ್‌ ವಿರುದ್ಧ ನಡೆದ ಕಾರ್ಗಿಲ್‌ ಯುದ್ಧದಲ್ಲಿ ಆ ಗಿರಿಶೃಂಗಗಳನ್ನು ಏರಿ ಹೋರಾಡಿದವರು ಭಾರತದ ಸೇನೆಯಲ್ಲಿರುವ ಮುಸ್ಲಿಮರು ಮಾತ್ರ ಎಂಬ ಹೇಳಿಕೆ ನೀಡಿದ್ದರು. ಪಾಕ್‌ ಸೈನಿಕರನ್ನು ಓಡಿಸಿ, ಆ ಗಿರಿಶಿಖರಗಳನ್ನು ಆಕ್ರ­ಮಿಸಿ ಕುಳಿತವರು ಭಾರತೀಯ ಸೇನೆಯ ಹಿಂದೂ­ಗಳಲ್ಲ, ಮುಸ್ಲಿಮರು ಎಂದೂ ಅವರು ಆವೇಶ­ದಿಂದ ಭಾಷಣ ಮಾಡಿದ್ದರು.

ಅಜಮ್‌ ಖಾನ್‌ ಯೋಚನಾ ಸರಣಿ ಅದೆಷ್ಟು ಕೆಟ್ಟದಾಗಿದೆ ಎಂಬು­ದಕ್ಕೆ ಅವರ ಈ ಚಿಂತನೆಯೇ ನಿದರ್ಶನವಾಗಿದೆ. ಅಂದು ಕಾರ್ಗಿಲ್‌ನಲ್ಲಿ ಹೋರಾಡಿದ್ದು, ಭಾರ­ತೀಯ ಸೇನೆಯ ವಿವಿಧ ರೆಜಿಮೆಂಟ್‌ಗಳು ಎಂಬ ಸಂಗತಿ ಅವರಿಗೆ ಗೊತ್ತಿಲ್ಲದಿರುವುದೊಂದು ವಿಪ­ರ್ಯಾಸ. ಆ ರೆಜಿಮೆಂಟ್‌ಗಳಲ್ಲಿ ಈ ದೇಶದ ಎಲ್ಲಾ ಧರ್ಮ, ಜಾತಿ, ಭಾಷೆಗಳಿಗೆ ಸೇರಿದ ಯೋಧರಿದ್ದರು ಎಂಬುದು ಸತ್ಯ. ಅಂತಹ ಸಮರ­ಗಳಲ್ಲಿ ರೆಜಿಮೆಂಟ್‌ ಅಥವಾ ಸೇನಾ ತುಕಡಿ­ಯೊಂದು ಗೆಲ್ಲುತ್ತದೆಯೇ ಹೊರತು, ಯಾವುದೋ ಒಂದು ಜಾತಿ ಅಥವಾ ಧರ್ಮಕ್ಕೆ ಸೇರಿದ ಸೈನಿಕನಲ್ಲ ಎಂಬ ಸತ್ಯವನ್ನು ಅಜಮ್‌ ಖಾನ್‌ ಅರಿತುಕೊಳ್ಳಬೇಕಿದೆ.

ಕೋಮು ಭಾವನೆಗಳ ವಿಷ ಹರಡುವ ಅಮಿತ್‌ ಷಾ ಅಥವಾ ಅಜಮ್‌ ಖಾನ್‌ ಅವ­ರಂತಹ ವ್ಯಕ್ತಿಗಳು ಚುನಾವಣೆಯಲ್ಲಿ ಸ್ಪರ್ಧಿಸು­ವುದಕ್ಕೆ ಚುನಾವಣಾ ಆಯೋಗ ಅವಕಾಶ ನೀಡಬಾರದು. ಅಂತಹವರಿಗೆ ನೀಡುವ ಶಿಕ್ಷೆ ಕೂಡಾ ಕಠಿಣವಾಗಿರುವಂತೆ ನೋಡಿಕೊಳ್ಳ­ಬೇಕಾದ ಜವಾಬ್ದಾರಿ ಚುನಾವಣಾ ಆಯೋಗದ್ದಾಗಿದೆ.

ಇವತ್ತು ನಡೆಯುತ್ತಿರುವ ಚುನಾವಣೆಯಲ್ಲಿ ಜಾತಿಯ ಪ್ರಭಾವ ಕಡಿಮೆ ಏನೂ ಇಲ್ಲ. ಉಪ ಜಾತಿಗಳ ಸದ್ದು ಹೆಚ್ಚಾಗುತ್ತಿದೆ. ದಲಿತರ ಒಳಗೇ ಹಲವು ಉಪಜಾತಿಗಳಿವೆ. ಈಗಾಗಲೇ ಶೈಕ್ಷಣಿಕ­ವಾಗಿ, ರಾಜಕೀಯವಾಗಿ, ಆರ್ಥಿಕವಾಗಿ ಎತ್ತರಕ್ಕೇರಿರುವ ದಲಿತರಲ್ಲಿಯೇ ಕೆಲವರು ಸರ್ಕಾ­ರಕ್ಕೆ ನಿರ್ದೇಶನ ನೀಡುತ್ತಿದ್ದಾರೆ. ಮರಾ­ಠರು, ರಜಪುತರು, ಜಾಟರು ಸೇರಿದಂತೆ ಹಲವು ಮೇಲ್ಜಾತಿಗಳು ಚುನಾವಣೆಯಲ್ಲಿ ಪ್ರಭಾವಿ­ಗಳಾಗಿವೆ.

ಅದೇನೇ ಇದ್ದರೂ, ಈ ಸಲದ ಸಾರ್ವತ್ರಿಕ ಚುನಾವಣೆಯು ಒಂದಷ್ಟು ಆಶಾಕಿರಣ ಮೂಡಿ­ಸಿದೆ. ಮನಬಂದಂತೆ ಹಣ ಚೆಲ್ಲುವುದಕ್ಕೆ ಈ ಸಲ ಸ್ವಲ್ಪ ಮಟ್ಟಿಗೆ ಕಡಿವಾಣ ಬಿದ್ದಂತಿದೆ. ಧಾರ್ಮಿಕ ನೆಲೆಯಿಂದ ನಡೆಯುತ್ತಿದ್ದ ಮನವಿಗಳೂ ಕಡಿಮೆಯಾಗಿವೆ. ಆದರೆ ಜಾತಿಯ ಕೈಚಳಕ­ವೇನೂ ಕಡಿಮೆಯಾಗಿಲ್ಲ ಬಿಡಿ. ಇವುಗಳನ್ನೆಲ್ಲಾ ಮೀರಿ ನಿಂತ ಚುನಾವಣಾ ಪ್ರಕ್ರಿಯೆ ಈ ದೇಶ­ದಲ್ಲಿ ನಡೆಯಲು ಇನ್ನೆಷ್ಟು ಕಾಲ ಬೇಕಿದೆಯೋ ಗೊತ್ತಿಲ್ಲ. ಆ ಔನ್ನತ್ಯಕ್ಕೆ ಏರುವವರೆಗೆ ನಮ್ಮ ಪ್ರಜಾಸತ್ತಾತ್ಮಕ ವ್ಯವಸ್ಥೆ ಕೃತಿಗಳಲ್ಲಿ, ಘೋಷಣೆ­ಗಳಲ್ಲಿ ಪ್ರಬಲವಾಗಿರುತ್ತದೆ, ಅಷ್ಟೆ. ಅಂತಹ ಕಾಲ್ತೊಡಕುಗಳನ್ನು ಮೀರಿದಾಗ ಮಾತ್ರ ನಾವು ಪಾಶ್ಚಿಮಾತ್ಯ ದೇಶಗಳಲ್ಲಿ ಯಶಸ್ವಿಯಾಗಿರುವ ಪ್ರಜಾಪ್ರಭುತ್ವದ ಹಾದಿಯಲ್ಲಿ ಸಾಗುತ್ತಿದ್ದೇವೆ ಎಂದು ಕೊಳ್ಳಬಹುದಾಗಿದೆ.
ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT